ಸೋಮವಾರ, ಡಿಸೆಂಬರ್ 12, 2011


ಅಣ್ಣಾ ಹಝಾರೆಗೆ ಜೈಲೇ ಅರ್ಹ ಸ್ಥಳ


ಆರೆಸ್ಸೆಸ್ ಸಾಕಿ ಬೆಳೆಸಿದ ಅಣ್ಣಾ ಹಝಾರೆ ಎನ್ನುವ ಕುರಿ ವೇಷದ ಮುದಿ ತೋಳ ಮತ್ತೆ ದೆಹಲಿಯ ಜಂತರ್ ಮಂತರ್‌ನಲ್ಲಿ ಸಾಂಕೇತಿಕ ಉಪವಾಸ ಕೂತಿದೆ. ಅಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ಆಮರಣಾಂತ ಉಪವಾಸ ಕೂರುವ ಬೆದರಿಕೆಯನ್ನೂ ನೀಡಿದೆ. ಆದರೆ ಈ ಬಾರಿ ನಮ್ಮ ಮುಂದಿರುವುದು ತೋಳ ವೆನ್ನುವುದು ಎಲ್ಲರಿಗೂ ಸ್ಪಷ್ಟವಾಗಿರುವುದರಿಂದ ಜನರು ದೂರ ನಿಂತಿದ್ದಾರೆ. ಆಮರಣಾಂತ ಉಪವಾಸದ ಹೆಸರಿನಲ್ಲಿ, ಸಂಸತ್ತನ್ನು, ಪ್ರಜಾಸತ್ತೆಯನ್ನು ಬ್ಲಾಕ್‌ಮೇಲ್ ಮಾಡಲು ಹೊರಟಿರುವ ಅಣ್ಣಾ ಹಝಾರೆ ಭ್ರಷ್ಟಾಚಾರ ಕ್ಕಿಂತಲೂ ದೊಡ್ಡ ಸಮಸ್ಯೆಯೆನ್ನುವುದನ್ನು ದೇಶದ ಜನರೂ ಅರಿತುಕೊಂಡಿದ್ದಾರೆ. ಅಣ್ಣಾ ಹಝಾರೆಯ ಮುಖವಾಡ ಸಂಪೂರ್ಣ ಹರಿದಿದೆ.ನಾನು ಗಾಂಧಿವಾದಿಯಲ್ಲ ಎನ್ನುವುದನ್ನು ಅನಿವಾರ್ಯವಾಗಿ ಘೋಷಿಸಿಕೊಳ್ಳುವಂತಹ ಸನ್ನಿವೇಶ ಅವರಿಗೆ ಎದುರಾಯಿತು.ಮುಂದೊಂದು ದಿನ ನಾನು ‘ಆರೆಸ್ಸೆಸ್‌ವಾದಿ’ ಎಂದು ಘೋಷಿಸಿಕೊಂಡರೂ ಅಚ್ಚರಿಯಿಲ್ಲ.ಪ್ರಜಾಸತ್ತೆಯ ಮೇಲೆ, ಅಹಿಂಸೆಯ ಮೇಲೆ ಯಾವ ರೀತಿಯೂ ತನಗೆ ನಂಬಿಕೆಯಿಲ್ಲ ಎನ್ನುವುದನ್ನು ಹಲವು ಹೇಳಿಕೆಗಳಲ್ಲಿ ಹಝಾರೆ ಬಹಿರಂಗ ಪಡಿಸಿದ್ದಾರೆ.
ಹೀಗಿರುವಾಗ ರಾಮ್‌ಲೀಲಾ ಮೈದಾನದಲ್ಲಾಗಲಿ ಅಥವಾ ಇನ್ನಿತರ ಪ್ರದೇಶಗಳಲ್ಲಾಗಲಿ ಉಪವಾಸದ ಹೆಸರಿನಲ್ಲಿ ಜನ ಸೇರಿಸಲು ಅವರಿಗೆ ಅವಕಾಶ ನೀಡುವುದು ಎಷ್ಟು ಸರಿ? ಇಂತಹದೊಂದು ಪ್ರಶ್ನೆಯನ್ನು ಹುಟ್ಟು ಹಾಕಿರುವುದು ಇನ್ನಾರೂ ಅಲ್ಲ, ಸ್ವತಃ ಅಣ್ಣಾ ಹಝಾರೆ. ಶರದ್ ಪವಾರ್ ಅವರಿಗೆ ಅಣ್ಣಾ ಹಝಾರೆಯ ಬಳಗದ ಗೂಂಡಾನೊಬ್ಬ ಸಾರ್ವಜನಿಕವಾಗಿ ಕೆನ್ನೆಗೆ ಬಾರಿಸಿದ. ಮಾತ್ರವಲ್ಲ, ಚೂರಿಯನ್ನೂ ತೋರಿಸಿದ. ಶರದ್ ಪವಾರ್ ಭ್ರಷ್ಟ ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ ಅದು ಸಾರ್ವಜನಿಕವಾಗಿ ಹಲ್ಲೆ ನಡೆಸುವುದರ ಮೂಲಕ ಇತ್ಯರ್ಥಗೊಳ್ಳುವಂತಹ ವಿಷಯವಲ್ಲ. ದೇಶದ ಎಲ್ಲ ನಾಯಕರೂ ಇದನ್ನು ಖಂಡಿಸಿದರು. ಅವರ ವಿರೋಧಿಗಳೂ ಬಾಹ್ಯವಾಗಿಯಾದರೂ ವಿಷಾದದ ಹೇಳಿಕೆಯನ್ನು ನೀಡಿದರು.
ಆದರೆ ಜನ ನಾಯಕ ಎಂದು ಸ್ವಯಂಘೋಷಣೆ ಮಾಡಿಕೊಂಡಿರುವ ಅಣ್ಣಾ ಹಝಾರೆ ಅತ್ಯಂತ ಅನಾಗರಿಕವಾಗಿ ಪ್ರತಿಕ್ರಿಯಿಸಿದರು. ‘‘ಒಂದೇ ಒಂದು ಏಟು ಹೊಡೆದದ್ದೇ?’’ ಎಂದು ಅದನ್ನು ವಿಕೃತವಾಗಿ ಆನಂದಿಸಿದರು.ಥಳಿತವನ್ನು ಬೆಂಬಲಿಸಿದ್ದು ಮಾತ್ರವಲ್ಲ,ಅದಕ್ಕೆ ಕಾರಣಗಳನ್ನೂ ಕೊಟ್ಟರು.ಪರೋಕ್ಷವಾಗಿ,ಆ ಥಳಿತದ ಹೊಣೆಯನ್ನು ಅವರು ಹೊತ್ತುಕೊಂಡರು.ಈ ಮೂಲಕ ಅಣ್ಣಾ ಹಝಾರೆಯವರು,ಕೇಜ್ರಿವಾಲ್ ಮೇಲೆ ನಡೆದ ಹಲ್ಲೆಯನ್ನೂ ಪರೋಕ್ಷವಾಗಿ ಸಮರ್ಥಿಸಿಕೊಂಡರು.ಈ ಹಿಂದೆ ಕೇಜ್ರಿವಾಲ್‌ಗೆ ಚಪ್ಪಲಿಯನ್ನು ಎಸೆಯಲಾಗಿತ್ತು. ಹಲ್ಲೆಯನ್ನೂ ನಡೆಸಲಾಗಿತ್ತು. ಪವಾರ್ ಮೇಲೆ ನಡೆದ ಹಲ್ಲೆ ಸಮರ್ಥನೀಯವಾದರೆ, ಕೇಜ್ರಿವಾಲ್ ಮೇಲೆ ನಡೆದ ಹಲ್ಲೆ ಯಾಕೆ ಸಮರ್ಥನೀಯವಲ್ಲ?
ಒಂದು ರೀತಿಯಲ್ಲಿ ಅಣ್ಣಾ ಹಝಾರೆ ಗಾಂಧಿವಾದಿಯ ಸೋಗು ಹಾಕಿಕೊಂಡಾಗ ರಾಜಕಾರಣಿಗಳ, ಸರಕಾರದ ಕೈ ಕಟ್ಟಿತ್ತು. ಅಹಿಂಸಾವಾದವನ್ನು ಎದುರಿಸಲು ಅವರಲ್ಲಿ ಯಾವ ಆಯುಧಗಳೂ ಇರಲಿಲ್ಲ. ಆದರೆ ಇದೀಗ ‘ತಾನು ಅಹಿಂಸಾವಾದಿಯಲ್ಲ, ಗಾಂಧಿವಾದಿಯಲ್ಲ’ ಎನ್ನುವ ಮೂಲಕ ರಾಜಕಾರಣಿಗಳಿಗೆ, ಸರಕಾರಕ್ಕೆ ಅಸ್ತ್ರವನ್ನು ಕೊಟ್ಟಿದ್ದಾರೆ. ಪವಾರ್‌ಗೆ ಹಲ್ಲೆ ನಡೆಸುವುದನ್ನು ಬೆಂಬಲಿಸುವ ಮೂಲಕ, ಸ್ವತಃ ತನ್ನ ಮೇಲೆ ಅಸಮಾಧಾನವಿರುವವರು ತನಗೆ ಹಲ್ಲೆ ನಡೆಸಬಹುದು ಎಂಬ ಪರವಾನಿಗೆ ಕೊಟ್ಟಂತಾಗಿದೆ. ಒಂದನ್ನು ಹಝಾರೆ ನೆನಪಿನಲ್ಲಿಟ್ಟುಕೊಳ್ಳಬೇಕು. ಬಲ ಪ್ರದರ್ಶನ ಬಂದಾಗ ಅದರಲ್ಲಿ ಹಝಾರೆ ಬಳಗ ಗೆಲ್ಲುವುದಕ್ಕೆ ಸಾಧ್ಯವಿಲ್ಲ. ಆಗ ತನ್ನಷ್ಟಕ್ಕೆ ಪಟ್ಟ ಭದ್ರ ಹಿತಾಸಕ್ತಿಗಳ ಕೈ ಮೇಲಾಗುತ್ತದೆ. ಹಝಾರೆಯಲ್ಲಿ ಹಲ್ಲೆ ನಡೆಸುವ ಹತ್ತು ಮಂದಿ ತರುಣರಿದ್ದಾರೆ, ಪವಾರ್‌ರಂತಹ ರಾಜಕಾರಣಿಗಳ ಬಳಿ ಸಾವಿರ ಜನ ಇರುತ್ತಾರೆ. ಆದರೆ ಇದನ್ನು ಮರೆತು ಹುಂಬನಂತೆ ಮಾತನಾಡಿದ್ದಾರೆ ಹಝಾರೆ.
ಹೀಗೆ ಮಾತನಾಡುವ ಮೂಲಕ, ತನ್ನ ಹೋರಾಟ ಅಹಿಂಸಾತ್ಮಕವಾದುದಲ್ಲ ಎನ್ನುವುದನ್ನು ದೇಶಕ್ಕೆ ತಿಳಿಸಿಕೊಟ್ಟಿದ್ದಾರೆ. ತಾನು ಗಾಂಧಿವಾದಿಯೂ ಅಲ್ಲ ಎಂದಿದ್ದಾರೆ ಹಝಾರೆ. ಇಂತಿರುವಾಗ ಇವರ ಉಪವಾಸ ಸತ್ಯಾಗ್ರಹದ ಉದ್ದೇಶವೇನು? ಇದು ಎಲ್ಲಿಗೆ ತಲುಪಬಹುದು? ಸಹಸ್ರಾರು ಜನರನ್ನು ಇಂತಹ ವ್ಯಕ್ತಿಯೊಬ್ಬ ಒಟ್ಟು ಸೇರಿಸಿ ಪ್ರತಿಭಟನೆಗಿಳಿದರೆ ಅದರ ಪರಿಣಾಮ ವೇನಾಗಬಹುದು? ಅದು ಹಿಂಸೆಗೆ ತಿರುಗಲಾರದು ಎನ್ನುವುದಕ್ಕೆ ಭರವಸೆಯೇನು? ಆದುದರಿಂದ ಸಂಸತ್ ನಿರ್ಧರಿಸಬೇಕಾದ ಅಂಶಗಳನ್ನು ವ್ಯಕ್ತಿಯೊಬ್ಬ ಸಾರ್ವಜನಿಕ ಸ್ಥಳದಲ್ಲಿ ಬ್ಲಾಕ್‌ಮೇಲ್ ಮೂಲಕ ಇತ್ಯರ್ಥಗೊಳಿಸಲು ಹೊರಡುವುದು ಸಂಸತ್ತಿಗೆ, ಪ್ರಜಾಸತ್ತೆಗೆ ಮಾಡುವ ಅವಮಾನ ಮಾತ್ರವಲ್ಲ, ಒಟ್ಟು ವ್ಯವಸ್ಥೆಗೆ ಒಡ್ಡುವ ಸವಾಲಾಗಿದೆ. ಅಣ್ಣಾ ಹಝಾರೆ ಏನು ಎನ್ನುವುದು ಈಗಾಗಲೇ ಬಟಾ ಬಯಲಾಗಿದೆ. ಅವರ ಉದ್ದೇಶ ರಾಜಕೀಯ ಪ್ರೇರಿತವಾದುದು ಎನ್ನುವುದು ಕಳೆದ ಉಪ ಚುನಾವಣೆಯಲ್ಲಿ ಸಾಬೀತಾಗಿದೆ.
ಉಳಿದ ರಾಜಕೀಯ ಪಕ್ಷಗಳು ಮತ್ತು ಆರೆಸ್ಸೆಸ್ ಅವರನ್ನು ಆಡಿಸಿ, ಕುಣಿಸುತ್ತಿದೆ. ಆದುದರಿಂದ ಅಣ್ಣಾ ಹಝಾರೆ ಜೈಲಿನಲ್ಲಿ ಅಥವಾ ಆಸ್ಪತ್ರೆಯಲ್ಲಿರಲು ಯೋಗ್ಯ ವ್ಯಕ್ತಿ. ಹಝಾರೆ ಆಮರಣಾಂತ ಉಪವಾಸದ ಹೆಸರಿನಲ್ಲಿ ಸಾರ್ವಜನಿಕ ಪ್ರದೇಶಗಳನ್ನು ದುರ್ಬಳಕೆ ಮಾಡಿಕೊಂಡರೆ ಆತನನ್ನು ಯಾವ ಅನುಕಂಪವೂ ಇಲ್ಲದೆ ಬಂಧಿಸಬೇಕಾಗಿದೆ. ಅಥವಾ ಆಸ್ಪತ್ರೆಗೆ ಸೇರಿಸಿ ಅಲ್ಲಿ ಚಿಕಿತ್ಸೆ ನೀಡಬೇಕಾಗಿದೆ.ಈಗಾಗಲೇ ಅಣ್ಣಾ ಹಝಾರೆಯ ಹೆಸರಿನಲ್ಲಿ ದೇಶ ಬಹಳಷ್ಟು ಅನುಭವಿಸಿದೆ. ಯಾವ ಕಾರಣಕ್ಕೂ ಅದು ಮುಂದುವರಿಯುವಂತಾಗಬಾರದು.

ಕಾಮೆಂಟ್‌ಗಳಿಲ್ಲ:

ಧಾರವಾಡ ಎಂಬ ಸ್ವಾವಲಂಬನೆಯ ಸಾಂಸ್ಕೃತಿಕ ನಗರ

ಉತ್ತರಕರ್ನಾಟಕದ ಸಾಂಸ್ಕೃತಿಕ ಐಕಾನ್ ಧಾರವಾಡ. ದೇಶದ ಹೆಸರಾಂತ ಸಂಗೀತ ವಿದೂಷಿಗಳು, ಪಂಡಿತರು ಧಾರವಾಡ ನೆಲದಲ್ಲಿ ಸಂಗೀತ ಕಛೇರಿ ಕೊಡಲಿಕ್ಕೆ ಕಾಯುತ್ತಾರೆ ಹೇಗೋ ಹಾಗೆಯೇ ನ...