ಶುಕ್ರವಾರ, ಡಿಸೆಂಬರ್ 30, 2011


- ಕುಮಾರ ರೈತ
“ವರದಿಗಾರ”

ಸೆಲೆಬ್ರಿಟಿಗಳೊಂದಿಗೆ ಒಡನಾಡುವ; ಗುರುತಿಸಿಕೊಳ್ಳುವ ಹಂಬಲ ಸಾಮಾನ್ಯ. ಆದರಿದು ಜೊತೆಗೆ ಪೋಟೋ ತೆಗೆಸಿಕೊಳ್ಳುವ, ಹಸ್ತಾಕ್ಷರ ಪಡೆದುಕೊಳ್ಳುವ ಮತ್ತು ಮನೆಯಲ್ಲೊಂದು ಭಾವಚಿತ್ರ ತಗುಲಿಸಿಕೊಳ್ಳುವ ಹಂತಗಳನ್ನು ಮೀರುವುದು ಅಪರೂಪ. ಇಂಥ ಅಪರೂಪದ ಗುಣ ಹೊಂದಿದೆ ಎಂಬ ಕಾರಣಕ್ಕೆ ಧನಂಜಯ ಜೀವಾಳ ಬಿ.ಕೆ. ಅವರು ಬರೆದ ‘ಕಾಡಿನ ಸಂತ-ತೇಜಸ್ವಿ’ ಕೃತಿ ಇಷ್ಟವಾಗುತ್ತದೆ. ಒಬ್ಬ ಆರಾಧಕನ ಮನಸ್ಥಿತಿ ಮೀರಿದ ಹೊಳವುಗಳು ಇಲ್ಲಿವೆ. ಕನ್ನಡದ ಓದುಗರ ಅರಿವಿನ ಎಲ್ಲೆಗಳನ್ನು ವಿಸ್ತರಿಸಿದ ಸಾಹಿತಿಗಳಲ್ಲಿ ತೇಜಸ್ವಿ ಬಹುಮುಖ್ಯರು. ಅವರು ಯುವಜನತೆಯಲ್ಲಿ ಮೂಡಿಸಿದ ‘ಪರಿಸರ ಪ್ರಜ್ಞೆ’ ಅಪಾರ. ಇದರ ನೇರ ಉದಾಹರಣೆಗಳೂ ಇಲ್ಲಿ ಕಾಣುತ್ತವೆ.
ಕೃತಿಯ ಓಪನಿಂಗ್ ರೋಚಕವಾಗಿದೆ. ಥ್ರಿಲ್ಲರ್ ಸಿನಿಮಾದ ಕಥೆ ಹೇಳುತ್ತಿದ್ದಾರೇನೋ ಎಂದು ಭಾಸವಾಗುತ್ತದೆ. ಮುಂದೆ ಓದಿದಂತೆ ಈ ಪ್ರಸಂಗದ ನಾಯಕ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಎಂದು ತಿಳಿಯುತ್ತದೆ. ತಮ್ಮನ್ನು ಛೇಸ್ ಮಾಡಿಕೊಂಡು ಬಂದ ಕುತೂಹಲಿಗ ಯುವಕರಿಗೆ ತೇಜಸ್ವಿ ಪ್ರತಿಕ್ರಿಯಿಸಿದ ರೀತಿಯೂ ಅವರ ಸೀದಾಸದಾ ಗುಣ ತೋರಿಸುತ್ತದೆ. ಇದನ್ನೆಲ್ಲ ತನ್ನ ಕಣ್ಣ ಕ್ಯಾಮರಾದ ಮೂಲಕ ಮನದೊಳಗೆ ಲೋಡ್ ಮಾಡಿಕೊಂಡ ಹೈಸ್ಕೂಲು ಹೈದ ಬೆಳೆಯುತ್ತಾ ಹೋದಂತೆ ಆತನನ್ನು ತೇಜಸ್ವಿ ಆವರಿಸಿಕೊಂಡ ಬಗ್ಗೆಯೂ ತೆರೆದುಕೊಳ್ಳುತ್ತಾ ಹೋಗುತ್ತದೆ. ಈ ಹೈದನೆ ಧನಂಜಯ ಜೀವಾಳ !!
‘ಪರಿಸರ ಪ್ರಜ್ಞೆ’ ಯಿಂದ ಪ್ರೇರಿತರಾಗಿ ಮೂಡಿಗೆರೆಯಂಥ ಪುಟ್ಟ ಪಟ್ಟಣ್ಣದಲ್ಲಿ ಧನಂಜಯ ಮತ್ತು ಸಹವರ್ತಿಗಳು ನೇಚರ್ ಕ್ಲಬ್ ರಚಿಸುತ್ತಾರೆ. ಇದನ್ನು ಮೆಚ್ಚುವ ತೇಜಸ್ವಿ ತಾವೂ ಕ್ಲಬ್ ಸದಸ್ಯರಾಗುವುದರ ಜೊತೆಗೆ ತಮ್ಮ ಪತ್ನಿ ರಾಜೇಶ್ವರಿ ಮತ್ತು ಕಿರಿಯ ಗೆಳೆಯ ರಾಘವೇಂದ್ರ ಅವರನ್ನೂ ಸದಸ್ಯರನ್ನಾಗಿ ಮಾಡುತ್ತಾರೆ. ಇದಿಷ್ಟೆ ಅಲ್ಲ ತಮ್ಮ ಜೀವಿತಾವಧಿಯವರೆಗೂ ಇಲ್ಲಿಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೋಳುತ್ತಾರೆ. ಇದು ತೇಜಸ್ವಿ ಅವರು ತಮ್ಮನ್ನು ಬರವಣಿಗೆ ಅಷ್ಟಕ್ಕೆ ಸೀಮಿತಗೊಳಿಸಿಕೊಳ್ಳದೇ ಪರಿಸರಕ್ಕೆ ಸಂಬಂಧಿಸಿದ ಕ್ರಿಯಾತ್ಮಕ ಚಟುವಟಿಕೆಗಳಲ್ಲಿಯೂ ಪಾಲ್ಗೋಳ್ಳಲು ಹೇಗೆ ಸದಾ ಉತ್ಸಾಹಿಗರಾಗಿದ್ದರು ಎಂಬುದನ್ನು ಮತ್ತೆ ಮತ್ತೆ ನೆನಪಿಸುತ್ತದೆ. ನೇಚರ್ ಕ್ಲಬ್ ಹಮ್ಮಿಕೊಂಡ ‘ತೇಜಸ್ವಿ ಅವರೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ ತೇಜಸ್ವಿ ಆಡಿದ ಮಾತುಗಳನ್ನು ನೋಟ್ಸ್ ಮಾಡಿಕೊಳ್ಳುವ ಲೇಖಕರು ಅವುಗಳಲ್ಲಿ ಮುಖ್ಯವೆನ್ನಿಸಿದ ಈ ಮಾತುಗಳನ್ನು ಇಲ್ಲಿ ಉಲ್ಲೇಖಿಸಿರುವುದು ಗಮನಾರ್ಹ. ಸಾರ್ವಕಾಲಿಕ ಪ್ರಸ್ತುತವೆನ್ನಿಸುವ ಮಾತುಗಳಿವು.
ನೂತನ ತಂತ್ರಜ್ಞಾನ ಮತ್ತು ಆ ಕ್ಷೇತ್ರದ ಬೆಳವಣಿಗೆಗಳ ಬಗ್ಗೆ ತೇಜಸ್ವಿಗಿದ್ದ ಕುತೂಹಲ-ಆಸಕ್ತಿ ಅಪಾರ. ಧನಂಜಯ ತೆಗೆದುಕೊಂಡ ಹೊಸ ಸ್ಕೂಟರ್ ರೈಡ್ ಮಾಡಿ ಪ್ರಭಾವಿತರಾಗುವ ತೇಜಸ್ವಿ ತಾವು ಅದೇ ಮಾಡೆಲ್ಲಿನ ಸ್ಕೂಟರ್ ಖರೀದಿಸುತ್ತಾರೆ. ಇದು ಅವರ ಮನಸು ಹೇಗೆ ಸದಾ ಯಂಗ್ ಆಗಿತ್ತು ಎನ್ನುವುದನ್ನು ಚಿತ್ರಿಸುತ್ತದೆ. ಸಮಾಜದ ಎಲ್ಲ ಸ್ತರಗಳ ಜನರೊಂದಿಗೂ ಆತ್ಮೀಯವಾಗಿ ಬೆರೆಯುವ ತೇಜಸ್ವಿ ಅವರು ಕಾಯಕಜೀವಿಗಳೊಂದಿಗೆ ಎಷ್ಟು ಅನೋನ್ಯವಾಗಿದ್ದರು ಎಂಬುದನ್ನು ಕೃತಿ ಚಿತ್ರಿಸುತ್ತದೆ.
ತಮ್ಮ ಸಮಾಜಮುಖಿ ಕಾರ್ಯಕ್ರಮಗಳನ್ನು ತೇಜಸ್ವಿ ಮೆಚ್ಚಿದರೆ ಅದೇ ದೊಡ್ಡ ಸರ್ಟಿಫಿಕೇಟ್ ಎಂಬುದು ಧನಂಜಯ ಅವರ ಸಹಜ ಭಾವನೆ. ಅದನ್ನು ಪಡೆಯುವ ಹಾದಿಯಲಿ ತೇಜಸ್ವಿ ಅವರಿಂದ ಕಾಳಜಿಯ ಬೈಗುಳ ಕೇಳುವಂಥ ಆತ್ಮೀಯ ಕ್ಷಣಗಳು ಇಲ್ಲಿ ದಾಖಲಾಗಿವೆ. ಇಲ್ಲಿ ತೇಜಸ್ವಿ ಅವರಷ್ಟೆ ಓದುಗರಿಗೆ ಮತ್ತಷ್ಟು ತೆರೆದುಕೊಳ್ಳುವುದೇ ಲೇಖಕ ಧನಂಜಯ ಅವರ ವ್ಯಕ್ತಿತ್ವ, ಪರಿಸರದ ಬಗ್ಗೆಗಿನ ಅವರ ಅಪಾರ ಕಾಳಜಿಯೂ ಅನಾವರಣಗೊಳ್ಳುತ್ತದೆ. ಆದರೆ ಧನಂಜಯ ಅವರು ತಮ್ಮನ್ನು ವಿಜೃಂಭಿಸಿಕೊಳ್ಳುವುದಿಲ್ಲ.
ತೇಜಸ್ವಿ ಸಾವಿನಿಂದ ಧನಂಜಯ ತತ್ತರಿಸುತ್ತಾರೆ. ಈ ಬಳಿಕ ತೇಜಸ್ವಿ ಅವರ ‘ನಿರುತ್ತರ’ ಮನೆಗೆ ಭೇಟಿ ನೀಡುತ್ತಾರೆ. ಆಗ ಜರುಗಿದ ಮರಕುಟುಕದ ಪ್ರಸಂಗ ಲೇಖಕರನ್ನು ತೇಜಸ್ವಿ ಎಷ್ಟರಮಟ್ಟಿಗೆ ಆವರಿಸಿಕೊಂಡಿದ್ದಾರೆ ಎಂಬುದನ್ನು ತಿಳಿಸುತ್ತದೆ. ಈ ಸಂದರ್ಭದಲ್ಲಿ ಲೇಖಕರು ನೀಡುವ ವಿವರಣೆ ಓದುಗರ ಕಣ್ಣಾಲಿ ತುಂಬುವಂತೆ ಮಾಡುತ್ತದೆ.
ಸಮಾಜದ ಆಗುಹೋಗು; ಮುಖ್ಯವಾಗಿ ಪರಿಸರಕ್ಕೆ ಸಂಬಂಧಿಸಿದ ಬೆಳವಣಿಗೆಗಳ ಬಗ್ಗೆ ತಮ್ಮದೇ ಅಭಿವ್ಯಕ್ತಿ ವಿಧಾನದಲ್ಲಿ ಪ್ರತಿಕ್ರಿಯಿಸುವ ಸಾಹಿತಿ ಓದುಗರ ಮೇಲೆ ಪ್ರತ್ಯಕ್ಷವಾಗಿ-ಪರೋಕ್ಷವಾಗಿ ಬೀರುವ ಪ್ರಭಾವಕ್ಕೆ ಈ ಕೃತಿ ಉದಾಹರಣೆ. ಈ ಎಲ್ಲ ಕಾರಣಗಳ ಹಿನ್ನೆಲೆಯಲ್ಲಿ ‘ಕಾಡಿನ ಸಂತ-ತೇಜಸ್ವಿ’ ಕೃತಿ ಪ್ರಸ್ತುತ ಸಂದರ್ಭದಲ್ಲಿ ಮುಖ್ಯವೆನ್ನಿಸುತ್ತದೆ

ಕಾಮೆಂಟ್‌ಗಳಿಲ್ಲ:

ಧಾರವಾಡ ಎಂಬ ಸ್ವಾವಲಂಬನೆಯ ಸಾಂಸ್ಕೃತಿಕ ನಗರ

ಉತ್ತರಕರ್ನಾಟಕದ ಸಾಂಸ್ಕೃತಿಕ ಐಕಾನ್ ಧಾರವಾಡ. ದೇಶದ ಹೆಸರಾಂತ ಸಂಗೀತ ವಿದೂಷಿಗಳು, ಪಂಡಿತರು ಧಾರವಾಡ ನೆಲದಲ್ಲಿ ಸಂಗೀತ ಕಛೇರಿ ಕೊಡಲಿಕ್ಕೆ ಕಾಯುತ್ತಾರೆ ಹೇಗೋ ಹಾಗೆಯೇ ನ...