ಗುರುವಾರ, ಆಗಸ್ಟ್ 29, 2013

ಸಿನೆಮಾದ ಭಾಷೆ ಅಂದ್ರೆ ಯಾವುದು,,.? -ಮಹದೇವ ಹಡಪದ



ನಾಟಕೀಯತೆಯನ್ನು ದೈನಂದಿನ ಬದುಕಿನಲ್ಲಿ ನಾವು ಗುರುತಿಸಿಕೊಳ್ಳಬಹುದಾಗಿದೆ.  ಅಂತೆಯೇ ಸಿನಿಮೀಯ ಮಾದರಿಗಳನ್ನು ನಾವು ಇಂದು ವಿಶೇಷವಾಗಿ  ಸುದ್ದಿವಾಹಿನಿಗಳಲ್ಲಿ ಕಾಣುತ್ತೇವೆ. ಬಲ್ಮೆಯ ಉನ್ಮತ್ತ ಚಾಲಾಕಿ ದೃಶ್ಯಗಳು, ಅತಿರಂಜಿತ ಕ್ರೌರ್ಯ, ಅತ್ಯುತ್ಸಾಹಿ ಅಪರಾಧ ಪ್ರಜ್ಞೆಯನ್ನು ಬೆಳೆಸುತ್ತವೆ ಎಂದು ಯಾವುದನ್ನು ಕರೆಯಬಹುದೋ ಅಂಥ ದೃಶ್ಯಗಳು ಮನುಷ್ಯ ಸಹಜವಾಗಿ ಎಲ್ಲಿಯೂ ಕಾಣಸಿಗುವುದಿಲ್ಲ. ಸಿನಿಮೀಯ ಭಾಗಗಳು ಬಾವೋತ್ಕರ್ಷೆಯಲ್ಲಿ ಪರದೆಯ ಮೇಲೆ ಮಾತ್ರ ಕಾಣಿಸಿಕೊಳ್ಳುತ್ತವೆ. ಅಂಥ ಗುಣಾವಗುಣಗಳುಳ್ಳ ಘಟನೆಗಳು ಇಂದು ಸಾಮಾನ್ಯನ ಸಾರ್ವಜನಿಕ ಜೀವನದಲ್ಲೂ ತೀರಾ ಸಹಜವೆಂಬಂತೆ ನೋಡುತ್ತಿದ್ದೇವೆ. ಸ್ವಭಾವದ ಪ್ರೇರಣೆ ಏನೇ ಆಗಿರಲಿ ವಿಕಾರಗಳು ಹುಟ್ಟುವ ಮೂಲ ಸಾಂಸ್ಕೃತಿಕ ಬೇಜವಾಬ್ದಾರಿತನದ್ದು ಎಂಬುದನ್ನು ಅರ್ಥಮಾಡಿಕೊಳ್ಳಬಹುದು.
 ಸಾಂಸ್ಕೃತಿಕ ಪ್ರಜ್ಞೆ ಯಾವತ್ಕಾಲಕ್ಕೂ ಸಮಾಜದ ಓರೆಕೋರೆಗಳನ್ನು ತಿದ್ದುವುದಕ್ಕಿಂತ ಕುರಿತಾದ ಅನುಮಾನ ಅಸಮಾಧಾನಗಳನ್ನು ಹುಟ್ಟುಹಾಕುವ ಮೂಲಕ ಮನುಷ್ಯನ ಅಂತಃಶಕ್ತಿಯನ್ನು ಜಾಗೃತಗೊಳಿಸುತ್ತದೆ. ಸಾಧ್ಯತೆಗಳನ್ನು ಭವಿಷ್ಯತ್ತಿನ ಚಲಚ್ಚಿತ್ರಗಳಲ್ಲಿ ಕಾಣುತ್ತೇವೆ. ಸೂಕ್ಷ್ಮಬಾವಗಳು ಕೂಡ ತೀಕ್ಷ್ಣ ಸಂವೇದನೆಯ ಮೊನಚನ್ನು ಹೊಂದಿರುತ್ತವೆ. ಅಂಥ ಸಿನೇಮಾಗಳನ್ನು ಕನ್ನಡದ ಪ್ರೇಕ್ಷಕರಿಗೆ ಕೊಡುವ ಒಂದು ಗುಂಪು ಸದಾ ಕ್ರಿಯಾಶೀಲವಾಗಿ ತೊಡಗಿಕೊಂಡಿರುವುದು ಸಂತಸದ ಸಂಗತಿ. ಕನ್ನಡದ ಸಾಹಿತ್ಯಿಕ ಕೃತಿಗಳನ್ನಾಯ್ದು ಸದಭಿರುಚಿಯ ಚಿತ್ರಗಳನ್ನು ನಿರ್ಮಿಸುವ ಗುಂಪು ಸಹಿತ ಪ್ರಶಸ್ತಿಯ ಗರಿಗಾಗಿ ಕೆಲಸ ಮಾಡುತ್ತವೆ ಎಂದು ಓರೆಗಣ್ಣಲ್ಲಿ ನೋಡಿಸಿಕೊಳ್ಳುತ್ತವೆ.  ಆದರೆ ಸೃಜನಶೀಲ ಕೆಲಸಕ್ಕಾಗಿ ಬೇರೆಲ್ಲ ಮಾದರಿಯ ಜನಪ್ರಿಯಗಳನ್ನು ನಗಣ್ಯಗೊಳಿಸಿ ಜನಪರವಾದ ರೀತಿಯಲ್ಲಿ ಕಲಾಕೃತಿಗಳನ್ನು ಕಟ್ಟುತ್ತಾರೆ. ಅವರ ಚಲನಚಿತ್ರಗಳು ಕಥೆಯ ಸಂವಿಧಾನವನ್ನು ಮೀರಿಸಿ ಆಯಾಮಗಳನ್ನು ಸೃಷ್ಟಿಸುವ ಕಾರಣಕ್ಕಾಗಿಯೇ ಕನ್ನಡ ಕಲಾಪ್ರಪಂಚವನ್ನು ಇನ್ನಷ್ಟು ವಿಸ್ತರಿಸುವ ಕೆಲಸ ಮಾಡುವ ಸಿನೇಮಾಗಳಾಗಿ ಸಹೃದಯರ ಮನಸ್ಸನ್ನು ಸೂರೆಗೊಳ್ಳುತ್ತವೆ. ಅಂಥ ಚಿತ್ರಗಳ ಪರಂಪರೆ ಇದ್ದಾಗ್ಯೂ ಕನ್ನಡದಲ್ಲಿ ಜನಪ್ರಿಯ ಮಾದರಿಯಲ್ಲಿ ಬರುವ ಚಿತ್ರಗಳು ಯಾವ ಸಂವೇದನೆಯನ್ನು ಕಟ್ಟುತ್ತಿವೆ ಅನ್ನುವುದು ಪ್ರಶ್ನೆಯಾಗಿದೆ..?
 ಚಲನಚಿತ್ರಗಳು ಸದಭಿರುಚಿ ಬೆಳೆಸಬೇಕಾದ ಸಂದರ್ಭದಲ್ಲಿಯೇ ಆಡಳಿತಶಾಹಿಯ ಅಪೇಕ್ಷೆಗೆ ತಕ್ಕಂತೆ ಮೈಮರೆಸುವ ತಂತ್ರವನ್ನಷ್ಟೆ ಪೋಷಿಸಲಾರಂಭಿಸಿದವು. ಕಾರಣಕ್ಕಾಗಿಯೇ ಕರ್ತೃ, ಕೃತಿ(ಕಲೆ), ಪ್ರೇಕ್ಷಕರ ಟ್ರಯಾಂಗಲ್ ನಡುವೆ ವ್ಯವಸ್ಥಿತ ಹುನ್ನಾರವೊಂದು ತನ್ನ ಅಭಿಪ್ರಾಯ ರೂಪಿಸಲೋಸುಗ ಕಲಾಭಿರುಚಿಯನ್ನು ತನ್ನ ಆಶಯದಂತೆ ರೂಪಿಸತೊಡಗಿತು. ಅಲ್ಲಿನ ವಿರಾಮಗಳ ನಂತರದ ಕಥನ ಪಲ್ಲಟದ ಸಿನಿಮೀಯ ಗುಣ ಮತ್ತು ಎರಡು ಗಂಟೆಗಳ ಕಾಲ ಪ್ರೇಕ್ಷಕನೊಳಗೆ ಯಾವ ಪ್ರಶ್ನೆಗಳು -  ಸಂಕಷ್ಟಗಳೂ ಅನುಭವಕ್ಕೆ ಬಾರದಂತೆ ಹಿಡಿದಿಟ್ಟುಕೊಳ್ಳುವ ಕೌಶಲದ ಕಥಾಹಂದರದಲ್ಲಿ ಚಿತ್ರ ತಯಾರಾದರೆ ಅದೊಂದು ಭ್ರಮಾಜಗತ್ತಿನ ಸಮ್ಮೋಹನ ಕಲೆ,   ಚಿತ್ರಮಂದಿರದ ಹೊರಗೆ ಕಾಲಿಡುತ್ತಿದ್ದಂತೆಯೇ ಹೊರಬೆಳಕಿನ  ಪ್ರಖರತೆಯಲ್ಲಿ ಚಿತ್ರದ ಅನುಭವ ಬರೀ ಚಾಕಚಕ್ಯೆತೆಯ ಸ್ಟೋರಿಯಾಗಿ ತಲೆಯಲ್ಲಿ ಉಳಿಯುವುದರಿಂದ ಅದರ ಕೀಳು ಮನೋರಂಜನೆ ಕ್ಷಣದ ಸಂತೋಷವನ್ನು ನೀಡುತ್ತದೆ. ಆದರೆ ಶೈಲೀಕೃತ ಬದುಕು ನೋಡುಗನ ವರ್ತನೆಗಳನ್ನು ಬದಲಿಸುತ್ತ, ಆಸೆ-ಭಾಷೆಗಳನ್ನು ಜಾಗತಿಕ ಬದುಕಿನ ಸವಾಲುಗಳ ನಡುವೆ ತಂದು ನಿಲ್ಲಿಸುತ್ತದೆ. ಆಗ ಸಿನಿಮೀಯ ಗುಣಗಳು ನಾಗರೀಕ ಸಮಾಜದ ಸರ್ವೇಸಾಮಾನ್ಯ ಲಕ್ಷಣಗಳ ಹಾಗೆ ಗೋಚರಿಸತೊಡಗುತ್ತವೆ. ನಾವು ಯಾವದನ್ನು ಕಾಣಬೇಕಿತ್ತೋ ಅದನ್ನು ಕಾಣಿಸದೇ ಇರುವ ಸಾಂಸ್ಕೃತಿಕ ಲೋಕ ನಮಗೆ ತೋರಿಸುವ ಚಿತ್ರಗಳ ಚಿತ್ರಕಶಕ್ತಿಯಲ್ಲಿ ಯಾವ ರಸಾನುಭವದ ಲವಲೇಶಗಂಧವೂ ಇರದಿದ್ದರೂ ವಿಕೃತ ಸಂತೋಷವನ್ನು ಅತಿರಂಜಿತವಾಗಿ ನೀಡುವ ಮುಖೇನ  ಅದು ಮೈಮರೆಸುತ್ತದೆ. ಮೈಮರೆವಿನಲ್ಲಿ ವಾಸ್ತವದ ಲಕ್ಷಣಗಳು ಮಾಯವಾಗುತ್ತ ನೋಡುವ ಭ್ರಮೆಯನ್ನು ಮಾತ್ರ ನಮ್ಮದಾಗಿಸಿ ವ್ಯವಸ್ಥೆಯ ಕುರೂಪಗಳನ್ನು ಮುಚ್ಚಿಹಾಕುತ್ತದೆ. ಆಗ ನೋಡುಗನ ಪ್ರತಿನಿಧಿಯಾಗಿ ಪಾತ್ರಗಳು ಮೂಡುವುದಿಲ್ಲ, ಪಾತ್ರಧಾರಿಯ ಪ್ರತಿನಿಧಿಯಾಗಿ ನೋಡುಗ ತನ್ನತನ ಬಿಟ್ಟುಕೊಡುತ್ತಾನೆ. ಹೀಗೆ ಪರಿಣಾಮ ಬೀರುವ ಚಿತ್ರಗಳು ನಮಗೆ ಬೇಕೇ… ? ಜನಪರ ಚಿತ್ರಗಳನ್ನು ನೋಡುವ ಮನಸ್ಸುಗಳ ಮೌನದಲ್ಲಿ ಸಮೃದ್ಧ ಸಾಂಸ್ಕೃತಿಕ ರೂಪು ಮೂಡುತ್ತದೆ. ಅಂಥ ಚಿತ್ರಗಳನ್ನು ಹುಡುಕಿಕೊಂಡು ಹೋಗಿ ನೋಡಬೇಕಾದ ಮನಃಸ್ಥಿತಿ ಕನ್ನಡದಲ್ಲಿದ್ದರೂ ಅಂಥ ಚಿತ್ರಗಳು ಚಿತ್ರಮಂದಿರದಲ್ಲಿ ಬಿಡುಗಡೆ ಆಗದಿರುವುದು ದುರಂತ.    
ಆದರೆ ಇವತ್ತಿನ ಚಲನಚಿತ್ರ ಮಾಧ್ಯಮದ ಜನಪ್ರಿಯತೆ ಯಾವ ಮಾದರಿಯ ಅಭಿರುಚಿಯನ್ನು ಪ್ರೇರೇಪಿಸುತ್ತಿದೆ? ಯಾಕಾಗಿ ಇಂಥ ಕಥಾ ಮಾದರಿಗಳನ್ನು ದೃಶ್ಯೀಕರಿಸಿ ಜನರ ಸಹೃದಯತೆಯನ್ನು ಹಾಳುಗೆಡುವುತ್ತಿದೆ, ಇಂಥ ಚಲನಚಿತ್ರಗಳು ಸಮುದಾಯದ ಆಳದ ನೋವನ್ನು ಮರೆಮಾಚುವ ಕಾರಣವಾದರೂ ಏನು? ಇದೆಲ್ಲದರ ಹಿಂದೆ ಕಾರ್ಪೋರೇಟ್ ಜಗತ್ತಿನ ಆಶಯಗಳು ಕೆಲಸ ಮಾಡುತ್ತಿರುವುದಂತೂ ಸ್ಪಷ್ಟವಾಗಿವೆ

ಧಾರವಾಡ ಎಂಬ ಸ್ವಾವಲಂಬನೆಯ ಸಾಂಸ್ಕೃತಿಕ ನಗರ

ಉತ್ತರಕರ್ನಾಟಕದ ಸಾಂಸ್ಕೃತಿಕ ಐಕಾನ್ ಧಾರವಾಡ. ದೇಶದ ಹೆಸರಾಂತ ಸಂಗೀತ ವಿದೂಷಿಗಳು, ಪಂಡಿತರು ಧಾರವಾಡ ನೆಲದಲ್ಲಿ ಸಂಗೀತ ಕಛೇರಿ ಕೊಡಲಿಕ್ಕೆ ಕಾಯುತ್ತಾರೆ ಹೇಗೋ ಹಾಗೆಯೇ ನ...