ಶುಕ್ರವಾರ, ನವೆಂಬರ್ 22, 2019

ಧಾರವಾಡ ಎಂಬ ಸ್ವಾವಲಂಬನೆಯ ಸಾಂಸ್ಕೃತಿಕ ನಗರ

ಉತ್ತರಕರ್ನಾಟಕದ ಸಾಂಸ್ಕೃತಿಕ ಐಕಾನ್ ಧಾರವಾಡ. ದೇಶದ ಹೆಸರಾಂತ ಸಂಗೀತ ವಿದೂಷಿಗಳು, ಪಂಡಿತರು ಧಾರವಾಡ ನೆಲದಲ್ಲಿ ಸಂಗೀತ ಕಛೇರಿ ಕೊಡಲಿಕ್ಕೆ ಕಾಯುತ್ತಾರೆ ಹೇಗೋ ಹಾಗೆಯೇ ನಾಟಕಗಳನ್ನು ಇಲ್ಲಿಗೆ ಬಂದು ಪ್ರದರ್ಶನ ನೀಡಬೇಕೆಂದು ಹಲವು ನಾಟಕ ತಂಡಗಳು ಅವಕಾಶಕ್ಕಾಗಿ ಕಾಯುತ್ತವೆ. ನಾನು ೧೯೯೭ ರಲ್ಲಿ ಧಾರವಾಡಕ್ಕೆ ಬಂದಾಗ ವಾರದಲ್ಲೊಂದಾದರೂ ಸಂಗೀತ ಕಛೇರಿ ಇದ್ದೇ ಇರುತ್ತಿತ್ತು. ಕಲಾಭವನದಲ್ಲಿ ಸಂಗೀತ ಕಛೇರಿ ಇದ್ದರೆ ಇಡೀ ಕಡಪಾ ಮೈದಾನ ಸೈಕಲ್, ಬೈಕ್, ಕಾರುಗಳಿಂದ ತುಂಬಿರುತ್ತಿತ್ತು. ಇಷ್ಟು ಪ್ರಮಾಣದಲ್ಲಿದ್ದ ಸಹೃದಯರು ಈಗ ನಡೆಯುವ ಸಂಗೀತ ಕಛೇರಿಗೆ ಬರುವುದೇ ಇಲ್ಲ. ನಾಟಕಗಳೂ ತತ್ವಸಿದ್ಧಾಂತಗಳ ಮಣಭಾರದ ಭಾವಗಳನ್ನು ಹೊತ್ತು ಪ್ರೇಕ್ಷಕರನ್ನು ಗೋಳು ಹೊಯ್ದುಕೊಳ್ಳುವ ಕಾರಣದಿಂದಾಗಿ ರಂಗಮಂದಿರಗಳೂ ತುಂಬುತ್ತಿಲ್ಲವೇನೋ ಎಂಬ ಅನುಮಾನ ಮೂಡುತ್ತಿದೆ. ಇದೆಲ್ಲದರ ನಡುವೆ ಧಾರವಾಡ ಇಂದಿಗೂ ಸಾಂಸ್ಕೃತಿಕ ನಗರಿಯಾಗಿಯೇ ಉಳಿದಿದೆ.

ಧಾರವಾಡ ತಾಲ್ಲೂಕಿನ ಮುಗದ ಗ್ರಾಮದಲ್ಲಿ  ಕ್ರಿ.ಶ೧೦೪೭ರಲ್ಲಿ ಸ್ಥಾಪಿಸಲ್ಪಟ್ಟ ಒಂದು ಶಾಸನದ ಪ್ರಕಾರ ಕನ್ನಡದ ಮೊಟ್ಟಮೊದಲ ನಾಟ್ಯಶಾಲೆ ಈ ನೆಲದಲ್ಲಿಯೇ ಇತ್ತು. ತಂತುಪುರ ನಾಟಕ ಮಂಡಳಿ ಎಂಬ ಕಂಪನಿಯು ಈ ಸೀಮೆಯಿಂದ ಹೊರಟು ಆಂಧ್ರದಲ್ಲಿನ ಕಂಪನಿ ನಾಟಕಗಳ ಹುಟ್ಟಿಗೆ ಮೂಲಪ್ರೇರಣೆಯಾಯ್ತು ಎಂಬ ಇತಿಹಾಸವನ್ನು ತೆಲುಗು ನಾಡಿನವರು ಇಂದಿಗೂ ಓದುತ್ತಾರೆ. ಹತ್ತು ಹಲವು ನಾಟಕ ಕಂಪನಿಗಳು, ನಾಟಕ ಕರ್ತೃಗಳು, ಹೆಸರಾಂತ ನಟರನ್ನೂ ಈ ಹಳೆಯ ಅವಿಭಜಿತ ಧಾರವಾಡ ಜಿಲ್ಲೆಯು ಕನ್ನಡ ನಾಡಿಗೆ ಕೊಟ್ಟಿದೆ. ಇಷ್ಟೆಲ್ಲ ಸಾಂಸ್ಕೃತಿಕ ಇತಿಹಾಸವಿರುವ ಈ ಭಾಗದಲ್ಲಿ ಅಕಾಡೆಮಿಕ್ ಆಗಿ ಕಲಿಯಲು ಒಂದೇಒಂದು ನಾಟಕ ಶಾಲೆಗಳಿಲ್ಲ. ನಾಟಕ ಶಾಲೆ ಹೋಗಲಿ ಸಂಗೀತದ ಶಾಲೆಗಳೂ ಇಲ್ಲದಿರುವುದು ಬೇಸರದ ಸಂಗತಿ‌. ಎಷ್ಟೊಂದು ಜನ ಹಿಂದುಸ್ಥಾನಿ ಸಂಗೀತದ ವಿದ್ವಾಂಸರು ಧಾರವಾಡದವರೇ ಆಗಿದ್ದರು ಕೂಡ ಅವರು ತಮ್ಮ ಬದುಕಿನ ಅತ್ಯುತ್ತಮ ದಿನಗಳನ್ನು ಮುಂಬೈನಲ್ಲಿ ಕಳೆದರು.   ಈ ಧಾರವಾಡ ಪರಿಸರದಲ್ಲಿ ಇರುವ ಕಲಾಧ್ಯಾನವನ್ನು ಪೋಷಿಸಬೇಕಾದ ಅಗತ್ಯ ಇವತ್ತಿಗಿದೆ.

ಉತ್ತರ ಕರ್ನಾಟಕ ೧೮೨೫ರ ನಂತರ ಯಾವುದೇ ರಾಜಮನೆತನದ ಅಧೀನದಲ್ಲಿ ಇರಲಿಲ್ಲವಾದ್ದರಿಂದ ಸಾಂಸ್ಕೃತಿಕ ಪೋಷಣೆ ಈ ಭಾಗಕ್ಕೆ ಸಿಕ್ಕಲಿಲ್ಲ. ಮೈಸೂರಿನ ಅರಸರು, ಸಾಂಗ್ಲಿಯ ರಾಜಮನೆತನಗಳು ಸಾಕಷ್ಟು ಕಲಾಪೋಷಣೆ ಮಾಡಿರುವ ಇತಿಹಾಸ ನಮಗೆ ಸಿಗುತ್ತದೆ. ಆದರೆ ಧಾರವಾಡ ತನ್ನ ಸ್ವಾವಲಂಬನೆಯಲ್ಲಿಯೇ ಈವರೆಗೂ ತನ್ನ ಕಲಾವಂತಿಕೆಯನ್ನು ಕಾಪಾಡಿಕೊಂಡು ಬಂದಿದೆ. ಕಲೆ-ಸಾಹಿತ್ಯದ ಅಭಿರುಚಿ ಇರುವ ಯಾರೇ ಆಗಲಿ ಧಾರವಾಡದಲ್ಲಿ ತನ್ನ ನಿವೃತ್ತ ಬದುಕನ್ನು ಕಳೆಯಲು ಅಪೇಕ್ಷಿಸುವಷ್ಟು ಆಕರ್ಷಣೀಯವಾಗಿದ್ದರೂ ಕೂಡ ಇಂದು ಸ್ವಾವಲಂಬನೆಯ ಗುಣಸ್ವಭಾವಗಳನ್ನು ಕಳೆದುಕೊಳ್ಳುತ್ತಿದೆ. ಆದ್ದರಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ತನ್ನ ಸಹಯೋಗದಲ್ಲಿ  ನಮ್ಮ ಧಾರವಾಡಕ್ಕೆ ವ್ಯವಸ್ಥಿತವಾದ ಸಾಂಸ್ಕೃತಿಕ ಆಯಾಮವನ್ನು ನೀಡಲು ಒಂದಷ್ಟು ಬೇಡಿಕೆಗಳನ್ನು ಈಡೇರಿಸಬೇಕೆಂದು ಕಳಕಳಿಯಿಂದ ವಿನಂತಿಸುತ್ತೇನೆ.

ನಮ್ಮ ವಿನಂತಿಗಳು

೧ ನಾಟ್ಯಸಂಗೀತ ಅಧ್ಯಯನ ಶಾಲೆಯನ್ನು ಧಾರವಾಡ ರಂಗಾಯಣದ ಮೂಲಕ ಆರಂಭಿಸಬೇಕು.(ಪ್ರತಿದಿನ ಸಂಜೆ) ಸಾಧ್ಯವಾದರೆ ನಾಟ್ಯಸಂಗೀತ ಮಹಾವಿದ್ಯಾಲಯ ಸ್ಫಾಪಿಸಲು ಅನುಕೂಲ ಮಾಡಬೇಕು.

೨ ಕಾಲೇಜು ವಿದ್ಯಾರ್ಥಿಗಳಿಗಾಗಿ ವಾರಾಂತ್ಯ ನಾಟಕ ಶಾಲೆಯನ್ನು ರಂಗಾಯಣದ ಮೂಲಕ ಕಡ್ಡಾಯವಾಗಿ ಆರಂಭಿಸಬೇಕು.

೩ ಧಾರವಾಡದಲ್ಲಿಯೇ ಅತಿಹೆಚ್ಚು ಟ್ರಸ್ಟಗಳು ಇರುವುದರಿಂದ ಸಾಹಿತ್ಯ ಅಧ್ಯಯನ ಶಿಬಿರಗಳನ್ನು, ಕಾಲೇಜು ಮಕ್ಕಳಿಗಾಗಿ ಪ್ರತಿಯೊಂದು ಟ್ರಸ್ಟ್ ವಿಭಿನ್ನ ಸಾಹಿತ್ಯ ಸಂಬಂಧಿಸಿದ ಸ್ಪರ್ಧೆಗಳನ್ನು ಏರ್ಪಡಿಸಬೇಕು.

೪ ಶ್ರೀರಂಗ ರಂಗ ಅಧ್ಯಯನ ಕೇಂದ್ರ ಸ್ಥಾಪಿಸಬೇಕು.

೫ ಪ್ರತಿ ವರ್ಷ ತಂತುಪುರ ರಾಷ್ಟ್ರೀಯ ನಾಟಕೋತ್ಸವವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಏರ್ಪಿಡಿಸುವಂತಾಗಬೇಕು.

೬ ಧಾರವಾಡಕ್ಕೊಂದು ಜಿಲ್ಲಾ ರಂಗಮಂದಿರ ಕಟ್ಟಿಸಿದರೆ‌ ನಾಟಕ ಪ್ರದರ್ಶನಗಳಿಗೆ ಹೆಚ್ಚು ಅನುಕೂಲವಾಗುತ್ತದೆ.

೭ ವ್ಯವಸ್ಥಿತವಾದ ಸರಕಾರೀ ಜಾಗದಲ್ಲಿ  ಬೆಂಗಳೂರಿನ ಗುಬ್ಬಿವೀರಣ್ಣ ರಂಗಮಂದಿರದ ಮಾದರಿಯಲ್ಲಿ ನಾಟಕ ಕಂಪನಿಗಳು ಕ್ಯಾಂಪ್ ಹಾಕುವ ಹಾಗೆ ಒಂದು ಪರ್ಮನೆಂಟ್ ರಂಗಮಂದಿರವಾಗಬೇಕು.

೮ ಈಗಿರುವ ಚಿತ್ರಕಲಾಶಾಲೆಯನ್ನು ವಿಶ್ವವಿದ್ಯಾಲಯ ಮಟ್ಟಕ್ಕೆ ಏರಿಸಬೇಕು.

೯ ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯಮಂಡಳಿಗೆ ಪ್ರತ್ಯೇಕ ಅನುದಾನ ನೀಡಬೇಕು.

೧೦ ಪ್ರತಿ ವರ್ಷ ಹುಬ್ಬಳ್ಳಿ ಧಾರವಾಡದಲ್ಲಿ ಚಿತ್ರೋತ್ಸವ ಆಗುವಂತೆ ಮಾಡಿದರೆ ನಮ್ಮ ಭಾಗದವರೂ ಜಗತ್ತಿನ ಶ್ರೇಷ್ಠ ಚಲನಚಿತ್ರ ನೋಡಲು ಅವಕಾಶ ಒದಗಿಸಬೇಕು.

೧೧ ಧಾರವಾಡ ಜಿಲ್ಲಾ ಉತ್ಸವಕ್ಕೆ ದಿನಾಂಕ ನಿಗದಿಗೊಳಿಸಿ. ಪ್ರತಿವರ್ಷವೂ ಅದೇ ದಿನಾಂಕದಂದು ಉತ್ಸವ ನಡೆಸುವ ಹಾಗೆ ಸೂಚಿಸಿದರೆ... ಅದೊಂದು ಧಾರವಾಡದ ಹಬ್ಬವಾಗುತ್ತದೆ.

೧೨ ಧಾರವಾಡಕ್ಕೊಂದು ಸಾಂಸ್ಕೃತಿಕ ಸಂಕೀರ್ಣ  (ಕಲ್ಚರಲ್ ಹಬ್) ಬೇಕು.

ಇದಿಷ್ಟು ಕೆಲಸಗಳನ್ನು ಧಾರವಾಡ ಹುಬ್ಬಳ್ಳಿ ಕೇಂದ್ರೀಕರಿಸಿ ಕಾರ್ಯರೂಪಕ್ಕೆ ತಂದರೆ ನಮ್ಮ ನೆಲದ ಬೇರುಗಳನ್ನು ಇನ್ನಷ್ಟು ಆಳದಲ್ಲಿ ಉಳಿಸಿ ಪೋಷಿಸಲು ಅನುಕೂಲವಾಗುತ್ತದೆ.

ಧನ್ಯವಾದಗಳೊಂದಿಗೆ

ಮಹಾದೇವ ಹಡಪದ ನಟುವರ
೯೯೭೨೩೫೨೧೬೩

ಕಾಮೆಂಟ್‌ಗಳಿಲ್ಲ:

ಧಾರವಾಡ ಎಂಬ ಸ್ವಾವಲಂಬನೆಯ ಸಾಂಸ್ಕೃತಿಕ ನಗರ

ಉತ್ತರಕರ್ನಾಟಕದ ಸಾಂಸ್ಕೃತಿಕ ಐಕಾನ್ ಧಾರವಾಡ. ದೇಶದ ಹೆಸರಾಂತ ಸಂಗೀತ ವಿದೂಷಿಗಳು, ಪಂಡಿತರು ಧಾರವಾಡ ನೆಲದಲ್ಲಿ ಸಂಗೀತ ಕಛೇರಿ ಕೊಡಲಿಕ್ಕೆ ಕಾಯುತ್ತಾರೆ ಹೇಗೋ ಹಾಗೆಯೇ ನ...