ಭಾನುವಾರ, ಏಪ್ರಿಲ್ 21, 2013

ನಶಿಸುತ್ತಿರುವ ಕುಂಬಾರಿಕೆಗೆ ಮತ್ತೆ ಜೀವಕಳೆ ಬಂದೀತೆ? -- ಮುಹಮ್ಮದ್ ರಝಾ ಮಾನ್ವಿ

*ಪ್ಲಾಸ್ಟಿಕ್ ವಸ್ತುಗಳ ಭರಾಟೆಯಲ್ಲಿ ಮರೆಯಾಗುತ್ತಿರುವ ಮಣ್ಣಿನ ಪಾತ್ರೆಗಳು

ಹೌದು ಇದು ಪ್ಲಾಸ್ಟಿಕ್ ಯುಗ. ನಮ್ಮ ಮನೆಯ ಇಂಚಿಂಚು ಜಾಗವನ್ನೂ ಪ್ಲಾಸ್ಟಿಕ್ ಕಬಳಿಸಿಕೊಂಡಿದೆ. ಈ ಪ್ಲಾಸ್ಟಿಕ್ ಭರಾಟೆಗೆ ಸಿಕ್ಕಿ ಅನಾದಿ ಕಾಲದಿಂದಲೂ ಉಪಯೋಗಿಸುತ್ತಿದ್ದ ಮಣ್ಣಿನ ಮಡಕೆ ಕುಡಿಕೆಗಳು ಮೂಲೆ ಸರಿದು ನೆಲೆ ಕಳೆದು ಕೊಂಡಿವೆ. ನಾವು ಚಿಕ್ಕವರಿದ್ದಾಗ ಕುಂಬಾರ ಓಣಿಗೆ ಹೋಗಿ ಬೇಳೆ ಬೇಯಿಸುವ ಮಡಕೆ ತರವುದೇ ಒಂದು ಸಾಹಸವಾಗಿತ್ತು. ಅದನ್ನು ಜೋಪಾನವಾಗಿ ಮನೆ ಮುಟ್ಟಿಸುವುದರೊಳಗೆ ಸಾಕುಸಾಕಾಗಿ ಹೋಗುತ್ತಿತ್ತು. ಈಗ ಅಂತಹ ಪ್ರಮೇಯವೇ ಇಲ್ಲ. ಏಕೆಂದರೆ ಮಡಕೆಯ ಬದಲಿಗೆ ಲೋಹದ ವಸ್ತುಗಳು ಅಡುಗೆ ಮನೆ ಸೇರಿಕೊಂಡಿವೆ. ಆಲಂಕಾರಿಕ ಮಣ್ಣಿನ ಪರಿಕರಕಗಳ ಬದಲಾಗಿ ಕೃತಕ ಪ್ಲಾಸ್ಟಿಕ್ ವಸ್ತುಗಳು ತಮ್ಮ ಜಾಗವನ್ನು ಪಡೆದುಕೊಂಡಿವೆ.
ಮುಂಜಾನೆದ್ದು ಕುಂಬಾರಣ್ಣ ಹಾಲುಬಾನುಂಡಾನ ಹಾರ್ಯಾರಿ ಮಣ್ಣಾ ತುಳಿದಾನ
ಹಾರಿ ಹಾರ್ಯಾಡಿ ಮಣ್ಣಾ ತುಳಿಯುತ್ತ ಮಾಡ್ಯಾನ ನಾರ್ಯಾರು ಹೊರುವಂತ ಐರಾಣಿ
ಹೊತ್ತಾರೆದ್ದು ಕುಂಬಾರಣ್ಣ ತುಪ್ಪಾಬಾನುಂಡಾನ ಘಟ್ಟಿಸಿ ಮಣ್ಣಾ ತುಳಿದಾನ
ಘಟ್ಟೀಸಿ ಮಣ್ಣಾ ತುಳಿಯುತ್ತ ಮಾಡ್ಯಾನ ಮಿತ್ರೇರು ಹೊರುವಂತ ಐರಾಣಿ
ಈ ಜಾನಪದ ಹಾಡಿನ ಕುಂಬಾರಣ್ಣ ಈಗ ನೆನಪು ಮಾತ್ರ. ಕುಂಬಾರಣ್ಣನೀಗ ಮುಂಜಾನೆದ್ದು ಹಾಲು ಬಾನು ಉಂಡು, ಹಾರ್ಯಾಡಿ ಮಣ್ಣನ್ನು ತುಳಿಯುವಂತಹ ಪರಿಸ್ಥಿತಿಯಲ್ಲಿ ಇಲ್ಲ. ಏಕೆಂದರೆ ಆಧುನಿಕತೆಯ ಭರಾಟೆಯಲ್ಲಿ ಜನರು ಕುಂಬಾರಣ್ಣ ಮಾಡಿದ ಮಣ್ಣಿನ ಮಡಿಕೆಗಳನ್ನು ಕೊಳ್ಳಲು ಸಿದ್ಧರಿಲ್ಲ. ಅಲ್ಲಲ್ಲಿ ಕೆಲವರು ತಮ್ಮ ಕುಲ ಕಸುಬನ್ನು ಹೇಗಾದರೂ ಮಾಡಿ ಉಳಿಸಿಕೊಂಡು ಹೋಗಬೇಕು ಎನ್ನುವ ಹಠದಿಂದ ತಮಗೆ ಲಾಭ ಇಲ್ಲದಿದ್ದರೂ, ತಮ್ಮ ಕಸುಬು ಬಿಡುತ್ತಿಲ್ಲ. ಇಲ್ಲದಿ ದ್ದರೆ ಇಂದಿನ ಆಧುನಿಕ ಮಕ್ಕಳಿಗೆ ಮಣ್ಣಿನ ಪಾತ್ರೆಗಳು ಕೇವಲ ಕಥೆಯಾಗಿ ಮಾತ್ರ ಉಳಿಯುತ್ತಿದ್ದವು.
ನಮ್ಮ ಗ್ರಾಮೀಣ ಪ್ರದೇಶಗಳಲ್ಲಿ ಪಾರಂಪರಿಕ ವಾಗಿ ನಡೆದುಕೊಂಡು ಬಂದ ಅನೇಕ ಕಲೆಗಳಲ್ಲಿ ಕುಂಬಾರಿಕೆಯೂ(ಮಡಿಕೆ ತಯಾರಿಕೆ) ಒಂದು. ಇದು ಮಾನವ ಸಂಸ್ಕೃತಿಯ ಆರಂಭ ಕಾಲದಿಂದಲೂ ಬೆಳೆದು ಬಂದಿದ್ದು ಮನುಷ್ಯನ ಅತಿ ಅವಶ್ಯಕತೆಗಳಲ್ಲಿ ಒಂದಾಗಿತ್ತು. ಮಡಿಕೆ ತಯಾರಿಕಾ ಕಲೆಗೆ ಸಾವಿರಾರು ವರ್ಷಗಳ ಇತಿಹಾಸ ಇದೆ. ಇದುವರೆಗೂ ದೊರೆತ ನಾಗರಿಕತೆಗಳಲ್ಲಿ ಮಣ್ಣಿನ ಮಡಿಕೆಗಳು ಈ ಇತಿಹಾಸಕ್ಕೆ ಸಾಕ್ಷಿಯಾಗಿವೆ.
ಮಾನವ ಮಣ್ಣಿನ ಮಡಿಕೆಗಳನ್ನು ಪುರಾತನ ಕಾಲದಿಂದಲೂ ಸರ್ವೋಪಯೋಗಿ ಸಾಧನವಾಗಿ ಗುರುತಿಸಲ್ಪಡುತ್ತದೆ. ನೀರು ಸಂಗ್ರಹಿಸಲು, ದವಸ ಧಾನ್ಯಗಳ ಸಂಗ್ರಹಣೆಗೆ, ಅಲಂಕಾರಕ್ಕೆ, ದೇವರ ಮುಂದಿನ ದೀಪ ಧೂಪಗಳಿಗೆ ಪ್ರತಿಯೊಂದಕ್ಕೆ ಮಣ್ಣಿನಿಂದ ಮಾಡಿದ ಸಲಕರಣೆಗಳು ಉಪಯೋಗಿಸಲ್ಪಡುತ್ತಿದ್ದವು. ಮಡಿಕೆಗಳನ್ನು ತಯಾರಿಸುವ ಪ್ರಕ್ರಿಯೆಗೆ ಅಂದಾಜು 9ರಿಂದ 10ದಿನಗಳಾದರೂ ಬೇಕು. ಒಬ್ಬರು ಒಂದು ದಿನಕ್ಕೆ 10-12 ಮಡಕೆಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿದ್ದು ಅವುಗಳನ್ನು ಒಣಗಿಸಿ ಸುಟ್ಟು ನಂತರ ಮಾರಾಟಕ್ಕೆ ಸಜ್ಜುಗೊಳಿಸ ಬೇಕಾಗುತ್ತದೆ.
ಭಟ್ಕಳ ತಾಲೂಕಿನ ಚಿತ್ರಾಪುರ ಕುಂಬಾರ ಕೇರಿಯಲ್ಲಿ ಈಗಲೂ ಮಣ್ಣನ್ನು ಹದಕ್ಕಿಳಿಸಿ ಮಣ್ಣಿನ ಸುಂದರ ಕಲಾಕೃತಿಗಳನ್ನು ತಯಾರಿಸುವ ಗೋವಿಂದಪ್ಪ ನಾಗಪ್ಪ ಕುಂಬಾರ್ ಹಾಗೂ ಅವರ ಕುಟುಂಬ ತಮ್ಮ ಕುಲಕಸುಬನ್ನು ಕಷ್ಟಕಾಲ ದಲ್ಲೂ ಮುಂದುವರಿಸಿಕೊಂಡು ಬರುತ್ತಿದ್ದಾರೆ. ಬಹಳ ದೂರದಿಂದ ಜೇಡಿಮಣ್ಣನ್ನು ಸಂಗ್ರಹಿಸಿ ತಂದು ಅದನ್ನು ನೆನಸಿ, ಒಣಗಿಸಿ, ಕುಟ್ಟಿ, ಗಾಳಿಸಿ ಶೇಡಿಮಣ್ಣಿನೊಂದಿಗೆ ಕಲಿಸಿ ನಂತರ ಮಡಿಕೆಯನ್ನು ತಯಾರಿಸುತ್ತಾರೆ. ಅದನ್ನು ಭಟ್ಟಿಯಲ್ಲಿ ಕೆಂಪು ಬಣ್ಣ ಬರುವವರೆಗೂ ಸುಟ್ಟು ನಂತರ ಮಾರಾಟ ಮಾಡುತ್ತಾರೆ.
ಹಿಂದೆ ಮಡಿಕೆ ಹೊತ್ತು ಸಂತೆ, ಜಾತ್ರೆಗಳಿಗೆ ತೆರಳುತ್ತಿದ್ದ ಇವರು ಈಗ ಅದರ ಬೇಡಿಕೆ ಕಡಿಮೆಯಿಂದಲೂ ಮಡಿಕೆ ತಯಾರಿಕೆಯ ಕಚ್ಚಾ ಸಾಮಗ್ರಿಗಳ ಅಲಭ್ಯತೆಯಿಂದಲೂ ಊರೂರು ಸುತ್ತುವ ಕಾರ್ಯಕ್ಕೆ ತಿಲಾಂಜಲಿಯನ್ನು ನೀಡಿದ್ದು ಕೇವಲ ಹೆಸರಿಗೆ ಮಾತ್ರ ಕುಂಬಾರಿಕೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.
ಶ್ರಮದ ಕೆಲಸ: ಕುಂಬಾರಿಕೆ ಸುಲಭವಲ್ಲ. ಇದೊಂದು ಶ್ರಮಜೀವಿಗಳ ಕೆಲಸ. ಇಲ್ಲಿ ಲಾಭಕ್ಕಿಂತ ನಷ್ಟವೆ ಹೆಚು.್ಚ ಸ್ವಲ್ಪ ಜಾಗ್ರತೆ ತಪ್ಪಿದರೂ ಕೆಲಸ ಕೆಟ್ಟಂತೆಯೆ. ಹೊಲ ಕೆರೆಗಳಲ್ಲಿ ಸಿಗುವ ಜೇಡಿಮಣ್ಣನ್ನು ತಂದು ನೆನೆಹಾಕಿ ಕಲೆಸಿ ನಾಲ್ಕೈದು ದಿನಗಳ ನಂತರ ಅದನ್ನು ಸುಮಾರು ಒಂದು ಗಂಟೆ ಕಾಲ ತುಳಿದು ಹದ ಮಾಡಿ ಚಕ್ರದ ಸಹಾಯದಿಂದ ಮಡಕೆ ತಯಾರಿಸಬೇಕು. ಹಸಿಯಾದ ಮಣ್ಣು ಹದಕ್ಕೆ ಸರಿಯಾಗಿ ಆರಿದ ಮೇಲೆ ಬಡಿದು ಕೂರಿಸಿ ಒಂದು ದಿನ ನೆರಳಿನಲ್ಲಿ ಒಣಗಿಸಿ ನಂತರ ಸೌದೆ, ಸೋಗೆಗಳ ಸಹಾಯದಿಂದ ಭಟ್ಟಿಯಲ್ಲಿ ಸುಟ್ಟ ಮೇಲೆಯೆ ಅವುಗಳನ್ನು ಮಾರಾಟಕ್ಕೆ ಒಯ್ಯಬೇಕು.
ಇಷ್ಟೆಲ್ಲ ಕಷ್ಟದ ಕೆಲಸವನ್ನು ಈಗಿನ ಕಾಲದ ಮಂದಿ ಹೇಗೆ ತಾನೆ ಮಾಡಿಯಾರು? ಸುಲಭವಾಗಿ ಹಣಗಳಿಸುವ ಹೊಸ ಹೊಸ ವಿಧಾನಗಳು ಇಂದು ಆವಿಷ್ಕಾರಗೊಳ್ಳುತ್ತಿದ್ದು ಕುಂಬಾರ ಸಮುದಾಯದ ನವಪೀಳಿಗೆ ಇದನ್ನು ಬದಿಗಿಟ್ಟು ತಮ್ಮ ಭವಿಷ್ಯ ಅರಸಲು ಪಟ್ಟಣ ಸೇರುತ್ತಿರುವುದು ಕೂಡ ಕುಂಬಾರಿಕೆ ಕಲೆ ನಶಿಸಲು ಕಾರಣವಾಗಿ ಎನ್ನಬಹುದು.
ನಮ್ಮ ಚಿಕ್ಕಂದಿನಲ್ಲಿ ನಾವು ನೋಡಿದ ಹಾಗೆ ಕುಂಬಾರರು ಮಣ್ಣಿನ ಮಡಿಕೆಗಳನ್ನು ಹೊತ್ತು ಊರೂರು ಸುತ್ತುತ್ತಿದ್ದರು. ಜನ ಅವರಿಗೆ ದವಸ ಧಾನ್ಯಗಳನ್ನು ನೀಡಿ ಮಡಿಕೆಗಳನ್ನು ಪಡೆಯುತ್ತಿದ್ದರು. ಊರ ಮಂದಿ ಎಲ್ಲದ್ದಕ್ಕೂ ಮಣ್ಣಿನ ಪಾತ್ರೆ ಗಳನ್ನೆ ಬಳಸುತ್ತಿದ್ದರು. ಆದರೆ ಕಾಲಾಂತರದಲ್ಲಿ ಸ್ಟೀಲ್, ಪ್ಲಾಸ್ಟಿಕ್ ವಸ್ತುಗಳ ಉಪಯೋಗ ಹೆಚ್ಚಾದಂತೆ ಕುಂಬಾರರ ಮಡಿಕೆಗಳು ಅಡುಗೆ ಕೋಣೆಯಿಂದ ಮರೆಯಾಗತೊಡಗಿತು. ದನ ಕರುಗಳಿಗೆ ನೀರುಣಿಸಲು ಬಳಸುತ್ತಿದ್ದ ಬಾನಿಗಳು ದೂರಾದವು. ವಿದ್ಯುತ್‌ ದೀಪಗಳ ಬಳಕೆಯಿಂದ ಹಣತೆ ಮರೆಯಾಯಿತು. ಬಚ್ಚಲು ಮನೆಯಲ್ಲಿ ನೀರು ಸಂಗ್ರಹಣೆಗೆ ಸೋರೆಗಳ ಬದಲು ಲೋಹದ ಹಂಡೆಗಳು ಜಾಗಪಡೆದುಕೊಂಡವು. ಸೋಲಾರ್, ಗೀಸರ್‌ಗಳ ಉಪಯೋಗ ಹೆಚ್ಚಾದಂತೆ ಕುಂಬಾರಣ್ಣನ ಕಲೆಗಾರಿಕೆ ತೆರೆಯಿಂದ ಮರೆಯಾಗತೊಡಗಿತು.
ನೈಸರ್ಗಿಕ ಕೂಲರ್: ಪರಿಸ್ಥಿತಿ ಹೀಗಿದ್ದರೂ ಈಗಲೂ ಮಣ್ಣಿನ ಮಡಿಕೆಗಳಿಗೆ ಬೇಸಿಗೆಯಲ್ಲಿ ಭಾರೀ ಬೇಡಿಕೆ ಇರುತ್ತದೆ. ಏಕೆಂದರೆ ಇದೊಂದು ನೈಸರ್ಗಿಕ ಫ್ರಿಜ್ ಆಗಿದ್ದು ಮಡಿಕೆಯಲ್ಲಿ ಶೇಖರಿಸಿಟ್ಟ ನೀರು ಕುಡಿಯಲು ಅತ್ಯಂತ ತಂಪಾಗಿದ್ದ್ದು ಆರೋಗ್ಯಕ್ಕೂ ಉತ್ತಮ ಎನ್ನುವ ದೃಷ್ಟಿಯಿಂದ ಜನರು ಮತ್ತೆ ಮಣ್ಣಿನ ಮಡಿಕೆಗಳತ್ತ ಮುಖ ಮಾಡುತ್ತಿರುವುದು ಕುಂಬಾರರಿಗೆ ಆಶಾದಾಯಕ ವಾಗಿದೆ.
ಸಂಘಟಿತರಾಗುತ್ತಿರುವ ಕುಂಬಾರ ಸಮಾಜ:  ಇತ್ತೀಚೆಗೆ ಎಲ್ಲ ಸಮುದಾಯಗಳಲ್ಲಿ ಜಾಗೃತಿ ಉಂಟಾದ ಹಾಗೆ ಕುಂಬಾರ ಸಮುದಾಯವೂ ಜಾಗೃತವಾಗಿದ್ದು ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಸಂಘಟಿತರಾಗಿ ಸರಕಾರದ ಮುಂದೆ ತಮ್ಮ ಬೇಡಿಕೆಗಳನ್ನು ಮಂಡಿಸುತ್ತಿದ್ದಾರೆ. ಹೋರಾಟದ ಮೂಲಕ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳುವ ಪ್ರಯತ್ನಗಳು ಸಾಗುತ್ತಿವೆ. ಆರ್ಥಿಕವಾಗಿ ಹಿಂದುಳಿದ ಕುಂಬಾರ ಸಮುದಾಯ ಆರ್ಥಿಕವಾಗಿ ಸಬಲತೆಯನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದು ತಮ್ಮ ಕಲೆಯನ್ನು ಮುಂದುವರಿಸಿಕೊಂಡು ನಶಿಸು ತ್ತಿರುವ ಕುಂಬಾರಿಕೆಗೆ ಮತ್ತೆ ಜೀವಕಳೆ ತುಂಬಲೆಂದು ಎಲ್ಲರ ಹಾರೈಕೆಯಾಗಿದೆ.

ಶನಿವಾರ, ಏಪ್ರಿಲ್ 20, 2013











ಆಟಮಾಟ ಸಾಮಾಜಿಕವಾದ ಸಾಂಸ್ಕೃತಿಕ ಕಾಳಜಿಗಳನ್ನಿಟ್ಟುಕೊಂಡೇ ನಾಟಕ ಮಾಡುತ್ತ ಬಂದಿದೆ. ಈಗ ಕರ್ನಾಟಕದಲ್ಲಿ ರಂಗಾಯಣ ಬಿಟ್ಟರೆ ಪೂರ್ಣಾವಧಿ ರೆಪರ್ಟರಿಗಳು ಯಕ್ಷಗಾನ ಹೊರತುಪಡಿಸಿ ಇಲ್ಲವಾಗಿವೆ. ಹಾಗೊಂದು ಸ್ವತಂತ್ರ ವೃತ್ತಿ ರೆಪರ್ಟರಿಯನ್ನು ಕಟ್ಟುವ ಆಶಯ ನಮ್ಮದಾಗಿದ್ದರೂ ಸಾಧ್ಯವಾಗುತ್ತಿಲ್ಲ. ಆದರೆ “ಆಟಮಾಟ ಅಡ್ಯಾಟ”ಕ್ಕಾಗಿ ನಾವು ಏಳೆಂಟು ಜನ ರಂಗಭ್ಯಾಸಿಗಳು ವರ್ಷದಲ್ಲಿ ಮೂರು ತಿಂಗಳು ಬಿಡುವು ಮಾಡಿಕೊಂಡು, ಉಮೇದಿನಿಂದ ನಾವುನಾವೇ ಒಂದು ನಾಟಕ ನಿರ್ದೇಶಿಸಿಕೊಂಡು ನಾಟಕ ಮಾಡುತ್ತ ಬಂದಿದ್ದೇವೆ. ಒಮ್ಮೊಮ್ಮೆ ವರ್ಷದಲ್ಲಿ ಎರಡು ಸುತ್ತು ಎರಡೆರಡು ನಾಟಕಗಳನ್ನು ತಯಾರಿಸಿ ಕರ್ನಾಟಕದಾದ್ಯಂತ ಪ್ರದರ್ಶಿಸಿದ್ದೇವೆ. ಇಲ್ಲಿಗೆ ಆಟಮಾಟ ಐದು ವರ್ಷ ಪೂರೈಸಿದ್ದು ಒಂಬತ್ತು ನಾಟಕಗಳ ಅಡ್ಯಾಟ ಮಾಡಿರುವುದು ನಮ್ಮ ಹೆಮ್ಮೆಯಾಗಿದೆ. ಈ ಕೆಳಗಿ ಚಿತ್ರಗಳು ರಮಾಯಿ ನಾಟಕದ ದೃಶ್ಯಗಳು. ನಮ್ಮ ತಂಡದ ಪ್ರೀತಿಯ ಛಾಯಾಚಿತ್ರಗ್ರಾಹಿ ರಾಮಚಂದ್ರ ಕುಲಕರ್ಣಿ ಸೆರೆ ಹಿಡಿದ ನಾಟಕದ ಕ್ಷಣಗಳು ಇಲ್ಲಿವೆ. ನಾಟಕ-ರಮಾಯಿ. ನಿರ್ದೇಶನ- ಮಹಾದೇವ ಹಡಪದ ಸಾಲಾಪೂರ

ಧಾರವಾಡ ಎಂಬ ಸ್ವಾವಲಂಬನೆಯ ಸಾಂಸ್ಕೃತಿಕ ನಗರ

ಉತ್ತರಕರ್ನಾಟಕದ ಸಾಂಸ್ಕೃತಿಕ ಐಕಾನ್ ಧಾರವಾಡ. ದೇಶದ ಹೆಸರಾಂತ ಸಂಗೀತ ವಿದೂಷಿಗಳು, ಪಂಡಿತರು ಧಾರವಾಡ ನೆಲದಲ್ಲಿ ಸಂಗೀತ ಕಛೇರಿ ಕೊಡಲಿಕ್ಕೆ ಕಾಯುತ್ತಾರೆ ಹೇಗೋ ಹಾಗೆಯೇ ನ...