ಸೋಮವಾರ, ಡಿಸೆಂಬರ್ 24, 2012

ನಾಟಕ - ಹಾಡುಗಳೇ ನೈಜ ದಲಿತ ಸಾಹಿತ್ಯ -ಸಂದರ್ಶನ: ಡಿ.ಎಂ. ಕುರ್ಕೆ ಪ್ರಶಾಂತ



ತಮ್ಮ ಬದುಕಿನ ಬಹುಭಾಗವನ್ನು ದಲಿತ ಸಂಘಟನೆ ಮತ್ತು ಹೋರಾಟಕ್ಕೆ ಮೀಸಲಿಟ್ಟಿರುವ ಡಾ. ಚೆನ್ನಣ್ಣ ವಾಲೀಕಾರ, 80-90ರ ದಶಕದಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ನಡೆದ ದಲಿತ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡವರು. ಅವರ ಸಾಹಿತ್ಯ ದಲಿತರ ಬದುಕು, ನೋವು, ಅಪಮಾನ, ಜಮೀನ್ದಾರಿ ವ್ಯವಸ್ಥೆಯ ಕೌರ್ಯದ ಸ್ಫೋಟಕ ಅಭಿವ್ಯಕ್ತಿಯಾಗಿದೆ. `ಮರದ ಮೇಲಿನ ಗಾಳಿ', `ಕರಿತೇಲಿ ಮಾನವನ ಜೀಪದ ಹಾಡು', `ಪ್ಯಾಂಥರ್ ಪದ್ಯಗಳು', `ಬಂಡೆದ್ದ ದಲಿತರ ಬೀದಿ ಹಾಡುಗಳು', `ಕಪ್ಪು ಕತೆಗಳು', `ಕುತ್ತದಲ್ಲಿ ಕುದ್ದವರ ಕತೆಗಳು', `ಹೆಪ್ಪುಗಟ್ಟಿದ ಸಮುದ್ರ', `ಗ್ರಾಮಭಾರತ', `ವ್ಯೋಮಾವ್ಯೋಮ' ಸೇರಿದಂತೆ ಐವತ್ತಕ್ಕೂ ಹೆಚ್ಚು ಕೃತಿಗಳನ್ನು ಚೆನ್ನಣ್ಣ ರಚಿಸಿದ್ದಾರೆ.
ಗುಲ್ಬರ್ಗ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾಗಿ, ಪ್ರಸಾರಾಂಗದ ನಿರ್ದೇಶಕರಾಗಿ ಕಾರ್ಯನಿರ್ವಹಿಸಿರುವ ಅನುಭವ ಚೆನ್ನಣ್ಣ ಅವರದು. ಅವರಿಗೀಗ, ಬೆಳಗಾವಿಯಲ್ಲಿ ಡಿ. 29-30ರಂದು ನಡೆಯುವ `ಅಖಿಲ ಭಾರತ 4ನೇ ದಲಿತ ಸಾಹಿತ್ಯ ಸಮ್ಮೇಳನ'ದ ಅಧ್ಯಕ್ಷ ಗೌರವ. ಈ ಸಂದರ್ಭದಲ್ಲಿ ಚೆನ್ನಣ್ಣನವರೊಂದಿಗೆ `ಸಾಪ್ತಾಹಿಕ ಪುರವಣಿ'ಯೊಂದಿಗೆ ಮಾತನಾಡಿದರು.
ದಲಿತ ಸಾಹಿತ್ಯದ ಇಂದಿನ ಸ್ಥಿತಿಗತಿ ಬಗ್ಗೆ ಏನನ್ನಿಸುತ್ತದೆ?
ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಕನ್ನಡ ದಲಿತ ಸಾಹಿತ್ಯ ಪ್ರಬಲವಾಗಿಯೇ ಬೆಳೆದಿದೆ. ಆದರೆ ಮರಾಠಿ ದಲಿತ ಸಾಹಿತ್ಯಕ್ಕೆ ಹೋಲಿಸಿದರೆ ನಮ್ಮಲ್ಲಿ ಆತ್ಮಕತೆಗಳು ತುಸು ಕಡಿಮೆ. ಮರಾಠಿ ದಲಿತ ಸಾಹಿತ್ಯದಲ್ಲಿ ತನ್ನ ತಾಯಿ ವೇಶ್ಯೆ, ತನ್ನ ಬದುಕು ಇಂತಹ ಕೆಳಮಟ್ಟದ ಸ್ಥಿತಿಯಿಂದ ಬಂದಿದ್ದು ಎನ್ನುವುದನ್ನು ಅಲ್ಲಿನ ಸಾಹಿತಿಗಳು ಮುಕ್ತವಾಗಿ ಅಭಿವ್ಯಕ್ತಿಸಿದ್ದಾರೆ. ನಮ್ಮಲ್ಲಿ ಇಂತಹ ಅಭಿವ್ಯಕ್ತಿ ಕಡಿಮೆ. ನಾಟಕ ಮತ್ತು ಹಾಡುಗಳೇ ನೈಜ ದಲಿತ ಸಾಹಿತ್ಯ.
ನಿರಕ್ಷರಿ ದಲಿತರನ್ನು ಚಳವಳಿಗಳಿಗೆ ಪ್ರಭಾವಿಸಲು ಮತ್ತು ಜಾಗೃತಗೊಳಿಸಲು ನಾಟಕ ಮತ್ತು ಹಾಡುಗಳಿಗಿಂತ ಉತ್ತಮ ಮಾಧ್ಯಮ ಮತ್ತೊಂದಿಲ್ಲ. ದಲಿತ ಚಳವಳಿ ಮತ್ತು ಸಾಹಿತ್ಯ ಒಂದಕ್ಕೊಂದು ಪೂರಕವಾಗಿಯೇ ಬೆಳೆದಿವೆ. ಆದರೆ ಪ್ರಸಕ್ತ ದಲಿತ ಚಳವಳಿ ಮತ್ತು ಸಾಹಿತ್ಯದಲ್ಲಿ ಅಂತರವಿದೆ. ದಲಿತ ಸಾಹಿತ್ಯಕ್ಕಿಂತ ಇಂದಿನ ದಲಿತ ಸಂಘಟನೆಗಳ ಸ್ಥಿತಿಗತಿಗಳ ಬಗ್ಗೆ ಮುಖ್ಯವಾಗಿ ಅವಲೋಕಿಸಬೇಕಿದೆ.   
ದಲಿತ ಸಾಹಿತಿಗಳ ಅನುಭವ ಮತ್ತು ಸಂವೇದನೆ ಆಡುನುಡಿಯಲ್ಲಿ ಅಭಿವ್ಯಕ್ತಗೊಂಡಿದೆ. ಆದರೆ ಇಂದಿನ ಯುವ ದಲಿತ ಸಾಹಿತ್ಯ  ಜನಪ್ರಿಯ ಸಾಹಿತ್ಯದ ಪರಿಭಾಷೆಗೆ ಒಳಗಾಗುತ್ತಿದೆ. ಇದರಿಂದಾಗಿ ದಲಿತ ಸಂವೇದನೆಗಳು
ದೂರವಾಗುವುದಿಲ್ಲವೆ?
ನೋವು, ಹಸಿವು, ಬದುಕಿನ ಸಂಕಟಗಳ ಅರಿವು ಸಾಹಿತಿಗೆ ಇರಬೇಕು. ಇದರಿಂದ ಆತ ತನ್ನ ಅನುಭವಗಳನ್ನು ಕಟ್ಟಿಕೊಡಲು ಸಾಧ್ಯ. ನಾವುಗಳು ಹಳ್ಳಿಗಳಿಂದ ಬಂದ ಜನ. ಪ್ರಾಮಾಣಿಕ ಬರಹಕ್ಕೆ ಪ್ರಾಮುಖ್ಯ ನೀಡಿದೆವು. ಅಕ್ಷರಸ್ಥ ಭಾಷೆ ಸತ್ತ ಭಾಷೆ, ಆಡುವ ಭಾಷೆ ಜೀವಂತ ಎನ್ನುವ ನಿಲುವಿನಲ್ಲಿ ಉತ್ಪ್ರೇಕ್ಷೆ, ಅಲಂಕಾರ, ಅತಿಶಯೋಕ್ತಿ ಇಲ್ಲದೆ ಬರೆದೆವು. ಹೈದರಾಬಾದ್ ಕರ್ನಾಟಕದ ಗ್ರಾಮ್ಯ ಭಾಷೆಯಲ್ಲಿ ನನ್ನ ಬರವಣಿಗೆಗಳು ಇದ್ದರೆ, ದೇವನೂರು ಮಹಾದೇವ ಅವರ ಬರವಣಿಗೆಗಳಿಗೆ ಹಳೇ ಮೈಸೂರು ಭಾಗದ ಭಾಷೆಯ ಸೊಗಡಿದೆ. ಆಯಾ ಭಾಗದ ಸಾಹಿತಿಗಳು ಅಲ್ಲಿನ ಗ್ರಾಮ್ಯ ಭಾಷೆಯಲ್ಲಿ ಬರವಣಿಗೆಯನ್ನು ದಾಖಲಿಸಿದ್ದಾರೆ. ದಲಿತ ಸಾಹಿತ್ಯ ನಗರಗಳಲ್ಲಿ ಹುಟ್ಟುವ ಸಾಧ್ಯತೆ ಕಡಿಮೆ. ಪ್ರಶಸ್ತಿಗೋ ಇಲ್ಲವೇ ಸ್ವಹಿತಾಸಕ್ತಿಗಾಗಿಯೋ ವಸ್ತುಸ್ಥಿತಿಯ ಬದುಕನ್ನು ತಿರುಚಿ ಉತ್ಪ್ರೇಕ್ಷಿಸಿ ಬರೆಯಲಾಗುತ್ತಿದೆ. ಆದರೆ ಇಂತಹ ಸಾಹಿತ್ಯಗಳು ದಲಿತ ಪಂಥದಲ್ಲಿ ಗಟ್ಟಿಯಾಗಿ ನಿಲ್ಲಲು ಸಾಧ್ಯವಿಲ್ಲ ಎಂಬುವುದು ನನ್ನ ನಂಬಿಕೆ.  
ದಶಕಗಳಿಂದ ದಲಿತ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೀರಿ. ಅಂದು ಮತ್ತು ಇಂದಿನ ಸಂಘಟನೆಯಲ್ಲಿ ವ್ಯತ್ಯಾಸ ಆಗಿದೆಯಾ?
ಆಗ, ಸಂಘಟನೆ ಅಥವಾ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿದರೆ ಹಳ್ಳಿಗಳಲ್ಲಿ ಜನರು ಸ್ವ ಪ್ರೇರಣೆಯಿಂದ ಅನ್ನ, ನೀರು ಕೊಟ್ಟು ಸಹಕಾರ ನೀಡುತ್ತಿದ್ದರು. ದುಡ್ಡು ಕೊಡುತ್ತೇವೆ ತೆಗೆದುಕೊಳ್ಳಿ, ನೀವು ಸಂಘಟನೆ ಮಾಡಿಕೊಳ್ಳಿ, ನಿಮ್ಮ ತಂಟೆ ಬೇಡ ಎನ್ನುವ ಮಂದಿ ಈಗ  ಬಹಳ ಸಂಖ್ಯೆಯಲ್ಲಿ ಇದ್ದಾರೆ.
ದಲಿತ ಸಂಘರ್ಷ ಸಮಿತಿ ಸ್ಥಾಪಕರಲ್ಲಿ ಒಬ್ಬರಾದ ಬಿ. ಕೃಷ್ಣಪ್ಪನವರು ಬದುಕಿರುವವರೆಗೂ ಸಂಘಟನೆಗೆ ಶಿಸ್ತು ಇತ್ತು. ಹೋರಾಟಗಳು ಪ್ರಾಮಾಣಿಕವಾಗಿದ್ದವು. ಆನಂತರ ದೇವನೂರು ಮಹಾದೇವ ಅವರು ದಸಂಸ ಮುನ್ನಡೆಸುವಾಗ ಕೆಲವರು ವಿನಾಕಾರಣ ಜಗಳ ತೆಗೆದರು. ಇದರಿಂದ ನೊಂದ ಅವರು ಸಂಘಟನೆಯಿಂದ ಅಂತರ ಕಾಯ್ದುಕೊಂಡರು. ಪ್ರಾಮಾಣಿಕರು ಸಂಘಟನೆಯಿಂದ ದೂರ ಸರಿದಂತೆ ರಾಜಕೀಯ ಮನೋಭಾವದವರು ತಳವೂರಿದರು. ರಾಜ್ಯದಲ್ಲಿ 34 ದಲಿತ ಸಂಘಟನೆಗಳಿವೆ ಎನ್ನುವ ಅಂದಾಜಿದೆ. ಎಡಗೈ, ಬಲಗೈ ತಾರತಮ್ಯ ಸಂಘಟನೆಗಳಲ್ಲೂ ಇದೆ.
ದಲಿತ ಸಂಘರ್ಷ ಸಮಿತಿಯ ಸಂಚಾಲಕತ್ವಕ್ಕೆ ಹಾತೊರೆಯುವವರು ಹೆಚ್ಚಾದರೇ ಹೊರತು, ಸಂಘಟನೆಗೆ ಶಿಸ್ತು ರೂಪಿಸಿ ಪ್ರಾಮಾಣಿಕತೆಯಿಂದ ಮುನ್ನಡೆಸುವವರು ಕಡಿಮೆಯಾದರು. ದೊಡ್ಡ ದೊಡ್ಡ ಮಾತು ಹೇಳಿದೊಡ್ಡಿ(ಪಾಯಖಾನೆ)ಯಲ್ಲಿ ಕೂಡುವ ಜನ ನಮ್ಮಲ್ಲಿ ಹೆಚ್ಚಾಗಿದ್ದಾರೆ. ಅಂಬೇಡ್ಕರ್‌ರ ತತ್ವ, ಸಿದ್ಧಾಂತಗಳಿಗೆ ಬದ್ಧರಾಗಿ ಹೋರಾಟ ನಡೆಸಿದವರು ನಗಣ್ಯರಾದರು. ಚಳವಳಿಗಳಲ್ಲೂ ರಾಜಕಾರಣ ನುಸುಳಿದ ಮೇಲಂತೂ ಪರಿಸ್ಥಿತಿ ಮತ್ತಷ್ಟೂ ಬಿಗಡಾಯಿಸಿತು. ಸಾಮೂಹಿಕತೆಗೆ ಒತ್ತು ನೀಡುತ್ತಿದ್ದ ದಲಿತ ಸಂಘಟನೆಗಳು, ವ್ಯಕ್ತಿ ಕೇಂದ್ರಿತವಾದವು.
ಬರಹಕ್ಕಿಂತ ನೀವು ಹೆಚ್ಚು ತೊಡಗಿಸಿಕೊಂಡಿದ್ದು ಸಂಘಟನೆಯಲ್ಲಿ. ವೃತ್ತಿ, ಕುಟುಂಬ, ಸಂಘಟನೆ ದಿನಗಳು ಹೇಗಿದ್ದವು?
ದಲಿತ ಸಾಹಿತ್ಯ ಮತ್ತು ಚಳವಳಿಗೆ ಪ್ರಮುಖ ತಿರುವು ನೀಡಿದ ಬಸವಲಿಂಗಪ್ಪನವರ `ಬೂಸಾ' ಪ್ರಕರಣವೇ ನನ್ನ ಬದುಕಿನಲ್ಲೂ ಮಹತ್ವದ ಬದಲಾವಣೆಗೆ ಮುನ್ನುಡಿ ಬರೆಯಿತು. ಆಗ ರಾಯಚೂರಿನಲ್ಲಿ ಅಧ್ಯಾಪಕನಾಗಿದ್ದೆ. ಬರಹಕ್ಕೆ ಮಾತ್ರ ಸೀಮಿತಗೊಳಿಸಿಕೊಂಡಿದ್ದ ನಾನು, ಬಸವಲಿಂಗಪ್ಪನವರನ್ನು ಬೆಂಬಲಿಸಿ ಹೋರಾಟದಲ್ಲಿ ತೊಡಗಿದೆ. ದಲಿತರು ತಮ್ಮ ಹಕ್ಕುಗಳ ಪ್ರತಿಪಾದನೆಗೆ ಚಳವಳಿ ಅನಿವಾರ್ಯ ಎಂಬುದು ಅರಿವಾಯಿತು. ಅಲ್ಲಿಂದ ಸಂಘಟನೆ ಮತ್ತು ಹೋರಾಟವೇ ಪ್ರಮುಖವಾಯಿತು.
ತಿರುಗಾಟ ಆರಂಭವಾದ ನಂತರ ಕುಟುಂಬದ ಜವಾಬ್ದಾರಿ ಪೂರ್ಣ ನನ್ನ ಹೆಂಡತಿಯದ್ದೇ. ಎಸ್‌ಟಿಡಿ, ಕಿರಾಣಿ ಅಂಗಡಿ ಇಟ್ಟುಕೊಂಡು ಜೀವನ ತೂಗಿಸಿದಳು. ನನ್ನವಳು, ಸಂಸಾರದ ಜವಾಬ್ದಾರಿ ಹೊತ್ತು ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದರಿಂದಲೇ ಚಳವಳಿಯಲ್ಲಿ ತೊಡಗಲು ಸಾಧ್ಯವಾಗಿದ್ದು.
ಜಾಗೃತಿ ಮತ್ತು ಬದಲಾವಣೆಗೆ ಸಮ್ಮೇಳನ ಯಾವ ರೀತಿ ಪೂರಕ ಆಗಬಲ್ಲದು?
ಎರಡು ದಿನಗಳ ಸಮ್ಮೇಳನದಲ್ಲಿ ಬದಲಾವಣೆ ನಿರೀಕ್ಷಿಸಲು ಸಾಧ್ಯವಿಲ್ಲ. ಇರುವ ಅಲ್ಪ ಅವಧಿಯಲ್ಲೇ ಮುಕ್ತ ಚರ್ಚೆ ನಡೆಯಬೇಕು. ಮೇಲ್ವರ್ಗಗಳ ವಿರುದ್ಧಕ್ಕಿಂತ ಇಂದು ನಮ್ಮ ಜನರ ವಿರುದ್ಧವೇ ಹೋರಾಟ ನಡೆಸಬೇಕಾದ ಸ್ಥಿತಿಯ ಬಗ್ಗೆಯೂ ವಿವೇಚಿಸಬೇಕಿದೆ. ಭಾಷಣ, ಸಾಹಿತ್ಯದಿಂದ ದಲಿತರ ಬದುಕು ಸುಧಾರಿಸದು. ಆದರೆ ಇಂತಹ ಸಮ್ಮೇಳನಗಳ ಮೂಲಕ ನಮ್ಮ ಸ್ಥಿತಿಗತಿಗಳ ಬಗ್ಗೆ ಚರ್ಚಿಸಬಹುದು. ರಾಜಕಾರಣಿಗಳನ್ನು ಕರೆಸಿ ನಮ್ಮ ಹಕ್ಕೊತ್ತಾಯಗಳನ್ನು ವಿವರಿಸಬಹುದು. ಸಮ್ಮೇಳನದಲ್ಲಿ ಕೈಗೊಳ್ಳುವ ನಿರ್ಣಯಗಳ ಜಾರಿ ಹೊಣೆಯನ್ನು ಅಧ್ಯಕ್ಷರು ಮತ್ತು ಸಂಚಾಲಕರು ವಹಿಸಿಕೊಳ್ಳಬೇಕು. ಸಮ್ಮೇಳನದ ನಂತರ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ನಿರ್ಣಯಗಳ ಬಗ್ಗೆ ಮನವರಿಕೆ ಮಾಡಿಕೊಡಲಾಗುವುದು.
ಚಿತ್ರ: ಜಿ.ಎಸ್.ಕೃಷ್ಣಕುಮಾರ್

ಶುಕ್ರವಾರ, ಡಿಸೆಂಬರ್ 21, 2012

ಕನ್ಹೈಲಾಲರ ವಿಸ್ಮಯಕಾರಿ ರಂಗ ಪ್ರಯೋಗಗಳು




ನನಗಾಗ ಸುಮಾರು 10-12 ವರ್ಷ. ಆವಾಗಿಂದಲೆ ಶುರುವಾಗಿತ್ತು ನನ್ನ ಸಿನಿಮಾ-ನಾಟಕದ ಗೀಳು. ಬೆಳಗಿನ ಕ್ಲಾಸಿಗೆ ಚಕ್ಕರ್ ಹೊಡೆದು ಮಾರ್ನಿಂಗ್ ಷೋ, ಮಧ್ಯಾಹ್ನದ ಕ್ಲಾಸಿಗೆ ಚಕ್ಕರ್ ಹೊಡೆದು ಮ್ಯೋಟಿನಿ ನೋಡುವುದು ನನಗಾಗ ದಿನ ನಿತ್ಯದ ಕಾರ್ಯಕ್ರಮ. ಸಾಯಂಕಾಲ ಇನ್ನೂ ಒಂದು ಸಿನಿಮಾ ನೋಡುವ ಪ್ಲಾನೊಂದು ಹೊಳೆಯಿತು. ಮೊದಲಿಂದಲೂ ಗಣಿತಕ್ಕೂ ನನಗೂ ಕಡು ವೈರ. ಆದ್ದರಿಂದ ಮನೆಯವರ ಮುಂದೆ ನಾನು ಸಂಜೆ ಟ್ಯೂಷನ್ನಿಗೆ ಹೋಗಬೇಕೆಂದು ಹಟ ಹಿಡಿದೆ. ಇಲ್ಲದಿದ್ದರೆ ಆ ವರ್ಷದ ಪರೀಕ್ಷೆಯಲ್ಲಿ ನನಗೆ ದೊಡ್ಡ ಕೋಳಿಮೊಟ್ಟೆ ಸಿಗುತ್ತದೆಂದು ಹೆದರಿಸಿದೆ.
ಕೊನೆಗೆ ಟ್ಯೂಷನ್ನಿಗೆ ಕಳಿಸಲು ಒಪ್ಪಿದರು. ಸಾಯಂಕಾಲ ಟ್ಯೂಷನ್ನಿಗೆ ಕೊಕ್ಕು ಕೊಟ್ಟು ಸಂಜೆ ಷೋ ಅನ್ನೂ ಪ್ರತಿದಿನ ನೋಡತೊಡಗಿದೆ. ಆಗ ನನಗೆ ಓದು ಅಂದರೆ ವಾಕರಿಕೆ. ಸಿನಿಮಾ ಅಂದರೆ ಪ್ರಾಣ.ಆಗಾಗ ಕಿಲಾರಿರಸ್ತೆಯ ತುದಿಗಿದ್ದ ಸುಬ್ಬಯ್ಯನಾಯ್ಡು ಅವರ ರಂಗಭೂಮಿಯಲ್ಲಿ ನಾಟಕ ನೋಡಲು ಮತ್ತೆ ಮತ್ತೆ ಹೋಗುತ್ತಿದ್ದೆ. ಅಲ್ಲಿ ಅಭಿನಯವಾಗುತ್ತಿದ್ದ  `ಭಕ್ತ ಅಂಬರೀಶ',  `ದೇವದಾಸಿ' ,  `ಎಚ್ಚಮನಾಯಕ'  ನಾಟಕಗಳು ಈಗಲೂ ಕಣ್ಣಿಗೆ ಟ್ಟಿದಂತಿವೆ. ಚಿಂದೋಡಿ ಕಂಪನಿಯವರ `ಟಿಪ್ಪೂ ಸುಲ್ತಾನ್' ನಾಟಕವೂ ಅಲ್ಲಿ ಅಭಿನಯವಾಗಿತ್ತು. ಚಿಂದೋಡಿ ವೀರಪ್ಪನವರ ಟಿಪ್ಪೂ ಸುಲ್ತಾನ್ ಅಭಿನಯ ನೋಡಿ ಕರಗಿ ಹೋಗುತ್ತಿದ್ದೆ.
ಅದೇ ರೀತಿ ಗುರುರಾಜುಲು ನಾಯ್ಡು, ಲಕ್ಷ್ಮೀದೇವಿ, ಮಹದೇವ ಸ್ವಾಮಿ ಕಂಪನಿಯ ಶ್ರಿಕಂಠಸ್ವಾಮಿ, ಗುಬ್ಬಿ ಕಂಪನಿಯ ಬಸವರಾಜು - ಇವರೆಲ್ಲಾ ಆ ಕಾಲದಲ್ಲಿ ನನ್ನ ಮನ ಸೆಳೆದ ನಟರು. ಕಿಲಾರಿ ರಸ್ತೆ ತುದಿಯ ಸುಬ್ಬಯ್ಯ ನಾಯ್ಡು ಅವರ ರಂಗಶಾಲೆ, ಗಾಂಧಿನಗರದ ಗುಬ್ಬಿ ಕಂಪನಿಯವರ ರಂಗಶಾಲೆ, ಸಿಟಿಮಾರ್ಕೆಟ್ಟಿನ ಬಳಿಯ ಮಹದೇವಸ್ವಾಮಿ ಕಂಪನಿಯ ರಂಗಶಾಲೆ ನನ್ನ ಬಾಲ್ಯದ ರಂಗ ಪ್ರಪಂಚದ ಮೇರೆಗಳು.
 
ನನಗೆ ಭಾವುಕ ಅಭಿನಯ ತುಂಬಾ ಮೆಚ್ಚುಗೆಯಾಗುತ್ತಿತ್ತು. ಶ್ರಿಕಂಠ ಸ್ವಾಮಿ, ಹರಿಶ್ಚಂದ್ರ ಪಾತ್ರದಲ್ಲಿ ಚಂದ್ರಮತಿ ಲೋಹಿತಾಶ್ವರನ್ನು ಹರಾಜು ಹಾಕುವ ದೃಶ್ಯ, `ಟಿಪ್ಪೂ ಸುಲ್ತಾನ್'  ನಾಟಕದಲ್ಲಿ ಟಿಪ್ಪೂ ಪಾತ್ರಧಾರಿ ಮೀರ್‌ಸಾದಿಕನ ವಂಚನೆಯಿಂದ ಬಳಲಿ `ಅಲ್ಲಾ ಹೊ  ಅಕ್ಬರ್'  ಅಂತ ಜಯಘೋಷಣೆ ಮಾಡುತ್ತಾ ಯುದ್ಧಕ್ಕೆ ಹೋಗುವ ದೃಶ್ಯ - ಇಂಥವುಗಳನ್ನು ನೋಡಿದಾಗ ನನಗೆ ಕಣ್ಣಲ್ಲಿ  ನೀರು ತಾನಾಗಿ ತಾನೇ ಸುರಿಯತೊಡಗುತ್ತಿತ್ತು.
ಅದೇ ರೀತಿ ಸಿನಿಮಾದಲ್ಲಿ ನನ್ನ ಮೆಚ್ಚಿನ ನಟ ಶಿವಾಜಿಗಣೇಶನ್, `ವೀರಪಾಂಡ್ಯ ಕಟ್ಟಬೊಮ್ಮನ್',    `ಕಂದನ್ ಕರುಣೈ'  ಸಿನಿಮಾಗಳಲ್ಲಿ ಶಿವಾಜಿ ಉಸಿರು ಬಿಗಿಹಿಡಿದು ನೀಳವಾದ ಸಂಭಾಷಣೆಗಳನ್ನು ತಡೆಯಿಲ್ಲದೆ ಹೇಳುವುದನ್ನು ಕೇಳಿ ಮಂತ್ರಮುಗ್ಧನಾಗುತ್ತಿದ್ದೆ. ಅದೇ ಥರ ರಾಜಕುಮಾರ್ ಅವರ ಭಕ್ತಿ ಸಿನಿಮಾಗಳಲ್ಲಿ ಅವರ ಭಾವುಕ ಅಭಿನಯ ನೋಡಿ ನನ್ನ ಮನಸ್ಸು ತುಂಬಿ ಬರುತ್ತಿತ್ತು. `ಭಕ್ತ ಕನಕದಾಸ' ಸಿನಿಮಾವನ್ನು ಲೆಕ್ಕವಿಲ್ಲದಷ್ಟು ಸಾರಿ ನೋಡಿದ್ದೆ. ಆ ಭಾವುಕ ಸಿನಿಮಾಗಳ ಡೈಲಾಗುಗಳನ್ನು ಉರು ಹಚ್ಚಿ ಯಥಾವತ್ತಾಗಿ ಗೆಳೆಯರ, ನೆಂಟರ ಮುಂದೆ ಒಪ್ಪಿಸಿ ಭೇಷ್‌ಗಿರಿ ಗಿಟ್ಟಿಸಿಕೊಳ್ಳುತ್ತಿದ್ದೆ. ನನ್ನ ಈ ಚಾಳಿ ಕನ್ನಡ ವಿದ್ವಾಂಸರಾಗಿದ್ದ ನ್ನ ತಂದೆಯವರಿಗೆ ಗೊತ್ತಾಗಿ ನನಗೊಂದು ಇಂಗ್ಲಿಷ್ ಬಿರುದು ನೀಡಿದ್ದರು: `ಎನಿಮಿ ಆಫ್ ಸರಸ್ವತಿ'. 

ಭಾವುಕ ಸಿನಿಮಾ -ನಾಟಕಗಳಷ್ಟೇ, ಎಂ. ಜಿ. ಆರ್. ಅವರ ಡಿಶುಂಡಿಶುಂ ನನಗೆ ಪ್ರಿಯವಾಗಿದ್ದವು. ನಮ್ಮ ಮನೆಯ ಹಿತ್ತಲಿನ ಸಂಪಿಗೆ ಮರದ ಕೊಂಬೆಗಳನ್ನು ಮುರಿದು ಅದನ್ನೇ ಕತ್ತಿ ಎಂದು ಕಲ್ಪಿಸಿಕೊಂಡು ಅದೃಶ್ಯ ಎದುರಾಳಿಯ ಜೊತೆಗೆ ಕತ್ತಿವರಸೆ ಮಾಡುತ್ತಿದ್ದೆ.
 
ಅಕ್ಕಪಕ್ಕದ ನನ್ನ ಥರದ `ಸರಸ್ವತಿ ಶತ್ರು'ಗಳನ್ನು ಕಲೆ ಹಾಕಿಕೊಂಡು ಸಿನಿಮಾಗಳಿಂದ ಕದ್ದ ದೃಶ್ಯಗಳನ್ನು ನಾಟಕ ಮಾಡಿ ತೋರಿಸುತ್ತಿದ್ದೆ. ಆಸುಪಾಸಿನ ಮನೆಗಳ ಹೆಂಗಸರು, ಅಜ್ಜಿಯರು ನಮ್ಮ ಪ್ರೇಕ್ಷಕರು. ಒಂದು ದಿವಸ ನಾನೂ ಮತ್ತು ನಮ್ಮ ನೆರೆಯ ನಾಗರಾಜಾಚಾರಿ ಒಂದು ನಾಟಕ ಮಾಡಿದೆವು. ಅವನು ಯುದ್ಧದಲ್ಲಿ ಗೆದ್ದು ಸಿಂಹಾಸನ ಹತ್ತಲು ಹೋಗುತ್ತಿರುತ್ತಾನೆ.
ಆದರೆ ಸೋದರಮಾವನ ಕಡೆಯವರು ಅವನನ್ನು ಹಿಂದಿನಿಂದ ಬಂದು ಇರಿಯುತ್ತಾರೆ. ಅವನ ತಮ್ಮನ ಪಾತ್ರ ವಹಿಸಿದ್ದ ನಾನು ಕ್ಷಣಾರ್ಧದಲ್ಲಿ ಅಲ್ಲಿಗೆ ಧಾವಿಸಿ ಎಂ. ಜಿ. ಆರ್. ಮಾದರಿಯ ಡಿಶುಂಡಿಶೂಂ ಬಾಕ್ಸಿಂಗ್ ಮಾಡಿ ಅವರೆಲ್ಲರನ್ನೂ ಕೊಲ್ಲುತ್ತೇನೆ.  ಅಮೇಲೆ `ಅಣ್ಣಾ ನಿನ್ನ ಈ ತಮ್ಮನನ್ನು ಅನಾಥನಾಗಿಸಿ ಆ ಲೋಕನಾಥನ ಪಾದಗಳನ್ನು ಸೇರಿದೆಯಾ? ಸಿಂಹಾಸನವನ್ನೇರಿ ಸೂರ್ಯಪ್ರಕಾಶವಾಗಿ ಶತ್ರುಗಳ ಕಣ್ಣು ಕುಕ್ಕಿಸಬೇಕಾಗಿದ್ದ ನೀನು ಶತ್ರುಗಳ ಮೋಸದೇಟಿಗೆ ಗುರಿಯಾದೆಯಾ? ನೀನಿಲ್ಲದ ರಾಜ್ಯ ನನಗೇಕೆ? ನೀನಿಲ್ಲದ ಪ್ರಾಣ ನನಗೇಕೆ? ಇಗೋ ನಾನೂ ಆ ಲೋಕಕ್ಕೆ ಬರುತ್ತಿದ್ದೇನೆ' ಎಂದು ಕತ್ತಿಯಾಗಿ ಮಾಡಿಕೊಂಡಿದ್ದ ಸಂಪಿಗೆ ಕೊಂಬೆಯಿಂದ ನನ್ನನ್ನು ನಾನೇ ತಿವಿದುಕೊಂಡು ಅವನ ಹೊಟ್ಟೆಯ ಮೇಲೆ ದೊಪ್ಪನೆ ಬೀಳುತ್ತೇನೆ.
 
ನಾನು ಎಂದೂ ಮರೆಯಲಾಗದ ಹೂಸು ಮತ್ತು ಸಿಂಬಳದ ಪ್ರಸಂಗ ಆಗಲೇ ಸಂಭವಿಸಿದ್ದು. ಹಿಂದಿನ ದಿನ ಆ ನಾಗರಾಜಾಚಾರಿ ಕೋಳಿಮಟ್ಟೆ ಸ್ಕೂಲು ಪಕ್ಕದ ಬೋಂಡಾ ಅಂಗಡಿಯಲ್ಲಿ ಸಖತ್ ಬೋಂಡಾ ತಿಂದಿದ್ದ. ಜೊತೆಗೆ ತುಂಬಾ ನೆಗಡಿಯೂ ಆಗಿತ್ತು. ನಾನು ಹೋಗಿ ಅವನ ಹೊಟ್ಟೆ ಮೇಲೆ ಬಿದ್ದಿದ್ದೇ ತಡ ಸಿಡಿಲು-ಗುಡುಗಿನೋಪಾದಿಯಲ್ಲಿ ಹೂಸುಬಿಟ್ಟು ಆ ವಾಸನೆಯನ್ನು ತಡಕೊಳ್ಳುವುದು ನನಗಾಗಲೀ ಅಥವಾ ನಮ್ಮ ಭವ್ಯ ನಾಟಕ ನೋಡಲು ಬಂದಿದ್ದ ಮಹಿಳಾಮಣಿಗಳಿಗೆ ಅಸದಳವಾಗುತ್ತಿದ್ದ ಸಂದರ್ಭದಲ್ಲೇ ಜೋರಾಗಿ ಸೀನಿದ. ಅವನ ಮೂಗಿನಿಂದ ಬೆಟ್ಟನೆಲ್ಲಿ ಕಾಯಿ ಗಾತ್ರದ ಸಿಂಬಳದ ಉಂಡೆಯೊಂದು ಚಿಟ್ಟೆಯಂತೆ ಜಿಗಿದು ನ್ನ ಬಲಗೆನ್ನೆಯ ಮೇಲೆ ಬಂದು ಕೂತಿತು. ಅವನು ತಬ್ಬಿಬ್ಬಾಗಿ ಮೇಲೆದ್ದ. ನಾನು `ಥೂಥ್ತೇರಿಕೆ' ಅಂತ ಬೈಯ್ಯುತ್ತಾ ಒರೆಸಿಕೊಳ್ಳತೊಡಗಿದೆ.
 
ನಮ್ಮ ಘನಗಂಭೀರ ನಾಟಕ ನೋಡಬಂದಿದ್ದವರೆಲ್ಲಾ ಗೊಳ್ಳೆಂದು ನಗತೊಡಗಿದ್ದರು. ಆ ಹೂಸು ಮತ್ತು ಸಿಂಬಳದ ಪ್ರಸಂಗದ ನಂತರ, ನಾನು ನಾಟಕ ಮಾಡುವುದನ್ನೇ ಬಿಟ್ಟೆ. ನನಗೆ ದೇವರು ಒಳ್ಳೆ ಬುದ್ಧಿ ಕೊಟ್ಟನೆಂದು ನಮ್ಮ ತಾಯಿ ಸಂತೋಷಪಟ್ಟರು.
 
ಈ ಪ್ರಸಂಗದ ಬಗ್ಗೆ ಇಷ್ಟು ವಿವರವಾಗಿ ಬರೆಯುವುದಕ್ಕೆ ಕಾರಣ ಕೇವಲ ಬಾಲ್ಯ ಕುರಿತ ಹಳಹಳಿಕೆಯಲ್ಲ. ಭಾವುಕತೆ ರೋಚಕತೆಗಳೇ ನಟನೆಯ ಜೀವಾಳವೆಂದು ತಿಳಿದಿದ್ದ ನನಗೆ ಆ ರೀತಿಯ ನಟನೆಯ ಬಗೆಗೇ ಅಸಹನೆ ಬಂತು. ಬೇರೆ ಥರದ ನಾಟಕಗಳ ಕಲ್ಪನೆ ನನಗಾಗ ಲಭ್ಯವಿರಲಿಲ್ಲ. ಆದ್ದರಿಂದ ನಾಟಕವನ್ನೇ ಕೈಬಿಟ್ಟೆ. ಸಿನಿಮಾ ನೋಡುವುದನ್ನು ಬಿಟ್ಟು ಪುಸ್ತಕಗಳ ಬೆನ್ನಿಗೆ ಬಿದ್ದೆ.
ಮುಂದೆ ಗಣಿತ ಮತ್ತು ಭೌತಶಾಸ್ತ್ರಗಳಲ್ಲಿ ಡುಮುಕಿ ಹೊಡೆದ ಕಾರಣ ಪಿ.ಯು. ಸಿ.ಯ ನಂತರ ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿಯಾದಾಗ ಷೇಕ್ಸ್‌ಪಿಯರನ ನಾಟಕಗಳನ್ನು ಓದತೊಡಗಿದಾಗ ಇನ್ನೊಂದು ರಂಗಕಲ್ಪನೆ ಅಸ್ಪಷ್ಟವಾಗಿ ಮನದಾಳದಲ್ಲಿ  ಮೂಡತೊಡಗಿತು. ನಾನು ಡಿಗ್ರಿ ಓದುವ ಸಂದರ್ಭದಲ್ಲಿ ಆಧುನಿಕ ನಾಟಕ ಮತ್ತು ರಂಗಭೂಮಿಗಳ ಪರಿಚಯ ನನಗಾಗತೊಡಗಿತು. ಬಿ.ವಿ. ಕಾರಂತರ ನಿರ್ದೇಶನದ ಹೊಸ ನಾಟಕಗಳನ್ನು ನೋಡಿದಾಗ ಹೊಸದೊಂದು ಜಗತ್ತು ತೆರೆದುಕೊಂಡಿತು.
ಆಮೇಲೆ `ಸಮುದಾಯ'ದ ಬುದ್ಧಿಜೀವಿ ನಾಟಕಗಳ ಪರಿಚಯವಾಯಿತು. ಪ್ರಸನ್ನ ನಿರ್ದೇಶನದ  `ಗೆಲಿಲಿಯೊ'  ನೋಡಿದಾಗ ಇನ್ನೊಂದು ಆಯಾಮ ತೆರೆದುಕೊಂಡಿತು. ಆದರೂ ಏನೋ ಸಾಲದು ಅನಿಸುತ್ತಿತ್ತು.
 
ಕೆಲವು ವರ್ಷಗಳ  ನಂತರ ನೌಕರಿಗಾಗಿ ನಾನು ತುಮಕೂರು ನಿವಾಸಿಯಾದ ಸಮಯದಲ್ಲಿ     `ಸಮುದಾಯ'ದವರು ಅಲ್ಲಿ ಒಂದು ಸಲ `ಕನ್ಹೈಲಾಲ್' ಎಂಬುವವರ  `ಪೆಬೆ'  ನಾಟಕವನ್ನಾಡಿಸಿದರು. ಅದು ನನ್ನ ಮೇಲೆ ಅಚ್ಚಳಿಯದ ಪ್ರಭಾವ ಬೀರಿತು. ತಾಯಿಹಕ್ಕಿಯೊಂದು ತನ್ನ ಮರಿಹಕ್ಕಿಗಳನ್ನು ಮೇಲೆರಗಿ ಬರುವ ಹದ್ದುಗಳಿಂದ ಹೇಗೆ ಕಾಪಾಡುತ್ತದೆಂಬುದು ಆ ನಾಟಕದ ಹುರುಳು. ಅದರ ಅಭಿನಯ ಕ್ರಮ ನಾನು ಆ ಹಿಂದೆ ನೋಡಿದ ಎಲ್ಲ ನಾಟಕಗಳಿಗಿನ್ನಾ ಬೇರೆಯಾಗಿತ್ತು. ನನ್ನ ಬಾಲ್ಯದ ಸಿನಿಮಾ-ನಾಟಕಗಳಂತೆ ಅದು ಭಾವುಕವಾಗಲೀ ರೋಚಕವಾಗಲೀ ಇರಲಿಲ್ಲ. ಅಥವಾ ಬುದ್ಧಿಜೀವಿ ನಾಟಕಗಳಂತೆ ವಾಗ್ವಾದಗಳ ಮೇಲೂ ನಿಂತಿರಲಿಲ್ಲ. ಭಾವುಕ ನಟ ಪಾತ್ರದಲ್ಲಿ ಮುಳುಗಿ ಹೋಗಿ ನೋಡುಗನನ್ನೂ ಮುಳುಗಿಸಿಬಿಡುತ್ತಾನೆ. ಬುದ್ಧಿಜೀವಿ ನಟ ಅನುಭವದೂರನಾಗಿ ನಿಲ್ಲುವುದರಿಂದ ಹೃದಯವಿಹೀನ ಸಿನಿಕತೆಯನ್ನುಂಟುಮಾಡುತ್ತಾನೆ.
 
ಭಾವುಕ ರಂಗಭೂಮಿಯ ಹಗಲುಗನಸಿನ ವರ್ತುಲದಲ್ಲಾಗಲಿ, ಬುದ್ಧಿಜೀವಿ ರಂಗಭೂಮಿಯ ಪರಕೀಯ ವಾತಾವರಣದಲ್ಲಾಗಲಿ ಕನ್ಹೈಲಾಲರ ನಟರು ಅಭಿನಯಿಸುತ್ತಿರಲಿಲ್ಲ. ಅವರ ಚಲನವಲನಗಳು ಒಂದು ಪ್ರಾಚೀನ ಕ್ರಿಯಾವಿಧಿಯ ಲಯಬದ್ಧತೆಯಿಂದ ಕೂಡಿದ್ದವು. ಜಾಗರಕ್ಕಿಂತಲೂ, ಚಿಂತನೆ-ಭಾವನೆಗಳಿಗಿಂತಲೂ ಆಳವಾದ ಮನೋವಲಯದ ಘಟನಾವಳಿಗಳನ್ನು ಅವು ಪ್ರತ್ಯಕ್ಷಗೊಳಿಸುತ್ತಿದ್ದವು.
ಮಾತುಗಳನ್ನು ಮಂತ್ರಗಳಂತೆ ಉಚ್ಚರಿಸುತ್ತಿದ್ದವು. ನಮ್ಮ ತಳಮನಸ್ಸಿನ ಅಗೋಚರ ಆದಿಮಭಾವಗಳನ್ನು, ಭೀತಿಗಳನ್ನು, ಬಯಕೆಗಳನ್ನು ರಂಗದ ಮಾಂತ್ರಿಕ ವಾತಾವರಣದಲ್ಲಿ ಕಟ್ಟಿಕೊಡುತ್ತಾ ನಮ್ಮನ್ನು ಕಲಕಿ ಬಗೆಯಾಳದ ಗಂಟುಗಳನ್ನು ಬಿಡಿಸುತ್ತಾ ಮೈ-ಮನ-ಬುದ್ಧಿ-ಭಾವಗಳನ್ನು ಹಗುರಗೊಳಿಸುತ್ತಿದ್ದವು. ತೆರೆದ ಕಣ್ಣಿನಿಂದ ಸ್ವಪ್ನವೊಂದನ್ನು ವೀಕ್ಷಿಸುತ್ತಾ ಅದರ ರಹಸ್ಯಮಯ ಪಾಠಗಳನ್ನು ನಮಗರಿವಿಲ್ಲದಂತೆ ಅರಿಯಪಡಿಸುವ ವಿಸ್ಮಯಕಾರಿಯಾದ ಪ್ರಯೋಗ ಅದು.
 
ಆ ಅನುಭವ ಮುಂದೆ ನನ್ನ ನಾಟಕಗಳ ರಚನೆಯನ್ನು ನನಗೇ ಗೊತ್ತಿಲ್ಲದ ರೀತಿಯಲ್ಲಿ ಪ್ರಭಾವಿಸಿತು. ಆಗ ಇನ್ನೊಂದು ಲೋಕದ ಜೀವಿಯಂತೆ ನನಗೆ ಕಂಡಿದ್ದ ಕನ್ಹೈಲಾಲರು ಮುಂದೆ ನನಗೆ ಆತ್ಮೀಯರಾಗುತ್ತಾರೆಂದಾಗಲಿ ಅವರ ಜೊತೆ ಕೆಲಸ ಮಾಡುವ, ಆಲೋಚಿಸುವ ಅವಕಾಶ ನನಗೊಮ್ಮೆ ದೊರೆಯುತ್ತದೆಂದಾಗಲಿ ನನಗಾಗ ಗೊತ್ತಿರಲಿಲ್ಲ. ಈಗ ಅವರು ರಚನೆ ಮಾಡಿರುವ ರಂಗತತ್ತ್ವವನ್ನು ಕುರಿತ  `ರಿಚುಯಲ್ ಥಿಯೇಟರ್'  ಪುಸ್ತಕಕ್ಕೆ ನಾನೀಗ ಮುನ್ನುಡಿ ಬರೆಯಹೊರಟಿರುವಾಗ ಮೇಲಿನ ನೆನಪುಗಳು ಸುಳಿದುಹೋದವು.  ಯಾಕೆಂದರೆ ರಂಗಭೂಮಿಯ ಬಗೆಗಿನ ನನ್ನ ತಿಳಿವಳಿಕೆ ನಂಬಿಕೆಗಳಿಗೆ ಕನ್ಹೈಲಾಲರ ಪ್ರಯೋಗವೇ ನನಗೆ ಗಮ್ಯಸ್ಥಾನವಾಗಿದೆ.
 
ನಾನು ಮೊದಲಿಗೆ ಅವರ ಪ್ರಯೋಗ ನೋಡಿದಾಗ ಉಂಟಾದ ಅನಿರ್ವಚನೀಯ ಸ್ಪಂದನಗಳನ್ನು ಈ ಅಪ್ರಕಟಿತ ಕೃತಿ ನಿರ್ವಚನಗೊಳಿಸುತ್ತಿರುವುದು ನನಗಾದ ವೈಯಕ್ತಿಕ ಪ್ರಯೋಜನ. ಇದನ್ನೂ ಮೀರಿದ ಸಾರ್ವಜನಿಕ ಪ್ರಯೋಜನವನ್ನು  ಈ ಕೃತಿ ಉಂಟುಮಾಡುತ್ತದೆ. ಇಡೀ ಕಲೆಯ ಬಗೆಗಿನ ನಮ್ಮ ತಿಳಿವಳಿಕೆಯನ್ನು ಆಮೂಲಾಗ್ರವಾಗಿ ಬದಲಾಯಿಸುವಂಥ ನಿಖರತೆಯನ್ನು ಇದು ಹೊಂದಿದೆ. ಜೊತೆಗೆ ಸಾಮಾಜಿಕ ಪಡಿಪಾಟಲುಗಳಿಂದ ಬಿಡುಗಡೆಯನ್ನು ಕಲೆಯ ಮೂಲಕ ಇಲ್ಲೇ, ಈಗಲೇ ಪಡೆದುಕೊಳ್ಳುವ ಹೆದ್ದಾರಿಯನ್ನು ಇದು ಹಾಕಿಕೊಡುತ್ತದೆ.
 
ಎಲ್ಲ ಆಳದ ಮಾತುಗಳಂತೆ ಕನ್ಹೈಲಾಲರ ಗ್ರಹಿಕೆಗಳನ್ನು ಶಬ್ದರೂಪದಲ್ಲಿ, ತಾರ್ಕಿಕವಾಗಿ ವಿವರಿಸುವುದು ಕಠಿಣ. ಆದ್ದರಿಂದ ಅವರು ತಮ್ಮ ಚಿಂತನೆಯ ನಿವೇದನೆಗೆ ವಿಚಾರಗಳ ಸಮನೆಲದ ಹಾದಿಯನ್ನು ಹಿಡಿಯದೆ ನೆನಪುಗಳ, ಪ್ರಶ್ನೋತ್ತರಗಳ, ಆತ್ಮಕಥನಗಳ ಮೂಲಕ ತಮ್ಮನ್ನು ಅಭಿವ್ಯಕ್ತಿಗೊಳಿಸಿಕೊಳ್ಳುತ್ತಾರೆ. ಕಲೆ ಮತ್ತು ಬದುಕಿನ ಬಗೆಗಿನ ನಮ್ಮ ಗೃಹೀತಗಳಿಗೆ ಪುನರ್ಜನ್ಮ ನೀಡಬಲ್ಲ ಶರವನ್ನು ಅಡಗಿಸಿಕೊಂಡಿರುವ ಕನ್ಹೈಲಾಲರ ಪುಸ್ತಕವನ್ನು ಕೆಳಕಂಡ ರೀತಿಯಲ್ಲಿ ಸಂಗ್ರಹಿಸಬಹುದೇನೋ.
 
ಕನ್ಹೈಲಾಲರ ರಂಗಚಿಂತನೆಗೆ ವಿಶ್ವಾತ್ಮಕ ಹೊರಚಾಚುಗಳಿದ್ದರೂ ಅವರು ತಮ್ಮ ಹೊಳಹುಗಳನ್ನು ಅರ್ಥೈಸುವುದು ತಮ್ಮ ಪ್ರದೇಶವಾದ ಮಣಿಪುರದ ಹಿಂಸ್ರ ರಾಜಕೀಯ ವಾತಾವರಣದಲ್ಲಿ. ತಮ್ಮ ರಕ್ತಸಿಕ್ತ ಸಮಾಜ ಮತ್ತು ಪರಿಸರದ ಗಾಯಗಳನ್ನು, ನೋವುಗಳನ್ನು ಸೃಜನಾತ್ಮಕವಾಗಿ ರಂಗದ ಮೇಲೆ ಅಭಿನಯಿಸಿ ಅವುಗಳಿಂದ ನಟರನ್ನು, ಪ್ರೇಕ್ಷಕರನ್ನು ಬಿಡುಗಡೆಗೊಳಿಸುವುದು ಅವರ ಧ್ಯೇಯ.
 
ಇದಕ್ಕಾಗಿ ಅವರು ಆಶ್ರಯಿಸುವ ರಂಗಭೂಮಿ ತಲತಲಾಂತರದಿಂದ ಬಂದ ಟ್ರಿಕ್ಕುಗಳನ್ನು ಹೊಸ ಮಸಾಲೆ ಜೊತೆ ಪ್ರದರ್ಶಿಸುವ ಜಾನಪದ ಅಥವಾ ಶಾಸ್ತ್ರೀಯ ರಂಗಭೂಮಿಯಂತಲ್ಲ. ಅಥವಾ ದೇಹಮನಸುಗಳನ್ನು ತಟ್ಟದೆ ಮುಟ್ಟದೆ ಅಮೂರ್ತ ಅನುಭವವನ್ನು ವಿಶ್ಲೇಷಿಸುವ ಬುದ್ಧಿಜೀವಿ ರಂಗಭೂಮಿಯೂ ಅಲ್ಲ. ಅಥವಾ ರಂಜನೆಯ ಸರಕು ಮೊದಲೇ ಅಲ್ಲ. ಅವರ ಮಟ್ಟಿಗೆ ರಂಗಭೂಮಿಯೆಂದರೆ ಒಡಲೊಂದೆಸೆ ಮನವೊಂದೆಸೆ ಬುದ್ಧಿಯೊಂದೆಸೆಯಾಗಿರುವ ಇಂದಿನ ನಮ್ಮನ್ನು ರಂಗಕ್ರಿಯೆಯ ಮೂಲಕ ಮತ್ತೆ ಒಟ್ಟುಗೂಡಿಸಿ ನಮ್ಮೆಲ್ಲ ಶಕ್ತಿಗಳೊಂದಿಗೆ ಇಂದಿನ ದಂದುಗಗಳಿಗೆ ಎದಿರುಗೊಳ್ಳುವಂತೆ ಮಾಡುವ ಕ್ರಮ. ಆದ್ದರಿಂದಲೇ ಅದು ವಿಮೋಚನಾತ್ಮಕ.
 
ಕನ್ಹೈಲಾಲರು ತಮ್ಮ ರಂಗಚಿಂತನೆ-ಪ್ರಯೋಗಗಳಲ್ಲಿ ಇಂದಿನ ಮನರಂಜನಾ ಕಲೆಗಳ ಮೂಲಗುಣವಾದ ಹುಸಿ ಯಥಾರ್ಥವಾದವನ್ನು ಪೂರ್ತಿ ಕೈಬಿಡುತ್ತಾರೆ. ಸಿದ್ಧ-ಪ್ರಸಿದ್ಧ ರಂಗಕ್ರಮಗಳ ವ್ಯಾಕರಣಗಳನ್ನು ಗಾಳಿಗೆ ತೂರುತ್ತಾರೆ. ವೈಯಕ್ತಿಕ ಆಳಗಳಲ್ಲಿ  ಸಾರ್ವತ್ರಿಕ ನೋವುಗಳನ್ನು ಅನುಭವಿಸಿ ಅದಕ್ಕೊಂದು ರೂಪ ಕೊಡುವ ಆದಿಮ ಕತೆಯನ್ನೋ ಗೀತೆಯನ್ನೋ ಆಶ್ರಯಿಸಿ ಅದನ್ನು ತ್ರಿಕರಣಪೂರ್ವಕವಾಗಿ ಪುನಃಪುನಃಪುನರಭಿನಯಿಸುತ್ತಾ, ಪುನರನುಭವಿಸುತ್ತಾ ನಟರ ಮೈ, ಪ್ರಾಣ, ಉಸಿರಿನ ಭಂಗಿ ಮತ್ತು ಚಲನೆಗಳ ಮೂಲಕ ಆದಿವಾಸಿ ಕಲೆಗಳ ಆದಿಲಯಗಳ ಮೂಲಕ ಮೂರ್ತೀಕರಿಸುತ್ತಾ ಹೋಗುತ್ತಾರೆ.
ನೋವಿನ ಬೇರುಗಳನ್ನರಸುತ್ತಾ ಅವರ ಕಲೆ ಮನುಕುಲದ ಬೇರುಗಳ ಗತಕ್ಕೆ ಹೋದರೂ ಕೂಡ ಅದು ಇಂದಿನ ದಂದುಗಗಳನ್ನೇ ಕಲಾತ್ಮಕವಾಗಿ ಧ್ಯಾನಿಸುತ್ತಾ ಪ್ರಸ್ತುತದ ಜೊತೆಗೆ ಮುಖಾಮುಖಿಯಾಗುತ್ತದೆ. ಇಂದಿನ ಕೃತಕ ಸಾಮಾಜಿಕ ವಾತಾವರಣದಲ್ಲಿ ಸ್ವಾಭಾವಿಕತೆಯನ್ನು ಕೃತಕವಾಗಿ ಮತ್ತೆ ನಿರ್ಮಿಸಿಕೊಂಡು ತನ್ಮೂಲಕ ನಟ ಮತ್ತು ನೋಡುಗರನ್ನು ತಮ್ಮ ಸಾಮಾಜಿಕ, ಪ್ರಾಕೃತಿಕ ಮೂಲಗಳಿಗೆ ವಾಪಸಾಗಿಸಿ ನಮಗೆ ನಮ್ಮ ಸಮಾಜಕ್ಕೆ ನಮ್ಮ ಸಮಸ್ತ ಶಕ್ತಿಗಳನ್ನು ಮರುಗಳಿಸಿಕೊಡುತ್ತದೆ.
 
ಆದ್ದರಿಂದಲೇ ಅವರ ರಂಗನಿರ್ಮಿತಿ ಮತ್ತದರ ಅನುಭವ ಪ್ರಾಚೀನ ಕ್ರಿಯಾವಿಧಿಗಳಿಗೆ, ಪುರಾಣಗಳಿಗೆ ಹತ್ತಿರ. ಲಾಗಾಯ್ತಿನ ಪುರಾಣಗಳು ಕಾಲ್ಪನಿಕ ಗತದ ಕತೆಯನ್ನು ಮಾತ್ರ ಹೇಳುತ್ತಿರುವುದಿಲ್ಲ. ಮುಂದಿನ ಘಟನೆಗಳನ್ನೂ ಪೂರ್ವಾಭಿನಯಿಸುತ್ತವೆ.
 
ಇದಕ್ಕೊಂದು ಉದಾಹರಣೆ: ತಮ್ಮ ಪ್ರದೇಶದ ಮೇಲೆರಗಿ ಬಂದ ಹಲ್ಲೆಕೋರರ ವಿರುದ್ಧ ತಮ್ಮ ನೆಲದ ಸ್ತ್ರೀಶಕ್ತಿ ಅಂತಿಮ ಪ್ರತಿಭಟನೆಯನ್ನು ತನ್ನ ನಗ್ನತೆಯ ಮೂಲಕ ವ್ಯಕ್ತಪಡಿಸುವ ಬಹುಚರ್ಚಿತ ದೃಶ್ಯವನ್ನು ಅವರು ರಂಗದ ಮೇಲೆ ತಮ್ಮ  `ದ್ರೌಪದಿ'  ನಾಟಕದಲ್ಲಿ ತಂದರು. ಅದನ್ನು ನೋಡಿದ ಅನೇಕರು ಬೆಚ್ಚಿಬಿದ್ದರು. ಮುಖ್ಯ ಪಾತ್ರವಹಿಸಿದ ಅವರ ಮಡದಿ ಮತ್ತು ಆದರ್ಶ ನಟಿ ಸಾಬಿತ್ರಿ ಅವರನ್ನು ರಂಗದ ಮೇಲೆ ಬತ್ತಲೆಗೊಳಿಸಿ ಮಣಿಪುರದ ಸ್ತ್ರೀಯರಿಗೆ ಘೋರ ಅಪಮಾನ ಮಾಡಿದರೆಂದು ಜನ ದೂಷಿಸಿದರು.
ಆದರೆ ಕೆಲವೇ ವರ್ಷಗಳ ನಂತರ ತಮ್ಮ ಮೇಲೆ ಹಲ್ಲೆಕೋರರು ಮತ್ತೆ ಮತ್ತೆ ಎಸಗುತ್ತಿದ್ದ ಮಾನಭಂಗದ ಪ್ರಸಂಗಗಳನ್ನು ವಿರೋಧಿಸಲೋಸುಗ ಮಣಿಪುರದ ಹೆಂಗಸರು ಸಾರ್ವಜನಿಕವಾಗಿ ನಗ್ನರಾಗಿ ತಮ್ಮ ಕಡುಗೋಪ ಮತ್ತು ವಿರೋಧಗಳನ್ನು ವ್ಯಕ್ತಪಡಿಸಿದರು.
 
ಆಗ ಗೊತ್ತಾಯಿತು, ಪ್ರಸ್ತುತದ ಅಪಮಾನಗಳನ್ನು, ಅವು ಪ್ರೇರೇಪಿಸುವ ವಿರೋಧಗಳನ್ನೂ ಪೂರ್ವಾಭಿನಯಿಸುವ ಪ್ರವಾದಿತ್ವ ಕನ್ಹೈಲಾಲರ  ರಂಗಭೂಮಿಗಿದೆಯೆಂದು.
ಹೀಗಾಗಿ ಕನ್ಹೈಲಾಲರ ಕಲೆ ತಥ್ಯದ ಬಿಂಬವಾಗಲಿ ಟೀಕೆಯಾಗಲಿ ಅಲ್ಲ. ತಥ್ಯದ ನಿರ್ಮಾಣ ಮತ್ತು ಪರಿವರ್ತನಾಕ್ರಿಯೆಯಲ್ಲಿ ಭಾಗಿಯಾಗುವ  ಕ್ರಿಯಾವಿಧಿ.

ಬುಧವಾರ, ಡಿಸೆಂಬರ್ 19, 2012

ಗೋಸಾಯಿ ಜನಾಂಗದ ಸಾಮಾಜಿಕ ಅಧ್ಯಯನ


avadhi.com (krupe)

- ಡಾ.ಪ್ರಕಾಶ ಗ. ಖಾಡೆ

ಬಹುಮುಖಿ ಸಂಸ್ಕೃತಿಯ ಹಲವು ಜನಾಂಗಗಳು ಈ ಧರೆಯ ಮೇಲೆ ತೆರೆದುಕೊಳ್ಳುತ್ತ ಸಾಗಿವೆ. ಒಂದೇ ಜೀವ ಜಾತಿಗೆ ಸೇರಿದ ಮಾನವರಲ್ಲಿ ಕಂಡು ಬರುವ ಅನೇಕ ಜನಾಂಗಗಳು ರೂಪುಗೊಂಡ ಬಗೆಯೇ ತುಂಬಾ ಅಚ್ಚರಿ ಮತ್ತು ಕುತೂಹಲದ ಸರಕಾಗಿದೆ. ಈ ಜನಾಂಗ ಪರಿಕಲ್ಪನೆ ಮಾನವ ಜಾತಿಯ ಒಂದು ಬಗೆಯ ವಗರ್ೀಕರಣ. ಒಂದು ಧರ್ಮಕ್ಕೆ ಸೇರಿದವರನ್ನು, ಒಂದು ಭಾಷೆ ಆಡುವವರನ್ನು, ಒಂದು ಪ್ರದೇಶದಲ್ಲಿ ವಾಸಿಸುವವರನ್ನು ಅಥವಾ ಒಂದು ಸಾಂಸ್ಕೃತಿಕ ಗುಂಪಿಗೆ ಸೇರಿದವರನ್ನು ಒಂದು ಪ್ರತ್ಯೇಕ ಜನಾಂಗವಾಗಿ ನೋಡುವ ಮತ್ತು ಅಧ್ಯಯನಿಸುವ ಕೆಲಸಗಳು ಇಂದು ಅಕಾಡೆಮಿಕ್ ವಲಯದಲ್ಲಿ ತುಂಬಾ ತೀವ್ರವಾಗಿಯೇ ನಡೆದಿವೆ ಮತ್ತೂ ನಡೆಯಬೇಕಾಗಿದೆ.ಈ ಬಗೆಯಲ್ಲಿ ಡಾ. ಅಶೋಕ ನರೋಡೆ ಅವರ `ಗೋಸಾಯಿಗಳು ಜನಾಂಗಿಕ ಅಧ್ಯಯನ’ ಕೃತಿಯು ಅಪ್ರತಿಷ್ಠಿತ ಉಪಸಂಸ್ಕೃತಿಯೊಂದರ ಸಾಮಾಜೀಕರಣದ ನೆಲೆ ಶೋಧಿಸುವ ವಿಶಿಷ್ಟ ಸಂಶೋಧನಾ ಕೃತಿಯಾಗಿದೆ.
ಪ್ರಧಾನ ಸಂಸ್ಕೃತಿಯ ಅಧ್ಯಯನಕ್ಕೆ ಚರಿತ್ರೆಯಲ್ಲಿ ಜಾಗ ಸಿಕ್ಕಿದೆ. ಆದರೆ ಉಪಸಂಸ್ಕೃತಿಯ ತೀರಾ ಕಣ್ಮರೆಯಲ್ಲಿರುವ ಅನೇಕಾನೇಕ ಸಮುದಾಯಗಳ ಇತಿಹಾಸ, ಭೂಗೋಲದ ಪರಿಕಲ್ಪನೆಯೇ ತೆರೆದುಕೊಳ್ಳದ ಹೊತ್ತಿನಲ್ಲಿ ಡಾ. ಅಶೋಕ ನರೋಡೆ ಅವರ ಈ ಕೃತಿ ತುಂಬಾ ಗಮನಾರ್ಹವಾಗುತ್ತದೆ. ಒಂದು ಜನಸಮುದಾಯದ ನೆಲೆ ಶೋಧಿಸಿ, ಅದರ ಅನುವಂಶೀಕ ಪರಿಗ್ರಹಣ ಗುರುತಿಸಿ, ವಲಸೆಯ ಸಕಾರಣ ಹುಡುಕಿ, ಸಾಮಾಜಿಕವಾದ ಪ್ರಮುಖ ಸ್ಥಿತಿಯ ಹುಡುಕಾಟ ಅರಸಿ ವಿಶಿಷ್ಟವಾಗಿ ರಚಿತವಾದ ಈ ಕೃತಿಯು ಕನ್ನಡದ ಜನಾಂಗೀಕ ಅಧ್ಯಯನ ಶಾಸ್ತ್ರಕ್ಕೆ ಸಂಬಂಧಿಸಿದಂತೆ ತುಂಬಾ ಉಪಯುಕ್ತವಾಗಿದೆ.
ಭಾರತ ಜನನಿಯ ತನುಜಾತೆಯ ಕನರ್ಾಟಕದಲ್ಲಿ ವಾಸಿಸುವ ಜನರಲ್ಲಿ ಜನಾಂಗೀಕ ಲಕ್ಷಣಗಳನ್ನು ಅನೇಕ ಮಾನವ ಶಾಸ್ತ್ರಜ್ಞರು ಅಧ್ಯಯನ ಮಾಡುತ್ತ ಬಂದಿದ್ದಾರೆ. ಈ ನೆಲೆಯಲ್ಲಿ ಸಾಹಿತಿ, ಸಂಶೋಧಕರಾಗಿರುವ ಡಾ. ಅಶೋಕ ನರೋಡೆ ಅವರು ಮಾನವಶಾಸ್ತ್ರೀಯ ಅಧ್ಯಯನನಿಷ್ಠರಾಗಿ ಈ ಕೃತಿಯ ಮೂಲಕ ಹೊಸ ಕ್ಷೇತ್ರವನ್ನು ಪ್ರವೇಶಿಸಿ ಅಲ್ಲಿ ತಮ್ಮದೇಯಾದ ಛಾಪು ಮೂಡಿಸಿದ್ದಾರೆ.
ಅರೆ ಅಲೆಮಾರಿ ಜನಾಂಗದ ಗೋಸಾಯಿಗಳು ಕನರ್ಾಟಕದ ಹಲವು ಕಡೆಗಳಲ್ಲಿ ನೆಲೆಸಿದ್ದಾರೆ. ವಲಸೆ ಕಾರಣವಾಗಿ ಒಂದೆಡೆ ನೆಲೆನಿಂತು ಅಲ್ಲಿನ ಪ್ರಾಕೃತಿಕ ಮತ್ತು ಸಾಮಾಜಿಕ ಸಂದರ್ಭಗಳಿಗೆ ಹೊಂದಿಕೊಂಡು ಸಂಕರೀಕಣಗೊಂಡಿದ್ದಾರೆ. ಇಲ್ಲಿ ಡಾ.ನರೋಡೆ ಅವರು ಧಾರವಾಡದ `ಲಕ್ಷ್ಮೀ ಸಿಂಗನಕೇರಿ’ ಯನ್ನು ಮುಖ್ಯವಾಗಿಟ್ಟುಕೊಂಡು ಕನರ್ಾಟಕ-ಮಹಾರಾಷ್ಟ್ರಗಳ ಗಡಿಗಳಲ್ಲಿರುವ ಕೆಲವು ಪ್ರದೇಶಗಳನ್ನು ಭೇಟಿ ನೀಡಿ ಈ ಅಧ್ಯಯನವನ್ನು ಕಟ್ಟಿಕೊಟ್ಟಿದ್ದಾರೆ.
ಅಧ್ಯಯನಕ್ಕೆ ಒಂದು ಶಿಸ್ತು ಬರುವಂತೆ ಮತ್ತು ವಿಷಯ ಪುನರಪಿಯಾಗದಂತೆ ಐದು ಅಧ್ಯಾಯಗಳಲ್ಲಿ ಮತ್ತು ಅವುಗಳಲ್ಲಿ ಉಪಶೀಷರ್ಿಕೆಗಳನ್ನು ಕೊಟ್ಟು ವಿಷಯವನ್ನು ಮಂಡಿಸಿರುವುದು ಸರಳ ಓದಿಗೆ ತುಂಬಾ ಸಹಕಾರಿಯಾಗಿದೆ. ಗೋಸಾಯಿಗಳ ಜನಾಂಗೀಕ ಅಧ್ಯಯನದ ಮೊದಲ ಅಧ್ಯಾಯದಲ್ಲಿ ಗೋಸಾಯಿ ಜನಾಂಗದ ಮೂಲ, ಭಾಷೆ, ಪಂಗಡ ಹಾಗೂ ಕಾಯಕ ಸಂಸ್ಕೃತಿಯನ್ನು ಪರಿಚಯಿಸಿದ್ದಾರೆ. ಮೊದಲ ಅಧ್ಯಾಯವೇ ಹೊಸ ಸಂಸ್ಕೃತಿಯೊಂದರ ಕುತೂಹಲದ ಓದಿಗೆ ಸಾಕ್ಷಿಯಾಗುತ್ತದೆ. ನಮ್ಮ ನಡುವೆಯೇ ಇದ್ದು, ನಮ್ಮೊಂದಿಗೆ ಬೆರೆತು ಬೇರೆಯಾದ ಭಾಷೆ, ಆಚರಣೆಗಳಿಂದ ಗುರುತಿಸಿಕೊಂಡು ನಮ್ಮವರಾಗಿಯೇ ಬದುಕು ಸಾಗಿಸಿಕೊಂಡು ನಡೆಯುತ್ತಿರುವ ಜನಾಂಗ ಒಂದರ ಈ ಅಧ್ಯಯನವು ಈ ಬಗೆಯ ಅಧ್ಯಯನಕ್ಕೆ ತೋರುಬೆರಳಾಗುತ್ತದೆ.
ಮೊದಲ ಅಧ್ಯಾಯದಲ್ಲಿ ಗೋಸಾಯಿಗಳ ಜನಾಂಗದ ಮೂಲವು ಮಹಾರಾಷ್ಟ್ರ, ಗುಜರಾತ ಹಾಗೂ ಕನರ್ಾಟಕ ರಾಜ್ಯಗಳಿಗೆ ತಳಕು ಹಾಕಿಕೊಳ್ಳುತ್ತದೆ. “ನಾವು ಗುಜರಾತದವರು, ವ್ಯಾಪಾರ ಮಾಡುತ್ತ ಮಹಾರಾಷ್ಟ್ರಕ್ಕೆ ಬಂದೆವು. ಕಾಲಾ ನಂತರದಲ್ಲಿ ನಾವು ಕನರ್ಾಟಕಕ್ಕೆ ಬಂದಿರುವೆವು” ಎಂಬ ಜನಾಂಗದ ಮುಖಂಡರ ಹೇಳಿಕೆಯ ಮೂಲಕ ಈ ಅಧ್ಯಯನವು ತೆರೆದುಕೊಳ್ಳುತ್ತದೆ ಮತ್ತು ಈ ಜನಾಂಗದ ಭಾಷೆಯೂ ಸಂಕರಣಗೊಂಡಿದೆ. ಮರಾಠಿ, ಗುಜರಾತಿ, ಉದರ್ು, ಕನ್ನಡ, ಲಂಬಾಣಿ ಭಾಷೆಗಳ ಮಿಶ್ರಣವಾಗಿ ಒಂದು ವಿಶಿಷ್ಟವಾದ `ಗೋಸಾಯಿ ಭಾಷೆ’ ರೂಪು ಪಡೆದ ಬಗೆಯನ್ನು ಇಲ್ಲಿ ಡಾ. ನರೋಡೆ ಅವರು ಗುರುತಿಸುತ್ತಾರೆ. ಆಧುನಿಕ ಭಾಷಾ ವಿಜ್ಞಾನಿಗಳಿಗೆ ಗೋಸಾಯಿ ಭಾಷೆಯೊಂದು ಆಕರ್ಷಕ ಕ್ಷೇತ್ರವಾಗಿದೆ ಎಂದು ಮುಂದಿನ ಅಧ್ಯಯನಕ್ಕೆ ಹಾದಿ ಹಾಕಿಕೊಟ್ಟಿದ್ದಾರೆ. ಬುಡಕಟ್ಟು ಜನಾಂಗದ ಒಂದು ಪ್ರತ್ಯೇಕವಾದ ಭಾಷಾಧ್ಯಯನ ನಡೆಯಬೇಕಾದ ಅಗತ್ಯವನ್ನೂ ಸಂಶೋಧಕರು ಎತ್ತಿ ಹೇಳಿದ್ದಾರೆ.
`ಗೋಸಾಯಿ’ ಪದದ ನಿಷ್ಪತ್ತಿಯನ್ನು ಬೇರೆ ಬೇರೆ ಹಿನ್ನೆಲೆಯಲ್ಲಿ ವಿವರಿಸುತ್ತಾರೆ. ಗೋಸಾಯಿ ಪದ `ಗ್ವಾಸರು’ ಎಂದರೆ ವೇಷ ಬದಲಿಸುವವರು ಪದದಿಂದ ಬಂದಿರುವುದೆಂದು ಹೇಳುತ್ತ, ಕಾಯಕದ ನೆಲೆಯಲ್ಲಿ ಗೋವುಗಳನ್ನು ಸಾಕಿಕೊಂಡು ಕೃಷಿ ಚಟುವಟಿಕೆ ನಡೆಸಿ, ಗೋಸಾಯಿಗಳಾದರೆಂದು ಹೇಳುತ್ತ, ಇಸ್ಲಾಂ ಆಡಳಿತಗಾರರ ಆಕ್ರಮಣ ಹಾಗೂ ಜನಾಂಗೀಕ ದಬ್ಬಾಳಿಕೆಯಿಂದ ಪಾರಾಗಲು ಘೋಷಾ ಧರಿಸಿ `ಗೋಸಾ’ಯಿಗಳಾಗಿರಬಹುದೆಂದೂ ಉಲ್ಲೇಖಿಸುತ್ತಾರೆ. ಹೀಗೆ ಜನಾಂಗವೊಂದರ ಹೆಸರಿನ ನಿಷ್ಪತ್ತಿಯನ್ನು ಹಲವು ನೆಲೆಗಳಲ್ಲಿ ಡಾ. ನರೋಡೆಯವರು ಗುರುತಿಸುತ್ತಾರೆ.
ಕನರ್ಾಟಕದ `ಕ್ಷತ್ರಿಯ’ ಜನ ಸಮುದಾಯ ಹಲವಾರು ಜನಾಂಗದ ಒಂದು ಮೊತ್ತವಾಗಿ ಹೊರಹೊಮ್ಮುತ್ತಿದೆ. ಸುಮಾರು ಮೂವತ್ತಕ್ಕೂ ಹೆಚ್ಚು ಈ ಬಗೆಯ ಜನಾಂಗಗಳನ್ನು ಒಂದೇ ಕ್ಷತ್ರಿಯ ಛತ್ರದಡಿಯಲ್ಲಿ ತರುವ ಪ್ರಯತ್ನಗಳು ಈ ಶತಮಾನದ ಆರಂಭದಲ್ಲಿ ನಡೆದಿವೆ. ಈಗಾಗಲೇ ಹುಬ್ಬಳ್ಳಿಯಲ್ಲಿ ಈ ಬಗೆಯ ಎರಡು ಬೃಹತ್ ಸಮಾಗಮಗಳು ಜರುಗಿವೆ. ಗೋಸಾಯಿಗಳು ಕ್ಷತ್ರಿಯ ಜನಾಂಗಕ್ಕೆ ಸೇರಿದವರೆಂಬ ನಿರೂಪಣೆಯನ್ನು ಡಾ. ನರೋಡೆ ಅವರು ಒದಗಿಸುತ್ತಾರೆ. ಛತ್ರಪತಿ ಶಿವಾಜಿಯು ಸೈನ್ಯ ಕಟ್ಟುವಾಗ ಈ ಬುಡಕಟ್ಟಿನ ಜನರನ್ನೇ ಬಳಸಿಕೊಂಡು ಬಲಿಷ್ಠವಾದ ಸೈನ್ಯ ರೂಪಿಸಿದ. ಕೂಟ ಯುದ್ಧದಲ್ಲಿ ಪರಿಣತಿ ಪಡೆದ ಬಲಿಷ್ಠ ಸೈನಿಕರಿಂದಲೇ ಶಿವಾಜಿಯು ಔರಂಗಜೇಬನಿಗೆ ಚಳ್ಳೆಹಣ್ಣು ತಿನ್ನಿಸಿದ ಎಂಬ ಸಂಗತಿಯನ್ನು ದಾಖಲಿಸುತ್ತ ಶಿವಾಜಿಯ ಸೈನ್ಯದಲ್ಲಿ `ಗೋಸಾಯಿ’ಗಳು ಕೆಲವು ಉನ್ನತ ಹುದ್ದೆಗಳಲ್ಲಿದ್ದರೆಂದು ದಾಖಲಿಸುತ್ತಾರೆ.
ಆಚರಣೆಗಳ ಹಿಂದಿನ ವಾಸ್ತವಿಕತೆ:
`ಗೋಸಾಯಿ ಜನಾಂಗದ ಕೌಟುಂಬಿಕ ವ್ಯವಸ್ಥೆ’ ಯನ್ನು ವಿವರಿಸುವ ಎರಡನೆಯ ಅಧ್ಯಾಯವು ಗೋಸಾಯಿಗಳ ವಿಶಿಷ್ಟ ಪದ್ಧತಿ, ನಂಬುಗೆ, ಆಚರಣೆಗಳನ್ನು ದಾಖಲಿಸುತ್ತದೆ. ಹಲವು ಆಚರಣೆಗಳ ಶೋಧದಿಂದ ರೂಪಿತವಾಗುವ ಜನಾಂಗವೊಂದರ ಪರಿಚಯ ಬೇರೆ ಜನಾಂಗದಿಂದ ಹೇಗೆ ವಿಶಿಷ್ಟವಾಗುತ್ತದೆ ಎಂಬುದನ್ನು ಇಲ್ಲಿ ಕಾಣಬಹುದು. ಗೋಸಾಯಿಗಳ ಆಚರಣೆಗಳು ವಿಶಿಷ್ಟವಾಗಿವೆ. ಹುಟ್ಟು, ಸಾವು, ಮದುವೆ, ನಾಮಕರಣ ಹೀಗೆ ಕೌಟುಂಬಿಕವಾಧ ಸಂದರ್ಭಗಳಲ್ಲಿ ನಂಬಿಕೊಂಡು ಬಂದ ಪದ್ಧತಿ, ಆಚರಣೆ, ಸಂಪ್ರದಾಯಗಳ ವಿವರಣೆಯನ್ನು ತುಂಬಾ ವ್ಯಾಪಕವಾಗಿ ಡಾ. ನರೋಡೆಯವರು ಗುರುತಿಸಿ ಸುಲಭವಾಗಿ ವಿವರಿಸಿದ್ದಾರೆ. ಸಿತಳಾ ಭವಾನಿ ಪೂಜೆ, ಷಟವಿ ಪೂಜೆ ಮುಂತಾದ ಆರಾಧನಾ ವಿಧಗಳನ್ನು ಆಚರಣೆಗಳ ಹಿನ್ನೆಲೆಯಲ್ಲಿ ನಿರೂಪಿಸಿದ್ದಾರೆ. ಹೀಗೆ ನಿರೂಪಿಸುವಲ್ಲಿ ಗೋಸಾಯಿಗಳ ನಂಬಿಕೆ ಹಾಗೂ ಅವುಗಳ ವೈಜ್ಞಾನಿಕ ಕಾರಣವನ್ನೂ ನೀಡುವುದರಿಂದ ಆಚರಣೆಗಳ ಹಿಂದಿನ ವಾಸ್ತವಿಕತೆ ಸ್ಪಷ್ಟವಾಗುತ್ತದೆ. ನಂಬಿಕೆ, ಆಚರಣೆಗಳ ವಿವರಣೆಯೊಂದಿಗೆ ಅವುಗಳು ಸ್ತ್ರೀ ಸಮುದಾಯದ ಮೇಲೆ ಉಂಟುಮಾಡುವ ಪರಿಣಾಮಗಳನ್ನು ವಿಶ್ಲೇಷಿಸುತ್ತಾರೆ. ಸ್ತ್ರೀ ಶೋಷಣೆ, ಪುರುಷ ಪರವಾದ ಆಚರಣೆಗಳನ್ನು ವಿವರಿಸುವಾಗ ಸ್ತ್ರೀ ಪರವಾದ ನಿಲುವು ತಾಳುತ್ತಾರೆ. ತಪ್ಪು ಮಾಡಿದ ಪುರುಷ ಸಮಾಜದ ಕ್ಷಮೆ ಕೇಳಿದರೆ, ತನ್ನ ಅಪರಾಧ ಮನ್ನಿಸಲು ಪ್ರಾಥರ್ಿಸಿದರೆ ಸಮಾಜ ಮುಖಂಡರಿಗೆ ತಪ್ಪು ದಂಡಕೊಟ್ಟು ಓಲೈಸಿದರೆ ಆತ ನಿರಪರಾಧಿಯಾಗಿ ಸಮಾಜದಲ್ಲಿ ತಲೆ ಎತ್ತಿ ನಡೆಯಬಹುದು. ಆದರೆ ಶೋಷಿತಳಾದ, ಅವಮಾನಿತಳಾದ ಹೆಣ್ಣು ಮೂಲೆ ಸೇರಬೇಕಾದುದು ದುರಂತ ಎಂದು ಹೇಳುವ ಮೂಲಕ ಪ್ರತಿ ಜನಾಂಗದಲ್ಲೂ ಈ ಬಗೆಯ ಸ್ತ್ರೀ ಶೋಷಣಾ ಪರವಾದ ನಿಲುವುಗಳಿರುವುದನ್ನು ಉಲ್ಲೇಖಿಸುತ್ತಾ ಡಾ. ನರೋಡೆಯವರು ಖಂಡಿಸಿ, ತಮ್ಮೊಳಗಿನ ಬಂಡಾಯ ಮನೋಭಾವವನ್ನು ಅಧ್ಯಯನದ ಜೊತೆ ಸಮ್ಮಿಳಿತಗೊಳಿಸಿದ್ದಾರೆ. ಈ ಅಧ್ಯಾಯದಲ್ಲಿ ಗೋಸಾಯಿಗಳ ಮದುವೆ, ಬಹು ಪತ್ನಿತ್ವ, ವಿಧವಾ ವಿವಾಹ, ಮಹಿಳೆಯರ ಪಾತ್ರ, ಮುಟ್ಟು-ಸೂತಕ, ಕುಬಸ, ಬಾಣಂತನ, ನಾಮಕರಣ… ಹೀಗೆ ಬಹು ವಿಧದ ಆಚರಣೆಗಳನ್ನೂ ವಿವರಿಸಿದ್ದಾರೆ. ಗೋಸಾಯಿಗಳ ಕೌಟುಂಬಿಕ ಚಿತ್ರಣವನ್ನು ಕಟ್ಟಿಕೊಡುವ ಈ ಅಧ್ಯಾಯ ಅಧ್ಯಯನದ ಮುಖ್ಯ ಘಟ್ಟವಾಗಿದೆ.
ಗೋಸಾಯಿಗಳ ಧಾಮರ್ಿಕ ಚಟುವಟಿಕೆಗಳನ್ನು ವಿವರಿಸುವ ಮೂರನೆಯ ಅಧ್ಯಾಯವು ಹಬ್ಬ ಹರಿದಿನಗಳಲ್ಲಿ ಕಂಡು ಬರುವ ಆಚರಣೆಗಳ ಚಿತ್ರಣ ನೀಡುತ್ತದೆ. ಗೋಸಾಯಿಗಳು ಶಿಷ್ಟ ಮತ್ತು ದೇಸೀ ದೈವಗಳ ಆರಾಧಕರೆಂಬುದನ್ನು ವಿವರಿಸುತ್ತಾರೆ. ಜಾತ್ರೆ, ಉತ್ಸವ, ಆಚರಣೆಗಳ ಸಂದರ್ಭದಲ್ಲಿ ಅವರ ಆಹಾರ ಪದ್ಧತಿಯನ್ನೂ, ಉಡುಗೆ ತೊಡುಗೆ ವಿಧಗಳನ್ನೂ ಪರಸ್ಪರ ಪ್ರೀತಿ, ಗೌರವ, ಬಾಂಧವ್ಯದ ಸಂದರ್ಭಗಳನ್ನು ಡಾ.ನರೋಡೆಯವರು ಇಲ್ಲಿ ಅಭ್ಯಾಸಪೂರ್ಣವಾಗಿ ನಿರೂಪಿಸಿದ್ದಾರೆ. ಆಚರಣೆಗಳಿಂದ ಸಮುದಾಯದಲ್ಲಿ ಮೂಡುವ ಒಗ್ಗಟ್ಟು ಹಾಗೂ ಪರಂಪರೆಯ ಮುಂದುವರಿಕೆಗೆ ಸಾಧ್ಯವಾಗುವ ಸಂದರ್ಭಗಳನ್ನೂ ವಿವರಿಸಿದ್ದಾರೆ. ಗೋಸಾಯಿಗಳು ಸ್ತ್ರೀಪರವಾದ, ಶಕ್ತಿ ದೇವತೆಗಳ ಆರಾಧಕರೆಂಬುದನ್ನು ಎಲ್ಲ ಹಬ್ಬ ಹರಿದಿನ ಆಚರಣೆಗಳ ಮೂಲಕ ಸಾಧಿಸುತ್ತಾರೆ. ತುಳಜಾ ಭವಾನಿ, ಅಂಬಾ ಭವಾನಿ, ಕೊಲ್ಲಾಪುರದ ಮಹಾಲಕ್ಷ್ಮಿ, ಸವದತ್ತಿ ಎಲ್ಲಮ್ಮ ಹೀಗೆ ಶಕ್ತಿ ದೇವತೆಗಳ ಆರಾಧಕರಾಗಿ ಬೆಳೆದುಕೊಂಡು ಬಂದ ಜನಾಂಗದ ಚರಿತ್ರೆಯನ್ನು ಡಾ. ನರೋಡೆಯವರು ಬಿಚ್ಚಿಡುತ್ತಾರೆ.
ದೇವರು, ದೆವ್ವ, ಮಾಟ, ಮಂತ್ರಗಳಲ್ಲಿ ಈ ಜನಾಂಗ ನಂಬಿಕೊಂಡು ಬಂದ ಸತ್ಯವನ್ನು ಕೌತುಕುವಾಗಿ ನಿರೂಪಿಸುತ್ತಾರೆ. ಆಧುನಿಕ ಕಾಲದ ವೈದ್ಯಕೀಯ ಕ್ಷೇತ್ರದ ಬೆಳವಣಿಗೆಯ ಹಿನ್ನೆಲೆಯಲ್ಲಿಯೂ ದೇಸೀ ಪದ್ಧತಿಯ ಆರೋಗ್ಯಾಚಾರಣೆಗಳು, ದೈವಾರಾಧನೆಯ ಹಿನ್ನೆಲೆಯಲ್ಲಿ ಉಳಿಸಿಕೊಂಡು ಬಂದ ಪರಿಯನ್ನು ಡಾ. ನರೋಡೆ ಯವರು ವಿವರಿಸುತ್ತಾ ಪ್ರತಿಯೊಂದು ಕಾರ್ಯವನ್ನು ದೇವರ ಹೆಸರಿನಲ್ಲಿ, ಧರ್ಮದ ಹೆಸರಿನಲ್ಲಿ ಆರಂಭಿಸುವುದನ್ನೂ ಉಲ್ಲೇಖಿಸುತ್ತಾರೆ. ಈ ಅಧ್ಯಾಯವು ಗೋಸಾಯಿಗಳ ಹಬ್ಬದಾಚರಣೆಗಳ ವೈಶಿಷ್ಟ್ಯಕ್ಕೆ ಪೂರಕವಾಗಿದೆ.
ವ್ಯವಸ್ಥೆಯ ದಾರುಣತೆ:
ಗೋಸಾಯಿ ಜನಾಂಗದ ಸಾಮಾಜಿಕ, ಆಥರ್ಿಕ ಚಟುವಟಿಕೆಗಳ ಮೇಲೆ ಬೆಳಕು ಚೆಲ್ಲುವ ನಾಲ್ಕನೆಯ ಅಧ್ಯಾಯವು ಗೋಸಾಯಿಗಳ ಸ್ಥಿತಿಗತಿ, ಶಿಕ್ಷಣ, ವೃತ್ತಿ, ಆಹಾರ, ಉಡುಗೆ-ತೊಡುಗೆ ಮೊದಲಾದ ಚಿತ್ರಣವನ್ನು ನೀಡುತ್ತದೆ. ಹೀಗೆ ಅಪ್ರತಿಷ್ಠಿತ ಜನಾಂಗವೊಂದರ ಬದುಕಿನ ಚಿತ್ರಣ ನೀಡುವಾಗ ಅಲ್ಲಿನ ವ್ಯವಸ್ಥೆಯ ದಾರುಣತೆಯನ್ನು ಕಟ್ಟಿಕೊಡುತ್ತಾರೆ. ಗೋಸಾಯಿಗಳು ಹೆಚ್ಚು ವಾಸಿಸುವ ಧಾರವಾಡೆದ `ಲಕ್ಷ್ಮೀ ಸಿಂಗನಕೇರಿ’ಯ ದುಸ್ಥಿತಿಯನ್ನು ನಿರೂಪಿಸುವಲ್ಲಿ ಲೇಖಕರೊಳಗಿನ ಪತ್ರಿಕಾಕರ್ತ ಜಾಗೃತನಾಗುತ್ತಾನೆ. ಡಾ. ನರೋಡೆ ಅವರ ಸಾಲುಗಳಲ್ಲಿಯೇ ಅಲ್ಲಿನ ಚಿತ್ರಣ ಹೀಗೆ ವಿವರಿಸಬಹುದು- “ಗೋಸಾಯಿ ಕೇರಿಗೆ ರಸ್ತೆಯಿಲ್ಲ, ಗಲ್ಲಿ ಗಲ್ಲಿಗಳಲ್ಲಿ ಗಟಾರುಗಳಿಲ್ಲ. ಮಳೆಯಾದರೆ ಕೇರಿಯಲ್ಲಿ ರಾಡಿ ನೀರು ಹೊಂಡವಾಗಿ ಬಿಡುತ್ತದೆ. ರಸ್ತೆಯಲ್ಲಿ ಗಟಾರವೊ, ಗಟಾರದಲ್ಲಿ ರಸ್ತೆಯೋ ಗೊತ್ತಾಗುವುದಿಲ್ಲ. ಬೇಸಿಗೆಯಲ್ಲಿ ಹುಡಿ ಹಾರುವ ಧೂಳು, ಧೂಳಿನಲ್ಲಿಯೇ ಇವರ ಬಾಳು ಕಳೆಯುತ್ತದೆ. ರಸ್ತೆ, ವಿದ್ಯುತ್, ನೀರು, ಗಟಾರಗಳಿಲ್ಲದ, ಮೂಲಭೂತ ಸೌಕರ್ಯಗಳಿಲ್ಲದ, ಈ ಕೇರಿಗಳಲ್ಲೀಗ ಸಾರ್ವಜನಿಕ ಶೌಚಾಲಯಗಳು, ಸಾರ್ವಜನಿಕ ಗ್ರಂಥಾಲಯ, ಆರೋಗ್ಯ ಸಮುದಾಯ, ಮಹಿಳಾ ಸೌಲಭ್ಯಗಳು ಇತ್ಯಾದಿಗಳು ಕನಸಿನ ಮಾತೇ ಆಗಿವೆ” ಎಂಬಲ್ಲಿ ಗೋಸಾಯಿಗಳ ನಿಕೃಷ್ಟ ಬದುಕಿಗೆ ಆಡಳಿತ ವ್ಯವಸ್ಥೆಯು ಕಾರಣವಾಗಿರುವುದನ್ನು ಡಾ. ನರೋಡೆಯವರು ತುಂಬಾ ರೋಷ ಮತ್ತು ವಿಷಾದದಿಂದ ದಾಖಲಿಸುತ್ತಾರೆ. ಊರ ತುಂಬ ತಿರುಗಿ, ಗುಜರಿ ಆಯ್ದು ಊರ ಸ್ವಚ್ಛತೆಗೆ ಪರ್ಯಾಯವಾಗಿ ಕಾರಣರಾಗುವ ಈ ಜನಾಂಗದ ಬೀದಿಗಳು ಅವ್ಯವಸ್ಥೆಗೆ ಕಾರಣವಾಗಿರಲು ಶಿಕ್ಷಣ ವಂಚಿತ ಅವಕಾಶಗಳೂ ಒಂದು ಕಾರಣ ಎಂಬುದನ್ನು ವಿವರಿಸುತ್ತಾರೆ. ಈ ಜನಾಂಗದ ಒಟ್ಟು ಅಭಿವೃದ್ಧಿಗಾಗಿ ಬುಡಕಟ್ಟು ಜನಾಂಗಕ್ಕೆ ಧ್ವನಿಯಾಧ ಡಾ. ಸುದರ್ಶನರಂಥವರ ಅಗತ್ಯ ತುಂಬಾ ಇದೆ ಎಂಬುದು ಸ್ಪಷ್ಟವಾಗುತ್ತದೆ.
ಈ ಕೃತಿಯ ಕೊನೆಯ ಅಧ್ಯಾಯ `ಗೋಸಾಯಿ ಜನಾಂಗದ ಅಭಿವೃದ್ಧಿಗೆ ಹೊಸ ಕಾಯಕಲ್ಪ’ ಶಿಷರ್ಿಕೆಯಡಿಯಲ್ಲಿ ಒಟ್ಟು ಅಧ್ಯಯನದ ಫಲಿತಗಳ ಹಿನ್ನೆಲೆಯಲ್ಲಿ ಯೋಜಿಸಬೇಕಾದ ಒಟ್ಟು ಅಧ್ಯಯನದ ದಿಕ್ಸೂಚಿ ಇದೆ. ತುಂಬಾ ಹಿಂದುಳಿದ, ಶೈಕ್ಷಣಿಕವಾಗಿ, ಆಥರ್ಿಕವಾಗಿ ದುರ್ಬಲರಾಗಿರುವ ಈ ಜನಾಂಗದ ಸಕಲ ಅಭಿವೃದ್ಧಿಗಾಗಿ ಇರುವ ಆಡಳಿತದ ಯೋಜನೆಗಳು ತುಂಬಾ ಪ್ರಾಮಾಣಿಕವಾಗಿ ಜಾರಿಗೆ ಬರಬೇಕಾಗಿದೆ ಎಂಬುದನ್ನು ಡಾ. ನರೋಡೆಯವರು ಸೂಚಿಸುವ ಮೂಲಕ ವ್ಯವಸ್ಥೆಯನ್ನು ಎಚ್ಚರಿಸುತ್ತಾರೆ.

ಬುಧವಾರ, ಡಿಸೆಂಬರ್ 5, 2012

ತಲಾಶ್‌: ಆಮಿರ್‌ನ ಹೊಸ ಹುಡುಕಾಟ - ಮುಸಾಫಿರ್‌


ಆಮಿರ್‌ಖಾನ್‌ನನ್ನು ಯಾರೋ ಬ್ಲಾಕ್ ಮೇಲ್ ಮಾಡಿದ್ದಾರೆಂಬ ವದಂತಿ. ‘‘ಒಂದು ಕೋಟಿ ನೀಡದಿದ್ದರೆ ತಲಾಶ್ ಚಿತ್ರದ ಸಸ್ಪೆನ್ಸ್ ಏನು ಎನ್ನುವುದನ್ನು ಫೇಸ್‌ಬುಕ್‌ನಲ್ಲಿ ಹಾಕಿ ಬಿಡ್ತೇನೆ’’ ಎಂಬ ಬ್ಲಾಕ್‌ಮೇಲ್‌ಗೆ ತಕ್ಷಣ ಮಣಿದ ಆಮಿರ್, ಒಂದು ಕೋಟಿ ನೀಡಿದ್ದಾನೆನ್ನುವುದು ಇನ್ನೊಂದು ವದಂತಿ. ಯಾಕೆಂದರೆ ಒಂದು ಕೋಟಿಗೆ ಆಸೆಪಟ್ಟು ನೂರು ಕೋಟಿ ವೇಸ್ಟ್ ಆಗಬಾರದಲ್ಲ. ಸಾಧಾರಣವಾಗಿ ಸಸ್ಪೆನ್ಸ್ ಚಿತ್ರದ ಮಿತಿಯೂ, ಅದರ ಧನಾತ್ಮಕ ಅಂಶವೂ ಅದರ ಕ್ಲೈಮಾಕ್ಸ್ ಆಗಿರುತ್ತದೆ. ಒಂದು ವೇಳೆ ಕ್ಲೈಮಾಕ್ಸ್‌ನಲ್ಲಿ ನಿಜವಾದ ಖಳ ಯಾರು ಎನ್ನುವುದು ಬಯಲಾಗಿ ಬಿಟ್ಟರೆ, ಇಡೀ ಚಿತ್ರ ಅತ್ಯಂತ ಬಾಲಿಶವಾಗಿ ಕಾಣ ತೊಡಗುತ್ತದೆ. ಈ ಕಾರಣಕ್ಕೆ ಇರಬೇಕು, ‘‘ದಯವಿಟ್ಟು ಸಸ್ಪೆನ್ಸ್‌ನ್ನು ಬಹಿರಂಗಪಡಿಸಬೇಡಿ’’ ಎಂದು ಆಮಿರ್‌ಖಾನ್ ಪತ್ರಿಕೆಗಳಲ್ಲಿ ಮನವಿ ಮಾಡಿರೋದು.ಅದೇನೇ ಇರಲಿ. ಸಾಧಾರಣವಾಗಿ ಒಂದು ಸಸ್ಪೆನ್ಸ್‌ನ್ನು ಬೆಳೆಸುತ್ತಾ ಹೋಗುವುದರಲ್ಲಿ ಕತೆಗಾರನ, ನಿರ್ದೇಶಕನ ಕಲೆಗಾರಿಕೆಯಿರುತ್ತದೆ. ರೀಮಾ ಕಡ್ಕಿಯವರ ತಲಾಶ್ ನಮಗೆ ಇಷ್ಟವಾಗುವುದು ಬರೇ ಸಸ್ಪೆನ್ಸ್ ಕಾರಣದಿಂದಲ್ಲ.
ಒಂದು ವಿಭಿನ್ನ ಮನಸ್ಥಿತಿಯ ನಾಯಕನನ್ನು ಕಟ್ಟಿಕೊಟ್ಟ ರೀತಿಗೂ ನಾವು ನೀರ್ದೇಶಕಿಯನ್ನು ಅಭಿನಂದಿಸಬೇಕಾಗಿದೆ. ಒಂದು ಘಟನೆಯ ಹಿಂದೆ ಸಾಗುವ ನಾಯಕ, ಆ ಘಟನೆ ಬೇರೆ ಬೇರೆ ಜನರ ಕಣ್ಣಲ್ಲಿ ಬೆಳೆಯುವ ರೀತಿ ಅದರ ಜೊತೆ ಜೊತೆಗೂ ನಾಯಕನ ವ್ಯಕ್ತಿತ್ವ ಅನಾವರಣಗೊಳ್ಳುವ ಪರಿ ಒಟ್ಟು ತಲಾಶ್‌ನ ಹೆಗ್ಗಳಿಕೆ. ಆ ನಿಟ್ಟಿನಲ್ಲಿ ಚಿತ್ರ ಯಶಸ್ವಿಯಾಗಿದೆಯೆಂದೇ ಹೇಳಬೇಕು. ಒಂದು ರೀತಿಯಲ್ಲಿ ಕಹಾನಿಯಂತೆಯೇ ಈ ಚಿತ್ರವೂ ಬೆಳೆಯುತ್ತದೆ. ಅಲ್ಲಿ ಕೊಲ್ಕತಾ ಮುಖ್ಯ ವಸ್ತುವಾದರೆ ಇಲ್ಲಿ ಮುಂಬೈ ರಾತ್ರಿಗಳು ಮುಖ್ಯ ಪಾತ್ರವಹಿಸುತ್ತದೆ.
ಮುಂಬೈ ರಾತ್ರಿಯ ಬಾರ್‌ಗಳು, ವೇಶ್ಯೆಯರು, ಪಿಂಪ್‌ಗಳು, ಕಳ್ಳಕೊರಮರು ಕೂಡ ಕತೆಯ ನೆಯ್ಗೆಯಲ್ಲಿ ಮುಖ್ಯವೆನಿಸುತ್ತಾರೆ. ಸಸ್ಪೆನ್ಸ್ ಸ್ಫೋಟಗೊಳ್ಳುವುದಕ್ಕೆ ಇವರದೆಲ್ಲ ಕಾಣ್ಕೆಗಳು ತನ್ನದೇ ಆದ ರೀತಿಯಲ್ಲಿವೆ. ಕತೆ ನಾಯಕ ಕೇಂದ್ರಿತವಾಗಿದೆ. ಆತನ ಅನ್ವೇಶನ್ ಬರೇ ಹೊರಗಡೆಯದು ಮಾತ್ರವಲ್ಲ. ಒಳಗಡೆಯದ್ದು ಕೂಡ. ಆದುದರಿಂದಲೇ ಚಿತ್ರ ಜನಪ್ರಿಯ ಮಾದರಿಯಲ್ಲಿಲ್ಲದೆ ಕಲಾತ್ಮಕವಾಗಿದೆ. ಕರೀನಾ ಕಪೂರ್ ತನಗೆ ಸಿಕ್ಕಿದ ವೇಶ್ಯೆಯ ಪಾತ್ರವನ್ನು ಪರಿಣಾಮಕಾರಿಯಾಗಿ ನಿರ್ವಹಿಸಿದ್ದಾರೆ.
‘ಹಿರೋಯಿನ್’ ಚಿತ್ರಕ್ಕಿಂತಲೂ ತೀಕ್ಷ್ಣವಾಗಿ ಕಾಣಿಸುತ್ತಾರೆ ತಲಾಶ್‌ನಲ್ಲಿ. ಹಾಗೆಯೇ ನವಾಜುದ್ದೀನ್ ಸಿದ್ದೀಕಿಯ ಪಾತ್ರವೂ ನಮ್ಮೆದೆಯನ್ನು ನಾಟುತ್ತದೆ. ಆಮಿರ್ ಖಾನ್ ಅಂತೂ ತಮ್ಮ ಪಾತ್ರಕ್ಕೆ ಭಾರೀ ಕೊಡುಗೆಯನ್ನು ನೀಡಿದ್ದಾರೆ. ಇದು ಮಾಮೂಲಿ ಪೊಲೀಸ್ಆಫೀಸರ್ ಪಾತ್ರವಲ್ಲ. ಅವನೊಳಗೊಂದು ವ್ಯಕ್ತಿತ್ವವಿದೆ. ಅದನ್ನು ಚೆನ್ನಾಗಿಯೇ ಆವಾಹಿಸಿಕೊಂಡಿದ್ದಾರೆ ಆಮಿರ್. ಇಡೀ ಪಾತ್ರದ ಹುಡುಕಾಟಕ್ಕೆ ಪೂರಕವಾದ, ವ್ಯಕ್ತಿತ್ವ ಅದು. ಆತನ ಪತ್ನಿಯ ಪಾತ್ರದಲ್ಲಿ ರಾಣಿ ಮುಖರ್ಜಿ ಸಹನೆಯಿಂದ ನಟಿಸಿದ್ದಾರೆ. ಪಾತ್ರದ ಗಾಂಭೀರ್ಯಕ್ಕೆ ಒಪ್ಪುವಂತಿದೆ ಅವರ ವ್ಯಕ್ತಿತ್ವ.ರಾಮ್ ಸಂಪತ್ ಸಂಗೀತ ಚೆನ್ನಾಗಿದೆ.
ಮುಸ್ಕಾನೇನ್ ಝೂಟಿ ಮತ್ತು ಜಿಯ ಲಗೆ ನಾ...ಹಾಡು ನಮ್ಮ ಆಳದಲ್ಲಿ ಚಿತ್ರ ಮುಗಿದ ಮೇಲೂ ಜಿನುಗುತ್ತಿರುತ್ತವೆ. ಫರ್ಹಾನ್ ಅಖ್ತರ್ ಅವರ ಸಂಭಾಷಣೆಯಂತೂ ಖಡ್ಗದ ಅಲಗಿನಂತಿದೆ. ತಲಾಶ್ ಒಮ್ಮೆ ನೋಡಬಹುದಾದ, ನೋಡಲೇ ಬೇಕಾದ ಚಿತ್ರ. ಘಜನಿಯ ಹುಡುಕಾಟಕ್ಕೂ ತಲಾಶ್‌ನ ಹುಡುಕಾಟಕ್ಕೂ ಬಹುದೊಡ್ಡ ವ್ಯತ್ಯಾಸವಿದೆ. ಅದನ್ನು ಚಿತ್ರ ನೋಡುವ ಮೂಲಕವೇ ನೀವು ನಿಮ್ಮದಾಗಿಸಿಕೊಳ್ಳಬೇಕು.

ಮುರ್ಡೇಶ್ವರ ಕಡಲ ಕಿನಾರೆಯಲ್ಲಿ ಗಮನ ಸೆಳೆದ ಗೌಳಿ ನೃತ್ಯ -- ರಝಾ ಮಾನ್ವಿ


ಶಿಸುವ ಅಂಚಿನಲ್ಲಿರುವ ಜಾನಪದ ಕಲೆ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಹೋರಾ ಸಂಸ್ಥೆಯ ಸಂಸ್ಕೃತಿ ಸಿಂಚನ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗಿದ್ದು, ಉತ್ತರ ಕನ್ನಡ ಜಿಲ್ಲಾದ್ಯಂತ ಅದು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಜಾನಪದ ಕಲೆಯ ರಕ್ಷಣೆ ಮಾಡುತ್ತಿದೆ. ಪ್ರಸ್ತುತ ದಿನಮಾನದಲ್ಲಿ ಪ್ರವಾಸೋದ್ಯಮ ಕ್ಷೇತ್ರವು ಒಂದು ಪ್ರಮುಖ ಆದಾಯ ಮೂಲವಾಗಿ ಹೊರಹೊಮ್ಮುತ್ತಿದ್ದು, ಇದಕ್ಕೆ ಉತ್ತರ ಕನ್ನಡ ಜಿಲ್ಲೆಯೂ ಹೊರತಾಗಿಲ್ಲ. ಜಿಲ್ಲೆಯ ನಿಸರ್ಗ-ಕಲೆ-ಸಂಸ್ಕೃತಿಗಳು ದಿನದಿಂದ ದಿನಕ್ಕೆ ಹೆಚ್ಚು-ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ನಿಸರ್ಗ ಆಧಾರಿತ (EcoTourism) ಪ್ರವಾಸೋದ್ಯಮದಲ್ಲಿ ಹೆಚ್ಚಿನ ಆಕರ್ಷಣೆ ಹೊಂದಿರುವ ಜಿಲ್ಲೆಯ ನಿಸರ್ಗಕ್ಕೆ ಧಕ್ಕೆಯಾಗದ ರೀತಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯಾಗಬೇಕು ಹಾಗೂ ಇಲ್ಲಿನ ಜಾನಪದ ಕಲೆ-ಸಂಸ್ಕೃತಿ ಉಳಿಯಬೇಕು ಜೊತೆಯಲ್ಲಿ ಇವೆಲ್ಲವೂ ಸ್ಥಳೀಯರಿಗೆ ಒಂದು ಆದಾಯ ಮೂಲವಾಗಬೇಕು ಎಂಬ ಉದ್ದೇಶದೊಂದಿಗೆ ಹೋರಾಟ ಸಂಸ್ಥೆಯು ಪ್ರವಾಸೋದ್ಯಮ ಇಲಾಖೆಯ ಸಹಯೋಗದೊಂದಿಗೆ ಸಂಸ್ಕೃತಿ ಸಿಂಚನ ಯೋಜನೆಯನ್ನು ಕಳೆದ 4ವರ್ಷಗಳಿಂದ ಜಿಲ್ಲಾದ್ಯಂತ ಅನುಷ್ಠಾನಗೊಳಿಸುತ್ತಿದೆ.
ಈ ಯೋಜನೆಯ ಒಂದು ಭಾಗವಾದ ವಿನಾಶದ ಅಂಚಿನಲ್ಲಿರುವ ಜಾನಪದ ಕಲೆಗಳ ಉಳಿವಿಗಾಗಿ ಹಾಗೂ ಅವುಗಳ ಕುರಿತು ಪ್ರವಾಸಿಗರಿಗೆ ಜಾಗೃತಿ ನೀಡುವ ಕುರಿತಾಗಿ ಸಂಸ್ಥೆಯು ಜಾನಪದ ಕಲೆಗಳ ಪ್ರದರ್ಶನವನ್ನು ಪ್ರವಾಸಿ ತಾಣಗಳಲ್ಲಿ ಪ್ರದರ್ಶಿಸುತ್ತಾ ಬಂದಿದೆ.
ಈ ನಿಟ್ಟಿನಲ್ಲಿ ಜಿಲ್ಲೆಯ ಪ್ರಸಿದ್ಧ ಸುಂದರ ತಾಣಗಳಲ್ಲಿ ಒಂದಾದ ಮುರ್ಡೇಶ್ವರದ ಕಡಲ ಕಿನಾರೆಯಲ್ಲಿ ಜಿಲ್ಲೆಯ ಹೆಮ್ಮೆಯ ಕಲಾಪ್ರಕಾರಗಳಾದ ಗೌಳಿ ನೃತ್ಯ-ಮರಕಾಲು ಕೋಲಾಟ ಹಾಗೂ ಅಪರೂಪದ ಕೊಳಲಾಟದ ಪ್ರದರ್ಶನವನ್ನು ಸ್ಥಳೀಯ ಲಯನ್ಸ್ ಕ್ಲಬ್ ಮುರ್ಡೇಶ್ವರ, ಶ್ರೀ ಮಾತೋಬಾರ ಮುರ್ಡೇಶ್ವರ ದೇವಸ್ಥಾನದ ಆಡಳಿತ ಮಂಡಳಿ, ಗ್ರಾ.ಪಂ. ಮುರ್ಡೇಶ್ವರ ಹಾಗೂ ಶಬರ ಸಂಸ್ಥೆ ಇವುಗಳ ಸಹಯೋಗದೊಂದಿಗೆ ಏರ್ಪಡಿಸಲಾಗಿತ್ತು. ಕಾರ್ಯಕ್ರಮಕ್ಕೆ ಆಗಮಿಸಿದ ಜನರು ಜನಪದಲೋಕದ ವಿರಾಟ್ ದರ್ಶನ ಮಾಡಿದರು.
ಸಿದ್ದಾಪುರದ ಮಾಳಗಿಮನೆಯ ಮರಕಾಲು ಕೋಲಾಟ, ಯಲ್ಲಾಪುರದ ಗೌಳಿವಾಡದ ಗೌಳಿ ತಂಡದವರ ಗೌಳಿ ನೃತ್ಯ ಹಾಗೂ ಶಿರಸಿಯ ಜಡ್ಡಿಗದ್ದೆಯ ಕೊಳಲಾಟವನ್ನು ನೆರೆದ ಪ್ರವಾಸಿಗರು ವೀಕ್ಷಿಸಿ ಸಂಭ್ರಮಿಸಿದರು. ಲಯನ್ಸ್ ಕ್ಲಬ್ ಮುರ್ಡೇಶ್ವರದ ಅಧ್ಯಕ್ಷ ಮಂಜುನಾಥ ದೇವಾಡಿಗ ಹಾಗೂ ಸದಸ್ಯರು, ಗ್ರಾ.ಪಂ.ಮುರ್ಡೇಶ್ವರದ ಸದಸ್ಯರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ನಶಿಸುತ್ತಿರುವ ಕಲೆ ಕೊಳಲಾಟವನ್ನು ಪ್ರದರ್ಶಿಸಿದ ಸರ್ವೇ ಗೌಡ ಹಾಗೂ ತಿಮ್ಮೇಗೌಡರನ್ನು ಲಯನ್ಸ್ ಕ್ಲಬ್‌ನ ಸದಸ್ಯರುಗಳು ಶಾಲು ಹೊದಿಸಿ ಸನ್ಮಾನಿಸಿದರು. ಶಬರ ಸಂಸ್ಥೆಯ ನಾಗರಾಜ ಜೋಶಿ ಕಾರ್ಯಕ್ರಮ ನಿರ್ವಹಿಸಿದರು. ಲಯನ್ಸ್‌ ಕ್ಲಬ್ ಮುರ್ಡೇಶ್ವರದ ಎಮ್.ವಿ.ಹೆಗಡೆಯವರು ಸ್ವಾಗತ ಕೋರಿದರು. ಹೋರಾಟ ಸಂಸ್ಥೆಯ ಮುಖ್ಯಸ್ಥ ಸುಹಾಸ್ ಪ್ರಾಸ್ತಾವಿಕ ಮಾತನಾಡಿದರು.


ಧಾರವಾಡ ಎಂಬ ಸ್ವಾವಲಂಬನೆಯ ಸಾಂಸ್ಕೃತಿಕ ನಗರ

ಉತ್ತರಕರ್ನಾಟಕದ ಸಾಂಸ್ಕೃತಿಕ ಐಕಾನ್ ಧಾರವಾಡ. ದೇಶದ ಹೆಸರಾಂತ ಸಂಗೀತ ವಿದೂಷಿಗಳು, ಪಂಡಿತರು ಧಾರವಾಡ ನೆಲದಲ್ಲಿ ಸಂಗೀತ ಕಛೇರಿ ಕೊಡಲಿಕ್ಕೆ ಕಾಯುತ್ತಾರೆ ಹೇಗೋ ಹಾಗೆಯೇ ನ...