ಸೋಮವಾರ, ನವೆಂಬರ್ 11, 2013

ಮಕ್ಕಳೊಂದಿಗಿನ ರಂಗ ಪಯಣ ಕೆಲವು ಸಿಹಿ ಸಿಹಿ ನೆನಪುಗಳು



ರಂಗಭೂಮಿಯ ನನ್ನ ಇದುವರೆಗಿನ ಪಯಣದಲ್ಲಿ ಅತಿ ಹೆಚ್ಚು ಅವಧಿಯನ್ನು ನಾನು ಕಳೆದದ್ದು ಮಕ್ಕಳೊಂದಿಗೆ. ಬದುಕಿನ ಸಂಭ್ರಮ ಹೆಚ್ಚಿಸಿದ, ಆಟಕಟ್ಟು, ಈ ನಡೆಯಲ್ಲಿ ಕಲಿಯುವ ಮತ್ತು ಕಲಿಸುವ ಪ್ರಕ್ರಿಯೆ ಒಂದಾಗಿ ಬೆರಗು ಹುಟ್ಟಿಸಿದ ಕ್ಷಣಗಳು ಹಲವು. ಅವುಗಳಲ್ಲಿ ಕೆಲವನ್ನು ನಿಮ್ಮ ಜತೆ ಹಂಚಿಕೊಳ್ಳುತ್ತಿದ್ದೇನೆ.
೧೯೯೭ರ ಸಂದರ್ಭ. ನಾನು ಹಾವೇರಿ ಜಿಲ್ಲೆಯ ಹಿರೇಕೆರೂರಿನ ಕಚವಿ ಎಂಬ ಹಳ್ಳಿಯಲ್ಲಿ ಪ್ರೌಢಶಾಲಾ ಶಿಕ್ಷಕನಾಗಿದ್ದೆ. ಬಸ್ ವ್ಯವಸ್ಥೆಯೂ ಕಷ್ಟ. ಅಲ್ಲಿ ನಾಗರಾಜರಂತಹ ಸ್ನೇಹಿತರ ಸಹಾಯದಿಂದ ಸುಮಾರು ಹತ್ತಕ್ಕೂ ಹೆಚ್ಚು ವರ್ಷ ನಾಟಕಗಳನ್ನಾಡಿಸಿದೆ. ಅಲ್ಲಿಯ ಮಕ್ಕಳು ರಾಜ್ಯ – ರಾಷ್ಟ್ರ ಮಟ್ಟದ ಅನೇಕ ಪ್ರಶಸ್ತಿ ಪಡೆದರು. ಒಮ್ಮೆ ‘ನಕ್ಕಳಾ ರಾಜಕುಮಾರಿ’ ನಾಟಕವಾಡಿಸುತ್ತಿದ್ದೆ. ರಾಜು ಪಾಟೀಲ ಎಂಬ ಹುಡುಗನೊಬ್ಬ ಅಂಜುತ್ತಲೇ ಬಂದ. ‘ಸರ್ ನನಗೆ ಓದೋಕೆ ಬರಲ್ಲ. ನಾಟಕದಲ್ಲಿ ಪಾತ್ರ ಮಾಡೋ ಆಸೆ. ಮಾತಿಲ್ಲದ, ಬಾಗಿಲು ಕಾಯುವವನ ಪಾತ್ರ ಕೊಡುತ್ತೀರಾ’ ಅಂದ. ‘ಬಾ’ ಅಂದೆ.
ಒಂದಿಷ್ಟು ಚಟುವಟಿಕೆಗಳನ್ನು ಮಾಡಿಸುತ್ತಿದ್ದಂತೆ ಅವನ ಅಸಾಧಾರಣ ಸಾಮರ್ಥ್ಯದ ಅರಿವಾಯಿತು. ಅವನಿಗೆ ಓದಲು ಬರೆಯಲು ಬರುತ್ತಿರಲಿಲ್ಲ. ಆದರೆ ಏನು ಹೇಳಿದರೂ ಚೆನ್ನಾಗಿ ನೆನಪಿಡುವ ಮತ್ತು ಅನುಸರಿಸುವ ಅದ್ಭುತ ಸಾಮರ್ಥ್ಯ ಇತ್ತು. ಅವನಿಗೆ ಮುಖ್ಯ ಪಾತ್ರ ಕೊಟ್ಟೆ. ಹೆದರಿ ಓಡಿಯೇ ಹೋದ. ಹೊಲದಲ್ಲಿ ಅವಿತಿದ್ದ ಅವನನ್ನು ಸ್ನೇಹಿತರ ಸಹಾಯದಿಂದ ಹಿಡಿದು ತರಿಸಿದೆ. ತರಬೇತಿ ಆರಂಭವಾಯಿತು. ನಾನೊಮ್ಮೆ ಅವನ ಮುಂದೆ ನಾಟಕವನ್ನು ಭಾವಪೂರ್ಣವಾಗಿ ಓದಿದರೆ ತೀರಿತು.
ಅವನು ಅದನ್ನು ಚಿತ್ರವತ್ತಾಗಿ ಮನಸ್ಸಿನಲ್ಲಿ ಕಟ್ಟಿಕೊಳ್ಳುತ್ತಿದ್ದ. ಮುಂದೆ ನಾನಿಲ್ಲದಾಗ ರಿಹರ್ಸಲ್ ತೆಗೆದುಕೊಳ್ಳುವವ ಅವನೇ ಆದ. ಅವನನ್ನು ಎಸ್.ಎಸ್.ಎಲ್.ಸಿ. ತನಕ ತರೋದಕ್ಕೆ ನನಗೆ ಸಾಧ್ಯವಾಯ್ತು. ಆದರೆ ಎಸ್.ಎಸ್.ಎಲ್.ಸಿ. ಪರೀಕ್ಷೆ ಭಯಕ್ಕೆ ಮನೆಬಿಟ್ಟು ಓಡಿಹೋದ. ಕೇರಳದಲ್ಲಿ ಕೆಲಸಕ್ಕೆ ಸೇರಿಕೊಂಡನಂತೆ. ಆನಂತರ ಕೆಲವರ್ಷದ ನಂತರ ಸಿಕ್ಕಿದವನು ಕಂಬನಿದುಂಬಿ ಹೇಳಿದ. ನಿಜ, ನಮ್ಮ ಪಠ್ಯಕ್ರಮಕ್ಕೆ ಆತ ನಾಲಾಯಕ್ ಆಗಿದ್ದ. ಆದರೆ ಅದೇ ಸಂದರ್ಭದಲ್ಲಿ ಅವನಿಗೆ ನಮ್ಮ ಪಠ್ಯಕ್ರಮವೇ ನಾಲಾಯಕ್ ಆಗಿತ್ತು.
ಉಡುಪಿಯ ಬ್ರಹ್ಮಾವರ ಸಮೀಪ ಕುರಾಡಿ ಎಂಬ ಹಳ್ಳಿ. ಅಲ್ಲಿಯ ಪ್ರೌಢಶಾಲೆಯ ಮುಖ್ಯ ಶಿಕ್ಷಕರು ಸೀತಾರಾಮಶೆಟ್ಟಿ ಎಂಬ ರಂಗತಜ್ಞರು. ಒಮ್ಮೆ ಅವರ ಆಹ್ವಾನದ ಮೇಲೆ ಅಲ್ಲಿ ನಾಟಕ ಕಲಿಸಲು ಹೋದೆ. ಪಕ್ಕಾ ಹಳ್ಳಿ ಹೈದರು. ಅಲ್ಲಿಯ ಮಕ್ಕಳಿಗೆ ನಾಟಕದ ವ್ಯಾಕರಣ ಗೊತ್ತಿತ್ತು. ಅವರಿಗೆ ಕಾವ್ಯದ ಸಾಹಚರ್ಯ ಮಾಡಿಸೋಣ ಅನ್ನಿಸಿತು. ಎಚ್.ಎಸ್.ವಿ. ಅವರ ‘ಕಂಸಾಯಣ’ ತೆಗೆದುಕೊಂಡೆ. ಮೊದಲಿಗೆ ಕಥೆಹೇಳಿ ಆಶು ವಿಸ್ತರಣೆ ಮಾಡಿಸುವದು ಪರಿಪಾಠ.
ಆದರೆ ನಾನು ಅಲ್ಲಿ ಅವರಿಗೆ ವೆಂಕಟೇಶಮೂರ್ತಿಯವರ ನಾಟಕವನ್ನು ಸಾಭಿನಯಪೂರ್ವಕವಾಗಿ ಓದಿತೋರಿಸಿದೆ. ಕಂಸನ ಮಾತು.. ಕೃಷ್ಣನ ಮಾತು.. ಅದ್ಭುತ ಹಾಡುಗಳು.. ಮಕ್ಕಳು ಫಿದಾ ಆಗಿ ಹೋದರು. ಸರಿಯಾಗಿ ೧೦ನೇ ದಿನಕ್ಕೆ ನಾಟಕ ರೆಡಿ. ಮುಂದೆ ಅದು ದೆಹಲಿಯ ಜಶ್ನೆಬಚಪನ್ ರಾಷ್ಟ್ರೀಯ ನಾಟಕೋತ್ಸವಕ್ಕೆ ಆಯ್ಕೆ ಆಯಿತು. ಮಕ್ಕಳೆಲ್ಲ ದೆಹಲಿಗೆ ಹೊರಟರು. ನಾಟಕದ ಆರಂಭದಲ್ಲೊಂದು ಹಾಡಿದೆ. ‘ನಾವು ಹಳ್ಳಿಹೈದರು ನಮ್ಮನೆಲ್ಲಿಗೊಯ್ದರು’ ಅಂತ. ನಮ್ಮ ಮಕ್ಕಳು ಅದನ್ನು ಸ್ವಲ್ಪ ತಿದ್ದಿಕೊಂಡರು. ‘ನಾವು ಹಳ್ಳಿಹೈದರು ನಮ್ಮ ದಿಲ್ಲಿಗೊಯ್ದರು’ ಅಂತ. ದೆಹಲಿಯಲ್ಲಿ ನಮ್ಮ ನಾಟಕದ ಹಾಡುಗಳದ್ದೇ ಪ್ರಚಾರ. ಯಾರು ಕೇಳಿದರೂ ನಮ್ಮ ಮಕ್ಕಳು ತಕ್ಷಣ ಹಾಡಿ ಕುಣಿಯುತ್ತಿದ್ದರು.
ಬಸ್ಸಲ್ಲಿ, ರೋಡಲ್ಲಿ, ಗೇಟಲ್ಲಿ ಹೀಗೆ... ಹಾಡುಗಳೆಲ್ಲ ಅಲ್ಲಿ ಬಹಳ ಪ್ರಸಿದ್ಧವಾದವು. ನಾಟಕಪ್ರಯೋಗದ ಮಾರನೇ ದಿನ ಚರ್ಚೆ ಇತ್ತು. ಯಾರೋ ಕೇಳಿದರು ‘ನಾಟಕ ಕಟ್ಟೋದಕ್ಕೆ ಎಷ್ಟು ಸಮಯ ತೆಗೆದುಕೊಂಡಿರಿ’ ಅಂತ. ೧೦ ದಿನ ಅಂದೆವು. ಅವರು ‘ಅದು ಸುಳ್ಳು’ ಎಂದರು. ಪಠ್ಯ ಅಷ್ಟು ಆಳಕ್ಕೆ ಇಳಿದಿರಲು ಕನಿಷ್ಠ ೩ ತಿಂಗಳು ಅಭ್ಯಾಸಬೇಕು ಅಂದರು. ‘ಅಭಿ’ ಅನ್ನೋ ಹುಡುಗ; ಆತ ಕಂಸನ ಪಾತ್ರ ಮಾಡುತ್ತಿದ್ದ. ಅವನೆದ್ದು ‘ನಿಮಗೆ ಗೊತ್ತಿಲ್ಲ, ನಮ್ಮ ನಿರ್ದೇಶಕರು ಹೀಗೆ ಎದ್ದು ಕಾಲನ್ನು ನೆಲಕ್ಕೆ ಒದ್ದರೆ ನಮ್ಮ ಮೈ ಝುಂ ಅನ್ನುತ್ತಿತ್ತು’ ಅಂದು ಅಭಿನಯಿಸಿ ತೋರಿದ.
ಕೇಳಿದವರು ನಿಮಿಷಗಳ ಕಾಲ ಚಪ್ಪಾಳೆ ತಟ್ಟಿದರು. ಅಲ್ಲಿ ಇನ್ನೊಂದು ತಂಡ ಬೆಂಗಾಲಿ ಹುಡುಗರದಿತ್ತು. ಅವರೂ ಈ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಇವರ ಹಾಡು ಕುಣಿತಗಳನ್ನು ಕಣ್ಣರಳಿಸಿ ನೋಡಿದ್ದರು. ವಾಪಾಸು ರೂಮಿಗೆ ಬರುವಾಗ ನಮ್ಮ ಜತೆ ವೆಹಿಕಲ್‌ ಹತ್ತಿದರು. ಸ್ವಲ್ಪ ಹೊತ್ತಿನಲ್ಲೇ ಇಬ್ಬರೂ ಸೇರಿ ಹಾಡಿ ಕುಣಿಯಲು ಆರಂಭಿಸಿದ್ದರು. ಇಬ್ಬರಿಗೂ ಇನ್ನೊಬ್ಬರ ಭಾಷೆ ಬರುತ್ತಿರಲಿಲ್ಲ. ದೈಹಿಕ ಭಾಷೆ ಮಾತ್ರ ಅರ್ಥವಾಗುತ್ತಿತ್ತು. ಆದರೆ ಆ ಅಲ್ಪ ಸಮಯದಲ್ಲಿ ಅವರೆಲ್ಲ ಎಷ್ಟು ಬೆರೆತು ಹೋಗಿದ್ದರೆಂದರೆ ರಾತ್ರಿ ಎಷ್ಟೋ ಸಮಯದ ನಂತರ ಅವರವರ ರೂಮಿಗೆ ನಾವು ಬಲವಂತವಾಗಿ ಹುಡುಗರನ್ನು ದಬ್ಬಬೇಕಾಯ್ತು. ನಮಗೆ ಮುಂಜಾನೆ ಐದಕ್ಕೇ ಹೊರಡಬೇಕಿತ್ತು.
ಮಣಿಪಾಲದ ರಾಜು ಮತ್ತು ನಾಗೇಂದ್ರ ಪೈ ಅವರ ಚಿನ್ನಾರಿ ತಂಡದ ಹುಡುಗರಿಗೆ ಬಿ. ಸುರೇಶರ ‘ರೆಕ್ಕೆ ಕಟ್ಟುವಿರಾ’ ನಾಟಕ ಮಾಡಿಸುತ್ತಿದ್ದೆ. ಅವರಿಗೆ ಯುದ್ಧದ ಭೀಕರತೆಯ ಹಲವು ಸಿನಿಮಾಗಳನ್ನೂ ತೋರಿಸಲಾಗಿತ್ತು. ನಾಟಕದಲ್ಲಿ ಜಪಾನಿನಲ್ಲಿ ಬಾಂಬಿಗೆ ಬಲಿಯಾದ ತಾಯಿ ಮತ್ತು ಮಕ್ಕಳಿಬ್ಬರ ಕಥನವಿದೆ. ಕೊನೆಯ ದೃಶ್ಯದಲ್ಲಿ ನಾಟಕದಲ್ಲಿ ಇಲ್ಲದ ಆದರೆ ಪೇಪರ್‌ಗಳಲ್ಲಿ ಪ್ರಕಟವಾದ ಬಾಂಬಿನಿಂದ ನೊಂದ ಹಲವರ ಕಥನಗಳನ್ನೂ ನಿರೂಪಣೆ ಮಾಡಲಾಗಿತ್ತು. ನಾಟಕ ಪ್ರಯೋಗದ ಹಿಂದಿನ ದಿನ ಪ್ರಾಯೋಗಿಕ ಪ್ರದರ್ಶನದ ನಂತರ ನಡೆದ ಚರ್ಚೆಯಲ್ಲಿ, ನಾಟಕದ ಕೊನೆಯಲ್ಲಿ ಸೇರಿಸಿದ ಈ ನಿರೂಪಣೆಗಳು ನಾಟಕದ ಒಟ್ಟೂ ಸೌಂದರ್ಯವನ್ನು ಹಾಳುಮಾಡುತ್ತವಾದ್ದರಿಂದ ಅದನ್ನು ತೆಗೆದುಬಿಡುವುದು ಒಳಿತು ಅಂತ ಮಾತಾಯ್ತು. ಮಕ್ಕಳೆಂದರು– ‘ಸರ್ ಅದು ಇರಲಿ. ಬಾಂಬಿನಿಂದ ನೊಂದವರ ಹಲವು ಕತೆಗಳು ಇದ್ದಾವೆ ಅಲ್ಲಿ. ಅದು ನಾಟಕದಷ್ಟೇ ಮುಖ್ಯ’.
ಕಳೆದ ೨೫ ವರ್ಷಗಳಿಂದ ಮಕ್ಕಳ ರಂಗಭೂಮಿಯ ಜತೆ ಇದ್ದೇನೆ. ನಿಜವಾದ ಶಿಕ್ಷಣ ಅಂತಿದ್ದರೆ ಅದು ರಂಗಭೂಮಿಯೇ ಅಂತ ನನಗೆ ಈಗಲೂ ಅನಿಸಿದೆ. ಮಕ್ಕಳು ನನಗೆ ರಂಗಭೂಮಿಯ ಮತ್ತು ಬದುಕಿನ ಹಲವು ಪಾಠಗಳನ್ನು ಕಲಿಸಿದ್ದಾರೆ. ಗೋವಿನ ಹಾಡಿನಲ್ಲಿ ‘ಹುಲಿ’ ಯಾಕೆ ಸಾಯಬೇಕೆಂಬ ಪ್ರಶ್ನೆ ಮಾಡಿ ಚಿಣ್ಣರಮೇಳಗಳ ಗೋವಿನ ಕತೆಯನ್ನೇ ಬದಲು ಮಾಡಿಸಿದ ಮಕ್ಕಳು, ನಾಟಕವೆಂದರೆ ಏನೆಂಬ ಪ್ರಶ್ನೆಗೆ ‘ನಾಟಕವೆಂದರೆ ಸ್ವಾತಂತ್ರ್ಯ’ ಎಂದು ಹೇಳಿ ಅಚ್ಚರಿಗೊಳಿಸಿದ ಹುಡುಗಿಯರು, ‘ಸರ್ ನಮಗೆ ಕಲಿಸಲು ದಿನವೂ ನೀವೇ ಬರುತ್ತೀರಾ ಪ್ಲೀಸ್’ ಎಂದು ಕೇಳಿ ಕಣ್ಣಲ್ಲಿ ನೀರು ತರಿಸಿದ ರಿಮ್ಯಾಂಡ್‌ಹೋಂನ ಮಕ್ಕಳು, ‘ನಂಗೆ ರಾಮ ಬೇಡ ಅವನು ಹೊಡೀತಾನೆ ರಾವಣನೇ ಬೇಕು’ ಎಂದು ರಾವಣನ ಕೈಯಲ್ಲಿ ಕೈಇಟ್ಟು ಓಡಾಡುತ್ತ ನಗೆ ಉಕ್ಕಿಸಿದ ‘ಮಕ್ಕಳ ರಾಮಾಯಣ’ದ ಸೀತೆ... ಹೀಗೆ ಅನೇಕರು ಪಯಣವನ್ನು ಸಾರ್ಥಕಗೊಳಿಸಿದ್ದಾರೆ.

ಧಾರವಾಡ ಎಂಬ ಸ್ವಾವಲಂಬನೆಯ ಸಾಂಸ್ಕೃತಿಕ ನಗರ

ಉತ್ತರಕರ್ನಾಟಕದ ಸಾಂಸ್ಕೃತಿಕ ಐಕಾನ್ ಧಾರವಾಡ. ದೇಶದ ಹೆಸರಾಂತ ಸಂಗೀತ ವಿದೂಷಿಗಳು, ಪಂಡಿತರು ಧಾರವಾಡ ನೆಲದಲ್ಲಿ ಸಂಗೀತ ಕಛೇರಿ ಕೊಡಲಿಕ್ಕೆ ಕಾಯುತ್ತಾರೆ ಹೇಗೋ ಹಾಗೆಯೇ ನ...