ಶನಿವಾರ, ಅಕ್ಟೋಬರ್ 13, 2012

ಜನಪದದಲ್ಲಿ ಕಲೆ – ಚಿತ್ರಕಲೆ

ಜನಪದ ಚಿತ್ರಕಲೆ


- ಡಾ. ಪ್ರಕಾಶ ಗ. ಖಾಡೆ

ಜಾನಪದ ಎಂಬುದು ಬರೀ ಹಾಡು, ಕುಣಿತವಲ್ಲ. ಅದು ಬದುಕಿನ ಎಲ್ಲ ಮಗ್ಗುಲಗಳನ್ನು ಒಳಗೊಂಡ ವಿಶ್ವವ್ಯಾಪಿ ಅನಾವರಣ. ಜಾನಪದ ಜಗದಗಲ ಮುಗಿಲಗಲ ವ್ಯಾಪಕತೆ ಹೊಂದಿದೆ. ಯಾವ ಮಡಿವಂತಿಕೆ ಇಲ್ಲದೇ ದೇಸಿ ಬದುಕಿನ ಅಕ್ಷಯ ನಿಧಿ ಜಾನಪದ. ಇಂದು ಜಾನಪದ ಬಗೆಗಿನ ಅಧ್ಯಯನ ಕ್ಷೇತ್ರ ವ್ಯಾಪಕಗೊಳ್ಳುತ್ತಿರುವ ಹೊತ್ತಿನಲ್ಲಿ ಆಧುನಿಕ ಸಂದರ್ಭದಲ್ಲೂ ಜಾನಪದದ ಮಹತಿಯ ಅರಿವಾಗುತ್ತಿದೆ. ನೆಲ ಮುಗಿಲ ಸಕಲ ಚರಾಚರ ವಸ್ತುಗಳಲ್ಲೂ ಜಾನಪದವಿದೆ. ಬಹು ಶಿಸ್ತಿನ ಅಧ್ಯಯನ ನೆಲೆಗಳೆಲ್ಲ ಇವತ್ತು ಜಾನಪದದ ನೆಲೆಗಟ್ಟಿನಿಂದ ಆರಂಭವಾಗುತ್ತಿರುವುದು ಜಾನಪದ ಹಿರಿಮೆಯನ್ನು ಸಾರುತ್ತಿದೆ.
ಜನಪದ ಕಲೆಗಳು ಜನಾಂಗದಿಂದ ಜನಾಂಗಕ್ಕೆ ಕೊಡುಗೆಗಳಾಗಿ ಬಂದಿವೆ. ಕೈಗಾರಿಕಾ ಕ್ರಾಂತಿಯಿಂದ ಜನರು ಹಳ್ಳಿಗಳನ್ನು ತೊರೆದು ನಗರದತ್ತ ಮುಖ ಮಾಡಿದಾಗ ಜಾನಪದದ ಅಳಿವು ಆರಂಭವಾಯಿತೆಂದೇ ಭಾವಿಸಲಾಗಿತ್ತು. ಈ ಆತಂಕವನ್ನು ನಮ್ಮ ಪಂಡಿತ ಜನ ಬುಗಿಲೆಬ್ಬಿಸಿ ಜಾನಪದವನ್ನು ಸಂಕುಚಿತವಾಗಿ ಕಾಣುವ ಸಂದರ್ಭ ತಂದಿಟ್ಟರು. ಆದರೆ, ಜಾನಪದವೆಂಬುದು ಸಾಯುವ ಸರಕಲ್ಲ, ಅದು ಪರಂಪರೆಯಿಂದ ಪರಂಪರೆಗೆ ಕಾಲಕ್ಕನುಗುಣವಾಗಿ ಬದಲಾಗುತ್ತ ಹೊಸರೂಪ ತಾಳುತ್ತ ಉಳಿದುಕೊಂಡು ಬಂದಿದೆ. ಬರುತ್ತಿದೆ. ಹೀಗಾಗಿ ಜಾನಪದವು ಗತಕಾಲದ ಪ್ರತಿಧ್ವನಿ ಮಾತ್ರವಲ್ಲ, ಸಮಕಾಲೀನ ಸಂದರ್ಭದ ಸಶಕ್ತ ಧ್ವನಿಯಾಗಿದೆ.
ಜಾನಪದ ಬಳಕೆ ಇಂದು ದ್ವಿಮುಖಿಯಾಗಿದೆ. ಸಹಜ ಮತ್ತು ಕೃತಕ ಜೀವನದ ನಡೆಯಲ್ಲಿ ನಾವು ಜಾನಪದವನ್ನು ಬಳಸಿಕೊಳ್ಳುತ್ತಿದ್ದೇವೆ. ಈ ಕಾರಣವಾಗಿ ಆಧುನಿಕರ ಕೈಯಲ್ಲಿ ಜಾನಪದವೆಂಬದು ಬಳಸಿ ಬೀಸಾಕುವ ಸಂಸ್ಕೃತಿ ಎನ್ನಿಸಿದೆ. ಹಾಡು ಕಟ್ಟುವುದು. ಚಿತ್ರ ಬಿಡಿಸುವುದು, ಗಾದೆ, ಒಗಟು, ಒಡಪು ಹೇಳುವುದು ಎಲ್ಲ ಸಹಜ ಕಲೆಗಳಾದರೆ, ಇವು ಪ್ರದರ್ಶನ ಸಂದರ್ಭದಲ್ಲಿ ವ್ಯಾಪಾರೀಕಣದ ಬಾಹುಗಳಲ್ಲಿ ತುಂಬಾ ಕೃತಕವಾಗಿ ಬಿಡುವ ಅಪಾಯವಿದೆ. ಈ ಹಿನ್ನೆಲೆಯಲ್ಲಿ ಜಾನಪದವನ್ನು ಸಹಜ, ಸರಳ ಹಾಗೂ ತಾಜಾತನದ ಅನುಭವಗಳಿಂದ ಗ್ರಹಿಸಬಲ್ಲ ಮನಸ್ಸುಗಳು ಮಾತ್ರ ಜಾನಪದವನ್ನು ಅರಿಯಬಲ್ಲ ಭೂಮಿಕೆಗಳಾಗಿವೆ.
ಜನಪದ ಚಿತ್ರಕಲೆಗೆ ಪ್ರಾಚೀನ ಕಾಲದ ಇತಿಹಾಸವಿದೆ. ಜನಪದದ ಬಹುಪಾಲು ಕಲೆಗಳಿಗೆ ಲಿಖಿತ ಆಧಾರ ಗುರುತಿಸುವುದು ಕಷ್ಟ. ಮಾನವನ ಬದುಕಿನಲ್ಲಿ ರೇಖೆಗಳ ಬಳಕೆಯೊಂದಿಗೆ ಚಿತ್ರಕಲೆ ಮೊದಲಾಯಿತು. ಭಾಷೆಗೆ ಮುನ್ನ ಸಂಜ್ಞೆಗಳಿದ್ದಂತೆ, ಲಿಪಿಗೆ ಮುನ್ನ ಚಿತ್ರಕಲೆ ಬಳಕೆಯಲ್ಲಿತ್ತು. ಮಾನವನ ಸಂವಹನ ಮಾಧ್ಯಮವಾಗಿ ರೇಖೆಗಳ ಸಂಕೇತಗಳು ಬಳಕೆಯಲ್ಲಿದ್ದವು. ಜಗತ್ತಿನ ಅತ್ಯಂತ ಪ್ರಾಚೀನ ಚಿತ್ರಕಲೆಯ ಕುರುಹುಗಳು ಸ್ಪೇನಿನ ಗುಹೆಗಳಲ್ಲಿ ಹಾಗು ಫ್ರಾನ್ಸಿನ ಡೊರಡೊನ್ ಪ್ರಾಂತ್ಯದ ಲಾಗ್ರೀಜ್ ಎಂಬ ಗವಿಗಳಲ್ಲಿ ದೊರೆತಿವೆ. ಹಾಗೆನೇ ಸುಮಾರು ಇಪ್ಪತ್ತೇಳು ಸಾವಿರ ವರ್ಷಗಳ ಹಿಂದೆ ಅರಿನೇಷಿಯನ್ ನಾಗರಿಕತೆಯ ಕಾಲದಲ್ಲಿ ದೊರೆತ ಮನುಷ್ಯಾಕೃತಿಯ ಚಿತ್ರಗಳೇ ಹಳೇಯವು ಎಂಬ ಅಭಿಪ್ರಾಯವಿದೆ.
ಆದಿ ಮಾನವನ ಬದುಕಿನ ಘಟನಾವಳಿಗಳನ್ನು ಅವರು ಬಿಟ್ಟುಹೋದ ಚಿತ್ರಕಲೆಯಿಂದ ಅರಿಯುತ್ತೇವೆ. ಪ್ರಾಚೀನ ಮಾನವರು ಬಂಡೆ, ಗುಹೆಗಳಷ್ಟೇ ಅಲ್ಲದೇ, ವೃಕ್ಷಗಳ ತೊಗಟೆ, ಚರ್ಮ, ಎಲುಬು, ಕೊಂಬು ಇತ್ಯಾದಿ ವಸ್ತುಗಳ ಮೇಲೆ ಚಿತ್ರ ಬಿಡಿಸುತ್ತಿದ್ದರು. ಇವುಗಳ ಮೇಲೆ ಪ್ರಾಣಿ, ಪಕ್ಷಿ, ಕೃಷಿ, ಯುದ್ಧ, ಮಾಟ ಮಂತ್ರಗಳಿಗೆ ಸಂಬಂಧಿಸಿದ ಚಿತ್ರಗಳನ್ನು ಬಿಡಿಸುತ್ತಿದ್ದರು.
ಭಾರತದ ಪ್ರಾಚೀನ ಚಿತ್ರಕಲೆಯ ಕುರುಹುಗಳು ಕನರ್ಾಟಕದ ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಿನ “ಗೊಂಬಿಗುಡ್ಡ”ದಲ್ಲಿ ಕಾಣುತ್ತೇವೆ. ಪ್ರಾಗೈತಿಹಾಸಿಕ ಕಾಲದ ಈ ಗುಡ್ಡದ ಬಂಡೆಗಳ ಮೇಲಿರುವ ಚಿತ್ರಗಳು ಆ ಕಾಲದವರ ಕಲಾಭಿಜ್ಞತೆಗೆ ಸಾಕ್ಷಿಯಾಗಿವೆ. ಇಲ್ಲಿ ಪಲ್ಲಕ್ಕಿ, ಜಿಂಕೆ, ಆನೆ, ಸಾರಂಗ ಮುಂತಾದ ಪ್ರಾಣಿಗಳ ಒಂಟಿ ಚಿತ್ರಗಳಲ್ಲದೇ, ಒಂಟಿ ಸವಾರರು, ಹೋರಿ ಕಾಳಗ, ಬೇಟೆಯಾಡುವ ಮನುಷ್ಯರು ಈ ಮೊದಲಾದ ಚಿತ್ರಗಳಿವೆ. ಹೀಗೆ ಬಂಡೆಗಳ ಮೇಲೆ ಚಿತ್ರ ಬಿಡಿಸಿದ ನಮ್ಮ ಜನಪದರು ಕಾಲಕ್ರಮದಲ್ಲಿ ಭಿತ್ತಿ ಚಿತ್ರಗಳು, ಹಬ್ಬದ ಸಂದರ್ಭದ ಚಿತ್ರಗಳನ್ನು ಬಿಡಿಸುತ್ತ ಮನೆ, ಮಠ, ದೇವಾಲಯ, ಅರಮನೆಗಳಲ್ಲೂ ಸ್ಥಾನ ಪಡೆದು ಜನಪದ ಚಿತ್ರಕಲೆಗೆ ತುಂಬಾ ವ್ಯಾಪಕವಾದ ಕ್ಯಾನವಾಸ್ ರೂಪಿಸಿದರು.
ಆರಾಧನಾ ಸಂಸ್ಕೃತಿಯೇ ಮೂಲ:
ಜನಪದ ಚಿತ್ರಕಲೆ ಕೇವಲ ಗೃಹಾಲಂಕಾರದ ಚಿತ್ರ ವಿನ್ಯಾಸಕ್ಕೆ ವಸ್ತುವಾಗದೇ ಆರಾಧನಾ ಮೂಲ ಸಂಸ್ಕೃತಿಯಿಂದ ರೂಪಿತವಾದವು. ನಾಗರ ಪಂಚಮಿ, ದೀಪಾವಳಿ, ಯುಗಾದಿ ಮೊದಲಾದ ಹಬ್ಬಗಳ ಸಂದರ್ಭಗಳಲ್ಲಿ ಜನಪದರು ಬಿಡಿಸುವ ಚಿತ್ರಗಳು ಪರಂಪರಾಗತ ಕಲೆಯ ಮುಂದುವರಿಕೆಯಾಗಿವೆ. ಜನಪದರ ಮನೆಯ ಗೋಡೆ, ಮಾಳಿಗೆಗಳಿಗೆ ಮಾಡಿದ ಅಲಂಕರಣ ಚಿತ್ರಗಳು “ಬಿತ್ತಿ ಚಿತ್ರ”ಗಳಾಗಿ ಹೆಸರಾಗಿವೆ. ಕನರ್ಾಟಕದ ಹಿರಿಯೂರು, ಸಿರಾ, ಶ್ರೀರಂಗಪಟ್ಟಣ, ಶ್ರವಣಬೆಳಗೂಳ, ಗುಳೇದಗುಡ್ಡ, ಇಳಕಲ್ಲು ಮೊದಲಾದ ಕಡೆಯ ಬಿತ್ತಿ ಚಿತ್ರಗಳು ತುಂಬಾ ಜನಪ್ರಿಯವಾಗಿವೆ. ರಾಮಾಯಣ, ಮಹಾಭಾರತ ದೃಶ್ಯಗಳು ಶಿವ, ವಿಷ್ಣು ಪರವಾದ ಕಥಾನಕಗಳು ಇಲ್ಲಿ ಚಿತ್ರರೂಪ ಕಂಡಿವೆ.

ಮನೆಗೆ ಸುಣ್ಣ ಹಚ್ಚುವುದು, ಹೊಸ್ತಿಲನ್ನು ಕೆಮ್ಮಣ್ಣಿನಿಂದ ಸಾರಿಸುವುದು. ಅಲ್ಲಲ್ಲಿ ಚಿತ್ರ ಬಿಡಿಸುವುದು ಜನಪದ ಚಿತ್ರಕಲಾ ನೈಪುಣ್ಯಕ್ಕೆ ಸಾಕ್ಷಿಯಾಗಿದೆ. ಮನೆ, ದೇವಾಲಯ ಮೊದಲಾದ ಕಡೆಗಳಲ್ಲಿ ಬಿಡಿಸುವ ರಂಗೋಲಿ ಕಲೆಯು ಜನಪದರ ಗೃಹಾಲಂಕಾರಕ್ಕೆ ಸಂಬಂಧಿಸಿದ ಒಂದು ಮಹತ್ವಪೂರ್ಣ ಚಿತ್ರಕಲೆಯಾಗಿದೆ. ಹೊಸ್ತಿಲು ಮುಂದಿನ ಬೆಳಗಿನ ಬೆಳದಿಂಗಳಾದ ರಂಗೋಲಿಯು ನಮ್ಮ ಹಳ್ಳಿ ಹೆಣ್ಣುಮಕ್ಕಳ ಕಲಾ ನೈಪುಣ್ಯಕ್ಕೆ, ಕಲ್ಪನಾ ಶಕ್ತಿಗೆ ಪ್ರತೀಕವಾಗಿದೆ. ಶಿವರಾಮ ಕಾರಂತರು “ರಂಗೋಲಿ” ಎಂದರೆ ಮನೆಯ ಮುಂದೆ ಬರೆಯುವ ಚಿತ್ರ ಕೆಲಸ ಎಂದಿದ್ದಾರೆ. ಆರನೆಯ ಶತಮಾನದಲ್ಲಿ ಬದುಕಿದ್ದ ಬಾಣಕವಿ ತನ್ನ “ಕಾದಂಬರಿ” ಯಲ್ಲಿ ಸೂತಿಕಾಗೃಹದ ಮುಂದೆ ರಂಗೋಲಿ ಹಾಕುವುದನ್ನು ವಿವರಿಸಿದ್ದಾನೆ. ಶುಭ ಹೆರಿಗೆ, ಬಾಣಂತಿ ರಕ್ಷಣೆಯ ಆಶಯದ ಹಿನ್ನೆಲೆಯಲ್ಲಿ ಈ ಕಲೆಯ ಬಳಕೆ ಕಾಣುತ್ತೇವೆ. ರಂಗೋಲಿಯ ಉಲ್ಲೇಖವು ಜನಪದ ಗೀತೆ, ಕಥೆ, ಒಗಟು, ಒಡಪು, ಗಾದೆಗಳಲ್ಲಿ ಕಾಣುತ್ತೇವೆ.
ಒಡಪು : ಅಂಗಳದಾಗ ರಂಗೋಲಿ ಹಳಕ
ಆಕಾಶದಾಗ ಚಂದ್ರನ ಬೆಳಕ
ನನ್ನ ಜೀವನದಾಗ ನನ್ನ ರಾಯರ ಥಳಕ
ಗಾದೆ : ಆತ ಚಾಪೆ ಕೆಳಗೆ ತೂರಿದರೆ
ನಾನು ರಂಗೋಲಿ ಕೆಳಗೆ ತೂರುತ್ತೇನೆ.
ರಂಗೋಲಿಯು ಭಾರತದ ಪ್ರಾಚೀನ ಜನಪದ ಕಲೆಯಾಗಿದೆ.
ಸೌಂದರ್ಯ ಪ್ರಜ್ಞೆಯ ಜೀವಾಳ:
ಜನಪದ ಚಿತ್ರಕಲೆ ಸೌಂದರ್ಯ ಪ್ರಜ್ಞೆಯ ಜೀವಾಳವಾಗಿದೆ. ಜನ್ಮಜಾತವಾಗಿ ಬಂದ ರೂಪದೊಂದಿಗೆ ಕಲೆಯ ಸೊಬಗನ್ನು ತಮ್ಮ ಮೈಮೇಲೆ ಬಿಡಿಸಕೊಂಡು ಇಮ್ಮಡಿ ಸೌಂದರ್ಯದ ಸಿರಿವಂತಿಕೆಯಿಂದ ನಮ್ಮ ಜನಪದರು ಗುರುತಿಸಿಕೊಳ್ಳುತ್ತಾರೆ. ಇದಕ್ಕೆ ಸಾಕ್ಷಿಯಾಗಿ ಜನಪದ “ಹಚ್ಚೆ” ಚಿತ್ರಕಲೆ ನಮ್ಮ ಕಣ್ಣ ಮುಂದಿದೆ.

ಜನಪದರ ದೃಶ್ಯಕಲೆಗೆ ಸೇರಿದ “ಹಚ್ಚೆ” ವಿಶ್ವದ ಅನೇಕ ಕಡೆಗೆ ಈಗಲೂ ಉಳಿದುಕೊಂಡು ಬಂದಿದೆ. ಹಚ್ಚೆ, ಅಚ್ಚೆ, ಹಂಚೆ, ಹಂಚಿಬಟ್ಟು, ಹಣಚಿ, ಅಣಚಿ, ಅಣ್ಣಿ ಈ ಮೊದಲಾದ ಹೆಸರುಗಳಿಂದ ಈ ಕಲೆಯನ್ನು ಕರೆಯುತ್ತೇವೆ. ಗಿಡಮೂಲಿಕೆಗಳಿಂದ ಸಿದ್ಧಪಡಿಸಿದ ರಸ ದೇಹದ ಮೇಲಿನ ಚಿತ್ರಗಳಿಗೆ ಹಳದಿ ಮಿಶ್ರಿತ ಹಸಿರು ಬಣ್ಣದ ಛಾಯೆಯನ್ನು ಕೊಡುವುದರಿಂದ ಈ ಕಲೆಗೆ ಹಚ್ಚೆ ಎಂದು ಹೆಸರು ಬಂದಿದೆ. ಗರತಿತನದ, ಸೌಭಾಗ್ಯದ ಸಂಕೇತವಾದ ಹಚ್ಚೆಯ ಬಗೆಗೆ ರೂಢಿ ಮಾತೊಂದು ಹೀಗಿದೆ “ಸತ್ತಾಗ ನಮಕೂಟ ಬರುವುದು ಹಚ್ಚೆ, ಬಂಗಾರ, ಬೆಳ್ಳಿ ಯಾವ ಒಡವೆಗಳಲ್ಲ” ನೋಟಕ್ಕೆ ಕಾಣುವ ದೇಹದ ಎಲ್ಲ ಭಾಗಗಳ ಮೇಲೆ ಹಚ್ಚೆ ಹಾಕಿಸಿಕೊಳ್ಳುತ್ತಾರೆ. ಹೂವು, ಚಂದ್ರ, ನಕ್ಷತ್ರ, ಶಿಲುಬೆ, ಕಮಲ, ಚುಕ್ಕೆ, ಶಂಖ, ಮುತ್ತಿನ ಬಳ್ಳಿ, ಒಡವೆ, ಬಾಸಿಂಗ, ನವಿಲು, ಕುದುರೆ, ಬಾಳೆಗಿಡ, ತಾವರೆ ಹೂ, ನಿಂಬೆ ಸಸಿ, ನಂದಿಕೋಲು, ಜೋಗಿ ಜಡೆ, ಸೀತೆ ಸೆರಗು, ಶಿವನ ಬಾಸಿಂಗ, ಹಂಪಿ ತೇರು ಹೀಗೆ ಹಲವು ರೂಪಗಳಲ್ಲಿ ಹಚ್ಚೆ ಚಿತ್ರಗಳನ್ನು ಕಾಣುತ್ತೇವೆ. ಜನಪದ ಗೀತೆಗಳಲ್ಲಿ ಹಚ್ಚೆಯ ಹಾಡುಗಳು ಸಾಕಷ್ಟಿವೆ. ಹಚ್ಚೆ ಕಲಾವಿದರು ಜನಪದ ಗೀತೆಗಳನ್ನು ಹೇಳುತ್ತ ಹಚ್ಚೆ ಹಾಕುತ್ತಾರೆ. ಹಚ್ಚೆ ಉಲ್ಲೇಖದ ಒಂದು ಜನಪದ ಗೀತೆ ಹೀಗಿದೆ.
ಹಂಚಿ ಬೊಟ್ಟಿನ ಕೈಯ ಒತ್ತಿ ಹಿಡಿಯಲು
ಬ್ಯಾಡ, ನನರಾಯ ನೆತ್ತರಿಳಿದಾವ
ಕಿರಿಬಳ್ಳಿ
ಆಧುನಿಕ ಕಾಲದ ಮಹಿಳೆಯರ ಬದಲಾಗುತ್ತಿರುವ ಸೌಂದರ್ಯ ಪ್ರಜ್ಞೆಯ ಆತಂಕಕಾರಿ ಬೆಳವಣಿಗೆಯ ನಡುವೆಯೂ ಅನೇಕ ದೇಶಗಳಲ್ಲಿ “ಹಚ್ಚೆ” ಕಲೆ ಮಾಯವಾಗುತ್ತ ನಡೆದಿದೆ. ಆದರೂ ವಿಶ್ವದ ಹಿರಿಯಣ್ಣನಾದ ಅಮೇರಿಕೆಯೊಂದರಲ್ಲಿಯೇ ಮುನ್ನೂರು ಕೋಟಿ ಜನ ಹಚ್ಚೆ ಕಲೆ ಬಿಡಿಕೊಂಡಿರುವುದು ಈ ಕಲೆಯ ವಿಶ್ವಮಾನ್ಯತೆಯನ್ನು ಸಾರುತ್ತದೆ.

ಕಲೆಯ ಸಿರಿವಂತಿಕೆಯ ಬೆಡಗು :
ಜನಪದ ಚಿತ್ರಕಲೆ ಕಲಾತ್ಮಕತೆಗೆ ಮಿಗಿಲಾದುದು. ಸಹಜತೆ, ಸರಳತೆ ಹಾಗೂ ಮೋಹಕತೆಯಿಂದ ಯಾರನ್ನೂ ಸೆಳೆಯುವಂಥದು. ಜನಪದರ ಮದರಂಗಿ ಕಲೆ ಈ ಬಗೆಯ ಮೋಹಕತೆಯಿಂದ ತನ್ನ ಜನಪ್ರಿಯತೆ ಉಳಿಸಿಕೊಂಡು ಬಂದಿದೆ. ಮದುವೆ ಸಂದರ್ಭದಲ್ಲಿ ಶಾಸ್ತ್ರ ರೂಪವಾಗಿ ಮದರಂಗಿ ಕಲೆಯನ್ನು ಅಂಗೈ ಮತ್ತು ಪಾದಗಳ ಮೇಲೆ ಚಿತ್ರಿಸುವ ಆಚರಣೆ ಜನಪದರಲ್ಲಿ ರೂಢಿಗತವಾಗಿದೆ. ಮದರಂಗಿ ಕಲೆಯಲ್ಲಿ ಹಲವು ಬಗೆಯ ಚಿತ್ತಾರಗಳನ್ನು ಕಾಣುತ್ತೇವೆ. ಮಾನವ, ಪ್ರಾಣಿ, ಪಕ್ಷಿ ಆಕೃತಿಯ ಚಿತ್ರಗಳಿಗಿಂತ ಹೆಚ್ಚಾಗಿ ಬಳ್ಳಿ, ಆಕೃತಿ, ಸುಳುಹುಗಳ ಚಿತ್ರಗಳನ್ನು ಬಿಡಿಸುತ್ತಾರೆ. ಆರಾಧನಾ ಮೂಲ ಸಂಕೇತ ಪ್ರಧಾನ ಆಕೃತಿಗಳಾದ ಸ್ವಸ್ತಿಕ, ಓಂ, ಶ್ರೀ, ಸೂರ್ಯ, ಚಂದ್ರ ಮೊದಲಾದ ಕಲೆ ಕಾಣುತ್ತೇವೆ. ಹೆಣ್ಣು ಮಕ್ಕಳಿಗೆ ಹಬ್ಬದ ಸಂಭ್ರಮದ ಸಂಕೇತವಾಗಿ ಮದರಂಗಿ ಕಲೆ ಉಳಿದುಕೊಂಡು ಬಂದಿದೆ. ಸಣ್ಣ ಸಣ್ಣ ಚುಕ್ಕೆಗಳ ಮೂಲಕ ಹೂವಿನ, ಎಲೆಯ, ಬಳ್ಳಿಗಳ ಚಿತ್ರ ಬಿಡಿಸುತ್ತಾರೆ. ಅಂಗೈ, ಮುಂಗೈಗಳ ಮೇಲೆ ಬಿಡಿಸಿದ ಮದರಂಗಿಯ ಕೆಂಪನೆಯ ಚಿತ್ರಗಳು ಹೆಂಗಳೆಯರ ಸೌಂದರ್ಯವನ್ನು ಇಮ್ಮಡಿಗೊಳಿಸುವುದರ ಜೊತೆಗೆ ಆರೋಗ್ಯ ಮತ್ತು ತಾರುಣ್ಯವನ್ನು ಸಂಕೇತಿಸುತ್ತವೆ. ಮದರಂಗಿ ಕಲೆ ಬಿಡಿಸುವಾಗ ಹೆಣ್ಣುಮಕ್ಕಳು ಸೋಬಾನೆ ಮೊದಲಾದ ಜನಪದ ಗೀತೆಗಳನ್ನು ಹಾಡುತ್ತಾರೆ.
ಹಳೆಯ ಬಟ್ಟೆಗಳನ್ನು ಕಲಾತ್ಮಕವಾಗಿ ಕತ್ತರಿಸಿ, ವಿಶಿಷ್ಟ ಹೆಣಿಕೆಯ ಮೂಲಕ ಮೋಹಕ ಕಲೆಯನ್ನು ಎಳೆಗಳ ಮೂಲಕ ಬಿಡಿಸುವ ಜನಪದರ “ಕೌದಿ ಚಿತ್ರಕಲೆ” ತುಂಬಾ ಪ್ರಾಚೀನವಾದುದು. ಕ್ರಿ.ಶ. ಸುಮಾರು ಎರಡನೆಯ ಶತಮಾನದ ಆಯುವರ್ೇದ ಶಾಸ್ತ್ರ ಕೃತಿ “ಚರಕ ಸಂಹಿತಾ” ಕೌದಿಯನ್ನು ಉಲ್ಲೇಖಿಸುವ ಪ್ರಾಚೀನ ದಾಖಲೆಯಾಗಿದೆ. ನಮ್ಮ ಜನಪದರು ಕೌದಿಯಲ್ಲಿ ವೈವಿದ್ಯತೆಯ ಚಿತ್ತಾರಗಳನ್ನು ಬಿಡಿಸುತ್ತಾರೆ. ಹೀಗಾಗಿ ಕೌದಿಯು ಜನಪದ ಸ್ತ್ರೀಯರ ಸೌಂದರ್ಯ ಪ್ರಜ್ಞೆಯ ಅಭಿವ್ಯಕ್ತಿಯಾಗಿದೆ.
ಕೌದಿಗಳಲ್ಲಿ ನಮ್ಮ ಜನಪದರು ರಾಮಾಯಣ, ಮಹಾಭಾರತ ಪ್ರಸಂಗಗಳ ರಾಮನ ತೊಟ್ಟಿಲು, ಸೀತೆ, ಲವಕುಶ, ಮಾಯಾಮೃಗ, ರಾವಣ, ಹಣಮಂತ, ಪಗಡೆಯಾಟ ಮೊದಲಾದ ಚಿತ್ರಗಳನ್ನು ಐತಿಹಾಸಿಕ ಘಟನೆಗಳಾದ ಉಳುವಿ, ಹಂಪಿ, ಶ್ರೀಶೈಲ ಜಾತ್ರೆಗಳ ತೇರು, ಗುಡಿ, ಸಿದ್ಧಾರೂಢರು, ಶಿವಶರಣರು, ಏಸು, ಬುದ್ಧ, ಮಹಾವೀರ, ಪೈಗಂಬರ ಚಿತ್ರಗಳನ್ನು ಕೌದಿಗಳಲ್ಲಿ ಬಿಡಿಸುತ್ತಾರೆ. ಕೃಷಿಗೆ ಸಂಬಂಧಿಸಿದ ಕೃಷಿ ಸಲಕರಣೆಗಳು, ನಿಸರ್ಗ ಸೌಂದರ್ಯದ ಚಿತ್ರಗಳು, ಪಗಡೆ ಬಜಾರ, ಐದರ ಪಗಡಿ, ನಾಲ್ಕರ ಪಗಡಿ, ಕೊಳಲು, ಭಾವಿ ತೇರು, ಬಾಸಿಂಗ, ದಂಡೆ, ಗೆಳತಿಯರು, ಸೂರ್ಯ, ಚಂದ್ರ, ನಕ್ಷತ್ರ, ನವಿಲು, ಗಿಳಿ, ಆನೆ, ಒಂಟಿ, ಎಲೆಬಳ್ಳಿ, ಬಾಳೆಗೊನೆ, ಗುಬ್ಬಿ ಕಾಲು, ಹಕ್ಕಿಕಾಲು, ಪ್ರಾಣಿಯ ಹೆಜ್ಜೆ, ಸ್ವಸ್ತಿಕ ಮೊದಲಾದ ಚಿತ್ರಗಳು ಕೌದಿಯಲ್ಲಿ ಗ್ರಾಮೀಣರು ಬಿಡಿಸುತ್ತಾರೆ.
ಆಧುನಿಕ ಕಲಾ ಪ್ರಕಾರವಾದ ಕೋಲಾಜ್ದಲ್ಲಿ ಬಣ್ಣದ ಕಾಗದ ಹಾಗೂ ಬೇರೆ ಬೇರೆ ವಸ್ತುಗಳನ್ನು ವಿನ್ಯಾಸಗಳಿಗನುಗುಣವಾಗಿ ಕತ್ತರಿಸಿ ಹಾಳೆಗೆ ಅಂಟಿಸುವ ಮೂಲಕ ಸಾಂಕೇತಿಕ ಚಿತ್ರ ನಿರೂಪಿಸುತ್ತಾರೆ. ಹಾಗೆನೇ ನೇರವಾಗಿ ಬಣ್ಣ, ಕುಂಚ ಬಳಸದೇ ಬಣ್ಣ ಬಣ್ಣದ ಕೌದಿ ತುಂಡು ಬಟ್ಟೆಗಳಿಂದ ಚಿತ್ರ ಬಿಡಿಸುವ ಜನಪದದ ಚಿತ್ರಕಲೆಯು ಆಧುನಿಕ ಕೋಲಾಜ್ ಚಿತ್ರಕಲೆಯ ಹುಟ್ಟಿಗೆ ಕಾರಣವಾಗಿದೆ ಎನ್ನಬಹುದು.
ತುಂಬಾ ಜನಪ್ರಿಯವಾಗಿರುವ ಕಸೂತಿ ಕಲೆಯು ಜನಪದ ಚಿತ್ರಕಲೆಯ ಮತ್ತೊಂದು ಕೊಡುಗೆ. ಬಟ್ಟೆಯ ಮೇಲೆ ಸೂಜಿ ಬಳಸಿ ದಾರಗಳಿಂದ ಬಿಡಿಸುವ ಅಲಂಕಾರಿಕ ಕಲೆಯು ಸೂಜಿಯ ಹುಟ್ಟಿನೊಂದಿಗೆ ಬೆಳೆದು ಬಂದಿದೆ. ಕ್ರಿ.ಶ.ಪೂ. 3000 ದ್ದೆನ್ನಲಾದ ಮೊಹೆಂಜೊದಾರೊದಲ್ಲಿನ ಕಂಚಿನ ಸೂಜಿ ಕಸೂತಿ ಕಲೆಯ ಇತಿಹಾಸವನ್ನು ತುಂಬಾ ಪ್ರಾಚೀನಕ್ಕೆ ಕರೆದೊಯ್ಯುತ್ತದೆ. ನಮ್ಮ ಹಳ್ಳಿಗಳಲ್ಲಿ ಹೆಣ್ಣುಮಕ್ಕಳು ಕಸೂತಿ ಕಲೆಯ ಕುಶಲತೆಯಲ್ಲಿ ತಮ್ಮ ಜಾಣ್ಮೆ ಮೆರೆದಿದ್ದಾರೆ. ಹೂಬಳ್ಳಿಗಳು, ಪಕ್ಷಿಗಳು, ಮನುಷ್ಯನಾಕೃತಿಗಳು, ನಿಸರ್ಗದ ಚಿತ್ರಗಳು, ಪೂಜಾ ಸಲಕರಣೆಗಳು, ಪ್ರೀತಿಯ ಸಂಕೇತಗಳು ಮೊದಲಾದವನ್ನು ಕಸೂತಿ ಕಲೆಯಲ್ಲಿ ಹೆಣಿಕೆ ಮಾಡುತ್ತಾರೆ.
ಜನಪದ ಕಲೆಗೆ ಆಕಾಶದಷ್ಟು ವ್ಯಾಪ್ತಿ, ಸಾಗರದಷ್ಟು ಆಳವಿದೆ. ನಮ್ಮ ಬದುಕಿನ ಎಲ್ಲ ಬಗೆಯ ಸೃಜನಶೀಲ ಸೃಷ್ಠಿಯು ಜನಪದ ಕಲೆಯಾಗಿ ಪರಿಣಮಿಸಿದೆ. ಆರಾಧನಾ ಸಂಸ್ಕೃತಿಯ ಮನೋಭಾವದಿಂದ ಹುಟ್ಟಿಕೊಂಡ ಜನಪದ ಚಿತ್ರಕಲೆಯು ಜನಪದದ ಸೌಂದರ್ಯಪ್ರಜ್ಞೆ, ಕಲಾ ಶ್ರೀಮಂತಿಕೆಗೆ ಸಾಕ್ಷಿಯಾಯಿತು. ಜನಪದ ಚಿತ್ರಕಲೆಯ ಮೂಲಕ ಮಾನವ ಸಂಸ್ಕೃತಿಯು ಕಾಲ ಕ್ರಮೇಣ ಹೇಗೆ ರೂಪಗೊಂಡಿತು ಎಂಬುದನ್ನು ಅರಿಯಲು ಮಹತ್ವಪೂರ್ಣವಾದ ದಾಖಲೆಯಾಗಿ ನಿಲ್ಲುತ್ತದೆ. ಆದರಿಂದು ಆಧುನಿಕ ಸಂದರ್ಭದಲ್ಲಿ ಜನಪದಕ್ಕೆ ಅದರಲ್ಲೂ ಜನಪದ ಚಿತ್ರಕಲೆ ಮರೆಯಾಗುತ್ತಿದೆ. ಚಿತ್ರಕಲೆಯ ಅಳಿಗಾಲದಿಂದ ಪಯರ್ಾಯವಾಗಿ ನಮ್ಮ ಜನಪದರ ಹಾಡು ಸಂಸ್ಕೃತಿ ಅವಸಾನವಾಗುತ್ತಿದೆ. ಅವಿಭಕ್ತ ಕುಟುಂಬ ವ್ಯವಸ್ಥೆ ಛಿದ್ರ ಛಿದ್ರವಾಗಿದೆ. ಆರೋಗ್ಯದಲ್ಲಿ ಆತಂಕ ಸೃಷ್ಠಿಯಾಗಿದೆ. ಧಾಮರ್ಿಕ ಆಚರಣೆಗಳು ಯಾಂತ್ರೀಕೃತವಾಗಿದೆ. ಮನುಷ್ಯ ಮನುಷ್ಯರ ನಂಬುಗೆಗಳು ಕಡಿಮೆಯಾಗಿವೆ. ಕಲೆಯನ್ನು ಪ್ರೀತಿಸುವ ಗೌರವಿಸುವವರ ಸಂಖ್ಯೆ ವಿರಳವಾಗಿದೆ. ಕೈಕುಶಲತೆಗಿಂತ ಯಂತ್ರ ಬಿಡಿಸುವ ಕಲೆಗೆ ಯುವ ಪೀಳಿಗೆ ಮೋಹಿತವಾಗಿದೆ. ಈ ಎಲ್ಲ ಆತಂಕಗಳು ಜನಪದ ಚಿತ್ರಕಲೆಯ ಅವಸಾನಕ್ಕೆ ಮೊದಲಾಗಿವೆ. ಪರಂಪರೆಯ ಜ್ಞಾನವನ್ನು ಆಧುನಿಕತೆಗೆ ಒಗ್ಗಿಸಿಕೊಳ್ಳುವುದಷ್ಟೇ ನಮ್ಮ ಮುಂದಿರುವ ಒಂದು ಪಯರ್ಾಯ ಅವಕಾಶ, ಹೀಗಾಗಿ ಆಧುನಿಕ ಚಿತ್ರ ಕಲಾಕಾರರು ಪರಂಪರೆಯ ಕೊಂಡಿಯಿಂದ ಕಳಚಿಕೊಳ್ಳದೇ ಇದನ್ನು ರೂಢಿಸಿಕೊಳ್ಳುವ ಮೂಲಕ ತಮ್ಮ ಸೃಜನಶೀಲತೆಯ ಹೊಸ ಸೃಷ್ಠಿಯನ್ನು ತೆರೆದಿಡಬೇಕಾಗಿದೆ.

ಭಾನುವಾರ, ಅಕ್ಟೋಬರ್ 7, 2012

ಕ್ಷಮಿಸಿ, ನಾ ಅರಳಲೇಬೇಕು..!

 ladaiprakaashana krupe
ನಾಟಕ

(ಬೆಂಜಮಿನ್ ಮೊಲಾಯಿಸ್ ಜೀವನಾಧಾರಿತ)

ಸುಧಾ ಚಿದಾನಂದಗೌಡ




ಪಾತ್ರವಿವರ

ಬೆಂಜಮಿನ್ ಮೊಲಾಯಿಸ್  : ದಕ್ಷಿಣ ಆಫ್ರಿಕಾದ ಕಪ್ಪು ಕವಿ. (ಬಿಳಿಯ ಪೊಲೀಸ್ ಫಿಲಿಪ್ ಸೆಲೆಪೆಯನ್ನು ಕೊಂದ
                      ಆರೋಪದ ಮೇಲೆ ಗಲ್ಲು ಶಿಕ್ಷೆಗೊಳಗಾಗುತ್ತಾನೆ)
ಜನರಲ್                ಬೋಥಾನ ಜೈಲ್ ಉನ್ನತ ಅಧಿಕಾರಿಗಳಲ್ಲೊಬ್ಬ.
ವಿಲಿಯಂ              : ಪತ್ರಕರ್ತ, ಜನರಲ್ ಇವನನ್ನು ಬಾತ್ಮೀದಾರನಂತೆ ಬಳಸಿಕೊಳ್ಳುತ್ತಾನೆ
ಥಾಮಸ್              : ಯುವನೀಗ್ರೋ ,ಬೆಂಜಮಿನ್ ಅಭಿಮಾನಿ
ಅಬ್ರಹಾಂ              : ಪ್ರಬುದ್ಧ ನೀಗ್ರೋ. ಕವಿಗೋಷ್ಟಿಯ ಸಂಘಟಕ
ಸೂಸಾನ್ನ              : ನೀಗ್ರೋ ಯುವತಿ, ತನ್ನ ಜನಾಂಗದ ಸ್ಥಿತಿಗತಿಗಳ ಕುರಿತು ಚಿಂತಿಸುವವಳು
ಮರಿಯಂ             :  ಮಧ್ಯವಯಸ್ಕ ನೀಗ್ರೋ ಮಹಿಳೆ, ಸೂಸಾನ್ನಳ ಸೋದರಸಂಬಂಧಿ, ಸ್ವಾತಂತ್ರ್ಯದ ಹಂಬಲಿಕೆಯುಳ್ಳವಳು                ಬಿಳಿಯ ಪೊಲೀಸ್ ಮುಖ್ಯಸ್ಥ: ಜನರಲ್ ಆಣತಿಯಂತೆ ಕಾರ್ಯನಿರ್ವಹಿಸುವವನು
ಬಿಳಿಯ ನ್ಯಾಯಾಧೀಶ
ಇತರೆ                : ನಿಗ್ರೋ ನಾಗರಿಕರು, ಪೊಲೀಸರು

ದೃಶ್ಯ ೧

ಕ್ರಿ.ಶ.೧೯೮೨ನೇ ಇಸ್ವಿ ಮಳೆಗಾಲ
ಮೇಮ್ ಲೋದಿ ಗ್ರಾಮ
ಪ್ರಿಟೋರಿಯಾ
ದಕ್ಷಿಣ ಆಫ್ರಿಕಾ

ನೀಗ್ರೋ ೧    ಕವಿಗೋಷ್ಟಿಯಂತೆ..? ಮೇಮ್ ಲೋದಿಯ ಬುದ್ಧಿಜೀವಿಗಳಿಗೆ ಸಡಗರ. ನಾವು ಕೇಳೋಣ..

ನೀಗ್ರೋ ೨    ಹೂಂ..ಜೊತೆಗೆ ಆತಂಕ. ಕೆಲವರಲ್ಲಿ ಭಯಕೂಡ..  ಇರಬೇಕಾದ್ದೇ ಮತ್ತೆ..ಬಿಳಿಯ ಪೊಲೀಸರ ಓಡಾಟ ಹೆಚ್ಚಾಗಿರುವುದನ್ನು ಗಮನಿಸಿದೆಯ?

ನೀಗ್ರೋ ೩    ಹೆದರಿದರು ತೋರಿಸಿಕೊಳ್ಳಬಾರದು ಕಣ್ರಯ್ಯಾ... ನೋಡಿ, ಕೆಲವು ಯುವಕರು ಉದ್ವಿಗ್ನತೆಯಲ್ಲಿರುವರು. ಯಾರೇನು ಹೇಡಿಗಳಲ್ಲ ಇಲ್ಲಿ..

ನೀಗ್ರೋ ೧    ಹೆದರುವುದು ಹೇಡಿಗಳ ಕೆಲಸ ಎಂದು ಜೈಲೊಳಗಿಂದಲೇ ಗರ್ಜಿಸಿದ್ದಾರಲ್ಲ ಮಂಡೆಲಾ!

ಥಾಮಸ್     ಅವರು..ಬರ್‍ತಾರೆ ತಾನೆ..?

ಅಬ್ರಹಂ         ಯಾರಯ್ಯಾ..? (ರೇಗುವನು)

ಥಾಮಸ್     (ಉಗುಳು ನುಂಗುತ್ತ) ಅದೇ.. ..ಅವರು..

ಅಬ್ರಹಂ     (ಪ್ರಸನ್ನತೆ, ಹೆಮ್ಮೆಯಿಂದ) ಬೆಂಜಮಿನ್ ಮೊಲಾಯಿಸ್..? ಖಂಡಿತಾ ಬರ್‍ತಾರೆ. ತಪ್ಪಿಸೋದಿಲ್ಲ. ಅನುಮಾನವೇ ಇಟ್ಟುಕೋಬೇಡಯ್ಯಾ. ಬೆಂಜಮಿನ್ ಬಂದೇ ಬರ್‍ತಾರೆ. ಕವನ ಬರೆಯುವ ಹುಲಿಗೆ ಇವರೆಲ್ಲ ಲೆಕ್ಕವಾ?(ಬಿಳಿಯ ಪೋಲಿಸರತ್ತ ತಿರಸ್ಕಾರದ ನೋಟ ಹರಿಸುವನು)

ನೀಗ್ರೋ ೨     ಬಂದ್ರೂಬ॒ಂದ್ರೂ॒

ನೀಗ್ರೋ    ೩    ಓಹ್, ಇವರೇನಾ..ಇಷ್ಟು ಚಿಕ್ಕವರಾ.. ..?

(ಸಭೆ ನಿಶ್ಯಬ್ದವಾಗುವುದು ಬೆಂಜಮಿನ್ ಪ್ರವೇಶಿಸಿ ಮೆಲುದನಿಯಲ್ಲಿ ಪಕ್ಕದಲ್ಲಿದ್ದವರೊಡನೆ ಸಂಭಾಷಿಸುತ್ತ ವೇದಿಕೆಯೇರಿ ನಿಲ್ಲುವನು. ಸಮೂಹಗೀತೆಯಿಲ್ಲ. ಸ್ವಾಗತವಿಲ್ಲ. ನಿರೂಪಣೆಯಿಲ್ಲ. ಪರಿಚಯ ಭಾಷಣವೂ ಇಲ್ಲ. ಅಪ್ಪಟ ಕಪ್ಪುವರ್ಣದ ಗೂಂಗುರು ಕೂದಲು, ದಪ್ಪತುಟಿ, ಸಣ್ಣ ಕಣ್ಣುಗಳ, ಸರಳವಾದ ಸೂಟ್‌ನಲ್ಲಿರುವನು. ಅವನ ಸೆಟೆದ ಎದೆ, ಮಿಂಚಿನ ದೃಷ್ಟಿ, ಏನನ್ನೂ ಹೇಳದೆ ಮೌನವಾಗಿ ಜೇಬಿನಿಂದ ಕಾಗದವನ್ನು ತೆಗೆದು, ಬಿಡಿಸಿ, ಕವನ ಓದಲಾರಂಭಿಸುವನು.)

ಬೆಂಜಮಿನ್ ಮೊಲಾಯಿಸ್.
   
ನಾವು ಗೂಬೆಗಳಲ್ಲ.
    ಕತ್ತಲ ಗುಹೆ ನಮ್ಮ ಮನೆಯಲ್ಲ.
    ಮಲೆತು ನಿಂತ ನೀರು.
ಸೂರ್ಯನಿಲ್ಲದ ನೆಲ ನಾವೊಲ್ಲೆವು.
    ಈ ಕ್ಷಣ ಉಸಿರು ನಿಂತರೆ ಭಯವಿಲ್ಲ.
ನಮ್ಮದಾದ ನೆಲಕ್ಕೆ ರಕ್ತ ಹರಿಸುತ್ತೇವೆ.
ಒಳಗನ್ನು ಫಲಗೊಳಿಸುತ್ತೇವೆ.
    ಸ್ವಚ್ಛ ಗಾಳಿ, ಬೆಳಕಿಲ್ಲದ ಪ್ರಪಂಚ
    ಸ್ವಾತಂತ್ರ್ಯ ರವಿಯಿಲ್ಲದ ಆಕಾಶ
    ನಾವೊಲ್ಲೆವು.....

(ವೀಕ್ಷಕರಲ್ಲಿ ಸೂಸಾನ್ನ ಮತ್ತು ಮರಿಯಂ ಕುಳಿತಿರುವರು.. ..ಪ್ರೇಕ್ಷಕ ವರ್ಗದಲ್ಲಿ ಅಬ್ಬಾ..ಆಹಾ..ಉದ್ಗಾರಗಳು.. ..)

ಮರಿಯಂ:    ಎಷ್ಟು ಚೆನ್ನಾದ ನುಡಿ..! ಸತ್ಯವಾಗಬಹುದಿದ್ದರೆ ಎಷ್ಟು ಚೆನ್ನಿತ್ತು.! ಈ ಸ್ವಾತಂತ್ರ್ಯವೆಂಬುದು ಬಂದಾಗ ನಿಮ್ಮ ಮಾವ ನನ್ನನ್ನೂ ಮನುಷ್ಯಳಂತೆ ಕಾಣಬಹುದು ಅಲ್ಲವಾ.. ನರಕದ ಪಂಜರದಿಂದ ಪಾರಾಗಬಹುದಿತ್ತು ಅಲ್ಲವಾ ? ಒಳ್ಳೆ ಕಲ್ಪನೆ. ಒಳ್ಳೇದು..ಒಳ್ಳೇದು..

ಸೂಸಾನ್ನ        ಕಲ್ಪನೆ ಎಂದೇಕೆ ಅಂದುಕೊಳ್ಳಬೇಕು ಅತ್ತೇ..? ನಿಜವಾಗಲಾರದೇನು ಇದು..ಕೇಳಿಬಿಡೋಣ..

ಮರಿಯಂ        ಬೇಡ ಬೇಡ ಸುಮ್ಮನಿರು..ಅವರೇನೆಂದುಕೊಂಡಾರು..

ಥಾಮಸ್        ಕನಸುಗಳಿಗೆ ಸ್ವಾತಂತ್ರ್ಯದ ಬಣ್ಣಗಳನ್ನು ಮೆತ್ತಿರುವಂತಿದೆ ಈ ಕವಿತೆಗಳು..

ಬೆಂಜಮಿನ್‌ಮೊಲಾಯಿಸ್  ಇದು ಕೇವಲ ಕನಸಲ್ಲ ತಮ್ಮಾ..ನಾಳೆ ನಿಜವಾಗಬೇಕಾದ್ದು. ತಡವಾಗಬಹುದು..ಆದರೆ ಸ್ವಾತಂತ್ರ್ಯದ
ಬಣ್ಣಗಳು ನಮ್ಮ ಆತ್ಮಗಳನ್ನು ಖಂಡಿತ ತಾಗುವವು..

(ಬಿಳಿಯ ಪೊಲಿಸರ ಬೂಟುಗಳ ಟಕಟಕ ಶಬ್ದ ನೆರೆದವರ ಕಿವಿ ಬಿರಿಯುವುದು. ಬೆಂಜಮಿನ್ ಅತ್ತ ಲಕ್ಷ ಕೊಡದೆ, ಕವನ ವಾಚನ ಮುಂದುವರೆಸುವನು. ಪೊಲೀಸರಲ್ಲೊಬ್ಬ ಮೈಕನ್ನೂ, ಕಾಗದವನ್ನೂ ಒಟ್ಟಿಗೆ ಕಿತ್ತುಕೊಳ್ಳವನು. ಸಭೆ ಧಿಗ್ಗನೆ ಎದ್ದು ನಿಲ್ಲುವುದು. ಎಲ್ಲ ಕಣ್ಣುಗಳು ಕೆಂಡಗಳಾಗುವವು. ಬೆಂಜಮಿನ್ ಮೊಲಾಯಿಸ್ ಶಾಂತನಾಗಿ ಕೈಗಳೆರಡನ್ನೂ ಮೇಲೆತ್ತಿ ಸುಮ್ಮನಿರುವಂತೆ ಸೂಚಿಸುವನು. ನಂತರ ಏನೆಂಬಂತೆ ಪೊಲೀಸರತ್ತ ನೋಡುವನು.)

ಬಿಳಿಯ ಪೊಲೀಸ್         (ಒರಟಾಗಿ) ನಡೀ....

ಬೆಂಜಮಿನ್ ಮೊಲಾಯಿಸ್        (ಅಚ್ಚರಿಯಿಂದ) ಯಾಕೆ?

ಬಿಳಿಯ ಪೊಲೀಸ್ ಮುಖ್ಯಸ್ಥ    ಠಾಣೆಗೆ ನಡಿ.

ಬೆಂಜಮಿನ್ ಮೊಲಾಯಿಸ್         ಅದೇ ಯಾಕೇಂತಾ?

ಬಿಳಿಯ ಪೊಲೀಸ್ ಮುಖ್ಯಸ್ಥ    ಅದನ್ನ ಅಲ್ಲೆ ಹೇಳ್ತೇವೆ.

ಬೆಂಜಮಿನ್ ಮೊಲಾಯಿಸ್        ನನ್ನನ್ನು ಅರೆಸ್ಟ್ ಮಾಡ್ತಿದೀರಾ?

ಬಿಳಿಯ ಪೊಲೀಸ್ ಮುಖ್ಯಸ್ಥ    ಒಂದು ರೀತಿಯಲ್ಲಿ ಹೌದು.

ಬೆಂಜಮಿನ್ ಮೊಲಾಯಿಸ್        ವಾರೆಂಟ್ ಇದೆಯೇ?

ಬಿಳಿಯ ಪೊಲೀಸ್ ಮುಖ್ಯಸ್ಥ    ಅದೆಲ್ಲ ಪದ್ಧತಿ ನಿಮಗೆ ಅನ್ವಯಿಸುವುದಿಲ್ಲ.

ಬೆಂಜಮಿನ್ ಮೊಲಾಯಿಸ್        ನಮಗೆ ಅಂದರೆ ಕರಿಯರಿಗೆ?

ಬಿಳಿಯ ಪೊಲೀಸ್ ಮುಖ್ಯಸ್ಥ     ಸುಮ್ಮನೆ ನಡಿ. ಹೆಚ್ಚು ಪ್ರಶ್ನಿಸಬೇಡ (ರಟ್ಟೆಗೆ ಕೈ ಹಾಕುವನು)

ಬೆಂಜಮಿನ್ ಮೊಲಾಯಿಸ್    (ಮೃದುವಾಗಿಯೇ ಬಿಡಿಸಿಕೊಳ್ಳುತ್ತಾ) ಠಾಣೆಗೆ ಬರಲು ಅಭ್ಯಂತರವೇನಿಲ್ಲ ನನಗೆ. ಆದರೆ ಕಾರಣ ಹೇಳಿ.

ಬಿಳಿಯ ಪೊಲೀಸ್ ಮುಖ್ಯಸ್ಥ    (ಜನರತ್ತ ದೃಷ್ಟಿ ಬೀರುತ್ತ) ಅದನ್ನ ಅಲ್ಲಿಯೇ ಹೇಳ್ತೀವಿ ನಡೀ. ಇಲ್ದಿದ್ರೆ ಇಲ್ಲಿ ನಡಿಯೋ ರಕ್ತಪಾತಕ್ಕೆ ನೀನೆ ಜವಾಬ್ದಾರನಾಗ್ತೀಯ.

(ಜನರ ಗುಂಪಿನಲ್ಲಿ ಗೊಂದಲ ಗುಜುಗುಜು ಕ್ಷಣ ಯೋಚಿಸಿ, ಜನರೆಡೆಗೆ ತಿರುಗಿ)

ಬೆಂಜಮಿನ್ ಮೊಲಾಯಿಸ್        (ಗಟ್ಟಿಯಾಗಿ) ಶಾಂತಿಯಿಂದಿರಿ ಮತ್ತೆ ಭೇಟಿಯಾಗೋಣ. (ಪೊಲೀಸರತ್ತ ತಿರುಗಿ) ನಡೆಯಿರಿ.

(ಜಿಟಿಜಿಟಿ ಜಿನುಗವ ಮಳೆಯಲ್ಲಿ ಬೆಂಜಮಿನ್ ಮೊಲಾಯಿಸ್ ಬಿಳಿಯ ಪೊಲೀಸ್‌ರೊಂದಿಗೆ ನಿರ್ಗಮಿಸುವನು. ಅವರ ಕಡೆ ದಿಟ್ಟಿಸುತ್ತ.)


ದೃಶ್ಯ ೨

ಕ್ರಿ.ಶ.೧೯೮೪ರ ಜುನ್ ತಿಮಗಳು
ಕೇಂದ್ರ ಕಾರಾಗೃಹ
ಪ್ರಿಟೋರಿಯ

ಬೆಂಜಮಿನ್ ಮೊಲಾಯಿಸ್: ಈ ಕೊಠಡಿಯ ಸಂಖ್ಯೆ ಎಷ್ಟೆಂಬುದು ನನಗೆ ತಿಳಿದಿಲ್ಲ. ಅಷ್ಟೇಕೆ, ಹಗಲು ರಾತ್ರಿಗಳ ವ್ಯತ್ಯಾಸವೂ
ಗೊತ್ತಾಗುತ್ತಿಲ್ಲ. ಒಳಗೆ ಯಾವಾಗಲೂ ನಸುಗತ್ತಲಿನ ಮಬ್ಬು ಬೆಳಕು, ತಾಜಾ ಹವಾ, ಒಳ್ಳೆಯ ನೀರು ಕುಡಿದು ಎಷ್ಟು ದಿನಗಳಾಗಿರಬಹುದು? (ಲೆಕ್ಕ ಹಾಕಲೆತ್ನಿಸಿ) ಊಹೋ... ಒಂದು ವರ್ಷ...?ಅಲ್ಲ, ಎರಡು ವರ್ಷಗಳ ಮೇಲಾಗಿರಬಹುದೇ? ಸರಿಯಾಗಿ ಎಣಿಸಲಾಗುತ್ತಿಲ್ಲ. ಮಿದುಳು ಹಿಂದಿನಂತೆ ಚುರುಕಾಗಿ ಕೆಲಸ ಮಾಡುತ್ತಿಲ್ಲ. ಕೈ, ಕಾಳು, ಕೀಲುಸಂದಿಗಳ ಭಯಂಕರ ನೋವು ಬೇರೆ ಕಾಡುತ್ತದೆ. ಈ ಕೊಠಡಿಯಲ್ಲೋ ಒಂದು ಸಣ್ಣಗಾಯವೂ ಸೆಪ್ಟಿಕ್ ಆಗಿ, ಇನ್‌ಫೆಕ್ಷನ್ ತಗುಲಿಕೊಳ್ಳಲು ಪ್ರಶಸ್ತವಾಗಿದೆ. ಮನೆಯಲ್ಲಿದ್ದಾಗ ತನ್ನ ಕೊಠಡಿ, ಬಟ್ಟೆ, ಪುಸ್ತಕ, ಮೇಜು, ಕುರ್ಚಿ, ಹಾಸಿಗೆ, ಮಂಚ ಎಲ್ಲ ಎಷ್ಟು ನೀಟಾಗಿಡುತ್ತದೆ. ಅಮ್ಮ, ಅತ್ತಗೆಯರೇ ಮೆಚ್ಚುಗೆ ಸೂಚಿಸುತ್ತಿದ್ದರು. ಈಗ ಅವರೆಲ್ಲ ಏನು ಮಾಡುತ್ತಿರಬಹುದು? ಪಾಪ, ಅಮ್ಮ ಅತ್ತು, ಅತ್ತು ಕಣ್ಣೀರು ಬತ್ತಿಸಿಕೊಂಡಿರಬಹುದು. ಅಪ್ಪ ಮಾಮೂಲಿನಂತೆ ಕುರ್ಚಿಯ ಮೇಲೊರಗಿ, ’ಬೆಂಜಮಿನ್ ಕವನ ಬರೆಯಲು ಆರಂಭಿಸಿದೊಡನೆ ಪೆನ್ ಕಿತ್ತು ಬಿಸಾಡಬೇಕಾಗಿತ್ತು. ಆಗ ಜೈಲು, ಗೀಲು ಏನೂ ತಂಟೆಯಿರುತ್ತಿರಲಿಲ್ಲ’ ಎಂದು ಚಿಂತಿಸುತ್ತಿರಬಹುದು. ಹುಷ್, ಕೆಳಹೊಟ್ಟೆಯ ನೀರನ್ನು ಖಾಲಿ ಮಾಡಬೇಕೆನ್ನಿಸುತ್ತಿದೆ. ದಿನಕ್ಕೆ ಒಂದೇ ಬಾರಿ ಪಾಯಿಖಾನೆಗೆ ಹೋಗುವ ರಾಜಭೋಗ! ಉಳಿದ ಸಮಯದಲ್ಲಿ ಏನು ಮಾಡಬೇಕೆನಿಸಿದರೂ ಈ ಸೆಲ್‌ನ ಮೂಲೆಯಲ್ಲೇ ಮಾಡಿಕೋಬೇಕು. ಎಷ್ಟೋ ಸಲ ಆ ವಾಸನೆ ಹೊಟ್ಟೆ ತೊಳಸಿ, ವಾಂತಿ ಮಾಡಿಕೊಂಡಿದ್ದೇನೆ. ಬರುಬರುತ್ತ ವಾಸನೆ, ಮಬ್ಬುಗತ್ತಲು, ಒಂಟಿತನ, ಮೌನ ಎಲ್ಲ ಅಭ್ಯಾಸವಾದವು.

(ಕಿರ್ರನೆ ಬಾಗಿಲು ತೆರೆದುಕೊಳ್ಳುವುದು. ಬಂದವನು ಬಿಳಿಯ ಪೊಲೀಸ್‌ನವನಾದ್ದರಿಂದ ನೋಡುವ ಗೋಜಿಗೆ ಹೋಗುವುದಿಲ್ಲ.)

ಬೆಂಜಮಿನ್ ಮೊಲಾಯಿಸ್;    ಏನು ಹರ್‍ಕೊತಾನೋ ಹರ್‍ಕೊಳ್ಳಿ, ನನ್ನ ಮುಗುಳ್ನಗೆ ಮಾತ್ರ ಮುಖದ ಮೇಲದ್ದೇ ಇರುತ್ತೆ. ಅವನನ್ನು ಇನ್ನಷ್ಟು ರೇಗಿಸಲು!

(ಬಿಳಿಯ ಪೊಲೀಸ್ ಮುಖ್ಯಸ್ಥ ಒರಟಾಗಿ ಭುಜವನ್ನಿಡಿದು ತಿರುಗಿಸುವನು. ಕೂದಲು ಹಿಡಿದು ತಲೆ ಹಿಂದಕ್ಕೆ ಜಗ್ಗುವನು. ನೋವಿನಿಂದ ಚೀರಬೇಕೆನಿಸಿದರೂ ನುಂಗಿಕೊಂಡು ಮೆಲ್ಲಗೆ ನಗುವನು ಬೆಂಜಮಿನ್. ಮುಖ್ಯಸ್ಥನ ಪಳಗಿದ ಕೈ ರಪ್ಪನೆ ಮುಖಕ್ಕೆ ರಾಚುವುದು. ಉಪ್ಪುಪ್ಪಾಗಿ ನಾಲಿಗೆಗೆ ರಕ್ತ ಅಂಟುವುದು. ಕಾಲು ತೊಡರಿ ಬೀಳುತ್ತಿದ್ದವನನ್ನು ಅದುಮಿ ಹಿಡಿದು.)

ಬಿಳಿಯ ಪೊಲೀಸ್ ಮುಖ್ಯಸ್ಥ    ಏಳು, ನ್ಯಾಯಾಲಯಕ್ಕೆ ಹೋಗ್ಬೇಕು.

ಬೆಂಜಿಮಿನ್ ಮೊಲಾಯಿಸ್    (ಸಿಟ್ಟು ಬೇಡವೆಂದರೂ ಒತ್ತಿಕೊಂಡು ಬಂದು) ಎಷ್ಟು ಸಲ ಹೋಗೋದು ನಿಮ್ಮ ಅನ್ಯಾಯಾಲಯಕ್ಕೆ?

(ಎರಡು ವರ್ಷಗಳಲ್ಲಿ ಹೊಡೆದೂ ಹೊಡೆದೂ ಸುಸ್ತಾಗಿಹೋಗಿದ್ದ ಬಿಳಿಯ ಪೊಲೀಸ್ ಮುಖ್ಯಸ್ಥ. ಬೆಂಜಮಿನ್ ಮೊಲಾಯಿಸ್‌ನನ್ನು ಎಳೆದುಕೊಂಡು ಹೋಗಿ ವಾಹನದಲ್ಲಿ ಸರಕು ತುಂಬುವಂತೆ ತುರುಕುವನು. ಪುನಃ ಅದೇ ಪ್ರಿಟೋರಿಯದ ರಸ್ತೆಗಳು. ಸಾಲು ಮನೆಗಳು. ಬೀದಿಯಲ್ಲಿ ಓಡಾಡುವ ಜನ, ಯಾರಿಗೂ ಒಳಗಿರುವವರ ಗುರುತು ಹತ್ತದಂತೆ ಗಾಜು ಏರಿಸಿದ ವಾಹನ...)


 ದೃಶ್ಯ೩

(ಲಕಲಕಿಸುವ ಟೇಬಲ್, ಛೇರ್, ಫ್ಯಾನ್, ಹೂಕುಂಡಗಳು, ಮೇಜಿನ ಆಚೀಚೆ ಹಿಂದಿಬ್ಬರು ಬಿಳಿಯ ವಕೀಲರುಗಳು, ಅಷೆತ್ತರದ ಕುರ್ಚಿಯಲಿ ಕುಳಿತಿರುವ ಜಡ್ಜ್, ಅವನಲ್ಲಿ ಅಹಂಕಾರ, ಕಣ್ಣುಗಳಲ್ಲಿ ತಿರಸ್ಕಾರ ಕಾಣುತ್ತಿದೆ. ಅವನ ತಲೆಯ ಮೇಲೆ ನಿರಂಕುಶ ಜನರಲ್ ಬೋಥಾನ ಚಿತ್ರ.)

ಬಿಳಿಯ ವಕೀಲ        (ಕನ್ನಡಿ ಸರಿಪಡಿಸಿಕೊಳ್ಳುತ್ತಾ) ಏನು ಯೋಚನೆ ಮಾಡಿದೆ?

ಬೆಂಜಮಿನ್ ಮೊಲಾಯಿಸ್     (ಮುಗುಳ್ನಗುತ್ತಾ) ಯಾವುದರ ಬಗ್ಗೆ?

ಬಿಳಿಯ ವಕೀಲ     (ಹುಬ್ಬುಗಂಟಿಕ್ಕುತ್ತಾ) ಕೋರ್ಟಿನೊಂದಿಗೆ ಹುಡುಗಾಟ ಆಡಬೇಡ. ಕವನ ಬರೆದಷ್ಟು ಸುಲಭವಲ್ಲ ಕಾನೂನಿನಿಂದ ತಪ್ಪಿಸಿಕೊಳ್ಳೋದು.

ಬೆಂಜಮಿನ್ ಮೊಲಾಯಿಸ್  ಕಾನೂನಿಗೆ ವಿರುದ್ಧವಾದುದ್ದೇನನ್ನೂ ನಾನು ಮಾಡಿಲ್ಲವಲ್ಲ?

ಬಿಳಿಯ ವಕೀಲ        ಹಾಗಾದರೆ ಪಿಲಿಪ್ಸ್ ಸೆಲಿಪೆ ನಿನಗೊತ್ತಿಲ್ಲ?

ಬೆಂಜಮಿನ್ ಮೊಲಾಯಿಸ್     ಇಲ್ಲ!

ಬಿಳಿಯ ವಕೀಲ        ೧೯೮೨ನೇ ವರ್ಷದಲ್ಲಿ ನೀನವನೊಂದಿಗೆ ಗೆಳೆಯನಾಗಿದ್ದಿಲ್ಲ?

ಬೆಂಜಮಿನ್ ಮೊಲಾಯಿಸ್     ಇಲ್ಲ.

ಬಿಳಿಯ ವಕೀಲ        ಗೆಳೆಯನಂತೆ ನಟಿಸಿ, ಕೊನೆಗೆ ಅವನನ್ನು ಕೊಂದು ಹಾಕಲಿಲ್ಲ?

ಬೆಂಜಮಿನ್ ಮೊಲಾಯಿಸ್  ಖಂಡಿತಾ ಇಲ್ಲ.

ಬಿಳಿಯ ವಕೀಲ         ನೀನು ಸುಳ್ಳು ಹೇಳ್ತಿದೀ. ಸರ್ಕಾರದ ನಿಷ್ಠಾವಂತ ಪೊಲೀಸರನ್ನು ಕೊಲ್ಲುವುದೇ ನಿನ್ನ ಕೆಲಸ.

ಬೆಂಜಮಿನ್ ಮೊಲಾಯಿಸ್  ಅಲ್ಲ. ನನ್ನ ಕೆಲಸ ಕವನ ಬರೆಯುವುದು ಮಾತ್ರ.

ಬಿಳಿಯ ವಕೀಲ        ನೀನೇನು ದೊಡ್ಡ ಕವಿ. ವಿದ್ವಾಂಸನೋ?

ಬೆಂಜಮಿನ್ ಮೊಲಾಯಿಸ್     ಅಲ್ವೇ ಅಲ್ಲ. ನಾನೇನೂ ದೊಡ್ಡ ಕಾವ್ಯ ಬರೆದಿಲ್ಲ. ಒಂದಿಷ್ಟು ಕವಿತೆಗಳನ್ನು ಬರೆದಿದ್ದೇನಷ್ಟೇ.

ಬಿಳಿಯ ವಕೀಲ        ನೀನು ಬರೆದ ಕವಿತೆಗಳು ಆಡಳಿತಕ್ಕೆ ವಿರುದ್ಧವಾಗೇ ಇವೆಯಲ್ಲ?

ಬೆಂಜಮಿನ್ ಮೊಲಾಯಿಸ್     (ನಗುತ್ತಾ)ಅದಕ್ಕೆ ನಾನು ಜವಾಬ್ದಾರನಲ್ಲ. ನಾನು ನನ್ನ ಜನರ ಪರವಾಗಿ ಬರೆಯುತ್ತೇನಷ್ಟೇ.

ಬಿಳಿಯ ವಕೀಲ         ಇಂಥ ಮಾತುಗಳಿಮಧ ನ್ಯಾಯಾಲಯ ಮೋಸ ಹೋಗಲಾರದು.

ಬೆಂಜಮಿನ್ ಮೊಲಾಯಿಸ್    ಮೋಸ ಮಾಡುವ ಉದ್ದೇಶ ನನಗಿಲ್ಲ. ಫಿಲಿಪ್ಸ್ ಸೆಲಿಪೆ ಎಂಬ ಪೊಲೀಸ್ ಸಹಜವಾಗಿ ಸತ್ತನೆಂಬುದು ಎಲ್ಲರಿಗೂ ಗೊತ್ತಿದೆ. ನೀವದನ್ನು ಕೊಲೆ ಎಂದು ಕರೆದು. ಆಪಾದನೆ ನನ್ನ ಮೇಲೆ ಹೊರಿಸಿದರೆ, ನಾಳೆ ಪ್ರಪಂಚ ನಿಮ್ಮನ್ನೂ, ನಿಮ್ಮ ನ್ಯಾಯಾಲಯವನ್ನೂ ನೋಡಿ ನಗುತ್ತದೆ.

ಜಡ್ಜ್    ನಿನ್ನ ಮಾತು ಅತಿಯಾಯ್ತು ಬೆಂಜಮಿನ್, ದೇಶದ್ರೋಹದ ಸಾಹಿತ್ಯ ಸೃಷ್ಟಿಸಿದ್ದಲ್ಲದೇ, ಕಾನೂನನ್ನೇ ಅಪಹಾಸ್ಯ ಮಾಡ್ತೀದೀ.... ನಿನ್ನ ಅಪರಾಧವನ್ನು ಒಪ್ಪಿಕೊಂಡರೆ ನಿನಗೇ ಒಳಿತು.

ಬೆಂಜಮಿನ್ ಮೊಲಾಯಿಸ್     ನಾನು ಯಾವ ಅಪರಾಧವನ್ನು ಮಾಡಿಲ್ಲ.

ಜಡ್ಜ್            ಅಪರಾಧ ಸಾಬೀತಾಗಿದೆ. ನಿನಗೆ ಮರಣದಂಡನೆಯನ್ನು ಕೂಡ ವಿಧಿಸಬಹುದು. ಗೊತ್ತೇ?

ಬೆಂಜಮಿನ್ ಮೊಲಾಯಿಸ್    ನನ್ನ ಉತ್ತರದಲ್ಲಿ ಬದಲಾವಣೆಯೇನೂ ಇಲ್ಲ.

(ಇಡೀ ಕೋರ್ಟು ಸಿಟ್ಟಿನಿಂದ ಉರಿಯುವುದು, ಬೆಂಜಮಿನ್ ಮಾತ್ರ ಮುಗುಳ್ನಗುವನು, ಯಥಾಪ್ರಕಾರ ಬೆಂಜಮಿನ್ ಮೊಲಾಯಿಸ್‌ನನ್ನು ಮಬ್ಬುಗತ್ತಲಿನ ಸೆರೆಮನೆಯ ಕೊಠಡಿಗೆ ದೂಡುವರು, ದಿನಗಳು ಕಳೆಯತೊಡಗುವವು.)


ದೃಶ್ಯ ೪
ಜನರಲ್            ಬೇಡ.. ..ಬೇಡ..

ವಿಲಿಯಂ            ಇಲ್ಲ ಹಾಗೆ ಮಾಡಲಾಗುವುದಿಲ್ಲ

ಜನರಲ್            ನೀನೇನು ಕರಿಯನೋ..?   

ವಿಲಿಯಂ    ಕರಿಯನಲ್ಲ ನಾನು..ಖಂಡಿತ ಕರಿಯನಲ್ಲ. ಆದರೆ..ನೋಡಿ..ಅವನು.. ಆ ಬೆಂಜಮಿನ್ನು.. ಸಣ್ಣ ಸಣ್ಣ ಪದ್ಯ ಬರೆದು ದೊಡ್ಡದಾಗೆ ಹೆಸರು ಮಾಡಿಬಿಟ್ಟಿದಾನೆ..ಗೆಳೆಯರ ಬಳಗ ದೊಡ್ಡದಿದೆ ಅವನದು..

ಜನರಲ್    ಹೇಳಿದಷ್ಟು ಮಾಡು..ಕೇಳಿಸಿತೇ? ಹೇಳಿದಷ್ಟು ಮಾತ್ರ..ಗೊತ್ತಿರುವುದನ್ನೆಲ್ಲ ವರದಿ ಮಾಡಬೇಡ ಜನರೆದುರು..ತಿಳಿಯಿತೇ..?   

ವಿಲಿಯಂ    (ಸ್ವಗತ-ಸುದ್ದಿಗಾರರ ಕರ್ತವ್ಯ ಬಲುಕೆಟ್ಟದ್ದು..ಕೃತಜ್ಞಹೀನದ್ದು..) ಆದರೆ ನೋಡಿ..ಸಾವು ತನ್ನಷ್ಟಕ್ಕೆ ತಾನೆ ಸುದ್ದಿಯಾಗಬಲ್ಲದು..

ಜನರಲ್            ಸಾವು ಘಟಿಸುವವರೆಗು ಸುಮ್ಮನಿರು. ಗದ್ದಲವಾಗುವುದು ಬೇಡ..       

ವಿಲಿಯಂ            ಅಂದರೆ..ತೀರ್ಪು ಆಗಲೆ ಜಾರಿಯಾಗಿದೆ ಹಾಗಾದರೆ..ಬೆಂಜಮಿನ್‌ಗೆ ಗಲ್ಲು?॒

ಜನರಲ್    ನನ್ನ ಮಾತುಗಳನ್ನು ನಿನ್ನ ಬಾಯಿ ಮುಂಚಿತವಾಗಿ ಕದಿಯುವುದು ಬೇಡ. ಸುದ್ದಿಗಳೆಲ್ಲವು ನಿನ್ನ ಸ್ವಂತದ್ದಲ್ಲ..ತಿಳಿ..       

ವಿಲಿಯಂ            ಅವನ ಕವಿತೆಗಳೆ ಸುದ್ದಿ ಹರಡಬಲ್ಲವು..

ಜನರಲ್            ಹಾಂ..ಕವಿತೆ..? (ಸ್ವಗತ ಜೈಲಿನಲ್ಲು ಬರೆದಿರಬಹುದಲ್ಲವೆ?॒ ಹಾಂ..) ಅವುಗಳು ಎಲ್ಲೆಲ್ಲಿದಾವೆ
ತಂದುಕೊಡು..ನೀನೇ ತರಬೇಕು ಸಿಕ್ಕ ತಕ್ಷಣ..       

ವಿಲಿಯಂ    ಸಿಕ್ಕ ತಕ್ಷಣ ಏನ್ಬಂತೂ.. ..ಇ॒ಲ್ಲೆ ಇವೆ ನನ್ನ ಕಿಸೆಯೊಳಗೆ..ಅವುಗಳ ಪ್ರತಿ ಮಾಡಿಸಿ ತಂದೆ ಸಾಧ್ಯವಾದರೆ ಪ್ರಕಟಿಸುವ ಅಂತ....(ತಟ್ಟನೆ ನಾಲಿಗೆ ಕಚ್ಚಿಕೊಳ್ಳುವನು)ಅಯ್ಯೋ ಹೇಳಿಬಿಟ್ಟೆನಲ್ಲಾ..ಥೂ, ಸತ್ಯ ನುಡಿಯುವ ನನ್ನ ನಾಲಿಗೆಯೇ..ನೀನೆ ನನಗೆ ಶತೃ..

ಜನರಲ್    ಪ್ರಕಟಿಸೋದಾ..?ಎಷ್ಟು ದಿನಗಳು ಬದುಕಬೇಕೆಂದು ಲೆಕ್ಕ ಹಾಕಿದ್ದೀಯೇನು.॒? ಕೊಡಿಲ್ಲಿ..ಅದೊಂದು ದಿನ ಬರುತ್ತೆ..ಈ ಕಾವ್ಯಗೀವ್ಯ ಎಲ್ಲ ನಿಷಿದ್ಧವಾಗಿರುತ್ತೆ ನನ್ನ ಕೈ ಕೆಳಗೆ.. ..   

ವಿಲಿಯಂ    (ಸ್ವಗತ) ಮುಗೀತು... ಇವುಗಳ ಕಥೆ ಮುಗೀತು..ಕ್ಷಮಿಸು ಬೆಂಜಮಿನ್.. ಅಯ್ಯೋ.. .. ವಾರ್ತೆಗಳ ಹರಡುವ ಬಾಯಿಗೆ ಮೊದಲ ಉರುಳು ಬೀಳಲಿ...

ಜನರಲ್            ಏನೋ ಅಂದೆಯಲ್ಲ.. ..?           

ವಿಲಿಯಂ            ಏನಿಲ್ಲ.. ..ಏನಿಲ್ಲ.. ..

ಜನರಲ್    ನಿಗ ಇರಲಿ ನಾಲಿಗೆ ಮೇಲೆ.. .. ಬೆಂಜಮಿನ್ ಕುರಿತ ಯಾವ ಸುದ್ದಿಯೂ ನಿನ್ನಿಂದ ಹೊರಹೋಗುವುದು ಬೇಡ.. ..        

ವಿಲಿಯಂ            ಹಾಗೆ ಆಗಲಿ.. ..(ಸ್ವಗತ- ಹೀಗೆ ಹೇಳದೆ ವಿಧಿಯಿಲ್ಲ..)

ಜನರಲ್            ಅಲ್ಲಿಯ ಸುದ್ದಿ.. ..ಅವನ ಗೆಳೆಯರ ಸುದ್ದಿ.. ..ತಕ್ಷಣ ನನಗೆ ಸಿಗಬೇಕು.. ..ತಕ್ಷಣ..

ವಿಲಿಯಂ    ಹಾಗೇ ಆಗಲಿ..ನಾನಿನ್ನು ಬರಲೇ.. ..?( ಸ್ವಗತ-ನನಗೇ ಉಸಿರುಗಟ್ಟುತ್ತಿದೆ ಇಲ್ಲ.. ..ಅವನ ಕವನಗಳಿಗಾಗುವ ಗತಿಯನ್ನು ನೋಡಲಾರೆ..ನೋಡಲಾರೆ..)

ಜನರಲ್    ನಡಿ..ನಿನ್ನ ಈ ಹೊತ್ತಿನ ಕೆಲಸ ನಿಜವಾಗಿ ಮುಗೀತು.. ..

(ವಿಲಿಯಂ ಹೋದಬಳಿಕ ಕವನಗಳ ಹಾಳೆಗಳನ್ನು ಸಿಟ್ಟಿನಿಂದ ನೋಡುತ್ತ ಚೂರುಚೂರಾಗಿ ಹರಿಯುವನು..    ಮುಷ್ಟಿಯಲ್ಲಿ ಉಂಡೆ ಮಾಡುತ್ತಾ..ಕೊನೆಗೆ ಕೆಳಗೆ ಹಾಕಿ ತುಳಿಯುವನು..)

ದೃಶ್ಯ ೫

ಕ್ರಿ ಶ. ೧೯೮೫, ಅಕ್ಟೋಬರ್ ೧೮

ಕೊಠಡಿಯ ಬಾಗಿಲು ತೆರೆದುಕೊಳ್ಳುವುದು. ಪೊಲೀಸರ ಗುಂಪು ಒಳಬರುವುದು. ಮುಖ್ಯಸ್ಥ ಸನ್ನೆ ಮಾಡುವನು. ಒಬ್ಬ ಮುಂದೆ ಬಂದು ಬೂದಿಬಣ್ಣದ ಕಾಗದವನ್ನು ಎದುರಿಗೆ ಹಿಡಿದು,

ಬಿಳಿಯ ಪೊಲೀಸ್    ಬೆಂಜಮಿನ್ ಮೊಲಾಯಿಸ್ ಎಂಬ ಹೆಸರಿನ ದೇಶದ್ರೋಹಿ ಬಂಡಾಯವೇಳುವಂತೆ ಜನರನ್ನು ಕವನಗಳ ಮೂಲಕ ಪ್ರಚೋದಿಸಿದ್ದಲ್ಲದೆ, ಆಡಳಿತದ ನಿಷ್ಠಾವಂತ ಪೊಲೀಸ್ ಫಿಲಿಪ್ಸ್ ಸೆಲಿಪೆಯನ್ನು ಕೊಂದು ಹಾಕಿರುವುದಾ ಸಾಬೀತಾಗಿ, ಬೆಂಜಮಿನ್ ಮೊಲಾಯಿಸ್‌ಗೆ ಗಲ್ಲುಶಿಕ್ಷೆ ವಿಧಿಸಲಾಗಿದೆ. ಊe shouಟಜ be hಚಿಟಿgeಜ ಣiಟಟ ಜeಚಿಣh. ಪರಮಾಧಿಕಾರಿ ಭೋಥಾರ ಸಿಹಿಯೊಂದಿಗೆ ಈ ಆಜ್ಞೆ ಹೊರಡಿಸಲಾಗಿದೆ.

(ಬೆಂಜಮಿನ್ ಮೊಲಾಯಿಸ್ ಒಂದು ಕ್ಷಣ ಸ್ತಬ್ಧನಾಗುವನು. ಅನಂತರ ಮುಗುಳ್ನಗುತ್ತ ಎದ್ದು ನಿಲ್ಲುವನು. ಅಷ್ಟೂ ಜನ ಅಂಗರಕ್ಷಕರಂತೆ ಹಿಂಬಾಲಿಸುವರು. ಕಬ್ಬಣದ ಸರಳುಗಳ ಬಾಗಿಲು ಎದುರಾಗುವುದು. ಅದರಾಚೆಗೆ ನೇಣುಗಂಬದ ಕೋಣೆ! ಬೆಂಜಮಿನ್ ಮೊಲಾಯಿಸ್ ನಿಂತಲ್ಲೇ ನಿಂತು ತಲೆಯೆತ್ತಿ ಸೂರನ್ನು ದಿಟ್ಟಿಸಿ, ಕಣ್ಮುಚ್ಚಿಕೊಂಡು ಪ್ರಾರ್ಥಿಸುವನು.)

ಬೆಂಜಮಿನ್ ಮೊಲಾಯಿಸ್    ನಾನು ಮತ್ತೆ ಆಫ್ರಿಕಾದ ನೀಗ್ರೋನಾಗಿಯೇ ಹುಟ್ಟಬಯಸ್ತೇನೆ. ದೇವರೇ. ಆಗ ಈ ನೆಲ ಸ್ವತಂತ್ರವಾಗಿರಲಿ. ನನ್ನ ಜನರ ಕೈಯಲ್ಲಿ ಆಡಳಿತವಿರಲಿ. ಅವರೆಲ್ಲ ಮನುಷ್ಯರಂತೆ ಬದುಕಲಿ.

(ಮುಗುಳ್ನಗೆಯನ್ನು ಮುಖಕ್ಕೆ ತಂದುಕೊಂಡು ಕೋಣೆಯೊಳಗಡೆ ಕಾಲಿಡುವನು. ಹೊರಗೆ. ನಸುಕಿನ ಸೂರ್ಯ ಮೆಲ್ಲಗೆ ಮೇಲೇರತೊಡಗುವನು.)

ವೇದಿಕೆ ಕತ್ತಲಾಗುವುದು.

   ******************************************************************************************************

ಸುಧಾ ಚಿದಾನಂದಗೌಡ
ಹಗರಿಬೊಮ್ಮನಹಳ್ಳಿ-೫೮೩೨೧೨
ಬಳ್ಳಾರಿ(ಜಿಲ್ಲೆ)

ಶನಿವಾರ, ಅಕ್ಟೋಬರ್ 6, 2012

"ಭೂಮಿ ಮತ್ತು ರಂಗಭೂಮಿ ಎರಡೂ ಅತಂಕದಲ್ಲಿವೆ"- ಚಿದಂಬರರಾವ್ ಜಂಬೆ

(hasirele.blogspot.com) krupe


ನಾಡಿನ ರಂಗಭೂಮಿಯಲ್ಲಿ ಚಿದಂಬರರಾವ್ ಜಂಬೆಯವರ ಕೊಡುಗೆ ಅಪಾರವಾದದ್ದು. ಹೆಗ್ಗೋಡಿನ ನೀನಾಸಂ, ಮೈಸೂರಿನ ರಂಗಾಯಣ ಮತ್ತು ಸಾಣೆಹಳ್ಳಿಯ ಶಿವಸಂಚಾರ ಈ ಮೂರೂ ಪ್ರಮುಖ ರಂಗಶಾಲೆಗಳಲ್ಲಿ ಅತ್ಯಮೂಲ್ಯ ಕೊಡುಗೆ ನೀಡಿರುವ ರಂಗನಿರ್ದೇಶಕ ಮತ್ತು ಚಿಂತಕ ಚಿದಂಬರರಾವ್ ಜಂಬೆಯವರೊಂದಿಗೆ ನಡೆಸಿದ ಮಾತುಕತೆ ಇಲ್ಲಿದೆ. 
(ಚಿತ್ರಗಳು-ಹರ್ಷಕುಮಾರ್ ಕುಗ್ವೆ)

ಆಧುನಿಕ ರಂಗಭೂಮಿಯ ಇಂದಿನ ಟ್ರೆಂಡ್ ಏನಾಗಿದೆ?
ಈ ’ಆಧುನಿಕತೆ’ ಎನ್ನುವುದನ್ನೇ ಆಲೋಚನೆ ಮಾಡಬೇಕಾಗಿದೆ. ಏಕೆಂದರೆ ಇಂದು ಆಧುನಿಕತೆ ಎಂದು ಕರೆಯುವುದು ಕೇವಲ ತಾಂತ್ರಿಕವಾಗಿಯೇ ವಿನಃ ವಸ್ತುಸಂವಿಧಾನದಲ್ಲಿ ಆದಂತಹ ಬದಲಾವಣೆಗಳನ್ನು ಇಟ್ಟುಕೊಂಡು ನಾವು ಆಧುನಿಕತೆಯನ್ನು ನೋಡುತ್ತಿಲ್ಲ. ಈಗ ತಾಂತ್ರಿಕವಾಗಿ ಅಷ್ಟೇನು ಬದಲಾವಣೆಗಳು ಆಗಿಲ್ಲ ಎಂಬುದು ನನ್ನ ಅಭಿಪ್ರಾಯ. ವಸ್ತು ಸಂವಿಧಾನದಲ್ಲಿ ಕೂಡ ಹೇಳಿಕೊಳ್ಳುವಂತಹಾ ಬಹಳಷ್ಟು ಏನೂ ಬಂದಿಲ್ಲ. ಇಂದು ಆಧುನಿಕ ಅಂದರೆ ಜಾಗತಿಕರಣದ ವೇಗದಲ್ಲಿ ಹೋಗುತ್ತಿರುವುದರಿಂದ ಅದನ್ನೇ ಆಧುನಿಕತೆ ಎನ್ನುವ  ಸ್ಥಿತಿಗೆ ನಾವು ಬಂದು ಬಿಟ್ಟಿದ್ದೇವೆ. ವಾಸ್ತವದಲ್ಲಿ ಅದು ಆಧುನಿಕತೆಯಲ್ಲ. ಅದರ ಹೊರತಾಗಿ ಜಾಗತಿಕರಣವನ್ನು ನಿರಾಕರಣೆ ಮಾಡುವಂತಾದ್ದು ಅಥವಾ ಆ ವೇಗಕ್ಕೆ ಸಿಲುಕಿಕೊಳ್ಳದೇ ಇರುವ ಯಾವುದಾದರೂ ಒಂದು ಮಾರ್ಗವಿದ್ದರೆ  ಅದನ್ನ ನಾವು ಆಧುನಿಕತೆ ಎಂದು ಕರೆಯಬಹುದು.

ನಮ್ಮ ಪಾರಂಪರಿಕವಾದ ರಂಗಭೂಮಿಗೂ ಇಂದಿನ ರಂಗಭೂಮಿಗೂ ಭಿನ್ನತೆಗಳು ಹೇಗೆ ವ್ಯಕ್ತಗೊಂಡಿವೆ?
ನಮ್ಮ ಪಾರಂಪರಿಕವಾಗಿ ಬಂದಂತಹ ರಂಗಭೂಮಿ ಎಷ್ಟೋ ಬಾರಿ ಆಧುನಿಕ ರಂಗಭೂಮಿಯನ್ನು ಮೀರಿ ನಿಲ್ಲುವಂತಹ ಸಂದರ್ಭವನ್ನು ನೋಡುತ್ತೇವೆ. ಉದಾಹರಣೆಗೆ ಭವಭೂತಿಯ ಉತ್ತರ ರಾಮಚರಿತವನ್ನೇ ನೋಡಿ. ಸಮರ್ಥವಾಗಿ ನಮ್ಮ ಸಮಕಾಲೀನ ಯಾವ ನಾಟಕದಲ್ಲಿ ಬರದೇ ಇರುವ ಆಧುನಿಕತೆಯನ್ನ ಭವಭೂತಿ ಹೇಳುತ್ತಾನೆ. ಏಕೆಂದರೆ ಆ ನಾಟಕದಲ್ಲಿ ಅರುಂಧತಿ ಒಬ್ಬ ಸ್ತ್ರೀವಾದಿಯಾಗಿ, ಒಬ್ಬ ಮಹಿಳಾವಾದಿಯಾಗಿ ಕೊನೆಯಲ್ಲಿ ರಾಮನ ಜೊತೆಗೆ ಸೀತೆ ಹೋಗಬೇಕು ಅನ್ನುವ ತೀರ್ಮಾನ ನೀಡುತ್ತಾಳೆ. ಪ್ರಸವ ವೇದನೆ ತಡೆಯಲಾಗದೆ ನೀರಿಗೆ ಹಾರಿ ಬಿಡುವ ಸೀತೆಯನ್ನು ಗಂಗೆ ಮತ್ತು ಭೂಮಿ ಸೇರಿ ಬದುಕಿಸುತ್ತಾರೆ. ಅರುಂಧತಿ ಬಂದು ಇಡೀ ಅಯೋದ್ಯಾ ಪುರದ ಜನರನ್ನ ಕರೆಸಿ ನಿಲ್ಲಿಸಿ ದೇವಾನು ದೇವತೆಗಳ ಸಮ್ಮುಖದಲ್ಲಿ ಸೀತೆಯ ಅಗ್ನಿಪರೀಕ್ಷೆಯಾದಮೇಲೆ ಮತ್ತೆ ಮತ್ತೆ ಅನುಮಾನವುದೇನಿದೆ? ಇನ್ನೊಂದು ಹೆಣ್ಣಿನ ಮೇಲೆ ಅನುಮಾನ ಪಡುವಂತಾ ಮನೋಭಾವ ಬಹಳ ಅಶ್ಲೀಲವಾದದ್ದು. ಅದಕ್ಕೆ ನಾನು ಹೇಳುತ್ತಿದ್ದೇನೆ ಶ್ರೀರಾಮ ಸೀತೆಯನ್ನ ಕರೆದೊಯ್ಯಬೇಕು ಎಂದು. ನೀವೇನು ಹೇಳುತ್ತೀರಿ? ಎಂದು ಕೇಳುತ್ತಾಳೆ. ಅಯೋದ್ಯಾ ಪುರ ಜನರೆಲ್ಲಾ ಬಂದು ಸೀತಾ ದೇವಿಯ ಕಾಲಿಗೆ ಬೀಳ್ತಾರೆ. ಇದು ವಾಲ್ಮೀಕಿ ರಾಮಾಯಣ ಅಲ್ಲ ಆದ್ರೆ ಭವಭೂತಿ ಸೃಷ್ಟಿಸಿದ ರಾಮಾಯಣ ಇದು. ಈ ನಾಟಕ ಸುಮಾರು ೬-೭ ನೇ ಶತಮಾನದಲ್ಲಿ ಬರೆದಂತಹ ನಾಟಕ. ಆದರೆ ಅದು ಇವತ್ತಿಗೂ ಕೂಡ ಅದು ಯಾವ ಆಧುನಿಕತೆಗೂ ಕಮ್ಮಿ ಇಲ್ಲದಂತಹ ನಾಟಕ ಅದು. ಕೆಲವೊಮ್ಮೆ ವಸ್ತುವು ಪೌರಾಣಿಕವಾಗಿದ್ದ ಹೊತ್ತಿಗೂ ಕೂಡ ಅದು ಹೇಳುವಂತಹ ಆಶಯ ಏನಿದೆ ಎಂದು ನೋಡಬೇಕು. ಅದು ತನ್ನ ಕಾಲವನ್ನೂ ಮೀರಿ ಹೇಳುವಂತದ್ದಿರಬಹುದು. ರಂಗನಿರ್ದೇಶಕರಾದ ರಘುನಂದನ ಅವರು ಪ್ರತಿಮಾ ಭಾಸವಿ ನಾಟಕ ಮಾಡಿದ್ದರು. ಅದು ನನಗೆ ಬಹಳ ಇಷ್ಟವಾದ ನಾಟಕ. ಅದು ಅದರಲ್ಲಿ ಭರತ ಶಿಕ್ಷಣಕ್ಕೆ ಹೋಗಿರುತ್ತಾನೆ. ಅಲ್ಲಿಂದ ವಾಪಾಸು ಬರುವಾಗ ಶೂ ಮತ್ತು ಜೀನ್ಸ್ ಪ್ಯಾಂಟ್ ಹಾಕಿಕೊಂಡು ಬರುತ್ತಾನೆ. ಬಂದವನು ಸುಮಂತನ ಬಳಿ ಇವರಿಗೆ ಯಾವ ರೀತಿ ನಮಸ್ಕರಿಸಬೇಕು ಎಂದು ಕೇಳುತ್ತಾನೆ. ಮನೆಗೆ ಬಂದಾಗ ಯಾರಿಗೆ ಹೇಗೆ ನಮಸ್ಕಾರ ಮಾಡಬೇಕು ಎಂದು ಗೊತ್ತಿಲ್ಲದೆ ಇದ್ದರೆ ಶಿಕ್ಷಣ ಏನಾಗಿದೆ ಅನ್ನುವುದನ್ನು ಯೋಚಿಸುವ ರೀತಿ ರಘುನಂದನ್ ಅದನ್ನು ಬಹಳ ಚೆನ್ನಾಗಿ ಮಾಡಿದ್ದರು. 

ಜಾಗತೀಕರಣದಂತಹ ಪ್ರಕ್ರಿಯೆಗಳು ರಂಗಭೂಮಿಯನ್ನು ಪ್ರಭಾವಿಸುತ್ತಿಲ್ಲವೇ?
ಅದು ಕೇವಲ ರಂಗಭೂಮಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ನೋಡಲಾಗುವುದಿಲ್ಲ. ಯಾಕೆಂದರೆ ನಾಟಕ ಮಾಡುವವರೂ ಸಹ ನಮ್ಮಂತಹ ಮನುಷ್ಯ ಜೀವಿಗಳೆ. ಇಂದು ನಾವೆಲ್ಲ ಬದುಕುತ್ತಿರುವ ಸಂದರ್ಭದಲ್ಲಿ ನಮಗೆ ಗೊತ್ತಿಲ್ಲದೆ ಇರುವಂತಹ ರೀತಿಯಲ್ಲಿಯೇ ಈ ಜಾಗತೀಕರಣ ನಮ್ಮನ್ನು ಎಳೆದುಕೊಂಡು ಹೋಗುತ್ತಿರುತ್ತದೆ. ನಮ್ಮ ಶತ್ರುಗಳು ಎದುರುಗಡೆ ಇದ್ದಾಗ ನಾವು ನೇರವಾಗಿ ಹೋರಾಟ ನಡೆಸಬಹುದು ಆದರೆ ಅದು ಅಘೋಷಿತವಾಗಿದ್ದಾಗ ಹೋರಾಟ ಮಾಡುವುದಕ್ಕೂ ಗೊತ್ತಾಗುವುದಿಲ್ಲ. ಎಲ್ಲಿಗೆ ಎಂದು ಬಾಣ ಬಿಡುವುದು? ಈ ತರದ ಒಂದು ಗೊಂದಲದಲ್ಲಿ ನಾವಿದ್ದೇವೆ. ಹಾಗಾಗಿ ರಂಗಭೂಮಿ ಒಂದೇ ಅಲ್ಲ ಭೂಮಿ ಮತ್ತು ರಂಗಭೂಮಿ ಎರಡೂ ಅತಂಕದಲ್ಲಿದೆ. ಭೂಮಿ ಅಂದರೆ ನಾನು ಕೃಷಿ ಸಂಸ್ಕೃತಿ. ಕೃಷಿಗೂ ಮತ್ತು ಸಂಸ್ಕೃತಿಗೂ ಭಾಳ ದೊಡ್ಡ ಸಂಬಂಧ ಇದೆ. ಕೃಷಿ ಇಲ್ದೇ ಇರ್ತಿದ್ರೆ ಸಂಸ್ಕೃತಿ ಏನಾಗ್ತಿತ್ತು ಯಾವ ರೀತಿ ಬೆಳಿತಿತ್ತೊ ಗೊತ್ತಿಲ್ಲ. ಕೃಷಿಗೂ ಮತ್ತು ಭೂಮಿಗೂ ಭಾಳ ದೊಡ್ಡ ಸಂಬಂಧ ಇದೆ. ಈ ಅಗ್ರಿಕಲ್ಚರ್‌ಗೆ ಬರುವ ರೋಗಗಳೆವೂ ಕಲ್ಚರ್‌ಗೆ ಬಂದಿವೆ. ಕೃಷಿಗೆ ಮತ್ತು ಭೂಮಿಗೆ ಇರುವಂತಹ ಎಲ್ಲಾ ಆತಂಕ ತಲ್ಲಣಗಳು ನಮ್ಮ ಈ ರಂಗಭೂಮಿಯಲ್ಲೂ ಇವೆ. 
ಹಿಂದೆ ವೃತ್ತಿರಂಗಭೂಮಿ ಮತ್ತು ಹವ್ಯಾಸಿ ರಂಗಭೂಮಿ ಎಂದು ಭಿನ್ನತೆ ಇದ್ದಂತೆ ಇಂದು ರಂಗಭೂಮಿಯಲ್ಲಿ ವೃತ್ತಿಪರರು ಮತ್ತು ಹವ್ಯಾಸಿಗಳ ನಡುವೆ ಭಿನ್ನತೆ ಉಂಟಾಗಿದ್ದು ಶ್ರೇಷ್ಠತೆಯ ಪ್ರಶ್ನೆ ಅಂತರಂಗದಲ್ಲಿದೆ ಎನ್ನಿಸುತ್ತದೆ. ಎನು ಹೇಳುತ್ತೀರಿ? 
ಇದು ಶ್ರೇಷ್ಠತೆಯ ಪ್ರಶ್ನೆ ಅಲ್ಲ. ಇಂದು ರಂಗಭೂಮಿಯನ್ನೇ ಪೂರ್ಣವಾಗಿ ನಂಬಿಕೊಂಡು ಕೆಲಸ ಮಾಡುತ್ತೇವೆಂದರೆ  ಅದರಿಂದ ಊಟ ಮಾಡಲು ಸಾಧ್ಯವಿಲ್ಲ. ಏಕೆಂದರೆ ಆ ರೀತಿಯಲ್ಲಿ ರಂಗಭೂಮಿ ಬೆಳೆಯಲೇ ಇಲ್ಲ.  ಅಷ್ಟೇ ವರ್ಷಗಳಲ್ಲಿ ಕೆಲಸ ಮಾಡಿದ ಬೇರೆ ಯಾವುದೇ ಕ್ಷೇತ್ರವಾದರೆ ಅವರು ಎಷ್ಟೋ ದುಡಿದು ಸಂಪಾದನೆ ಮಾಡಬಹುದು. ೩೦-೩೫ ವರ್ಷ ರಂಗಭೂಮಿಲಿ ಕೆಲಸ ಮಾಡಿದರೂ ಸಹ ಬದುಕಲು ಅವರು ಬಹಳ ಕಷ್ಟಪಡಬೇಕಾಗಿದೆ. ಬಸವಣ್ಣನವರು ಹೇಳಿದಾರೆ ಕಾಯಕವೇ ಕೈಲಾಸ ಅಂತ, ಕೈಲಾಸ ಸೇರೋವರೆಗೂ ನಾವು ಕಾಯಕವೇ ಮಾಡ್ತಿರೋದು ಅಂತ. ರಂಗ ಭೂಮಿಗೆ ಹೇಳಿ ಮಾಡಿಸಿದ ಮಾತಿದು. ಕೃಷಿಗೂ ಅಷ್ಟೇ ಸರಿಹೊಂದುವ ಮಾತಿದು. ರಂಗಭೂಮಿಯಲ್ಲಿ ಮಧ್ಯವರ್ತಿಗಳಾಗಿ ಕೆಲಸ ಮಾಡುವವರ ಅವರ ವಿಷಯ ಬೇರೆ. ಅವರ ಬಗ್ಗೆ ನಾನು ಹೇಳಲು ಹೋಗುವುದಿಲ್ಲ. ಆದರೆ ಯಾರು ರಂಗಭೂಮಿಯನ್ನು ನಿಜವಾಗಿ ಅಪ್ಪಿಕೊಂಡು ಕೆಲಸ ಮಾಡ್ತಿದಾರೋ ಅವರು ಬಹಳ ಏನೂ ಸಂಪಾದನೆ ಮಾಡಲಾಗುವುದಿಲ್ಲ. ಆದರೆ ಬಹಳ ಪ್ರೀತಿಯಿಂದ ಕೆಲಸ ಮಾಡುವ ಅವರಿಗೆ ಅವರಿಗೆ ಅದೇ ಜೀವ ಆಗಿರುತ್ತದೆ. ಇಷ್ಟೂ ವರ್ಷಗಳಲ್ಲಿ ರಂಗಭೂಮಿಯನ್ನು ಬಿಟ್ಟು ಬೇರೇನೂ ಮಾಡಿಲ್ಲ ನಾನು. ಈಗ ಬೇರೆ ಏನಾದರೂ ಮಾಡಬೇಕೆಂದರೂ ಸಾಧ್ಯವಿಲ್ಲ. ಇಲ್ಲೇ ಇದ್ದು ಮಾಡಬೇಕಿರುವುದು ಅನಿವಾರ್ಯ. ಇದರಲ್ಲೇ ಹೋಗಬೇಕು, ಇದರಲ್ಲೇ ಮುಕ್ತಿ ಕಾಣ ಬೇಕಾಗಿದೆ ಅಷ್ಟೆ,
ದೃಶ್ಯ ಮಾಧ್ಯಮಗಳ ಪ್ರವೇಶ ರಂಗಭೂಮಿಗೆ ಪೆಟ್ಟು ನೀಡಿದೆ ಎನ್ನಿಸುವುದಿಲ್ಲವೆ? 
ಇಲ್ಲ ನಾನು ಈ ಸಿನಿಮಾ ಮತ್ತು ಕಿರುತೆರೆಗಳನ್ನು ರಂಗಭೂಮಿಗೆ ಒಂದು ಸವಾಲು ಎಂದು ನಾನು ಯಾವತ್ತಿಗೂ ಹೇಳುವುದಿಲ್ಲ. ಅದರಲ್ಲಿ ಒಂದು ಗ್ಲಾಮರ್ರೇ ಬೇರೆ ಇದೆ.

ರಂಗಭೂಮಿಯ ಅನೇಕ ಪ್ರತಿಭೆಗಳು ಕಿರುತೆರೆಯಲ್ಲಿ ನೆಲೆಕಂಡುಕೊಳ್ಳುತ್ತಿದ್ದಾರಲ್ಲ? 
ಅದನ್ನು ನಾನು ಒಪ್ತೇನೆ. ಅದು ಇಲ್ಲಿ ಬದುಕುವುದು ಕಷ್ಟವಾದ ಕಾರಣ ಬದುಕಿನ ಅನಿವಾರ್ಯತೆಗಳ ಕಾರಣದಿಂದ ಅಲ್ಲಿಗೆ ಹೋಗಬೇಕಾಗಿದೆ ಎನ್ನಬಹುದು. ಅದರರ್ಥ ಜನರು ರಂಗಭೂಮಿಯನ್ನು ನಿರಾಕರಣೆ ಮಾಡಿದಾರೆ ಎಂದಲ್ಲ.  ಏಕೆಂದರೆ ಇದು ಜೀವಂತ ಪ್ರದರ್ಶನ. ನಾವೂ ನೀವೂ ಹೇಗೆ ಕುಳಿತುಕೊಂಡು ಮಾತನಾಡುತ್ತಿದ್ದೇವೋ ಹಾಗೆ ರಂಗಭೂಮಿ ಎಂಬುದು ಆ ಊರಿನ ಆ ಕ್ಷಣದಲ್ಲಿ ಸಂಭವಿಸುವ ಘಟನೆ ಅದು ಆ ಒಂದು ಸಮುದಾಯ ಮತ್ತು ಈ ನಟರು ಸೇರಿ ಹುಟ್ಟುವ ಅನುಭವ ಅದು. ಹಾಗಾಗಿ ಜನ ಯಾವತ್ತೂ ಕೂಡ ಒಂದು ಜೀವಂತ ಅನುಭವಕ್ಕಾಗಿ ತಮ್ಮನ್ನು ತೆರೆದುಕೊಳ್ಳುತ್ತಾರೆ. ಆ ಜೀವಂತ ಅನುಭವ ಬೇಕು ಎನ್ನವ ಒಂದು ಸಮುದಾಯ ಎಲ್ಲಿಯವರೆಗೂ ಇರುತ್ತದೆಯೋ ಅಲ್ಲ್ಲಿಯವರೆಗೆ ಈ ರಂಗಭೂಮಿಯಂತಹ ಮಾದ್ಯಮಗಳಿಗೆ ಸೋಲಿಲ್ಲ. ಈಗ ಕಿರುತೆರೆಯೂ ಸೋಲುತ್ತಿದೆ. ಜನರು ನೋಡಿ ನೋಡಿ ಸುಸ್ತಾಗಿಬಿಟ್ಟಿದ್ದಾರೆ. ಸಿನಿಮಾಗಳವರೂ ಕೂಡ ಪಾಪ, ಎಲ್ಲರೂ ಕೂಡ ಅಷ್ಟೇ ಕಷ್ಟದಲ್ಲಿರ‍್ತಾರೆ. ಈ ಯಕ್ಷಗಾನ ಕಲೆ ಇದೆಯಲ್ಲ, ಅದೂ ಕೂಡ ಕಷ್ಟದಲ್ಲಿದೆ ಆದರೂ ಕೂಡ ಅವರು ಆರು ತಿಂಗಳುಗಳ ಕಾಲ ಸತತವಾಗಿ ಪ್ರದರ್ಶನ ನೀಡಿ ಪ್ರೇಕ್ಷಕರ ಗಮನ ಸೆಳೆಯೋ ರೀತಿ ಕಂಡರೆ ಆಶ್ಚರ‍್ಯವಾಗುತ್ತದೆ. ಜಾಗತೀಕರಣದ ಪ್ರಭಾವದ ನಡುವೆಯೂ ಈ ಜನ ತಮ್ಮ ಕಲೆಯನ್ನು ನಂಬಿಕೊಂಡು ಬದುಕುತ್ತಿದ್ದಾರೆ. ಆದ್ರೆ ಈ ರೀತಿಯ ಕಲೆಯನ್ನು ನಂಬಿಕೊಂಡು ಬಂದ ಜನ ಎಷ್ಟೇ ವರ್ಷ ಕಲೆಗಾಗಿ ತಮ್ಮನ್ನು ಮುಡಿಪಾಗಿಟ್ಟರೂ ಕೂಡ ಕೊನೆಗೂ ಅದರಲ್ಲಿರುವವನು ಒಬ್ಬ ಕಲಾವಿದನಾಗಿಯೇ ಉಳಿಯುತ್ತಾನೆ. ಗಣ್ಯ ವ್ಯಕ್ತಿ ಎಂಬ ಪಟ್ಟ ಇತರೆ ಬೇರೆ ಕ್ಷೇತ್ರದಲ್ಲಿ ಅಲ್ಪಾವಧಿಯಲ್ಲಿ ದುಡಿದವರಿಗೆ ಸಿಗುತ್ತದೆ. ಆದರೆ ನಮ್ಮ ಕಲಾವಿದರು ಅದನ್ನು ಕಡೆಗಣಿಸಿ ತಮ್ಮ ಕಲೆಯನ್ನೇ ಸರ್ವಸ್ವ ಅನ್ನುವ ರೀತಿಯಲ್ಲಿ ನಡೆಸಿಕೊಂಡು ಹೋಗುತ್ತಿದ್ದಾರೆ. ಕಲೆಗಾಗಿ ಜೀವನಾನ ಮುಡಿಪಾಗಿಸಿಟ್ಟಿದ್ದಾರೆ. ನಾವು ಆದರ್ಶವನ್ನು ಹೇಳುವುದು ಎಷ್ಟು ಸುಲಭವೋ ಅದನ್ನು ಅನುಸರಿಸುವುದು ಅಷ್ಟೇ ತ್ರಾಸದಾಯಕವಾದ್ದು. ಕಲೆಗಾಗಿ ದುಡಿಯುತ್ತಿರುವವರನ್ನು ಗುರುತಿಸಿ ಅವರ ಜೀವನದ ಸುಭದ್ರತೆಗೆ ಏನಾದರೊಂದು ಪರ್ಯಾಯ ವ್ಯವಸ್ಥೆಯಾಗಬೇಕಾಗಿದೆ. ಕನ್ನಡ ಸಂಸ್ಕೃತಿ ಇಲಾಖೆಯಂತಹ ಘಟಕಗಳು ಈ ದಿಸೆಯಲ್ಲಿ ಯಾವತ್ತೂ ಚಿಂತನೆಯನ್ನೇ ಮಾಡಿಲ್ಲ. ರಂಗಸಂಸ್ಕೃತಿಯನ್ನು ಕಟ್ಟುವ ರೀತಿಯಲ್ಲಿ ರಂಗಾಯಣದಂತಹ ಅನೇಕ ರಂಗಸಂಸ್ಥೆಗಳಿವೆ ಅವುಗಳ ಉದ್ಧಾರವಾಗಬೇಕಿದೆ. 

ನಿಮಗೆ ರಂಗಭೂಮಿಯೊಂದಿಗೆ ನಂಟು ಬೆಳೆದಿದ್ದು ಹೇಗೆ? 
ನನ್ನ ವಿದ್ಯಾಭ್ಯಾಸ ಮುಗಿದ ಮೇಲೆ ಹೆಗ್ಗೋಡಿನ ಕೆ.ವಿ.ಸುಬ್ಬಣ್ಣನವರ ಸುದೈವದಲ್ಲಿ ಕೆಲಸ ಮಾಡುವ ಅವಕಾಶ ಲಭಿಸಿತು. ಅವರೊಂದಿಗೆ ಸಂಸ್ಥೆ ಕಟ್ಟುವ ಸುದೈವ ಸಿಕ್ಕು ಆ ಮೂಲಕ ನನಗೆ ಬಹಳಷ್ಟು ಅನುಭವ ಸಿಕ್ಕಿತು. ೨೨ ವರ್ಷಗಳಲ್ಲಿ ಸುಬ್ಬಣ್ಣ ನಮ್ಮ ಆಸರೆಯ ಸೂರಿನಂತಿದ್ದರು. ನಂತರ ರಂಗಾಯಣದಂತಹ ಸಾರ್ವಜನಿಕ ಸಂಸ್ಥೆಗೆ ಬಂದಾಗ ಜವಾಬ್ದಾರಿಗಳು ಬದಲಾದವು. ಖಾಸಗಿ ಸಂಸ್ಥೆಯಲ್ಲಿ ದುಡಿಯುತ್ತಿದ್ದ ನಾವು ಸಾರ್ವಜನಿಕ ಸಂಸ್ಥೆಗೆ ಬಂದಾಗ ಬಹಳಷ್ಟು ಬದಲಾವಣೆಗಳಾದವು. ಜನರೊಂದಿಗೆ ನೇರವಾದ ಸಂಪರ್ಕ ಸರ್ಕಾರದೊಂದಿಗೆ ಗುದ್ದಾಟ, ಕಲಾವಿದರೊಂದಿಗೆ ಒಡನಾಟ ಬೆದು ಒಂದು ದೊಡ್ಡ ಅನುಭವ ಸಿಕ್ಕಿತು. ಮುಂದೆ ನನಗೆ ರಂಗಾಯಣದ ಅವಧಿ ಮುಗಿಸಿದಾಗ ಸಾಣೆಹಳ್ಳಿಯ ಪಂಡಿತರಾಧ್ಯ ಸ್ವಾಮಿಗಳು ನನ್ನನ್ನು ಕರೆದು ರಂಗಶಾಲೆ ಕಟ್ಟುವ ಬಗ್ಗೆ ಮಾತಾಡಿದರು. ಆಗ ಆರ್ಥಿಕವಾಗಿ ರಂಗಶಾಲೆ ಸೋತಿರುವುದರ ಬಗ್ಗೆ ಮಾತಾಡಿ, ನಿಮಗೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಸುವ ಅವಕಾಶ ಇದ್ದರೆ ನನಗೆ ಕೆಲಸ ಮಾಡಲು ಸಾಧ್ಯ ಎಂದಾಗ ’ನಾನು ಮಕ್ತವಾಗಿರುತ್ತೇನೆ ನೀವು ಬಂದು ಮಾಡಿ’ ಎಂದರು. ನಂತರ ನನಗೆ ಅದೊಂದು ದೊಡ್ಡ ಸವಾಲಾಗಿತ್ತು. ನಂತರ ಎರಡು ವರ್ಷಗಳು ಅಲ್ಲಿ ಕೆಲಸ ಮಾಡಿದೆ. ಆಗ ರಂಗಶಾಲೆ ಒಂದು ವ್ಯವಸ್ಥೆಗೆ ಬಂದಿತ್ತು. ಮುಂದೆ ರಾಷ್ಟ್ರೀಯ ನಾಟಕ ಶಾಲೆಯಿಂದ ಅವಕಾಶ ಬಂತು. ಆಗ ಸ್ವಾಮಿಗಳಲ್ಲಿ ಹೋಗಲು ಅವಕಾಶ ಮಾಡಿಕೊಡಿ ಅಂದಾಗ ಕಳಿಸಲು ನಿರಾಕರಿಸಿದರು. ಹೀಗೆ ಮೂರು ತರದ ಮೂರು ಸಂಸ್ಥೆಗಳೊಂದಿಗೆ ಒಡನಾಟ ಬೆಳೆಯಿತು. ಅನುಭವವೂ ದೊರೆಯಿತು.
ರಂಗಭೂಮಿಯಿಂದ ನೀವು ಪಡೆದುಕೊಂಡಿರುವುದೇನು?
ಮನುಷ್ಯ ಸಂಬಂಧಗಳನ್ನು ಅರ್ಥಮಾಡಿಕೊಳ್ಳುವ ಸಂವೇದನೆಯನ್ನು, ಪ್ರೀತಿಯನ್ನು, ಮನುಷ್ಯ ಕಾಳಜಿಗಳನ್ನು ರಂಗಭೂಮಿ ನನನಗೆ ಕಟ್ಟಿಕೊಟ್ಟಿದೆ. ಇದು ಬಹಳ ಮುಖ್ಯ. ಅದಕ್ಕಿಂತ ಏನು ಬೇಕು? ಅದನ್ನು ಉಳಿಸಿಕೊಂಡರೆ ಸಾಕು. 

ನಾಡಿನ ಪ್ರಮುಖ ರಂಗಶಾಲೆಗಳನ್ನು ಕಟ್ಟಿಬೆಳೆಸುವಲ್ಲಿ ವಿಶೇಷ ಪಾತ್ರವಹಿಸಿರುವ ನಿಮಗೆ ರಂಗಶಾಲೆಯ ಕುರಿತು ಇದ್ದ ಪರಿಕಲ್ಪನೆಗಳೇನು? 
ಒಂದು ರಂಗಶಾಲೆಯನ್ನು ಕಟ್ಟುವ ಸಂದರ್ಭದಲ್ಲಿ ಅದರ ಪರಿಕಲ್ಪನೆ ಯಾವ ರೀತಿ ಎಂಬುದು ಮುಖ್ಯ. ನಂತರ ಅದನ್ನು ಅನುಷ್ಠಾನಗೊಳಿಸುವ ಅಂಶ. ಹೆಚ್ಚು ಒತ್ತು ನೀಡಿಕೊಂಡು ಶಿಕ್ಷಣದಲ್ಲಿ ರಂಗ ಭೂಮಿಯ ಅಂಶಗಳನ್ನು ಸೇರಿಸುತ್ತಾ ಹೋಗಬೇಕು. ಅದನ್ನು ಒಂದು ವಿಷಯವಾಗಿ ತೆಗೆದುಕೊಂಡಲ್ಲಿ ಬಹಳ ಇಷ್ಟವಾಗುತ್ತದೆ ಹಾಗೂ ಪ್ರಯೋಜನ ಆಗುವಂತಾದ್ದು. ಇದರಿಂದಾಗಿ ಸಮಾಜದ ಜೊತೆಗೆ ನೇರವಾದ ಸಂಪರ್ಕ ಇರುತ್ತದೆ. ಇದರಿಂದ ಅದರೊಂದಿಗೆ ಬರುವ ವಿದ್ಯಾರ್ಥಿಗಳು ಹಾಗೂ ನಾಟಕ ನೋಡುವ ಸಮುದಾಯ ಬೆಳೆಯುತ್ತ ಹೋಗುವ ಕಾರ್ಯ ಆಗಬೇಕು. ಆ ವಿದ್ಯಾರ್ಥಿ ಒಬ್ಬ ನಟನಾಗಿ ಬೆಳೆಯುವ ವಾತಾವರಣ ಸೃಷ್ಟಿಯಾಗಬೇಕು. ಅದನ್ನು ಪರಂಪರೆಯಿಂದ ಕೃಷಿ ಮಾಡಿ ಬೆಳೆಸಬೇಕಾಗುತ್ತದೆ. ಸಾಂಪ್ರದಾಯಿಕ ವ್ಯವಸ್ಥೆಯಲ್ಲಿ ಯಕ್ಷಗಾನ ಕಲಾವಿದರು ತಮ್ಮ ಕಲೆಯನ್ನು ಬೆಳೆಸಿಕೊಳ್ಳುತ್ತಾರೆ. ಆದರೆ ಇಲ್ಲಿ ಆ ಅವಕಾಶ ಕಡಿಮೆ. ಇಲ್ಲಿ ಒಬ್ಬ ನಟ ಬೆಳಕು ನಿರ್ವಹಣೆ, ಪ್ರಸಾದನಗಳಂತಹ ಎಲ್ಲಾ ಕೆಲಸಗಳನ್ನೂ ಮಾಡಬೇಕಾಗುತ್ತದೆ. ಇದರಿಂದ ನಟನೆ ಬೆಳೆಯಲು ಸಾದ್ಯವಿಲ್ಲ. ಆದುದರಿಂದ ಅಭಿನಯ ಪ್ರಯೋಗಶಾಲೆಯಂತಹ ವ್ಯವಸ್ಥೆಯನ್ನು ನೀಡಬೇಕು. ಇದರಿಂದ ನಾವು ಒಬ್ಬ ನಟನನ್ನು ಬೆಳೆಸಲು ಸಾದ್ಯ. ನೀನಾಸಂ ಇರಬಹುದು ಅಥವಾ ಸಾಣೆಹಳ್ಳಿಯ ಶಿವ ಸಂಚಾರ ಇರಬಹುದು. ಅವರೆಲ್ಲಾ ನಟರನ್ನು ಬೆಳೆಸುವ ನಿಟ್ಟಿನಲ್ಲಿ ಬೇರೆ ತರದ ವ್ಯವಸ್ಥೆಯನ್ನು ಕಲ್ಪಿಸಿ ಅವರನ್ನು ಬೆಳೆಸುವ ಪೂರಕ ವಾತಾವರಣವನ್ನು ಸೃಷ್ಟಿ ಮಾಡಿಲ್ಲ. ಈ ವಾತಾವರಣ ಸೃಷ್ಟಿಯಾಗಬೇಕು. 
 
ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ರಂಗಭೂಮಿ ಶಿಕ್ಷಣವನ್ನು ನೀಡು ಪ್ರಯತ್ನವನ್ನು ಸರ್ಕಾರ ಆರಂಭಿಸಿದೆ. ಆದರೆ ಈ ನಿಟ್ಟಿನಲ್ಲಿ ಒಂದು ಪಠ್ಯಕ್ರಮವಾಗಲೀ, ನಾಟಕ ಶಿಕ್ಷಕರ ಪೂರಕ ವಾತಾವರಣಗಳಾಗಲೀ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಶಿಕ್ಷಣದಲ್ಲಿ ನಾಟಕ ಶಿಕ್ಷಣ ಹೇಗೆ ಸಾಧ್ಯ? 
ಸರ್ಕಾರದ ವ್ಯವಸ್ಥೆಯಲ್ಲಿ ಕಲಾವಿದರು ಹೋಗಿ ಸೇರಿದರೆ ತಮ್ಮ ಸಂವೇದನೆಗಳನ್ನು ಕಳೆದುಕೊಂಡುಬಿಡುತ್ತಾರೆ. ಪೂರಕ ವಾತಾವರಣ ಶಾಲೆಗಳಲ್ಲಿ ಇರುವುದಿಲ್ಲ. ಶಾಲಾಶಿಕ್ಷಕರಾಗಿದ್ದ ಬಹಳ ದೊಡ್ಡ ಸಂಗೀತಗಾರರಾದ ಪರಮೇಶ್ವರ್ ಹೆಗ್ಡೆ ರಾಜೀನಾಮೆ ಕೊಟ್ಟ ಹೊರಗಡೆ ಬಂದರು.  ಕಲೆಗೆ ಬೆಲೆ ಸಿಗುದುದೇ ಇದಕ್ಕೆ ಕಾರಣ. ನಾಟಕ ಶಿಕ್ಷಕರು ಶಿಕ್ಷಣದ ಮುಖ್ಯವಾಹಿನಿಯಲ್ಲಿ ಕಾರ್ಯ ನಿರ್ವಹಿಸುವಂತಾಗಬೇಕು. ಅಂದರೆ ಮಕ್ಕಳಲ್ಲಿ ಒಂದು ಸಂವೇದನೆ ಸೃಷ್ಟಿ ಮಾಡುವಂತಹ ಅವಕಾಶವಿರಬೇಕು. ಮಕ್ಕಳು ಎಷ್ಟೆಷ್ಟು ಸಂವೇನಾಶೀಲರಾಗುತ್ತಾರೋ ಅಷ್ಟು ಬೆಳೆಯಲು ಸಾದ್ಯ. ಆದರೆ ನಮ್ಮ ಸರಕಾರದೊಂದಿಗೆ ಗುದ್ದಾಡುವ ಕಾರ್ಯ ಸಾದ್ಯವಿಲ್ಲ. ವ್ಯವಸ್ಥೆಯಲ್ಲಿರುವ ಏರುಪೇರುಗಳಿಂದ  ಕಲೆಗಾರನಿಗೆ ಬೆಳೆಯಲು ಸಾಧ್ಯವಿಲ್ಲದಾಗಿದೆ. ನಮ್ಮ ನಾಟಕದ ಮೇಸ್ಟ್ರು ಅಟೆಂಡರ್ ಅಗಿ ಕೆಲಸ ಮಾಡುವ ಪರಿಸ್ಥಿತಿ ಅಲ್ಲಿದೆ. ಆದರೆ ಶಿಕ್ಷಣದ ಮುಖ್ಯವಾಹಿನಿಯಲ್ಲಿ ಅವರನ್ನು ತೊಡಗುವಂತೆ ಮಾಡಲು ಸಾಧ್ಯವಿದೆ. ನಮ್ಮ ಶಿಕ್ಷಣವ್ಯವಸ್ಥೆಯಲ್ಲಿರುವ ಡ್ರಾಯಿಂಗ್ ಶಿಕ್ಷಕರಿರಲಿ, ಕ್ರಾಫ್ಟ್ ಶಿಕ್ಷಕರಿರಲಿ ಇವರೆಲ್ಲಾ ಸೇರಿ ಮುಖ್ಯವಾಹಿನಿಯೊಂದಿಗೆ ಹೇಗೆ ಕಾರ್ಯನಿರ್ವಹಿಸಿ ಮಕ್ಕಳ ಮನೋವಿಕಾಸಕ್ಕೆ, ಅವರಲ್ಲಿ ಸಂವೇದನೆ ಬೆಳೆಸುವ ನಿಟ್ಟಿನಲ್ಲಿ ಸಹಾಯವಾಗಬದುದೆಂದು ನಾವು ಪ್ರಯೋಗಾತ್ಮಕವಾಗಿ ಕ್ಷೇತ್ರಕಾರ್ಯದಲ್ಲಿ ಮಾಡಿ ತೋರಿಸಿದ್ದೇವೆ. ಹಲವಾರು ನಾಟಕದ ಶಿಕ್ಷಕರು ಈಗಾಗಲೇ ಅದ್ಭುತ ಕೆಲಸಗಳನ್ನು ಮಾಡಿಯೂ ತೋರಿಸಿದ್ದಾರೆ. ಆದರೆ ನಮ್ಮ ಶಿಕ್ಷಣ ವ್ಯವಸ್ಥೆಯ ಅಧಿಕಾರಿಗಳೊಂದಿಗೆ ಒದ್ದಾಡುವುದು ಬಹಳ ಕಷ್ಟವಿದೆ. ವ್ಯವಸ್ಥೆಯೊಳಗಿರುವ ತರತಮ ವ್ಯವಸ್ಥೆಯೂ ಕಲಾವಿದರಿಗೆ ಒಗ್ಗುವುದಿಲ್ಲ. 

ಒಬ್ಬ ರಂಗಕರ್ಮಿಯಾಗಿ ಇಂದಿನ ಸಾಮಾಜಿಕ ರಾಜಕೀಯ ಸಂದರ್ಭದ ಕುರಿತು ಏನು ಹೇಳುತ್ತೀರಿ?
ನಮ್ಮ ಸಂದರ್ಭದ ದುರಂತ ಏನೆಂದರೆ ಇಂದು ಯಾವ ಚಳವಳಿಯನ್ನೂ ಮಾಡಲಾಗದ ಒಂದು ದುಸ್ಥಿತಿ ಇದೆ. ಎಲ್ಲಾ ಚಳವಳಿಗಳನ್ನೂ ಕ್ಯಾಪಿಟಲೈಸ್ ಮಾಡಿಕೊಂಡುಬಿಡಲಾಗುತ್ತಿದೆ. ಕೆಲವೊಮ್ಮೆ ಯೋಚಿಸಿದಾಗ ಈ ಕಾಲದಲ್ಲಿ ಬದುಕಲಿಕ್ಕೇ ಅರ್ಹತೆ ನಮಗೇ ಇಲ್ಲವೇನೋ ಅನ್ನಿಸಿಬಿಡುತ್ತದೆ. ಆದರೂ ಇದೊಂದು ಕಾಲಘಟ್ಟದವರೆಗೆ ಮಾತ್ರ ಅನ್ನಿಸುತ್ತದೆ. ರಾಜಕೀಯದಲ್ಲಿ ವಿಕೇಂದ್ರೀಕರಣ ಬಂದ ಮೇಲೆ ವಿಧಾನಸೌಧದಿಂದ ಗ್ರಾಮಪಂಚಾಯಿತಿ ಮಟ್ಟಕ್ಕೂ ಭ್ರಷ್ಟಾಚಾರ ಮುಂದುವರೆಯಿತು. ಆದರೆ ಜನರು ಇದನ್ನು ಎಲ್ಲಿಯವರೆಗೆ ಸಹಿಸಿಕೊಮಡಿರಲು ಸಾಧ್ಯ. ಇದೆಲ್ಲಾ ಕೊನೆಗೊಳ್ಳಲೇಬೇಕು. 



ಧಾರವಾಡ ಎಂಬ ಸ್ವಾವಲಂಬನೆಯ ಸಾಂಸ್ಕೃತಿಕ ನಗರ

ಉತ್ತರಕರ್ನಾಟಕದ ಸಾಂಸ್ಕೃತಿಕ ಐಕಾನ್ ಧಾರವಾಡ. ದೇಶದ ಹೆಸರಾಂತ ಸಂಗೀತ ವಿದೂಷಿಗಳು, ಪಂಡಿತರು ಧಾರವಾಡ ನೆಲದಲ್ಲಿ ಸಂಗೀತ ಕಛೇರಿ ಕೊಡಲಿಕ್ಕೆ ಕಾಯುತ್ತಾರೆ ಹೇಗೋ ಹಾಗೆಯೇ ನ...