ಶನಿವಾರ, ಅಕ್ಟೋಬರ್ 13, 2012

ಜನಪದದಲ್ಲಿ ಕಲೆ – ಚಿತ್ರಕಲೆ

ಜನಪದ ಚಿತ್ರಕಲೆ


- ಡಾ. ಪ್ರಕಾಶ ಗ. ಖಾಡೆ

ಜಾನಪದ ಎಂಬುದು ಬರೀ ಹಾಡು, ಕುಣಿತವಲ್ಲ. ಅದು ಬದುಕಿನ ಎಲ್ಲ ಮಗ್ಗುಲಗಳನ್ನು ಒಳಗೊಂಡ ವಿಶ್ವವ್ಯಾಪಿ ಅನಾವರಣ. ಜಾನಪದ ಜಗದಗಲ ಮುಗಿಲಗಲ ವ್ಯಾಪಕತೆ ಹೊಂದಿದೆ. ಯಾವ ಮಡಿವಂತಿಕೆ ಇಲ್ಲದೇ ದೇಸಿ ಬದುಕಿನ ಅಕ್ಷಯ ನಿಧಿ ಜಾನಪದ. ಇಂದು ಜಾನಪದ ಬಗೆಗಿನ ಅಧ್ಯಯನ ಕ್ಷೇತ್ರ ವ್ಯಾಪಕಗೊಳ್ಳುತ್ತಿರುವ ಹೊತ್ತಿನಲ್ಲಿ ಆಧುನಿಕ ಸಂದರ್ಭದಲ್ಲೂ ಜಾನಪದದ ಮಹತಿಯ ಅರಿವಾಗುತ್ತಿದೆ. ನೆಲ ಮುಗಿಲ ಸಕಲ ಚರಾಚರ ವಸ್ತುಗಳಲ್ಲೂ ಜಾನಪದವಿದೆ. ಬಹು ಶಿಸ್ತಿನ ಅಧ್ಯಯನ ನೆಲೆಗಳೆಲ್ಲ ಇವತ್ತು ಜಾನಪದದ ನೆಲೆಗಟ್ಟಿನಿಂದ ಆರಂಭವಾಗುತ್ತಿರುವುದು ಜಾನಪದ ಹಿರಿಮೆಯನ್ನು ಸಾರುತ್ತಿದೆ.
ಜನಪದ ಕಲೆಗಳು ಜನಾಂಗದಿಂದ ಜನಾಂಗಕ್ಕೆ ಕೊಡುಗೆಗಳಾಗಿ ಬಂದಿವೆ. ಕೈಗಾರಿಕಾ ಕ್ರಾಂತಿಯಿಂದ ಜನರು ಹಳ್ಳಿಗಳನ್ನು ತೊರೆದು ನಗರದತ್ತ ಮುಖ ಮಾಡಿದಾಗ ಜಾನಪದದ ಅಳಿವು ಆರಂಭವಾಯಿತೆಂದೇ ಭಾವಿಸಲಾಗಿತ್ತು. ಈ ಆತಂಕವನ್ನು ನಮ್ಮ ಪಂಡಿತ ಜನ ಬುಗಿಲೆಬ್ಬಿಸಿ ಜಾನಪದವನ್ನು ಸಂಕುಚಿತವಾಗಿ ಕಾಣುವ ಸಂದರ್ಭ ತಂದಿಟ್ಟರು. ಆದರೆ, ಜಾನಪದವೆಂಬುದು ಸಾಯುವ ಸರಕಲ್ಲ, ಅದು ಪರಂಪರೆಯಿಂದ ಪರಂಪರೆಗೆ ಕಾಲಕ್ಕನುಗುಣವಾಗಿ ಬದಲಾಗುತ್ತ ಹೊಸರೂಪ ತಾಳುತ್ತ ಉಳಿದುಕೊಂಡು ಬಂದಿದೆ. ಬರುತ್ತಿದೆ. ಹೀಗಾಗಿ ಜಾನಪದವು ಗತಕಾಲದ ಪ್ರತಿಧ್ವನಿ ಮಾತ್ರವಲ್ಲ, ಸಮಕಾಲೀನ ಸಂದರ್ಭದ ಸಶಕ್ತ ಧ್ವನಿಯಾಗಿದೆ.
ಜಾನಪದ ಬಳಕೆ ಇಂದು ದ್ವಿಮುಖಿಯಾಗಿದೆ. ಸಹಜ ಮತ್ತು ಕೃತಕ ಜೀವನದ ನಡೆಯಲ್ಲಿ ನಾವು ಜಾನಪದವನ್ನು ಬಳಸಿಕೊಳ್ಳುತ್ತಿದ್ದೇವೆ. ಈ ಕಾರಣವಾಗಿ ಆಧುನಿಕರ ಕೈಯಲ್ಲಿ ಜಾನಪದವೆಂಬದು ಬಳಸಿ ಬೀಸಾಕುವ ಸಂಸ್ಕೃತಿ ಎನ್ನಿಸಿದೆ. ಹಾಡು ಕಟ್ಟುವುದು. ಚಿತ್ರ ಬಿಡಿಸುವುದು, ಗಾದೆ, ಒಗಟು, ಒಡಪು ಹೇಳುವುದು ಎಲ್ಲ ಸಹಜ ಕಲೆಗಳಾದರೆ, ಇವು ಪ್ರದರ್ಶನ ಸಂದರ್ಭದಲ್ಲಿ ವ್ಯಾಪಾರೀಕಣದ ಬಾಹುಗಳಲ್ಲಿ ತುಂಬಾ ಕೃತಕವಾಗಿ ಬಿಡುವ ಅಪಾಯವಿದೆ. ಈ ಹಿನ್ನೆಲೆಯಲ್ಲಿ ಜಾನಪದವನ್ನು ಸಹಜ, ಸರಳ ಹಾಗೂ ತಾಜಾತನದ ಅನುಭವಗಳಿಂದ ಗ್ರಹಿಸಬಲ್ಲ ಮನಸ್ಸುಗಳು ಮಾತ್ರ ಜಾನಪದವನ್ನು ಅರಿಯಬಲ್ಲ ಭೂಮಿಕೆಗಳಾಗಿವೆ.
ಜನಪದ ಚಿತ್ರಕಲೆಗೆ ಪ್ರಾಚೀನ ಕಾಲದ ಇತಿಹಾಸವಿದೆ. ಜನಪದದ ಬಹುಪಾಲು ಕಲೆಗಳಿಗೆ ಲಿಖಿತ ಆಧಾರ ಗುರುತಿಸುವುದು ಕಷ್ಟ. ಮಾನವನ ಬದುಕಿನಲ್ಲಿ ರೇಖೆಗಳ ಬಳಕೆಯೊಂದಿಗೆ ಚಿತ್ರಕಲೆ ಮೊದಲಾಯಿತು. ಭಾಷೆಗೆ ಮುನ್ನ ಸಂಜ್ಞೆಗಳಿದ್ದಂತೆ, ಲಿಪಿಗೆ ಮುನ್ನ ಚಿತ್ರಕಲೆ ಬಳಕೆಯಲ್ಲಿತ್ತು. ಮಾನವನ ಸಂವಹನ ಮಾಧ್ಯಮವಾಗಿ ರೇಖೆಗಳ ಸಂಕೇತಗಳು ಬಳಕೆಯಲ್ಲಿದ್ದವು. ಜಗತ್ತಿನ ಅತ್ಯಂತ ಪ್ರಾಚೀನ ಚಿತ್ರಕಲೆಯ ಕುರುಹುಗಳು ಸ್ಪೇನಿನ ಗುಹೆಗಳಲ್ಲಿ ಹಾಗು ಫ್ರಾನ್ಸಿನ ಡೊರಡೊನ್ ಪ್ರಾಂತ್ಯದ ಲಾಗ್ರೀಜ್ ಎಂಬ ಗವಿಗಳಲ್ಲಿ ದೊರೆತಿವೆ. ಹಾಗೆನೇ ಸುಮಾರು ಇಪ್ಪತ್ತೇಳು ಸಾವಿರ ವರ್ಷಗಳ ಹಿಂದೆ ಅರಿನೇಷಿಯನ್ ನಾಗರಿಕತೆಯ ಕಾಲದಲ್ಲಿ ದೊರೆತ ಮನುಷ್ಯಾಕೃತಿಯ ಚಿತ್ರಗಳೇ ಹಳೇಯವು ಎಂಬ ಅಭಿಪ್ರಾಯವಿದೆ.
ಆದಿ ಮಾನವನ ಬದುಕಿನ ಘಟನಾವಳಿಗಳನ್ನು ಅವರು ಬಿಟ್ಟುಹೋದ ಚಿತ್ರಕಲೆಯಿಂದ ಅರಿಯುತ್ತೇವೆ. ಪ್ರಾಚೀನ ಮಾನವರು ಬಂಡೆ, ಗುಹೆಗಳಷ್ಟೇ ಅಲ್ಲದೇ, ವೃಕ್ಷಗಳ ತೊಗಟೆ, ಚರ್ಮ, ಎಲುಬು, ಕೊಂಬು ಇತ್ಯಾದಿ ವಸ್ತುಗಳ ಮೇಲೆ ಚಿತ್ರ ಬಿಡಿಸುತ್ತಿದ್ದರು. ಇವುಗಳ ಮೇಲೆ ಪ್ರಾಣಿ, ಪಕ್ಷಿ, ಕೃಷಿ, ಯುದ್ಧ, ಮಾಟ ಮಂತ್ರಗಳಿಗೆ ಸಂಬಂಧಿಸಿದ ಚಿತ್ರಗಳನ್ನು ಬಿಡಿಸುತ್ತಿದ್ದರು.
ಭಾರತದ ಪ್ರಾಚೀನ ಚಿತ್ರಕಲೆಯ ಕುರುಹುಗಳು ಕನರ್ಾಟಕದ ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಿನ “ಗೊಂಬಿಗುಡ್ಡ”ದಲ್ಲಿ ಕಾಣುತ್ತೇವೆ. ಪ್ರಾಗೈತಿಹಾಸಿಕ ಕಾಲದ ಈ ಗುಡ್ಡದ ಬಂಡೆಗಳ ಮೇಲಿರುವ ಚಿತ್ರಗಳು ಆ ಕಾಲದವರ ಕಲಾಭಿಜ್ಞತೆಗೆ ಸಾಕ್ಷಿಯಾಗಿವೆ. ಇಲ್ಲಿ ಪಲ್ಲಕ್ಕಿ, ಜಿಂಕೆ, ಆನೆ, ಸಾರಂಗ ಮುಂತಾದ ಪ್ರಾಣಿಗಳ ಒಂಟಿ ಚಿತ್ರಗಳಲ್ಲದೇ, ಒಂಟಿ ಸವಾರರು, ಹೋರಿ ಕಾಳಗ, ಬೇಟೆಯಾಡುವ ಮನುಷ್ಯರು ಈ ಮೊದಲಾದ ಚಿತ್ರಗಳಿವೆ. ಹೀಗೆ ಬಂಡೆಗಳ ಮೇಲೆ ಚಿತ್ರ ಬಿಡಿಸಿದ ನಮ್ಮ ಜನಪದರು ಕಾಲಕ್ರಮದಲ್ಲಿ ಭಿತ್ತಿ ಚಿತ್ರಗಳು, ಹಬ್ಬದ ಸಂದರ್ಭದ ಚಿತ್ರಗಳನ್ನು ಬಿಡಿಸುತ್ತ ಮನೆ, ಮಠ, ದೇವಾಲಯ, ಅರಮನೆಗಳಲ್ಲೂ ಸ್ಥಾನ ಪಡೆದು ಜನಪದ ಚಿತ್ರಕಲೆಗೆ ತುಂಬಾ ವ್ಯಾಪಕವಾದ ಕ್ಯಾನವಾಸ್ ರೂಪಿಸಿದರು.
ಆರಾಧನಾ ಸಂಸ್ಕೃತಿಯೇ ಮೂಲ:
ಜನಪದ ಚಿತ್ರಕಲೆ ಕೇವಲ ಗೃಹಾಲಂಕಾರದ ಚಿತ್ರ ವಿನ್ಯಾಸಕ್ಕೆ ವಸ್ತುವಾಗದೇ ಆರಾಧನಾ ಮೂಲ ಸಂಸ್ಕೃತಿಯಿಂದ ರೂಪಿತವಾದವು. ನಾಗರ ಪಂಚಮಿ, ದೀಪಾವಳಿ, ಯುಗಾದಿ ಮೊದಲಾದ ಹಬ್ಬಗಳ ಸಂದರ್ಭಗಳಲ್ಲಿ ಜನಪದರು ಬಿಡಿಸುವ ಚಿತ್ರಗಳು ಪರಂಪರಾಗತ ಕಲೆಯ ಮುಂದುವರಿಕೆಯಾಗಿವೆ. ಜನಪದರ ಮನೆಯ ಗೋಡೆ, ಮಾಳಿಗೆಗಳಿಗೆ ಮಾಡಿದ ಅಲಂಕರಣ ಚಿತ್ರಗಳು “ಬಿತ್ತಿ ಚಿತ್ರ”ಗಳಾಗಿ ಹೆಸರಾಗಿವೆ. ಕನರ್ಾಟಕದ ಹಿರಿಯೂರು, ಸಿರಾ, ಶ್ರೀರಂಗಪಟ್ಟಣ, ಶ್ರವಣಬೆಳಗೂಳ, ಗುಳೇದಗುಡ್ಡ, ಇಳಕಲ್ಲು ಮೊದಲಾದ ಕಡೆಯ ಬಿತ್ತಿ ಚಿತ್ರಗಳು ತುಂಬಾ ಜನಪ್ರಿಯವಾಗಿವೆ. ರಾಮಾಯಣ, ಮಹಾಭಾರತ ದೃಶ್ಯಗಳು ಶಿವ, ವಿಷ್ಣು ಪರವಾದ ಕಥಾನಕಗಳು ಇಲ್ಲಿ ಚಿತ್ರರೂಪ ಕಂಡಿವೆ.

ಮನೆಗೆ ಸುಣ್ಣ ಹಚ್ಚುವುದು, ಹೊಸ್ತಿಲನ್ನು ಕೆಮ್ಮಣ್ಣಿನಿಂದ ಸಾರಿಸುವುದು. ಅಲ್ಲಲ್ಲಿ ಚಿತ್ರ ಬಿಡಿಸುವುದು ಜನಪದ ಚಿತ್ರಕಲಾ ನೈಪುಣ್ಯಕ್ಕೆ ಸಾಕ್ಷಿಯಾಗಿದೆ. ಮನೆ, ದೇವಾಲಯ ಮೊದಲಾದ ಕಡೆಗಳಲ್ಲಿ ಬಿಡಿಸುವ ರಂಗೋಲಿ ಕಲೆಯು ಜನಪದರ ಗೃಹಾಲಂಕಾರಕ್ಕೆ ಸಂಬಂಧಿಸಿದ ಒಂದು ಮಹತ್ವಪೂರ್ಣ ಚಿತ್ರಕಲೆಯಾಗಿದೆ. ಹೊಸ್ತಿಲು ಮುಂದಿನ ಬೆಳಗಿನ ಬೆಳದಿಂಗಳಾದ ರಂಗೋಲಿಯು ನಮ್ಮ ಹಳ್ಳಿ ಹೆಣ್ಣುಮಕ್ಕಳ ಕಲಾ ನೈಪುಣ್ಯಕ್ಕೆ, ಕಲ್ಪನಾ ಶಕ್ತಿಗೆ ಪ್ರತೀಕವಾಗಿದೆ. ಶಿವರಾಮ ಕಾರಂತರು “ರಂಗೋಲಿ” ಎಂದರೆ ಮನೆಯ ಮುಂದೆ ಬರೆಯುವ ಚಿತ್ರ ಕೆಲಸ ಎಂದಿದ್ದಾರೆ. ಆರನೆಯ ಶತಮಾನದಲ್ಲಿ ಬದುಕಿದ್ದ ಬಾಣಕವಿ ತನ್ನ “ಕಾದಂಬರಿ” ಯಲ್ಲಿ ಸೂತಿಕಾಗೃಹದ ಮುಂದೆ ರಂಗೋಲಿ ಹಾಕುವುದನ್ನು ವಿವರಿಸಿದ್ದಾನೆ. ಶುಭ ಹೆರಿಗೆ, ಬಾಣಂತಿ ರಕ್ಷಣೆಯ ಆಶಯದ ಹಿನ್ನೆಲೆಯಲ್ಲಿ ಈ ಕಲೆಯ ಬಳಕೆ ಕಾಣುತ್ತೇವೆ. ರಂಗೋಲಿಯ ಉಲ್ಲೇಖವು ಜನಪದ ಗೀತೆ, ಕಥೆ, ಒಗಟು, ಒಡಪು, ಗಾದೆಗಳಲ್ಲಿ ಕಾಣುತ್ತೇವೆ.
ಒಡಪು : ಅಂಗಳದಾಗ ರಂಗೋಲಿ ಹಳಕ
ಆಕಾಶದಾಗ ಚಂದ್ರನ ಬೆಳಕ
ನನ್ನ ಜೀವನದಾಗ ನನ್ನ ರಾಯರ ಥಳಕ
ಗಾದೆ : ಆತ ಚಾಪೆ ಕೆಳಗೆ ತೂರಿದರೆ
ನಾನು ರಂಗೋಲಿ ಕೆಳಗೆ ತೂರುತ್ತೇನೆ.
ರಂಗೋಲಿಯು ಭಾರತದ ಪ್ರಾಚೀನ ಜನಪದ ಕಲೆಯಾಗಿದೆ.
ಸೌಂದರ್ಯ ಪ್ರಜ್ಞೆಯ ಜೀವಾಳ:
ಜನಪದ ಚಿತ್ರಕಲೆ ಸೌಂದರ್ಯ ಪ್ರಜ್ಞೆಯ ಜೀವಾಳವಾಗಿದೆ. ಜನ್ಮಜಾತವಾಗಿ ಬಂದ ರೂಪದೊಂದಿಗೆ ಕಲೆಯ ಸೊಬಗನ್ನು ತಮ್ಮ ಮೈಮೇಲೆ ಬಿಡಿಸಕೊಂಡು ಇಮ್ಮಡಿ ಸೌಂದರ್ಯದ ಸಿರಿವಂತಿಕೆಯಿಂದ ನಮ್ಮ ಜನಪದರು ಗುರುತಿಸಿಕೊಳ್ಳುತ್ತಾರೆ. ಇದಕ್ಕೆ ಸಾಕ್ಷಿಯಾಗಿ ಜನಪದ “ಹಚ್ಚೆ” ಚಿತ್ರಕಲೆ ನಮ್ಮ ಕಣ್ಣ ಮುಂದಿದೆ.

ಜನಪದರ ದೃಶ್ಯಕಲೆಗೆ ಸೇರಿದ “ಹಚ್ಚೆ” ವಿಶ್ವದ ಅನೇಕ ಕಡೆಗೆ ಈಗಲೂ ಉಳಿದುಕೊಂಡು ಬಂದಿದೆ. ಹಚ್ಚೆ, ಅಚ್ಚೆ, ಹಂಚೆ, ಹಂಚಿಬಟ್ಟು, ಹಣಚಿ, ಅಣಚಿ, ಅಣ್ಣಿ ಈ ಮೊದಲಾದ ಹೆಸರುಗಳಿಂದ ಈ ಕಲೆಯನ್ನು ಕರೆಯುತ್ತೇವೆ. ಗಿಡಮೂಲಿಕೆಗಳಿಂದ ಸಿದ್ಧಪಡಿಸಿದ ರಸ ದೇಹದ ಮೇಲಿನ ಚಿತ್ರಗಳಿಗೆ ಹಳದಿ ಮಿಶ್ರಿತ ಹಸಿರು ಬಣ್ಣದ ಛಾಯೆಯನ್ನು ಕೊಡುವುದರಿಂದ ಈ ಕಲೆಗೆ ಹಚ್ಚೆ ಎಂದು ಹೆಸರು ಬಂದಿದೆ. ಗರತಿತನದ, ಸೌಭಾಗ್ಯದ ಸಂಕೇತವಾದ ಹಚ್ಚೆಯ ಬಗೆಗೆ ರೂಢಿ ಮಾತೊಂದು ಹೀಗಿದೆ “ಸತ್ತಾಗ ನಮಕೂಟ ಬರುವುದು ಹಚ್ಚೆ, ಬಂಗಾರ, ಬೆಳ್ಳಿ ಯಾವ ಒಡವೆಗಳಲ್ಲ” ನೋಟಕ್ಕೆ ಕಾಣುವ ದೇಹದ ಎಲ್ಲ ಭಾಗಗಳ ಮೇಲೆ ಹಚ್ಚೆ ಹಾಕಿಸಿಕೊಳ್ಳುತ್ತಾರೆ. ಹೂವು, ಚಂದ್ರ, ನಕ್ಷತ್ರ, ಶಿಲುಬೆ, ಕಮಲ, ಚುಕ್ಕೆ, ಶಂಖ, ಮುತ್ತಿನ ಬಳ್ಳಿ, ಒಡವೆ, ಬಾಸಿಂಗ, ನವಿಲು, ಕುದುರೆ, ಬಾಳೆಗಿಡ, ತಾವರೆ ಹೂ, ನಿಂಬೆ ಸಸಿ, ನಂದಿಕೋಲು, ಜೋಗಿ ಜಡೆ, ಸೀತೆ ಸೆರಗು, ಶಿವನ ಬಾಸಿಂಗ, ಹಂಪಿ ತೇರು ಹೀಗೆ ಹಲವು ರೂಪಗಳಲ್ಲಿ ಹಚ್ಚೆ ಚಿತ್ರಗಳನ್ನು ಕಾಣುತ್ತೇವೆ. ಜನಪದ ಗೀತೆಗಳಲ್ಲಿ ಹಚ್ಚೆಯ ಹಾಡುಗಳು ಸಾಕಷ್ಟಿವೆ. ಹಚ್ಚೆ ಕಲಾವಿದರು ಜನಪದ ಗೀತೆಗಳನ್ನು ಹೇಳುತ್ತ ಹಚ್ಚೆ ಹಾಕುತ್ತಾರೆ. ಹಚ್ಚೆ ಉಲ್ಲೇಖದ ಒಂದು ಜನಪದ ಗೀತೆ ಹೀಗಿದೆ.
ಹಂಚಿ ಬೊಟ್ಟಿನ ಕೈಯ ಒತ್ತಿ ಹಿಡಿಯಲು
ಬ್ಯಾಡ, ನನರಾಯ ನೆತ್ತರಿಳಿದಾವ
ಕಿರಿಬಳ್ಳಿ
ಆಧುನಿಕ ಕಾಲದ ಮಹಿಳೆಯರ ಬದಲಾಗುತ್ತಿರುವ ಸೌಂದರ್ಯ ಪ್ರಜ್ಞೆಯ ಆತಂಕಕಾರಿ ಬೆಳವಣಿಗೆಯ ನಡುವೆಯೂ ಅನೇಕ ದೇಶಗಳಲ್ಲಿ “ಹಚ್ಚೆ” ಕಲೆ ಮಾಯವಾಗುತ್ತ ನಡೆದಿದೆ. ಆದರೂ ವಿಶ್ವದ ಹಿರಿಯಣ್ಣನಾದ ಅಮೇರಿಕೆಯೊಂದರಲ್ಲಿಯೇ ಮುನ್ನೂರು ಕೋಟಿ ಜನ ಹಚ್ಚೆ ಕಲೆ ಬಿಡಿಕೊಂಡಿರುವುದು ಈ ಕಲೆಯ ವಿಶ್ವಮಾನ್ಯತೆಯನ್ನು ಸಾರುತ್ತದೆ.

ಕಲೆಯ ಸಿರಿವಂತಿಕೆಯ ಬೆಡಗು :
ಜನಪದ ಚಿತ್ರಕಲೆ ಕಲಾತ್ಮಕತೆಗೆ ಮಿಗಿಲಾದುದು. ಸಹಜತೆ, ಸರಳತೆ ಹಾಗೂ ಮೋಹಕತೆಯಿಂದ ಯಾರನ್ನೂ ಸೆಳೆಯುವಂಥದು. ಜನಪದರ ಮದರಂಗಿ ಕಲೆ ಈ ಬಗೆಯ ಮೋಹಕತೆಯಿಂದ ತನ್ನ ಜನಪ್ರಿಯತೆ ಉಳಿಸಿಕೊಂಡು ಬಂದಿದೆ. ಮದುವೆ ಸಂದರ್ಭದಲ್ಲಿ ಶಾಸ್ತ್ರ ರೂಪವಾಗಿ ಮದರಂಗಿ ಕಲೆಯನ್ನು ಅಂಗೈ ಮತ್ತು ಪಾದಗಳ ಮೇಲೆ ಚಿತ್ರಿಸುವ ಆಚರಣೆ ಜನಪದರಲ್ಲಿ ರೂಢಿಗತವಾಗಿದೆ. ಮದರಂಗಿ ಕಲೆಯಲ್ಲಿ ಹಲವು ಬಗೆಯ ಚಿತ್ತಾರಗಳನ್ನು ಕಾಣುತ್ತೇವೆ. ಮಾನವ, ಪ್ರಾಣಿ, ಪಕ್ಷಿ ಆಕೃತಿಯ ಚಿತ್ರಗಳಿಗಿಂತ ಹೆಚ್ಚಾಗಿ ಬಳ್ಳಿ, ಆಕೃತಿ, ಸುಳುಹುಗಳ ಚಿತ್ರಗಳನ್ನು ಬಿಡಿಸುತ್ತಾರೆ. ಆರಾಧನಾ ಮೂಲ ಸಂಕೇತ ಪ್ರಧಾನ ಆಕೃತಿಗಳಾದ ಸ್ವಸ್ತಿಕ, ಓಂ, ಶ್ರೀ, ಸೂರ್ಯ, ಚಂದ್ರ ಮೊದಲಾದ ಕಲೆ ಕಾಣುತ್ತೇವೆ. ಹೆಣ್ಣು ಮಕ್ಕಳಿಗೆ ಹಬ್ಬದ ಸಂಭ್ರಮದ ಸಂಕೇತವಾಗಿ ಮದರಂಗಿ ಕಲೆ ಉಳಿದುಕೊಂಡು ಬಂದಿದೆ. ಸಣ್ಣ ಸಣ್ಣ ಚುಕ್ಕೆಗಳ ಮೂಲಕ ಹೂವಿನ, ಎಲೆಯ, ಬಳ್ಳಿಗಳ ಚಿತ್ರ ಬಿಡಿಸುತ್ತಾರೆ. ಅಂಗೈ, ಮುಂಗೈಗಳ ಮೇಲೆ ಬಿಡಿಸಿದ ಮದರಂಗಿಯ ಕೆಂಪನೆಯ ಚಿತ್ರಗಳು ಹೆಂಗಳೆಯರ ಸೌಂದರ್ಯವನ್ನು ಇಮ್ಮಡಿಗೊಳಿಸುವುದರ ಜೊತೆಗೆ ಆರೋಗ್ಯ ಮತ್ತು ತಾರುಣ್ಯವನ್ನು ಸಂಕೇತಿಸುತ್ತವೆ. ಮದರಂಗಿ ಕಲೆ ಬಿಡಿಸುವಾಗ ಹೆಣ್ಣುಮಕ್ಕಳು ಸೋಬಾನೆ ಮೊದಲಾದ ಜನಪದ ಗೀತೆಗಳನ್ನು ಹಾಡುತ್ತಾರೆ.
ಹಳೆಯ ಬಟ್ಟೆಗಳನ್ನು ಕಲಾತ್ಮಕವಾಗಿ ಕತ್ತರಿಸಿ, ವಿಶಿಷ್ಟ ಹೆಣಿಕೆಯ ಮೂಲಕ ಮೋಹಕ ಕಲೆಯನ್ನು ಎಳೆಗಳ ಮೂಲಕ ಬಿಡಿಸುವ ಜನಪದರ “ಕೌದಿ ಚಿತ್ರಕಲೆ” ತುಂಬಾ ಪ್ರಾಚೀನವಾದುದು. ಕ್ರಿ.ಶ. ಸುಮಾರು ಎರಡನೆಯ ಶತಮಾನದ ಆಯುವರ್ೇದ ಶಾಸ್ತ್ರ ಕೃತಿ “ಚರಕ ಸಂಹಿತಾ” ಕೌದಿಯನ್ನು ಉಲ್ಲೇಖಿಸುವ ಪ್ರಾಚೀನ ದಾಖಲೆಯಾಗಿದೆ. ನಮ್ಮ ಜನಪದರು ಕೌದಿಯಲ್ಲಿ ವೈವಿದ್ಯತೆಯ ಚಿತ್ತಾರಗಳನ್ನು ಬಿಡಿಸುತ್ತಾರೆ. ಹೀಗಾಗಿ ಕೌದಿಯು ಜನಪದ ಸ್ತ್ರೀಯರ ಸೌಂದರ್ಯ ಪ್ರಜ್ಞೆಯ ಅಭಿವ್ಯಕ್ತಿಯಾಗಿದೆ.
ಕೌದಿಗಳಲ್ಲಿ ನಮ್ಮ ಜನಪದರು ರಾಮಾಯಣ, ಮಹಾಭಾರತ ಪ್ರಸಂಗಗಳ ರಾಮನ ತೊಟ್ಟಿಲು, ಸೀತೆ, ಲವಕುಶ, ಮಾಯಾಮೃಗ, ರಾವಣ, ಹಣಮಂತ, ಪಗಡೆಯಾಟ ಮೊದಲಾದ ಚಿತ್ರಗಳನ್ನು ಐತಿಹಾಸಿಕ ಘಟನೆಗಳಾದ ಉಳುವಿ, ಹಂಪಿ, ಶ್ರೀಶೈಲ ಜಾತ್ರೆಗಳ ತೇರು, ಗುಡಿ, ಸಿದ್ಧಾರೂಢರು, ಶಿವಶರಣರು, ಏಸು, ಬುದ್ಧ, ಮಹಾವೀರ, ಪೈಗಂಬರ ಚಿತ್ರಗಳನ್ನು ಕೌದಿಗಳಲ್ಲಿ ಬಿಡಿಸುತ್ತಾರೆ. ಕೃಷಿಗೆ ಸಂಬಂಧಿಸಿದ ಕೃಷಿ ಸಲಕರಣೆಗಳು, ನಿಸರ್ಗ ಸೌಂದರ್ಯದ ಚಿತ್ರಗಳು, ಪಗಡೆ ಬಜಾರ, ಐದರ ಪಗಡಿ, ನಾಲ್ಕರ ಪಗಡಿ, ಕೊಳಲು, ಭಾವಿ ತೇರು, ಬಾಸಿಂಗ, ದಂಡೆ, ಗೆಳತಿಯರು, ಸೂರ್ಯ, ಚಂದ್ರ, ನಕ್ಷತ್ರ, ನವಿಲು, ಗಿಳಿ, ಆನೆ, ಒಂಟಿ, ಎಲೆಬಳ್ಳಿ, ಬಾಳೆಗೊನೆ, ಗುಬ್ಬಿ ಕಾಲು, ಹಕ್ಕಿಕಾಲು, ಪ್ರಾಣಿಯ ಹೆಜ್ಜೆ, ಸ್ವಸ್ತಿಕ ಮೊದಲಾದ ಚಿತ್ರಗಳು ಕೌದಿಯಲ್ಲಿ ಗ್ರಾಮೀಣರು ಬಿಡಿಸುತ್ತಾರೆ.
ಆಧುನಿಕ ಕಲಾ ಪ್ರಕಾರವಾದ ಕೋಲಾಜ್ದಲ್ಲಿ ಬಣ್ಣದ ಕಾಗದ ಹಾಗೂ ಬೇರೆ ಬೇರೆ ವಸ್ತುಗಳನ್ನು ವಿನ್ಯಾಸಗಳಿಗನುಗುಣವಾಗಿ ಕತ್ತರಿಸಿ ಹಾಳೆಗೆ ಅಂಟಿಸುವ ಮೂಲಕ ಸಾಂಕೇತಿಕ ಚಿತ್ರ ನಿರೂಪಿಸುತ್ತಾರೆ. ಹಾಗೆನೇ ನೇರವಾಗಿ ಬಣ್ಣ, ಕುಂಚ ಬಳಸದೇ ಬಣ್ಣ ಬಣ್ಣದ ಕೌದಿ ತುಂಡು ಬಟ್ಟೆಗಳಿಂದ ಚಿತ್ರ ಬಿಡಿಸುವ ಜನಪದದ ಚಿತ್ರಕಲೆಯು ಆಧುನಿಕ ಕೋಲಾಜ್ ಚಿತ್ರಕಲೆಯ ಹುಟ್ಟಿಗೆ ಕಾರಣವಾಗಿದೆ ಎನ್ನಬಹುದು.
ತುಂಬಾ ಜನಪ್ರಿಯವಾಗಿರುವ ಕಸೂತಿ ಕಲೆಯು ಜನಪದ ಚಿತ್ರಕಲೆಯ ಮತ್ತೊಂದು ಕೊಡುಗೆ. ಬಟ್ಟೆಯ ಮೇಲೆ ಸೂಜಿ ಬಳಸಿ ದಾರಗಳಿಂದ ಬಿಡಿಸುವ ಅಲಂಕಾರಿಕ ಕಲೆಯು ಸೂಜಿಯ ಹುಟ್ಟಿನೊಂದಿಗೆ ಬೆಳೆದು ಬಂದಿದೆ. ಕ್ರಿ.ಶ.ಪೂ. 3000 ದ್ದೆನ್ನಲಾದ ಮೊಹೆಂಜೊದಾರೊದಲ್ಲಿನ ಕಂಚಿನ ಸೂಜಿ ಕಸೂತಿ ಕಲೆಯ ಇತಿಹಾಸವನ್ನು ತುಂಬಾ ಪ್ರಾಚೀನಕ್ಕೆ ಕರೆದೊಯ್ಯುತ್ತದೆ. ನಮ್ಮ ಹಳ್ಳಿಗಳಲ್ಲಿ ಹೆಣ್ಣುಮಕ್ಕಳು ಕಸೂತಿ ಕಲೆಯ ಕುಶಲತೆಯಲ್ಲಿ ತಮ್ಮ ಜಾಣ್ಮೆ ಮೆರೆದಿದ್ದಾರೆ. ಹೂಬಳ್ಳಿಗಳು, ಪಕ್ಷಿಗಳು, ಮನುಷ್ಯನಾಕೃತಿಗಳು, ನಿಸರ್ಗದ ಚಿತ್ರಗಳು, ಪೂಜಾ ಸಲಕರಣೆಗಳು, ಪ್ರೀತಿಯ ಸಂಕೇತಗಳು ಮೊದಲಾದವನ್ನು ಕಸೂತಿ ಕಲೆಯಲ್ಲಿ ಹೆಣಿಕೆ ಮಾಡುತ್ತಾರೆ.
ಜನಪದ ಕಲೆಗೆ ಆಕಾಶದಷ್ಟು ವ್ಯಾಪ್ತಿ, ಸಾಗರದಷ್ಟು ಆಳವಿದೆ. ನಮ್ಮ ಬದುಕಿನ ಎಲ್ಲ ಬಗೆಯ ಸೃಜನಶೀಲ ಸೃಷ್ಠಿಯು ಜನಪದ ಕಲೆಯಾಗಿ ಪರಿಣಮಿಸಿದೆ. ಆರಾಧನಾ ಸಂಸ್ಕೃತಿಯ ಮನೋಭಾವದಿಂದ ಹುಟ್ಟಿಕೊಂಡ ಜನಪದ ಚಿತ್ರಕಲೆಯು ಜನಪದದ ಸೌಂದರ್ಯಪ್ರಜ್ಞೆ, ಕಲಾ ಶ್ರೀಮಂತಿಕೆಗೆ ಸಾಕ್ಷಿಯಾಯಿತು. ಜನಪದ ಚಿತ್ರಕಲೆಯ ಮೂಲಕ ಮಾನವ ಸಂಸ್ಕೃತಿಯು ಕಾಲ ಕ್ರಮೇಣ ಹೇಗೆ ರೂಪಗೊಂಡಿತು ಎಂಬುದನ್ನು ಅರಿಯಲು ಮಹತ್ವಪೂರ್ಣವಾದ ದಾಖಲೆಯಾಗಿ ನಿಲ್ಲುತ್ತದೆ. ಆದರಿಂದು ಆಧುನಿಕ ಸಂದರ್ಭದಲ್ಲಿ ಜನಪದಕ್ಕೆ ಅದರಲ್ಲೂ ಜನಪದ ಚಿತ್ರಕಲೆ ಮರೆಯಾಗುತ್ತಿದೆ. ಚಿತ್ರಕಲೆಯ ಅಳಿಗಾಲದಿಂದ ಪಯರ್ಾಯವಾಗಿ ನಮ್ಮ ಜನಪದರ ಹಾಡು ಸಂಸ್ಕೃತಿ ಅವಸಾನವಾಗುತ್ತಿದೆ. ಅವಿಭಕ್ತ ಕುಟುಂಬ ವ್ಯವಸ್ಥೆ ಛಿದ್ರ ಛಿದ್ರವಾಗಿದೆ. ಆರೋಗ್ಯದಲ್ಲಿ ಆತಂಕ ಸೃಷ್ಠಿಯಾಗಿದೆ. ಧಾಮರ್ಿಕ ಆಚರಣೆಗಳು ಯಾಂತ್ರೀಕೃತವಾಗಿದೆ. ಮನುಷ್ಯ ಮನುಷ್ಯರ ನಂಬುಗೆಗಳು ಕಡಿಮೆಯಾಗಿವೆ. ಕಲೆಯನ್ನು ಪ್ರೀತಿಸುವ ಗೌರವಿಸುವವರ ಸಂಖ್ಯೆ ವಿರಳವಾಗಿದೆ. ಕೈಕುಶಲತೆಗಿಂತ ಯಂತ್ರ ಬಿಡಿಸುವ ಕಲೆಗೆ ಯುವ ಪೀಳಿಗೆ ಮೋಹಿತವಾಗಿದೆ. ಈ ಎಲ್ಲ ಆತಂಕಗಳು ಜನಪದ ಚಿತ್ರಕಲೆಯ ಅವಸಾನಕ್ಕೆ ಮೊದಲಾಗಿವೆ. ಪರಂಪರೆಯ ಜ್ಞಾನವನ್ನು ಆಧುನಿಕತೆಗೆ ಒಗ್ಗಿಸಿಕೊಳ್ಳುವುದಷ್ಟೇ ನಮ್ಮ ಮುಂದಿರುವ ಒಂದು ಪಯರ್ಾಯ ಅವಕಾಶ, ಹೀಗಾಗಿ ಆಧುನಿಕ ಚಿತ್ರ ಕಲಾಕಾರರು ಪರಂಪರೆಯ ಕೊಂಡಿಯಿಂದ ಕಳಚಿಕೊಳ್ಳದೇ ಇದನ್ನು ರೂಢಿಸಿಕೊಳ್ಳುವ ಮೂಲಕ ತಮ್ಮ ಸೃಜನಶೀಲತೆಯ ಹೊಸ ಸೃಷ್ಠಿಯನ್ನು ತೆರೆದಿಡಬೇಕಾಗಿದೆ.

ಕಾಮೆಂಟ್‌ಗಳಿಲ್ಲ:

ಧಾರವಾಡ ಎಂಬ ಸ್ವಾವಲಂಬನೆಯ ಸಾಂಸ್ಕೃತಿಕ ನಗರ

ಉತ್ತರಕರ್ನಾಟಕದ ಸಾಂಸ್ಕೃತಿಕ ಐಕಾನ್ ಧಾರವಾಡ. ದೇಶದ ಹೆಸರಾಂತ ಸಂಗೀತ ವಿದೂಷಿಗಳು, ಪಂಡಿತರು ಧಾರವಾಡ ನೆಲದಲ್ಲಿ ಸಂಗೀತ ಕಛೇರಿ ಕೊಡಲಿಕ್ಕೆ ಕಾಯುತ್ತಾರೆ ಹೇಗೋ ಹಾಗೆಯೇ ನ...