ಗುರುವಾರ, ಸೆಪ್ಟೆಂಬರ್ 27, 2012

ಹೀಗೊಬ್ಬ ಕತ್ತರಿ ಕಲಾ ಮಾಂತ್ರಿಕ, ಸಾಂಝೀ ಕಲೆಯ ಸರದಾರ ಹುಸೈನ್


- ಮೌನೇಶ್
varthabharathi

ಬಣ್ಣ, ಮಣ್ಣು, ಪ್ಲಾಸ್ಟರ್ ಪ್ಯಾರಿಸ್, ಪೈಬರ್ ಹೀಗೆ ಬೇರೆ ಬೇರೆ ವಸ್ತುಗಳಿಂದ ಕಲಾಕೃತಿ ರಚಿಸುವುದನ್ನು ನಾವು ಕಂಡಿದ್ದೇವೆ. ಆದರೆ ಕಾಗದ ಕತ್ತರಿಸಿಯೇ ಅದ್ಭುತ ಕಲಾಕೃತಿಗಳನ್ನು ರೂಪಿಸುವ ಕಲಾವಿದನನ್ನು ನೀವು ಕಂಡಿದ್ದೀರಾ..? ಹಾಗಾದರೆ ಇಲ್ಲಿ ಕೇಳಿ..ಇವರ ಕೈಗೆ ಕತ್ತರಿ ಮತ್ತೊಂದು ಕಾಗದ ಕೊಟ್ಟರೆ ಸಾಕು, ಅದ್ಭುತವನ್ನೇ ಸೃಷ್ಟಿಸಬಲ್ಲರು. ಈ ಕತ್ತರಿ ಮಾಂತ್ರಿಕನ ಹೆಸರು ಎಸ್.ಎಫ್. ಹುಸೈನ್. ಮೂಲತಃ ಮಂಡ್ಯದವರು. ಪ್ರಸ್ತುತ ಬೆಂಗಳೂರಿನಲ್ಲಿ ವಾಸ್ತ ವ್ಯವಿದ್ದಾರೆ. ಇವರಿಗೆ ಅದ್ಯಾವ ಕಲೆ ಸಿದ್ಧಿಸಿ ದೆಯೋ ದೇವರೇ ಬಲ್ಲ. ಆದರೆ ಇವರ ಕೈಯಿಂದ ರೂಪಪಡಕೊಂಡ ಕಲಾಕೃತಿಗಳಂತೂ ಎಂತವರನ್ನೂ ಮರುಳು ಮಾಡಬಲ್ಲದು. ಯಾವುದೇ ಕಾಗದವನ್ನು ತನ್ನದೇ ದೃಷ್ಟಿ ಕೋನದಲ್ಲಿ ಸೂಕ್ಷ್ಮವಾಗಿ ಕತ್ತರಿಸಿ ಇವರಿಂದ ಮೂಡುವ ಮುಖವಾಡ, ಗೊಂಬೆ, ಪ್ರಾಣಿ,ಪಕ್ಷಿ, ರಾಜ-ರಾಣಿಯರ ಕಲಾಕೃತಿಗಳಂತೂ ಕಣ್ಣಿಗೆ ಕಟ್ಟುತ್ತವೆ. ಕಲೆ ಎಲ್ಲರಿಗೂ ಸಿದ್ಧಿಸುವುದಿಲ್ಲ ಎಂಬ ಮಾತೊಂದಿದೆ. ಅದರಲ್ಲೂ ಈ ಕಾಗದವನ್ನು ಕತ್ತರಿಸಿ ಕಲಾಕೃತಿಗಳನ್ನು ರಚಿಸುವ ಮನ ಮೋಹಕ ಸಾಂಝೀ ಕಲೆಯಲ್ಲಿ ಹುಸೈನ್ ಹಿಡಿತ ಸಾಧಿಸಿರುವುದು ನಿಜಕ್ಕೂ ಅವರ ಶ್ರಮಕ್ಕೆ ಸಿಕ್ಕ ಪ್ರತಿಫಲ ಎನ್ನಬಹುದು.ಕೇವಲ ಕಾಗದ ಕತ್ತರಿಸಿ ಕಲಾಕೃತಿ ನಿರ್ಮಿಸು ವುದು ಮಾತ್ರ ಇವರ ಕಾರ್ಯವಲ್ಲ. ಜೊತೆಗೆ ಕಾಗದ ಕಲೆಯ ಕುರಿತಾಗಿ ಇವರು ಸಾಕಷ್ಟು ರೀತಿಯ ಸಂಶೋಧನೆಗಳನ್ನು ತನ್ನದೇ ಹಂತದಲ್ಲಿ ನಡೆಸುತ್ತಾ ಬಂದಿದ್ದಾರೆ.

ಅಪರೂಪದ ಕಲಾವಿದ ಮೈಸೂರು ಹುಸೇನ್...
ಎಸ್.ಎಫ್. ಹುಸೈನ್ (ಸಯ್ಯದ್ ಫಕ್ರುದ್ದೀನ್ ಹುಸೈನ್) ಮೂಲತಃ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಶಿವನ ಸಮುದ್ರ ಎಂಬಲ್ಲಿಯವರು.ಮೈಸೂರಿನಲ್ಲಿಯೇ ವಿದ್ಯಾಭ್ಯಾಸ ಪಡೆದಿರುವ ಇವರು, ಮೈಸೂರು ಹುಸೈನ್ ಎಂದೇ ಹೆಸರು ಪಡೆದವರು. ಮೈಸೂರಿನಲ್ಲಿರುವ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಬ್ಯಾಚುಲರ್ ಆಫ್ ಪೈನ್ ಆರ್ಟ್ಸ್, ವೈಜಯಂತಿ ಕಲಾ ಶಾಲೆಯಲ್ಲಿ ಡಿಪ್ಲೊಮಾ ಇನ್ ಪೈನ್ ಆರ್ಟ್ಸ್, ಆರ್ಟ್ ಮಾಸ್ಟರ್(ಎ.ಎಂ), ಜೆ.ಡಿ. ಹಾಗೂ ಪೈಂಟಿಂಗ್ ಬಿ.ಎಪ್.ಎ. ವ್ಯಾಸಂಗ ಮಾಡಿದ್ದಾರೆ.

ಏನಿದು ಸಾಂಝೀ ಕಲೆ..
ಇದು ಕಳೆದ ಹಲವು ಶತಮಾನ ಗಳಿಂದ ಭಾರತದಲ್ಲಿ ರೂಢಿಯಲ್ಲಿರುವ ಒಂದು ಬಗೆಯ ಜಾನಪದ ಕಲೆ. ಕಾಗದವನ್ನು ಮನಮೋಹಕ ವಿನ್ಯಾಸಗಳಲ್ಲಿ ಕತ್ತರಿಸಿ,ಮದುವೆ ಮೊದಲಾದ ಶುಭ ಕಾರ್ಯಕ್ರಮಗಳಲ್ಲಿ ಅಲಂಕಾರಕ್ಕೆ ಉಪಯೋಗಿಸುತ್ತಾರೆ. ಈ ಕಲೆ ಭಕ್ತಿಯ ಹೆಸರಿನಲ್ಲಿ ಹುಟ್ಟಿಕೊಂಡ ಕಾರಣ ದೇವಾಲಯಗಳ ಅಲಂಕಾರಕ್ಕೂ ಬಳಕೆಯಾಗುತ್ತದೆ. ಸರಳವಾಗಿ ಹೇಳುವುದಾದರೆ ಇದು ಕಲಾತ್ಮಕವಾಗಿ ಕಾಗದವನ್ನು ಕತ್ತರಿಸುವ ಕಲೆ.ಹುಸೈನ್‌ರವರು ಕಳೆದ ಹಲವು ವರ್ಷಗಳ ಕಲಾ ಬದುಕಿನಲ್ಲಿ ಕಂಡುಕೊಂಡಂತೆ, ಈ ಸಾಂಝೀ ಕಲೆ, ರಂಗೋಲಿಗೂ ಆಧಾರವಂತೆ.‘ಸಾಂಝೀ’ ಪದಕ್ಕೆ ಅತ್ಯಂತ ಖಚಿತವಾದ ಮೂಲ ಇದ್ದಂತಿಲ್ಲ. ಅಲಂಕರಣ ಎಂಬರ್ಥದ ‘ಸಜಾವಟ್’ ಅಥವ ‘ಸಜ್ಜಾ’ ಎಂಬ ಪದ ಇದರ ಮೂಲವಿರಬಹುದು.
ಕೆಲವರು ‘ಸಂಧ್ಯಾ’ ಎಂಬ ಸಂಸ್ಕೃತ ಪದವೇ ಇದರ ಮೂಲ ಪದ ಎನ್ನುತ್ತಾರೆ. ಹಿಂದಿಯ ‘ಸಾಂಜ್’ (ಸಾಯಂಕಾಲ) ಸಹಾ ಈ ಶಬ್ದದ ಹುಟ್ಟಿಗೆ ಕಾರಣ ಇರಬಹುದು. ಬಹಳ ಹಿಂದೆ ಇದು ಬೆಳೆದು ಬಂದ ಮಥುರಾ ಮತ್ತು ಬೃಂದಾವನದ ಭಾಗಗಳಲ್ಲಿ (ಮುಖ್ಯವಾಗಿ ಬೃಜಭಾಷೆ ಉಪಯೋಗದಲ್ಲಿದ್ದ ಭಾಗಗಳಲ್ಲಿ) ಸಂಜೆಯ ವೇಳೆಗೆ ದಂಪತಿಗಳು ಮನೆಯ ಬಾಗಿಲು ಅಥವಾ ಜಗಲಿಯಲ್ಲಿ ಕುಳಿತು ಪರಸ್ಪರ ಸಂಭಾಷಿಸುತ್ತ ರಚಿಸುತ್ತಿದ್ದ ಆಕೃತಿಗಳೆಂದು ಇವು ಹೇಳಲಾಗುತ್ತದೆ.
ರಂಗೋಲಿ ರಚನೆಗೂ ಸಾಂಝಿಯೇ ಮೂಲವಾಗಿತ್ತಂತೆ. ಕಾಗದವನ್ನು ವಿವಿಧ ಮಡಿಕೆಗಳನ್ನಾಗಿ ಮಾಡಿ, ಅದನ್ನು ಪ್ರಮಾಣಬದ್ಧವಾಗಿ ಕತ್ತರಿಸಿ ಅದನ್ನು ನೆಲದ ಮೇಲೆ ಹಾಸಿ ಬಣ್ಣ ಬಣ್ಣದ ರಂಗೋಲಿ ಹುಡಿಯನ್ನು ಉದುರಿಸಿ, ಕಾಗದವನ್ನು ನಿಧಾನವಾಗಿ ಮೇಲೆತ್ತಿದರೆ ಸುಂದರ ರಂಗೋಲಿ ತಯಾರಾದಂತೆ.
ಅಂತಹಾ ಸಾಂಝಿ ಕಲೆಯ ಬಗ್ಗೆ ಆಳವಾದ ಅಧ್ಯಯನ ನಡೆಸಿರುವ ಹುಸೈನ್, ಸಾಂಝೀ ಕಲೆಯ ಬಗ್ಗೆ ರಾಜ್ಯಾದ್ಯಂತ ಮಾಹಿತಿ ಪಸರಿಸುವ ಕಾರ್ಯ ನಡೆಸುತ್ತಿದ್ದಾರೆ. ರಾಜ್ಯದ ವಿವಿಧೆಡೆಗಳಲ್ಲಿ ನಡೆದಿರುವ ಇವರ ಕಲಾಕೃತಿಗಳ ಪ್ರದರ್ಶನ ಹಾಗೂ ಸಾಂಝೀ ಕಲಾಶಿಬಿರದ ತರಬೇತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈಗಾಗಲೇ ರಾಜ್ಯ ಹಾಗೂ ರಾಷ್ಟ್ರಮಟ್ಟದ ಹಲವು ಕಲಾಶಿಬಿರಗಳಲ್ಲಿ ಇವರ ಕಲಾಕೃತಿಗಳು ಪ್ರದರ್ಶನಗೊಂಡಿದ್ದು, ನೂರಾರು ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಹಿರಿಮೆ ಇವರದು.
ಪ್ರಾಣಿಗಳ ಮುಖವಾಡ, ಮನುಷ್ಯರ ಮುಖದ ಪ್ರತಿಬಿಂಬ, ಬಗೆಬಗೆಯ ಆಕೃತಿಗಳು, ದೀಪ, ಹಕ್ಕಿಗಳು ಹೀಗೆ ಇವರ ಕೈಯಿಂದ ಮೂಡುವ ಕಲಾಕೃತಿಗಳು ನೋಡುಗರನ್ನಂತೂ ಬೆರಗುಗೊಳಿಸುತ್ತದೆ. ತನ್ನ ಕಲಾ ಪ್ರೌಢಿಮೆಗೆ ಈಗಾಗಲೇ ಹಲವಾರು ಬಿರುದು ಸಮ್ಮಾನಗಳನ್ನು ಪಡೆದಿ ರುವ ಹುಸೈನ್‌ರಿಗೆ ಈ ಕಲೆಯನ್ನು ಮತ್ತೊಬ್ಬರಿಗೆ ಹೇಳಿಕೊಡುವುದರಲ್ಲಿ ಹೆಚ್ಚು ಆಸಕ್ತಿ. ಕಲೆ ಮತ್ತು ಕಲಾವಿದರು ಎಲ್ಲಡೆಯಲ್ಲಿ ಇರಬೇಕು ಎಂದು ಬಯಸುವ ಹುಸೈನ್ ಕರೆದಲ್ಲೆಲ್ಲಾ ಹೋಗಿ ತಮ್ಮ ಕಲಾವಂತಿಕೆಯನ್ನು ಪಸರಿಸುವ ಕಾರ್ಯ ಮಾಡುತ್ತಿದ್ದಾರೆ. ಇವರು ನಿಮ್ಮೂರಿಗೂ ಬರಬೇಕಾ.. ನಿಮ್ಮ ಊರಿನ ಮಕ್ಕಳೊಂದಿಗೆ ಬೆರೆಯಬೇಕಾ.. ಹಾಗಿದ್ದರೆ ತಡ ಯಾಕೆ.. 9845153277 ಈ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಿ.

ಕಾಮೆಂಟ್‌ಗಳಿಲ್ಲ:

ಧಾರವಾಡ ಎಂಬ ಸ್ವಾವಲಂಬನೆಯ ಸಾಂಸ್ಕೃತಿಕ ನಗರ

ಉತ್ತರಕರ್ನಾಟಕದ ಸಾಂಸ್ಕೃತಿಕ ಐಕಾನ್ ಧಾರವಾಡ. ದೇಶದ ಹೆಸರಾಂತ ಸಂಗೀತ ವಿದೂಷಿಗಳು, ಪಂಡಿತರು ಧಾರವಾಡ ನೆಲದಲ್ಲಿ ಸಂಗೀತ ಕಛೇರಿ ಕೊಡಲಿಕ್ಕೆ ಕಾಯುತ್ತಾರೆ ಹೇಗೋ ಹಾಗೆಯೇ ನ...