ಶುಕ್ರವಾರ, ಸೆಪ್ಟೆಂಬರ್ 21, 2012

ಇವಾಳಜ್ಜಿ ಮತ್ತು ಆದಮಜ್ಜನ ರಂಗಪ್ರವೇಶ - ಇಸ್ಮತ್ ಫಜೀರ್

varthabharathi krupe

ಮಂಗಳೂರಿನ ಉತ್ಸಾಹಿ ಯುವ ರಂಗ ಪ್ರತಿಭೆಗಳು ಸೇರಿಕೊಂಡು ಇತ್ತೀಚೆಗೆ ಕಟ್ಟಿದ ‘ಜರ್ನಿ ಥಿಯೇಟರ್ ಗ್ರೂಪ್’ ತನ್ನ ಪಯಣದ ಮೊದಲ ನಡೆಯನ್ನು ‘ಇವಾಳಜ್ಜಿಯೂ ಆದಮಜ್ಜನೂ’ ಎಂಬ ಪ್ರಖರ ಸ್ತ್ರೀವಾದಿ ಚಿಂತನೆಯ ನಾಟಕದ ಮೂಲಕ ಯಶಸ್ವಿಯಾಗಿ ದಾಖಲಿಸಿದೆ. ಸುಮಾರು ಒಂದು ಗಂಟೆಯ ನಾಟಕಕ್ಕೆ ಗಟ್ಟಿ ಕತೆಯೊಂದರ ಬಲವಿಲ್ಲದಿದ್ದಾಗ್ಯೂ ತಾವು ಪ್ರತಿಪಾದಿಸ ಹೊರಟ ಸ್ತ್ರೀ ಸಮಾನತೆ ಮತ್ತು ಮಹಿಳಾ ಸ್ವಾತಂತ್ರದ ಚಿಂತನೆಯನ್ನು ವಿಶಿಷ್ಟ ಶೈಲಿಯ ಸಂಭಾಷಣೆ ಮತ್ತು ಶ್ರೇಷ್ಠ ಗುಣಮಟ್ಟದ ಅಭಿನಯದ ಮೂಲಕ ಯುವರಂಗ ಪ್ರತಿಭೆಗಳಾದ ಮಂಜುಳಾ ಸುಬ್ರಹ್ಮಣ್ಯ ಮತ್ತು ವಿದ್ದು ಉಚ್ಚಿಲ್ ಸಮರ್ಥವಾಗಿ ಮಂಡಿಸಿದ್ದಾರೆ. ನಾಟಕ ಪ್ರಾರಂಭವಾಗಿ ಹತ್ತು ನಿಮಿಷಗಳ ವರೆಗೂ ಈ ನಾಟಕದ ಕಥೆ ಮತ್ತು ಥೀಮ್ ಏನಿರಬಹುದೆಂದು ಪ್ರೇಕ್ಷಕನಿಗೆ ಹೊಳೆಯುವುದೇ ಇಲ್ಲ. ಆದರೂ ಕೂಡಾ ಮಂಜುಳಾ ಸುಬ್ರಹ್ಮಣ್ಯ ಮತ್ತು ವಿದ್ದು ಉಚ್ಚಿಲ್ ತಮ್ಮ ಅಪೂರ್ವ ಶೈಲಿಯ ಸಂಭಾಷಣೆಯ ಮೂಲಕ ಪ್ರಾರಂಭದಿಂದಲೇ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದ್ದಾರೆ.
ಇದೊಂದು ಸ್ತ್ರೀವಾದಿ ಚಿಂತನೆಯ ನಾಟಕವಾದರೂ ಈ ನಾಟಕದ ಶೀರ್ಷಿಕೆಯೂ ಬಹಳ ಅರ್ಥಗರ್ಭಿತ.
ಭೂಮಿಯಲ್ಲಿ ಆದಿಪಿತ ಆದಂ ಮತ್ತು ಆದಿಮಾತೆ ಈವ್ ಮೊಟ್ಟ ಮೊದಲಾಗಿ ಬದುಕು ಕಟ್ಟುವಂತೆಯೇ ಮನುಷ್ಯನ ವಾಸನೆಯೂ ಇಲ್ಲದ ದ್ವೀಪದಲ್ಲಿ ಅವರೀರ್ವರ ಹೊರತಾಗಿ ಬೇರೆ ಮಾನವ ಜೀವವಿರುವುದಿಲ್ಲ. ಈ ನಿಟ್ಟಿನಲ್ಲಿ ‘ಇವಾಳಜ್ಜಿಯೂ ಆದಮಜ್ಜನೂ’ ಶೀರ್ಷಿಕೆ ಅತ್ಯಂತ ಸೂಕ್ತವಾಗಿಯೇ ಇದೆ. ಹೆಣ್ಣಿನ ಒಡಲಾಳದ ಬೇಗುದಿಯನ್ನು ಮನ ಮುಟ್ಟುವಂತೆ ಅಭಿನಯಿಸಿ ಮಂಜುಳಾ ತನ್ನ ಪಾತ್ರ ಕ್ಕೆ ಜೀವ ತುಂಬಿದ್ದಾರೆ. ಆದರೆ ಮನುಷ್ಯ ಸಂಕುಲದ ಬೆಳವಣಿಗೆಯಲ್ಲಿ ಸ್ತ್ರೀ ಕುಲದ ಅಗತ್ಯ ಮತ್ತು ಮಹತ್ವದ ಕುರಿತಂತೆ ನಡೆಯುವ ಸಂಭಾಷಣೆಯಲ್ಲಿ ಸ್ತ್ರೀ ಪಾತ್ರಧಾರಿಯ ಧ್ವನಿಯಲ್ಲಿ ಅಗತ್ಯಕ್ಕಿಂತ ತುಸು ಹೆಚ್ಚಿನ ಏರಿಳಿತವಿತ್ತು.
ಒಂಟಿ ಮಹಿಳೆಯು ಬದುಕನ್ನು ಎದುರಿಸುವ ರೀತಿಯನ್ನು ನಟಿ ಸಮರ್ಥವಾಗಿ ಅಭಿವ್ಯಕ್ತಿಸಿ ತನ್ನ ಪ್ರತಿಪಾದನೆಗೆ ಹೆಚ್ಚಿನ ತೂಕ ನೀಡಿದ್ದಾರೆ. ಇಲ್ಲಿ ಗಂಡಿನ ಪಲಾಯನವಾದ, ಮತ್ತು ಹೆಣ್ಣಿನ ಸ್ಥಾಯಿಭಾವದ ಕುರಿತ ಅಭಿವ್ಯಕ್ತಿ ಯೂ ಸುಂದರವಾಗಿ ಮೂಡಿಬಂದಿದೆ. ನಿರ್ಜನ ದ್ವೀಪದಲ್ಲಿ ಒಂಟಿಯಾಗಿ ಬದುಕು ಸಾಗಿಸುವ ಹೆಣ್ಣು ತನಗೊಂದು ಸಂಗಾತಿ ಸಿಕ್ಕಾಗ ಅಲ್ಲೇ ಮನು ಕುಲದ ಬೆಳವಣಿಗೆಯ ಕುರಿತಂತೆ ಯೋಚಿಸುವುದು ಹೆಣ್ಣಿನ ಸ್ಥಾಯಿ ಭಾವವಾದರೆ, ಮನುಷ್ಯವಾಸವಿಲ್ಲದ ದ್ವೀಪದಿಂದ ಒಮ್ಮೆ ಪಾರಾಗಿ ಹೋಗುವುದು ಹೇಗೆಂಬ ಗಂಡಿನ ಚಿಂತೆಯೇ ಇಲ್ಲಿ ಕಾಣಸಿಗುವ ಪಲಾಯನವಾದ.
ಸ್ತ್ರೀ ಸಮಾನತೆಯ ಕುರಿತ ಸಂಭಾಷಣೆಯಲ್ಲಿ ಕಟುವಾಗಿಯೇ ಮಾತನಾಡುವ ನಟಿ ಅದರ ಮಧ್ಯೆಯೂ ಸ್ತ್ರೀ ಸಹಜವಾದ ವಾತ್ಸಲ್ಯವನ್ನು ಅಭಿವ್ಯಕ್ತಿಸುವಲ್ಲಿ ಯಶ ಕಂಡಿದ್ದಾರೆ. ಸಂಸಾರದ ಬಂಧನದಲ್ಲಿ ಕೂಡುವ ಕುರಿತಂತೆ ಗಂಡಿನ ತವಕವೂ, ತಾಯ್ತನಕ್ಕೆ ತುಡಿಯುವ ಹೆಣ್ಣಿನ ಅಭಿಲಾಷೆಯೂ ಇಲ್ಲಿ ವಿಭಿನ್ನ ರೀತಿಯಲ್ಲಿ ಕಾಣಸಿಗುತ್ತದೆ.
ಒಂಟಿ ಹೆಣ್ಣು ಮುಂದೆ ತನಗೆ ಹುಟ್ಟಲಿರುವ ಮಗು ಹೆಣ್ಣಾಗಲಿ ಎಂದು ಆಶಿಸುವ ಮೂಲಕ ಸ್ತ್ರೀ ಅಬಲೆಯಲ್ಲ ಎನ್ನುವ ತನ್ನ ವಾದವನ್ನು ಮತ್ತೆ ಪುಷ್ಟೀಕರಿಸುತ್ತಾಳೆ. ಇದು ಸ್ತ್ರೀ ಕುಲದ ಅಸ್ತಿತ್ವ ಮತ್ತು ಅಸ್ಮಿತೆಯ ಪ್ರಬಲ ಪ್ರತಿಪಾದನೆಯೂ ಹೌದು. ಅತ್ಯಂತ ಸರಳ ವೇಷಭೂಷಣ ಮತ್ತು ಸರಳ ರಂಗಸಜ್ಜಿಕೆಯ ಮೂಲಕ ಕಡಿಮೆ ಖರ್ಚಿನಲ್ಲಿ ರಂಗಪ್ರದರ್ಶನ ಏರ್ಪಡಿಸಿದ ವಿದ್ದು ಉಚ್ಚಿಲ್‌ರ ಕ್ರಿಯಾಶೀಲತೆ ನಾಟಕದುದ್ದಕ್ಕೂ ಗಮನ ಸೆಳೆಯು ತ್ತದೆ.ಕೆಲವೊಂದು ಇತಿಮಿತಿಗಳಿದ್ದಾಗಿಯೂ ಯುವ ರಂಗ ಪ್ರತಿಭೆಗಳ ಸಮ್ಮಿಲನದ ಈ ನಾಟಕವನ್ನು ಒಂದು ಉತ್ತಮ ನಾಟಕವೆನ್ನಲಡ್ಡಿಯಿಲ್ಲ.

 

ಕಾಮೆಂಟ್‌ಗಳಿಲ್ಲ:

ಧಾರವಾಡ ಎಂಬ ಸ್ವಾವಲಂಬನೆಯ ಸಾಂಸ್ಕೃತಿಕ ನಗರ

ಉತ್ತರಕರ್ನಾಟಕದ ಸಾಂಸ್ಕೃತಿಕ ಐಕಾನ್ ಧಾರವಾಡ. ದೇಶದ ಹೆಸರಾಂತ ಸಂಗೀತ ವಿದೂಷಿಗಳು, ಪಂಡಿತರು ಧಾರವಾಡ ನೆಲದಲ್ಲಿ ಸಂಗೀತ ಕಛೇರಿ ಕೊಡಲಿಕ್ಕೆ ಕಾಯುತ್ತಾರೆ ಹೇಗೋ ಹಾಗೆಯೇ ನ...