ಸೋಮವಾರ, ಏಪ್ರಿಲ್ 9, 2012


ಸಾಂಸ್ಕೃತಿಕ ರಾಯಭಾರಿ ಕರ್ನಾಟಕದ ಗಡಿಭಾಗ ಕೊಳ್ಳೇಗಾಲ ಭಾಗದ ಜನರ ಮನೆಯ ಆರಾಧ್ಯ ದೈವ ಮಂಟೇಸ್ವಾಮಿ ಕುರಿತ ಕಾವ್ಯ, ಅದು ಹೊಂದಿರುವ ಒಳ್ಪು ಇಂದಿಗೂ ಪ್ರಸ್ತುತ. ಭಾನುವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಂಡ ಮಂಟೇಸ್ವಾಮಿ ಕಥಾಪ್ರಸಂಗ ನಾಟಕವು ವಾಸ್ತವ ಬದುಕನ್ನು ಅಕ್ಷರಶಃ ಕನ್ನಡಿಯಂತೆ ಪ್ರತಿಬಿಂಬಿಸಿತು. ಕಾಲ ಬದಲಾದರೂ ಮಾನವನ ಮನೋಭಾವ ಮಿಸುಕಾಡಿಲ್ಲ. ರೂಪ, ಸ್ವರೂಪ ಬೇರೆಯದ್ದು ಅಷ್ಟೆ. ಜನರ ಢಂಬಾಚಾರವನ್ನು ಪರೀಕ್ಷಿಸಿ, ಬದಲಿಸಲು ಯತ್ನಿಸುವ ಒಂದು ರೂಪವಾಗಿ ಕಾಣುವ ಜಂಗಮಯ್ಯ, ಜನರ ಅಪ್ರಬುದ್ಧತೆಯನ್ನು ಎಳೆಎಳೆಯಾಗಿ ಬಿಡಿಸಿಡುತ್ತಾನೆ.
ಮಾನವ ತನ್ನ ಒಳಗಣ್ಣನ್ನು ತೆರೆದು ಸಾಮಾಜಿಕ ಬದುಕಿಗೆ ತೆರೆದುಕೊಳ್ಳುವಂತೆ ನಾಟಕವು ಪ್ರತಿ ಹಂತದಲ್ಲೂ ಸೂಚ್ಯವಾಗಿ ಸಲಹೆ ನೀಡುತ್ತಾ ಹೋಗುತ್ತದೆ. ರಂಗಮಂಟಪದಲ್ಲಿ ಜಂಗಮಯ್ಯನ ಆರ್ಭಟವಂತೂ ಧಾರ್ಮಿಕ ಅಂಧಕಾರದಲ್ಲಿ ಮುಳುಗಿದವರನ್ನು ಬಡಿದೆಬ್ಬಿಸುತ್ತದೆ. ವಯೋವೃದ್ಧನೂ, ಜ್ಞಾನವೃದ್ಧನೂ ಆದ ಜಂಗಮಯ್ಯನು ವೇದಿಕೆಯ ಅಷ್ಟೂ ದಿಕ್ಕುಗಳಲ್ಲಿ ತನ್ನ ಪಾರಮ್ಯ ಮೆರೆಯುತ್ತಾನೆ. ಅವನ ಕುಣಿತ, ನೆಗೆತ, ಆರ್ಭಟ, ಕೂಗಾಟ ಪ್ರೇಕ್ಷಕರನ್ನು ಸ್ಥಂಭೀಭೂತರನ್ನಾಗಿ ಮಾಡುತ್ತದೆ.
ನಾಟಕಕ್ಕೆ ಒಂದು ಚೌಕಟ್ಟು ಹಾಗೂ ತನ್ಮಯತೆ ಮೂಡಿಸಿದ್ದು ಹಿನ್ನೆಲೆ ಗಾಯನ. ಜನಪದ ಗೀತೆಗಳನ್ನು ನಾಟಕಕ್ಕೆ ಅಳವಡಿಸಿ, ಮನದುಂಬಿ ಹಾಡಿ, ಏಕತಾನತೆಯಿಂದ ಬಹುದೂರು ಸಾಗುವಂತೆ ಮಾಡುತ್ತದೆ. ಆ ಗೀತೆಗಳಲ್ಲಿರುವ ಲಾಲಿತ್ಯ ಎಂಥವರನ್ನೂ ತಲೆದೂಗಿಸಿತು. ಪ್ರತಿನಿತ್ಯದ ಗೊಂದಲಗಳಿಂದ ಕೊಂಚ ಬಿಡುಗಡೆ ನೀಡಿ, ಮನವನ್ನು ಮುದಗೊಳಿಸಿದ್ದು ಎಲ್ಲ ಸಹೃದಯರ ಮೊಗದಲ್ಲೂ ಎದ್ದು ಕಾಣುತ್ತಿತ್ತು. ಮಂಟೇಸ್ವಾಮಿ ಕಥಾಪ್ರಸಂಗವು ಸಾಂಸ್ಕೃತಿಕ ರಾಯಭಾರಿ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿತು.

ಕಾಮೆಂಟ್‌ಗಳಿಲ್ಲ:

ಧಾರವಾಡ ಎಂಬ ಸ್ವಾವಲಂಬನೆಯ ಸಾಂಸ್ಕೃತಿಕ ನಗರ

ಉತ್ತರಕರ್ನಾಟಕದ ಸಾಂಸ್ಕೃತಿಕ ಐಕಾನ್ ಧಾರವಾಡ. ದೇಶದ ಹೆಸರಾಂತ ಸಂಗೀತ ವಿದೂಷಿಗಳು, ಪಂಡಿತರು ಧಾರವಾಡ ನೆಲದಲ್ಲಿ ಸಂಗೀತ ಕಛೇರಿ ಕೊಡಲಿಕ್ಕೆ ಕಾಯುತ್ತಾರೆ ಹೇಗೋ ಹಾಗೆಯೇ ನ...