ಮಂಗಳವಾರ, ಸೆಪ್ಟೆಂಬರ್ 10, 2013

ಬದುಕಿಗೆ ಬೆಳಕು ತೋರುವ ‘ಮೆಕ್ಕಾ ದಾರಿ’


ಶಶಿಕಾಂತ ಯಡಹಳ್ಳಿ


ಮ್ಯಾಕ್ಸಿಂ ಗಾರ್ಕಿಯ ತಾಯಿ ಕಾದಂಬರಿ/ನಾಟಕದ ‘ತಾಯಿ’ ಪಾತ್ರದಷ್ಟೇ ಸಶಕ್ತವಾಗಿ ಮೂಡಿ ಬಂದ ಮತ್ತೊಂದು ಪಾತ್ರವೆಂದರೆ ಅಥೋಲ್ ಫುಗಾರ್ಡರ ‘ಮೆಕ್ಕಾ ದಾರಿ’ ನಾಟಕದ ಹೆಲೆನ್ ಪಾತ್ರ. ಮಹಿಳೆಯರ ಶೋಷಣೆಯ ಆಯಾಮಗಳನ್ನು ವಿಭಿನ್ನ ರೀತಿಯಲ್ಲಿ ಅನಾವರಣಗೊಳಿಸುವ ಹೆಲೆನ್ ಪಾತ್ರವು ಸಮಕಾಲೀನ ಅಷ್ಟೇ ಅಲ್ಲಾ ಸಾರ್ವಕಾಲಿಕ ಮಹಿಳಾ ಶೋಷಣೆಯನ್ನು ತೋರಿಸುವಂತಿದೆ. ದೇಶ ಯಾವುದಾದರೇನು ಮಹಿಳೆಯರ ತಳಮಳ ತಲ್ಲಣಗಳಿಗೆ ಕೊನೆಯಿಲ್ಲ, ದಕ್ಷಿಣ ಆಫ್ರಿಕಾ ಮೂಲದ ಈ ನಾಟಕದ ಪ್ರಮುಖ ಪಾತ್ರವಾದ ಹೆಲೆನ್ಳಂತಹ ಮಹಿಳೆಯರು ಇಲ್ಲಿ ನಮ್ಮ ದೇಶದಲ್ಲಿ, ನಮ್ಮ ರಾಜ್ಯದಲ್ಲಿ, ನಮ್ಮ ನಡುವೆಯೇ ಬೇಕಾದಷ್ಟು ಜನ ಸಿಕ್ಕುತ್ತಾರೆ. ಅವರ ನೋವಿನ ನೆಲೆಗಳು ಬೇರೆ ಬೇರೆಯಾಗಿದ್ದರೂ ಶೋಷಣೆಯ ಮೂಲ ಇಡೀ ವ್ಯವಸ್ಥೆಯಲ್ಲಿದೆ. ವರ್ಣಬೇಧ, ಲಿಂಗಬೇಧ, ಧರ್ಮಾಂಧತೆ ಮತ್ತು ಶೋಷಣೆಯನ್ನು ಮನಮುಟ್ಟುವಂತೆ ತೆರೆದಿಡುವ ಒಂದು ಸಾರ್ಥಕ ರಂಗಪ್ರಯೋಗವೇ ಮೆಕ್ಕಾ ದಾರಿ.
ದಕ್ಷಿಣ ಆಫ್ರಿಕಾದ ನೊಬೆಲ್ ಪ್ರಶಸ್ತಿ ಪುರಸ್ಕೃತ ನಾಟಕಕಾರ ಅಥೋಲ್ ಫುಗಾರ್ಡರ ರೋಡ್ ಟು ಮೆಕ್ಕಾ ನಾಟಕವನ್ನು ಹಿರಿಯ ರಂಗಕರ್ಮಿ ಪ್ರಸನ್ನರವರು ಮೆಕ್ಕಾ ದಾರಿ ಹೆಸರಲ್ಲಿ ಭಾವಾನುವಾದ ಮಾಡಿ ‘ತರಿಕಿಟ ಕಲಾ ಕಮ್ಮಟ’ ತಂಡದ ಕಲಾವಿದರಿಗೆ ನಿರ್ದೇಶಿಸಿದ್ದಾರೆ. 2013 ಸೆಪ್ಟೆಂಬರ್ 4 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ, ಬೆಳಕಿನ ತಜ್ಙ ದಿ. ಅ.ನ.ರಮೇಶರವರ ನೆನಪಿನಲ್ಲಿ ‘ಅನಾವರಣ’ ರಂಗತಂಡ ಆಯೋಜಿಸಿದ ಕಾರ್ಯಕ್ರಮದಲ್ಲಿ ಈ ನಾಟಕವು ಪ್ರದರ್ಶನಗೊಂಡು ನೋಡುಗರಲ್ಲಿ ವಿಶೇಷ ಅನುಭೂತಿಯನ್ನುಂಟುಮಾಡಿತು.
ಇದೊಂದು ಸತ್ಯಕಥೆ ಆಧಾರಿತ ನಾಟಕ. ದಕ್ಷಿಣ ಆಫ್ರಿಕಾದ ಕೆಫ್ಟೌನ್ನಿಂದ ಉತ್ತರಕ್ಕೆ ಸುಮಾರು ಎಂಟುನೂರು ಮೈಲಿ ದೂರವಿರುವ ಕುಗ್ರಾಮದಲ್ಲಿ ಹೆಲೆನ್ ಎನ್ನುವ ಅನಾಥ ವಿಧವೆ ಮುದುಕಿ ವಾಸಿಸುತ್ತಿದ್ದಳು. ಗಂಡ ಸತ್ತ ನಂತರ ತನ್ನ ಒಂಟಿತನವನ್ನು ಕಳೆಯಲು ಕಲಾಸೃಷ್ಟಿಯಲ್ಲಿ ಬೆಳಕನ್ನು ಕಾಣುತ್ತಿದ್ದಳು. ಗಾಜಿನ ಚೂರು, ಟೈಲ್ಸ ತುಂಡುಗಳು, ಸಿಮೆಂಟು, ಮರಳು ಹೀಗೆ.. ವ್ಯರ್ಥವೆನಿಸುವ ಪದಾರ್ಥಗಳಿಂದ ಒಂಟೆ, ಗೂಬೆ, ನವಿಲು, ಮೆಕ್ಕಾ ಮುಂತಾದ ಅನೇಕ ಜಾನಪದ ಮಾದರಿಯ ಕಲಾಕೃತಿಗಳನ್ನು ಸೃಷ್ಟಿಸಿ ನೆಮ್ಮದಿಯಾಗಿರಲು ಪ್ರಯತ್ನಿಸುತ್ತಿದ್ದಳು. ತನ್ನಷ್ಟಕ್ಕೆ ತಾನಿದ್ದವಳನ್ನು ಸುಮ್ಮನೆ ಬಿಡದ ಕ್ರೈಸ್ತ ಮತಾಂಧ ಸಮಾಜ ಆಕೆಯನ್ನು ದೈವವಿರೋಧಿಯಾಗಿ ಭಾವಿಸಿತು. ಆಕೆಯ ಕಲಾಕೃತಿಯಲ್ಲಿ ಪಾಖಂಡಿತನವನ್ನು ಆರೋಪಿಸಿತು. ಆಕೆಯ ಬಗ್ಗೆ ಅಪಪ್ರಚಾರ ಮಾಡಲಾಯಿತು. ಆಕೆಯ ಮನೆಗೆ ಕಲ್ಲು ಹೊಡೆಸಲಾಯಿತು. ಆಕೆಯ ಮನೆ-ಆಸ್ತಿಯನ್ನು ಕಬಳಿಸಿ ಹೆಲೆನ್ಳನ್ನು ವೃದ್ಧಾಶ್ರಮಕ್ಕೆ ತಳ್ಳಲು ಕುತಂತ್ರವನ್ನು ರಚಿಸಲಾಯಿತು. ಆದರೆ ಆ ಮುದುಕಿಯ ಗೆಳತಿ ಎಲ್ಸಿ ಬಂದು ಹೆಲೆನ್ಳ ಅಸಹಾಯಕತೆ, ಮುಗ್ದತೆಗಳನ್ನು ಬಳಸಿಕೊಂಡು ಪಾದ್ರಿ ಮಾಡುವ ವಂಚನೆಯನ್ನು ಬಯಲುಗೊಳಿಸಿ ಹೆಲೆನ್ಳಲ್ಲಿ ಆತ್ಮಸ್ತೈರ್ಯವನ್ನು ತುಂಬುತ್ತಾಳೆ. ಕೊನೆಗೆ ವೃದ್ದಾಶ್ರಮದ ಅಜರ್ಿಗೆ ಸಹಿಹಾಕುವುದನ್ನು ನಿರಾಕರಿಸಿದ ಹೆಲೆನ್ ತನ್ನ ಆರೋಗ್ಯವನ್ನು ಕಾಪಾಡಿಕೊಂಡು ಸ್ವತಂತ್ರವಾಗಿ ಬದುಕುವ ಪಣತೊಡುತ್ತಾಳೆ. ಇದು ನಾಟಕದ ಕಥೆ ಹಾಗೂ ಹೆಲೆನ್ ಎನ್ನುವ ನಿಜವಾಗಿ ಬದುಕಿದ್ದ ಮಹಾನ್ ಕಲಾವಿದೆಯೊಬ್ಬಳ ಭಾಗಶಃ ಆತ್ಮಕಥೆ.

ಹೆಲೆನ್ಳ ಮರಣಾನಂತರ ದಕ್ಷಿಣ ಆಫ್ರಿಕಾದ ಸರಕಾರವು 1991 ರಲ್ಲಿ ಆಕೆಯ ಎಲ್ಲಾ ಶಿಲ್ಪಕಲಾಕೃತಿಗಳನ್ನು ಪ್ರಸಿದ್ದ ಕಲಾವಸ್ತು ಸಂಗ್ರಹಾಲಯವನ್ನಾಗಿಸಿ ಆಕೆಯ ಕಲೆಯನ್ನು ಸಾರ್ವಜನಿಕ ಪ್ರದರ್ಶನಕ್ಕೆ ಮುಕ್ತವಾಗಿಸಿತು. ಅಂತಹ ಅನಾಮಿಕ ಅದ್ಭುತ ಕಲಾವಿದೆಯ ಬದುಕನ್ನು ನಾಟಕವಾಗಿಸಿದ ಅಥೋಲ್ ಫುಗಾರ್ಡ ಮತ್ತು ಆ ನಾಟಕವನ್ನು ಕನ್ನಡಕ್ಕೆ ರೂಪಾಂತರಿಸಿ ನಿದರ್ೆಶಿಸಿದ ಪ್ರಸನ್ನ ಹಾಗೂ ಪ್ರಸನ್ನನವರನ್ನು ಒತ್ತಾಯಿಸಿ ಈ ನಾಟಕದ ಪ್ರದರ್ಶನಕ್ಕೆ ಕಾರಣರಾದ ಮಹಿಳಾ ಹೋರಾಟಗಾರ್ತಿ ದು.ಸರಸ್ವತಿ ಇವರೆಲ್ಲಾ ಅಭಿನಂದನಾರ್ಹರು.
ಇಡೀ ನಾಟಕ ವ್ಯಕ್ತಿ ಸ್ವಾತಂತ್ರ್ಯದ ಕುರಿತದ್ದಾಗಿದೆ. ಹೆಲೆನ್ಳು ಕಲೆಯಲ್ಲಿ ತನ್ನ ಬದುಕನ್ನು ಕಾಣಲು, ತನ್ನ ಕಲಾಸೃಷ್ಟಿಯ ಮೂಲಕ ಬೆಳಕನ್ನು ನೋಡಲು ಪ್ರಯತ್ನಿಸುತ್ತಾಳೆ. ಯಾರ ಹಂಗಿಲ್ಲದೆ ಸ್ವತಂತ್ರವಾಗಿ ತನ್ನಗಿಷ್ಟಬಂದ ರೀತಿಯಲ್ಲಿ ಬದುಕಲು ಇಚ್ಚಿಸುತ್ತಾಳೆ. ಆದರೆ ಮತಾಂಧ ಪಾದ್ರಿ ಮತ್ತು ಧಮರ್ಾಂದರಾದ ಜನ ಅಸಹಾಯಕ ಒಂಟಿ ಮುದುಕಿಯನ್ನು ತನ್ನಷ್ಟಕ್ಕೆ ಬದುಕಲು ಬಿಡದೇ ಗೋಳುಹುಯ್ದುಕೊಳ್ಳುತ್ತಾರೆ. ಧರ್ಮ ಎನ್ನುವುದು ತನ್ನ ಪರಿಧಿಯೊಳಗೆ ಬರದವರನ್ನು ಹಲವಾರು ಆಸೆ ಆಮಿಷಗಳನ್ನು ತೋರಿಸಿ ಮಣಿಸಲು ನೋಡುತ್ತದೆ. ವಿರೋಧಿಸಿದವರನ್ನು ನಾಶ ಮಾಡಲು ಪ್ರಯತ್ನಿಸುತ್ತದೆ ಎನ್ನುವುದರ ಸೊಗಸಾದ ಚಿತ್ರಣ ಇಲ್ಲಿದೆ.
ಧಾರ್ಮಿಕ ಶೋಷಣೆ ಹೆಚ್ಚಾದಂತೆಲ್ಲಾ ಹೆಲೆನ್ ಚರ್ಚ್‌ನಿಂದ ವಿಮುಖಳಾಗುತ್ತಾಳೆ. ಆದರೆ ಆಕೆಯನ್ನು ಯಾಕೆ ಮುಸ್ಲಿಮರು ಆರಾಧಿಸುವ ಮೆಕ್ಕಾ ಸೆಳೆಯುತ್ತದೆ? ಮೆಕ್ಕಾದ ಭವ್ಯ ದೇವಸ್ಥಾನದಲ್ಲಿರುವ ಕನ್ನಡಿಯಿಂದಾವೃತವಾದ ಕೋಣೆ ಆಕರ್ಷಿಸುತ್ತದೆ? ಯಾಕೆ ಆಕೆಗೆ ಒಂಟೆಗಳ ಮೇಲೆ ಮೆಕ್ಕಾಕೆ ಪ್ರಯಾಣ ಮಾಡುವವರೆಲ್ಲಾ ಜಾಣರಂತೆ ತೋರುತ್ತಾರೆ? ಗೊತ್ತಿಲ್ಲಾ. ಎಲ್ಲಾ ಧರ್ಮಗಳಲ್ಲೂ ಮತಾಂಧತೆ, ಶೋಷಣೆ ಇದ್ದೇ ಇರುತ್ತದೆಂಬ ಪರಿಕಲ್ಪನೆಯೂ ಇಲ್ಲದ ಮುಗ್ಧ ಮುದುಕಿ ಆಕೆ. ತಾನಿರುವ ಧರ್ಮದಲ್ಲಿ ಕತ್ತಲಿದೆ ಅದಕ್ಕಾಗಿ ಬೆಳಕನ್ನು ಇನ್ನೊಂದು ಧರ್ಮದ ಸಂಕೇತದಲ್ಲಿ ಹುಡುಕುವ ಆಕೆಯ ಪ್ರಯತ್ನ ವೈಚಾರಿಕತೆಯನ್ನು ಮೀರಿದ್ದಾಗಿದೆ. ಒಂದು ನಂಬಿಕೆಯನ್ನು ಕಳೆದುಕೊಳ್ಳಲು ಇನ್ನೊಂದು ನಂಬಿಕೆಯನ್ನು ಅಪ್ಪಿಕೊಳ್ಳುವ ಅನಿವಾರ್ಯತೆಯೂ ಹೆಲೆನ್ಳದ್ದಾಗಿದ್ದರಿಂದ ಮೆಕ್ಕಾ ಆಕೆಯ ಬದುಕಿನ ಬೆಳಕಿನ ದಾರಿಯಾಗಿ ತೋರುತ್ತದೆ.
‘ಮೆಕ್ಕಾ ದಾರಿ’ಯಲ್ಲಿ ಹಳ್ಳಿ ಮತ್ತು ನಗರಗಳ ಸಾಂಸ್ಕೃತಿಕ ಭಿನ್ನತೆ ಹಾಗೂ ಬದುಕಿನ ನೂನ್ಯತೆ ಅನಾವರಣಗೊಂಡಿದೆ. ಈ ನಾಟಕದಲ್ಲಿ ಎರಡು ಪ್ರಮುಖ ಮಹಿಳಾ ಪಾತ್ರಗಳು ಮುಖಾಮುಖಿಯಾಗುತ್ತವೆ. ಹೆಲೆನ್ ಗ್ರಾಮೀಣ ಸಂಸ್ಕೃತಿಯನ್ನು ಪ್ರತಿನಿಧಿಸುತ್ತಿದ್ದರೆ, ‘ಎಲ್ಸಿ’ ಶಹರದ ಬಿಂದಾಸ್ ಸಂಸ್ಕೃತಿಯ ಪ್ರತೀಕವಾಗಿದ್ದಾಳೆ. ಸಿಗರೇಟು, ಕುಡಿತ ಮತ್ತು ವಿವಾಹಪೂರ್ವ ಪ್ರಣಯಗಳ ಸುಳಿಯಲ್ಲಿ ಸುಖಿಸುವ ಎಲ್ಸಿ ದೊಡ್ಡ ನಗರದ ಶಾಲೆಯೊಂದರ ಶಿಕ್ಷಕಿಯೆನ್ನುವುದೊಂದು ವಿಪರ್ಯಾಸ. ಆಕೆ ಶಾಲಾ ಮಕ್ಕಳಿಗೆ ಸ್ವತಂತ್ರ ಆಲೋಚನೆಯ ಪಾಠ ಹೇಳಲು ಹೋಗಿ ಶಾಲಾ ಆಡಳಿತ ಮಂಡಳಿಯ ಕೆಂಗೆಣ್ಣಿಗೆ ಗುರಿಯಾಗಿರುತ್ತಾಳೆ. ಹಾಗಾದರೆ ಎಲ್ಸಿ ಪಾತ್ರದ ಸ್ವಾತಂತ್ರ್ಯದ ಪರಿಕಲ್ಪನೆ ಎಂದರೆ ಧೂಮಪಾನ, ಮಧ್ಯಪಾನ ಹಾಗೂ ವಿವಾಹಪೂರ್ವ ಬಸಿರಾಗುವುದಾ? ಅಥವಾ ವಿವಾಹಿತನ ಕುಟುಂಬವನ್ನು ಮುರಿದು ತನ್ನ ಬದುಕು ಕಟ್ಟಿಕೊಳ್ಳುವುದಾ? ಇಂತಹ ವಿಕೃತ ಸ್ವಾತಂತ್ರ್ಯದ ಸವಿಯನ್ನು ಸವಿದು ಅದರ ದುಷ್ಪರಿಣಾಮವನ್ನೂ ಅನುಭವಿಸಿದ ಎಲ್ಸಿ ತನ್ನ ಶಾಲಾ ಮಕ್ಕಳಿಗೆ ಹಾಗೂ ಹಳ್ಳಿಯ ಮುಗ್ದ ಮುದುಕಿಗೆ ಸ್ವಾತಂತ್ರ್ಯದ ಪಾಠ ಮಾಡುವುದು ಈ ನಾಟಕದ ವಿಪಯರ್ಾಸವಾಗಿದೆ. ಸ್ವಾತಂತ್ರ್ಯದ ಕಲ್ಪನೆಯೂ ಇಲ್ಲದ ಅಸಹಾಯಕ ಹೆಂಗಸು ಹೆಲೆನ್ ಬಂದಂತೆ ಬದುಕನ್ನು ಸ್ವೀಕರಿಸುತ್ತಾ ತನ್ನ ಕಲಾಕಾಯಕದಲ್ಲಿ ಬೆಳಕನ್ನು ಕಾಣುತ್ತಾಳೆ. ವಿವಾಹಿತನೆಂದು ಗೊತ್ತಿದ್ದೂ ಸಂಬಂಧ ಬೆಳೆಸಿ ಮೋಸಹೋಗಿದ್ದನ್ನು ನಂಬಿಕೆದ್ರೋಹ ಎಂದು ಸಾರುವ ನಗರವಾಸಿ ಎಲ್ಸಿ ಯಾರನ್ನೂ ನಂಬಬಾರದು ಎನ್ನುವ ತತ್ವ ಪ್ರತಿಪಾದಿಸುತ್ತಾಳೆ. ಆದರೆ ತನ್ನ ಜನರಿಂದ, ತಾನು ನಂಬಿದ ಧರ್ಮದವರಿಂದ ತೊಂದರೆ ಅನುಭವಿಸಿದರೂ ಹಳ್ಳಿಯ ಹೆಲೆನ್ ನಂಬಿಕೆದ್ರೋಹ ಆಗಿಲ್ಲ ಎನ್ನುತ್ತಾಳೆ.
ಈ ಎರಡೂ ಮಹಿಳಾ ಪಾತ್ರಗಳೂ ಸ್ವಭಾವದಲ್ಲಿ ಭಿನ್ನವಾಗಿವೆ. ಸ್ವೇಚ್ಚಾಚಾರವನ್ನು ಸ್ವಾತಂತ್ರ್ಯವೆಂದು ಭ್ರಮಿಸುವ ಎಲ್ಸಿ ಜಾಗತೀಕರಣದ ಸಂಕೇತವಾದರೆ, ಸ್ವಾತಂತ್ರ್ಯರಹಿತ ಶೋಷಣೆಯ ಬದುಕಿನಲ್ಲೂ ತನ್ನ ಕಾಯಕದ ಮೂಲಕ ಬೆಳಕನ್ನು ಪರಿಭಾವಿಸುವ ಹೆಲೆನ್ ಯಥಾಸ್ಥಿತಿವಾದದ ಪ್ರತೀಕವಾಗಿದ್ದಾಳೆ. ಈ ಎರಡೂ ಭಿನ್ನ ವಯೋಮಾನದ, ವಿಭಿನ್ನ ಮಾದರಿಯ ವೈರುದ್ಯದ ಪಾತ್ರಗಳು ಆತ್ಮೀಯ ಗೆಳೆತನದ ಸಂಬಂಧ ಹೊಂದಿರುವುದೇ ಒಂದು ಅಚ್ಚರಿ. ಈ ಪಾತ್ರಗಳ ಸೃಷ್ಟಿಯಿಂದಾಗಿ ಗ್ರಾಮ ಮತ್ತು ನಗರವಾಸಿಗಳಾದವರ ಸ್ವಾತಂತ್ರ್ಯದ ಪರಿಕಲ್ಪನೆಗಳು ಈ ನಾಟಕದಲ್ಲಿ ಮನೋಜ್ಞವಾಗಿ ಅನಾವರಣಗೊಂಡಿವೆ.
ದಲಿತ ಮತ್ತು ಮಹಿಳಾಪರ ಹೋರಾಟಗಾರ್ತಿ, ‘ಮಾನಸ’ ಪತ್ರಿಕೆಯ ಸಂಪಾದಕಿ ದು.ಸರಸ್ವತಿಯವರ ಸ್ತ್ರೀಪರ ಆಶಯಕ್ಕೆ ಪೂರಕವಾಗಿ ಸ್ತ್ರೀವಾದಿ ಚಿಂತನೆಗಳ ಆಯಾಮಗಳನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ‘ಮೆಕ್ಕಾ ದಾರಿ’ ನಾಟಕ ಪ್ರಸ್ತುತಗೊಂಡಿದೆ. ಸ್ವತಃ ಸರಸ್ವತಿಯವರೇ ಹೆಲನ್ ಪಾತ್ರವನ್ನು ಅಭಿನಯಿಸಿದ್ದು ಅನನ್ಯವಾಗಿದೆ. ಆ ಪಾತ್ರಕ್ಕೆ ಬೇಕಾದ ಅಸಹಾಯಕತೆ, ಮುಗ್ಧತೆಗಳಿಗೆ ಸರಸ್ವತಿಯವರು ಹೇಳಿ ಮಾಡಿಸಿದಂತಿದ್ದಾರೆ, ಎಲ್ಸಿ ಪಾತ್ರಕ್ಕೆ ವಾಣಿ ಪೆರಿಯೋಡಿಯವರು ಜೀವತುಂಬಿ ಅಭಿನಯಿಸಿದ್ದಾರೆ. ಪ್ರಸಾಧನಕಲೆಯಲ್ಲಿ ಪಳಗಿದ ಮೇಕಪ್ಮ್ಯಾನ್ ರಾಮಕೃಷ್ಣ ಬೆಳ್ತೂರ್ ನಟನೆಯಲ್ಲೂ ತಮ್ಮ ಕೌಶಲವನ್ನು ತೋರಿಸಿದ್ದು ಪಾದ್ರಿ ಮಾರಿಸಸ್ ಪಾತ್ರಕ್ಕೆ ನ್ಯಾಯವದಗಿಸಲು ತುಂಬಾನೇ ಶ್ರಮಿಸಿದ್ದಾರೆ. ಈ ಮೂವರೂ ಕಲಾವಿದರಲ್ಲಿ ಯಾರೂ ಅಭಿನಯದಲ್ಲಿ ಪಳಗಿದವರಲ್ಲಾ, ವೃತ್ತಿಪರ ನಟರೂ ಅಲ್ಲಾ, ನೀನಾಸಂ-ಎನ್ಎಸ್ಡಿ ಪದವೀದರರೂ ಅಲ್ಲಾ, ಆದರೆ ಪ್ರಸನ್ನರವರಂತಹ ನಿದರ್ೆಶಕರ ಕೈಗೆ ಸಿಕ್ಕರೆ ಹೇಗೆ ವ್ಯಕ್ತಿಗಳು ಪಾತ್ರಗಳಾಗಿ ರೂಪಾಂತರ ಹೊಂದುತ್ತಾರೆ ಎನ್ನುವುದಕ್ಕೆ ಈ ನಾಟಕದಲ್ಲಿ ಆ ಮೂವರ ಅಭಿನಯವೇ ಸಾಕ್ಷಿ.
ಪ್ರತಿಯೊಂದು ಚಲನೆ, ಬ್ಲಾಕಿಂಗ್, ಆಗಮನ, ನಿರ್ಗಮನ ಎಲ್ಲವೂ ಕರಾರುವಕ್ಕಾಗಿತ್ತು. ಇದು ಬರೀ ಮಾತಿನ ನಾಟಕ. ನಾಟಕದ ತುಂಬಾ ಬರೀ ಮಾತು ಮಾತು ಮಾತು, ಆದರೆ ಮಾತಿನ ಏರಿಳಿತ, ಸಂಭಾಷನೆಗಳ ಸ್ವಾರಸ್ಯ, ವ್ಯಂಗ್ಯವನ್ನು ಪಂಚ್ ಮಾಡುವ ವಿಧಾನ ಎಲ್ಲವೂ ನೇರವಾಗಿ ಪ್ರೇಕ್ಷಕರ ಗ್ರಹಿಕೆಗೆ ತಲುಪುವಂತಿದ್ದವು. ಅಪೂರ್ವ ಸೆಟ್ ಪರಿಕರಗಳಿಲ್ಲದೇ, ಹಾಡು ಸಂಗೀತಗಳ ಮಧುರತೆಗಳಿಲ್ಲದೇ, ಬೆಳಕಿನ ಚಮತ್ಕಾರಗಳಿಲ್ಲದೇ, ಹಿನ್ನಲೆ ಸೌಂಡ್ ಎಫೆಕ್ಟ್ಗಳಿಲ್ಲದೇ, ದೃಶ್ಯವೈಭವಗಳಿಲ್ಲದೇ ಸರಿ ಸುಮಾರು ಎರಡು ಗಂಟೆಗಳ ಕಾಲ ಕೇವಲ ಮೂರು ಪಾತ್ರಗಳನ್ನಿಟ್ಟುಕೊಂಡು ಮಾತಿನ ಮೂಲಕ ಏಕಾಂಕ ನಾಟಕವನ್ನು ಕಟ್ಟಿಕೊಡುವುದು ಅಷ್ಟು ಸುಲಭಸಾಧ್ಯವಲ್ಲ. ಬಹು ವರ್ಷಗಳ ನಂತರ ನಾಟಕವೊಂದನ್ನು ನಿದರ್ೆಶಿಸಿದ ಪ್ರಸನ್ನರವರು ತಮ್ಮಲ್ಲಿರುವ ನಿದರ್ೆಶಕ ಇನ್ನೂ ಕ್ರಿಯಾಶೀಲವಾಗಿದ್ದಾನೆ ಎಂಬುದನ್ನು ಈ ನಾಟಕದ ಮೂಲಕ ಸಾಬೀತುಪಡಿಸಿದ್ದಾರೆ.
ಮೂಡ್ ಸೃಷ್ಟಿಸಲು ಆಗಾಗ ಆಲಾಪಗಳನ್ನು ಬಳಸಲಾಗಿದೆಯಾದರೂ ಅವು ಕೆಲವೊಮ್ಮೆ ಸಂಭಾಷನೆಗೆ ಓವರ್ಲ್ಯಾಪ್ ಆಗಿದ್ದು ಮಾತನ್ನು ನುಂಗಿಹಾಕುವಂತಿತ್ತು. ಬೆಳಕಿನಲ್ಲಿ ಏನೂ ವ್ಯತ್ಯಾಸವಿಲ್ಲ. ಇಡೀ ನಾಟಕ ನಿಂತಿದ್ದೇ ಬೆಳಕಿನ ರೂಪಕದ ಮೇಲೆ. ಆದರೆ ಬೆಳಕಿನ ವಿನ್ಯಾಸವೇ ತುಂಬಾ ಪೇಲರವವಾಗಿತ್ತು. ಶಶಿಧರ ಅಡಪರವರ ರಂಗಸಜ್ಜಿಕೆಯಲ್ಲಿ ಏನೇನು ವಿಶೇಷವಿರಲಿಲ್ಲ. ಯಾವುದೇ ಕೋನದಲ್ಲಿಯೂ ಅದೊಂದು ಕಲಾವಿದೆಯ ಮನೆ ಎಂಬುದಕ್ಕೆ ಕನಿಷ್ಟ ಕುರುಹುಗಳು ಇರಲಿಲ್ಲ. ತುಂಬಾ ಸರಳವಾಗಿ ನಾಟಕವನ್ನು ನಿರ್ದೇಶಕರು ಕಟ್ಟಿಕೊಟ್ಟಿದ್ದಾರೆ. ನಟನೆಯಿಂದಲೇ ನಾಟಕ ಪ್ರೇಕ್ಷಕರಿಗೆ ತಲುಪಬೇಕೆ ಹೊರತು ಇತರ ಪೂರಕ ರಂಗಸಾಮಗ್ರಿಗಳಿಂದಲ್ಲ ಎಂದು ತಮ್ಮೆಲ್ಲಾ ನಾಟಕಗಳ ಮೂಲಕ ಪ್ರತಿಪಾದಿಸಿದ ಪ್ರಸನ್ನರವರು ನಟರ ಅಭಿನಯದ ಮೇಲೆ ತಮ್ಮೆಲ್ಲಾ ಗಮನವನ್ನು ಕೇಂದ್ರೀಕರಿಸಿದ್ದಾರೆ. ಆ ಮೂರು ಪಾತ್ರಗಳ ಮೂಲಕ ಪ್ರೇಕ್ಷಕರಿಗೆ ‘ನಟನೆಯ ಪಾಠ’ಗಳನ್ನು ಹೇಳಿಕೊಟ್ಟಿದ್ದಾರೆಂದೆನಿಸುತ್ತದೆ.
ಕಥೆ ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತದೆ. ಪಾತ್ರದಾರಿಗಳ ಹೆಸರು ಊರಿನ ಹೆಸರುಗಳು ಆ ದೇಶದ್ದೇ ಆಗಿವೆ. ಆದರೆ ಪ್ರಸ್ತುತಗೊಂಡ ಪಾತ್ರಗಳು, ಅವುಗಳ ವೇಷ ಭೂಷಣಗಳು ಮಾತ್ರ ದಕ್ಷಿಣ ಭಾರತದ್ದಾಗಿವೆ. ಬಿಳಿಯ ಪಾದ್ರಿ ಎಂದು ನಾಟಕದಲ್ಲಿ ಪಾತ್ರಗಳು ಹೇಳುತ್ತವೆ ಆದರೆ ಕರಿಯ ಪಾದ್ರಿಯನ್ನು ರಂಗದ ಮೇಲೆ ಸೃಷ್ಟಿಸಲಾಗಿದೆ. ಈ ವೈರುಧ್ಯವನ್ನು ಸರಿಮಾಡಿದ್ದರೆ ಸಾಮಾನ್ಯ ಪ್ರೇಕ್ಷಕರಲ್ಲುಂಟಾಗಬಹುದಾದ ಗೊಂದಲವನ್ನು ತಪ್ಪಿಸಬಹುದಾಗಿತ್ತು. ಭಾಷೆಯನ್ನು ಹೊರತುಪಡಿಸಿ ಪೂತರ್ಿ ನಾಟಕ ದಕ್ಷಿಣ ಆಫ್ರಿಕಾದ ಸಂಸ್ಕೃತಿಯನ್ನಾದರೂ ಬಿಂಬಿಸಬೇಕಾಗಿತ್ತು, ಇಲ್ಲವೇ ಈ ನೆಲದ ಸಂಸ್ಕೃತಿಗೆ ತಕ್ಕಂತೆ ವೇಷ, ಹೆಸರು, ಮೇಕಪ್ಗಳನ್ನು ಹೊಂದಿಸಬೇಕಾಗಿತ್ತು. ಆದರೆ ಎರಡು ಭಿನ್ನ ದೇಶಗಳ ವಿಭಿನ್ನ ಜನಸಂಸ್ಕೃತಿಗಳನ್ನು ಬ್ಲೆಂಡ್ ಮಾಡಿದ್ದು ಒಂದಿಷ್ಟು ಗೊಂದಲಕಾರಿಯಾಗಿದೆ.
ಹೆಲೆನ್ಳ ನಿಜಜೀವನ ಕೊನೆ ಹಾಗೂ ಅಥೋಲ್ರವರ ಮೂಲ ನಾಟಕದ ಅಂತ್ಯ ದುಃಖಾಂತ್ಯವಾಗಿದ್ದರೂ, ಪ್ರಸನ್ನರವರ ಸುಧೀರ್ಘ ಮಾತಿನ ಈ ನಾಟಕ ಸುಖಾಂತ್ಯವಾಗಿ ಕೊನೆಗೊಳ್ಳುತ್ತದೆ, ಆದರೆ ನಾಟಕದ ನಂತರ ಸಾಮಾನ್ಯ ಪ್ರೇಕ್ಷಕರ ತಲೆಯಲ್ಲಿ ಕೆಲವು ತಾಕರ್ಿಕ ಪ್ರಶ್ನೆಗಳು ಹುಳುವಿನಂತೆ ಕೊರೆಯುತ್ತವೆ. ಕ್ರಿಶ್ಚಿಯನ್ ಸಮುದಾಯದಲ್ಲೇ ಹುಟ್ಟಿ ಬೆಳೆದ ಹಳ್ಳಿಯ ಮುಗ್ಧ ಮುದುಕಿಗೆ ಇಸ್ಲಾಂ ಧರ್ಮದ ಮೆಕ್ಕಾದ ಮೇಲೆ ಮೋಹ ಬೆಳೆಯುವುದು ಹೇಗೆ? ಅದಕ್ಕೆ ಪ್ರೇರಣೆಯಾದರೂ ಏನು? ವಿದ್ಯಾವಂತ ಪಾದ್ರಿನೇ ಮೆಕ್ಕಾದ ಇರುವನ್ನು ಭೂಪಟದಲ್ಲಿ ಹುಡುಕುತ್ತೇನೆನ್ನುವಾಗ ಇನ್ನು ತನ್ನ ಮನೆಯನ್ನು ಬಿಟ್ಟು ಎಲ್ಲೂ ಹೋಗದ, ಒಂಟಿಯಾಗಿರುವ ಮುದುಕಿಗೆ ಮೆಕ್ಕಾದ ಪರಿಕಲ್ಪನೆ ಬರಲು ಇರುವ ಕಾರಣಗಳಾದರೂ ಏನು? ನಗರದಲ್ಲಿ ಸ್ವೇಚ್ಚಾಚಾರದ ಬದುಕು ನಡೆಸುತ್ತಿದ್ದ ಮಹಿಳೆಯು ಮಕ್ಕಳಿಗೆ ಶಾಲೆಯಲ್ಲಿ ಸ್ವತಂತ್ರ ಅಭಿವ್ಯಕ್ತಿಯ ಪಾಠ ಮಾಡುವುದು ಸಮರ್ಥನೀಯವೇ? ಅಂತಹ ದುರಭ್ಯಾಸಗಳಿರುವ ಹೆಣ್ಣು ಶಿಕ್ಷಕಿಯಾಗಿರಲು ಯೋಗ್ಯವೇ? ಅವಳ ಪ್ರಕಾರ ಸ್ವಾತಂತ್ರ್ಯ ಅಂದರೆ ದೂಮಪಾನ, ಕುಡಿತ, ವಿವಾಹಬಾಹಿರ ಸಂಬಂಧಗಳಾ? ತನ್ನ ಬದುಕನ್ನೇ ನೆಟ್ಟಗೆ ಕಟ್ಟಿಕೊಳ್ಳಲಾಗದ ಆಕೆ ಹಳ್ಳಿಯ ಮುಗ್ದ ಮಹಿಳೆಗೆ ಸ್ವತಂತ್ರ ಬದುಕನ್ನು ಕಟ್ಟಿಕೊಳ್ಳಲು ಹೇಳುವುದರಲ್ಲಿ ಯಾವ ತರ್ಕವಿದೆ? ಯಾವುದರಲ್ಲಿಯೂ ಸಾಮ್ಯತೆ ಇಲ್ಲದ ಈ ಇಬ್ಬರೂ ಮಹಿಳೆಯರು ಅತ್ಯಂತ ಆತ್ಮೀಯ ಗೆಳೆತನ ಹೊಂದಿರುತ್ತಾರೆಂಬುದು ನಂಬಲು ಸಾಧ್ಯವೇ? ಮಹಿಳಾವಾದಕ್ಕೆ, ಸ್ವಾತಂತ್ರ್ಯದ ಪರಿಕಲ್ಪನೆಗೆ ವಿರುದ್ಧವಾದ ರೀತಿಯಲ್ಲಿ ಎಲ್ಸಿ ಎನ್ನುವ ಪಾತ್ರ ಸೃಷ್ಟಿಯಾಗಿದ್ದು ಈ ನಾಟಕದ ನಿಜವಾದ ಆಶಯಕ್ಕೆ ದಕ್ಕೆಯಾಗಲಿಲ್ಲವೇ? ಆ ದೇಶದ ಸಂಸ್ಕೃತಿಗೆ ಎಲ್ಸಿ ಪಾತ್ರಪೋಷಣೆ ಸೂಕ್ತವಾಗಿರಬಹುದು ಆದರೆ ನಮ್ಮಲ್ಲಿ ಅಂತಹ ಅನಾದರ್ಶ ಶಿಕ್ಷಕಿಯನ್ನು ಒಪ್ಪಿಕೊಳ್ಳಲು ಸಾಧ್ಯವೆ?
ಹೀಗೆ… ಹತ್ತು ಹಲವು ಸಂದೇಹಗಳು ಕಾಡುತ್ತವೆ. ಈ ಸಂದೇಹಗಳು ಬುದ್ದಿಜೀವಿ ಪ್ರೇಕ್ಷಕರಿಗೆ ಬರದಿರಬಹುದು. ಯಾಕೆಂದರೆ ಅವರು ಪ್ರಭುದ್ದರು. ನಾಟಕದ ಆಶಯವನ್ನಷ್ಟೇ ಗಮನಿಸಿ ಆ ಆಶಯಕ್ಕೆ ವ್ಯತಿರಿಕ್ತವಾಗಿದ್ದನ್ನು ನಿರ್ಲಕ್ಷಿಸುತ್ತಾರೆ. ಆದರೆ ಸಾಮಾನ್ಯ ಪ್ರೇಕ್ಷಕರ ಗ್ರಹಿಕೆಗೆ ಚಿಕ್ಕಪುಟ್ಟ ವಿಪಯರ್ಾಸಗಳೂ ದೊಡ್ಡ ಸಂದೇಹವನ್ನುಂಟುಮಾಡುತ್ತವೆ. ಏನೇ ಆಗಲಿ ವೈರುದ್ಯಗಳಲ್ಲೇ ವ್ಯಕ್ತಿ ಸ್ವಾತಂತ್ರ್ಯದ ಪರಿಕಲ್ಪನೆಯನ್ನು ಹೇಳುವುದರಲ್ಲಿ ‘ಮೆಕ್ಕಾ ದಾರಿ’ ಯಶಸ್ವಿಯಾಗಿದೆ.

ಕಾಮೆಂಟ್‌ಗಳಿಲ್ಲ:

ಧಾರವಾಡ ಎಂಬ ಸ್ವಾವಲಂಬನೆಯ ಸಾಂಸ್ಕೃತಿಕ ನಗರ

ಉತ್ತರಕರ್ನಾಟಕದ ಸಾಂಸ್ಕೃತಿಕ ಐಕಾನ್ ಧಾರವಾಡ. ದೇಶದ ಹೆಸರಾಂತ ಸಂಗೀತ ವಿದೂಷಿಗಳು, ಪಂಡಿತರು ಧಾರವಾಡ ನೆಲದಲ್ಲಿ ಸಂಗೀತ ಕಛೇರಿ ಕೊಡಲಿಕ್ಕೆ ಕಾಯುತ್ತಾರೆ ಹೇಗೋ ಹಾಗೆಯೇ ನ...