ಗುರುವಾರ, ನವೆಂಬರ್ 22, 2012

ಇಕ್ಬಾಲ್ ಎಂಬ ರಂಗ ಮಾಂತ್ರಿಕ!

(avadhi krupe)


ಇಕ್ಬಾಲ್ ಎಂಬ ರಂಗಮಾಂತ್ರಿಕನ ಫ್ಯಾಂಟಸಿ ದುನಿಯಾ

- ಮಹಾದೇವ ಹಡಪದ


ರಂಗದ ಮೇಲೆ ನಟ ನಿಂತಾಗ ದೇಹಕ್ಕೆ ಹೆಚ್ಚು ಸಾಧ್ಯತೆಗಳಿರುತ್ತವೆ, ನಟನಿಗೆ ಆ ಸಾಧ್ಯತೆಯ ಅರಿವಿದ್ದರೆ ಕ್ರಿಯೆ-ಪ್ರತಿಕ್ರಿಯೆಗಳು ಚುಟುಕಾಗಿ ಚುರುಕಾಗಿ ಮೂಡುತ್ತವೆ. ಆಗ ನಾಟಕದ ಸಂವಹನ ಆಂಗಿಕವಾಗಿ ಸಾಧ್ಯವಾಗುತ್ತದೆ. ನಟನ ದೇಹದ ಲಯದೊಂದಿಗೆ ಅವನಾಡುವ ಮಾತಿನ ಏರಿಳಿತವೂ ಪೂರಕವಾಗಿರುತ್ತದೆ. -ಇಕ್ಬಾಲ್ ಅಹ್ಮದ್.
ಶಿಕಾರಿಪುರದ ಸಂಪ್ರದಾಯಸ್ಥ ಮುಸ್ಲಿಮ್ ಮುದಾಯದ ಮಧ್ಯಮ ವರ್ಗೀಯ ಕುಟುಂಬದಿಂದ ಬಂದ ಇಕ್ಬಾಲ್ ಅಹ್ಮದ್ ಅಂದ್ರೆ ಕನ್ನಡ ರಂಗಭೂಮಿಯಲ್ಲಿ ವಿಶಿಷ್ಟ ಶೈಲಿಯಿಂದಲೇ ಗುರುತಿಸಿಕೊಂಡವರು. ನಾಟಕದವರಿಗೆ ಸಾಮಾಜಿಕ ಮನ್ನಣೆಗಳು ಇಲ್ಲವೇ ಇಲ್ಲ ಎಂಬ ಕೊರಗಿದ್ದರೂ ನಟನಾದವ- ನಾಟಕಕಾರ, ನಿರ್ದೇಶಕನಿಗಿಂತ ಹೆಚ್ಚು ಪ್ರಸ್ತುತಗೊಳ್ಳಬೆಕು. ನಟನ ನಟನೆ ಹೆಚ್ಚು ವಿಮರ್ಶೆಗೆ ಒಳಪಡಬೇಕೆಂದು, ನಟನ ದೇಹದ ಅಂತಃಸ್ಪೂರ್ತಿಯಿಂದಲೇ ನಾಟಕ ಕಟ್ಟುವ ಕ್ರಿಯೆಯನ್ನು ತಮ್ಮದೇ ಆದ ರಂಗಶೈಲಿಯನ್ನಾಗಿ ರೂಢಿಸಿಕೊಂಡವರು ಇಕ್ಬಾಲ್ ಅಹ್ಮದ್. ಸಾಗರದ ಉದಯ ಕಲಾವಿದರ ಅಟ್ಟದ ಹೆಸರಾಂತ ಕನ್ನಡದ ನಿರ್ದೇಶಕ ಎನ್.ಆರ್.ಮಾಸೂರ ಅವರ ನಿರ್ದೇಶನದಲ್ಲಿ ಕನ್ನಡ ರಂಗಭೂಮಿ ಪ್ರವೇಶಿಸಿ, ನೀನಾಸಂ ರಂಗಶಿಕ್ಷಣ ಕೇಂದ್ರದಲ್ಲಿ ಅಭ್ಯಾಸ ಮಾಡಿ ದೇಶದ ಹಲವಾರು ರಂಗಸಂಸ್ಥೆಗಳಲ್ಲಿ ಕ್ರಿಯಾಶೀಲರಾಗಿ ಪಡೆದ ಅನುಭವದಿಂದ ಸ್ವತಂತ್ರವಾಗಿ ಮಕ್ಕಳ ರೆಪರ್ಟರಿಯನ್ನು ಕಟ್ಟಿ ಕರ್ನಾಟಕದಾದ್ಯಂತ ಪ್ರದರ್ಶನಗಳನ್ನು ಕೊಟ್ಟಿದ್ದಾರೆ. ಅವರ ವಿಶಿಷ್ಟ ಶೈಲಿ ಪರಂಪರೆ ಆಗಿ ಉಳಿಯಬೇಕೆಂಬ ಹಂಬಲದಿಂದಲೇ ಗುಡಿ ಸಾಂಸ್ಕೃತಿಕ ಕೇಂದ್ರ ಸ್ಥಾಪಿಸಿ ಕೆಲಸ ಆರಂಭಿಸಿದ್ದಾರೆ.
ಕಲಾಜಗತ್ತಿನ ಕನಸುಗಳಿಗೆ- ಜೇಡಿಮಣ್ಣಿನಲ್ಲಿ ಆಕೃತಿಗಳನ್ನು ತೀಡುತ್ತಿದ್ದ ಬಾಲ್ಯದ ಹುಚ್ಚುತನವೇ ಪ್ರೇರಣೆ. ಗ್ಯಾರೇಜು, ಆಟೋ, ಡ್ರೈವಿಂಗೂ ಅಂತ ಕಾಲಕಳೆಯಬೇಕಾಗಿದ್ದ ನನಗೆ ‘ಭಾರತ ಭಾಗ್ಯವಿಧಾತ’ ನಾಟಕ ರಂಗಭೂಮಿಯ ಬದುಕಿಗೆ ಬುನಾದಿ ಹಾಕಿತು. ಎನ್.ಆರ್.ಮಾಸೂರ ಅಂದ್ರೆ ಶ್ರೀರಂಗರ ನಾಟಕಗಳ ನಿರ್ದೇಶಕರು ಎಂದೇ ಹೆಸರಾದವರು. ಅವರು ಮಾತುಗಾರಿಕೆ, ಮಾತಿನ ಓಘ, ಘಾತ, ಲಯದ ಮೇಲೆ ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದರು. ಆದರೆ ನನಗೆ ನನ್ನ ಭಾಷೆಯ ಬಗ್ಗೆ ಮುಜುಗರ ಇತ್ತು. ಮಾತಿನ ಇಂಟೋನೇಶನ್ ಸರಿಯಾಗಿ ಬರದಿದ್ದಲ್ಲಿ ಅವರು ನನ್ನ ಬೆನ್ನ ಮೇಲೆ ಗುದ್ದಿ ತಿದ್ದುತ್ತಿದ್ದರು. ಆಗೆಲ್ಲ ಅವರು ನಾನು ಹೇಳದೆ ಬಿಟ್ಟು ಓಡಿಹೋಗ್ತೇನೆ ಅಂದುಕೊಂಡಿದ್ದರು. ಆದರೆ ನಾನು ಹಠದಿಂದ ಮಾತುಗಾರಿಕೆಯನ್ನು ಸಾಧಿಸುತ್ತಿದ್ದೆ. ಅಷ್ಟೆ ಅಲ್ಲ ರಂಗಭೂಮಿಯಲ್ಲೂ ನೆಲೆ ಕಂಡಿದ್ದೇನೆ. ಎಂದು ತಮ್ಮ ರಂಗಭೂಮಿಯ ಸುರುವಾತಿನ ದಿನಗಳ ನೆನೆದು ಭಾವುಕರಾಗುವ ಇಕ್ಬಾಲ್ ಅವರ ವ್ಯಕ್ತಿತ್ವದಲ್ಲಿ ಸುಬ್ಬಣ್ಣ, ಕಾರಂತರು, ಮಾಸೂರರು ಮತ್ತು ಶ್ರೀರಂಗ, ಕೈಲಾಸಂ, ದಾರಿಯೋ ಪೋ, ಷೇಕ್ಷಪೀಯರ ಮಹಾಶಯರು ನಿರ್ಮಿಸಿರುವ ಉದಾತ್ತ ಪಾತ್ರಗಳೂ ಮಿಲನಗೊಂಡಿವೆ.

`ಮಕ್ಕಳ ರಂಗಭೂಮಿ ಕನಸು ಆರಂಭವಾದದ್ದು ಭಾರತ ಭವನ ರಂಗಮಂಡಲದಿಂದ ಅನ್ನಬಹುದು. ನಾನು ನೀನಾಮ್ ವಿದ್ಯಾರ್ಥಿಗಳಿಗೆ ಬುರ್ಜ್ವಾ ದಿ ಜಂಟಲಮನ್ ನಾಟಕ ಮಾಡಿಸಿದ್ದೆ. ಆ ನಾಟಕದ ವಿನ್ಯಾಸ ಹೆಗ್ಗೋಡಿನ ಹಿತೈಷಿಗಳಿಗೆ ಬೆರಗು ಮೂಡಿಸಿತ್ತು. ಆ ಸುದ್ದಿ ಬಿ.ವಿ.ಕಾರಂತರ ಕಿವಿಗೆ ಬಿದ್ದದ್ದೆ ನನ್ನನ್ನು ಭೋಪಾಲಿಗೆ ಬರಲು ಹೇಳಿ ಕಳುಹಿಸಿದರು. ಆಗ ನಾನು ಕಾಸರಗೋಡಿನಲ್ಲಿ ನಾಟಕ ಮಾಡಿಸುತ್ತಿದ್ದೆ. ನಾಟಕ ಮುಗಿಸಿ ಬಂದಾಗ ಕಾರಂತರು ಕರೆದೊಯ್ಯಲು ಹೆಗ್ಗೋಡಿಗೆ ಬಂದಿದ್ದರು. ಮುಂದೆ ರಂಗಮಂಡಲದಿಂದ ರೈಲಿನಲ್ಲಿ ಹಿಂದಿರುಗುವಾಗ ನನಗೆ ಮಕ್ಕಳಿಗಾಗಿ ದೊಡ್ಡವರು ನಾಟಕ ಮಾಡುವ ಆಲೋಚನೆ ಬಂತು. ಅಲ್ಲಿಂದ ಬಂದವನೆ ಚಿಣ್ಣ-ಬಣ್ಣ ರೆಪರ್ಟರಿ ಆರಂಭಿಸಿದೆ.
ಮುವ್ವತ್ತೈದು ವರ್ಷಗಳ ರಂಗಭೂಮಿಯ ಜೀವನದಲ್ಲಿ ಚಿಣ್ಣ-ಬಣ್ಣ ರೆಪರ್ಟರಿ ಸ್ಥಾಪಿಸಿ ಮಕ್ಕಳ ರಂಗಭೂಮಿಯಲ್ಲಿ ಕೆಲಸ ಮಾಡಿದ್ದಾರೆ. ಚಿತ್ರ-ಶಿಲ್ಪಕಲೆಗಳಲ್ಲಿ ವಿಶೇಷ ಪರಿಣತಿ ಪಡೆದಿದ್ದಾರೆ. ರಾಜ್ಯದಾದ್ಯಂತ ನಾಟಕ ಸಂಸ್ಕೃತಿ ಬೆಳೆಸುವಲ್ಲಿ ಪ್ರಮುಖರಾದ ನಿದರ್ೇಶಕರುಗಳಲ್ಲಿ ಇವರ ಹೆಸರೂ ಮಾನ್ಯವಾಗಿದೆ. ಹ್ಯಾಮ್ಲೆಟ್, ಪೋಲಿಕಿಟ್ಟಿ, ಬೂರ್ಜ್ವಾ ದಿ ಜಂಟಲ್ ಮನ್, ವಿದಿಶೆಯೇ ವಿದೂಷಕ, ಉಂಡಾಡಿ ಗುಂಡ, ಸೂಳೆ ಸನ್ಯಾಸಿ ಇವರು ಮಾಡಿಸಿರುವ ಪ್ರಮುಖ ನಾಟಕಗಳು. ರಂಗಾಯಣದ ಚಿಣ್ಣರಮೇಳ, ಆದಿಮ ಸಂಸ್ಥೆಯ ಮಕ್ಕಳ ಶಿಬಿರಗಳು ಇವರ ಸಾರಥ್ಯದಲ್ಲಿಯೇ ಆರಂಭಗೊಂಡವು.
ಒಬ್ಬ ಏನೆಲ್ಲ ಆಗಬಲ್ಲ – ಆದರೆ ಕ್ರಿಯಾಶೀಲನಾಗಿ ಎಷ್ಟು ಸಾಧಿಸಬಲ್ಲ ಎಂಬ ಮಾತಿಗೆ ಇವರ ಫ್ಯಾಂಟಸಿಯ ದುನಿಯಾ ವಿಶಾಲವಾದುದು. ರಂಗನಿರ್ದೇಶಕ, ರಂಗವಿನ್ಯಾಸಕ, ಚಿತ್ರಕಾರ, ಶಿಲ್ಪಿ, ನೃತ್ಯಸಂಯೋಜಕ, ಸಂಘಟಕರಾಗಿಯೂ ಗುರುತಿಸಿಕೊಂಡವರು. ವಿಶೇಷವಾಗಿ ಅವರ ಶೈಲಿಯ ನಾಟಕಗಳಲ್ಲಿ ಆದಿಮ ಸಂಸ್ಕೃತಿಯ ಭಾವಸ್ಫಂದನೆಯ ಗುಣಗಳು ನಟನ ದೇಹಕ್ಕೆ ಪೂರಕವಾಗಿ, ಭಾವಪ್ರೇರಕವಾಗಿ ಅಭಿವ್ಯಕ್ತಗೊಳ್ಳುವ ವಿಧಾನವೊಂದು ಕ್ರಿಯೆಯಾಗಿ ಒದಗಿಬರುತ್ತದೆ. ಅದು ವ್ಯವಹರಿಸುವ ಜ್ಞಾನ ಸಹಜವಾದ್ದು ಅನ್ನುವ ಕಾರಣದಿಂದ ಅದರ ಗ್ರಹಿಕೆ ಮೇಲ್ಮಟ್ಟಕ್ಕೆ ಲೈಂಗಿಕ ಅಪೇಕ್ಷೆಯ ಹಾಗೆ ಅಥವಾ ಕ್ಲೀಷೆ ಎಂದೆನ್ನಿಸಬಹುದು. ಆದರೆ ಲೋಕರೂಢಿಯಲ್ಲಿ ದಮನಿಸಲ್ಪಟ್ಟ ಆಕಾಂಕ್ಷೆಗಳನ್ನು ಆಯಾ ಪಾತ್ರದ ಆವರಣಕ್ಕೆ ಸಂಬಂಧಪಟ್ಟಂತೆ ಮರು ನಿರೂಪಿಸುವ ಅವರ ಅಭಿನಯ ಕ್ರಮ ರಮ್ಯವಾಗಿದೆ. ನಾಟಕದ ಆರಂಭದಿಂದ ಅಂತ್ಯದವರೆಗೆ ಎಲ್ಲಾ ಪಾತ್ರಗಳಲ್ಲೂ ಒತ್ತೊತ್ತಿ ಬರುವ ಬಾಹ್ಯಚೇಷ್ಟೆಗಳು, ಆ ಆಂಗಿಕಕ್ಕೆ ಸರಿಹೊಂದುವ ಮಾತಿನಶೈಲಿಯೂ, ರಂಗವಿನ್ಯಾಸವೂ, ವಸ್ತ್ರಾದಿಯಾಗಿ ಒಟ್ಟೂ ರಂಗತಂತ್ರವೂ ವಿಭಿನ್ನಶೈಲಿಯಲ್ಲಿ ಮೂರ್ತಗೊಂಡಿರುತ್ತವೆ. ಈ ರೀತಿಯ ರಂಗಶೈಲಿಯ ಅಧ್ಯಯನದ ಹುಡುಕಾಟವನ್ನು ಇನ್ನೂ ಗಟ್ಟಿಗೊಳಿಸುವ ಸಲುವಾಗಿ ಇಕ್ಬಾಲ್ ಅಹ್ಮದ್ ಅವರು ಶಿಕಾರಿಪುರದಲ್ಲಿ ‘ಗುಡಿ ಸಾಂಸ್ಕೃತಿಕ ಕೇಂದ್ರ ಸ್ಥಾಪಿಸಿದ್ದಾರೆ. ಅದು ರಂಗಭೂಮಿಯವರ ಲ್ಯಾಬ್ (ಪ್ರಯೋಗಾಲಯ) ಆಗಿ ಬೆಳೆಸಬೇಕೆಂಬ ಹಂಬಲವೂ ಅವರಿಗಿದೆ.

ಕಾಮೆಂಟ್‌ಗಳಿಲ್ಲ:

ಧಾರವಾಡ ಎಂಬ ಸ್ವಾವಲಂಬನೆಯ ಸಾಂಸ್ಕೃತಿಕ ನಗರ

ಉತ್ತರಕರ್ನಾಟಕದ ಸಾಂಸ್ಕೃತಿಕ ಐಕಾನ್ ಧಾರವಾಡ. ದೇಶದ ಹೆಸರಾಂತ ಸಂಗೀತ ವಿದೂಷಿಗಳು, ಪಂಡಿತರು ಧಾರವಾಡ ನೆಲದಲ್ಲಿ ಸಂಗೀತ ಕಛೇರಿ ಕೊಡಲಿಕ್ಕೆ ಕಾಯುತ್ತಾರೆ ಹೇಗೋ ಹಾಗೆಯೇ ನ...