ಶುಕ್ರವಾರ, ಮೇ 25, 2012

ಚಿತ್ರದುರ್ಗದ ಜನಪದ ಕಲೆಗಳು

(ವಾರ್ತಾಭಾರತಿ ಕೃಪೆ)

ಕಿನ್ನರಿ ಜೋಗಿಗಳು ಅಥವಾ ಅರ್ಜುನ ಜೋಗಿಗಳು ಎಂದು ಕರೆಯುವ ಜನಪದ ಮನರಂಜಕರ ಪ್ರಧಾನ ನೆಲೆಯೊಂದು ಮೊಳಕಾಲ್ಮೂರು ತಾಲೂಕಿನ ‘ನುಂಕಿಮಲೆ ಭೈರವನ ನೆಲೆ’, ಸಾಂಸ್ಕೃತಿಕ ಮಹತ್ವವುಳ್ಳದ್ದು. ಕಿಂದರಿ ಜೋಗಿಗಳು, ಅತಿಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಚಳ್ಳಕೆರೆ ತಾಲೂಕಿನ ದೇವರಹಳ್ಳಿಯೂ ಕುತೂಹಲಕಾರ ವಾದ ಅಧ್ಯಯನಕ್ಕೆ ವಸ್ತುವಾಗ ಬಲ್ಲದು. ಈ ಜಿಲ್ಲೆಯಲ್ಲಿನ ಗೊರವರ ವಿಶಿಷ್ಟ ದೋಣಿ ಸೇವೆ, ಡೊಳ್ಳು ಕುಣಿತಗಳು ಗಮನಾರ್ಹ.ಹಗಲು ವೇಷದವರು ಆಗಾಗ್ಗೆ ಇಣುಕು ಹಾಕುತ್ತಾರೆ.ಇವರು ವೈವಿಧ್ಯಮಯವಾದ ವೇಷಗಳನ್ನು ಹಾಕುವುದರಿಂದ ಇವರನ್ನು ‘ಬಹುರೂಪಿಗಳು’ ಎಂದು ಕರೆಯುತ್ತಾರೆ.ಜಿಲ್ಲೆಯ ಪೂರ್ವಭಾಗದ ಹಿರಿಯೂರು ತಾಲೂಕಿನ ಗಡಿಯಂಚಿನ ಲಂಬಾಣಿ ತಾಂಡಗಳಲ್ಲಿ ‘ತಂಬಿಗೆ ಕುಣಿತ’ ಎಂಬ ವಿಶಿಷ್ಟ ಕುಣಿತ ಪ್ರಚಾರದಲ್ಲಿದ್ದರೆ, ಜಿಲ್ಲೆಯ ಪಶ್ಚಿಮದಂಚಿನ ದಾವಣಗೆರೆ ಪರಿಸರದಲ್ಲಿ ‘ಲಗೋರಿ ಕುಣಿತ’ ಎಂಬ ವಿಶಿಷ್ಟ ಲಂಬಾಣಿ ಕಲೆ ಇರುವುದನ್ನು ಗಮನಿಸಬಹುದು.
ಹಿರಿಯೂರು ತಾಲೂಕಿನ ಕರಿಯೋಬೆನಹಳ್ಳಿ ಎಂಬ ಗ್ರಾಮದಲ್ಲಿ ಗ್ರಾಮದೇವತೆ ಮಾರಕ್ಕನಿಗೆ ನಡೆಯುವ ಅರಿಶಿನ ತೂರುವ ಭಂಡಾರದ ಸೇವೆ ಒಂದು ವಿಶಿಷ್ಟ ಜನಪದ ಕುಣಿತದಿಂದ ಕೂಡಿದೆ. ಜುಂಜಪ್ಪನ ಗಣಿ ಸಂಪ್ರದಾಯ ಚಿತ್ರದುರ್ಗಕ್ಕೆ ವಿಶಿಷ್ಟವಾದ ಸಾಂಸ್ಕೃತಿಕತೆಯನ್ನು ಪ್ರತಿನಿಧಿಸುವ ಕಲೆಯಾಗಿದೆ.
ಮನೋರಂಜನಾ ಕಲೆಗಳು:-
ಈ ಮನರಂಜನೆಯ ಕಲೆಗಳು ಧಾರ್ಮಿಕ ಪ್ರಕ್ರಿಯೆಗೆ ಥಳುಕು ಹಾಕಿಕೊಂಡೇ ಬರುವುದನ್ನು ಪೀರಲ ಹಬ್ಬದಲ್ಲಿ ಗಮನಿಸಬಹುದು.ಹಿಂದೂ, ಮುಸ್ಲಿಂ ಭಾವೈಕ್ಯದ ಈ ಹಬ್ಬವನ್ನು ವೇಷಗಳ ಹಬ್ಬ ಎಂದೇ ಕರೆಯಲಾಗುತ್ತದೆ. ಈ ಸಂಧರ್ಭದಲ್ಲಿ ಅಲಾಬಿ ಗುಂಡಿಯ ಸುತ್ತ ಕುಣಿಯುವ ಅಲಾಬಿ ಕುಣಿತ, ಅದರ ಹೆಜ್ಜೆಪಾಡು ಬಹಳ ವಿಶಿಷ್ಟವಾದುದು. ಈ ಹಬ್ಬದ ಇಡೀ ರಾಜವಾದ್ಯವೆಂದರೆ ತಪ್ಪಡೆ. ಇದರ ಹತ್ತು ಹಲವು ಚಮತ್ಕಾರ ಗಳಿಂದ ಹಬ್ಬಕ್ಕೆ ಅಪೂರ್ವ ಶೋಭೆ ತರುತ್ತದೆ. ಅತ್ಯಂತ ಜನಪ್ರಿಯವಾದ ಹುಲಿವೇಷ, ಪೋಟಿ ವೇಷ, ಕರಡಿ ವೇಷಗಳು ರಂಗು ತುಂಬುತ್ತವೆ. ರಂಜನೆಗಾಗಿ ಹಿಡಂಬಿವೇಷ, ಸತ್ತೋರ ವೇಷ ಹಾಕುವುದುಂಟು.ಮ್ಯಾಸಬೇಡರು ‘ಮೋಡಿ’ ಕಲೆಯನ್ನು ಪ್ರದರ್ಶಿಸುವುದುಂಟು.ಮನರಂಜನಾ ಪ್ರಧಾನವಾದ ‘ಮರಗಾಲು ಕುಣಿತ’ ಎಂಬ ವಿಶಿಷ್ಟ ಹಬ್ಬದಲ್ಲಿ ಆಚರಿಸಲ್ಪಡುತ್ತದೆ. ಗಣೇಶನ ಹಬ್ಬದಲ್ಲಿ ಕೀಲು ಕುದುರೆ ಕುಣಿತವೂ ಮನರಂಜನೆಯ ಕಲೆಯಾಗಿ ಪ್ರದರ್ಶಿತವಾಗುತ್ತಿದೆ.
ಕೋಲಾಟವಂತೂ ಕರ್ನಾ ಟಕದಾದ್ಯಂತ ಪ್ರಚಲಿತವಿರುವ ಕಲೆಯಾದರೂ, ಈ ಜಿಲ್ಲೆಯ ಮ್ಯಾಸ ಬೇಡರ, ಕಾಡುಗೊಲ್ಲರು, ಕೋಲು ಮೇಳಕ್ಕೆ ಪ್ರಸಿದ್ಧಿ. ಇವರ ಮದುವೆಗಳಲ್ಲಿನ ಹಸೆಯ ರಂಗೋಲಿಗಳು ವಿಶಿಷ್ಟ ವಾಗಿದೆ. ಸಿರಿಗೆರೆಯ ಮಠ ಜಾನಪದ ಸಂವರ್ಧನೆಯಲ್ಲಿ ವಿಶಿಷ್ಟ ಪಾತ್ರ ವಹಿಸಿದ್ದು, ಪ್ರತಿವರ್ಷ ಸೋಬಾನೆ, ವೀರಗಾಸೆ ಸ್ಪರ್ಧೆಗಳನ್ನು ಏರ್ಪಡಿಸುತ್ತಿರುವುದು ಸ್ತುತ್ಯಾರ್ಹ.ಜನಪದ ಕಲೆಯ ವೀರಗಾಸೆಯಂತೂ ಎಲ್ಲಾ ಹೊಸತನ್ನು ಹೀಗೆ ಮೈಗೂಡಿಸಿಕೊಂಡು ಬೆಳೆಯಬಲ್ಲದು ಎಂಬುದಕ್ಕೆ ಚಿತ್ರದುರ್ಗದ ಶಿವಣ್ಣ ಎಂಬ ವಿಶಿಷ್ಟ ವೀರಗಾಸೆ ಕಲಾವಿದ ಖಡ್ಗಗಳನ್ನು ಕನ್ನಡವಲ್ಲದೇ ತಮಿಳು, ತೆಲುಗು, ಹಿಂದಿ,ಉರ್ದು, ಇಂಗ್ಲೀಷ್‌ನಲ್ಲೂ ಮಾಡಿ ತೋರಿಸಿ ಹೊಸ ಶಕೆ ಪ್ರಾರಂಭಿಸಿರುವುದು ಸ್ವಾಗತಾರ್ಹ. (ಸಿ.ಜಿ.ಕೆ. ನಿರ್ದೇಶನದ ಮಹಾಚೈತ್ರದಲ್ಲಿ ವೀರಗಾಸೆಯ ಬಳಕೆ ಅದ್ಭುತವಾಗಿ ಮೂಡಿಬಂದಿದೆ).
ಸಂಪ್ರದಾಯ, ಆರಾಧನಾ ಪ್ರಧಾನವಾದ ಕಹಳೆ, ಚನೂಳ, ಉರುಮೆ, ತಪ್ಪಡೆಗಳು, ಸನಾಯಿ, ನಂದಿಕೋಲು ಕುಣಿತಗಳು ಇಂದಿರ ಕಾಲಕ್ಕೆ ತಕ್ಕಂತೆ ಚುನಾವಣೆ ಮೆರವಣಿಗೆಗಳಲ್ಲಿ ಮೆರೆದು ಮರುಹುಟ್ಟು ಪಡೆಯುತ್ತಿರುವುದನ್ನು ಕಾಣಬಹುದು. ಜನಪದ ಕಲೆಗಳು ಎಂಥ ಸಂಕಷ್ಟವನ್ನು ಎದುರಿಸಿಯೂ ಬದುಕಬಲ್ಲವೆಂಬುದನ್ನು ಇಲ್ಲಿಯ ಕೆಲವು ಕಲೆಗಳು, ವಾದ್ಯಗಳು ತೋರಿಸುತತಿವೆ. ಈ ಜಾನಪದ ಗಂಗೆ ಒಂದು ಚಿರಂತನ ಚಿಲುಮೆ.

ಕಾಮೆಂಟ್‌ಗಳಿಲ್ಲ:

ಧಾರವಾಡ ಎಂಬ ಸ್ವಾವಲಂಬನೆಯ ಸಾಂಸ್ಕೃತಿಕ ನಗರ

ಉತ್ತರಕರ್ನಾಟಕದ ಸಾಂಸ್ಕೃತಿಕ ಐಕಾನ್ ಧಾರವಾಡ. ದೇಶದ ಹೆಸರಾಂತ ಸಂಗೀತ ವಿದೂಷಿಗಳು, ಪಂಡಿತರು ಧಾರವಾಡ ನೆಲದಲ್ಲಿ ಸಂಗೀತ ಕಛೇರಿ ಕೊಡಲಿಕ್ಕೆ ಕಾಯುತ್ತಾರೆ ಹೇಗೋ ಹಾಗೆಯೇ ನ...