ನೈತಿಕತೆ ಇದ್ದರೆ ಪೇಜಾವರ ಶ್ರೀ ಮಡೆಸ್ನಾನ ಮಾಡಿ ತೋರಿಸಲಿ : ಸಂಸದ ವಿಶ್ವನಾಥ
ಮೈಸೂರು, ಡಿ.7: ಪರಂಪರೆ, ಸಮಾನತೆ ದೀನ-ದಲಿತರ ಬಗ್ಗೆ ಮಾತನಾಡುವ ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಮತ್ತು ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್. ಆಚಾರ್ಯ ಅವರು ದಲಿತರು ಊಟ ಮಾಡಿದ ಎಂಜಲೆಲೆ ಮೇಲೆ ಉರುಳು ಸೇವೆ (ಮಡೆಸ್ನಾನ) ಮಾಡಿ, ತಮ್ಮ ನೈತಿಕ ನಿಲುವನ್ನು ಸಮರ್ಥಿಸಿಕೊಳ್ಳಲಿ ಎಂದು ಸಂಸದ ಅಡಗೂರು ಎಚ್. ವಿಶ್ವನಾಥ್ ಸವಾಲು ಹಾಕಿದ್ದಾರೆ.
ಚಂಪಾ ಷಷ್ಠಿ ಸಂದರ್ಭ ಚೌತಿ, ಪಂಚಮಿ ಮತ್ತು ಷಷ್ಠಿ ದಿನದಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬ್ರಾಹ್ಮಣರು ಊಟ ಮಾಡಿದ ಎಂಜಲು ಎಲೆ ಮೇಲೆ ಶೂದ್ರರ ಉರುಳು ಸೇವೆ ಅವೈಜ್ಞಾನಿಕ ಹಾಗೂ ಮೌಢ್ಯತೆಯ ಪರಮಾವಧಿ ಅಲ್ಲದೆ ಇದೊಂದು ಸ್ವಸ್ಥ ಸಮಾಜದ ಮೇಲೆ ನಡೆಯುತ್ತಿರುವ ಸಾಂಸ್ಕೃತಿಕ ವ್ಯಬಿಚಾರ ಆದರೆ, ಈ ಅನಿಷ್ಠ ಪದ್ಧತಿಯನ್ನು ಪೇಜಾವರ ಶ್ರೀ ಮತ್ತು ವಿ.ಎಸ್. ಆಚಾರ್ಯ ಸಮರ್ಥಿಸಿಕೊಂಡಿರುವ ಜತೆಗೆ ಪುರೋಹಿತಶಾಹಿಯ ನಿಲುವಿಗೆ ಕಟ್ಟುಬಿದ್ದು ಮಾತನಾಡುತ್ತಿರುವುದು ಸರಿಯಲ್ಲ ಎಂದು ಅವರು ಕಿಡಿಕಾರಿದರು.
ಇದೊಂದು ಪುರೋಹಿತಶಾಹಿಗಳು ಇತರ ಜನಾಂಗದವರನ್ನು ಕೀಳು ಭಾವನೆಯಿಂದ ಕಾಣಲು ಸ್ವತಃ ರೂಪಿಸಿರುವ ಆಚರಣೆಯಾಗಿದೆ. ದೇವಸ್ಥಾನದ ಆಡಳಿತ ಮಂಡಳಿ ಕೂಡಲೇ ಈ ವ್ಯವಸ್ಥೆಯನ್ನು ರದ್ದುಗೊಳಿಸಬೇಕೆಂದು ಅವರು ಆಗ್ರಹಿಸಿದರು. ದೇವಸ್ಥಾನದ ಆಡಳಿತ ಮಂಡಳಿಯ ಒತ್ತಡಕ್ಕೆ ಮಣಿದು ಅಲ್ಲಿಯ ಜಿಲ್ಲಾಡಳಿತ ಮಡೆಸ್ನಾನ ಸೇವೆಯ ಆಚರಣೆಗೆ ಅವಕಾಶ ಮಾಡಿಕೊಟ್ಟಿರುವುದು ದುರ್ದೈವದ ಸಂಗತಿ ಎಂದು ವಿಶ್ವನಾಥ್ ವಿಷಾದ ವ್ಯಕ್ತಪಡಿಸಿದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ