ಆಟಮಾಟ ಧಾರವಾಡ ನೆಲದಲ್ಲಿ ಒಂದು ನಾಟಕ ತಂಡವಾಗಿ ಹುಟ್ಟಿ. ನಾಟಕ ಮಾಡುತ್ತಾ ಗೆಳೆಯರನ್ನು ಸಂಘಟಿಸುತ್ತಾ ಬಂದಿದೆ
ಸೋಮವಾರ, ಡಿಸೆಂಬರ್ 5, 2011
ನಿಯತಿ
ನಿಯತಿ
ಜೈಲಿನಿಂದ ಹೊರ ಬಂದಾಗ ಸಾವಿನ ಆಚೆಯ ಭಯಂಕರ ಲೋಕದಲ್ಲಿ ಕಾಲಿಟ್ಟಂತಾಯಿತು.ವಾಸದ ಕೋಣೆ, ಬಟ್ಟೆ ಒಗೆಯುವ ಕೆಲಸ, ಬೆಳಗಿನ ಪ್ರಾರ್ಥನೆ, ಒರಟಾದ ಮಾತಿನೊಳಗಿನ ಮೃದುತನ, ಊಟದ ಸಾಲು, ಹೊದೆಯುವ ಬಟ್ಟೆ, ಕಲ್ಲು ಬೆಂಚಿನ ನುಣುಪು, ಹೂವಿನ ತೋಟ, ಎಲ್ಲ ಒಂದೊಂದಾಗಿ ನೆನಪಾದವು.ಅಲ್ಲಿ ಮೂಡುವ ಸೂರ್ಯ, ಇಲ್ಲಿ ಉರಿಯುತ್ತಿರುವ ಸೂರ್ಯ ಬೇರೆಬೇರೆ ಎಂದು ಭಾವಿಸಿದ. ಹೆಂಡತಿ ಕೊಂದಾಗ ಭಾರಿ ಸೆಳವಿನ ಸುಳಿಯಲ್ಲಿ ಸಿಕ್ಕು ಒದ್ದಾಡಿದ್ದ. ಮತ್ತದೆ ಖಾಲಿತನದ, ಆತ್ಮಹತ್ಯಯ ಎಳೆ ಮನಸ್ಸಿನಲ್ಲಿ ಮೂಡಿದಾಗ ಮಹಾತ್ಮಾಜಿ ಅವರ ಫೊಟೊ ನೆನೆದ- ಆ ಚಿತ್ರದ ಚಿತ್ತ ಇವನ ಬಂಜೆತನವ ಕಂಡು ಮರಗುತ್ತಿತ್ತು. ಹೋಗುವುದೆಲ್ಲಿಗೆ ? ಹಾಳು ಸುರಿದು ದೆವ್ವಿನ ಮನೆಯೆಂದು ಹೆಸರಾದ ಆ ಊರಿನ, ಆ ಕೇರಿಯ, ಆ ಮನೆಗೆ.... ಮತ್ತೆ ಹೊಸ ಬದುಕ ಕಟ್ಟಿಕೊಳ್ಳುವ ಹಂಬಲವಿರಲಿಲ್ಲ. ಹಿಂಬಾಲಿಸುವ ನೆರಳಿಗೂ ಹೆದರಬೇಕಾದ ಅನಿವಾರ್ಯ ಬಂದೊದಗಿತ್ತು. ವರಾಂಡ ದಾಟುವತನಕ ಗೋಡೆಯ ಕವನೆಳ್ಳಿಗೆ ಬರುವತನಕ ಅವರೆಲ್ಲ ಕೈಯತ್ತಿ ವಿದಾಯ ಹೇಳುತ್ತಿದ್ದರು, ಆಸೆಗಣ್ಣಿಂದ ಬೀಳ್ಕೊಡುತ್ತಿದ್ದ ಅವರ ಮನದಲ್ಲಿ "ಒಂದಲ್ಲ ಒಂದು ದಿನ ನಾವೂ ಹೀಗೆಯೆ ಹೊರ ಬರುತ್ತೇವೆ" ಎಂಬ ಅಚಲ ನಂಬಿಕೆ ಮೂಡಿರಬಹುದು.... ಹಿರಿಯ ದೋಬಿ ಬಿಗಿ ಅವುಚಿ ಹಿಡಿದು "ನೆನಪಿರಲಿ" ಎಂದು ಬಿಕ್ಕಳಿಸಿದ. ಆಲದ ಮರದ ಘಂಟೆ ಬಾರಿಸಲು ಅವರು ಅತಿ ವಿನಯದಿಂದ ಮಾತಾಡಿಸಿ ತಮ್ಮ ಕೆಲಸಗಳಿಗೆ ನಡೆದರು. ನಡಾವಳಿ ಪತ್ರ, ಉಳಿತಾಯದ ರೊಕ್ಕ ಕೈಗಿಟ್ಟು ಬೆನ್ನು ಚಪ್ಪರಿಸಿದ ಜೈಲರ್ "ಹದ ಹಿಡಿದು ಬಾಳೇವ್ ಕಟ್ಟಕೋ" ಮುಂತಾಗಿ ಈ ಜೀವ ಜಗತ್ತಿನ ಬಗ್ಗೆ ತನಗಿದ್ದ ಅಸಮಾಧಾನ ತೋಡಿಕೊಂಡ. ತಲೆ ಧಿಮ್ಮಂತ ಭಾರ ಹೊತ್ತು ಪೊರೆ ಕಳಚಲಿರುವ ಹಾವಿನ ಮಬ್ಬುತನ ಜಿಡ್ಡುತನದ ಸಂಕಟದಲ್ಲಿ ಒದ್ದಾಡಿದ.
ಗೋಡೆಯ ಹೊರಭಾಗದಲ್ಲಿ ರಣ ಹೊಡೆಯುವ ಬಿಸಿಲಿತ್ತು. ಹದಿನಾಲ್ಕು ವರ್ಷದ ಹಗಲು ರಾತ್ರಿಗಳು ಮುಹೂರ್ತ ಕಾಲ ಮೂಡಿ ಮಾಯವಾದವು.ಗಿಡದ ನೆರಳಿನಲ್ಲಿ ಬಿಲ್ಡಿಂಗಿಗೆ ಒತ್ತಿಕೊಂಡು ದಣಿವಾರಿಸುತ್ತ ಕುಳಿತವರ ಕೈಯಲ್ಲಿ ಬುತ್ತಿಚೀಲ, ನೀರಿನ ಬಾಟಲಿ ಕೊಡೆಗಳಿದ್ದವು. ಟಾರಿನ ಮೇಲೆ ಗದ್ದಲೋ ಗದ್ದಲ-ತಾರಕದಲ್ಲಿ ಕಿರಚುವ ಧ್ವನಿಗಳು- ಬಾಗಿಲಿಗೆ ಜೋತು ಬಿದ್ದರೂ ಜನ ಮಂದೆಯ ಒಳಗೆ ದಬ್ಬುತ್ತ ಜಾಗ ಮಾಡಿಕೊಡುತ್ತಿದ್ದ ಕಂಡಕ್ಟರ್ ದೂರದಿಂದಲೇ 'ಪರಿಚಯದವ' ಎಂಬಷ್ಟೂ ಆಪ್ತವಾಗಿ ಕೂಗಿ ಕರೆದ.....ಈಗ ಮತ್ತೊಮ್ಮೆ ನೆನೆಗುದಿಗೆ ಬಿದ್ದ ಪ್ರಶ್ನೆ 'ಹೋಗುವುದೆಲ್ಲಿಗೆ ?
ಸುಳಿದಾಡುವ ಮನದೊಳಗ ಏನು ಮೂಡಿತೊ 'ಭರ್ರ' ತುಂಬಿದ್ದ ಬಸ್ಸಿನೊಳಗ ಒಂದ ಕಾಲಿಡುವಷ್ಟು
ಜಾಗ ಮಾಡಿಕೊಂಡು ಬಾಗಿಲಲ್ಲೇ ಜೋತಾಡಿದ. ದೇಹದ ಅರ್ಧ ಭಾಗ ನೆಲೆ ಕಂಡಿತ್ತು ಉಳಿದರ್ಧ ಗಾಳಿಯಲ್ಲಿ ತೇಲಾಡಿಕೊಂಡು ಸೀಟಿನ ಹಿಂಬಾಗದ ಹಿಡಿಕೆಯಲ್ಲಿ ಆಸರೆ ಕಂಡಿತ್ತು.
ಒಳ ಹೊರಗೇನಿಲ್ಲ ಶೃತಿಗೂಡದ ಮನಕ
ಅನುದಿನವೂ ನಿನ್ನೊಲವಿನ ಧ್ಯಾನ | ಬಸವಾ
ನಿನ್ನ ನಿಲವು ಇರಗೊಡಲಿಲ್ಲ ನಿನ್ನೊಳಗೆ.....
ಎದುರು ಬೀಸುವ ಗಾಳಿಗೆ ಭಜನಿ ಹಾಡಿದ. ಜಗತ್ತಿನ ದನಿಯೊಳಗೆ ದನಿಗೂಡಿಸದೆ ಕಿರುಚಿ ಹಾಡಬೇಕೆಂದಿದ್ದ ಆದರೆ ಅದಾಗಲೆ ಬಸ್ಸು ಬಸ್ಟ್ಯಾಂಡಿನೊಳಗೆ ನಿಂತಿತ್ತು. ಇವನು ಇಳಿಯಬೇಕಿರಲಿಲ್ಲ ಹಿಂದಿನಿಂದ ಯಾರೊ ತಳ್ಳಿದರು ನೆಲಕ್ಕೆ.
॑ ॑ ॑ ॑ ॑ ॑
ಥರಗುಟ್ಟುವ ಛಳಿಯಲ್ಲಿ ಉಳಿದರ್ಧ ರಾತ್ರಿಯ ತೀರಿಸಿ ಹುಟ್ಟಿಬೆಳೆದಾಡಿದ ಮನೆ ಕಾಣುವ ಹಂಬಲ ಹೊತ್ತು ಬಂದಿದ್ದ. ಬಿಕೋ ಎನ್ನುತ್ತಿದ್ದ ನಿಲ್ದಾಣದಲ್ಲಿ- ಕಲ್ಲು ಬೆಂಚಿನ ಕೆಳಗೆ ಸಂದುಗೊಂದುಗಳಲ್ಲಿ ಒಂದೆರಡು ಆಕೃತಿಗಳು ಚೋಟುದ್ದದ ಕಂಬಳಿ ಕಾಲಿನವರೆಗೂ ಎಳೆದು ಗೂಡುಗಾಲು ಹಾಕಿ ಮುದುರಿಕೊಂಡು ಮಲಗಿದ್ದು ಕಾಣಿಸಿತು. ಹಿಂಬದಿಯ ತಾರಸಿಯ ಕೆಳಗೆ ಯಾರೋ ಹೂಂಗುಟ್ಟಿ ಕೆಮ್ಮಿದರು..... ಅಲ್ಲಿ ಮೂರ್ನಾಲ್ಕು ಮಂದಿ ಬೆಂಕಿ ಕಾಯಿಸುತ್ತಿದ್ದರು. ಥಂಡಾ ಹವೆಯಲ್ಲಿ ಬಿಸಿಗೆ ಮೈವೊಡ್ಡುವ ಆಸೆಯಿಂದ ಅತ್ತ ನಡೆದ- ಅವರು ಏಕಾಏಕಿ ಎದ್ದು ನಿಂತು 'ನೋಡುತ್ತಿಲ್ಲ' ಎಂಬಂತೆ ನಾಜೂಕಾಗಿ ನಟಿಸುತ್ತ ಗಮನಿಸತೊಡಗಿದರು. ಮಾತಿಗೆ ಮೊದಲಾಗಿ ನಯವಿನಯದಿಂದ ”ವ್ಯಾಳ್ಯಾ ಎಸ್ಟ ಆಗೆದ” ಕೇಳಿದ. ”ಸಾಡೇ ದೋ” ವಾಚ್ ಕಟ್ಟಿದವನೊಬ್ಬ ಉತ್ತರಿಸಿದ. ಹತ್ತಿರಕ್ಕೆ ಹೋದಾಗ ಅವರೆಲ್ಲ ದೂರ ಸರಿದು ಮಿಕಿ ಮಿಕಿ ಮುಖ ನೋಡಿಕೊಂಡರು. 'ಯಾವೂರು' ಅವರಲ್ಲೊಬ್ಬ ಕೇಳಿದ. ಜೀವಿತಾವಧಿಯ ಅರ್ಧ ಆಯಸ್ಸನ್ನು ಜೈಲಿನಲ್ಲಿ ಕಳೆದ ಇವನಿಗೆ ಯಾವ ಊರ ಹೆಸರು ಹೇಳಲಿ ಎಂಬ ಆತಂಕ. ಅವರ ಗಮನ ತಮ್ಮ ಬಗಲ ಚೀಲದೊಳಗಿನ ಕೊಡಲಿ ಕುಡಗೋಲುಗಳತ್ತ ಹೋಗಿತ್ತು, ಆದರೆ ಇವನ ಸಂಭಾವಿತ ಮುಖ ಅವರ ಉದ್ರೇಕಿತ ಮನಸ್ಸನ್ನು ಹಗುರಗೊಳಿಸಿತು.ತನಗೆ ಸ್ಪಷ್ಟವಾಗದ ಕೆಲವು ಪ್ರಶ್ನೆಗಳಿಗೆ ಅವನು ಎಂದೂ ಉತ್ತರ ಹೇಳಲು ಬಯಸಿದವನಲ್ಲ ಮತ್ತೂ ಆ ಹೊತ್ತಿನಲ್ಲೆಲ್ಲ ಉಸಿರು ಹಿಡಿದುಕೊಂಡು ತಣ್ಣಗಿರುತ್ತಿದ್ದ. ದೂರದಲ್ಲಿ ಬುಲೆಟ್ ಗಾಡಿ ಬರುವ ಸದ್ದಿಗೆ ಅವರೆಲ್ಲ ತಾಬಡತೋಬಡ ಕತ್ತಲಿಗೆ ಸರಿದರು. ಸದ್ದು ಹತ್ತಿರಕ್ಕೆ ಬಂದು ಪೋಲೀಸ್ ವಸತಿಗೃಹಗಳತ್ತ ಹೋಯಿತು.
” ಅದು ನನ್ನ ತಾಯಿಯ ತವರುಮನಿ ಅಲ್ಲಿ ಯಲಿಗಾರ ಸಿದ್ದಜ್ಜ ಅಂತ ಇದ್ದನಲ್ಲ ಅವರ ಮೊಮ್ಮಗ ನಾನು” ಅವರು ತದೇಕ ಚಿತ್ತದಿಂದ ನೋಡುತ್ತಿದ್ದರು.ಒಬ್ಬ "ನೀ ಹೆಣ್ತಿ ಸಾಯ್ಸಿ ಜೈಲಿಗೆ ಹೊದಾಂವ ಅಲ್ಲ?. ಎದೆ ಧಸಲ್ ಎಂದಿತು. ನೀನಾದ್ರೂ ಏನ್ ಮಾಡೀಯಾ? ಅಂಥಾಕಿ ಇದ್ದಳು ಬಿಡು,ಪಡಕೊಂಡು ಬಂದದ್ದು ಬಯಸಿ ಬೇಡಿದಳು". ಕೋಳಿ ಕೂಗುವ ಸರಿ ಹೊತ್ತಿಗೆ ಊರ್ ಮುಟ್ಟೋಣ ಎನ್ನುತ್ತ ಅವರೆಲ್ಲ ಹೊರಡುವ ತಯ್ಯಾರಿ ನಡೆಸಿದರು. ನಾಳೆಗೂ ಕರ್ಫ಼್ಯು ಮುಂದುವರಿದರೆ ಪೋಲೀಸರ ಕಣ್ಗಾವಲು ತಪ್ಪಿಸಿ ಅವರ ಇಕ್ಕೆಲವು ಮುರಿದು ಪರಾರಿ ಆಗುವುದೆಂದು ಗುಂಪಾಗಿ ತೀರ್ಮಾನಿಸಿದರು. ಹಿರೀಕನೊಬ್ಬ ಹೆಗಲ ಮೇಲೆ ಕೈಯಿಟ್ಟು " ನೋಡ್ ತಮ್ಮ ಈಗ್ ನೀನ್ ಹೊಂಟ ಊರಂಬೋದು ಊರಾಗಿ ಉಳಿದಿಲ್ಲ, ನಾಕ್ ದಿನ ಆತು ಸುಡುಗಾಡ್ ಆಗ್ಯೆದಾ.....ಅಂಗಡಿ ಮನಿಗಳು ಬೆಂಕಿಗಿ ಬಿದ್ದಾವು. ನಮಗೆಲ್ಲಾ ಯಾಕ ಬೇಕಿತ್ತು ಇದೆಲ್ಲ! ಈ ಹಾಳು ಜಾತಿ ಧರ್ಮದ ಕಾಲಾಗ ನಾವೆಲ್ಲ ಸತ್ಯಾನಾಸ ಆಗೇವಿ”. ಉಳಿದವರು ಲೊಚಗುಟ್ಟುತ್ತ ತರಾತುರಿ ಮಾಡಿದರು. ”ಒಂದು ಸಣ್ಣ ಅವಘಡ ಆ ಊರಿನ ನೆಮ್ಮದಿ ಕೆಡಿಸೆದೋ ತಮ್ಮ, ಈ ಯಾಳೆಕ್ಕ ನೀ ಆ ಊರು ಕಾಣೂದು ಬ್ಯಾಡ.... ಹೆಂಗ ಬಂದಿದಿ ಹಂಗ ತಿರುಗಿ ನಿನ್ನೂರಿಗೆ ಹೊಂಡು” ನಾಲ್ಕು ಬುದ್ಧಿ ಮಾತು ಹೇಳಿದ ಗತ್ತಿನಲ್ಲಿ ಕಣ್ಸನ್ನೆ ಮಾಡಿ ಅವರೊಡಗೂಡಿ ನಡೆದ. ಸಿದ್ಧಜ್ಜ ಇರುವಾಗ ಆ ಊರಿನ ದೈವ ಎಲ್ಲದನ್ನೂ ಏಕಮಾಡಿ 'ಅಲ್ಲಾ'ಗೆ ನೈವೇದ್ಯ ನೀಡತಿದ್ದ ಆ ಊರೊಳಗ, ಇಂದು ನಾ ಹಿಂದೂ ನೀ ಮುಸಲ್ಮಾನ್ ಅನ್ನುವ ಸಣ್ಣತನ ಮೂಡಿದ್ದಾದರೂ ಹೇಗೆ?. ಬಾಲ್ಯದ ನೆನುಪುಗಳ ಹೊತ್ತು ಬಂದಿದ್ದ ಜೀವಕ್ಕೆ ಆ ಊರಿನ ಅಂಗಳದಲ್ಲಿ ನಿಗಿನಿಗಿ ಕೆಂಡ
ಉರಿಯುತ್ತಿದ್ದದ್ದು ಕೇಳಿ ಮೈ ನರನಾಡಿಗಳು ತಣ್ಣಗಾದವು. ಅಜ್ಜನ ತಿಥಿಗೆ ಬಂದಾಗ ಕಣ್ತುಂಬ ನೀರು ತುಂಬಿಕೊಂಡಿದ್ದರಿಂದ ಆ ಊರು ನೆನಪಾಗಿ ಉಳಿದಿರಲಿಲ್ಲ. ಈಗ ಅಲ್ಲಿಗೆ ಹೋದರೂ ತನ್ನವರೆನ್ನುವ ಕರಳು ಇದ್ದಿರಲಿಲ್ಲ, ಆದ್ದರಿಂದ ಬೆಳಗಿನ ಹಾಲಿನ ಗಾಡಿ ಹಿಡಿದು ಹಣೂರ ತಲುಪುವದೆಂದು ನಿರ್ಧರಿಸಿ, ನಾಲ್ಕು ರಸ್ತೆಯ ಮೂಲೆಗೆ ಬಂದು ಹೊರಟಿದ್ದ ಲಾರಿಯೊಂದಕ್ಕೆ ಕೈವೊಡ್ಡಿ ಹಣೂರ ತಲುಪಿದ.
ಚುಮುಕು ಬೆಳಕಿನಲ್ಲಿ ಗುಡ್ಡದ ವಾರೆಯಗಲಕ್ಕೂ ಹಬ್ಬಿ ನಿಂತ ಊರು ಗುರುತಿಸಲಾರದಸ್ಟು ವಿಪರೀತ ಬೆಳೆದು ನಿಂತಿತ್ತು. ಈ ಬಿಲ್ಡಿಂಗ್ ಮನೆಗಳ ಮುಂದೆ ದೇಸಾಯರ ಆರೇಳಂಕಣದ ವಾಡೆ ದನ ಕಟ್ಟುವ ದಂಧಕ್ಕಿ ಹಾಗೆ ಕಾಣಿಸಿತು. ಅಂದು ಊರಿಗೆ ಊರೇ ತನ್ನ ತಾ ಕೆಲಸದಲ್ಲಿ ತೊಡಗಿಸಿಕೊಂಡಿರುತ್ತಿತ್ತು, ಇಂದು ಅದೆ ಹಣೂರು ಸೂರ್ಯ ಮೂಡಿದರೂ ಮಲಗಿ ನಿದ್ರಿಸುತ್ತಿತ್ತು. ಧರ್ಮಣ್ಣನ ಹೆಂಡತಿ ಅಂಗಳ ಉಡುಗಿ ಸಗಣಿ ಸಾರಿಸುತ್ತಿದ್ದಳು. ಚಣ ಹೊತ್ತು ಸೇಡು ತೀರಿಸಿಕೊಳ್ಳಲು ಮೈ-ಮನ ತುಡಿಯುತ್ತಿತ್ತು.....ಗಾಂಧಿಯವರ ನೆನಪಾಗುತ್ತಲೇ ಮನುಷ್ಯತ್ವ ಕಾಡಿತು..... ನೆಲದಲ್ಲಿ ನೆದರಿಟ್ಟು ಮನೆಯಂಗಳದಲ್ಲಿ ನಿಂತಿದ್ದ. ವಾರಸುದಾರರಿಲ್ಲದ ಹಾಳು ಮನೆ- ಮಾಳಿಗೆ ಮೇಲೆ ಮೊಣಕಾಲುದ್ದ ಬೆಳೆದ ಹುಲ್ಲು, ಹುಳು ಹಿಡಿದ ಛಾವಣಿಯ ಕಂಬ, ಕಾರಹುಣ್ಣಿವೇಲಿ ಬರೆದಿದ್ದ ಸ್ವಸ್ತಿಕ ಚಿತ್ರ ಮಸ್ಕಮಸುಕು ಹಾಗೆ ಉಳಿದಿತ್ತು. ಬಾಗಿಲಿಗೆ ಅಂಗೈ ಅಗಲದ ಕೀಲಿ ಹಾಕಲಾಗಿತ್ತು. ನಸುಕಿನಲ್ಲಿ ಹೀಗೊಬ್ಬ ದೆವ್ವಿನ ಮನೆ ಮುಂದೆ ನಿಂತಿದ್ದು ಖಾಸೀಮನ ಕಿವಿಗೆ ಬಿದ್ದಿತೊ ಏನೋ? ರಸ್ತೆಯಿಂದಲೆ ಕೂಗಿದ " ಓ ಮುತ್ತು ಭಯ್ಯಾ ಯಾವಾಗ್ ಬಂದಿದಿ? ಮನೀಗ್ ಬಾ " ಆಗಿನ್ನೊ ಮೀಸೆ ಮೂಡಿದ್ದ ಖಾಸೀಮನ ಮುಖದಲ್ಲಿ ಇಂದು ಗಡ್ಡ ಹುಲುಸಾಗಿ ಬೆಳೆದಿತ್ತು.
ಖಾಸೀಮನ ಮನೆ ತುಂಬ ಮಂದಿ ತುಂಬಿದ್ದರು. ಅವರೆಲ್ಲ ತೋರಣವಾಡಿಯಿಂದ ಬಂದಿದ್ದರು. ಖಾಸೀಮನ ಹೆಂಡತಿ ಕೈ ಕಾಲು ಮುಖ ತೊಳೆದಾದ ಮೇಲೆ ಬಟ್ಟಲು ತುಂಬ ಕರೇ ಚಹ ಕೊಟ್ಟಳು ಕುಲು ಕುಲು ನಗುತ್ತಲಿದ್ದ ಖಾಸೀಮ ಬಂದವರಿಗೆ ಮತ್ತು ಮಕ್ಕಳಿಗೆ ಮುತ್ತು ಭಯ್ಯಾನ ಗುರ್ತು ಹೇಳಿದ. ಹದಿನಾರು ವರ್ಷದ ಊರಿನ ಬಾರಹ್ ಬಾನಗಡಿ ಮಾತಾಡುವುದಿತ್ತು. "ಮತ್ತೇನು ಭಯ್ಯಾ ಯಾವಗ ಬಿಡುಗಡಿ ಆತು" ಮಾತಿಗೆ ಪೀಠಿಕೆ ಹಾಕಿದ ಮಾತಿಗೆ ಕುಳಿತರೆ ತೀರದು ಎನ್ನಿಸಿ "ಮನೀಗಿ ಹೋಗಿ ಬರಾಣ ಬಾ"ಎಂದು ಹೊರಟ. ಖಾಸೀಮನ ಹೆಂಡತಿ -ಹುಳ ಹುಪ್ಪಟಿ ಇರ್ತಾವ್ ಗ್ವಾಡಿ ಸರದದ ಹುಷಾರು- ಎಂದಳು. ಬೆನ್ನು ಬಿದ್ದು ಬರುತ್ತಿದ್ದ ಸಣ್ಣ ಕೂಸನ್ನು ಬೆದರಿಸಿ ಹೆಂಡತಿ ಹತ್ತಿರ ಕಳಿ
ಸಿದ. ಅಳುವ ಕಂದನಿಗೆ " ಅಲ್ಲಿಗೆ ಸಣ್ಣ ಪೋರರೆಲ್ಲ ಹೋಗಬಾರದು ,ಅವ್ರು ಆ ಜೋಡಿ ದೆವ್ವಿನ ಮನೀಗೆ ಹೊಂಟಾರೂ, ನೀ ಶಾಣ್ಯಾ ಹೌಂದಲ್ಲೊ.......? ಹಂಗೆಲ್ಲ ಹಟ ಮಾಡಬಾರ್ದು" ಅವಳು ರಮಿಸುತ್ತಿದ್ದಳು.
ರಾವು ತುಂಬಿದ್ದ ಮನಿಯೊಳಗ ಕಾಲಿಟ್ಟಾಗ ಮಡುಗಟ್ಟಿದ್ದ ದುಃಖ ಕಟ್ಟೆಯೊಡೆಯಿತು. ವಾರಪಡಸಾಲಿ,ದೇವರ ಖೋಲಿ, ಅಡಿಗಿ ಮನಿ ಗಟ್ಟಿಮುಟ್ಟಾಗಿದ್ದವು. ಎಡಕಿನ ಗೋಡೆ ಕುಸಿದಿತ್ತು, ಜಂತಿಯ ತುಂಬೆಲ್ಲ ಜೇಡ, ಬಾಗಿಲು ನೆರ್ತಿಗೆ ಹೆಗ್ಗಣ ಮಣ್ಣು ಗುಡ್ಡೆ ಹಾಕಿತ್ತು. ಊರಿನ ಆಗು ಹೋಗುಗಳ ವಟಗುಟ್ಟುತ್ತಿದ್ದ ಖಾಸೀಮರು- “ಭಯ್ಯಾ ಇಡೀ ಮನಿ ಒಂದಿನಕ್ಕ ಹಸನ ಮಾಡ್ಲಿಕ್ಕ ಆಗೊದಿಲ್ಲ, ಇಂದು ನೀವು ನಮ್ಮಲ್ಲೆ ಉಳಿದು ನಾಳೆ ಬರೀರಂತ”- ಎಂಬುದಾಗಿ ಸೂಚಿಸಿದರು. ಆ ದಿನ ಕಸ,ಮಣ್ಣು,ಧೂಳು, ಜೇಡ ತೆಗೆದು ಖಾಸೀಂ ಖಾದ್ರಿ ಮನೆಯಿಂದ ಚಿಮಣಿ ಬುಡ್ಡೀ ತಂದು ಹಚ್ಚಿಟ್ಟು ಸಂಜೆ ಊರೊಳಗೆ ಹೊರಟ. ಧರ್ಮಣ್ಣನ ಹೆಂಡತಿ ಕೆಕ್ಕರಗಣ್ಣಲ್ಲಿ ದಿಟ್ಟಿಸುತ್ತ, ಮೊಬೈಲಿನಲ್ಲಿ ಅಳುತ್ತಳುತ್ತ ಮಾತಾಡುತ್ತಿದ್ದಳು. ಬಸವಣ್ಣದೇವರ ಗುಡಿಯ ಮುಂದೆ ಯಾರಂದ್ರ ಯಾರೂ ಇರಲಿಲ್ಲ ಆಟ, ದೊಡ್ಡಾಟ, ಬಯಲಾಟ, ಕೋಲಾಟ, ಭಜನೀ ಅಂತ ಹಲಾನ್ಹುಲೇ ನಡೆಸತಿದ್ದ ಸಂಘದ ಕೋಣೆಯು ಇಂದು ಟೆಲಿಫೋನ್ ಆಫಿಸಾಗಿತ್ತು, ಗುಡಿಯ ಹಿಂದೆ ಕಳಸಕ್ಕಿಂತಲೂ ಎತ್ತರದ ಉದ್ದಾನುದ್ದದ ಟವರ್ ನಿಂತಿತ್ತು. ಎಲ್ಲ ಮನೆಗಳ ಪಡಸಾಲೆಯಲ್ಲಿ ಮಾಯಾ ಪೆಟ್ಟಿಗೆಯ ಮೋಜು ಬಂದುದರಿಂದ ಊರಿನ ಸಾಂಸ್ಕ್ರತಿಕ ಸಂಭ್ರಮ ಕಳೆಗುಂದಿ ಅವರವರ ಭಾವ ಪ್ರಪಂಚದಲ್ಲಿದ್ದರು.ಚಂದಮುತ್ತನ, ಮುತ್ತಾಲಾಲನ,ಸೂರ್ಯಮುತ್ತನ, ಏಳು ಹೆಡಿ ಸರ್ಪದ ಕತೆಗಳನ್ನ ಹೇಳುವವರಿಲ್ಲ ಇಲ್ಲಿ ಕೇಳುವವರೂ ಇಲ್ಲ. ಉಂಡಾದ ಮೆಲೆ ಖಾಸೀಮನ ಹೆಂಡತಿ ಅಮಾಸಿ ದಿನ ಹೋಗುವುದ ಬೇಡವೆಂದು ಒತ್ತಾಯ ಮಾಡಿ ಕಟ್ಟೆಯ ಮೆಲೆ ಹಾಸಿಗೆ ನಿಗಚಿಕೊಟ್ಟಳು.
ಸರೂ ರಾತ್ರಿಗೆ ತೋರಣವಾಡಿಂದ ಹೆಣಮಗಳೊಬ್ಬಳು ಜೊತೆಗೆ ಕೂಸಿನ್ನ ಕರಕೊಂಡು ಬಂದಿದ್ದಳು "ತೋರಣವಾಡಿ ಪೋಲೀಸರಿಗೆ ನೀವು ಇಲ್ಲಿರೋದು ಗೊತ್ತಾಗೆದ, ನೀವು ಜಲ್ದಿ ಇಲ್ಲಿಂದ ಜಾಗ ಬದಲಿ ಮಾಡ್ರಿ” ಅವಳು ಸುದ್ದಿ ತಂದಿದ್ದಳು. ಅವರಲ್ಲೊಬ್ಬ ಗಳಗಳನೆ ಅಳುತ್ತ "ಏಟೇಟೂ ತಪ್ಪು ಮಾಡದ ತಾನು ತನ್ನ ಕುಲಬಾಂಧವರಿಗೆ ಏನು ದುರ್ಗತಿ ಬಂತು ದೇವರೇ...." ಸಂಕಟ ಕಾರಿಕೊಂಡ. ಒಬ್ಬ ನರನಾಡೀ ಬಿಗಿಗೊಳಿಸಿ "ಸುವ್ವರ್ ಸೂಳೇ ಮಕ್ಕಳಿಗೆ ಬುದ್ಧಿ ಕಲಿಸಾಕಬೇಕು" ಸಂಕಲ್ಪ ಮಾಡಿದ. ಉಳಿದವರಿಬ್ಬರು ಬೈದು ಬುದ್ಧಿ ಹೇಳಿ ಒಬ್ಬೊಬ್ಬರು ಒಂದೊಂದು ದಿಕ್ಕಾಗಿ ಹೋದರು. ತೋರಣವಾಡಿಗೆ ಹೋಗಿ ಗಾಂಧಿ ಗುಣ, ತತ್ವ, ಸಿದ್ಧಾಂತ ಬೋಧಿಸಬೇಕಿತ್ತು ಎಂದು ಭಾವಿಸಿದ. ಅದೇ ಊರಿನಲ್ಲಿದ್ದ ತನ್ನಜ್ಜ ಯಲಿಗಾರ ಸಿದ್ಧಜ್ಜನ ಬಗ್ಗೆ ಹೇಳಿದಾಗ, ಅವಳು "ಅಯ್ಯ ದೇವರಂತ ಮನಶ್ಯಾ ಆಗಿದ್ದ ಬಿಡ್ರೀ, ಅವರಿಗೆ ಒಂದ ಜಾತಿ ಕುಲ ರೊಕ್ಕ ರೂಪಾಯಿನ ಸೊಕ್ಕಿದ್ದಿಲ್ಲ, ಎಲ್ಲಾರೂ ತನ್ನ ಬಳಗ ಅನ್ನುವ ಕರುಳಿತ್ತು. ಸಿದ್ದಜ್ಜ ಅಂದ್ರ ನಮಗೆಲ್ಲ ಉಜರಾಉಜ್ರ ಸಂಗಮದ ಬಸವಣ್ಣ ಇದ್ದಂಗ ಇದ್ರು" ದೈನ್ಯೆತೆಯಲ್ಲಿ ಹಾಡಿಹೊಗಳಿದಳು. ಅಂಥ ಘನವಂತ ಮರ್ಯಾದಸ್ಥನ ಮ್ಮೊಮ್ಮಗನಾದ ತನಗೆ ಒಂದು ಹಾದರ ಸಹಿಸಲು ಆಗಲಿಲ್ಲವಲ್ಲ ಎಂದು ಮಮ್ಮಲ ಮರುಗಿದ. ಮಲಗಬೇಕು ಎನ್ನುವಾಗ ಬೆಳ್ಳಿ ಮೂಡಿ ಕೋಳಿ ಕೂಗಿತು.
ಸಂತೆಗೆ ಹೋಗಿ ದಿನಸಿ, ಚಾಪೆ, ಕೊಡಪಾನ, ಕಸಬರಿಗೆ, ಊದಬತ್ತಿ, ಸೀಮೆ ಎಣ್ಣೆ ಇತ್ಯಾದಿ ಮನೆ ಬಳಕೆ ಸಾಮಾನು ಖರೀದಿಸಿ ಬರುತ್ತಿರುವಾಗ್ಗೆ, ಕೆಲವರು ಗುರುತು ಹಿಡಿದು ಮಾತಾಡಿಸಿದರು, ಒಂದಿಬ್ಬರು ರೋಚಕ ಕತೆಯ ನಾಯಕ ಎಂಬ ಕುತೂಹಲದಿಂದ ಕಣ್ಣರಳಿಸಿ ನೋಡುತ್ತಿದ್ದರು. ಖಾಸೀಮನ ಹೆಂಡತಿ ಇಂದು ಕೂಡಾ ಆ ಮನೆಗೆ ವಸ್ತಿ ಹೋಗೂದು ಬೇಡವೆಂದರೂ "ತನಗೆ ಏನೂ ಆಗೊದಿಲ್ಲ, ತಾನು ನಂಬಿದ ದೈವ ತನ್ನನ್ನು ಕೈಬಿಡುದಿಲ್ಲ" ಎಂಬುದಾಗಿ ನಂಬಿಸಿ ಮೂರು ಸಂಜೀಲಿ ಊಟ ಮಾಡಿ ಮನೆ ಸೇರಿದ. ಜೈಲಿನಲ್ಲಿ ಬದುಕಿನ ಆಶಯ, ಮಾತುಗಾರಿಕೆ, ಕನಸು ಕನವರಿಕೆಗಳ ದಿಕ್ಕುದೆಸೆ ವಿಚಿತ್ರವಾಗಿ ಬದಲಾಗಿತ್ತು. ಮನೆಯನ್ನು ಹೊಸದಾಗಿ ಕಾಣಲು ಬಯಸಿದ, ಆದರೆ ಮನಸ್ಸು ಮಾತ್ರ ಆ ದಿನದ ಆ ನೋಟದ ಆ ಸಿಟ್ಟಿನ ಹೊತ್ತನ್ನು ಭ್ರಮಿಸುತ್ತಿತ್ತು. ಈಗ "ನನ್ನ ಸತ್ಯಾನ್ವೇಷಣೆ" ಪುಸ್ತಕ ಓದಬೇಕೆಂದುಕೊಂಡ- ತಟಕ್ಕನೆ ನಾಗೊಂದಿ ಮೇಲೆ 'ಪ್ರಭುಲಿಂಗ ಲೀಲೆ' ಇಟ್ಟದ್ದು ನೆನಪು! ಎರಡು ರಾತ್ರಿಯ ನಿದ್ದೆ ಕಣ್ಣೆವೆ ಎಳೆಯುತ್ತಿದ್ದರೂ- ಟ್ರಂಕು, ಚೀಲ ಲಾಯಿಗಂಟು ಕೆದಕಿ ಹುಡುಕತೊಡಗಿದ. ಕರಾಳ ದಿನ ಮನದಲ್ಲಿ ಹಾಗೆ ಉಳಿದಿತ್ತು ಆಗ ಮಾಯಕಾತಿ ಮನೆದೇವತೆ ಲಕ್ಕಬ್ಬೆ ನೆನಪಾಯಿತು. ಅವಳು ಮಿಂಡನ ಕೂಡಿ ರಬ್ಬಿಕೊಂಡು ಮಲಗಿದ್ದ ಮಂಚ ಕಿರಗುಟ್ಟಿತು.... "ಧರ್ಮಣ್ಣ ಅಂಥವನಲ್ಲ ಅಂದುಕೊಂಡಿದ್ದರೂ ತಾನು ಗಂಡಸೂಂತ ಸಾಬೀತು ಪಡಿಸಲು ಕತ್ತಿಯ ಬಾಯಗೆ ರಕ್ತ ಹಚ್ಚಬೇಕಾಗಿತ್ತು. ಅಂದು ಅವನನ್ನು ಸಿಗಿದು ಅವಳ ಬದುಕ ಬಿಟ್ಟಿದ್ದರೆ ಇಂದಿಗೆ ತನ್ನವರೊಬ್ಬರು ಇರುತ್ತಿದ್ದರಲ್ಲ! ಆಕೆಯ ಸೋಗಲಾಡಿತನಕ ತಕ್ಕ ಶಾಸ್ತಿ ಆಯ್ತು... ಅವಳ ಹಣೆಬರಹ....." ಧೊಪ್ಪನೆ ಇಲಿಯೊಂದು ರಕ್ತ ಉಂಡಿದ್ದ ಮಂಚದ ಮೇಲೆ ಬಿತ್ತು. ಕದಲಲಿಲ್ಲ. ಸಾವಕಾಶ ದೇವರ ಕೋಣೆಯ ಬಾಗಿಲು ಸರಿಸಿ ಸಣ್ಣ ಹಲಗೆ ಮೇಲಿದ್ದ ಕೆಂಪು ಹುಡಿ ನೊಸಲ ನೇರಕ್ಕೆ ತೀಡಿಕೊಂಡ. ಗೋಡೆಯ ಬಣ್ಣ ಬದಲಾಗಿ ಕಾಣುವ ಕಣ್ಣಲ್ಲಿ ಕೆಂಡದುಂಡೆ ಕುಣಿಯತೊಡಗಿತು, ಜನರ ಮಂದೆ ಕೈಯಲ್ಲಿ ಆಯುಧ ಹದಗೊಳಿಸಿ ಕೇಕೆ ಹಾಕುತ್ತಿದ್ದರು, ಅಲ್ಲಿ ಯಾರೂ ಅಸಹಾಯಕರಿರಲಿಲ್ಲ. ಬಸಿದಷ್ಟು ಬಸರು ತುಂಬಿಕೊಳ್ಳುತ್ತಿದ್ದ ಕಿಡಿಗಳಲ್ಲಿ ಬೆಂದವರು ಕರಕಲಾಗಿದ್ದರು. ಹುರಿಗೊಂಡ ಮೈ-ಕೈಗಳಿಂದ ಕಮ್ಮಟು ಜಿಗಟು ವಾಸನೆ ಬಂದು ಮನೆಯಂತ ಮನೆಯಲ್ಲ ದರೂ…. ಹಿಡಿಯಿತು. ಕಿರಗುಡುವ ಕಿವಿಗಡಚಿಕ್ಕುವ ಗೋಡೆಯಿಂದ ಹತ್ಯಾರಗಳು ಇಣುಕಿದವು, ಒಂದಲ್ಲ ಎರಡಲ್ಲ ಇತಿಹಾಸದ ಎಲ್ಲ ನಮೂನೆಯ ಕಲ್ಲು, ಕಟ್ಟಿಗೆ, ಕಬ್ಬಿಣ, ಉಕ್ಕು, ತಾಮ್ರ, ಸೀಸದ ಆಯುಧಗಳ ಮೊನೆಯಿಂದ ರಕ್ತ ಒಸರುತ್ತಿತ್ತು. ತೊಯ್ದು ತೊಪ್ಪಡಿಯಾಗಿದ್ದ ದೇಹಗಳು ಮಾಯವಾದವು.... ಗಾಬರಿಯಲ್ಲಿ ಹಲಗೆ ಬೀಳಿಸಿದ ಕರೇ ಚೇಳು ತನ್ನ ನಾಕಾರು ಮರಿಗಳೊಂದಿಗೆ ಅವಿತುಕೊಳ್ಳಲು ದಿಕ್ಕಾಪಾಲಾಗಿ ಓಡಿತು, ಇವನು ಭ್ರಮೆಗೆ ಬೆವೆತು ಹೋಗಿದ್ದ. ಬಚ್ಚಲಿಗೆ ಹೋಗಿ ಮುಖಕ್ಕೆ ನೀರು ಚಿಮುಕಿಸಿದಾಗ ಮುಖವೆಲ್ಲ ರಂಗೇರಿತು, ತಿಕ್ಕಿದಷ್ಟು ಕೆಂಪೇರಿತು, ಕಣ್ಣು ಕೆಂಪಾದವು ಈಗ ಕಾಣುವದೆಲ್ಲ ರಣರಣಾ ರಾವು ಹೊಡೆಯುತ್ತಿತ್ತು. ಬಾಗಿಲಲ್ಲಿ ಬಲವಾದ ಬಡಿಗೆ ಹಿಡಿದ ಹರೆಯದ ಹುಡುಗನೊಬ್ಬ-ತಾಯಿಯ ತಾಳಿಗೆ, ಕುಂಕುಮಕ್ಕೆ - ಪ್ರತಿಕಾರ ಬಯಸಿದ್ದ.
ಯಾರು ಯಾರ ನೀವು ?
ನಾನು ನಿನ್ನ ಶತ್ರು;
ನನಗ ನೀವು ಶತ್ರು ಅಲ್ವಲ್ಲ !
ನೀನು ತಪ್ಪು ಮಾಡದ ನನ್ನ ತಂದೀನ ಕೊಂದಿ, ಅವನ ಆತ್ಮಕ್ಕ ನಿನ್ನ ರಕ್ತ ಬೇಕು.
ಥೇಟ ಧರ್ಮಣ್ಣನ ಹೋಲುತ್ತಿತ್ತು ಆ ಮುಖ. ಅವನ ಹೆಂಡತಿ ಕನಸಿಗೆ ಬಂದು ಮಗನಿಗೆ ಅಪ್ಪಣೆ ಕೊಟ್ಟಿರಬೇಕು.... ತಣ್ಣಗೆ ನಗುತ್ತಿದ್ದ. ಅವನ ಒಂದು ಹೊಡೆತಕ್ಕ ಇವನ ದೇಹ ಮಂಚದ ಕೆಳಗ ಬಿದ್ದಿತ್ತು. "ನೀನು ಸಂಶಯದ ಹುಳ, ಸಾಯ ಮಗನೆ, ನಿನ್ನ ಹೆಣ್ತಿನ್ನ ನಮ್ಮಪ್ಪ ತಂಗಿ ಹಂಗ ನೋಡಕೊಂಡಿದ್ದ" ಮತ್ತೊಂದು ಹೊಡೆತಕ್ಕ ಉಸರು ನಿಲ್ಲಿಸಿ ಮುಗುಚಿಕೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ. "ನನ್ನಪ್ಪನ ಆತ್ಮ ತಣ್ಣಗಾತು" ಹೆಂಗ ಬಂದಿದ್ದನೊ ಹಂಗ ಮಾಯವಾದ.
ಮಾರನೇ ದಿನ ಊರವರು ಜೋಡಿ ದೆವ್ವಗಳು ಸೇಡು ತೀರಿಸಿಕೊಂಡಿದ್ದರ ಬಗ್ಗೆ ಮಾತಾಡಿಕೊಳ್ಳುತ್ತಿದ್ದರು.
--ಮಹದೇವ ಹಡಪದ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಧಾರವಾಡ ಎಂಬ ಸ್ವಾವಲಂಬನೆಯ ಸಾಂಸ್ಕೃತಿಕ ನಗರ
ಉತ್ತರಕರ್ನಾಟಕದ ಸಾಂಸ್ಕೃತಿಕ ಐಕಾನ್ ಧಾರವಾಡ. ದೇಶದ ಹೆಸರಾಂತ ಸಂಗೀತ ವಿದೂಷಿಗಳು, ಪಂಡಿತರು ಧಾರವಾಡ ನೆಲದಲ್ಲಿ ಸಂಗೀತ ಕಛೇರಿ ಕೊಡಲಿಕ್ಕೆ ಕಾಯುತ್ತಾರೆ ಹೇಗೋ ಹಾಗೆಯೇ ನ...
-
ಕರ್ನಾಟಕದಲ್ಲಿ ಬೀದಿ ರಂಗಭೂಮಿಗೆ ಸುದೀರ್ಘ ಮೂವತ್ತು ವರ್ಷಗಳ ಇತಿಹಾಸವಿದೆ. ಚಳುವಳಿ ಮಾದರಿಯಲ್ಲಿ ಆರಂಭಗೊಂಡ ಬೀದಿ ನಾಟಕ ಬಹುದೊಡ್ಡ ಸಾಂಸ್ಕೃ...
-
ಶಶಿಕಾಂತ ಯಡಹಳ್ಳಿ ವಿಮರ್ಶೆ: ಬಲಿದಾನಕುಂಟೆ ಕೊನೆ? September 6, 2013 by G ಕುವೆಂಪುರವರ ‘ಬಲಿದಾನ’ದಲ್ಲಿ ಸಾರ್ವಕಾಲಿಕ ದರ್ಶನ ಶಶಿ...
-
(hasirele.blogspot.com) krupe ನಾಡಿನ ರಂಗಭೂಮಿಯಲ್ಲಿ ಚಿದಂಬರರಾವ್ ಜಂಬೆಯವರ ಕೊಡುಗೆ ಅಪಾರವಾದದ್ದು. ಹೆಗ್ಗೋಡಿನ ನೀನಾಸಂ, ಮೈಸೂರಿನ ರಂಗಾಯಣ ಮತ್ತು ಸಾಣೆಹ...
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ