ಶನಿವಾರ, ಡಿಸೆಂಬರ್ 3, 2011

shripad bhatt article

ನಾನು ಚಿಕ್ಕವನಿದ್ದಾಗ ನನ್ನ ಚಿಕ್ಕಮ್ಮಳೊಂದಿಗೆ “ಬಂಗಾರದ ಮನುಷ್ಯ” ಚಿತ್ರ ನೋಡಲಿಕ್ಕೆ ಹೋಗಿದ್ದೆ. ಅಂತ್ಯದ ವೇಳೆಗಾಗಲೇ ಪ್ರೇಕ್ಷಕರು ಅಸಹನೆಯಿಂದ, ನೋವಿನಿಂದ ವಜ್ರಮುನಿಗೆ “ನೀನು ರಾಜಣ್ಣನ ಬಾಳು ಹಾಳು ಮಾಡಿದ ದ್ರೋಹಿ, ನಿನಗೆ ನಿಜಕ್ಕೂ ಒಳ್ಳೆಯದಾಗದು” ಎಂದು ಶಾಪ ಹಾಕುತ್ತಿದ್ದರು. ಕೆಲವು ವರ್ಷಗಳ ನಂತರ ಎರಡನೇ ಬಾರಿ “ಬಂಗಾರದ ಮನುಷ್ಯ” ಚಿತ್ರ ನೋಡಲು ಹೋಗಿದ್ದೆ. ಆಗಲೂ ಅಷ್ಟೇ ಅದಾಗಲೇ ಹತ್ತಾರು ಬಾರಿ ಈ ಚಿತ್ರವನ್ನು ನೋಡಿದ ಜನ ಮಧ್ಯಂತರದ ವೇಳೆಗೆ ರಾಜಕುಮಾರರನ್ನು “ಅಣ್ಣಾ ನೀನು ಈ ವಜ್ರಮುನಿಗೆ ಸಹಾಯ ಮಾಡಬೇಡ, ಮುಂದೆ ನಿನಗೇ ದ್ರೋಹ ಮಾಡುತ್ತಾನೆ” ಎಂದು ಎಚ್ಚರಿಸುತ್ತಿದ್ದರು, ಕೂಗುತ್ತಿದ್ದರು. ಇವರೆಲ್ಲ ಇದು ಚಿತ್ರವೆಂದು ಯಾವಾಗಲೋ ಮರೆತಾಗಿತ್ತು. ಜನಪ್ರಿಯತೆಯ ಹೊರತಾಗಿ ರಾಜ್ ರವರು ನಿಜ ಜೀವನದಲ್ಲೂ ಕೂಡ ತಮ್ಮ ನೈತಿಕತೆಯನ್ನ, ಪ್ರಾಮಾಣಿಕತೆಯನ್ನ, ಸರಳತೆಯನ್ನ ಜೀವನದುದ್ದಕ್ಕೂ ಕಾಪಾಡಿಕೊಂಡು ಬಂದದ್ದು ಕೂಡ ಇದಕ್ಕೆ ಕಾರಣವಿರಬಹುದು. ಅಲ್ಲದೆ ರಾಜ್ ತಮ್ಮ ಚಿತ್ರಗಳಲ್ಲಿ ಪ್ರತಿಪಾದಿಸುತ್ತಿದ್ದ ಸಂಸಾರ ನಿಷ್ಟೆ, ತಾಯಿಯ ಸೇವೆ, ತಮ್ಮಂದಿರ-ತಂಗಿಯರ ವಿದ್ಯಾಭ್ಯಾಸ, ಅವರ ಮದುವೆಯ ನಂತರವಷ್ಟೇ ತಾನು ಮದುವೆ ಮಾಡಿಕೊಳ್ಳುವುದು, ಇವೆಲ್ಲ ಕರ್ನಾಟಕದ ಬಹುಪಾಲು ಮಧ್ಯಮ, ಕೆಳ ಮಧ್ಯಮ ವರ್ಗಗಳನ್ನು ಪೊರೆದಿದ್ದವು. ಏಕೆಂದರೆ ಅಂದಿಗೂ ಇಂದಿಗೂ ಈ ಮಧ್ಯಮ, ಕೆಳ ಮಧ್ಯಮ ವರ್ಗಗಳ ಜೀವನದ ಶೈಲಿ ಈ ನೀತಿಗಳನ್ನು ಪಾಲಿಸುತ್ತಿದೆ. ಇದನ್ನೆಲ್ಲ ಈಗ ಹೇಳಲಿಕ್ಕೆ ಕಾರಣವಿದೆ. ಸಲೀಂ ಅಹ್ಮದ್ ನಿರ್ದೇಶನದಲ್ಲಿ ತೆರೆ ಕಂಡ ಮಲೆಯಾಳಂ ಚಿತ್ರ “ಅದಮಿಂಟೆ ಮಕನ್ ಅಬು” ಈ ಬಾರಿ ಅತ್ಯುತ್ತಮ ನಿರ್ದೇಶನ (ಸಲೀಂ ಅಹಮದ್), ಹಾಗು ಅತ್ಯುತ್ತಮ ನಟ ( ಸಲೀಂ ಕುಮಾರ್) ರಾಷ್ರ್ಟ ಪ್ರಶಸ್ತಿ ಗಳಿಸಿದೆ. ನಿರ್ದೇಶಕ ಸಲೀ ಅಹಮದ್ ರವರ ಪ್ರಾಮಾಣಿಕತೆ ಹಾಗು ಕುಶಲತೆ, ತನ್ನ ಸರಳತೆ, ಸಲೀಂ ಕುಮಾರ್ ರವರ ಅತ್ಯುತ್ತಮ ನಟನೆ, ಅತ್ಯಂತ ಚುರುಕಾದ ಸಂಕಲನ, ಬಿಗಿಯಾದ ಅಚ್ಚುಕಟ್ಟಾದ ಚಿತ್ರಕಥೆ, ಮಧು ಅಂಬಟ್ ಅವರ ಅತ್ಯಧ್ಬುತ ಸಿನಿಮಾಟೋಗ್ರಾಫಿ ಈ ಚಿತ್ರವನ್ನು ಒಂದು ಮಾನವೀಯ, ಜೀವಂತ ದೃಶ್ಯ ಕಾವ್ಯವನ್ನಾಗಿಸಿವೆ. ಈ ಚಿತ್ರದಲ್ಲಿ ನಾಯಕ “ಅಬು” ಹಜ್ ಯಾತ್ರೆಗೆ ಹೋಗಲು ತನ್ನ ಸ್ವಂತ ದುಡಿಮೆ, ಪ್ರಾಮಾಣಿಕತೆಯಿಂದ ಗಳಿಸಿದ ಹಣವನ್ನು ಕೂಡಿಸಿಡುತ್ತಾನೆ. ಆದರೆ ಹಣದ ಅಡಚಣೆ ಉಂಟಾದಾಗ ಬೇರೆಯವರ ಸಹಾಯ ಪಡೆಯಲು ನಿರಾಕರಿಸುತ್ತಾನೆ. ಏಕೆಂದರೆ ತನ್ನ ಸ್ವಂತ ಪರಿಶ್ರಮದಿಂದ ದುಡಿದ ಹಣದಿಂದ ಮಾತ್ರ ತಾನು ಹಜ್ ಯಾತ್ರೆಗೆ ಹೋಗಬೇಕೆ ಹೊರತು ಇನ್ನೊಬ್ಬರ ದಾನದ, ಸಾಲದ ರೂಪದಿಂದ ಬಂದ ಸಹಾಯದಿಂದ ಹೋದರೆ ಅಲ್ಲಾ ಸ್ವೀಕರಿಸುವುದಿಲ್ಲ ಎನ್ನುವ ಆತ್ಮಸಾಕ್ಷಿ ಅವನದು. ಬಸವಣ್ಣ ಹೇಳಿದ ಹಾಗೆ ‘ಛಲ ಬೇಕು ಶರಣಂಗೆ ಪರಧನ ಒಲ್ಲೆನೆಂಬ,’ ಎನ್ನುವ ಮೂಲಭೂತ ಶರಣ ತತ್ವಕ್ಕೆ ಇವನು ಬದ್ಧನಾಗಿರುತ್ತಾನೆ. ಇವನಿಗೆ ಆತ್ಮದ ಸೊಲ್ಲು ಎಲ್ಲಕ್ಕಿಂತಲೂ ಮಿಗಿಲಾದದ್ದು. ಅದಕ್ಕಿಂತ ಬೇರೆ ನಿಯಮಗಳು ಅವನಿಗೆ ಗೊತ್ತೇ ಇಲ್ಲ. ಕೊನೆಗೆ ಈ ಅತ್ಮಸಾಕ್ಷಿಗೆ ಓಗೊಟ್ಟು ಇದಕ್ಕಾಗಿ ತನ್ನ ಜೀವಮಾನದ ಕನಸಾದ ಹಜ್ ಯಾತ್ರೆಯನ್ನೇ ಕೈಬಿಡುತ್ತಾನೆ. ಇದು ಚಿತ್ರದ ಸಂಕ್ಷಿಪ್ತ ಸಾರಾಂಶ. ಇದರ ಹೆಚ್ಚುಗಾರಿಕೆಯನ್ನು ನಾವು ಚಿತ್ರ ನೋಡಿಯೇ ಅನುಭವಿಸಬೇಕು. ಈ ಚಿತ್ರ ಈಗ ಅಸ್ಕರ್ ಪ್ರಶಸ್ತಿಗೆ ಕೂಡ nominate ಆಗಿದೆ. ಇಲ್ಲಿಂದಲೇ ಇದರ ನಿರ್ದೇಶಕರಿಗೆ ಒಂದು ರೀತಿಯ ತಳಮಳ, ಸಂಧಿಗ್ಧತೆಗಳು ಶುರುವಾಗತೊಡಗಿವೆ. ಏಕೆಂದರೆ ಅಲ್ಲಿ ಲಾಸ್ ಎಂಜಲೀಸ್‌ನಲ್ಲಿ, “ಅಸ್ಕರ್ ಪ್ರಶಸ್ತಿ” ಆಯ್ಕೆಗಾಗಿ ಆರಿಸಲ್ಪಟ್ಟ ವಿಮರ್ಶಕರ ಎದುರು ಇದನ್ನು ಮಾರ್ಕೆಟಿಂಗ್ ಮಾಡಲು, ಅನೇಕ ರೀತಿಯ ಕಸರತ್ತುಗಳನ್ನು ನಡೆಸಬೇಕಾಗುತ್ತದೆ. ಇದಕ್ಕೆ ಕೋಟ್ಯಾಂತರ ಹಣ ಬೇಕಾಗುತ್ತದೆ ( ಇದಕ್ಕಾಗಿ ಅಮೀರ್ ಖಾನ್ ತನ್ನ ಲಗಾನ್ ಚಿತ್ರಕ್ಕಾಗಿ ಚೆಲ್ಲಿದ ಹಣವನ್ನು ನೆನಪಿಸಿಕೊಳ್ಳಿ). ಆದರೆ ಸಾಲ ಮಾಡಿ ಕೇವಲ ಒಂದು ಕೋಟಿಯೊಳಗೆ ಈ ಚಿತ್ರವನ್ನು ಮಾಡಿದ ಇವರಿಗೆ ಮತ್ತೆ ಇನ್ನಿತರ ಯಾವುದೇ ರೀತಿಯ ದುಡ್ಡನ್ನು ಸೇರಿಸಲು ಸಾಧ್ಯವಾಗುತ್ತಿಲ್ಲ. ಸ್ನೇಹಿತರ, ದಾನಿಗಳ ಸಹಾಯ ಪಡೆಯುವದಕ್ಕೆ ಆ ಚಿತ್ರದ ಕಥೆಯೇ ನೈತಿಕ ಪ್ರಶ್ನೆಗಳನ್ನೊಡ್ಡುತ್ತದೆ. ಒಂದು ವೇಳೆ ಇವರು ದಾನ ರೂಪದಲ್ಲೋ, ಸಾಲದ ರೂಪದಲ್ಲೋ ಪಡೆದ ಹಣವನ್ನು ಚಿತ್ರದ ಪ್ರಶಸ್ತಿಗೋಸ್ಕರ promote ಮಾಡಲು ಬಳಸಿದರೆ ಇದು ಚಿತ್ರದ ಮೂಲ ಆಶಯಕ್ಕೇ ಭಂಗ ಬಂದಂತಾಗುತ್ತದೆ. ಅಂದರೆ ಸ್ವತಹ ನಿರ್ದೇಶಕ ತಾನು ಈ ಚಿತ್ರದ ಮೂಲಕ ಹೇಳಿದ ನೈತಿಕತೆಯ, ಪ್ರಾಮಾಣಿಕ ಆಶೋತ್ತರಗಳನ್ನೇ ನಿಜ ಜೀವನದಲ್ಲಿ ಧಿಕ್ಕರಿಸಿದಂತಾಗುತ್ತದೆ. ಎಂತಹ ವಿಪರ್ಯಾಸ !!! ನಿರ್ದೇಶಕ ಸಲೀಂ ಅವರಿಗೆ ಈ ಚಿತ್ರವನ್ನು ಮಾಡುವಾಗ ಮುಂದೊಂದು ದಿನ ಈ ಬಿಕ್ಕಟ್ಟು ತಂದೊಡ್ಡಬಹುದೆಂದು ಕನಸಲ್ಲೂ ಭಾವಿಸಿರಲಿಕ್ಕಿಲ್ಲ. ಅದೇ ಅಲ್ಲವೆ ಇದರ ಮಾಂತ್ರಿಕತೆ. ಉತ್ತಮ, ಜೀವಪರ ಆಶೋತ್ತರಗಳುಳ್ಳ ಚಿತ್ರವೊಂದು ಸರ್ವಕಾಲಕ್ಕೂ ಸಮಾಜವನ್ನು ಪೊರೆಯುತ್ತಿರುತ್ತದೆ. ನೈತಿಕತೆಯನ್ನು ಜೀವನ್ಮರಣದ ಪ್ರಶ್ನೆಯನ್ನಾಗಿಸಿಬಿಡುತ್ತದೆ. ಇದೇ ವೇಳೆಗೆ ಟಾಲ್ಸ್‌ಟಾಯ್ ಬರೆದ “ಜೆರೊಸೊಲಂ ಯಾತ್ರೆ” ಎನ್ನುವ ಕತೆ ನೆನಪಿಗೆ ಬರುತ್ತದೆ. ಅದರಲ್ಲಿ ಹಳ್ಳಿಯ ಇಬ್ಬರು ರೈತರು ಅನೇಕ ವರ್ಷಗಳಿಂದ ಜೆರೊಸೊಲಂಗೆ ಹೋಗುವ ಕನಸು ಕಾಣುತ್ತಿರುತ್ತಾರೆ. ಅದಕ್ಕಾಗಿ ಅಬುವಿನಂತೆ ಪ್ರಾಮಾಣಿಕತೆಯಿಂದ, ಕಷ್ಟದಿಂದ ದುಡಿದು ಹಣ ಕೂಡಿಸಿಡುತ್ತಾರೆ. ಒಂದು ದಿನ ಇಬ್ಬರೂ ಒಟ್ಟಿಗೇ ಯಾತ್ರೆಗೆ ಹೊರಡುತ್ತಾರೆ. ಹಲವಾರು ತಿಂಗಳು ಕಳೆಯುತ್ತದೆ. ಹೀಗೆ ದಾರಿ ಕ್ರಮಿಸುವಾಗ ಮಧ್ಯದಲ್ಲೊಂದು ಹಳ್ಳಿ ಸಿಗುತ್ತದೆ. ಅಲ್ಲಿನ ವಯಸ್ಸಾದ ಬಡ ರೈತದಂಪತಿಗಳು ಅನಾರೋಗ್ಯದಿಂದ, ಅಸಹಾಯಕತೆಯಿಂದ ನರಳುತ್ತಿರುತ್ತಾರೆ. ಆಗ ಇಬ್ಬರಲ್ಲಿ ಒಬ್ಬ ರೈತ ಅಲ್ಲೇ ಅವರ ಸೇವೆಗಾಗಿ ಉಳಿಯುತ್ತಾನೆ, ಮತ್ತೊಬ್ಬ ತನ್ನ ಯಾತ್ರೆ ಮುಂದುವರಿಸುತ್ತಾನೆ. ಅನೇಕ ತಿಂಗಳುಗಳು ಕಳೆಯುತ್ತವೆ. ಆ ಬಡ ರೈತದಂಪತಿಗಳ ಸೇವೆಗೆಂದು ಯಾತ್ರೆಯನ್ನು ಮೊಟಕುಗೊಳಿಸಿದ ರೈತ ತನ್ನಲ್ಲಿರುವ ಹಣವನ್ನೆಲ್ಲ ಆ ಬಡ ದಂಪತಿಗಳ ಆರೈಕೆಗೆ ಖರ್ಚು ಮಾಡಿಕೊಂಡು, ಆದರೆ ತನ್ನ ನಿಸ್ವಾರ್ಥ ಸೇವೆಯಲ್ಲಿ ಸಾರ್ಥಕತೆಯನ್ನು ಕಂಡುಕೊಂಡು ತನ್ನ ಕನಸಿನ ಜೆರೊಸೊಲಂ ಯಾತ್ರೆ ವಿಫಲವಾದದ್ದಕ್ಕೆ ಯಾವುದೇ ಹಳಹಳಿಕೆಗಳಿಲ್ಲದೇ ಮರಳಿ ತನ್ನ ಹಳ್ಳಿಗೆ ಪ್ರಯಾಣ ಬೆಳೆಸುತ್ತಾನೆ. ಇನ್ನೊಬ್ಬ ರೈತ ನಂತರ ಜೆರೊಸೊಲಂ ತಲುಪಿ ಏಸುವಿನ ದರ್ಶನಕ್ಕೆಂದು ದಿನಗಟ್ಟಲ್ಲೆ ಸಾಲಿನಲ್ಲಿ ನಿಂತು ಕೊನೆಗೆ ಮಂದಿರದ ಒಳಕ್ಕೆ ತಲಪುತ್ತಾನೆ. ಆದರೆ ಅಲ್ಲಿ ಅವನಿಗೆ ದೊಡ್ಡ ಶಾಕ್ ಕಾದಿರುತ್ತದೆ. ಅಲ್ಲಿ ಅವನು ಏಸುವಿನ ಪ್ರತಿಮೆಯ ಮೊದಲನೇ ಸಾಲಿನಲ್ಲಿ ಅವನ ಜೊತೆಗಾರ ಗೆಳೆಯ ನಿಂತಿರುವುದು ಕಾಣಿಸುತ್ತದೆ! ಈ ರೈತನಿಗೆ ನಂಬಲಿಕ್ಕೆ ಆಗದಷ್ಟು ಧಿಗ್ಭ್ರಮೆ! ಇಲ್ಲಿ ಟಾಲ್ಸ್‌ಟಾಯ್ ಅತ್ಯಂತ ಮನೋಜ್ಞವಾಗಿ ನಮಗೆ ನಿಸ್ವಾರ್ಥ. ಪ್ರಾಮಾಣಿಕ ಬದುಕಿನ ಸಾರ್ಥಕತೆಯನ್ನು ಮನಗಾಣಿಸುತ್ತಾರೆ. ಬಡ ದಂಪತಿಗಳ ಸೇವೆಯನ್ನು ನಿಸ್ವಾರ್ಥದಿಂದ, ಪ್ರಾಮಾಣಿಕತೆಯಿಂದಮಾಡಿದ ಆ ರೈತನಿಗೆ ಏಸುವು ಆಗಲೇ ತನ್ನ ದರ್ಶನವನ್ನು ಈ ರೀತಿ ನೀಡಿರುತ್ತಾನೆ ಎಂದು ಸಾಂಕೇತಿತಕಾಗಿ ಹೇಳುತ್ತಾರೆ ಟಾಲ್ಸ್‌ಟಾಯ್. ಈ ಮಹಾನ್ ಲೇಖಕನೇ ಅಲ್ಲವೇ ಇಡೀ ಮನುಕುಲಕ್ಕೆ ಕೊಟ್ಟ ಸಂದೇಶ “ಮನುಷ್ಯನಿಗೆ ಎಷ್ಟು ಭೂಮಿ ಬೇಕು?” ಕೇವಲ 6X3 ಜಾಗವಷ್ಟೇ! ಮಿಕ್ಕಿದ್ದೆಲ್ಲ ಕಸಕ್ಕೆ ಸಮ ಎನ್ನುವುದು ತಲೆಮಾರುಗಳಿಂದ ಪ್ರಜ್ಞಾವಂತ, ಸೂಕ್ಷ್ಮ ಪೋಷಕರು ತಮ್ಮ ಮಕ್ಕಳಿಗೆ ಕಲಿಸುತ್ತ ಬಂದಿರುವುದು. ಇದನ್ನು ನಮ್ಮ ಇಂದಿನ ಡಿನೋಟಿಫ಼ೈಯ್ಡ್ ಶೂರರಿಗೆ, 10 ಎಕರೆ, 20 ಎಕರೆ ವೀರರಿಗೆ, ಯಾವುದೇ ನಾಚಿಕೆ, ಆತಂಕ, ಲಜ್ಜೆ, guilt ಇಲ್ಲದೆ ಆತ್ಮವಂಚನೆಯಿಂದ ಪರಧನವನ್ನು ಕಬಳಿಸುತ್ತ ಈ ನಾಡನ್ನು ಧ್ವಂಸಗೊಳಿಸಿದ ಈ ರಾಜಕಾರಣಿಗಳಿಗೆ ಈ ಅಬುವಿನ ಅಂತರಂಗವೂ, ರಾಜೀವನ ತ್ಯಾಗವೂ, ಬಡ ರೈತನ ನಿಸ್ವಾರ್ಥತೆಯೂ ಅರ್ಥವಾಗುವ ದಿನಗಳು ಬಂದಾಗ ಮಾತ್ರ… (ಚಿತ್ರಕೃಪೆ: ವಿಕಿಪೀಡಿಯ)

ಕಾಮೆಂಟ್‌ಗಳಿಲ್ಲ:

ಧಾರವಾಡ ಎಂಬ ಸ್ವಾವಲಂಬನೆಯ ಸಾಂಸ್ಕೃತಿಕ ನಗರ

ಉತ್ತರಕರ್ನಾಟಕದ ಸಾಂಸ್ಕೃತಿಕ ಐಕಾನ್ ಧಾರವಾಡ. ದೇಶದ ಹೆಸರಾಂತ ಸಂಗೀತ ವಿದೂಷಿಗಳು, ಪಂಡಿತರು ಧಾರವಾಡ ನೆಲದಲ್ಲಿ ಸಂಗೀತ ಕಛೇರಿ ಕೊಡಲಿಕ್ಕೆ ಕಾಯುತ್ತಾರೆ ಹೇಗೋ ಹಾಗೆಯೇ ನ...