ಆಮಿರ್‌ಖಾನ್‌ನನ್ನು ಯಾರೋ ಬ್ಲಾಕ್ ಮೇಲ್ ಮಾಡಿದ್ದಾರೆಂಬ ವದಂತಿ. ‘‘ಒಂದು ಕೋಟಿ ನೀಡದಿದ್ದರೆ ತಲಾಶ್ ಚಿತ್ರದ ಸಸ್ಪೆನ್ಸ್ ಏನು ಎನ್ನುವುದನ್ನು ಫೇಸ್‌ಬುಕ್‌ನಲ್ಲಿ ಹಾಕಿ ಬಿಡ್ತೇನೆ’’ ಎಂಬ ಬ್ಲಾಕ್‌ಮೇಲ್‌ಗೆ ತಕ್ಷಣ ಮಣಿದ ಆಮಿರ್, ಒಂದು ಕೋಟಿ ನೀಡಿದ್ದಾನೆನ್ನುವುದು ಇನ್ನೊಂದು ವದಂತಿ. ಯಾಕೆಂದರೆ ಒಂದು ಕೋಟಿಗೆ ಆಸೆಪಟ್ಟು ನೂರು ಕೋಟಿ ವೇಸ್ಟ್ ಆಗಬಾರದಲ್ಲ. ಸಾಧಾರಣವಾಗಿ ಸಸ್ಪೆನ್ಸ್ ಚಿತ್ರದ ಮಿತಿಯೂ, ಅದರ ಧನಾತ್ಮಕ ಅಂಶವೂ ಅದರ ಕ್ಲೈಮಾಕ್ಸ್ ಆಗಿರುತ್ತದೆ. ಒಂದು ವೇಳೆ ಕ್ಲೈಮಾಕ್ಸ್‌ನಲ್ಲಿ ನಿಜವಾದ ಖಳ ಯಾರು ಎನ್ನುವುದು ಬಯಲಾಗಿ ಬಿಟ್ಟರೆ, ಇಡೀ ಚಿತ್ರ ಅತ್ಯಂತ ಬಾಲಿಶವಾಗಿ ಕಾಣ ತೊಡಗುತ್ತದೆ. ಈ ಕಾರಣಕ್ಕೆ ಇರಬೇಕು, ‘‘ದಯವಿಟ್ಟು ಸಸ್ಪೆನ್ಸ್‌ನ್ನು ಬಹಿರಂಗಪಡಿಸಬೇಡಿ’’ ಎಂದು ಆಮಿರ್‌ಖಾನ್ ಪತ್ರಿಕೆಗಳಲ್ಲಿ ಮನವಿ ಮಾಡಿರೋದು.ಅದೇನೇ ಇರಲಿ. ಸಾಧಾರಣವಾಗಿ ಒಂದು ಸಸ್ಪೆನ್ಸ್‌ನ್ನು ಬೆಳೆಸುತ್ತಾ ಹೋಗುವುದರಲ್ಲಿ ಕತೆಗಾರನ, ನಿರ್ದೇಶಕನ ಕಲೆಗಾರಿಕೆಯಿರುತ್ತದೆ. ರೀಮಾ ಕಡ್ಕಿಯವರ ತಲಾಶ್ ನಮಗೆ ಇಷ್ಟವಾಗುವುದು ಬರೇ ಸಸ್ಪೆನ್ಸ್ ಕಾರಣದಿಂದಲ್ಲ.
ಒಂದು ವಿಭಿನ್ನ ಮನಸ್ಥಿತಿಯ ನಾಯಕನನ್ನು ಕಟ್ಟಿಕೊಟ್ಟ ರೀತಿಗೂ ನಾವು ನೀರ್ದೇಶಕಿಯನ್ನು ಅಭಿನಂದಿಸಬೇಕಾಗಿದೆ. ಒಂದು ಘಟನೆಯ ಹಿಂದೆ ಸಾಗುವ ನಾಯಕ, ಆ ಘಟನೆ ಬೇರೆ ಬೇರೆ ಜನರ ಕಣ್ಣಲ್ಲಿ ಬೆಳೆಯುವ ರೀತಿ ಅದರ ಜೊತೆ ಜೊತೆಗೂ ನಾಯಕನ ವ್ಯಕ್ತಿತ್ವ ಅನಾವರಣಗೊಳ್ಳುವ ಪರಿ ಒಟ್ಟು ತಲಾಶ್‌ನ ಹೆಗ್ಗಳಿಕೆ. ಆ ನಿಟ್ಟಿನಲ್ಲಿ ಚಿತ್ರ ಯಶಸ್ವಿಯಾಗಿದೆಯೆಂದೇ ಹೇಳಬೇಕು. ಒಂದು ರೀತಿಯಲ್ಲಿ ಕಹಾನಿಯಂತೆಯೇ ಈ ಚಿತ್ರವೂ ಬೆಳೆಯುತ್ತದೆ. ಅಲ್ಲಿ ಕೊಲ್ಕತಾ ಮುಖ್ಯ ವಸ್ತುವಾದರೆ ಇಲ್ಲಿ ಮುಂಬೈ ರಾತ್ರಿಗಳು ಮುಖ್ಯ ಪಾತ್ರವಹಿಸುತ್ತದೆ.
ಮುಂಬೈ ರಾತ್ರಿಯ ಬಾರ್‌ಗಳು, ವೇಶ್ಯೆಯರು, ಪಿಂಪ್‌ಗಳು, ಕಳ್ಳಕೊರಮರು ಕೂಡ ಕತೆಯ ನೆಯ್ಗೆಯಲ್ಲಿ ಮುಖ್ಯವೆನಿಸುತ್ತಾರೆ. ಸಸ್ಪೆನ್ಸ್ ಸ್ಫೋಟಗೊಳ್ಳುವುದಕ್ಕೆ ಇವರದೆಲ್ಲ ಕಾಣ್ಕೆಗಳು ತನ್ನದೇ ಆದ ರೀತಿಯಲ್ಲಿವೆ. ಕತೆ ನಾಯಕ ಕೇಂದ್ರಿತವಾಗಿದೆ. ಆತನ ಅನ್ವೇಶನ್ ಬರೇ ಹೊರಗಡೆಯದು ಮಾತ್ರವಲ್ಲ. ಒಳಗಡೆಯದ್ದು ಕೂಡ. ಆದುದರಿಂದಲೇ ಚಿತ್ರ ಜನಪ್ರಿಯ ಮಾದರಿಯಲ್ಲಿಲ್ಲದೆ ಕಲಾತ್ಮಕವಾಗಿದೆ. ಕರೀನಾ ಕಪೂರ್ ತನಗೆ ಸಿಕ್ಕಿದ ವೇಶ್ಯೆಯ ಪಾತ್ರವನ್ನು ಪರಿಣಾಮಕಾರಿಯಾಗಿ ನಿರ್ವಹಿಸಿದ್ದಾರೆ.
‘ಹಿರೋಯಿನ್’ ಚಿತ್ರಕ್ಕಿಂತಲೂ ತೀಕ್ಷ್ಣವಾಗಿ ಕಾಣಿಸುತ್ತಾರೆ ತಲಾಶ್‌ನಲ್ಲಿ. ಹಾಗೆಯೇ ನವಾಜುದ್ದೀನ್ ಸಿದ್ದೀಕಿಯ ಪಾತ್ರವೂ ನಮ್ಮೆದೆಯನ್ನು ನಾಟುತ್ತದೆ. ಆಮಿರ್ ಖಾನ್ ಅಂತೂ ತಮ್ಮ ಪಾತ್ರಕ್ಕೆ ಭಾರೀ ಕೊಡುಗೆಯನ್ನು ನೀಡಿದ್ದಾರೆ. ಇದು ಮಾಮೂಲಿ ಪೊಲೀಸ್ಆಫೀಸರ್ ಪಾತ್ರವಲ್ಲ. ಅವನೊಳಗೊಂದು ವ್ಯಕ್ತಿತ್ವವಿದೆ. ಅದನ್ನು ಚೆನ್ನಾಗಿಯೇ ಆವಾಹಿಸಿಕೊಂಡಿದ್ದಾರೆ ಆಮಿರ್. ಇಡೀ ಪಾತ್ರದ ಹುಡುಕಾಟಕ್ಕೆ ಪೂರಕವಾದ, ವ್ಯಕ್ತಿತ್ವ ಅದು. ಆತನ ಪತ್ನಿಯ ಪಾತ್ರದಲ್ಲಿ ರಾಣಿ ಮುಖರ್ಜಿ ಸಹನೆಯಿಂದ ನಟಿಸಿದ್ದಾರೆ. ಪಾತ್ರದ ಗಾಂಭೀರ್ಯಕ್ಕೆ ಒಪ್ಪುವಂತಿದೆ ಅವರ ವ್ಯಕ್ತಿತ್ವ.ರಾಮ್ ಸಂಪತ್ ಸಂಗೀತ ಚೆನ್ನಾಗಿದೆ.
ಮುಸ್ಕಾನೇನ್ ಝೂಟಿ ಮತ್ತು ಜಿಯ ಲಗೆ ನಾ...ಹಾಡು ನಮ್ಮ ಆಳದಲ್ಲಿ ಚಿತ್ರ ಮುಗಿದ ಮೇಲೂ ಜಿನುಗುತ್ತಿರುತ್ತವೆ. ಫರ್ಹಾನ್ ಅಖ್ತರ್ ಅವರ ಸಂಭಾಷಣೆಯಂತೂ ಖಡ್ಗದ ಅಲಗಿನಂತಿದೆ. ತಲಾಶ್ ಒಮ್ಮೆ ನೋಡಬಹುದಾದ, ನೋಡಲೇ ಬೇಕಾದ ಚಿತ್ರ. ಘಜನಿಯ ಹುಡುಕಾಟಕ್ಕೂ ತಲಾಶ್‌ನ ಹುಡುಕಾಟಕ್ಕೂ ಬಹುದೊಡ್ಡ ವ್ಯತ್ಯಾಸವಿದೆ. ಅದನ್ನು ಚಿತ್ರ ನೋಡುವ ಮೂಲಕವೇ ನೀವು ನಿಮ್ಮದಾಗಿಸಿಕೊಳ್ಳಬೇಕು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ