ಬುಧವಾರ, ಡಿಸೆಂಬರ್ 19, 2012

ಗೋಸಾಯಿ ಜನಾಂಗದ ಸಾಮಾಜಿಕ ಅಧ್ಯಯನ


avadhi.com (krupe)

- ಡಾ.ಪ್ರಕಾಶ ಗ. ಖಾಡೆ

ಬಹುಮುಖಿ ಸಂಸ್ಕೃತಿಯ ಹಲವು ಜನಾಂಗಗಳು ಈ ಧರೆಯ ಮೇಲೆ ತೆರೆದುಕೊಳ್ಳುತ್ತ ಸಾಗಿವೆ. ಒಂದೇ ಜೀವ ಜಾತಿಗೆ ಸೇರಿದ ಮಾನವರಲ್ಲಿ ಕಂಡು ಬರುವ ಅನೇಕ ಜನಾಂಗಗಳು ರೂಪುಗೊಂಡ ಬಗೆಯೇ ತುಂಬಾ ಅಚ್ಚರಿ ಮತ್ತು ಕುತೂಹಲದ ಸರಕಾಗಿದೆ. ಈ ಜನಾಂಗ ಪರಿಕಲ್ಪನೆ ಮಾನವ ಜಾತಿಯ ಒಂದು ಬಗೆಯ ವಗರ್ೀಕರಣ. ಒಂದು ಧರ್ಮಕ್ಕೆ ಸೇರಿದವರನ್ನು, ಒಂದು ಭಾಷೆ ಆಡುವವರನ್ನು, ಒಂದು ಪ್ರದೇಶದಲ್ಲಿ ವಾಸಿಸುವವರನ್ನು ಅಥವಾ ಒಂದು ಸಾಂಸ್ಕೃತಿಕ ಗುಂಪಿಗೆ ಸೇರಿದವರನ್ನು ಒಂದು ಪ್ರತ್ಯೇಕ ಜನಾಂಗವಾಗಿ ನೋಡುವ ಮತ್ತು ಅಧ್ಯಯನಿಸುವ ಕೆಲಸಗಳು ಇಂದು ಅಕಾಡೆಮಿಕ್ ವಲಯದಲ್ಲಿ ತುಂಬಾ ತೀವ್ರವಾಗಿಯೇ ನಡೆದಿವೆ ಮತ್ತೂ ನಡೆಯಬೇಕಾಗಿದೆ.ಈ ಬಗೆಯಲ್ಲಿ ಡಾ. ಅಶೋಕ ನರೋಡೆ ಅವರ `ಗೋಸಾಯಿಗಳು ಜನಾಂಗಿಕ ಅಧ್ಯಯನ’ ಕೃತಿಯು ಅಪ್ರತಿಷ್ಠಿತ ಉಪಸಂಸ್ಕೃತಿಯೊಂದರ ಸಾಮಾಜೀಕರಣದ ನೆಲೆ ಶೋಧಿಸುವ ವಿಶಿಷ್ಟ ಸಂಶೋಧನಾ ಕೃತಿಯಾಗಿದೆ.
ಪ್ರಧಾನ ಸಂಸ್ಕೃತಿಯ ಅಧ್ಯಯನಕ್ಕೆ ಚರಿತ್ರೆಯಲ್ಲಿ ಜಾಗ ಸಿಕ್ಕಿದೆ. ಆದರೆ ಉಪಸಂಸ್ಕೃತಿಯ ತೀರಾ ಕಣ್ಮರೆಯಲ್ಲಿರುವ ಅನೇಕಾನೇಕ ಸಮುದಾಯಗಳ ಇತಿಹಾಸ, ಭೂಗೋಲದ ಪರಿಕಲ್ಪನೆಯೇ ತೆರೆದುಕೊಳ್ಳದ ಹೊತ್ತಿನಲ್ಲಿ ಡಾ. ಅಶೋಕ ನರೋಡೆ ಅವರ ಈ ಕೃತಿ ತುಂಬಾ ಗಮನಾರ್ಹವಾಗುತ್ತದೆ. ಒಂದು ಜನಸಮುದಾಯದ ನೆಲೆ ಶೋಧಿಸಿ, ಅದರ ಅನುವಂಶೀಕ ಪರಿಗ್ರಹಣ ಗುರುತಿಸಿ, ವಲಸೆಯ ಸಕಾರಣ ಹುಡುಕಿ, ಸಾಮಾಜಿಕವಾದ ಪ್ರಮುಖ ಸ್ಥಿತಿಯ ಹುಡುಕಾಟ ಅರಸಿ ವಿಶಿಷ್ಟವಾಗಿ ರಚಿತವಾದ ಈ ಕೃತಿಯು ಕನ್ನಡದ ಜನಾಂಗೀಕ ಅಧ್ಯಯನ ಶಾಸ್ತ್ರಕ್ಕೆ ಸಂಬಂಧಿಸಿದಂತೆ ತುಂಬಾ ಉಪಯುಕ್ತವಾಗಿದೆ.
ಭಾರತ ಜನನಿಯ ತನುಜಾತೆಯ ಕನರ್ಾಟಕದಲ್ಲಿ ವಾಸಿಸುವ ಜನರಲ್ಲಿ ಜನಾಂಗೀಕ ಲಕ್ಷಣಗಳನ್ನು ಅನೇಕ ಮಾನವ ಶಾಸ್ತ್ರಜ್ಞರು ಅಧ್ಯಯನ ಮಾಡುತ್ತ ಬಂದಿದ್ದಾರೆ. ಈ ನೆಲೆಯಲ್ಲಿ ಸಾಹಿತಿ, ಸಂಶೋಧಕರಾಗಿರುವ ಡಾ. ಅಶೋಕ ನರೋಡೆ ಅವರು ಮಾನವಶಾಸ್ತ್ರೀಯ ಅಧ್ಯಯನನಿಷ್ಠರಾಗಿ ಈ ಕೃತಿಯ ಮೂಲಕ ಹೊಸ ಕ್ಷೇತ್ರವನ್ನು ಪ್ರವೇಶಿಸಿ ಅಲ್ಲಿ ತಮ್ಮದೇಯಾದ ಛಾಪು ಮೂಡಿಸಿದ್ದಾರೆ.
ಅರೆ ಅಲೆಮಾರಿ ಜನಾಂಗದ ಗೋಸಾಯಿಗಳು ಕನರ್ಾಟಕದ ಹಲವು ಕಡೆಗಳಲ್ಲಿ ನೆಲೆಸಿದ್ದಾರೆ. ವಲಸೆ ಕಾರಣವಾಗಿ ಒಂದೆಡೆ ನೆಲೆನಿಂತು ಅಲ್ಲಿನ ಪ್ರಾಕೃತಿಕ ಮತ್ತು ಸಾಮಾಜಿಕ ಸಂದರ್ಭಗಳಿಗೆ ಹೊಂದಿಕೊಂಡು ಸಂಕರೀಕಣಗೊಂಡಿದ್ದಾರೆ. ಇಲ್ಲಿ ಡಾ.ನರೋಡೆ ಅವರು ಧಾರವಾಡದ `ಲಕ್ಷ್ಮೀ ಸಿಂಗನಕೇರಿ’ ಯನ್ನು ಮುಖ್ಯವಾಗಿಟ್ಟುಕೊಂಡು ಕನರ್ಾಟಕ-ಮಹಾರಾಷ್ಟ್ರಗಳ ಗಡಿಗಳಲ್ಲಿರುವ ಕೆಲವು ಪ್ರದೇಶಗಳನ್ನು ಭೇಟಿ ನೀಡಿ ಈ ಅಧ್ಯಯನವನ್ನು ಕಟ್ಟಿಕೊಟ್ಟಿದ್ದಾರೆ.
ಅಧ್ಯಯನಕ್ಕೆ ಒಂದು ಶಿಸ್ತು ಬರುವಂತೆ ಮತ್ತು ವಿಷಯ ಪುನರಪಿಯಾಗದಂತೆ ಐದು ಅಧ್ಯಾಯಗಳಲ್ಲಿ ಮತ್ತು ಅವುಗಳಲ್ಲಿ ಉಪಶೀಷರ್ಿಕೆಗಳನ್ನು ಕೊಟ್ಟು ವಿಷಯವನ್ನು ಮಂಡಿಸಿರುವುದು ಸರಳ ಓದಿಗೆ ತುಂಬಾ ಸಹಕಾರಿಯಾಗಿದೆ. ಗೋಸಾಯಿಗಳ ಜನಾಂಗೀಕ ಅಧ್ಯಯನದ ಮೊದಲ ಅಧ್ಯಾಯದಲ್ಲಿ ಗೋಸಾಯಿ ಜನಾಂಗದ ಮೂಲ, ಭಾಷೆ, ಪಂಗಡ ಹಾಗೂ ಕಾಯಕ ಸಂಸ್ಕೃತಿಯನ್ನು ಪರಿಚಯಿಸಿದ್ದಾರೆ. ಮೊದಲ ಅಧ್ಯಾಯವೇ ಹೊಸ ಸಂಸ್ಕೃತಿಯೊಂದರ ಕುತೂಹಲದ ಓದಿಗೆ ಸಾಕ್ಷಿಯಾಗುತ್ತದೆ. ನಮ್ಮ ನಡುವೆಯೇ ಇದ್ದು, ನಮ್ಮೊಂದಿಗೆ ಬೆರೆತು ಬೇರೆಯಾದ ಭಾಷೆ, ಆಚರಣೆಗಳಿಂದ ಗುರುತಿಸಿಕೊಂಡು ನಮ್ಮವರಾಗಿಯೇ ಬದುಕು ಸಾಗಿಸಿಕೊಂಡು ನಡೆಯುತ್ತಿರುವ ಜನಾಂಗ ಒಂದರ ಈ ಅಧ್ಯಯನವು ಈ ಬಗೆಯ ಅಧ್ಯಯನಕ್ಕೆ ತೋರುಬೆರಳಾಗುತ್ತದೆ.
ಮೊದಲ ಅಧ್ಯಾಯದಲ್ಲಿ ಗೋಸಾಯಿಗಳ ಜನಾಂಗದ ಮೂಲವು ಮಹಾರಾಷ್ಟ್ರ, ಗುಜರಾತ ಹಾಗೂ ಕನರ್ಾಟಕ ರಾಜ್ಯಗಳಿಗೆ ತಳಕು ಹಾಕಿಕೊಳ್ಳುತ್ತದೆ. “ನಾವು ಗುಜರಾತದವರು, ವ್ಯಾಪಾರ ಮಾಡುತ್ತ ಮಹಾರಾಷ್ಟ್ರಕ್ಕೆ ಬಂದೆವು. ಕಾಲಾ ನಂತರದಲ್ಲಿ ನಾವು ಕನರ್ಾಟಕಕ್ಕೆ ಬಂದಿರುವೆವು” ಎಂಬ ಜನಾಂಗದ ಮುಖಂಡರ ಹೇಳಿಕೆಯ ಮೂಲಕ ಈ ಅಧ್ಯಯನವು ತೆರೆದುಕೊಳ್ಳುತ್ತದೆ ಮತ್ತು ಈ ಜನಾಂಗದ ಭಾಷೆಯೂ ಸಂಕರಣಗೊಂಡಿದೆ. ಮರಾಠಿ, ಗುಜರಾತಿ, ಉದರ್ು, ಕನ್ನಡ, ಲಂಬಾಣಿ ಭಾಷೆಗಳ ಮಿಶ್ರಣವಾಗಿ ಒಂದು ವಿಶಿಷ್ಟವಾದ `ಗೋಸಾಯಿ ಭಾಷೆ’ ರೂಪು ಪಡೆದ ಬಗೆಯನ್ನು ಇಲ್ಲಿ ಡಾ. ನರೋಡೆ ಅವರು ಗುರುತಿಸುತ್ತಾರೆ. ಆಧುನಿಕ ಭಾಷಾ ವಿಜ್ಞಾನಿಗಳಿಗೆ ಗೋಸಾಯಿ ಭಾಷೆಯೊಂದು ಆಕರ್ಷಕ ಕ್ಷೇತ್ರವಾಗಿದೆ ಎಂದು ಮುಂದಿನ ಅಧ್ಯಯನಕ್ಕೆ ಹಾದಿ ಹಾಕಿಕೊಟ್ಟಿದ್ದಾರೆ. ಬುಡಕಟ್ಟು ಜನಾಂಗದ ಒಂದು ಪ್ರತ್ಯೇಕವಾದ ಭಾಷಾಧ್ಯಯನ ನಡೆಯಬೇಕಾದ ಅಗತ್ಯವನ್ನೂ ಸಂಶೋಧಕರು ಎತ್ತಿ ಹೇಳಿದ್ದಾರೆ.
`ಗೋಸಾಯಿ’ ಪದದ ನಿಷ್ಪತ್ತಿಯನ್ನು ಬೇರೆ ಬೇರೆ ಹಿನ್ನೆಲೆಯಲ್ಲಿ ವಿವರಿಸುತ್ತಾರೆ. ಗೋಸಾಯಿ ಪದ `ಗ್ವಾಸರು’ ಎಂದರೆ ವೇಷ ಬದಲಿಸುವವರು ಪದದಿಂದ ಬಂದಿರುವುದೆಂದು ಹೇಳುತ್ತ, ಕಾಯಕದ ನೆಲೆಯಲ್ಲಿ ಗೋವುಗಳನ್ನು ಸಾಕಿಕೊಂಡು ಕೃಷಿ ಚಟುವಟಿಕೆ ನಡೆಸಿ, ಗೋಸಾಯಿಗಳಾದರೆಂದು ಹೇಳುತ್ತ, ಇಸ್ಲಾಂ ಆಡಳಿತಗಾರರ ಆಕ್ರಮಣ ಹಾಗೂ ಜನಾಂಗೀಕ ದಬ್ಬಾಳಿಕೆಯಿಂದ ಪಾರಾಗಲು ಘೋಷಾ ಧರಿಸಿ `ಗೋಸಾ’ಯಿಗಳಾಗಿರಬಹುದೆಂದೂ ಉಲ್ಲೇಖಿಸುತ್ತಾರೆ. ಹೀಗೆ ಜನಾಂಗವೊಂದರ ಹೆಸರಿನ ನಿಷ್ಪತ್ತಿಯನ್ನು ಹಲವು ನೆಲೆಗಳಲ್ಲಿ ಡಾ. ನರೋಡೆಯವರು ಗುರುತಿಸುತ್ತಾರೆ.
ಕನರ್ಾಟಕದ `ಕ್ಷತ್ರಿಯ’ ಜನ ಸಮುದಾಯ ಹಲವಾರು ಜನಾಂಗದ ಒಂದು ಮೊತ್ತವಾಗಿ ಹೊರಹೊಮ್ಮುತ್ತಿದೆ. ಸುಮಾರು ಮೂವತ್ತಕ್ಕೂ ಹೆಚ್ಚು ಈ ಬಗೆಯ ಜನಾಂಗಗಳನ್ನು ಒಂದೇ ಕ್ಷತ್ರಿಯ ಛತ್ರದಡಿಯಲ್ಲಿ ತರುವ ಪ್ರಯತ್ನಗಳು ಈ ಶತಮಾನದ ಆರಂಭದಲ್ಲಿ ನಡೆದಿವೆ. ಈಗಾಗಲೇ ಹುಬ್ಬಳ್ಳಿಯಲ್ಲಿ ಈ ಬಗೆಯ ಎರಡು ಬೃಹತ್ ಸಮಾಗಮಗಳು ಜರುಗಿವೆ. ಗೋಸಾಯಿಗಳು ಕ್ಷತ್ರಿಯ ಜನಾಂಗಕ್ಕೆ ಸೇರಿದವರೆಂಬ ನಿರೂಪಣೆಯನ್ನು ಡಾ. ನರೋಡೆ ಅವರು ಒದಗಿಸುತ್ತಾರೆ. ಛತ್ರಪತಿ ಶಿವಾಜಿಯು ಸೈನ್ಯ ಕಟ್ಟುವಾಗ ಈ ಬುಡಕಟ್ಟಿನ ಜನರನ್ನೇ ಬಳಸಿಕೊಂಡು ಬಲಿಷ್ಠವಾದ ಸೈನ್ಯ ರೂಪಿಸಿದ. ಕೂಟ ಯುದ್ಧದಲ್ಲಿ ಪರಿಣತಿ ಪಡೆದ ಬಲಿಷ್ಠ ಸೈನಿಕರಿಂದಲೇ ಶಿವಾಜಿಯು ಔರಂಗಜೇಬನಿಗೆ ಚಳ್ಳೆಹಣ್ಣು ತಿನ್ನಿಸಿದ ಎಂಬ ಸಂಗತಿಯನ್ನು ದಾಖಲಿಸುತ್ತ ಶಿವಾಜಿಯ ಸೈನ್ಯದಲ್ಲಿ `ಗೋಸಾಯಿ’ಗಳು ಕೆಲವು ಉನ್ನತ ಹುದ್ದೆಗಳಲ್ಲಿದ್ದರೆಂದು ದಾಖಲಿಸುತ್ತಾರೆ.
ಆಚರಣೆಗಳ ಹಿಂದಿನ ವಾಸ್ತವಿಕತೆ:
`ಗೋಸಾಯಿ ಜನಾಂಗದ ಕೌಟುಂಬಿಕ ವ್ಯವಸ್ಥೆ’ ಯನ್ನು ವಿವರಿಸುವ ಎರಡನೆಯ ಅಧ್ಯಾಯವು ಗೋಸಾಯಿಗಳ ವಿಶಿಷ್ಟ ಪದ್ಧತಿ, ನಂಬುಗೆ, ಆಚರಣೆಗಳನ್ನು ದಾಖಲಿಸುತ್ತದೆ. ಹಲವು ಆಚರಣೆಗಳ ಶೋಧದಿಂದ ರೂಪಿತವಾಗುವ ಜನಾಂಗವೊಂದರ ಪರಿಚಯ ಬೇರೆ ಜನಾಂಗದಿಂದ ಹೇಗೆ ವಿಶಿಷ್ಟವಾಗುತ್ತದೆ ಎಂಬುದನ್ನು ಇಲ್ಲಿ ಕಾಣಬಹುದು. ಗೋಸಾಯಿಗಳ ಆಚರಣೆಗಳು ವಿಶಿಷ್ಟವಾಗಿವೆ. ಹುಟ್ಟು, ಸಾವು, ಮದುವೆ, ನಾಮಕರಣ ಹೀಗೆ ಕೌಟುಂಬಿಕವಾಧ ಸಂದರ್ಭಗಳಲ್ಲಿ ನಂಬಿಕೊಂಡು ಬಂದ ಪದ್ಧತಿ, ಆಚರಣೆ, ಸಂಪ್ರದಾಯಗಳ ವಿವರಣೆಯನ್ನು ತುಂಬಾ ವ್ಯಾಪಕವಾಗಿ ಡಾ. ನರೋಡೆಯವರು ಗುರುತಿಸಿ ಸುಲಭವಾಗಿ ವಿವರಿಸಿದ್ದಾರೆ. ಸಿತಳಾ ಭವಾನಿ ಪೂಜೆ, ಷಟವಿ ಪೂಜೆ ಮುಂತಾದ ಆರಾಧನಾ ವಿಧಗಳನ್ನು ಆಚರಣೆಗಳ ಹಿನ್ನೆಲೆಯಲ್ಲಿ ನಿರೂಪಿಸಿದ್ದಾರೆ. ಹೀಗೆ ನಿರೂಪಿಸುವಲ್ಲಿ ಗೋಸಾಯಿಗಳ ನಂಬಿಕೆ ಹಾಗೂ ಅವುಗಳ ವೈಜ್ಞಾನಿಕ ಕಾರಣವನ್ನೂ ನೀಡುವುದರಿಂದ ಆಚರಣೆಗಳ ಹಿಂದಿನ ವಾಸ್ತವಿಕತೆ ಸ್ಪಷ್ಟವಾಗುತ್ತದೆ. ನಂಬಿಕೆ, ಆಚರಣೆಗಳ ವಿವರಣೆಯೊಂದಿಗೆ ಅವುಗಳು ಸ್ತ್ರೀ ಸಮುದಾಯದ ಮೇಲೆ ಉಂಟುಮಾಡುವ ಪರಿಣಾಮಗಳನ್ನು ವಿಶ್ಲೇಷಿಸುತ್ತಾರೆ. ಸ್ತ್ರೀ ಶೋಷಣೆ, ಪುರುಷ ಪರವಾದ ಆಚರಣೆಗಳನ್ನು ವಿವರಿಸುವಾಗ ಸ್ತ್ರೀ ಪರವಾದ ನಿಲುವು ತಾಳುತ್ತಾರೆ. ತಪ್ಪು ಮಾಡಿದ ಪುರುಷ ಸಮಾಜದ ಕ್ಷಮೆ ಕೇಳಿದರೆ, ತನ್ನ ಅಪರಾಧ ಮನ್ನಿಸಲು ಪ್ರಾಥರ್ಿಸಿದರೆ ಸಮಾಜ ಮುಖಂಡರಿಗೆ ತಪ್ಪು ದಂಡಕೊಟ್ಟು ಓಲೈಸಿದರೆ ಆತ ನಿರಪರಾಧಿಯಾಗಿ ಸಮಾಜದಲ್ಲಿ ತಲೆ ಎತ್ತಿ ನಡೆಯಬಹುದು. ಆದರೆ ಶೋಷಿತಳಾದ, ಅವಮಾನಿತಳಾದ ಹೆಣ್ಣು ಮೂಲೆ ಸೇರಬೇಕಾದುದು ದುರಂತ ಎಂದು ಹೇಳುವ ಮೂಲಕ ಪ್ರತಿ ಜನಾಂಗದಲ್ಲೂ ಈ ಬಗೆಯ ಸ್ತ್ರೀ ಶೋಷಣಾ ಪರವಾದ ನಿಲುವುಗಳಿರುವುದನ್ನು ಉಲ್ಲೇಖಿಸುತ್ತಾ ಡಾ. ನರೋಡೆಯವರು ಖಂಡಿಸಿ, ತಮ್ಮೊಳಗಿನ ಬಂಡಾಯ ಮನೋಭಾವವನ್ನು ಅಧ್ಯಯನದ ಜೊತೆ ಸಮ್ಮಿಳಿತಗೊಳಿಸಿದ್ದಾರೆ. ಈ ಅಧ್ಯಾಯದಲ್ಲಿ ಗೋಸಾಯಿಗಳ ಮದುವೆ, ಬಹು ಪತ್ನಿತ್ವ, ವಿಧವಾ ವಿವಾಹ, ಮಹಿಳೆಯರ ಪಾತ್ರ, ಮುಟ್ಟು-ಸೂತಕ, ಕುಬಸ, ಬಾಣಂತನ, ನಾಮಕರಣ… ಹೀಗೆ ಬಹು ವಿಧದ ಆಚರಣೆಗಳನ್ನೂ ವಿವರಿಸಿದ್ದಾರೆ. ಗೋಸಾಯಿಗಳ ಕೌಟುಂಬಿಕ ಚಿತ್ರಣವನ್ನು ಕಟ್ಟಿಕೊಡುವ ಈ ಅಧ್ಯಾಯ ಅಧ್ಯಯನದ ಮುಖ್ಯ ಘಟ್ಟವಾಗಿದೆ.
ಗೋಸಾಯಿಗಳ ಧಾಮರ್ಿಕ ಚಟುವಟಿಕೆಗಳನ್ನು ವಿವರಿಸುವ ಮೂರನೆಯ ಅಧ್ಯಾಯವು ಹಬ್ಬ ಹರಿದಿನಗಳಲ್ಲಿ ಕಂಡು ಬರುವ ಆಚರಣೆಗಳ ಚಿತ್ರಣ ನೀಡುತ್ತದೆ. ಗೋಸಾಯಿಗಳು ಶಿಷ್ಟ ಮತ್ತು ದೇಸೀ ದೈವಗಳ ಆರಾಧಕರೆಂಬುದನ್ನು ವಿವರಿಸುತ್ತಾರೆ. ಜಾತ್ರೆ, ಉತ್ಸವ, ಆಚರಣೆಗಳ ಸಂದರ್ಭದಲ್ಲಿ ಅವರ ಆಹಾರ ಪದ್ಧತಿಯನ್ನೂ, ಉಡುಗೆ ತೊಡುಗೆ ವಿಧಗಳನ್ನೂ ಪರಸ್ಪರ ಪ್ರೀತಿ, ಗೌರವ, ಬಾಂಧವ್ಯದ ಸಂದರ್ಭಗಳನ್ನು ಡಾ.ನರೋಡೆಯವರು ಇಲ್ಲಿ ಅಭ್ಯಾಸಪೂರ್ಣವಾಗಿ ನಿರೂಪಿಸಿದ್ದಾರೆ. ಆಚರಣೆಗಳಿಂದ ಸಮುದಾಯದಲ್ಲಿ ಮೂಡುವ ಒಗ್ಗಟ್ಟು ಹಾಗೂ ಪರಂಪರೆಯ ಮುಂದುವರಿಕೆಗೆ ಸಾಧ್ಯವಾಗುವ ಸಂದರ್ಭಗಳನ್ನೂ ವಿವರಿಸಿದ್ದಾರೆ. ಗೋಸಾಯಿಗಳು ಸ್ತ್ರೀಪರವಾದ, ಶಕ್ತಿ ದೇವತೆಗಳ ಆರಾಧಕರೆಂಬುದನ್ನು ಎಲ್ಲ ಹಬ್ಬ ಹರಿದಿನ ಆಚರಣೆಗಳ ಮೂಲಕ ಸಾಧಿಸುತ್ತಾರೆ. ತುಳಜಾ ಭವಾನಿ, ಅಂಬಾ ಭವಾನಿ, ಕೊಲ್ಲಾಪುರದ ಮಹಾಲಕ್ಷ್ಮಿ, ಸವದತ್ತಿ ಎಲ್ಲಮ್ಮ ಹೀಗೆ ಶಕ್ತಿ ದೇವತೆಗಳ ಆರಾಧಕರಾಗಿ ಬೆಳೆದುಕೊಂಡು ಬಂದ ಜನಾಂಗದ ಚರಿತ್ರೆಯನ್ನು ಡಾ. ನರೋಡೆಯವರು ಬಿಚ್ಚಿಡುತ್ತಾರೆ.
ದೇವರು, ದೆವ್ವ, ಮಾಟ, ಮಂತ್ರಗಳಲ್ಲಿ ಈ ಜನಾಂಗ ನಂಬಿಕೊಂಡು ಬಂದ ಸತ್ಯವನ್ನು ಕೌತುಕುವಾಗಿ ನಿರೂಪಿಸುತ್ತಾರೆ. ಆಧುನಿಕ ಕಾಲದ ವೈದ್ಯಕೀಯ ಕ್ಷೇತ್ರದ ಬೆಳವಣಿಗೆಯ ಹಿನ್ನೆಲೆಯಲ್ಲಿಯೂ ದೇಸೀ ಪದ್ಧತಿಯ ಆರೋಗ್ಯಾಚಾರಣೆಗಳು, ದೈವಾರಾಧನೆಯ ಹಿನ್ನೆಲೆಯಲ್ಲಿ ಉಳಿಸಿಕೊಂಡು ಬಂದ ಪರಿಯನ್ನು ಡಾ. ನರೋಡೆ ಯವರು ವಿವರಿಸುತ್ತಾ ಪ್ರತಿಯೊಂದು ಕಾರ್ಯವನ್ನು ದೇವರ ಹೆಸರಿನಲ್ಲಿ, ಧರ್ಮದ ಹೆಸರಿನಲ್ಲಿ ಆರಂಭಿಸುವುದನ್ನೂ ಉಲ್ಲೇಖಿಸುತ್ತಾರೆ. ಈ ಅಧ್ಯಾಯವು ಗೋಸಾಯಿಗಳ ಹಬ್ಬದಾಚರಣೆಗಳ ವೈಶಿಷ್ಟ್ಯಕ್ಕೆ ಪೂರಕವಾಗಿದೆ.
ವ್ಯವಸ್ಥೆಯ ದಾರುಣತೆ:
ಗೋಸಾಯಿ ಜನಾಂಗದ ಸಾಮಾಜಿಕ, ಆಥರ್ಿಕ ಚಟುವಟಿಕೆಗಳ ಮೇಲೆ ಬೆಳಕು ಚೆಲ್ಲುವ ನಾಲ್ಕನೆಯ ಅಧ್ಯಾಯವು ಗೋಸಾಯಿಗಳ ಸ್ಥಿತಿಗತಿ, ಶಿಕ್ಷಣ, ವೃತ್ತಿ, ಆಹಾರ, ಉಡುಗೆ-ತೊಡುಗೆ ಮೊದಲಾದ ಚಿತ್ರಣವನ್ನು ನೀಡುತ್ತದೆ. ಹೀಗೆ ಅಪ್ರತಿಷ್ಠಿತ ಜನಾಂಗವೊಂದರ ಬದುಕಿನ ಚಿತ್ರಣ ನೀಡುವಾಗ ಅಲ್ಲಿನ ವ್ಯವಸ್ಥೆಯ ದಾರುಣತೆಯನ್ನು ಕಟ್ಟಿಕೊಡುತ್ತಾರೆ. ಗೋಸಾಯಿಗಳು ಹೆಚ್ಚು ವಾಸಿಸುವ ಧಾರವಾಡೆದ `ಲಕ್ಷ್ಮೀ ಸಿಂಗನಕೇರಿ’ಯ ದುಸ್ಥಿತಿಯನ್ನು ನಿರೂಪಿಸುವಲ್ಲಿ ಲೇಖಕರೊಳಗಿನ ಪತ್ರಿಕಾಕರ್ತ ಜಾಗೃತನಾಗುತ್ತಾನೆ. ಡಾ. ನರೋಡೆ ಅವರ ಸಾಲುಗಳಲ್ಲಿಯೇ ಅಲ್ಲಿನ ಚಿತ್ರಣ ಹೀಗೆ ವಿವರಿಸಬಹುದು- “ಗೋಸಾಯಿ ಕೇರಿಗೆ ರಸ್ತೆಯಿಲ್ಲ, ಗಲ್ಲಿ ಗಲ್ಲಿಗಳಲ್ಲಿ ಗಟಾರುಗಳಿಲ್ಲ. ಮಳೆಯಾದರೆ ಕೇರಿಯಲ್ಲಿ ರಾಡಿ ನೀರು ಹೊಂಡವಾಗಿ ಬಿಡುತ್ತದೆ. ರಸ್ತೆಯಲ್ಲಿ ಗಟಾರವೊ, ಗಟಾರದಲ್ಲಿ ರಸ್ತೆಯೋ ಗೊತ್ತಾಗುವುದಿಲ್ಲ. ಬೇಸಿಗೆಯಲ್ಲಿ ಹುಡಿ ಹಾರುವ ಧೂಳು, ಧೂಳಿನಲ್ಲಿಯೇ ಇವರ ಬಾಳು ಕಳೆಯುತ್ತದೆ. ರಸ್ತೆ, ವಿದ್ಯುತ್, ನೀರು, ಗಟಾರಗಳಿಲ್ಲದ, ಮೂಲಭೂತ ಸೌಕರ್ಯಗಳಿಲ್ಲದ, ಈ ಕೇರಿಗಳಲ್ಲೀಗ ಸಾರ್ವಜನಿಕ ಶೌಚಾಲಯಗಳು, ಸಾರ್ವಜನಿಕ ಗ್ರಂಥಾಲಯ, ಆರೋಗ್ಯ ಸಮುದಾಯ, ಮಹಿಳಾ ಸೌಲಭ್ಯಗಳು ಇತ್ಯಾದಿಗಳು ಕನಸಿನ ಮಾತೇ ಆಗಿವೆ” ಎಂಬಲ್ಲಿ ಗೋಸಾಯಿಗಳ ನಿಕೃಷ್ಟ ಬದುಕಿಗೆ ಆಡಳಿತ ವ್ಯವಸ್ಥೆಯು ಕಾರಣವಾಗಿರುವುದನ್ನು ಡಾ. ನರೋಡೆಯವರು ತುಂಬಾ ರೋಷ ಮತ್ತು ವಿಷಾದದಿಂದ ದಾಖಲಿಸುತ್ತಾರೆ. ಊರ ತುಂಬ ತಿರುಗಿ, ಗುಜರಿ ಆಯ್ದು ಊರ ಸ್ವಚ್ಛತೆಗೆ ಪರ್ಯಾಯವಾಗಿ ಕಾರಣರಾಗುವ ಈ ಜನಾಂಗದ ಬೀದಿಗಳು ಅವ್ಯವಸ್ಥೆಗೆ ಕಾರಣವಾಗಿರಲು ಶಿಕ್ಷಣ ವಂಚಿತ ಅವಕಾಶಗಳೂ ಒಂದು ಕಾರಣ ಎಂಬುದನ್ನು ವಿವರಿಸುತ್ತಾರೆ. ಈ ಜನಾಂಗದ ಒಟ್ಟು ಅಭಿವೃದ್ಧಿಗಾಗಿ ಬುಡಕಟ್ಟು ಜನಾಂಗಕ್ಕೆ ಧ್ವನಿಯಾಧ ಡಾ. ಸುದರ್ಶನರಂಥವರ ಅಗತ್ಯ ತುಂಬಾ ಇದೆ ಎಂಬುದು ಸ್ಪಷ್ಟವಾಗುತ್ತದೆ.
ಈ ಕೃತಿಯ ಕೊನೆಯ ಅಧ್ಯಾಯ `ಗೋಸಾಯಿ ಜನಾಂಗದ ಅಭಿವೃದ್ಧಿಗೆ ಹೊಸ ಕಾಯಕಲ್ಪ’ ಶಿಷರ್ಿಕೆಯಡಿಯಲ್ಲಿ ಒಟ್ಟು ಅಧ್ಯಯನದ ಫಲಿತಗಳ ಹಿನ್ನೆಲೆಯಲ್ಲಿ ಯೋಜಿಸಬೇಕಾದ ಒಟ್ಟು ಅಧ್ಯಯನದ ದಿಕ್ಸೂಚಿ ಇದೆ. ತುಂಬಾ ಹಿಂದುಳಿದ, ಶೈಕ್ಷಣಿಕವಾಗಿ, ಆಥರ್ಿಕವಾಗಿ ದುರ್ಬಲರಾಗಿರುವ ಈ ಜನಾಂಗದ ಸಕಲ ಅಭಿವೃದ್ಧಿಗಾಗಿ ಇರುವ ಆಡಳಿತದ ಯೋಜನೆಗಳು ತುಂಬಾ ಪ್ರಾಮಾಣಿಕವಾಗಿ ಜಾರಿಗೆ ಬರಬೇಕಾಗಿದೆ ಎಂಬುದನ್ನು ಡಾ. ನರೋಡೆಯವರು ಸೂಚಿಸುವ ಮೂಲಕ ವ್ಯವಸ್ಥೆಯನ್ನು ಎಚ್ಚರಿಸುತ್ತಾರೆ.

ಕಾಮೆಂಟ್‌ಗಳಿಲ್ಲ:

ಧಾರವಾಡ ಎಂಬ ಸ್ವಾವಲಂಬನೆಯ ಸಾಂಸ್ಕೃತಿಕ ನಗರ

ಉತ್ತರಕರ್ನಾಟಕದ ಸಾಂಸ್ಕೃತಿಕ ಐಕಾನ್ ಧಾರವಾಡ. ದೇಶದ ಹೆಸರಾಂತ ಸಂಗೀತ ವಿದೂಷಿಗಳು, ಪಂಡಿತರು ಧಾರವಾಡ ನೆಲದಲ್ಲಿ ಸಂಗೀತ ಕಛೇರಿ ಕೊಡಲಿಕ್ಕೆ ಕಾಯುತ್ತಾರೆ ಹೇಗೋ ಹಾಗೆಯೇ ನ...