ನನಗಾಗ ಸುಮಾರು 10-12 ವರ್ಷ. ಆವಾಗಿಂದಲೆ ಶುರುವಾಗಿತ್ತು ನನ್ನ ಸಿನಿಮಾ-ನಾಟಕದ ಗೀಳು. ಬೆಳಗಿನ ಕ್ಲಾಸಿಗೆ ಚಕ್ಕರ್ ಹೊಡೆದು ಮಾರ್ನಿಂಗ್ ಷೋ, ಮಧ್ಯಾಹ್ನದ ಕ್ಲಾಸಿಗೆ ಚಕ್ಕರ್ ಹೊಡೆದು ಮ್ಯೋಟಿನಿ ನೋಡುವುದು ನನಗಾಗ ದಿನ ನಿತ್ಯದ ಕಾರ್ಯಕ್ರಮ. ಸಾಯಂಕಾಲ ಇನ್ನೂ ಒಂದು ಸಿನಿಮಾ ನೋಡುವ ಪ್ಲಾನೊಂದು ಹೊಳೆಯಿತು. ಮೊದಲಿಂದಲೂ ಗಣಿತಕ್ಕೂ ನನಗೂ ಕಡು ವೈರ. ಆದ್ದರಿಂದ ಮನೆಯವರ ಮುಂದೆ ನಾನು ಸಂಜೆ ಟ್ಯೂಷನ್ನಿಗೆ ಹೋಗಬೇಕೆಂದು ಹಟ ಹಿಡಿದೆ. ಇಲ್ಲದಿದ್ದರೆ ಆ ವರ್ಷದ ಪರೀಕ್ಷೆಯಲ್ಲಿ ನನಗೆ ದೊಡ್ಡ ಕೋಳಿಮೊಟ್ಟೆ ಸಿಗುತ್ತದೆಂದು ಹೆದರಿಸಿದೆ.
ಕೊನೆಗೆ ಟ್ಯೂಷನ್ನಿಗೆ ಕಳಿಸಲು ಒಪ್ಪಿದರು. ಸಾಯಂಕಾಲ ಟ್ಯೂಷನ್ನಿಗೆ ಕೊಕ್ಕು ಕೊಟ್ಟು ಸಂಜೆ ಷೋ ಅನ್ನೂ ಪ್ರತಿದಿನ ನೋಡತೊಡಗಿದೆ. ಆಗ ನನಗೆ ಓದು ಅಂದರೆ ವಾಕರಿಕೆ. ಸಿನಿಮಾ ಅಂದರೆ ಪ್ರಾಣ.ಆಗಾಗ ಕಿಲಾರಿರಸ್ತೆಯ ತುದಿಗಿದ್ದ ಸುಬ್ಬಯ್ಯನಾಯ್ಡು ಅವರ ರಂಗಭೂಮಿಯಲ್ಲಿ ನಾಟಕ ನೋಡಲು ಮತ್ತೆ ಮತ್ತೆ ಹೋಗುತ್ತಿದ್ದೆ. ಅಲ್ಲಿ ಅಭಿನಯವಾಗುತ್ತಿದ್ದ `ಭಕ್ತ ಅಂಬರೀಶ', `ದೇವದಾಸಿ' , `ಎಚ್ಚಮನಾಯಕ' ನಾಟಕಗಳು ಈಗಲೂ ಕಣ್ಣಿಗೆ ಟ್ಟಿದಂತಿವೆ. ಚಿಂದೋಡಿ ಕಂಪನಿಯವರ `ಟಿಪ್ಪೂ ಸುಲ್ತಾನ್' ನಾಟಕವೂ ಅಲ್ಲಿ ಅಭಿನಯವಾಗಿತ್ತು. ಚಿಂದೋಡಿ ವೀರಪ್ಪನವರ ಟಿಪ್ಪೂ ಸುಲ್ತಾನ್ ಅಭಿನಯ ನೋಡಿ ಕರಗಿ ಹೋಗುತ್ತಿದ್ದೆ.
ಅದೇ ರೀತಿ ಗುರುರಾಜುಲು ನಾಯ್ಡು, ಲಕ್ಷ್ಮೀದೇವಿ, ಮಹದೇವ ಸ್ವಾಮಿ ಕಂಪನಿಯ ಶ್ರಿಕಂಠಸ್ವಾಮಿ, ಗುಬ್ಬಿ ಕಂಪನಿಯ ಬಸವರಾಜು - ಇವರೆಲ್ಲಾ ಆ ಕಾಲದಲ್ಲಿ ನನ್ನ ಮನ ಸೆಳೆದ ನಟರು. ಕಿಲಾರಿ ರಸ್ತೆ ತುದಿಯ ಸುಬ್ಬಯ್ಯ ನಾಯ್ಡು ಅವರ ರಂಗಶಾಲೆ, ಗಾಂಧಿನಗರದ ಗುಬ್ಬಿ ಕಂಪನಿಯವರ ರಂಗಶಾಲೆ, ಸಿಟಿಮಾರ್ಕೆಟ್ಟಿನ ಬಳಿಯ ಮಹದೇವಸ್ವಾಮಿ ಕಂಪನಿಯ ರಂಗಶಾಲೆ ನನ್ನ ಬಾಲ್ಯದ ರಂಗ ಪ್ರಪಂಚದ ಮೇರೆಗಳು.
ನನಗೆ ಭಾವುಕ ಅಭಿನಯ ತುಂಬಾ ಮೆಚ್ಚುಗೆಯಾಗುತ್ತಿತ್ತು. ಶ್ರಿಕಂಠ ಸ್ವಾಮಿ, ಹರಿಶ್ಚಂದ್ರ ಪಾತ್ರದಲ್ಲಿ ಚಂದ್ರಮತಿ ಲೋಹಿತಾಶ್ವರನ್ನು ಹರಾಜು ಹಾಕುವ ದೃಶ್ಯ, `ಟಿಪ್ಪೂ ಸುಲ್ತಾನ್' ನಾಟಕದಲ್ಲಿ ಟಿಪ್ಪೂ ಪಾತ್ರಧಾರಿ ಮೀರ್‌ಸಾದಿಕನ ವಂಚನೆಯಿಂದ ಬಳಲಿ `ಅಲ್ಲಾ ಹೊ ಅಕ್ಬರ್' ಅಂತ ಜಯಘೋಷಣೆ ಮಾಡುತ್ತಾ ಯುದ್ಧಕ್ಕೆ ಹೋಗುವ ದೃಶ್ಯ - ಇಂಥವುಗಳನ್ನು ನೋಡಿದಾಗ ನನಗೆ ಕಣ್ಣಲ್ಲಿ ನೀರು ತಾನಾಗಿ ತಾನೇ ಸುರಿಯತೊಡಗುತ್ತಿತ್ತು.
ಅದೇ ರೀತಿ ಸಿನಿಮಾದಲ್ಲಿ ನನ್ನ ಮೆಚ್ಚಿನ ನಟ ಶಿವಾಜಿಗಣೇಶನ್, `ವೀರಪಾಂಡ್ಯ ಕಟ್ಟಬೊಮ್ಮನ್', `ಕಂದನ್ ಕರುಣೈ' ಸಿನಿಮಾಗಳಲ್ಲಿ ಶಿವಾಜಿ ಉಸಿರು ಬಿಗಿಹಿಡಿದು ನೀಳವಾದ ಸಂಭಾಷಣೆಗಳನ್ನು ತಡೆಯಿಲ್ಲದೆ ಹೇಳುವುದನ್ನು ಕೇಳಿ ಮಂತ್ರಮುಗ್ಧನಾಗುತ್ತಿದ್ದೆ. ಅದೇ ಥರ ರಾಜಕುಮಾರ್ ಅವರ ಭಕ್ತಿ ಸಿನಿಮಾಗಳಲ್ಲಿ ಅವರ ಭಾವುಕ ಅಭಿನಯ ನೋಡಿ ನನ್ನ ಮನಸ್ಸು ತುಂಬಿ ಬರುತ್ತಿತ್ತು. `ಭಕ್ತ ಕನಕದಾಸ' ಸಿನಿಮಾವನ್ನು ಲೆಕ್ಕವಿಲ್ಲದಷ್ಟು ಸಾರಿ ನೋಡಿದ್ದೆ. ಆ ಭಾವುಕ ಸಿನಿಮಾಗಳ ಡೈಲಾಗುಗಳನ್ನು ಉರು ಹಚ್ಚಿ ಯಥಾವತ್ತಾಗಿ ಗೆಳೆಯರ, ನೆಂಟರ ಮುಂದೆ ಒಪ್ಪಿಸಿ ಭೇಷ್‌ಗಿರಿ ಗಿಟ್ಟಿಸಿಕೊಳ್ಳುತ್ತಿದ್ದೆ. ನನ್ನ ಈ ಚಾಳಿ ಕನ್ನಡ ವಿದ್ವಾಂಸರಾಗಿದ್ದ ನ್ನ ತಂದೆಯವರಿಗೆ ಗೊತ್ತಾಗಿ ನನಗೊಂದು ಇಂಗ್ಲಿಷ್ ಬಿರುದು ನೀಡಿದ್ದರು: `ಎನಿಮಿ ಆಫ್ ಸರಸ್ವತಿ'.
ಭಾವುಕ ಸಿನಿಮಾ -ನಾಟಕಗಳಷ್ಟೇ, ಎಂ. ಜಿ. ಆರ್. ಅವರ ಡಿಶುಂಡಿಶುಂ ನನಗೆ ಪ್ರಿಯವಾಗಿದ್ದವು. ನಮ್ಮ ಮನೆಯ ಹಿತ್ತಲಿನ ಸಂಪಿಗೆ ಮರದ ಕೊಂಬೆಗಳನ್ನು ಮುರಿದು ಅದನ್ನೇ ಕತ್ತಿ ಎಂದು ಕಲ್ಪಿಸಿಕೊಂಡು ಅದೃಶ್ಯ ಎದುರಾಳಿಯ ಜೊತೆಗೆ ಕತ್ತಿವರಸೆ ಮಾಡುತ್ತಿದ್ದೆ.
ಅಕ್ಕಪಕ್ಕದ ನನ್ನ ಥರದ `ಸರಸ್ವತಿ ಶತ್ರು'ಗಳನ್ನು ಕಲೆ ಹಾಕಿಕೊಂಡು ಸಿನಿಮಾಗಳಿಂದ ಕದ್ದ ದೃಶ್ಯಗಳನ್ನು ನಾಟಕ ಮಾಡಿ ತೋರಿಸುತ್ತಿದ್ದೆ. ಆಸುಪಾಸಿನ ಮನೆಗಳ ಹೆಂಗಸರು, ಅಜ್ಜಿಯರು ನಮ್ಮ ಪ್ರೇಕ್ಷಕರು. ಒಂದು ದಿವಸ ನಾನೂ ಮತ್ತು ನಮ್ಮ ನೆರೆಯ ನಾಗರಾಜಾಚಾರಿ ಒಂದು ನಾಟಕ ಮಾಡಿದೆವು. ಅವನು ಯುದ್ಧದಲ್ಲಿ ಗೆದ್ದು ಸಿಂಹಾಸನ ಹತ್ತಲು ಹೋಗುತ್ತಿರುತ್ತಾನೆ.
ಆದರೆ ಸೋದರಮಾವನ ಕಡೆಯವರು ಅವನನ್ನು ಹಿಂದಿನಿಂದ ಬಂದು ಇರಿಯುತ್ತಾರೆ. ಅವನ ತಮ್ಮನ ಪಾತ್ರ ವಹಿಸಿದ್ದ ನಾನು ಕ್ಷಣಾರ್ಧದಲ್ಲಿ ಅಲ್ಲಿಗೆ ಧಾವಿಸಿ ಎಂ. ಜಿ. ಆರ್. ಮಾದರಿಯ ಡಿಶುಂಡಿಶೂಂ ಬಾಕ್ಸಿಂಗ್ ಮಾಡಿ ಅವರೆಲ್ಲರನ್ನೂ ಕೊಲ್ಲುತ್ತೇನೆ. ಅಮೇಲೆ `ಅಣ್ಣಾ ನಿನ್ನ ಈ ತಮ್ಮನನ್ನು ಅನಾಥನಾಗಿಸಿ ಆ ಲೋಕನಾಥನ ಪಾದಗಳನ್ನು ಸೇರಿದೆಯಾ? ಸಿಂಹಾಸನವನ್ನೇರಿ ಸೂರ್ಯಪ್ರಕಾಶವಾಗಿ ಶತ್ರುಗಳ ಕಣ್ಣು ಕುಕ್ಕಿಸಬೇಕಾಗಿದ್ದ ನೀನು ಶತ್ರುಗಳ ಮೋಸದೇಟಿಗೆ ಗುರಿಯಾದೆಯಾ? ನೀನಿಲ್ಲದ ರಾಜ್ಯ ನನಗೇಕೆ? ನೀನಿಲ್ಲದ ಪ್ರಾಣ ನನಗೇಕೆ? ಇಗೋ ನಾನೂ ಆ ಲೋಕಕ್ಕೆ ಬರುತ್ತಿದ್ದೇನೆ' ಎಂದು ಕತ್ತಿಯಾಗಿ ಮಾಡಿಕೊಂಡಿದ್ದ ಸಂಪಿಗೆ ಕೊಂಬೆಯಿಂದ ನನ್ನನ್ನು ನಾನೇ ತಿವಿದುಕೊಂಡು ಅವನ ಹೊಟ್ಟೆಯ ಮೇಲೆ ದೊಪ್ಪನೆ ಬೀಳುತ್ತೇನೆ.
ನಾನು ಎಂದೂ ಮರೆಯಲಾಗದ ಹೂಸು ಮತ್ತು ಸಿಂಬಳದ ಪ್ರಸಂಗ ಆಗಲೇ ಸಂಭವಿಸಿದ್ದು. ಹಿಂದಿನ ದಿನ ಆ ನಾಗರಾಜಾಚಾರಿ ಕೋಳಿಮಟ್ಟೆ ಸ್ಕೂಲು ಪಕ್ಕದ ಬೋಂಡಾ ಅಂಗಡಿಯಲ್ಲಿ ಸಖತ್ ಬೋಂಡಾ ತಿಂದಿದ್ದ. ಜೊತೆಗೆ ತುಂಬಾ ನೆಗಡಿಯೂ ಆಗಿತ್ತು. ನಾನು ಹೋಗಿ ಅವನ ಹೊಟ್ಟೆ ಮೇಲೆ ಬಿದ್ದಿದ್ದೇ ತಡ ಸಿಡಿಲು-ಗುಡುಗಿನೋಪಾದಿಯಲ್ಲಿ ಹೂಸುಬಿಟ್ಟು ಆ ವಾಸನೆಯನ್ನು ತಡಕೊಳ್ಳುವುದು ನನಗಾಗಲೀ ಅಥವಾ ನಮ್ಮ ಭವ್ಯ ನಾಟಕ ನೋಡಲು ಬಂದಿದ್ದ ಮಹಿಳಾಮಣಿಗಳಿಗೆ ಅಸದಳವಾಗುತ್ತಿದ್ದ ಸಂದರ್ಭದಲ್ಲೇ ಜೋರಾಗಿ ಸೀನಿದ. ಅವನ ಮೂಗಿನಿಂದ ಬೆಟ್ಟನೆಲ್ಲಿ ಕಾಯಿ ಗಾತ್ರದ ಸಿಂಬಳದ ಉಂಡೆಯೊಂದು ಚಿಟ್ಟೆಯಂತೆ ಜಿಗಿದು ನ್ನ ಬಲಗೆನ್ನೆಯ ಮೇಲೆ ಬಂದು ಕೂತಿತು. ಅವನು ತಬ್ಬಿಬ್ಬಾಗಿ ಮೇಲೆದ್ದ. ನಾನು `ಥೂಥ್ತೇರಿಕೆ' ಅಂತ ಬೈಯ್ಯುತ್ತಾ ಒರೆಸಿಕೊಳ್ಳತೊಡಗಿದೆ.
ನಮ್ಮ ಘನಗಂಭೀರ ನಾಟಕ ನೋಡಬಂದಿದ್ದವರೆಲ್ಲಾ ಗೊಳ್ಳೆಂದು ನಗತೊಡಗಿದ್ದರು. ಆ ಹೂಸು ಮತ್ತು ಸಿಂಬಳದ ಪ್ರಸಂಗದ ನಂತರ, ನಾನು ನಾಟಕ ಮಾಡುವುದನ್ನೇ ಬಿಟ್ಟೆ. ನನಗೆ ದೇವರು ಒಳ್ಳೆ ಬುದ್ಧಿ ಕೊಟ್ಟನೆಂದು ನಮ್ಮ ತಾಯಿ ಸಂತೋಷಪಟ್ಟರು.
ಈ ಪ್ರಸಂಗದ ಬಗ್ಗೆ ಇಷ್ಟು ವಿವರವಾಗಿ ಬರೆಯುವುದಕ್ಕೆ ಕಾರಣ ಕೇವಲ ಬಾಲ್ಯ ಕುರಿತ ಹಳಹಳಿಕೆಯಲ್ಲ. ಭಾವುಕತೆ ರೋಚಕತೆಗಳೇ ನಟನೆಯ ಜೀವಾಳವೆಂದು ತಿಳಿದಿದ್ದ ನನಗೆ ಆ ರೀತಿಯ ನಟನೆಯ ಬಗೆಗೇ ಅಸಹನೆ ಬಂತು. ಬೇರೆ ಥರದ ನಾಟಕಗಳ ಕಲ್ಪನೆ ನನಗಾಗ ಲಭ್ಯವಿರಲಿಲ್ಲ. ಆದ್ದರಿಂದ ನಾಟಕವನ್ನೇ ಕೈಬಿಟ್ಟೆ. ಸಿನಿಮಾ ನೋಡುವುದನ್ನು ಬಿಟ್ಟು ಪುಸ್ತಕಗಳ ಬೆನ್ನಿಗೆ ಬಿದ್ದೆ.
ಮುಂದೆ ಗಣಿತ ಮತ್ತು ಭೌತಶಾಸ್ತ್ರಗಳಲ್ಲಿ ಡುಮುಕಿ ಹೊಡೆದ ಕಾರಣ ಪಿ.ಯು. ಸಿ.ಯ ನಂತರ ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿಯಾದಾಗ ಷೇಕ್ಸ್‌ಪಿಯರನ ನಾಟಕಗಳನ್ನು ಓದತೊಡಗಿದಾಗ ಇನ್ನೊಂದು ರಂಗಕಲ್ಪನೆ ಅಸ್ಪಷ್ಟವಾಗಿ ಮನದಾಳದಲ್ಲಿ ಮೂಡತೊಡಗಿತು. ನಾನು ಡಿಗ್ರಿ ಓದುವ ಸಂದರ್ಭದಲ್ಲಿ ಆಧುನಿಕ ನಾಟಕ ಮತ್ತು ರಂಗಭೂಮಿಗಳ ಪರಿಚಯ ನನಗಾಗತೊಡಗಿತು. ಬಿ.ವಿ. ಕಾರಂತರ ನಿರ್ದೇಶನದ ಹೊಸ ನಾಟಕಗಳನ್ನು ನೋಡಿದಾಗ ಹೊಸದೊಂದು ಜಗತ್ತು ತೆರೆದುಕೊಂಡಿತು.
ಆಮೇಲೆ `ಸಮುದಾಯ'ದ ಬುದ್ಧಿಜೀವಿ ನಾಟಕಗಳ ಪರಿಚಯವಾಯಿತು. ಪ್ರಸನ್ನ ನಿರ್ದೇಶನದ `ಗೆಲಿಲಿಯೊ' ನೋಡಿದಾಗ ಇನ್ನೊಂದು ಆಯಾಮ ತೆರೆದುಕೊಂಡಿತು. ಆದರೂ ಏನೋ ಸಾಲದು ಅನಿಸುತ್ತಿತ್ತು.
ಕೆಲವು ವರ್ಷಗಳ ನಂತರ ನೌಕರಿಗಾಗಿ ನಾನು ತುಮಕೂರು ನಿವಾಸಿಯಾದ ಸಮಯದಲ್ಲಿ `ಸಮುದಾಯ'ದವರು ಅಲ್ಲಿ ಒಂದು ಸಲ `ಕನ್ಹೈಲಾಲ್' ಎಂಬುವವರ `ಪೆಬೆ' ನಾಟಕವನ್ನಾಡಿಸಿದರು. ಅದು ನನ್ನ ಮೇಲೆ ಅಚ್ಚಳಿಯದ ಪ್ರಭಾವ ಬೀರಿತು. ತಾಯಿಹಕ್ಕಿಯೊಂದು ತನ್ನ ಮರಿಹಕ್ಕಿಗಳನ್ನು ಮೇಲೆರಗಿ ಬರುವ ಹದ್ದುಗಳಿಂದ ಹೇಗೆ ಕಾಪಾಡುತ್ತದೆಂಬುದು ಆ ನಾಟಕದ ಹುರುಳು. ಅದರ ಅಭಿನಯ ಕ್ರಮ ನಾನು ಆ ಹಿಂದೆ ನೋಡಿದ ಎಲ್ಲ ನಾಟಕಗಳಿಗಿನ್ನಾ ಬೇರೆಯಾಗಿತ್ತು. ನನ್ನ ಬಾಲ್ಯದ ಸಿನಿಮಾ-ನಾಟಕಗಳಂತೆ ಅದು ಭಾವುಕವಾಗಲೀ ರೋಚಕವಾಗಲೀ ಇರಲಿಲ್ಲ. ಅಥವಾ ಬುದ್ಧಿಜೀವಿ ನಾಟಕಗಳಂತೆ ವಾಗ್ವಾದಗಳ ಮೇಲೂ ನಿಂತಿರಲಿಲ್ಲ. ಭಾವುಕ ನಟ ಪಾತ್ರದಲ್ಲಿ ಮುಳುಗಿ ಹೋಗಿ ನೋಡುಗನನ್ನೂ ಮುಳುಗಿಸಿಬಿಡುತ್ತಾನೆ. ಬುದ್ಧಿಜೀವಿ ನಟ ಅನುಭವದೂರನಾಗಿ ನಿಲ್ಲುವುದರಿಂದ ಹೃದಯವಿಹೀನ ಸಿನಿಕತೆಯನ್ನುಂಟುಮಾಡುತ್ತಾನೆ.
ಭಾವುಕ ರಂಗಭೂಮಿಯ ಹಗಲುಗನಸಿನ ವರ್ತುಲದಲ್ಲಾಗಲಿ, ಬುದ್ಧಿಜೀವಿ ರಂಗಭೂಮಿಯ ಪರಕೀಯ ವಾತಾವರಣದಲ್ಲಾಗಲಿ ಕನ್ಹೈಲಾಲರ ನಟರು ಅಭಿನಯಿಸುತ್ತಿರಲಿಲ್ಲ. ಅವರ ಚಲನವಲನಗಳು ಒಂದು ಪ್ರಾಚೀನ ಕ್ರಿಯಾವಿಧಿಯ ಲಯಬದ್ಧತೆಯಿಂದ ಕೂಡಿದ್ದವು. ಜಾಗರಕ್ಕಿಂತಲೂ, ಚಿಂತನೆ-ಭಾವನೆಗಳಿಗಿಂತಲೂ ಆಳವಾದ ಮನೋವಲಯದ ಘಟನಾವಳಿಗಳನ್ನು ಅವು ಪ್ರತ್ಯಕ್ಷಗೊಳಿಸುತ್ತಿದ್ದವು.
ಮಾತುಗಳನ್ನು ಮಂತ್ರಗಳಂತೆ ಉಚ್ಚರಿಸುತ್ತಿದ್ದವು. ನಮ್ಮ ತಳಮನಸ್ಸಿನ ಅಗೋಚರ ಆದಿಮಭಾವಗಳನ್ನು, ಭೀತಿಗಳನ್ನು, ಬಯಕೆಗಳನ್ನು ರಂಗದ ಮಾಂತ್ರಿಕ ವಾತಾವರಣದಲ್ಲಿ ಕಟ್ಟಿಕೊಡುತ್ತಾ ನಮ್ಮನ್ನು ಕಲಕಿ ಬಗೆಯಾಳದ ಗಂಟುಗಳನ್ನು ಬಿಡಿಸುತ್ತಾ ಮೈ-ಮನ-ಬುದ್ಧಿ-ಭಾವಗಳನ್ನು ಹಗುರಗೊಳಿಸುತ್ತಿದ್ದವು. ತೆರೆದ ಕಣ್ಣಿನಿಂದ ಸ್ವಪ್ನವೊಂದನ್ನು ವೀಕ್ಷಿಸುತ್ತಾ ಅದರ ರಹಸ್ಯಮಯ ಪಾಠಗಳನ್ನು ನಮಗರಿವಿಲ್ಲದಂತೆ ಅರಿಯಪಡಿಸುವ ವಿಸ್ಮಯಕಾರಿಯಾದ ಪ್ರಯೋಗ ಅದು.
ಆ ಅನುಭವ ಮುಂದೆ ನನ್ನ ನಾಟಕಗಳ ರಚನೆಯನ್ನು ನನಗೇ ಗೊತ್ತಿಲ್ಲದ ರೀತಿಯಲ್ಲಿ ಪ್ರಭಾವಿಸಿತು. ಆಗ ಇನ್ನೊಂದು ಲೋಕದ ಜೀವಿಯಂತೆ ನನಗೆ ಕಂಡಿದ್ದ ಕನ್ಹೈಲಾಲರು ಮುಂದೆ ನನಗೆ ಆತ್ಮೀಯರಾಗುತ್ತಾರೆಂದಾಗಲಿ ಅವರ ಜೊತೆ ಕೆಲಸ ಮಾಡುವ, ಆಲೋಚಿಸುವ ಅವಕಾಶ ನನಗೊಮ್ಮೆ ದೊರೆಯುತ್ತದೆಂದಾಗಲಿ ನನಗಾಗ ಗೊತ್ತಿರಲಿಲ್ಲ. ಈಗ ಅವರು ರಚನೆ ಮಾಡಿರುವ ರಂಗತತ್ತ್ವವನ್ನು ಕುರಿತ `ರಿಚುಯಲ್ ಥಿಯೇಟರ್' ಪುಸ್ತಕಕ್ಕೆ ನಾನೀಗ ಮುನ್ನುಡಿ ಬರೆಯಹೊರಟಿರುವಾಗ ಮೇಲಿನ ನೆನಪುಗಳು ಸುಳಿದುಹೋದವು. ಯಾಕೆಂದರೆ ರಂಗಭೂಮಿಯ ಬಗೆಗಿನ ನನ್ನ ತಿಳಿವಳಿಕೆ ನಂಬಿಕೆಗಳಿಗೆ ಕನ್ಹೈಲಾಲರ ಪ್ರಯೋಗವೇ ನನಗೆ ಗಮ್ಯಸ್ಥಾನವಾಗಿದೆ.
ನಾನು ಮೊದಲಿಗೆ ಅವರ ಪ್ರಯೋಗ ನೋಡಿದಾಗ ಉಂಟಾದ ಅನಿರ್ವಚನೀಯ ಸ್ಪಂದನಗಳನ್ನು ಈ ಅಪ್ರಕಟಿತ ಕೃತಿ ನಿರ್ವಚನಗೊಳಿಸುತ್ತಿರುವುದು ನನಗಾದ ವೈಯಕ್ತಿಕ ಪ್ರಯೋಜನ. ಇದನ್ನೂ ಮೀರಿದ ಸಾರ್ವಜನಿಕ ಪ್ರಯೋಜನವನ್ನು ಈ ಕೃತಿ ಉಂಟುಮಾಡುತ್ತದೆ. ಇಡೀ ಕಲೆಯ ಬಗೆಗಿನ ನಮ್ಮ ತಿಳಿವಳಿಕೆಯನ್ನು ಆಮೂಲಾಗ್ರವಾಗಿ ಬದಲಾಯಿಸುವಂಥ ನಿಖರತೆಯನ್ನು ಇದು ಹೊಂದಿದೆ. ಜೊತೆಗೆ ಸಾಮಾಜಿಕ ಪಡಿಪಾಟಲುಗಳಿಂದ ಬಿಡುಗಡೆಯನ್ನು ಕಲೆಯ ಮೂಲಕ ಇಲ್ಲೇ, ಈಗಲೇ ಪಡೆದುಕೊಳ್ಳುವ ಹೆದ್ದಾರಿಯನ್ನು ಇದು ಹಾಕಿಕೊಡುತ್ತದೆ.
ಎಲ್ಲ ಆಳದ ಮಾತುಗಳಂತೆ ಕನ್ಹೈಲಾಲರ ಗ್ರಹಿಕೆಗಳನ್ನು ಶಬ್ದರೂಪದಲ್ಲಿ, ತಾರ್ಕಿಕವಾಗಿ ವಿವರಿಸುವುದು ಕಠಿಣ. ಆದ್ದರಿಂದ ಅವರು ತಮ್ಮ ಚಿಂತನೆಯ ನಿವೇದನೆಗೆ ವಿಚಾರಗಳ ಸಮನೆಲದ ಹಾದಿಯನ್ನು ಹಿಡಿಯದೆ ನೆನಪುಗಳ, ಪ್ರಶ್ನೋತ್ತರಗಳ, ಆತ್ಮಕಥನಗಳ ಮೂಲಕ ತಮ್ಮನ್ನು ಅಭಿವ್ಯಕ್ತಿಗೊಳಿಸಿಕೊಳ್ಳುತ್ತಾರೆ. ಕಲೆ ಮತ್ತು ಬದುಕಿನ ಬಗೆಗಿನ ನಮ್ಮ ಗೃಹೀತಗಳಿಗೆ ಪುನರ್ಜನ್ಮ ನೀಡಬಲ್ಲ ಶರವನ್ನು ಅಡಗಿಸಿಕೊಂಡಿರುವ ಕನ್ಹೈಲಾಲರ ಪುಸ್ತಕವನ್ನು ಕೆಳಕಂಡ ರೀತಿಯಲ್ಲಿ ಸಂಗ್ರಹಿಸಬಹುದೇನೋ.
ಕನ್ಹೈಲಾಲರ ರಂಗಚಿಂತನೆಗೆ ವಿಶ್ವಾತ್ಮಕ ಹೊರಚಾಚುಗಳಿದ್ದರೂ ಅವರು ತಮ್ಮ ಹೊಳಹುಗಳನ್ನು ಅರ್ಥೈಸುವುದು ತಮ್ಮ ಪ್ರದೇಶವಾದ ಮಣಿಪುರದ ಹಿಂಸ್ರ ರಾಜಕೀಯ ವಾತಾವರಣದಲ್ಲಿ. ತಮ್ಮ ರಕ್ತಸಿಕ್ತ ಸಮಾಜ ಮತ್ತು ಪರಿಸರದ ಗಾಯಗಳನ್ನು, ನೋವುಗಳನ್ನು ಸೃಜನಾತ್ಮಕವಾಗಿ ರಂಗದ ಮೇಲೆ ಅಭಿನಯಿಸಿ ಅವುಗಳಿಂದ ನಟರನ್ನು, ಪ್ರೇಕ್ಷಕರನ್ನು ಬಿಡುಗಡೆಗೊಳಿಸುವುದು ಅವರ ಧ್ಯೇಯ.
ಇದಕ್ಕಾಗಿ ಅವರು ಆಶ್ರಯಿಸುವ ರಂಗಭೂಮಿ ತಲತಲಾಂತರದಿಂದ ಬಂದ ಟ್ರಿಕ್ಕುಗಳನ್ನು ಹೊಸ ಮಸಾಲೆ ಜೊತೆ ಪ್ರದರ್ಶಿಸುವ ಜಾನಪದ ಅಥವಾ ಶಾಸ್ತ್ರೀಯ ರಂಗಭೂಮಿಯಂತಲ್ಲ. ಅಥವಾ ದೇಹಮನಸುಗಳನ್ನು ತಟ್ಟದೆ ಮುಟ್ಟದೆ ಅಮೂರ್ತ ಅನುಭವವನ್ನು ವಿಶ್ಲೇಷಿಸುವ ಬುದ್ಧಿಜೀವಿ ರಂಗಭೂಮಿಯೂ ಅಲ್ಲ. ಅಥವಾ ರಂಜನೆಯ ಸರಕು ಮೊದಲೇ ಅಲ್ಲ. ಅವರ ಮಟ್ಟಿಗೆ ರಂಗಭೂಮಿಯೆಂದರೆ ಒಡಲೊಂದೆಸೆ ಮನವೊಂದೆಸೆ ಬುದ್ಧಿಯೊಂದೆಸೆಯಾಗಿರುವ ಇಂದಿನ ನಮ್ಮನ್ನು ರಂಗಕ್ರಿಯೆಯ ಮೂಲಕ ಮತ್ತೆ ಒಟ್ಟುಗೂಡಿಸಿ ನಮ್ಮೆಲ್ಲ ಶಕ್ತಿಗಳೊಂದಿಗೆ ಇಂದಿನ ದಂದುಗಗಳಿಗೆ ಎದಿರುಗೊಳ್ಳುವಂತೆ ಮಾಡುವ ಕ್ರಮ. ಆದ್ದರಿಂದಲೇ ಅದು ವಿಮೋಚನಾತ್ಮಕ.
ಕನ್ಹೈಲಾಲರು ತಮ್ಮ ರಂಗಚಿಂತನೆ-ಪ್ರಯೋಗಗಳಲ್ಲಿ ಇಂದಿನ ಮನರಂಜನಾ ಕಲೆಗಳ ಮೂಲಗುಣವಾದ ಹುಸಿ ಯಥಾರ್ಥವಾದವನ್ನು ಪೂರ್ತಿ ಕೈಬಿಡುತ್ತಾರೆ. ಸಿದ್ಧ-ಪ್ರಸಿದ್ಧ ರಂಗಕ್ರಮಗಳ ವ್ಯಾಕರಣಗಳನ್ನು ಗಾಳಿಗೆ ತೂರುತ್ತಾರೆ. ವೈಯಕ್ತಿಕ ಆಳಗಳಲ್ಲಿ ಸಾರ್ವತ್ರಿಕ ನೋವುಗಳನ್ನು ಅನುಭವಿಸಿ ಅದಕ್ಕೊಂದು ರೂಪ ಕೊಡುವ ಆದಿಮ ಕತೆಯನ್ನೋ ಗೀತೆಯನ್ನೋ ಆಶ್ರಯಿಸಿ ಅದನ್ನು ತ್ರಿಕರಣಪೂರ್ವಕವಾಗಿ ಪುನಃಪುನಃಪುನರಭಿನಯಿಸುತ್ತಾ, ಪುನರನುಭವಿಸುತ್ತಾ ನಟರ ಮೈ, ಪ್ರಾಣ, ಉಸಿರಿನ ಭಂಗಿ ಮತ್ತು ಚಲನೆಗಳ ಮೂಲಕ ಆದಿವಾಸಿ ಕಲೆಗಳ ಆದಿಲಯಗಳ ಮೂಲಕ ಮೂರ್ತೀಕರಿಸುತ್ತಾ ಹೋಗುತ್ತಾರೆ.
ನೋವಿನ ಬೇರುಗಳನ್ನರಸುತ್ತಾ ಅವರ ಕಲೆ ಮನುಕುಲದ ಬೇರುಗಳ ಗತಕ್ಕೆ ಹೋದರೂ ಕೂಡ ಅದು ಇಂದಿನ ದಂದುಗಗಳನ್ನೇ ಕಲಾತ್ಮಕವಾಗಿ ಧ್ಯಾನಿಸುತ್ತಾ ಪ್ರಸ್ತುತದ ಜೊತೆಗೆ ಮುಖಾಮುಖಿಯಾಗುತ್ತದೆ. ಇಂದಿನ ಕೃತಕ ಸಾಮಾಜಿಕ ವಾತಾವರಣದಲ್ಲಿ ಸ್ವಾಭಾವಿಕತೆಯನ್ನು ಕೃತಕವಾಗಿ ಮತ್ತೆ ನಿರ್ಮಿಸಿಕೊಂಡು ತನ್ಮೂಲಕ ನಟ ಮತ್ತು ನೋಡುಗರನ್ನು ತಮ್ಮ ಸಾಮಾಜಿಕ, ಪ್ರಾಕೃತಿಕ ಮೂಲಗಳಿಗೆ ವಾಪಸಾಗಿಸಿ ನಮಗೆ ನಮ್ಮ ಸಮಾಜಕ್ಕೆ ನಮ್ಮ ಸಮಸ್ತ ಶಕ್ತಿಗಳನ್ನು ಮರುಗಳಿಸಿಕೊಡುತ್ತದೆ.
ಆದ್ದರಿಂದಲೇ ಅವರ ರಂಗನಿರ್ಮಿತಿ ಮತ್ತದರ ಅನುಭವ ಪ್ರಾಚೀನ ಕ್ರಿಯಾವಿಧಿಗಳಿಗೆ, ಪುರಾಣಗಳಿಗೆ ಹತ್ತಿರ. ಲಾಗಾಯ್ತಿನ ಪುರಾಣಗಳು ಕಾಲ್ಪನಿಕ ಗತದ ಕತೆಯನ್ನು ಮಾತ್ರ ಹೇಳುತ್ತಿರುವುದಿಲ್ಲ. ಮುಂದಿನ ಘಟನೆಗಳನ್ನೂ ಪೂರ್ವಾಭಿನಯಿಸುತ್ತವೆ.
ಇದಕ್ಕೊಂದು ಉದಾಹರಣೆ: ತಮ್ಮ ಪ್ರದೇಶದ ಮೇಲೆರಗಿ ಬಂದ ಹಲ್ಲೆಕೋರರ ವಿರುದ್ಧ ತಮ್ಮ ನೆಲದ ಸ್ತ್ರೀಶಕ್ತಿ ಅಂತಿಮ ಪ್ರತಿಭಟನೆಯನ್ನು ತನ್ನ ನಗ್ನತೆಯ ಮೂಲಕ ವ್ಯಕ್ತಪಡಿಸುವ ಬಹುಚರ್ಚಿತ ದೃಶ್ಯವನ್ನು ಅವರು ರಂಗದ ಮೇಲೆ ತಮ್ಮ `ದ್ರೌಪದಿ' ನಾಟಕದಲ್ಲಿ ತಂದರು. ಅದನ್ನು ನೋಡಿದ ಅನೇಕರು ಬೆಚ್ಚಿಬಿದ್ದರು. ಮುಖ್ಯ ಪಾತ್ರವಹಿಸಿದ ಅವರ ಮಡದಿ ಮತ್ತು ಆದರ್ಶ ನಟಿ ಸಾಬಿತ್ರಿ ಅವರನ್ನು ರಂಗದ ಮೇಲೆ ಬತ್ತಲೆಗೊಳಿಸಿ ಮಣಿಪುರದ ಸ್ತ್ರೀಯರಿಗೆ ಘೋರ ಅಪಮಾನ ಮಾಡಿದರೆಂದು ಜನ ದೂಷಿಸಿದರು.
ಆದರೆ ಕೆಲವೇ ವರ್ಷಗಳ ನಂತರ ತಮ್ಮ ಮೇಲೆ ಹಲ್ಲೆಕೋರರು ಮತ್ತೆ ಮತ್ತೆ ಎಸಗುತ್ತಿದ್ದ ಮಾನಭಂಗದ ಪ್ರಸಂಗಗಳನ್ನು ವಿರೋಧಿಸಲೋಸುಗ ಮಣಿಪುರದ ಹೆಂಗಸರು ಸಾರ್ವಜನಿಕವಾಗಿ ನಗ್ನರಾಗಿ ತಮ್ಮ ಕಡುಗೋಪ ಮತ್ತು ವಿರೋಧಗಳನ್ನು ವ್ಯಕ್ತಪಡಿಸಿದರು.
ಆಗ ಗೊತ್ತಾಯಿತು, ಪ್ರಸ್ತುತದ ಅಪಮಾನಗಳನ್ನು, ಅವು ಪ್ರೇರೇಪಿಸುವ ವಿರೋಧಗಳನ್ನೂ ಪೂರ್ವಾಭಿನಯಿಸುವ ಪ್ರವಾದಿತ್ವ ಕನ್ಹೈಲಾಲರ ರಂಗಭೂಮಿಗಿದೆಯೆಂದು.
ಹೀಗಾಗಿ ಕನ್ಹೈಲಾಲರ ಕಲೆ ತಥ್ಯದ ಬಿಂಬವಾಗಲಿ ಟೀಕೆಯಾಗಲಿ ಅಲ್ಲ. ತಥ್ಯದ ನಿರ್ಮಾಣ ಮತ್ತು ಪರಿವರ್ತನಾಕ್ರಿಯೆಯಲ್ಲಿ ಭಾಗಿಯಾಗುವ ಕ್ರಿಯಾವಿಧಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ