ಬುಧವಾರ, ಡಿಸೆಂಬರ್ 5, 2012

ಮುರ್ಡೇಶ್ವರ ಕಡಲ ಕಿನಾರೆಯಲ್ಲಿ ಗಮನ ಸೆಳೆದ ಗೌಳಿ ನೃತ್ಯ -- ರಝಾ ಮಾನ್ವಿ


ಶಿಸುವ ಅಂಚಿನಲ್ಲಿರುವ ಜಾನಪದ ಕಲೆ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಹೋರಾ ಸಂಸ್ಥೆಯ ಸಂಸ್ಕೃತಿ ಸಿಂಚನ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗಿದ್ದು, ಉತ್ತರ ಕನ್ನಡ ಜಿಲ್ಲಾದ್ಯಂತ ಅದು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಜಾನಪದ ಕಲೆಯ ರಕ್ಷಣೆ ಮಾಡುತ್ತಿದೆ. ಪ್ರಸ್ತುತ ದಿನಮಾನದಲ್ಲಿ ಪ್ರವಾಸೋದ್ಯಮ ಕ್ಷೇತ್ರವು ಒಂದು ಪ್ರಮುಖ ಆದಾಯ ಮೂಲವಾಗಿ ಹೊರಹೊಮ್ಮುತ್ತಿದ್ದು, ಇದಕ್ಕೆ ಉತ್ತರ ಕನ್ನಡ ಜಿಲ್ಲೆಯೂ ಹೊರತಾಗಿಲ್ಲ. ಜಿಲ್ಲೆಯ ನಿಸರ್ಗ-ಕಲೆ-ಸಂಸ್ಕೃತಿಗಳು ದಿನದಿಂದ ದಿನಕ್ಕೆ ಹೆಚ್ಚು-ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ನಿಸರ್ಗ ಆಧಾರಿತ (EcoTourism) ಪ್ರವಾಸೋದ್ಯಮದಲ್ಲಿ ಹೆಚ್ಚಿನ ಆಕರ್ಷಣೆ ಹೊಂದಿರುವ ಜಿಲ್ಲೆಯ ನಿಸರ್ಗಕ್ಕೆ ಧಕ್ಕೆಯಾಗದ ರೀತಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯಾಗಬೇಕು ಹಾಗೂ ಇಲ್ಲಿನ ಜಾನಪದ ಕಲೆ-ಸಂಸ್ಕೃತಿ ಉಳಿಯಬೇಕು ಜೊತೆಯಲ್ಲಿ ಇವೆಲ್ಲವೂ ಸ್ಥಳೀಯರಿಗೆ ಒಂದು ಆದಾಯ ಮೂಲವಾಗಬೇಕು ಎಂಬ ಉದ್ದೇಶದೊಂದಿಗೆ ಹೋರಾಟ ಸಂಸ್ಥೆಯು ಪ್ರವಾಸೋದ್ಯಮ ಇಲಾಖೆಯ ಸಹಯೋಗದೊಂದಿಗೆ ಸಂಸ್ಕೃತಿ ಸಿಂಚನ ಯೋಜನೆಯನ್ನು ಕಳೆದ 4ವರ್ಷಗಳಿಂದ ಜಿಲ್ಲಾದ್ಯಂತ ಅನುಷ್ಠಾನಗೊಳಿಸುತ್ತಿದೆ.
ಈ ಯೋಜನೆಯ ಒಂದು ಭಾಗವಾದ ವಿನಾಶದ ಅಂಚಿನಲ್ಲಿರುವ ಜಾನಪದ ಕಲೆಗಳ ಉಳಿವಿಗಾಗಿ ಹಾಗೂ ಅವುಗಳ ಕುರಿತು ಪ್ರವಾಸಿಗರಿಗೆ ಜಾಗೃತಿ ನೀಡುವ ಕುರಿತಾಗಿ ಸಂಸ್ಥೆಯು ಜಾನಪದ ಕಲೆಗಳ ಪ್ರದರ್ಶನವನ್ನು ಪ್ರವಾಸಿ ತಾಣಗಳಲ್ಲಿ ಪ್ರದರ್ಶಿಸುತ್ತಾ ಬಂದಿದೆ.
ಈ ನಿಟ್ಟಿನಲ್ಲಿ ಜಿಲ್ಲೆಯ ಪ್ರಸಿದ್ಧ ಸುಂದರ ತಾಣಗಳಲ್ಲಿ ಒಂದಾದ ಮುರ್ಡೇಶ್ವರದ ಕಡಲ ಕಿನಾರೆಯಲ್ಲಿ ಜಿಲ್ಲೆಯ ಹೆಮ್ಮೆಯ ಕಲಾಪ್ರಕಾರಗಳಾದ ಗೌಳಿ ನೃತ್ಯ-ಮರಕಾಲು ಕೋಲಾಟ ಹಾಗೂ ಅಪರೂಪದ ಕೊಳಲಾಟದ ಪ್ರದರ್ಶನವನ್ನು ಸ್ಥಳೀಯ ಲಯನ್ಸ್ ಕ್ಲಬ್ ಮುರ್ಡೇಶ್ವರ, ಶ್ರೀ ಮಾತೋಬಾರ ಮುರ್ಡೇಶ್ವರ ದೇವಸ್ಥಾನದ ಆಡಳಿತ ಮಂಡಳಿ, ಗ್ರಾ.ಪಂ. ಮುರ್ಡೇಶ್ವರ ಹಾಗೂ ಶಬರ ಸಂಸ್ಥೆ ಇವುಗಳ ಸಹಯೋಗದೊಂದಿಗೆ ಏರ್ಪಡಿಸಲಾಗಿತ್ತು. ಕಾರ್ಯಕ್ರಮಕ್ಕೆ ಆಗಮಿಸಿದ ಜನರು ಜನಪದಲೋಕದ ವಿರಾಟ್ ದರ್ಶನ ಮಾಡಿದರು.
ಸಿದ್ದಾಪುರದ ಮಾಳಗಿಮನೆಯ ಮರಕಾಲು ಕೋಲಾಟ, ಯಲ್ಲಾಪುರದ ಗೌಳಿವಾಡದ ಗೌಳಿ ತಂಡದವರ ಗೌಳಿ ನೃತ್ಯ ಹಾಗೂ ಶಿರಸಿಯ ಜಡ್ಡಿಗದ್ದೆಯ ಕೊಳಲಾಟವನ್ನು ನೆರೆದ ಪ್ರವಾಸಿಗರು ವೀಕ್ಷಿಸಿ ಸಂಭ್ರಮಿಸಿದರು. ಲಯನ್ಸ್ ಕ್ಲಬ್ ಮುರ್ಡೇಶ್ವರದ ಅಧ್ಯಕ್ಷ ಮಂಜುನಾಥ ದೇವಾಡಿಗ ಹಾಗೂ ಸದಸ್ಯರು, ಗ್ರಾ.ಪಂ.ಮುರ್ಡೇಶ್ವರದ ಸದಸ್ಯರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ನಶಿಸುತ್ತಿರುವ ಕಲೆ ಕೊಳಲಾಟವನ್ನು ಪ್ರದರ್ಶಿಸಿದ ಸರ್ವೇ ಗೌಡ ಹಾಗೂ ತಿಮ್ಮೇಗೌಡರನ್ನು ಲಯನ್ಸ್ ಕ್ಲಬ್‌ನ ಸದಸ್ಯರುಗಳು ಶಾಲು ಹೊದಿಸಿ ಸನ್ಮಾನಿಸಿದರು. ಶಬರ ಸಂಸ್ಥೆಯ ನಾಗರಾಜ ಜೋಶಿ ಕಾರ್ಯಕ್ರಮ ನಿರ್ವಹಿಸಿದರು. ಲಯನ್ಸ್‌ ಕ್ಲಬ್ ಮುರ್ಡೇಶ್ವರದ ಎಮ್.ವಿ.ಹೆಗಡೆಯವರು ಸ್ವಾಗತ ಕೋರಿದರು. ಹೋರಾಟ ಸಂಸ್ಥೆಯ ಮುಖ್ಯಸ್ಥ ಸುಹಾಸ್ ಪ್ರಾಸ್ತಾವಿಕ ಮಾತನಾಡಿದರು.


ಕಾಮೆಂಟ್‌ಗಳಿಲ್ಲ:

ಧಾರವಾಡ ಎಂಬ ಸ್ವಾವಲಂಬನೆಯ ಸಾಂಸ್ಕೃತಿಕ ನಗರ

ಉತ್ತರಕರ್ನಾಟಕದ ಸಾಂಸ್ಕೃತಿಕ ಐಕಾನ್ ಧಾರವಾಡ. ದೇಶದ ಹೆಸರಾಂತ ಸಂಗೀತ ವಿದೂಷಿಗಳು, ಪಂಡಿತರು ಧಾರವಾಡ ನೆಲದಲ್ಲಿ ಸಂಗೀತ ಕಛೇರಿ ಕೊಡಲಿಕ್ಕೆ ಕಾಯುತ್ತಾರೆ ಹೇಗೋ ಹಾಗೆಯೇ ನ...