ನಮ್ಮೊಳಗೊಂದು ಪುಟ್ಟ ಆಫ್ರಿಕಾ-
-ರೇಣುಕಾ ಡಿ. ಸಿದ್ಧಿ.
ಎಲ್ಲಿಯ
ಆಫ್ರಿಕಾ ಎಲ್ಲಿಯ ಭಾರತದ ಈ ಮೂಕ ಸಹ್ಯಾದ್ರಿ ? ಆದರೂ ಆಫ್ರಿಕಾಕ್ಕೂ ನಮಗೂ ಬಹು ಹಿಂದೆಯೇ ಸಂಬಂಧ ಬೆಳೆದಿತ್ತು.
ಇಂದಿಗೂ ಕಗ್ಗತ್ತಲ ಖಂಡವೆಂದೇ ಕರೆಯಲಾಗುವ ಆ ಸೀಮೆಯ ಜನತೆಗು ನಮಗೂ ಸುಮಾರು ಐದುನೂರು ವರ್ಷಗಳ ಹಿಂದೆಯೇ
ಸಂಬಂಧವಿತ್ತು ಎಂಬುದು ಆಶ್ಚರ್ಯದ ಸಂಗತಿ… ಆದರೆ ಆ ಸಂಬಂಧ ಮಾನವೀಯ ತಳಪಾಯದ ಮೇಲೆ ನಿಂತಿರಲಿಲ್ಲ ಬದಲಾಗಿ
ಬರ್ಬರ ಹಾಗೂ ಮಾನವೀಯತೆಯನ್ನು ಮೀರಿದುದಾಗಿತ್ತು. ನಿಗ್ರೋಗಳ ಮುಗ್ಧತೆಯನ್ನೇ ಬಂಡವಾಳ ಮಾಡಿಕೊಂಡ ಬಿಳಿ
ಜನ ಅವರನ್ನು ವಿದೇಶಗಳಿಗೆ ಮಾರಿದರು. ಕಪ್ಪಗೆ ದಷ್ಟಪುಷಟರಾಗಿರುವ ಅವರನ್ನ ದನಗಳಂತೆ ನಡೆಸಿಕೊಂಡಿದ್ದಾರೆ.
ಭಾರತದಲ್ಲಿನ ಪೋರ್ಚುಗೀಸರು, ಡಚ್ಚರು,ಮತ್ತು ಅರಬ್ಬರು ಹಡಗಿನ ಮೂಲಕ ತರಿಸಿಕೊಂಡು ಗುಲಾಮರನ್ನಾಗಿ
ದುಡಿಸಿಕೊಂಡರು. ಕುದುರೆಗಳ ಜೊತೆ ನಿಗ್ರೋಗಲನ್ನು ಹಡಗಿನಲ್ಲಿ ಸಾಗಿಸಲಾಗುತ್ತಿತ್ತು. ಅವರು ಸಾಗರದ
ಹಾದಿ ಸವೆಸಿ ದಂಡೆಗೆ ಬಂದ ದಿನ ಬಿಳಿಯರಿಗೆ ಖುಷಿಯೋ ಖುಷಿ. ಯಾಕೆಂದರೆ ಕುದುರೆಗಳ ಜೊತೆ ಇವರನ್ನ ಮಾರಾಟ
ಮಾಡಲಾಗುತ್ತಿತ್ತು. ಅಲ್ಲಿ ಮನುಷ್ಯರ ಹಾಗಿದ್ದ ಕಪ್ಪು ಜನಕ್ಕಿಂತ ಕುದುರೆಗಳಿಗೆ ಹೆಚ್ಚಿನ ಬೆಲೆ,
ವ್ಯಾಪಾರ ನಡೆಯುತ್ತಿತ್ತು. ಮಾನವ ಇತಿಹಾಸದಲ್ಲಿ ಹೀಗೆಲ್ಲ ನಡೆದು ಹೋಗಿರುವುದು ಅಲ್ಲದೆ ಇಂದಿಗೂ ಅಂಥದೆ
ಮಾದರಿಯಲ್ಲಿ ಜೀತ,ಒಕ್ಕಲು ತೆರನಾಗಿ ನಡೆಯುತ್ತಿರುವುದು ಅಮಾನವೀಯವಾಗಿದೆ.
ಹಿಂದೊಮ್ಮೆ,
ರಾಜರ ಗುಲಾಮರಾಗಿ ಬದುಕು ಸಾಗಿಸುತ್ತಿದ್ದವರು (ಇಥಿಯೋಪಿಯಾದ ಮೂಲ ನಿವಾಸಿಗಳನ್ನು ರಾಜರು ಬಳಸಿಕೊಳ್ಳುತ್ತದ್ದರಂತೆ)
16 ರಿಂದ 19 ನೇ ಶತಮಾನದ ಅವಧಿಯಲ್ಲಿ ಭಾರತ ಸೇರಿಕೊಂಡ ಸಿದ್ಧಿಗಳು ಇಂದು ದೇಶದ ನಾನಾ ಭಾಗಗಳಲ್ಲಿ
50,000 ಜನಸಂಖ್ಯ ಹೊಂದಿದ್ದಾರೆ. ಕರ್ನಾಟಕದಲ್ಲಿ 18,000 ಜನ, ಗುಜರಾತನಲ್ಲಿ 10,000, ಆಂಧ್ರದಲ್ಲಿ
12,000 ಜನರಲ್ಲದೆ ದೇಶದ ಹೆಸರಾಂತ ನಗರಗಳ ಸಂದಿಯಲ್ಲಿ ಸೇರಿಕೊಂಡಿದ್ದಾರೆ. ಮಾರಾಟವಾದ ದಾರುಣ ಸ್ಥಿತಿಯಲ್ಲಿ
ಭಾರತಕ್ಕೆ ಗುಲಾಮರಾಗಿ ರವಾನಿಸಲ್ಪಟ್ಟ ಸಂತತಿಯೇ ಸಿದ್ಧಿ ಜನಾಂಗ. ಕರ್ನಾಟಕದ ಉತ್ತರ ಕನ್ನಡ, ಬೆಳಗಾವಿ,
ಗೋವಾ,ಹಾಗೂ ಅಹ್ಮದನಗರ ಹೀಗೆ ದೇಶದ ಹಲವಾರು ಭಾಗಗಳಲ್ಲಿ ಕಾಣ ಬರುವ ಈ ಜನಾಂಗ ಉಳಿದುಕೊಂಡಿದೆ.
ಉತ್ತರ
ಕನ್ನಡದ ಯಲ್ಲಾಪುರ ತಾಲ್ಲೂಕಿನ ಮಂಚಿಕೇರಿ ಕನ್ನಡ ರಂಗಭೂಮಿಗೆ ದಟ್ಟ ಕಾಡಿಗೆ, ಎತ್ತರದ ಮರಗಳಿಗೆ ಹೆಸರಾದ
ಊರು. ಈ ಊರಿನಲ್ಲಿ ಮೂವತ್ತೈದು ವರ್ಷಗಳ ಹಿಂದೆ ಸಿದ್ಧಿಗಳನ್ನು ಕಲೆಹಾಕಿ “ಕಪ್ಪು ಜನ ಕೆಂಪು ನೆರಳು”
ಎಂಬ ನಾಟಕವನ್ನು ಶ್ರೀ ಚಿದಂಬರರಾವ್ ಜಂಬೆ ಅವರ ನಿರ್ದೇಶನದಲ್ಲಿ
ಮಾಡಲಾಯಿತು ನೋಡಿ ನಂತರದಲ್ಲಿ ಅವರ ಧ್ವನಿಗೆ ಎಲ್ಲಿಲ್ಲದ ತಾಕತ್ತು ಬಂದು ಬಿಟ್ಟಿತು.. ಹಾಗೆ ಆರಂಭವಾದ
ನಾಟಕದ ರುಚಿಯಿಂದಾಗಿ ನಮ್ಮದೆ ಜನಾಂಗದವರು ನಾವು ನಾಲ್ಕು ಜನ ನೀನಾಸಂ ಪದವಿ ಪಡೆಯಲು ಸಹಾಯವಾಯಿತು.
ಬಲಾಢ್ಯ ಮೈಕಟ್ಟಿಗೆ ಮಿಂಚುವ ಕಪ್ಪು ಬಣ್ಣದವರ ಭಾವಲೋಕವೆಂದರೆ….ಹಾಡು, ಕುಣಿತ, ಪ್ರಾಣಿ, ಪಕ್ಷಿ,
ಮರ-ಗಿಡ ಬಳ್ಳಿ ಮಳೆಯ ಮಲೆನಾಡಿನ ದಟ್ಟ ಕಾಡು ಎಂದೇ ಹೇಳಬಹುದು. ಸಿದ್ದಿ ಹೆಣ್ಣುಮಕ್ಕಳ ಪ್ರಮುಖ ಕುಣಿತವೆಂದರೆ
ಪುಗುಡಿ ನೃತ್ಯ. ಸಮಸಂಖ್ಯಯಲ್ಲಿ ಎದುರು-ಬದುರಾಗಿ ನಿಂತು ಕೈಯಲ್ಲಿ ಬರಿದಾದ ಕೊಡ ಹಿಡಿದು ಊದುತ್ತ,
ಹಿಮ್ಮೇಳದ ಹಾಡು ಮತ್ತು ಗುಮಟೆಯ ತಾಳಕ್ಕೆ ತಕ್ಕಂತೆ ಬಾಗಿ ಕುಣಿಯುತ್ತಾರೆ. ಆಡು ಬದಲಾದಾಗ ಹೆಜ್ಜೆಯೂ
ನರ್ತನದ ಗತ್ತು ಗತಿಯೂ ಬದಲಾಗುತ್ತದೆ. ಸಿದ್ದಿ ಜನಾಂಗದ ಮೂಲದ್ದಾಗಿರಬಹುದಾದ ಮತ್ತೊಂದು ಕಲೆ ಅಂದರೆ
“ಡಮಾಮಿ” ಕುಣಿತ. ಇದರ ಕುರಿತಾದ ಒಂದು ಕತೆ ಹೀಗಿದೆ- ಒಂದಾನೊಂದು ಕಾಲದಲ್ಲಿ ಈ ಭೂಮಿ ಮೇಲೆ ಯಾವ ಜೀವಿಗಳೂ
ಹುಟ್ಟದೆ ಇರುವಾಗ ದೇವರು ಮನುಷ್ಯರನ್ನು ಸೃಷ್ಟಿಸಲು ಯೋಜಿಸಿ, ಬೆಳ್ಳನೆಯ ಮಾನವನನ್ನು ನಿರ್ಮಿಸಿ,
ಭೂಮಿ ಮೇಲೆ ಬಿಟ್ಟನಂತೆ, ಆಗ ರಾತ್ರಿ ಆದಾಗ ರಾಕ್ಷಸನು ಬಂದು ಆ ಬೆಳ್ಳಗಿನವನನ್ನು ತಿಂದು ಬಿಟ್ಟಿತಂತೆ..!
ದಿನವೂ ತೀಡುತ್ತಿದ್ದ ಮನುಷ್ಯನನ್ನು ರಾಕ್ಷಸ ತಿನ್ನತೊಡಗಿದಾಗ ದೇವರು ಬೇಸರಿಸಿಕೊಂಡು-ಕಪ್ಪು ಮಣ್ಣು
ತಂದು ಹದ ಮಾಡಿ ಹೆಣ್ಣು ಗಂಡು ಎರಡು ಕರೀ ಗೊಂಬೆ ಮಾಡಿದನಂತೆ. ರಾತ್ರಿಗೆ ಹಾಡಿಕೊಂಡಿರಲು ಹೇಳಿ ಢಮಾಮಿ
ಎಂಬ ವಾದ್ಯ ಮಾಡಿಕೊಟ್ಟು ಹೋದನಂತೆ. ರಾಕ್ಷಸ ದಿನದಂತೆ ಬಂದು ನೋಡುವಾಗ ಗಂಡು ಢಮಾಮಿ ನುಡಿಸುತ್ತಿದ್ದರೆ
ಹೆಂಗಸು ಚಂದ ಮಾಡಿ ಕುಣಿಯುವುದು ಕಾಣಿಸಿತು. ಬಂದ ರಾಕ್ಷಸ ಮೈಮರೆತು ಅವರನ್ನೆ ನೋಡುತ್ತ ಕುಳತಲ್ಲಿಯೇ
ಕುಳಿತು ಬೆಳಗು ಮಾಡಿಬಿಟ್ಟ, ಆಗ ತಿನ್ನಲಾರದೆ ಹಿಂತಿರುಗಿ ಹೋಗಿಬಿಟ್ಟ. ದೇವರ ಅಣತಿಯಂತೆ ಬದುಕುಳಿದ
ಇವರ ಸಂತತಿ ಬೆಳಗಾಗಲು ಧಿಡೀರನೆ ನೂರಾಯ್ತು… ಹೀಗೆ ರಾಕ್ಷಸನ ಬಾಯಿಂದ ಬದುಕಿ ಬರಲು ಡಮಾಮಿಯೇ ಕಾರಣವೆಂಬ
ಕತೆ ಇದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ