ಸೋಮವಾರ, ಮಾರ್ಚ್ 12, 2012

ಕತೆ ಕತೆ ಕಾರಣ


 ಅವಳು           
 ಅವಳು ನೆನಪಿಟ್ಟು ಮಾತಾಡಿಸಿದಾಗಲೂ ಆಕೆಯ ನಡತೆ ಬಗ್ಗೆ ಸಣ್ಣದಾದ ಹೆದರಿಕೆ ನನ್ನೊಳಗೆ ಕಾಡುತ್ತಲಿತ್ತು. ಮಾತಿನ ನಿಖರತೆ ದಂಗುಬಡಿಸುತ್ತಿತ್ತು. ಗಂಡಸಿನ ಬೀಜಕ್ಕೆ ಕೈ ಹಾಕುವ ಹೆಂಗಸರೆಲ್ಲ ಹೀಗೆ ಇರುತ್ತಾರೆ ಎಂದು ಏನೆನೆಲ್ಲ ಹೇಳಿದ್ದ ಮೈಬೂಬ ಇವತ್ತಾದರೂ ಇರಬಾರದಾ.. ? ಅವಳ ಸೊಂಟದ  ಅಳತೆ ತೀರ ಚಿಕ್ಕದು ಎನ್ನಿ. ಒಂದು ಹಿಡಿ. ಅಂಥವಳು ಜೈಲಿನಿಂದ ತಪ್ಪಿಸಿಕೊಂಡು ಬಂದಿದ್ದಾಳೆ. ಗಂಡನ ಕೊಲೆಗೆ ಕುರುಹಾಗಿರುವ ಆಧಾರಗಳನ್ನು ಅಳಿಸಿ ಹಾಕುವ ಅವಸರ ಬಿಟ್ಟರೆ ಮುಖದಲ್ಲಿ ಇನ್ನೇನೂ ಘನಂದಾರಿ ಕೆಲಸ ಬಾಕಿ ಉಳಿದಂತೆ ಅನ್ನಿಸುತ್ತಿಲ್ಲ.
“ ನಾನೊಂದು ದಿನ ನಿನ್ನ ಕೋಣೆಯಲ್ಲಿ ಇರತೇನೆ” ಅಂದಳು.
ಗಾಬರಿ ಆದರೂ ತೋರಿಸಿಕೊಳ್ಳದೆ “ಆಗಲಿ, ಆದರೆ ನಾನು ಮನೆಗೆ ಹೋಗಬೇಕಾಗಿದೆ.. ಅಂದ್ರೆ ಹಳ್ಳಿಗೆ” ಎಂದು ತೊದಲಿದಾಗ ಪುಕ್ಕಲು ಗಂಡಸು ಎಂದುಕೊಂಡಳೋ ಏನೋ, ಆದರೆ ರೊಟ್ಟಿ ತರಿಸಿಕೊಂಡು ತಿಂದು ಮಲಗಿದ ಮೇಲೇಯೆ ನನ್ನನ್ನು ಹೊರ ಹೋಗಲು ಬಿಟ್ಟಳು. ಮಹಿಬೂಬ ಬರುವುದರೊಳಗೆ ನಾಳೆ ಜಾಗ ಖಾಲಿ ಮಾಡುವುದಾಗಿ ಮಾತು ಕೊಟ್ಟಿದ್ದಳು.
          ಈ ಕಳ್ಳಕಾಕರು,ಕೊಲೆಗಡುಕರು,ಸುಳ್ಳುಗಾರರ ಸಾಹಸದ ಕತೆ ಕೇಳಲಿಕ್ಕಷ್ಟೆ ಮುದ,ಅದರಾಚೆ ನೋವಿನ ಮಡುವು ತುಂಬಿರುತ್ತದೆ. ಒಂಟಿತನದ ಬೂತ ಮೆಟ್ಟಿರುವ ಹಾಗೆ ಕ್ರೌರ್ಯ ಉಸಿರಾಡುತ್ತಿರುತ್ತಾರೆ. ಬಾಗಿಲು ದಾಟಿರಲಿಲ್ಲ-ನಾನು ರಂಡಿ ಆದಂತೆ ಅವನ ಹೆಂಡತಿ ಮುಂಡೆ ಆಗುವಳು-ಎಂದು ಗಹಗಹಿಸಿ ನಗುವುದು ಕೇಳಿಸಿತು.
 ನಾನು ಊರಲ್ಲಿದ್ದಾಗ ಮಾರನೆ ದಿನದ ಪೇಪರಿನಲ್ಲಿ ಮಹಿಬೂಬ ಕೊಲೆಯಾದ ಸುದ್ದಿ ದೊಡ್ಡದಾಗಿ ಪ್ರಿಂಟಾಗಿತ್ತು.

 ನಾ ಕೊಟ್ಟೆ ನೀ ತಗೋ…
ಸವದತ್ತಿಯ  ಬಸ್ಟ್ಯಾಂಡಿನ ಮೂಲೆಯೊಂದರಲ್ಲಿ ರಾತ್ರಿ ಕಳೆಯಲು ಒದ್ದಾಡುತ್ತಿದ್ದ ಇಬ್ಬರು ಮೌನದಲ್ಲೇ ಮಾತಾಡಿಕೊಂಡರು. ಮುದುಕ ಹಾಡು ಹೇಳಿದ ಮುದುಕಿ ತಾಳ ಒತ್ತಿದಳು, ಒಬ್ಬರ ಪರಿಚಯ ಒಬ್ಬರಿಗಾಯ್ತು. ಅವನ ಹೊಲಮನೆ ಆಲಮಟ್ಟಿಯ ಅಣೆಕಟ್ಟಿನ ಹಿನ್ನೀರಿನಲ್ಲಿ ಮುಳಗಿದ್ದವು, ಇವಳ ಬದುಕು ಮುಂಬೈನ ಕೆಂಪು ದೀಪದ ಕೆಳಗೆ ಹಾಸಿಕೊಂಡಿತ್ತು. ಒಬ್ಬರ ಮೇಲೊಬ್ಬರಿಗೆ ವಿಶ್ವಾಸ ಮೂಡಲು, ಮರುದಿನ ಗುಡ್ಡಕ್ಕೆ ಹೋಗಿ ಮದುವೆ ಆದರು.

ಮುಪ್ಪು
ಹಾಸಿಗೆಯಿಂದ ಎದ್ದ  ಮುಪ್ಪು- ಕೈ ಹೊಸಕಿ ಕಣ್ಣುಜ್ಜಿ ಕರಾಗ್ರೆ ಪಠಿಸಿ ಲೋಕ ಕಾಣಲು, ಬೆಳಕಿನ ಮಾಂತ್ರಿಕತೆ ಅರಿಯದಂತಾಗಿತ್ತು. ತಾನು ಹೆಣ್ಣೋ ಗಂಡೋ ಅನ್ನೋದು ಮರೆತು ಗಾಳಿಯಲ್ಲಿ ತೇಲಾಡುತ್ತಾ ಗಗನದಾಚೆ ಹೋಗುತ್ತಿರುವ ಹಾಗೆ… ಎಚ್ಚರ ಆದಾಗ ಸಮುದ್ರದ ದಂಡೆಯಲ್ಲಿ ಬಿದ್ದುಕೊಂಡಿತ್ತು ಮುಪ್ಪು.
ಸಾವು
ತಲೆಬೋಳಿಸಿಕೊಂಡ ಭಕ್ತನ ಮುಖ ಕಪ್ಪಿಟ್ಟಿತ್ತು. ಹೃದಯ ಭಾರವಾದ ಕಾರಣ ಬೆಳಕಿನ ಸಂಗಡ ಸಾವೂ ಕಾದು ಕುಳಿತಿತ್ತೇನೋ… ಹೋಗುವ ಹಾದಿಗೆ ಎದುರಾಗಿ ಅಂಕೆ ತಪ್ಪಿದ್ದ ಭಾರಿ ಗಾತ್ರದ ವಾಹನ ಬರುತ್ತಿತ್ತು. ಭಕ್ತನು ಸಾಯುತ್ತಿದ್ದೇನೆಂಬುದರ ಅರಿವಿಲ್ಲದೆ ಗೊಟಕ್ ಅಂದ. ಪುಣ್ಯದ ಸಾವು ಆಗಬೇಕಿದ್ದದ್ದು ದರ್ಮರಣವಾಗಿತ್ತು. ಈಗ ಊರಲ್ಲಿ ಅದೇ ಮಾತುಗಳು ‘ಪಾಪಿ ಸೂ..ಮಗ ಉರಿತಿದ್ದ ನೋಡು ಅದಕ್ಕೆ ದೇವರು ಲಗೂಣ ಕರೆಸಿಕೊಂಡ.’
                        - ಮಹಾದೇವ ಹಡಪದ

ಕಾಮೆಂಟ್‌ಗಳಿಲ್ಲ:

ಧಾರವಾಡ ಎಂಬ ಸ್ವಾವಲಂಬನೆಯ ಸಾಂಸ್ಕೃತಿಕ ನಗರ

ಉತ್ತರಕರ್ನಾಟಕದ ಸಾಂಸ್ಕೃತಿಕ ಐಕಾನ್ ಧಾರವಾಡ. ದೇಶದ ಹೆಸರಾಂತ ಸಂಗೀತ ವಿದೂಷಿಗಳು, ಪಂಡಿತರು ಧಾರವಾಡ ನೆಲದಲ್ಲಿ ಸಂಗೀತ ಕಛೇರಿ ಕೊಡಲಿಕ್ಕೆ ಕಾಯುತ್ತಾರೆ ಹೇಗೋ ಹಾಗೆಯೇ ನ...