ಕರ್ನಾಟಕದಲ್ಲಿ
ಬೀದಿ ರಂಗಭೂಮಿಗೆ ಸುದೀರ್ಘ ಮೂವತ್ತು ವರ್ಷಗಳ ಇತಿಹಾಸವಿದೆ. ಚಳುವಳಿ ಮಾದರಿಯಲ್ಲಿ ಆರಂಭಗೊಂಡ
ಬೀದಿ ನಾಟಕ ಬಹುದೊಡ್ಡ ಸಾಂಸ್ಕೃತಿಕ ಸಂಚಲನವನ್ನೇ ಸೃಷ್ಟಿಸಿ ತನ್ನದೇ ಆದ ಅಸ್ತಿತ್ವವನ್ನು ದಲಿತ ಬಂಡಾಯ ಹೋರಾಟದಲ್ಲಿ ಉಳಿಸಿಕೊಂಡಿರುತ್ತದೆ. ಬೀದಿಯ ಮೇಲೆ ನಿಂತು
ಸಾವಿರಾರು ಜನರನ್ನು ಸೇರಿಸುವ ಮತ್ತು ಸೇರಿದ್ದ ಜನಮಾನಸಕ್ಕೆ ನೈತಿಕ ಪ್ರಜ್ಞೆ, ಸಾಮಾಜಿಕ ಶಿಕ್ಷಣ
ನಿಡಬಲ್ಲ ಶಕ್ತಿಯಾಗಿದ್ದ ಒಂದು ಮಾದ್ಯಮ ಈ ಸೂರಿಲ್ಲದ ರಂಗಭೂಮಿಯಾಗಿತ್ತು. ತಮ್ಮಟೆ, ಕಂಜರಾ,ಢೋಲಕಿ
ನುಡಿಸುತ್ತ ರಸ್ತೆಗೆ ಇಳಿದರೆ ಸಾಕು ನಿಂತು ನೋಡಲು ಪುರಸೊತ್ತಿಲ್ಲದವರು ಕೊಂಚ ತಡೆದು ಆಟದ ವೃತ್ತದ
ಕಡೆ ಕಣ್ಣ ಹಾಯಿಸಿ ಹೋಗುವ ಹಾಗೇ ಪ್ರೇಕ್ಷಕರನ್ನು ತನ್ನತ್ತ ಸೆಳೆದುಕೊಳ್ಳುತ್ತಿತ್ತು. "ನಾವು
ಬೆವರನು ಸುರಿಸಿ ದುಡಿಯುವ ಜನ" ಅಂತ ಹಾಡುತ್ತಿದ್ದರೆ ಮೈ ಜುಮ್ಮೆನ್ನುತ್ತಿತ್ತು. 'ಸಮುದಾಯ'(ಇದು ಸಾಮಾಜಿಕ, ಸಾಂಸ್ಕೃತಿಕ ಸಂಘಟನೆ ಮತ್ತು
ಕರ್ನಾಟಕದಲ್ಲಿ ದಲಿತ ಬಂಡಾಯ ಚಳುವಳಿಯ ಮೂಲಪ್ರೇರಣೆ) ಸಂಘಟಣೆ ಕನ್ನಡ ನೆಲದಲ್ಲಿ ಅಂಥ ಒಂದು ಕಸುವುಳ್ಳ
ಸಾಂಸ್ಕೃತಿ ಪ್ರಜ್ಞೆಯನ್ನು ಬೆಳೆಸಿತು. ದಲಿತ-ಬಂಡಾಯ
ಚಳುವಳಿಯ ಬಳುವಳಿಯಾಗಿ, ರಾಜಕೀಯ ಪ್ರಜ್ಞೆಯೊಂದಿಗೆ ಕನ್ನಡದ ಮಾನಸ ಲೋಕವನ್ನು ತಟ್ಟಿದ್ದ ಬೀದಿ ನಾಟಕದ
ಧ್ವನಿ ಇಂದಿಗೆ ಬರಿ ಪ್ರಚಾರದ ಉದ್ಧೇಶಕ್ಕಾಗಿ ಮಾತ್ರ ಬಳಕೆಯಗುತ್ತಿರುವುದು ದುರ್ದೈವ.
ಪೀಠಿಕೆ…
ಇಂದು ಆ ಅದೇ
ರೀತಿಯಲ್ಲಿ ಅದೇ ಶಕ್ತಿಯಲ್ಲಿ ಬೀದಿ ನಾಟಕ ಹೊಸತನವನ್ನು ಕಂಡುಕೊಳ್ಳಬೇಕಾದ್ದು ಅತ್ಯಗತ್ಯ ಆಗಬೇಕಾದ
ಕೆಲಸ. ಅದರ ಸಾಧ್ಯತೆಗಳು ಸುಲಭವೆಂದು ಭಾವಿಸುವವರ ಒಳಗೆ ”ಯಾವ ಉದ್ಧೇಶಕ್ಕಾಗಿ ಬೀದಿ ನಾಟಕ ಹಾಗೇ,ಅದೇ
ಮಾದರಿಯಲ್ಲಿ ಮಾಡಬೇಕು” ಎನ್ನುವ ಮಾತು ಹೊಸ ಹುಡುಗರಲ್ಲಿ
ಕೇಳಿಬರುತ್ತದೆ.. ಅವರಿಗೆಲ್ಲ ಸರಕಾರೀ ಕಾರ್ಯಕ್ರಮಗಳ ರುಚಿ ಹತ್ತಿಬಿಟ್ಟಿದೆ, ಕಂಪನಿಗಳ ಪ್ರಚಾರ ಕಾರ್ಯದ
ಲಾಭ ತಿಳಿದು ಬಿಟ್ಟಿದೆ ಹಾಗಾಗಿ ಬೀದಿ ನಾಟಕದ ಮಹತ್ವ
ಮತ್ತು ನೋಡುಗರ ಅಭಿರುಚಿಯನ್ನು ಜಾಹಿರಾತಿನಂತೆ ಬದಲಾಯಿಸಿಕೊಂಡಿದ್ದಾರೆ. ಅವರ ಮಾತು ಹಾಗಿರಲಿ. ದೂರದ
ಬ್ರೆಜಿಲ್ ದೇಶದ 'ಅಗಸ್ತೋ ಬೋಲ್' ಎಂಬ ನಿರ್ದೇಶಕರು ಅದೃಶ್ಯ ರಂಗಭೂಮಿ ಬಗ್ಗೆ ಹೇಳುತ್ತಾರೆ- ಅಲ್ಲಿ
ನಾಟಕ ನಡೆಯುವುದೆ ನೋಡುಗ ನಟರೊಟ್ಟಿಗೆ.. ನಟ ಆರಂಭಿಸಿದ ವಾಗ್ವಾದ ಸಾರ್ವಜನಿಕರನ್ನು ಕೆರಳಿಸಿ ರಾಜಕೀಯ,
ಸಾಮಾಜಿಕ ಸ್ತಿತ್ಯಂತರದ ಕಡೆಗೆ ಇಡೀ ಚರ್ಚೆ ತಿರುಗುತ್ತಲೂ ನಟರು ಮಾಯವಾಗಿ ಬಿಡುತ್ತಾರೆ. ಆದರೆ ರಾಜಕೀಯ
ಪ್ರೇರಿತ ಬಹುಮುಖ್ಯವಾದ ಸಭೆ ಅದಾಗಿಬಿಟ್ಟಿರುತ್ತದೆ. ಅಂಥ ಮಾದರಿಗಳು ನಮ್ಮ ದೇಶದ ಜನಪದ ರಂಗಭೂಮಿಯಲ್ಲೂ
ಸಿಗುತ್ತವೆ. ಕೆಲವು ಪ್ರದರ್ಶಕ ಕಲೆಗಳ ಪ್ರಸ್ತುತಿಯಲ್ಲಿ ಒಂದು ಪಾತ್ರ ಸತತವಾಗಿ ಪ್ರೇಕ್ಷಕರೊಂದಿಗೆ
ಬದುಕುತ್ತದೆ. ಅದು ನಿರ್ವಹಿಸುವುದು ವರ್ತಮಾನದ ಆಗುಹೋಗುಗಳ ಜೊತೆಗೆ ರಂಗಕ್ಕೆ ಬರುವ ಪಾತ್ರಗಳನ್ನು
ಪರಿಚಯಿಸುವುದಾಗಿರುತ್ತದೆ. ಹನುಮನ್ನಾಯಕ, ದೂತೆ, ಲಾಲ್ಯಾ, ವಿದೂಷಕ ಎಂದೆಲ್ಲ ಕರೆಯುವ ಆ ಪಾತ್ರಗಳು
ಸಮಕಾಲೀನವಾದ ವಿಷಯಗಳೊಂದಿಗೆ ಬದುಕುತ್ತಿರುತ್ತವೆ. ಅಂಥದ್ದೇ ಒಂದು ಪಾತ್ರದ ಜೀವಂತಿಕೆಯಾಗಿದ್ದ ಕೇರಳದ
ಜನಪದ ಪ್ರಕಾರವೊಂದರ ಪಾತ್ರ ಬೀದಿಗೆ ಬಂದು ಒಟ್ಟಂತುಳಲ್ ಸೃಷ್ಟಿಸಿಕೊಂಡಿತು. ಆದರೆ ಕನ್ನಡದ ಬೀದಿ
ನಾಟಕ ಎಂಬ ಪ್ರಕಾರದಲ್ಲಿನ ರೋಷಾವೇಷಗಳ ಒಳಗಿನ ಸಾಂಸ್ಕೃತಿಕ ನಿಲುವು ಕೂಡಾ ಮಾರಿ ಹಬ್ಬ, ಕುಂಡಿ ಹಬ್ಬ,
ಹೋಲಿ ಹಬ್ಬ ಮತ್ತು ಜನಪದ ಆಟಗಳೊಳಗಿನ ಪ್ರತಿಸಂಸ್ಕೃತಿಯ ಧ್ವನಿಯಾಗಿ ಬೀದಿ ನಾಟಕಕ್ಕೆ ಕಾಲಿಟ್ಟಿತು.
ಹಾಗಾಗಿ ಈಗ ನಾವು ಬೀದಿ ನಾಟಕದ ಶಕ್ತಿಯನ್ನು ಪ್ರಜ್ಞೆಯ ವಿಸ್ತಾರಕ್ಕೆ ಬಳಸಿಕೊಳ್ಳಬೇಕಾದ್ದು ಮತ್ತು
ಅರಿವಿನ ಕುರುಹಾಗಿ ಉಳಿಸಬೇಕಾಗಿದೆ.
ಪ್ರೇಕ್ಷಕರು ಮತ್ತು ಬೀದಿನಾಟಕ-
ಬೀದಿ ನಾಟಕದ ವಿಚಿತ್ರ ಹಂಬಲಗಳು ಈ ಪ್ರೊಸಿನಿಯಂ ರಂಗದಲ್ಲಿ
ಸಿಕ್ಕೋದಿಲ್ಲ. ಇಲ್ಲಿಯ ರಸಾನುಭೂತಿ, ಸೌಂದರ್ಯ, ಕಾವ್ಯ, ನಾಟಕೀಯತೆ, ಸಂಗೀತಗಳು ಬೀದಿ ನಾಟಕಕ್ಕೆ
ಒಗ್ಗಿಕೊಳ್ಳುವುದಿಲ್ಲ. ಆದರೆ ರಸ್ತೆ ಮೇಲೆ ಓಡಾಡುವ ಜನಗಳನ್ನು ಹಿಡದು ನಿಲ್ಲಿಸುವ ತಾಕತ್ತು ಈ ರಂಗಕ್ಕೆ
ಬೇಕಾಗಿಲ್ಲ ನೋಡಿ, ಹಾಗಾಗಿ ಇದರ ವ್ಯವಹಾರವೇ ಬೇರೆ ಅನ್ನಿಸುತ್ತದೆ. ಇಲ್ಲಿ ಮೊದಲೆ ನಾಟಕ ನೋಡಲು ತಯಾರಾಗಿ
ಬಂದಿರುತ್ತಾರೆ ಆದ್ದರಿಂದ ಪ್ರದರ್ಶನಕ್ಕೆ ನಟರೂ ಬಿಗುಪಾಗಿ (ತಕ್ಕಮಟ್ಟಿಗೆ ಏನು ಪ್ರೇಕ್ಷಕರ ಮೇಲೆ
ಒತ್ತಡದ ಭಾವಗಳನ್ನ ಎಸೆಯುವಷ್ಟು) ತಾಲೀಮು ಮಾಡಿಯೇ ತಯಾರಾಗಿರುತ್ತಾರೆ. ಆದರೆ ಬೀದಿ ನಾಟಕಕ್ಕೆ ಬರುವ ನೋಡುಗರು ಆಸಕ್ತರಲ್ಲ,ದಾರಿಹೋಕರು.
ಅಂಥವರೊಳಗೆ ಒಂದು ವಿಷಯದ ಆಗು ಹೋಗುಗಳ ಬಗ್ಗೆ ತಿಳಿಸುವಿಕೆಯ ಪ್ರಯತ್ನ ಬೀದಿರಂಗ ಮಾಡುತ್ತದೆ. ಮನಮುಟ್ಟುತ್ತದೆ
ಮುಟ್ಟಿದ್ದು ಮುಂದೆಲ್ಲೋ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಹ್ಯಾಗಂದ್ರೆ ನಾವು ದೂರದರ್ಶನದ ಬ್ರೇಕ್
ಸಮಯದಲ್ಲಿ ನೋಡಿದ ವಸ್ತು ಒಂದು ಮಾರ್ಕೆಟಲ್ಲಿ ಕಂಡಾಗ ಕೊಳ್ಳಬೇಕು ಅನ್ನಿಸುತ್ತದಲ್ಲ, ಹಾಗೇನೆ ಈ ನಾಟಕಗಳ
ಪರಿಣಾಮ ಅವರವರ ಭಾವ-ಭಕುತಿಗೆ ಆಗಾಗ ಅಲ್ಲಲ್ಲಿ ದಕ್ಕಿರುತ್ತದೆ.
ಪ್ರಯೋಗಾತ್ಮಕ ಅಧ್ಯಯನ…
·
ಬೀದಿ
ನಾಟಕದ ಸಾಧ್ಯತೆಗಳು ಎಲ್ಲಿ ಕೊನೆಗೊಂಡವು ಅನ್ನುವುದು ನುಂಗಲಾರದ ತುತ್ತಾಗಿಬಿಟ್ಟಿದೆ. ಒಂದು ಕಾಲದಲ್ಲಿ
ಅಸಮಾನತೆ, ಅರಾಜಕತೆ, ಸಮಾಜಿಕ, ಆರ್ಥಿಕ, ರಾಜಕೀಯ ಸ್ತಿತ್ಯಂತರಗಳನ್ನು ಗುರುತಿಸಿ ಜನರಲ್ಲಿ ಅರಿವು
ಮೂಡಿಸುವ ಸದುದ್ಧೇಶ ಹೊಂದಿದ್ದು ಈಗ ಈ ಜಾಗತಿಕ ಸಂದರ್ಭದಲ್ಲಿ ಆಯ್ಕೆಯ ಮತ್ತು ಮುಂದಾಲೋಚನೆಯ ಮಾರ್ಗದ
ಹಳಿ ತಪ್ಪಿರುವುದರಿಂದ ಬೀದಿನಾಟಕ ಒಂದು ಪ್ರಚಾರ ಮಾಧ್ಯಮವಾಗಿಬಿಟ್ಟಿದೆ. ಅದು ಅಪ್ಪಟ ಹಳ್ಳಿ ಮಂದಿಯ
ಜೀವಾಳವಾಗಬೇಕು. ಅಲ್ಲದೆ ರೈತ ವರ್ಗಕ್ಕೆ ಮನರಂಜನೆಯ ಜೊತೆಗೆ ಆತ್ಮಸ್ಥೈರ್ಯ ತುಂಬುವ ಕಾರ್ಯವನ್ನು
ಮಾಡುವಂತೆ ಸಣ್ಣಕತೆಗಳ, ಕಥನ ಕವನಗಳ ಒಳಗಿನ ಸಮೃದ್ಧಿಯನ್ನು ಜನಮಾನಸಕ್ಕೆ ನೀಡುವ ವೇದಿಕೆ ಆಗುವಂತೆ
ಮಾಡುವುದು.
·
ಲೋಕಧರ್ಮಿಯ
ಲಯದಲ್ಲಿ ನಾಟಕಗಳು ಜೀವಂತಗೊಳ್ಳಬೇಕು. ಯಾಕೆಂದರೆ- ನಾಟ್ಯ, ಸೌಂದರ್ಯ, ಪ್ರಜ್ಞೆ, ಬುದ್ಧಿ, ತತ್ವ,
ಮನಃಶಾಸ್ತ್ರ, ದೇಹ, ಧ್ವನಿ, ಮನಸ್ಸು ಹೀಗೆ ನಾಟಕದ ಬೇರಿನ ಆಳದೊಳಗೆಲ್ಲ ನಟ ನಿರ್ದೇಶಕರು ಮಾತಡುತ್ತ
ಸಂವಹನ ಸಾಧಿಸುತ್ತ ಹೊರಟಿರುವಾಗ ನಾಟಕದ ಪ್ರಮುಖ ಲಕ್ಷಣವಾದ ಅರ್ಥವತ್ತಾಗಿ-ರಸವತ್ತಾಗಿ-ಮನಮುಟ್ಟುವಂತೆ
ರಸಾನೂಭೂತಿ ಆಗುವ ಹಾಗೆ ಪ್ರೇಕ್ಷಕರಿಗೆ ದಾಟಿಸಬಲ್ಲ ಸರಳತೆಯನ್ನು ಕೈಬಿಟ್ಟದ್ದೇವೆ ಅನಿಸುತ್ತಿದೆ.
ಹಾಗಾಗಿ ಬೀದಿ ನಾಟಕದ ಅಭಿನಯ ಪದ್ಧತಿಯಲ್ಲಿ ಕುಸುರಿ ಕೆಲಸ ಆಗುವಂತೆ ಮಾಡುವುದು.
·
1980
ರಿಂದ ಕನ್ನಡದಲ್ಲಿ ಬೀದಿ ನಾಟಕಗಳು ಆಗುತ್ತ ಬಂದಿದ್ದು
ಆ ಎಲ್ಲ ಪ್ರದರ್ಶನಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಕ್ರೂಢಿಕರಿ ಸುವುದು.
·
ಪ್ರತಿಕೃತಿ
ಮತ್ತು ಪ್ರತಿಮಾ ವಿಧಾನದಲ್ಲಿ ಬೀದಿನಾಟಕದ ಅಭಿನಯ, ರಂಗಕೃತಿ, ರಂಗಸಾಧ್ಯತೆಯನ್ನು, ಪ್ರೇಕ್ಷಕರ ಎದುರು ವಿಸ್ತರಿಸಿಕೊಳ್ಳುವುದು. ಮುಖ್ಯವಾಗಿ ನಟರ ಅಂತಃಸ್ಪೂರ್ತಿಯನ್ನು,
ನಟರ ವಿಷಯ ಜ್ಞಾನದ ಅರಿವಿನ ಜೊತೆಗೆ ದಿನಪತ್ರಿಕೆಯ ಹಾಗೆ ವರ್ತಮಾನದೊಟ್ಟಿಗೆ ನಟನೆಯನ್ನು ಸಾಧಿಸುವುದು.
·
ತರಬೇತಾದ
ನಟರ ಒಂದು ತಂಡ ಕಟ್ಟಿಕೊಂಡು ಹಳ್ಳಿ ಪ್ರೇಕ್ಷಕರೊಂದಿಗೆ ಸಂವಹನ ಸಾಧಿಸುವುದರ ಜೊತೆಗೆ ಈ ಜಾಗತಿಕ ಹಳ್ಳಿಗಳ
ಜನರ ಆಶೋತ್ತರದ ಆಲೋಚನಾಕ್ರಮದಲ್ಲಿ ಹಾಸುಹೊಕ್ಕಿರುವ ಕೊಳ್ಳುಬಾಕತನದ ವ್ಯಾಪಾರಬುದ್ದಿಯನ್ನು ವಿಮರ್ಶಿಸಲು
ಹಚ್ಚುವುದು.
·
ಶಾಂತಿ,
ಸಾಮರಸ್ಯ, ಮಾನವೀಯ ಮೌಲ್ಯಗಳನ್ನು ಹಂಚಿಕೊಳ್ಳುವುದು ಮತ್ತು ಪ್ರೇಕ್ಷಕರನ್ನು ಒಳಗೊಂಡು ಆ ಊರಿನ ಕತೆಯನ್ನೆ
ನಾಟಕ ಮಾಡಿ ಬೀದಿಯಲ್ಲಿ ಪ್ರದರ್ಶಿಸುವುದು.(ಪ್ರೇಕ್ಷಕರೂ ನಟರಾಗಲು ಪ್ರೇರೇಪಿಸುವುದು)
ಹೀಗೆ
ಬೀದಿ ನಾಟಕದ ಅಂಶಗಳನ್ನು ಸಾಮಾಜೀಕರಣಗೊಳಿಸಿ ಇವತ್ತಿನ ತುರ್ತಿಗೆ ಅನುಗುಣವಾಗಿ ನಾಟಕದ ಸ್ವರೂಪವನ್ನು
ಬದಲಾಯಿಸಿಕೊಂಡು ಅಧ್ಯಯನ ಮತ್ತು ಕ್ಷೇತ್ರಧ್ಯಯನಗಳನ್ನು ಒಟ್ಟೊಟ್ಟಿಗೆ ನಿರ್ವಹಿಸುವುದು.
- ಮಹಾದೇವ ಹಡಪದ.