ಶುಕ್ರವಾರ, ಸೆಪ್ಟೆಂಬರ್ 6, 2013

ಶಶಿಕಾಂತ ಯಡಹಳ್ಳಿ ವಿಮರ್ಶೆ: ಬಲಿದಾನಕುಂಟೆ ಕೊನೆ?

September 6, 2013
by G
ಕುವೆಂಪುರವರ ‘ಬಲಿದಾನ’ದಲ್ಲಿ ಸಾರ್ವಕಾಲಿಕ ದರ್ಶನ
ಶಶಿಕಾಂತ ಯಡಹಳ್ಳಿ
ಬಲಿಪರಂಪರೆವೇಳ್ಕುಮೀ ಸ್ವಾತಂತ್ರ್ಯ ಸಾಧನೆಗೆ,
ಪಡೆಯೆ ಬಲಿದಾನಂ; ಪಡೆದುದ ಪಿಡಿಯೇ ಬಲಿದಾನಂ;
ಪಿಡಿದುದಂ ನಡೆಯೆ ಬಲಿದಾನಂ! ಬಲಿದಾನಕುಂಟೆ ಕೊನೆ ?
ಬಲಿಪರಂಪರೆಯಲ್ತೆ ಸ್ವಾತಂತ್ರ್ಯ ಜೀವನಂ !
ಮೇಲಿನ ಈ ಸಾಲುಗಳು ಇಡೀ ‘ಬಲಿದಾನ’ ನಾಟಕದ ಅಂತಃಸತ್ವವಾಗಿದೆ. ಸ್ವಾತಂತ್ರ್ಯದ ಅಗತ್ಯತೆ ಮತ್ತು ಬಲಿದಾನದ ಅನಿವಾರ್ಯತೆಗಳನ್ನು ಕುವೆಂಪುರವರು ಈ ‘ಬಲಿದಾನ’ ನಾಟಕದಲ್ಲಿ ನಿರೂಪಿಸಿದ್ದಾರೆ. ಭಾರತದ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಹಾಗೂ ಸಮಕಾಲೀನತೆ ಕಳೆದುಕೊಂಡ ಹಳೆಯ ವಸ್ತು-ವಿಷಯವನ್ನು ಹೊಂದಿರುವ ನಾಟಕವಿದೆೆಂದು ಜಾಗತೀಕರಣ ಕಾಲದ ನೋಡುಗರಿಗೆ ಮೇಲ್ನೋಟಕ್ಕೆ ಅನ್ನಿಸಬಹುದಾದರೂ ಅದರ ಆಳಕ್ಕಿಳಿದು ಆಲೋಚಿಸಿದರೆ ಇದು ಕೇವಲ ನಾಟಕವಲ್ಲ ಅಪೂರ್ವವಾದ ‘ದಾರ್ಶನಿಕ ರೂಪಕ’ ಎಂಬುದು ಅರಿವಾಗುತ್ತದೆ. ಕುವೆಂಪುರವರ ಪ್ರತಿಮಾತ್ಮಕ ದರ್ಶನ ಪ್ರಜ್ಞೆಯ ವಿರಾಟ ರೂಪ ಈ ರೂಪಕದಲ್ಲಿ ಹಾಸುಹೊಕ್ಕಾಗಿದೆ.
ಭಾಷೆ ಮತ್ತು ನಿರೂಪಣೆಯಲ್ಲಿ ಕ್ಲಿಷ್ಟಕರವೆನಿಸುವ ‘ಬಲಿದಾನ’ ನಾಟಕವನ್ನು ಚಂದ್ರಶೇಖರ್ ಪ್ರತಿಷ್ಠಾನವು ನಿಮರ್ಿಸಿದ್ದು ಮಹಾಂತೇಶ ದೇಗಾಂವಿ ನಿದರ್ೆಶಿಸಿದ್ದಾರೆ. 2013, ಆಗಸ್ಟ್ 30 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಚಂದ್ರಶೇಖರ್ ಪ್ರತಿಷ್ಠಾನವು ಆಯೋಜಿಸಿದ್ದ ‘ಕುವೆಂಪು ಸಂಸ್ಕೃತಿ ಚೇತನ’ ಕಾರ್ಯಕ್ರಮದಲ್ಲಿ ‘ಬಲಿದಾನ’ ನಾಟಕವು ಪ್ರದರ್ಶನಗೊಂಡಿತು.
ಬಲಿದಾನ ನಾಟಕದಲ್ಲಿ ಪ್ರಮುಖವಾಗಿ ಇರುವುದು ಎರಡೇ ಪಾತ್ರಗಳು. ಒಂದು ಭಾರತಮಾತೆ ಇನ್ನೊಂದು ಭರತಸುತ. ಅದಕ್ಕೆ ಪೂರಕವಾಗಿ ಎರಡು ಆತ್ಮ ಪಾತ್ರಗಳು ಹಾಗೂ ಒಂದು ಛಾಯಾದ್ವನಿ ಪಾತ್ರಗಳು ಸೃಷ್ಟಿಗೊಂಡಿವೆ. ಶಿಥಿಲಗೊಂಡ ಕಾಳಿಕಾಮಂದಿರದಲ್ಲಿ ಬಂಧಿಸಲ್ಪಟ್ಟ ಭಾರತಮಾತೆಯ ದುಸ್ಥಿತಿಗೆ ಆಕ್ರೋಶಗೊಂಡ ಭಾರತಸುತ ಆಕೆಯ ದಾಸ್ಯಸಂಕೋಲೆಯ ಕೀಲಿಕೈಯನ್ನು ತರಲು ಹೊರಡುತ್ತಾನೆ. ದೇಶಭಕ್ತರ ಬಲಿದಾನದಿಂದಾಗಿ ಪರಕೀಯರ ಜೊತೆ ಹೋರಾಡಿ ಸ್ವಾತಂತ್ರ್ಯ ಪಡೆದು ಬಂದು ಭಾರತಾಂಬೆಯ ಸಂಕೋಲೆಗಳನ್ನು ಕಳಚುತ್ತಾನೆ. ಮತ್ತೆ ಮತೀಯ ಗಲಭೆಗಳಿಂದಾಗಿ ಅಸಂಖ್ಯಾತ ಜನರ ಬಲಿಯಾಗಿದ್ದರಿಂದ ಭಾರತಮಾತೆ ತಳಮಳಿಸುತ್ತಾಳೆ. ಗಾಂಧೀಜಿಯ ಪ್ರಯತ್ನಕ್ಕೆ ಮೆಚ್ಚುವ ಭಾರತಮಾತೆ ಗಾಂಧಿ ಬಲಿದಾನದಿಂದ ತಲ್ಲಣಗೊಳ್ಳುತ್ತಾಳೆ. ಮತೀಯ ಸೌಹಾರ್ದತೆ ಇಲ್ಲದಿದ್ದರೆ ಸ್ವಾತಂತ್ರ್ಯ ಅರ್ಥಹೀನ ಎನ್ನುತ್ತಾಳೆ. ಭವಿಷ್ಯದ ಭಾರತವನ್ನು ಕಂಡು ಭಾರತಾಂಬೆ ದುಃಖಿತಳಾಗುತ್ತಾಳೆ. ಭಾರತೀಸುತನಿಗೆ ಮುಂದಾಗುವುದನ್ನೂ ಪ್ರತಿಮಾವಿಧಾನದಿಂದ ತೋರಿಸುತ್ತಾಳೆ. ನೀಂ ಕಂಡ ದರ್ಶನದೊಳ್ ಅಖಿಳಾರ್ಥ ಮಂ ತಿಳಿದು ಕಾಣ್! ಸ್ವಾತಂತ್ರ್ಯ ಜೀವನಂ ಬಲಿಪರಂಪರೆಯೆಂಬುದಂ, ಬಲಿದಾನ ತತ್ತ್ವಮಂ, ಭಾವಿಸಿ ಮನಗಾಣ್! ಎಂಬ ಭಾರತಮಾತೆಯ ಸಾರ್ವಕಾಲಿಕ ಪ್ರಜ್ಞೆಯ ಮಾತುಗಳಿಂದ ನಾಟಕ ಕೊನೆಯಾಗುವ ಜೊತೆಗೆ ‘ಸ್ವಾತಂತ್ರ್ಯ ಬೇಕು ಅಂದರೆ ಬಲಿದಾನಕ್ಕೆ ಸಿದ್ದರಾಗಲೇಬೇಕು’ ಎಂಬ ಸಾರ್ವತ್ರಿಕ ಸಂದೇಶವನ್ನು ಕೊಡುತ್ತದೆ.
‘ಬಲಿದಾನ’ವು ಒಂದು ಏಕಾಂಕ ನಾಟಕವೆಂದು ಅನ್ನಿಸಿದರೂ ಮೂರು ದೃಶ್ಯಗಳನ್ನು ಹೊಂದಿದೆ. ಭೂತ, ವರ್ತಮಾನ ಹಾಗೂ ಭವಿಷ್ಯವನ್ನು ಈ ಮೂರು ದೃಶ್ಯಗಳು ಅನುಕ್ರಮವಾಗಿ ದಶರ್ಿಸುತ್ತವೆ. ಸ್ವಾತಂತ್ರ್ಯಪೂರ್ವ, ಸ್ವಾತಂತ್ರ್ಯ ಮತ್ತು ಸ್ವಾತಂತ್ರ್ಯನಂತರದ ಭಾರತದ ಸನ್ನಿವೇಶಗಳನ್ನು ಸಾಂಕೇತಿಸುವ ಈ ಮೂರು ದೃಶ್ಯಗಳನ್ನು ಪ್ರತಿಮಾವಿಧಾನದಲ್ಲಿ ಕುವೆಂಪುರವರು ನಾಟಕವಾಗಿಸಿದ್ದಾರೆ. ಇಡೀ ನಾಟಕದಾದ್ಯಂತ ಪ್ರತಿಮೆಗಳೇ ರೂಪಕಗಳಾಗಿ ನೋಡುಗರನ್ನು ದಿಗ್ಬ್ರಮೆಗೊಳಿಸುತ್ತವೆ. ಪ್ರತಿಯೊಂದು ಸನ್ನಿವೇಶ ಹಾಗೂ ಸಂಭಾಷನೆಗಳನ್ನು ಅಥರ್ೈಸಿಕೊಳ್ಳುತ್ತಾ ಹೋದರೆ ರೂಪಕದ ಅನನ್ಯತೆ ಅರಿವಾಗುತ್ತದೆ.
ಶಿಥಿಲಗೊಂಡ ಕಾಳಿಗುಡಿ ಸ್ವಾತಂತ್ರ್ಯಪೂರ್ವದ ಭಾರತದ ದುಸ್ಥಿತಿಯನ್ನು ತೋರಿದರೆ, ಯಾರು ನೀನು? ಎಂದು ಭಾರತಾಂಬೆಯನ್ನೇ ಪ್ರಶ್ನಿಸುವ ಭರತಸುತ ಗುಲಾಮಗಿರಿಯಲ್ಲಿ ಸ್ವಾತಂತ್ರ್ಯಪ್ರಜ್ಞೆಯನ್ನೇ ಮರೆತ ಭಾರತೀಯರ ಆಗಿನ ಮನಸ್ಥಿತಿಯನ್ನು ಸಂಕೇತಿಸುತ್ತಾನೆ. ”ನನ್ನ ಮನೆಯಲ್ಲಿ ನಾನೇ ತೊತ್ತಾಗಿ ಬಿದ್ದಿರುವೆ!… ನಾನು ಹಳೆಯ ಕಾಲದ ಮುದುಕಿ ಎಂದು ತನ್ನ ಅಸಹಾಯಕತೆಯನ್ನು ಭಾರತಮಾತೆ ತೋಡಿಕೊಳ್ಳುವ ಮೂಲಕ ತನ್ನ ದುರಾವಸ್ಥೆಯನ್ನು ಹೇಳುತ್ತಾಳೆ. ಮುದುಕಿಯಾದರೂ ತರಳೆಯಂತೆ ತೋರುವುದು ಒಳಗಿರುವ ಬೆಳಕಿಂದ” ಎನ್ನುವ ಭಾರತಾಂಬೆಯ ಮಾತು ಈ ದೇಶದ ಆಂತರಿಕ ಶಕ್ತಿಯನ್ನು ತೋರುತ್ತದೆ.
ಆದರೆ… ಕುವೆಂಪುರವರ ‘ಬಲಿದಾನ’ ರೂಪಕದ ಒಳಾರ್ಥಗಳು ನಿದರ್ೆಶಕರ ಗ್ರಹಿಕೆಗೆ ಪೂರ್ಣವಾಗಿ ದಕ್ಕಿಲ್ಲ. ರೂಪಕದ ಬಾಹ್ಯವನ್ನು ಮಾತ್ರ ಗ್ರಹಿಸಿದ ಅವರು ಅದರ ಆಂತರಿಕ ಪ್ರತಿಮಾ ಪ್ರಜ್ಞೆಯನ್ನು ಅವಜ್ಞೆಗೊಳಿಸಿದ್ದಾರೆ ಎಂಬ ಸಂದೇಹ ಬಾರದಿರದು. ಕುವೆಂಪುರವರು ತಮ್ಮ ರಂಗಪಠ್ಯದಲ್ಲಿ ರೂಪಕ ದರ್ಶನವನ್ನು ಕಾಣಿಸುತ್ತಾರೆ. ಆದರೆ ಈ ನಾಟಕ ಪ್ರದರ್ಶನದಲ್ಲಿ ಘಟನೆಗಳ ಪ್ರಸ್ತುತಿ ಕಾಣುತ್ತದೆ. ಕುವೆಂಪುರವರೇ ಹೇಳಿದ ಹಾಗೆ ಅವರ ನಾಟಕಗಳನ್ನು ಮನೋರಂಗಭೂಮಿಯಲ್ಲಿಯೇ ಸೃಷ್ಟಿಸಿ ದೃಷ್ಟಿಸಬೇಕು. ರಂಗದಂಗಳದಲ್ಲಿ ಪ್ರದಶರ್ಿಸಿದಾಗ ಅವರ ರೂಪಕ ದರ್ಶನದ ಆಯಾಮಗಳು ಮಿತಗೊಳ್ಳುತ್ತವೆ ಎಂಬುದು ಈ ‘ಬಲಿದಾನ’ ನಾಟಕ ನೋಡಿದರೆ ಅನುಭವವಾಗುತ್ತದೆ. ಇಡೀ ನಾಟಕದಲ್ಲಿ ಆಂಗಿಕಾಭಿನಯಕ್ಕೆ ಕೊಟ್ಟಷ್ಟೇ ಮಹತ್ವವನ್ನು ಅಂತಃಸತ್ವ ನಿರೂಪಣೆಗೆ ಕೊಟ್ಟಿದ್ದರೆ ಕುವೆಂಪುರವರ ಈ ನಾಟಕಕ್ಕೆ ಇನ್ನೂ ಹೆಚ್ಚು ನ್ಯಾಯವದಗಿಸಬಹುದಾಗಿತ್ತು. ಮಾತು ಮತ್ತು ಅಭಿನಯವನ್ನು ಮೀರಿದ ಪ್ರತಿಮಾವಿಧಾನ ಪ್ರಾಧಾನ್ಯತೆ ಈ ನಾಟಕ ಪ್ರಯೋಗಕ್ಕೆ ಅಗತ್ಯವಾಗಿದೆ.
ಪ್ರಸ್ತುತಗೊಂಡ ಈ ನಾಟಕದಲ್ಲಿ ಮೂರೂ ದೃಶ್ಯಗಳನ್ನು ಒಂದೇ ಅಂಕದಲ್ಲಿ ತೋರಿಸಿಲಾಗಿದೆ. ಆದರೆ ಮೂರು ದೃಶ್ಯಗಳ ಸನ್ನಿವೇಶ ಭಿನ್ನವಾಗಿವೆ. ಕಾಲಘಟ್ಟದಲ್ಲಿಯೂ ವ್ಯತ್ಯಾಸವಿದೆ. ಈ ವ್ಯತ್ಯಾಸವನ್ನು ಬೆಳಕಿನ ತೀವ್ರತೆಯಲ್ಲಿ ಬದಲಾವಣೆ ಮಾಡುವ ಮೂಲಕ, ಸೆಟ್ ಪರಿಕರಗಳಲ್ಲಿ ವ್ಯತ್ಯಾಸ ಮಾಡುವ ಮೂಲಕ ತೋರಿಸಬಹುದಾಗಿತ್ತು. ರಂಗಪಠ್ಯದಲ್ಲಿ 2ನೇ ದೃಶ್ಯದಲ್ಲಿ ಬೆಳಕು ಹೆಚ್ಚಾದಾಗ ಗೂಬೆಯೊಂದು ಕೂಗಿ ಹಾರಿಹೋಗುವುದನ್ನು ಬ್ರಿಟೀಷರೆಂಬ ಗೂಬೆಗಳು ತೊಲಗಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತು ಎಂಬುದನ್ನು ಸಂಕೇತಾರ್ಥದಲ್ಲಿ ಕುವೆಂಪುರವರು ಹೇಳುತ್ತಾರೆ. ಆದರೆ ಈ ಪ್ರಮುಖವಾದ ಪ್ರತಿಮಾರೂಪಕ ದೇಗಾಂವಿಯವರ ನಾಟಕದಲ್ಲಿ ಇಲ್ಲವೇ ಇಲ್ಲ. ಸನ್ನಿವೇಶಕ್ಕೆ ತಕ್ಕ ಹಾಗೆ ಬೆಳಕನ್ನು ಬಳಸಿ ಇನ್ನೂ ಹಲವಾರು ಪ್ರತಿಮೆಗಳನ್ನು ಸೃಷ್ಟಿಸಬಹುದಾಗಿತ್ತು. ಆದರೆ ನಾಟಕದಾದ್ಯಂತ ಒಂದೇ ತೆರನಾದ ಸ್ಥಿರವಾದ ಸೆಟ್ ಮತ್ತು ಹೆಚ್ಚೇನು ವ್ಯತ್ಯಾಸವಿಲ್ಲದ ಬೆಳಕಿನ ವಿನ್ಯಾಸದಿಂದಾಗಿ ದೃಶ್ಯಗಳಲ್ಲಿ ಹಾಗೂ ಸನ್ನಿವೇಶಗಳಲ್ಲಿ ಯಾವುದೇ ವ್ಯತ್ಯಾಸ ಕಾಣದೇ ನೋಡುಗರು ಸಂಭಾಷಣೆಗಳನ್ನೇ ಅವಲಂಬಿಸಬೇಕಾಗಿತ್ತು. ಆ ಸಂಭಾಷಣೆಗಳೆಲ್ಲಾ ಸರಳರಗಳೆಯ ನಡುಗನ್ನಡದಲ್ಲಿರುವುದರಿಂದ ಜನಸಾಮಾನ್ಯ ಪ್ರೇಕ್ಷಕನಿಗೆ ಸುಲಭಕ್ಕೆ ಅರ್ಥವಾಗುವುದು ಸಾಧ್ಯವೂ ಇಲ್ಲಾ. ಹೀಗೆ ಭಾಷೆಯ ಸಂವಹನ ಸಮಸ್ಯೆಯಾದಾಗ ನಾಟಕದ ಪೂರಕ ಅಂಶಗಳ ಮೂಲಕ ಮೂಡ್ ಸೃಷ್ಟಿಸಬಹುದಾಗಿದೆ.
ಪ್ರತಿಮಾಪ್ರಧಾನ ರೂಪಕವನ್ನು ಆಂಗಿಕಾಭಿನಯ ಪ್ರಧಾನ ನಾಟಕವಾಗಿಸುವಲ್ಲಿ ನಿದರ್ೆಶಕರು ಶ್ರಮಿಸಿದ್ದಾರೆ. ನೀನಾಸಂನಲ್ಲಿ ಅಭಿನಯದಲ್ಲಿ ಪಳಗಿದ ಸಿತಾರಾ ಇಡೀ ನಾಟಕದಾದ್ಯಂತ ತಮ್ಮ ಆಂಗಿಕಾಭಿನಯ ಪ್ರೌಢಿಮೆ ಮತ್ತು ಸ್ಪಷ್ಟವಾದ ವಾಚಿಕಾಭಿನಯದಿಂದಾಗಿ ಭಾರತಾಂಬೆಯಾಗಿ ಗಮನ ಸೆಳೆಯುತ್ತಾರೆ. ಭರತಸುತನಾಗಿ ಸಾಜಿದ್ ನಟನೆ ಪಾತ್ರೋಚಿತವಾಗಿತ್ತು. ನೀನಾಸಂನಿಂದ ಬಂದ ಮಹತ್ವಾಂಕಾಂಕ್ಷೆಯ ಯುವಕ ಮಹಾಂತೇಶ ದೇಗಾಂವಿ ನೀನಾಸಂ ಮಾದರಿಯ ನೆರಳಲ್ಲೇ ಇಡೀ ನಾಟಕವನ್ನು ಕಟ್ಟಿಕೊಟ್ಟಿದ್ದಾರೆ. ನಾಟಕದ ನಿರೂಪಣೆಯಲ್ಲಿ ಭಿನ್ನತೆ ಮೆರೆದಿದ್ದರೆ, ಪ್ರಸ್ತುತಿಯಲ್ಲಿ ಸ್ವಂತಿಕೆಯನ್ನು ರೂಢಿಸಿಕೊಂಡಿದ್ದರೆ, ನಾಟಕದ ಒಳತೋಟಿಗಳನ್ನು ಗ್ರಹಿಸಿ ನಾಟಕ ಕಟ್ಟಿಕೊಟ್ಟಿದ್ದರೆ ದೇಗಾಂವಿಯವರ ಈ ‘ಬಲಿದಾನ’ ನಾಟಕ ರಂಗಭೂಮಿಯಲ್ಲಿ ಮಹತ್ತರವಾಗಬಹುದಾಗಿತ್ತು.
ಇಡೀ ನಾಟಕಕ್ಕೆ ಮೆರಗನ್ನು ಕೊಟ್ಟಿದ್ದು ಸಂಗೀತದ ಮೇಳ. ನಟರಿಗಿಂತ ಈ ಮೇಳದವರೆ ಹೆಚ್ಚಿನ ಸಂಖ್ಯೆಯಲ್ಲಿದ್ದು ನಾಟಕದ ಪ್ರತಿ ಚಲನೆಗೂ ಪ್ರತಿಕ್ರಿಯಿಸಿದ ರೀತಿ ಅನನ್ಯ. ಕೆಲವೊಮ್ಮೆ ನಟನೆಗೂ ಹಿನ್ನಲೆ ಸಂಗೀತದ ಎಪೆಕ್ಟಗೂ ಸಿಂಕ್ ಆಗದೇ ಹೋದದ್ದನ್ನು ನಿರ್ಲಕ್ಷಿಸಿದರೆ ನಾಟಕಕ್ಕೆ ಅಗತ್ಯವಾದ ಮೂಡನ್ನು ಹುಟ್ಟಿಸುವಲ್ಲಿ ಹಾಡು ಮತ್ತು ಸಂಗೀತ ಯಶಸ್ವಿಯಾಗಿದೆ. ”ರಘುಪತಿ ರಾಘವ ರಾಜಾರಾಂ ಮತ್ತು ಭಾರತಾಂಬೆಯೇ ಜನಿಸಿ ನಿನ್ನೊಳು ಧನ್ಯನಾದೆನು …” ಹಾಡುಗಳು ಕೇಳುಗರಲ್ಲಿ ವಿದ್ಯುತ್ ಸಂಚಾರ ಮಾಡಿತು. ಜನಗಣಮಣ ಹಾಡು ಪೂತರ್ಿ ಹಾಡುವ ಅಗತ್ಯ ಇರಲಿಲ್ಲ.
ಒಟ್ಟಾರೆಯಾಗಿ ಕ್ಲಿಷ್ಟಕರ ಭಾಷೆಯ, ಕಾವ್ಯಮಯ ಸಂಭಾಷಣೆಯ, ಸಿದ್ದಕಥಾನಕವಿಲ್ಲದಂತಹ ಪ್ರತಿಮಾಪ್ರಧಾನ ನಾಟಕವೊಂದನ್ನು ಪ್ರಸ್ತುತಗೊಳಿಸಿದ ಪ್ರಯತ್ನವೇ ಅಭಿನಂದನಾರ್ಹ. ಕುವೆಂಪುರವರ ಸ್ಮಶಾನಕುರುಕ್ಷೇತ್ರ, ಬೆರಳ್ಗೆ ಕೊರಳ್, ಬಿರುಗಾಳಿ, ಜಲಗಾರ ನಾಟಕಗಳಿಗೆ ಹೋಲಿಸಿದರೆ ‘ಬಲಿದಾನ’ ನಾಟಕದ ಪ್ರಯೋಗಗಳಾಗಿದ್ದು ತುಂಬಾ ಕಡಿಮೆ. ಅಂತಹ ಅಪರೂಪದ ಹಾಗೂ ಸಮಕಾಲೀನತೆಯನ್ನು ಸಾರ್ವಕಾಲಿಕಗೊಳಿಸಿದಂತಹ ‘ಬಲಿದಾನ’ ನಾಟಕವನ್ನು ನಿದರ್ೆಶಿಸಿದ ಯುವ ನಿದರ್ೆಶಕನ ಸಾಹಸ ಮೆಚ್ಚುವಂತಹುದು.
ಸ್ವಾತಂತ್ರ್ಯ ಪಡೆಯುವುದಕ್ಕೆ ಮಾತ್ರ ಬಲಿದಾನ ಕೊಟ್ಟರೆ ಸಾಲದು, ಪಡೆದ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲಿಕ್ಕೂ ಬಲಿದಾನ ಅನಿವಾರ್ಯ, ಬಲಿಪರಂಪರೆಯಿಂದಲೇ ಸ್ವಾತಂತ್ರ ಬದುಕು ಸಾಧ್ಯ ಎನ್ನುವ ಸಾರ್ವಕಾಲಿಕ ಸಂದೇಶವನ್ನು ಕೊಡುವ ‘ಬಲಿದಾನ’ ನಾಟಕದ ಈ ಕೆಳಗಿನ ಸಾಲುಗಳು ಇಡೀ ನಾಟಕದ ಬಹು ಮುಖ್ಯ ಆಶಯವಾಗಿವೆ.
ಬಲಿದಾನಕುಂಟೆ ಕೊನೆ?
ಬಲಿಪರಂಪರೆಯಲ್ತೆ ಸ್ವಾತಂತ್ರ್ಯ ಜೀವನಂ!

ಕಾಮೆಂಟ್‌ಗಳಿಲ್ಲ:

ಧಾರವಾಡ ಎಂಬ ಸ್ವಾವಲಂಬನೆಯ ಸಾಂಸ್ಕೃತಿಕ ನಗರ

ಉತ್ತರಕರ್ನಾಟಕದ ಸಾಂಸ್ಕೃತಿಕ ಐಕಾನ್ ಧಾರವಾಡ. ದೇಶದ ಹೆಸರಾಂತ ಸಂಗೀತ ವಿದೂಷಿಗಳು, ಪಂಡಿತರು ಧಾರವಾಡ ನೆಲದಲ್ಲಿ ಸಂಗೀತ ಕಛೇರಿ ಕೊಡಲಿಕ್ಕೆ ಕಾಯುತ್ತಾರೆ ಹೇಗೋ ಹಾಗೆಯೇ ನ...