ಸೋಮವಾರ, ಸೆಪ್ಟೆಂಬರ್ 16, 2013

ಮೆಟ್ರೋ ನಗರದಲ್ಲಿ ಶೇಕ್ಸ್‌ಪಿಯರ್! -ಧನಂಜಯ ದಿಡಗ

ತನ್ನ ಅದ್ಭುತ ಪ್ರತಿಭಾ ಸಂಪನ್ನತೆಯಿಂದ ಜಗತ್ತಿನ ಜ್ಞಾನ ಪರಂಪರೆಯನ್ನು ಪ್ರಭಾವಿಸಿದ, ಬೆರಗುಗೊಳಿಸಿದ ರಸಸಿದ್ಧಿಯ ಮಾಂತ್ರಿಕ ಕವಿ- ನಾಟಕಕಾರ ವಿಲಿಯಂ ಶೇಕ್ಸ್‌ಪಿಯರ್.
ತನ್ನ ಸೃಜನಶೀಲತೆಯ ಕಮ್ಮಾರ ಶಾಲೆಯೊಳಗೆ, ಮಾನವ ಸಂಬಂಧಗಳನ್ನು, ಅವುಗಳ ಆರ್ದ್ರತೆ, ಮಾಧುರ್ಯವನ್ನು, ಕ್ರೌರ್ಯವನ್ನು, ಮಾನವ ಬದುಕಿನ ನಿರರ್ಥಕತೆ ಅದರಾಚೆಗಿನ ಸಾರ್ಥಕತೆಯನ್ನು, ಕರುಣೆಯನ್ನು, ಕಣ್ಣೀರನ್ನು, ಕಣ್ಣೀರೊಳಗೆ ಮಡುಗಟ್ಟಿದ ದ್ವೇಷ; ದ್ವೇಷದೊಳಗೆ ಬೆಳ್ಳಗೆ ಹೊಳೆಯುವ ಪ್ರೀತಿಯನ್ನು, ಮಾನವ ಸಹಜ ನಗುವನ್ನ, ಎಲ್ಲವನ್ನು ಹಾಕಿ, ಕಾಸಿ, ತಟ್ಟಿ ನಾಟಕವೆಂಬ ಕನ್ನಡಿಗೆ ಬಂಗಾರದ ಕಟ್ಟು ಹಾಕಿ, ಇದು ನಾನು ಕಂಡುಕೊಂಡ ಬದುಕ ಕನ್ನಡಿ ನೋಡಿಕೊಳ್ಳಿ ಎಂದು ಕೊಡುತ್ತಾನೆ ಶೇಕ್ಸ್‌ಪಿಯರ್.
ಬಂಗಾರದ ಕಟ್ಟಿನ ಕನ್ನಡಿಯೊಳಗೆ ಕಾಣುವ ಲಿಯರ್, ಒಥೆಲೋ, ಹ್ಯಾಮ್ಲೆಟ್, ಮ್ಯಾಕಬೆತ್ ಎಲ್ಲರೊಳಗೂ ಪ್ರತಿಬಿಂಬಗೊಳ್ಳುವುದು ನಮಗೇ ಗೊತ್ತಿಲ್ಲದ ನಮ್ಮದೇ ಮುಖ. ಅವುಗಳನ್ನು ನೋಡಿ ಒಂದು ಕ್ಷಣ ಬೆಚ್ಚುತ್ತೇವೆ. ಹುಚ್ಚಾಗುತ್ತೇವೆ. ಮೆಚ್ಚುತ್ತೇವೆ. ತಲ್ಲಣಗೊಳ್ಳುತ್ತೇವೆ. ಇದು ಶೇಕ್ಸ್‌ಪಿಯರ್ ಮಹಾಕವಿಗಿರುವ ಶಕ್ತಿ.
ಬೆಂಗಳೂರಿನ ಥಿಯೇಟರ್ ತತ್ಕಾಲ್ ತಂಡ ರವೀಂದ್ರ ಕಲಾಕ್ಷೇತ್ರದಲ್ಲಿ ‘ಶೇಕ್ಸ್‌ಪಿಯರ್ ಮನೆಗೆ ಬಂದ’(ರಚನೆ: ನಟರಾಜ ಹುಳಿಯಾರ್ ನಿರ್ದೇಶನ: ನಟರಾಜ ಹೊನ್ನವಳ್ಳಿ) ನಾಟಕವನ್ನು ಪ್ರದರ್ಶಿಸಿತು.
ಗೆಲುವು, ಸೋಲು ಇತ್ಯಾದಿ...
ಅಸಲು ಶೇಕ್ಸ್‌ಪಿಯರನ ವಿಮರ್ಶಾ ಲೋಕದಲ್ಲಿ ವಿಹರಿಸುತ್ತಾ ಅವನ ವಿಮರ್ಶೆಯನ್ನು ಅರಗಿಸಿಕೊಂಡ ಮಂದಿಗೆ ನಾಟಕ ಕಚಗುಳಿ ಇಡುತ್ತದೆ, ಇದುವರೆಗೂ ಬಂದ ಶೇಕ್ಸ್‌ಪಿಯರ್ ನಾಟಕಗಳಿಗಿಂತ ಭಿನ್ನವಾದ, ಶೇಕ್ಸ್‌ಪಿಯರನೇ ಪಾತ್ರವಾಗಿರುವ ಈ ನಾಟಕದ ಬಹುಮುಖ್ಯ ತೊಡಕಿರುವುದು, ಅವನ ಮೂಲಕವೇ ಅವನ ವಿಮರ್ಶಾ ಲೋಕವನ್ನು ಆಖ್ಯಾನ ಮಾಡುವ ಪ್ರಯತ್ನದಲ್ಲಿ.
ನಾಟಕದ ಭಾಷೆ, ಅದರ ಸ್ಥಳೈಕ್ಯ ಪರಿಕಲ್ಪನೆಯನ್ನು ನಿಖರವಾಗಿಸುವಲ್ಲಿ  ಆ ಪ್ರಯತ್ನ ಸೋಲುತ್ತದೆ. ಕ್ರಿ.ಶ.1611ರಲ್ಲಿ  ನಡೆಯುವ ಕಥೆ, ನಿಜವೇ ಕಾಲ್ಪನಿಕವೇ ಎಂಬುದು ಸ್ಪಷ್ಟವಾಗದೆ ಕಥೆ ಓಡುತ್ತದೆ. ಶೇಕ್ಸ್‌ಪಿಯರನೇ ಕಾಲೈಕ್ಯ, ಕ್ರಿಯೈಕ್ಯ, ಸ್ಥಳೈಕ್ಯವನ್ನು ಉಲ್ಲಂಘಿಸುತ್ತಾನೆಂಬುದು ನಿಜವಾದರೂ, ಆ ಉಲ್ಲಂಘನೆಗೆ ಒಂದು ತಥ್ಯವಿರಬೇಕು. ಇಲ್ಲದಿದ್ದರೆ ಗೊಂದಲ ಹುಟ್ಟುವುದು ಸಹಜ.
1611ರಲ್ಲಿನ ಲೋಕಲ್‌ಗಳು, ಇಗೋ ಇಂಗ್ಲಿಷ್‌ನ ವ್ಯಾನ್ ಕೋಟ್ ಸೋಬ್ಸ್ (ಇಗೋ ಕನ್ನಡ ಬರೆಯುತ್ತಿದ್ದ ಜಿ.ವೆಂಕಟ ಸುಬ್ಬಯ್ಯ), ಜಿ.ಕೆ. ಗೋವಿಂದರಾವ್ ಅವರನ್ನು ಉದ್ಧರಿಸುವ ತಥ್ಯ ಅರ್ಥವಾಗುವುದಿಲ್ಲ. ಶೇಕ್ಸ್‌ಪಿಯರ್ ಪ್ರಪಂಚವನ್ನು, ಒಥೆಲೊ/ ಕಿಂಗ್‌ಲಿಯರ್/ಮ್ಯಾಕ್‌ಬೆತ್/ ಹ್ಯಾಮ್ಲೆಟ್ ಮೂಲಕ ನೆಲದಣ್ಣನಿಗೂ ದಕ್ಕುವ ನಾಟಕದ ನೈಜ ಸುಖ ಸ್ವಲ್ಪ ಮುಕ್ಕಾದಂತೆನಿಸುತ್ತದೆ. ಆದರೆ ನಟರ ಅಭಿನಯ, ನಾಜೂಕಾದ ಸಂಗೀತ, ನಾಟಕಕ್ಕೆ ಒಂದು ಬಗೆಯ ಓಘವನ್ನು ತಂದುಕೊಟ್ಟು, ಒಂದೂ ಮುಕ್ಕಾಲು ಗಂಟೆ ಏಕಾಗ್ರತೆಯಿಂದ ನೋಡುವಂತೆ ಮಾಡುತ್ತದೆ.
ಕಥೆಯೇನೆಂದರೆ...
ಸ್ಟ್ರಾಟ್‌ಫರ್ಡ್‌ನ ಹೆಮ್ಮೆಯ ಮಗ, ಪ್ರಖ್ಯಾತ ನಾಟಕಕಾರ ವಿಲಿಯಂ ಶೇಕ್ಸ್‌ಪಿಯರ್ ಇಂಗ್ಲೆಂಡಿಗೆ ಬರುವುದು. ಅವನಿಗೆ ಅದ್ದೂರಿ ಸನ್ಮಾನವಿದೆ. ಅವನೀಗಾಗಲೇ ವಿಶ್ವದ ಬಹುದೊಡ್ಡ ನಾಟಕಕಾರನಾಗಿ ಹೆಸರು ಮಾಡಿದ್ದಾನೆ. ಅವನ ಹೆಂಡತಿ ಆ್ಯನ್ ಹ್ಯಾತ್‌ವೇ, ಅವಳೇ ಹೇಳುವಂತೆ ತನ್ನ ಗಂಡ ಈಗ ಬಹುದೊಡ್ಡ ನಾಟಕಕಾರ. ಜಗತ್ತು ಅವನನ್ನು ಮೆಚ್ಚಿ ಕೊಂಡಾಡುತ್ತಿದೆ. ಹಾರ ತುರಾಯಿ, ಆ ಸಿಟಿ–ಈ ಸಿಟಿ, ಇವನ ಡೈಲಾಗ್ಸ್ ಅರ್ಥವಾಗದಿದ್ದರೂ ಕೇಳುವ, ಸುಮ್ಮಸುಮ್ಮನೆ ಚಪ್ಪಾಳೆ ತಟ್ಟುವ ಆಡಿಯೆನ್ಸು. ವೈನ್ ಅಡ್ಡಾಗಳು ಗರ್ಲ್‌ಫ್ರೆಂಡು, ಬಾಯ್ ಫ್ರೆಂಡು ಹೀಗೆ ಅವನ ಬಗೆಗಿನ ವಿಮರ್ಶಾ ಸಾಲು ಮೊದಲು ಅವನ ಹೆಂಡತಿಯಿಂದಲೇ ಆರಂಭವಾಗುತ್ತದೆ.
ಅಲ್ಲೇ ಸ್ಟ್ರಾಟ್‌ಫರ್ಡಿನಲ್ಲಿ ಶೇಕ್ಸ್‌ಪಿಯರ್ ಸೃಷ್ಟಿಸಿದ ಪಾತ್ರಗಳದ್ದೇ ರೀತಿಯ ವ್ಯಕ್ತಿಗಳಿದ್ದಾರೆ. ಶೇಕ್ಸ್‌ಪಿಯರನೆಂದರೆ ಅವರಿಗೆ ಮೆಚ್ಚು, ಹುಚ್ಚು. ಯಾಕೆಂದರೆ ಅವನು ಸ್ಟ್ರಾಟ್‌ಫರ್ಡಿನ ಮಗ. ಅವರನ್ನು  ಲೋಕಲ್ ಎಂಬ ವಿಶೇಷೋಕ್ತಿ ಸೇರಿಸಿ ಕರೆಯಲಾಗುತ್ತದೆ. ಉದಾಹರಣೆಗೆ ಲೋಕಲ್ ಲಿಯರ್, ಲೋಕಲ್ ಒಥೆಲೋ, ಲೋಕಲ್ ಇಯಾಗೋ... ಹೀಗೆ. ಇವರ ಜೊತೆಗೆ ಒಬ್ಬ ವೈಸ್ ಮ್ಯಾನ್; ಇವನೊಂದು ರೀತಿ ಸೂತ್ರಧಾರನಿದ್ದಂತೆ. ಇವನ ಪ್ರತಿ ಮಾತು ಶೇಕ್ಸ್‌ಪಿಯರ್‌ನಿಂದಲೇ ಪ್ರಾರಂಭ. ಶೇಕ್ಸ್‌ಪಿಯರ್‌ನ ಪ್ರತಿಯೊಂದು ಮಾತು, ಪಾತ್ರ, ನಾಟಕ ಸಾನೆಟ್ಟಿನ ಅರ್ಥವಿವರಣೆಯನ್ನು ವಿದ್ವತ್ಪೂರ್ಣ ಅಧಿಕಾರದಿಂದ ಮಾಡಬಲ್ಲಾತ. ಇಷ್ಟೂ ಪಾತ್ರಗಳು ಶೇಕ್ಸ್‌ಪಿಯರನೊಟ್ಟಿಗೆ ಮಾತಾಡುತ್ತವೆ, ಹಾಡುತ್ತವೆ, ಕುಣಿಯುತ್ತವೆ, ಕೀಟಲೆ ಮಾಡುತ್ತವೆ. ಅವನ ಪಾತ್ರಗಳನ್ನು ಗೇಲಿ ಮಾಡುತ್ತಾರೆ, ಅವನ ಎದುರಿಗೇ ಅವನ ನಾಟಕಗಳನ್ನು ಪ್ರತಿಕೃತಿಯಂತೆ ಅಭಿನಯಿಸಿ ತೋರಿಸುತ್ತಾರೆ.
ಶೇಕ್ಸ್‌ಪಿಯರ್‌ಗೆ ತಾನು ಸೃಷ್ಟಿಸಿದ ಪಾತ್ರಗಳು, ನಾಟಕ ಕಣ್ಣ ಮುಂದೆ ನಡೆಯುತ್ತಾ ತಾನರಿಯದ ಹೊಸ ಅರ್ಥ, ಹೊಸ ದೃಷ್ಟಿಕೋನ, ಹೊಸ ಹೊಳಹು ಶೇಕ್ಸ್‌ಪಿಯರಿನಿಗೇ ಹೊಳೆಯುವಂತೆ ಮಾಡುತ್ತಾರೆ. ಕೆಲವೊಮ್ಮೆ ಶೇಕ್ಸ್‌ಪಿಯರ್ ಪಾತ್ರವಾಗುತ್ತಾನೆ, ನಿಂತು ನೋಡಿ ಅಚ್ಚರಿಪಡುತ್ತಾನೆ. ತಾನು ಕಟ್ಟಿದ ಪಾತ್ರವೀಗ ಬೇರೆಯದೇ ಅರ್ಥ ಪಡೆದು ನಿಂತಿದೆಯಲ್ಲಾ ಎಂದು ಕಳವಳಗೊಳ್ಳುತ್ತಾನೆ. ಅದರೊಟ್ಟಿಗೆ ವೈಸ್‌ಮ್ಯಾನ್ ಶೇಕ್ಸ್‌ಪಿಯರ ಹಿರಿಮೆ ಗರಿಮೆ ದಂತಕಥೆಗಳು ಹೀಗೆ, ಶೇಕ್ಸ್‌ಪಿಯರ್ ಬಗೆಗಿನ ವಿಮರ್ಶಾ ಲೋಕದೊಟ್ಟಿಗೆ ಎಂದೂ ಪಾತ್ರವಾಗಿ ನಾವು ನೋಡದ ಶೇಕ್ಸ್‌ಪಿಯರ್ ಪಾತ್ರವಾಗುತ್ತಲೂ, ತನ್ನ ಅನಿಸಿಕೆ, ನಂಬಿಕೆ ಹೇಳಿಕೆಗಳಿಗೆ ಸಮರ್ಥನೆ ಕೊಡುತ್ತಲೂ, ಸಾಗುತ್ತದೆ ನಾಟಕ.
ಮುಖ್ಯವಾಗಿ ನಾಟಕಕಾರರ ತಂತ್ರಗಾರಿಕೆ ಇರುವುದು, ಶೇಕ್ಸ್‌ಪಿಯರ್‌ನವೇ ಪಾತ್ರಗಳಾದ ಲಿಯರ್, ಇಯಾಗೋ, ರೋಮಿಯೋ, ಬಾಟಮ್, ಶೈಲಾಕ್‌ರನ್ನ ಅಲ್ಲಿನ ಸ್ಥಳೀಯರನ್ನಾಗಿ ಮಾಡಿ, ಅವುಗಳ ಮೂಲಕವೇ ಶೇಕ್ಸ್‌ಪಿಯರನಿಗೆ ಪ್ರಶ್ನೆ ಕೇಳಿಸುವುದರಲ್ಲಿ, ಆ ಮೂಲಕ ಒಂದು ನೇರ ವಿಮರ್ಶೆ ನಾಟಕದ ಮೇಲೆ ಹೇರಬಹುದಾಗಿದ್ದ ಹೊರೆಯನ್ನು ಪಾತ್ರಗಳ ಮೂಲಕ ಮಾಡಿಸಿ ಅದನ್ನು ತಪ್ಪಿಸಿರುವುದರಲ್ಲಿ. ಒಂದು ವಿಮರ್ಶೆಯನ್ನು ನಾಟಕವಾಗಿಸುವ ಅತ್ಯುತ್ತಮ ತಂತ್ರಗಾರಿಕೆ ಇದು.
ನಿರ್ದೇಶಕ ನಟರಾಜ ಹೊನ್ನವಳ್ಳಿ ಈಗಾಗಲೇ ಕನ್ನಡ ರಂಗಭೂಮಿಯ ಬಹುಮುಖ್ಯ ನಿರ್ದೇಶಕರೆಂದು ಗುರುತಿಸಿಕೊಂಡವರು. ಅವರು ರಂಗಕ್ಕಿಳಿಸಿದ ಕನ್ನಡದ ಬಹು ಮುಖ್ಯ ಕಾದಂಬರಿಗಳಾದ ಪುಣೇಕರರ ‘ನಟನಾರಾಯಣಿ’, ತೇಜಸ್ವಿಯವರ ‘ಜುಗಾರಿ ಕ್ರಾಸ್’ ಬಹುಮಟ್ಟಿಗೆ ಹೊಸತನದಿಂದ ಗಮನ ಸೆಳೆದ ನಾಟಕಗಳು. ಅವೆಲ್ಲವುಗಳಲ್ಲಿ ತೋರಿದ ಕೌಶಲ, ನಿರೂಪಣಾ ವಿಧಾನ, ತಂತ್ರಗಳನ್ನು ನೋಡಿದರೆ, ‘ಶೇಕ್ಸ್‌ಪಿಯರ್ ಮನೆಗೆ ಬಂದ’ ನಾಟಕದಲ್ಲೂ ಅವೇ ಕೆಲವು ಹಳೇ ತಂತ್ರಗಳ ಪುನರಾವರ್ತನೆ ಕಾಣುತ್ತದೆ.
ಉದಾಹರಣೆಗೆ ಅವರ ಹಳೇ ನಾಟಕಗಳಲ್ಲೂ ಕಾಣಬರುವ ನಿರೂಪಕರ ಸೃಷ್ಟಿ. ನಿರೂಪಕರೂ ಆದ  ಲೋಕಲ್ ಮತ್ತು ವೈಸ್ಮ್ಯಾನ್‌ನನ್ನು ಅವರು ನಾಟಕದ ಪರಿಕ್ರಮಕ್ಕೆ, ಓಘಕ್ಕೆ ಬಳಸಿಕೊಂಡಿರುವ ರೀತಿ ಹೊಸ ಬಾಟಲಿಯಲ್ಲಿ ಹಳೆಯ ಮದ್ಯವೇ. ಹೊನ್ನವಳ್ಳಿಯವರಂತಹ ನಿರ್ದೇಶಕರು ನಟರಿಗೆ ಕೆಲವು ವಿಚಾರದಲ್ಲಿ  ಸಂಪೂರ್ಣ ಸ್ವಾತಂತ್ರ್ಯ ನೀಡುತ್ತಾರೆ.  ‘ಲೋಕಲ್‌’ಗಳ ಪಾತ್ರದಲ್ಲಿ ಅವರು ನೀಡಿರುವ ಸ್ವಾತಂತ್ರ್ಯ ಕೆಲವು ಕಡೆ ದುಬಾರಿಯಾಗುತ್ತದೆ. ಪಂಚ್‌ಗಳ ಮೇಲೆ ಪಂಚ್‌ಗಳನ್ನು ಸಿಡಿಸುವ ಈ ಪಾತ್ರಗಳ ನಟರು ಕೆಲವೊಮ್ಮೆ ನಾಟಕದಲ್ಲಿಲ್ಲದ, ತಾವೇ ತುರುಕಿದ ಮಾತುಗಳಿಂದ, ನಾಟಕದ ಭಾಷೆಯ ಓಟ ತಿರುವು ಮುರುವು ಹಾದಿ ಹಿಡಿಯುವುದು ನಿಜ. ಆದರೆ ನಾಟಕದಲ್ಲಿ ಎದ್ದು ಕಾಣುವುದು ವೈಸ್‌ಮ್ಯಾನ್ (ಗಣಪತಿ) ಸೇರಿದಂತೆ ಇವೇ ಪಾತ್ರಗಳೆಂಬುದೂ ನಿಜವೇ.
ಶೇಕ್ಸ್‌ಪೀರಿಯನ್ ಯುಗದ ಮೂಡ್ ಸೃಷ್ಟಿಸಲು, ಪ್ರಯತ್ನಸುವ ಸಂಗೀತ ಕೆಲವೊಮ್ಮೆ ಅದರ ದ್ವನಿ ನಿಯಂತ್ರಣದ ಸಂದರ್ಭದಲ್ಲಿ ನಟರ ಮಾತುಗಳನ್ನು ಓವರ್‌ಲ್ಯಾಪ್ ಮಾಡಿಬಿಡುತ್ತದೆ. ಮತ್ತೂ ಕೆಲವುಕಡೆ ಮನಸ್ಸಿಗೆ ಹಿತವನ್ನುಂಟು ಮಾಡುತ್ತದೆ. ಆದರೆ, ರೆಕಾರ್ಡೆಡ್ ಸಂಗೀತದ ಕೃತಕತೆ ಲೈವ್ ಸಂಗೀತದಷ್ಟು ಆನಂದವನ್ನುಂಟು ಮಾಡುವುದಿಲ್ಲ.
ನಾಟಕದ ಕೆಲವು ದೃಶ್ಯಗಳಲ್ಲಿ  ಮಾಯಾಲೋಕವನ್ನು ಸೃಷ್ಟಿಸುವುದು, ಬೆಳಕು (ಜಗದೀಶ್) ಮತ್ತು ಅದಕ್ಕೆ ಹೊಂದಿಕೊಂಡಂತಿರುವ ಮೆಲು ಸಂಗೀತ. ‘ಲೋಕಲ್’ಗಳು ಸೇರಿ ಕಟ್ಟಿಕೊಡುವ ‘ಮಿಡ್ ಸಮ್ಮರ್ ನೈಟ್ಸ್ ಡ್ರೀಮ್‌’ನ ಒಂದು ಕಾಡಿನ ಯಕ್ಷಲೋಕದ ದೃಶ್ಯ ನಿಜವಾಗಿಯೂ ನೋಟಕ್ಕೆ ಮುದಕೊಡುತ್ತದೆ. ನೀಲಿ ಬೆಳಕು, ನಟರು ಊದುಗುಳ್ಳೆಗಳ ಮೂಲಕ ರಂಗದ ತುಂಬ ಗುಳ್ಳೆಗಳನ್ನು ಸೃಷ್ಟಿಸುವುದು. ಆ ಇಡೀ ವಾತಾವರಣ ಹೊಸತಾಗಿ ನಮಗೊಂದು ತಾಜಾ ನೋಟ ಕೊಡುತ್ತದೆ.
ಹೊಸದೊಂದು ಪ್ರಯತ್ನದ ಹಿಂದೆ ನಟರಾಜ ಹುಳಿಯಾರ್, ನಟರಾಜ ಹೊನ್ನವಳ್ಳಿ ಮತ್ತು ನಟವರ್ಗದವರ ಅಪಾರ ಪರಿಶ್ರಮವಿರುವುದು ಕಂಡರೂ ನಾಟಕ ಜನರಿಗೆ ತಲುಪುವ ಪ್ರಯತ್ನ ಅರ್ಧದಷ್ಟು ಸಫಲವಾಗಿದೆ ಎನ್ನಬೇಕು. ಶೇಕ್ಸ್‌ಪಿಯರನ ನಾಟಕ ‘ವಿಂಟರ್‍್್ ಸ್ಟೇಲ್’ (ನೀನಾಸಂ ಬಳಗ. ಅನುವಾದ ನಿರ್ದೇಶನ; ಕೆ.ವಿ. ಅಕ್ಷರ) ನಂತರ ಶೇಕ್ಸ್‌ಪಿಯರನೇ ಪಾತ್ರವಾಗಿರುವ ಈ ನಾಟಕ ರವೀಂದ್ರ ಕಲಾಕ್ಷೇತ್ರದಲ್ಲಿ ತುಂಬಿದ ಪ್ರದರ್ಶನ ಕಾಣುವುದರಲ್ಲಿ ಯಶಸ್ವಿಯಾಯಿತು.

ಕಾಮೆಂಟ್‌ಗಳಿಲ್ಲ:

ಧಾರವಾಡ ಎಂಬ ಸ್ವಾವಲಂಬನೆಯ ಸಾಂಸ್ಕೃತಿಕ ನಗರ

ಉತ್ತರಕರ್ನಾಟಕದ ಸಾಂಸ್ಕೃತಿಕ ಐಕಾನ್ ಧಾರವಾಡ. ದೇಶದ ಹೆಸರಾಂತ ಸಂಗೀತ ವಿದೂಷಿಗಳು, ಪಂಡಿತರು ಧಾರವಾಡ ನೆಲದಲ್ಲಿ ಸಂಗೀತ ಕಛೇರಿ ಕೊಡಲಿಕ್ಕೆ ಕಾಯುತ್ತಾರೆ ಹೇಗೋ ಹಾಗೆಯೇ ನ...