ಭಾನುವಾರ, ಏಪ್ರಿಲ್ 13, 2014

ಹನುಮಪ್ಪನ ಆಧುನಿಕ ಪುರಾಣದಲ್ಲಿ ಅನಾವರಣಗೊಂಡ ಸಾಮಾಜಿಕ ಅವ್ಯವಸ್ಥೆ


 ಶಶಿಕಾಂತ ಯಡಹಳ್ಳಿ 


                                        
ಶ್ರೀರಾಮನ ಪರಮಭಕ್ತ ಹನುಮಂತನು ರಾಮಾಯಣ ಮಹಾಕಾವ್ಯದ ಒಂದು ವಿಶಿಷ್ಟ ಪಾತ್ರ. ಕೋತಿಯೊಂದು ತನ್ನ ಪರಾಕ್ರಮ ಮತ್ತು ಆತ್ಮಸ್ತೈರ್ಯದಿಂದ ವಿರಾಟರೂಪ ಪಡೆದು ಅವತಾರ ಪುರುಷ ರಾಮನಿಂದ ಅಸಾಧ್ಯವಾದುದನ್ನು ಸುಲಭವಾಗಿ ಮಾಡಿತೋರಿಸಿದ ಒಂದು ಪ್ಯಾಂಟಸಿ ಪಾತ್ರ. ಆಂಜನೇಯನಿಗೆ ಪುರಾಣ ಪರಿಕಲ್ಪಣೆಯಲ್ಲಿ ತನ್ನದೇ ಆದ ಒಂದು ಮಹತ್ವ ಇದೆ. ಸ್ವಾಮಿನಿಷ್ಟೆಗೆ ಇನ್ನೊಂದು ಹೆಸರೆ ಹನುಮಂತ ಎನ್ನುವುದು ಪ್ರತೀಕವಾಗಿದೆ. ಹಿಂದೂಗಳ ಆರಾಧ್ಯದೈವಗಳ ಪಟ್ಟಿಯಲ್ಲಿರುವ ಹನುಮಂತ ತನ್ನ ವಿಚಿತ್ರ ವಿರಾಟ ಆಕಾರ ಹಾಗೂ ಕೋತಿಯತ್ವದಿಂದಾಗಿ ಜನರಲ್ಲಿ ಭಯ ಭಕ್ತಿ ಹಾಗೂ ವಿನೋದವನ್ನು ಹುಟ್ಟಿಸುವಂತಹ ದೇವರಾಗಿದ್ದಾನೆ. ನಮ್ಮ ಹನುಮನನ್ನು ಕೇಂದ್ರವಸ್ತುವಾಗಿಟ್ಟುಕೊಂಡು ಪ್ರಸನ್ನರವರು ಮಹಿಮಾಪುರ ಎನ್ನುವ ನಾಟಕ ಬರೆದು ಧಾರ್ಮಿಕ ವ್ಯವಸ್ಥೆಯ ಬೂಟಾಟಿಕೆಯನ್ನು ಬಯಲು ಮಾಡಿದ್ದರು. ಈಗ ಹನುಮಂತ ಹಾಲಗೇರಿಯವರು ಊರು ಸುಟ್ಟರೂ ಹನಮಪ್ಪ ಹೊರಗ ಎನ್ನುವ ತಮ್ಮದೇ ಕಥೆ ಆಧರಿಸಿದ ನಗೆನಾಟಕವನ್ನು ರಚಿಸಿ, ಹನುಮದೇವರನ್ನೇ ಕೇಂದ್ರವಾಗಿರಿಸಿಕೊಂಡು ಹಳ್ಳಿಯ ಅರಾಜಕಾರಣವನ್ನು ಅನಾವರಣಗೊಳಿಸಿದ್ದಾರೆ
ಆಟ-ಮಾಟ ಎನ್ನುವ ಧಾರವಾಡ ಮೂಲದ ಅರೆರೆಪರ್ಟರಿ ತಂಡದ ಕಲಾವಿದರು ಯತೀಶ ಕೊಳ್ಳೇಗಾಲರ ನಿರ್ದೇಶನದಲ್ಲಿ ಊರು ಸುಟ್ಟರೂ..... ನಾಟಕವನ್ನು ಸಿದ್ದಪಡಿಸಿದ್ದು ಸಂಸ ಪತ್ರಿಕೆ ಆಯೋಜಿಸಿದ್ದ ಮೂರು ದಿನಗಳ ತಳ ಸಂಸ್ಕೃತಿಯ ನೆಲೆ ನಾಟಕೋತ್ಸವದಲ್ಲಿ 2014 ಎಪ್ರಿಲ್ 11ರಂದು ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿರುವ ಸಂಸ ಬಯಲು ಮಂದಿರದಲ್ಲಿ ಪ್ರದರ್ಶನಗೊಂಡು ನೋಡುಗರನ್ನು ನಗೆಗಡಲಲ್ಲಿ ತೇಲಿಸಿತು.
  
ನಾಟಕದ ಕಥಾವಸ್ತು ಹೀಗಿದೆ. ವಜ್ರಮಟ್ಟಿ ಮತ್ತು ಧರಗಟ್ಟಿ ಎನ್ನುವ ಎರಡು ಅಕ್ಕಪಕ್ಕದ ಹಳ್ಳಿಗಳು. ಧರಗಟ್ಟಿಯ ಹನುಮಂತ ದೇವರ ವಿಗ್ರಹ ಮೂಲದಲ್ಲಿ ತಮ್ಮ ಊರಿನದೆಂದು ಆರೋಪಿಸಿದ ಕೆಲವರು ರಾತ್ರೋ ರಾತ್ರಿ ವಜ್ರಮಟ್ಟಿಯಿಂದ ವಿಗ್ರಹ ಕದ್ದುತಂದು ತಮ್ಮೂರ ಗುಡಿಯಲ್ಲಿ ಪ್ರತಿಷ್ಟಾಪಿಸುತ್ತಾರೆ. ಇದರಿಂದಾಗಿ ಎರಡೂ ಊರಿನಲ್ಲಿ ವೈಷಮ್ಯದ ಬೆಂಕಿ ಹೊತ್ತಿಕೊಳ್ಳುತ್ತದೆ. ಕೊನೆಗೆ ಪೊಲೀಸ ಕಂಪ್ಲೇಂಟ್ ಆಗಿ ವಿಗ್ರಹವನ್ನು ಪೊಲೀಸ್ ಸ್ಟೇಶನ್ನಲ್ಲಿ ಇಡಲಾಗುತ್ತದೆ. ಆಮೇಲೆ ವಿವಾದ ಕೋರ್ಟ ಮೆಟ್ಟಲೇರಿ ಹನುಮಪ್ಪ ಕೋರ್ಟ ಸುಪರ್ಧಿಗೆ ಒಳಗಾಗುತ್ತದೆ. ಎರಡೂ ಹಳ್ಳಿಯವರು ಪ್ರತಿಷ್ಟೆಯ ಪೈಪೋಟಿಗೆ ಬಿದ್ದು ತಮ್ಮಲ್ಲಿ ಇದ್ದ ನಗನಾಣ್ಯ ಆಸ್ತಿಗಳನ್ನೆಲ್ಲಾ ಮಾರಿ ವಕೀಲರನ್ನಿಟ್ಟು ಕೇಸ್ ನಡೆಸಿ ಪಾಪರ್ ಆಗುತ್ತಾರೆ. 15 ವರ್ಷ ಕೇಸ್ ನಡೆದು ಕೊನೆಗೆ ವಜ್ರಮಟ್ಟಿ ಊರವರಿಗೆ ಜಯ ಸಿಗುತ್ತದೆ. ಆದರೆ ಅಷ್ಪೊತ್ತಿಗೆ ಬರ ಬಂದು ಎರಡೂ ಊರವರೆಲ್ಲಾ ದುಡಿಯಲೆಂದು ಗುಳೆ ಹೋಗತೊಡಗಿರುತ್ತಾರೆ. ಯಾವ ಹನುಮಂತನ ವಿಗ್ರಹಕ್ಕಾಗಿ ತಮ್ಮ ಪ್ರತಿಷ್ಟೆ ಪಣಕ್ಕೊಡ್ಡಿದ ಜನ ಎಲ್ಲವನ್ನೂ ಕಳೆದುಕೊಂಡರೋ ಅಂತವರ ಊರಿಗೆ ವಿಗ್ರಹ ಬಂದಾಗ ಯಾರಿಗೂ ಬೇಡವಾಗಿ ಹನುಮಂತ ಬೀದಿಪಾಲಾಗುತ್ತಾನೆ. ಇಲ್ಲಿಗೆ ನಾಟಕ ಮುಗಿಯುತ್ತದೆ. ಆದರೆ ಅದು ಹುಟ್ಟುಹಾಕಿದ ನಗು ನೋಡುಗರಿಗೆ ಮುದನೀಡುತ್ತದೆ.
ಇಡೀ ನಾಟಕ ನವೀರಾದ ಹಾಸ್ಯದೊಂದಿಗೆ ಮನುಷ್ಯನೊಳಗಿನ ಸ್ವಾರ್ಥ, ದ್ವೇಷ, ಮೌಡ್ಯತೆ ಹಾಗೂ ಹುಂಬುತನಗಳನ್ನು ತೆರೆದಿಡುತ್ತದೆ. ಅದು ಹೇಗೆ ಸ್ವಪ್ರತಿಷ್ಟೆಗೆ ಬಿದ್ದು ಜನ ಹಾಳಾಗುತ್ತಾರೆ ಎನ್ನುವುದರ ಪ್ರಾತ್ಯಕ್ಷಿಕತೆ ನಾಟಕದಲ್ಲಿದೆ. ಇಲ್ಲಿ ಹನುಮಂತ ದೇವರು ಕೇವಲ ನೆಪವಾಗಿದ್ದರೂ ಆತನ ಹೆಸರಲ್ಲಿ ಮನುಷ್ಯರು ಮಾಡುವ ರಾಜಕೀಯ ಆಯಾಮಗಳು ನಾಟಕದಲ್ಲಿ ಬಿಚ್ಚಿಕೊಳ್ಳುತ್ತಾ ಸಾಗುತ್ತದೆ. ಪುರೋಹಿತಶಾಹಿ ಪೂಜಾರಿಗಳ ತಂತ್ರ, ಹಳ್ಳಿಗರ ಜಗಳದಲ್ಲಿ ಮೂಗು ತೂರಿಸುವ ರಾಜಕಾರಣಿಗಳ ಕುತಂತ್ರ, ಯಾವುದೋ ಒಂದು ಘಟನೆಗೆ ಇಲ್ಲದ್ದನ್ನು ಆರೋಪಿಸಿ ಬ್ರೇಕಿಂಗ್ ನ್ಯೂಸ್ ಮಾಡುವ ಪತ್ರಿಕೆ ಹಾಗೂ ಚಾನೆಲ್ಗಳ ಹೊನಗೇಡಿತನ,  ಸಮಸ್ಯೆಯನ್ನು ಶಮನಗೊಳಿಸುವ ಬದಲು ಕ್ಲಿಷ್ಟಗೊಳಿಸುವ ಪೊಲೀಸರ ಬೇಜವಾಬ್ದಾರಿತನ, ನ್ಯಾಯಾಲಯದ ವಿಳಂಬ ನೀತಿ ಮತ್ತು ನ್ಯಾಯವಾಧಿಗಳ ಧನದಾಹಗಳನ್ನು ಲೇವಡಿ ಮಾಡುವಲ್ಲಿ ನಾಟಕ ಯಶಸ್ವಿಯಾಗಿದೆ.   ನಾಟಕ ನೋಡಿಸಿಕೊಂಡು ಹೋಗುವುದು ಅದರಲ್ಲಿ ಬಳಸಲಾದ ಉತ್ತರ ಕರ್ನಾಟಕದ ಭಾಷಾ ಸೊಗಡು ಮತ್ತು ಅದರಿಂದ ಹೊರಹೊಮ್ಮುವ ನಗೆಯಿಂದಾಗಿ. ನಾಟಕದಲ್ಲಿ ಹರಿಕತೆ ಮಾದರಿಯ ಆರಂಭ ಹಾಗೂ ತತ್ವ ಪದಗಳನ್ನು ಮತ್ತು ಹಳ್ಳಿಗಳ ಭಜನಾ ಶೈಲಿಯ ಹಾಡುಗಳನ್ನು ಬಳಸಿದ್ದು ನಾಟಕದ ಸೊಗಸನ್ನು ಹೆಚ್ಚಿಸಿದೆ
ಮನುಷ್ಯರು ತಮ್ಮ ಸ್ವಯಂಕೃತ ಅಪರಾಧದಿಂದಾಗಿ ಮಾಡಿಕೊಳ್ಳಬಹುದಾದ ಎಲ್ಲಾ ಅವಘಟಗಳಿಗೆ ದೇವರನ್ನೇ ಆರೋಪಿಸುವುದು ನಮ್ಮ ಸಮಾಜದ ವೈಚಿತ್ರ್ಯವಾಗಿದೆ.   ಇಲ್ಲಿ ದೇವರು ಎನ್ನುವವ ಕೇವಲ ತೋರುಂಬ ಲಾಭ ಎನ್ನುವ ಪರಮಸತ್ಯವನ್ನು ನಾಟಕದಲ್ಲಿ ತೋರಿಸಲಾಗಿದೆ. ಜನ ತಮ್ಮ ಒಣಪ್ರತಿಷ್ಟೆಗಾಗಿ ಹನುಮವಿಗ್ರಹ ಬೇಕೆಂದು ಕೋರ್ಟಿಗೆ ಹೋಗಿ ಬಡಿದಾಡಿ ಅತಃಪತನ ಹೊಂದಿ ಕೊನೆಗೆ ದೇವರನ್ನೇ ಅದಕ್ಕೆ ಕಾರಣವಾಗಿಸಿ ವಿಗ್ರಹವನ್ನೇ ತಿರಸ್ಕರಿಸುವ ರೀತಿಯನ್ನು ಬಲು ವಿಡಂಬಣಾತ್ಮಕವಾಗಿ ಊರು ಸುಟ್ಟರೂ .... ನಾಟಕದಲ್ಲಿ ತೋರಿಸಲಾಗಿದೆ. ಸಮಾಜದ ಗುನಾವಗುಣಗಳನ್ನು ವಿಶ್ಲೇಷಿಸುವ ನಾಟಕದ ಆಶಯ ವಿಶಿಷ್ಟವಾಗಿದೆಯಾದರೂ ಆಶಯವನ್ನು ಹೇಳುವ ರೀತಿಯಲ್ಲಿ ಹಲವಾರು ಸಮಸ್ಯೆಗಳಿವೆ. ರಂಗಪಠ್ಯದ ಸಂದೇಶವನ್ನು ರಂಗಪ್ರದರ್ಶನ ಸಾಕಾರಗೊಳಸುವಲ್ಲಿ ಇನ್ನೂ ಪರಿಷ್ಕರಣೆಗೊಳಗಾಗಬೇಕಿದೆ.
 
ಇದು ಹಾಸ್ಯನಾಟಕ ಎನ್ನುವುದರಿಂದಲೋ ಏನೋ ನಾಟಕದಲ್ಲಿ ತರ್ಕ ಮಾಯವಾಗಿದೆ. ಗೊಂದಲಗಳೂ ಅತಿಯಾಗಿವೆ. ಜನರನ್ನು ನಗಿಸುವುದನ್ನೇ ಪ್ರಮುಖ ಗುರಿಯಾಗಿರಿಸಿಕೊಂಡಿದ್ದರಿಂದ ನಾಟಕದ ಬಂಧ ಜಾಳುಜಾಳಾದಂತೆನಿಸುತ್ತದೆ. ವಿನೋದವೇ ಇಲ್ಲಿ ಸ್ಥಾಯಿಯಾಗಿ ಮೂಡಿಬಂದಿದ್ದು  ಅಂತಿಮವಾಗಿ ಅದು ಮೂಡಿಸಬೇಕಾದ ವಿಷಾದ ಮಾಯವಾಗಿದೆ. ನಗೆಯ ನಾಗಾಲೋಟದಲ್ಲಿ ನಾಟಕದ ನಿಜವಾದ ಆಶಯ ಮರೆಯಾಗಿದೆ. ನಾಟಕದ ಕೊನೆಗೆ ಪ್ರತಿಷ್ಟೆಗೆ ಬಿದ್ದು ಪ್ರಪಾತಕ್ಕೆ ಬಿದ್ದ ಹಳ್ಳಿ ಜನರ ದಾರುಣ ಬದುಕನ್ನು ಕಟ್ಟಿಕೊಡಬೇಕಾದಾಗ ವಿಷಾದವನ್ನು ಮೂಡಿಸಬೇಕಾಗಿತ್ತು. ಆದರೆ ಪ್ರಮುಖವಾದ ಸನ್ನಿವೇಶವನ್ನು ಕೇವಲ ಒಂದು ಹಾಡಿನ ಮೂಲಕ ಹೇಳಿ ಜನರ ದುರಂತತೆಯನ್ನು ತೇಲಿಸಿದಂತಿದೆ. ನಿರ್ದೇಶಕರಿಗೆ ನಾಟಕದ ಆಶಯಕ್ಕಿಂತ ಅತಿಶಯವೇ ಮಹತ್ವದ್ದಾಗಿದ್ದು ನಾಟಕ ಹಿಡಿತಕ್ಕೆ ಸಿಗದೇ ಚಿತ್ತಬಂದತ್ತ ಹಾಸ್ಯಸವಾರಿ ಓಡಿದಂತಿದೆ.
ನಾಟಕದ ಕ್ಯಾನ್ವಾಸ್ ಎರಡು ಹಳ್ಳಿ ಹಾಗೂ ಒಂದು ಪಟ್ಟಣದಲ್ಲಿ ಆವರಿಸಿಕೊಂಡಿದೆ. ಅನೇಕಾನೇಕ ಪಾತ್ರಗಳು ಬರುತ್ತವೆ. ಆದರೆ ಕೇವಲ ಎಂಟೇ ಜನ ಕಲಾವಿದರು ಸಕಲೆಂಟು ಪಾತ್ರಗಳನ್ನು ಅಭಿನಯಿಸಿದ್ದರಿಂದ ನೋಡುಗರಲ್ಲಿ ಗೊಂದಲವನ್ನುಂಟು ಮಾಡುವಂತಿದೆ. ಊರಿನವರು ಊರಿನಲ್ಲೂ ಇರುತ್ತಾರೆ. ಊರಿನ ಗುಡಿ ಪೂಜಾರಿ ಊರಿನಲ್ಲೂ ಕಾಣಸಿಗುತ್ತಾನೆ. ಹೀಗಾಗಿ ಯಾವ ಪಾತ್ರ ಯಾವ ಊರಿನದು ಎನ್ನುವುದೇ ಕನ್ಪೂಜ್. ಜೊತೆಗೆ ಒಬ್ಬೊಬ್ಬ ನಟ ನಾಲ್ಕೈದು ಪಾತ್ರಗಳನ್ನು ಮಾಡುವುದರಿಂದ ಹಾಗೂ ಮುಖವಿನ್ಯಾಸದಲ್ಲಿ ಯಾವುದೇ ಬದಲಾವಣೆ ಇಲ್ಲದೇ ಇರುವುದರಿಂದ ಪ್ರೇಕ್ಷಕರಲ್ಲಿ ಇನ್ನೂ ಹೆಚ್ಚಿನ ಗೊಂದಲ ಮೂಡುತ್ತದೆ. ಇಡೀ ನಾಟಕದ ಪ್ರದರ್ಶನದ ಪಾರ್ಮ್ಯಾಟ್ ಪಕ್ಕಾ ಬೀದಿ ನಾಟಕವೊಂದನ್ನು ನೋಡಿದಂತಾಯಿತು. ನಟರು ಅಭಿನಯಿಸುವ ರೀತಿಯಲ್ಲಿ ವೃತ್ತಿ ಕಂಪನಿ ಶೈಲಿ ಹಾಗು ಆಧುನಿಕ ನಾಟಕದ ಶೈಲಿಗಳು ಸಮ್ಮಿಶ್ರಗೊಂಡಿದ್ದವು. ಇದನ್ನೊಂದು ನಾಟಕ ಎನ್ನುವುದಕ್ಕಿಂತಲೂ ಸ್ಟ್ಯಾಂಡಅಪ್ ಕಾಮೆಡಿ ಶೋ ಎನ್ನುವುದು ಸರಿ ಎನ್ನಿಸುತ್ತದೆ. ಯಾಕೆಂದರೆ ಯಾವುದೇ ಹೇಳಿಕೊಳ್ಳುವಂತಹ ಸೆಟ್ ಪ್ರಾಪರ್ಟಿಗಳಿಲ್ಲ, ರಂಗವೇದಿಕೆಯ ಆಯಾಮಗಳನ್ನು ಬಳಸಿಕೊಳ್ಳಲಿಲ್ಲ.  ಬೆಳಕಿನ ವಿನ್ಯಾಸದಲ್ಲಿ ವ್ಯತ್ಯಾಸವಿಲ್ಲ. ಹಲವು ಪಾತ್ರಗಳು ಬರುತ್ತವೆ ತಮ್ಮ ಪಂಚ್ ಡೈಲಾಗಗಳನ್ನು ಹೇಳುತ್ತವೆ ಮತ್ತು ಚಿತ್ತ ಬಂದತ್ತ ಹೊರಹೊಗುತ್ತವೆ. ರಂಗಶಿಸ್ತು ಎನ್ನುವುದು ಇಡೀ ನಾಟಕದಲ್ಲಿ ಹುಡುಕಿದರೂ ಸಿಕ್ಕುವುದಿಲ್ಲ
 
ಹಳ್ಳಿ ಜಾತ್ರೆಗಳಲ್ಲಿ ವರ್ಷಕ್ಕೊಮ್ಮೆ ಊರವರೆಲ್ಲಾ ಸೇರಿ ಒಂದು ನಾಟಕವನ್ನು ಕಲಿತು ಆಡುತ್ತಾರಲ್ಲಾ ಹಾಗೆಯೇ ನಾಟಕ ಕೂಡಾ ಮೂಡಿ ಬಂದಿದೆ. ಗ್ರಾಮೀಣ ಕಲಾವಿದರಾಗಿದ್ದರೆ ಅಥವಾ ನಾಟಕಕ್ಕೆ ಹೊಸದಾಗಿ ಬಂದ ನಟ-ನಿರ್ದೇಶಕರಾಗಿದ್ದರೆ ಪರವಾಗಿಲ್ಲ ಎನ್ನಬಹುದಾಗಿತ್ತು, ಆದರೆ ನಾಟಕದಲ್ಲಿರುವ ಎಲ್ಲಾ ನಟರೂ ರಂಗಭೂಮಿಯಲ್ಲಿ ಪಳಗಿದವರು. ನೀನಾಸಂ, ಶಿವಸಂಚಾರ ಹಾಗೂ ಎನ್ಎಸ್ಡಿ ಬೆಂಗಳೂರು ಚಾಪ್ಟರ್ಗಳಲ್ಲಿ ತರಬೇತಿ ಪಡೆದು ರೆಪರ್ಟರಿ ಪ್ರೊಡಕ್ಷನ್ಗಳಲ್ಲಿ ಅನುಭವ ಹೊಂದಿದವರು. ಇಂತಹ ಅನುಭವಸ್ತ ನಟರಿಂದ ಶಿಸ್ತುಬದ್ದ ನಾಟಕವನ್ನು ಬೆಂಗಳೂರಿನ ಪ್ರೇಕ್ಷಕರು ನಿರೀಕ್ಷಿಸಿದ್ದರು. ಆದರೆ ನಿರೀಕ್ಷೆ ನಿರಾಸೆಯಲ್ಲ ಬದಲಾಗಿ ಕೇವಲ ದಕ್ಕಿದಷ್ಟು ನಕ್ಕು ಖುಷಿಪಟ್ಟಿದ್ದಷ್ಟೇ ಸಾರ್ಥಕವಾಯಿತು. ಕನಿಷ್ಟ ಆಗಮನ ನಿರ್ಗಮನಗಳ ಅರಿವಾದರೂ ಬೇಕಾಗಿತ್ತು. ನಟರಿಗೆ ಸನ್ನಿವೇಶ ಹಾಗೂ ಸೆಟ್ ಪರಿಕಲ್ಪನೆ ಇರಬೇಕಾಗಿತ್ತು. ಹೋಗಲಿ ಕಂಟಿನ್ಯೂಟಿ ಸೆನ್ಸ ಆದರೂ ಬೇಕಾಗಿತ್ತು. ಹಳ್ಳಿಯಿಂದ ಜನರನ್ನು ಪೊಲೀಸರು ಇದ್ದಕ್ಕಿದ್ದಂತೆ ಬಂಧಿಸಿ ಜೀಪಿನಲ್ಲಿ ಹಾಕಿಕೊಂಡು ಬರುತ್ತಾರೆ. ಗುಂಪಲ್ಲಿ ಬರಿಗೈಯಲ್ಲಿ ಬಂದ ಪೂಜಾರಿಯ ಕೈಗೆ  ಠಾಣೆಗೆ ಬರುವುದರೊಳಗೆ ಹಾರ್ಮೋನಿಯಂ ಪೆಟ್ಟಿಗೆ ಬಂದಿರುತ್ತದೆ. ಹೋಗಲಿ ದಾರಿಯಲ್ಲಿ ತಂದಿರಬಹುದು ಎಂದುಕೊಳ್ಳೋಣ. ಪೆಟ್ಟಿಗೆ ಸಮೇತ ಪೂಜಾರಿಯನ್ನು ಠಾಣೆಯ ಒಳಗೆ ಬಂಧಿಸಲಾಗುತ್ತದೆ. ಅದು ಹೇಗೆ ಎಲ್ಲರೂ ಬಿಡುಗಡೆಗೊಂಡಾಗ ಬರಿಕೈಯಲ್ಲಿ ಪೂಜಾರಿ ಸಮೇತ ಎಲ್ಲರೂ ಹೊರಹೋಗುತ್ತಾರೆ. ಆದರೆ ಅದೇ ಪೂಜಾರಿ ಮತ್ತೊಮ್ಮೆ ಪೊಲೀಸ್ ಠಾಣೆಗೆ ಬಂದಾಗ ಕೈಯಲ್ಲಿ ಹಾರಮೋನಿಯಂ ಪೆಟ್ಟಿಗೆ ಹಿಡಿದುಕೊಂಡೇ ಬರುತ್ತಾರೆ. ರೀತಿಯ ಹಲವಾರು ಕಂಟಿನ್ಯೂಟಿ ಸಮಸ್ಯೆಗಳು ನಾಟಕದಲ್ಲಿವೆ.
  
ಕೇವಲ ಜನ ನಗುತ್ತಾರೆ ಎನ್ನುವುದು ನಾಟಕದ ಯಶಸ್ಸಿನ ಸಂಕೇತವಲ್ಲ. ಒಂದು ನಾಟಕದಲ್ಲಿ ರಂಗಶಿಸ್ತು ಇಲ್ಲದೇ ಹೋದರೆ ಅದು ಪರಿಪೂರ್ಣ ನಾಟಕವಾಗಲಾರದು. ಜನರನ್ನು ನಗಿಸುವುದಕ್ಕೆಂದೇ ನಾಟಕದಲ್ಲಿ ಅಪರೂಪಕ್ಕೊಮ್ಮೆ ಡಬಲ್ ಮೀನಿಂಗ್ ಡೈಲಾಗ್ ಕೂಡಾ ಬಳಸಲಾಗಿದೆ. ಹಳೆಯ ಜೋಕ್ಸಗಳಿವೆ ಜೊತೆಗೆ ಉತ್ತರ ಕರ್ನಾಟಕದ ದೇಸಿ ಬೈಗಳುಗಳು ಪುಂಕಾನುಪುಂಕವಾಗಿವೆ. ಇನ್ನೇನು ಬೇಕು ಬೇರೆ ಕಾರಣ ನಗು ಉಕ್ಕಿಸಲು. ಹಿಂದೆ ನಾಟಕದ ಪರದೆ ಮಾದರಿಯಲ್ಲಿ ಬ್ಯಾಕ್ ಡ್ರಾಪ್ ಹಾಕಲಾಗಿದೆ. ಅದರ ಎಡ ಬಲಕ್ಕೆ ಜನರ ಗುಂಪು ನಗುವ ಕಾರ್ಟೂನ್ ಚಿತ್ರಗಳನ್ನು ಬಿಡಿಸಲಾಗಿದೆ. ಅರ್ಧ ಭಾಗ ತೆರೆದಿದ್ದರೆ ಇನ್ನರ್ಧ ಭಾಗವನ್ನು  ನಾಟಕದಾದ್ಯಂತ ಬಿಳಿ ಬಟ್ಟೆಯಿಂದ ಮುಚ್ಚಲಾಗಿದೆ. ಇದೆಲ್ಲ ಅನಗತ್ಯವಾಗಿತ್ತು. ಇರುವ ಬ್ಯಾಕ್ಡ್ರಾಪನ್ನೂ ಸಹ ಸಮರ್ಪಕವಾಗಿ ಬಳಸದೆ ನಾಟಕದಲ್ಲಿ ಆಭಾಸವನ್ನು ಸೃಷ್ಟಿಸಲಾಯಿತು. ನೇರವಾಗಿ ಮುಖಮಾಡಿದ ಹನುಮಂತನನ್ನು   ನಾಟಕದಲ್ಲಿ ಮಾತ್ರ ಕಾಣಲು ಸಾಧ್ಯ. ಬಹುತೇಕ ಹಳ್ಳಿಗಳಲ್ಲಿ ಹನುಮಂತ ದೇವರ ಮುಖ ಯಾವಾಗಲೂ ಎಡಕ್ಕೆ ಇಲ್ಲವೇ ಬಲಕ್ಕೆ ತಿರುಗಿರುತ್ತದೆ. ನಾಟಕದ ವಿಶೇಷತೆ ನೇರ ಮೂತಿಯ ಹನುಮಪ್ಪ.
 
ಯತೀಶ್ ಕೊಳ್ಳೆಗಾಲ ಉತ್ತಮ ನಟ ಎನ್ನುವುದು ನಾಟಕದಲ್ಲಿ ಅವರು ಮಾಡಿದ ವಿವಿಧ ಪಾತ್ರಗಳ ಅಭಿನಯದಿಂದ ಗೊತ್ತಾಗುತ್ತದೆ. ಆದರೆ ಅವರು ನಿರ್ದೇಶನದ ಪಟ್ಟುಗಳನ್ನು ಇನ್ನೂ ರೂಢಿಸಿಕೊಳ್ಳಬೇಕಿದೆ. ಬರೀ ಮಾತಿನ ಮೂಲಕ ನಾಟಕ ಕಟ್ಟದೇ ವಿವಿಧ ರಂಗ ಆಯಾಮಗಳನ್ನು ಸಮರ್ಥವಾಗಿ ಬಳಸಿಕೊಳ್ಳುವುದನ್ನು ಕಲಿಯಬೇಕಿದೆ. ರಂಗಶಿಸ್ತು ಹಾಗೂ ಕಂಟಿನ್ಯೂಟಿಗಳತ್ತ ಗಮನಹರಿಸಬೇಕಿದೆ. ಪಾತ್ರಪೋಷಣೆಗಳನ್ನು ಸಮರ್ಥವಾಗಿ ನಿಭಾಯಿಸಬೇಕಿದೆ. ಬ್ಲಾಕಿಂಗ್ ಮತ್ತು ಮೂವಮೆಂಟ್ಗಳಲ್ಲಿ ಇನ್ನೂ ಶ್ರಮಿಸಬೇಕಿದೆ. ಯುವತಿಯರಿಗೆ ಗಂಡು ವೇಷತೊಡಿಸಿ ಗಂಡಸಿನ ಪಾತ್ರ ಹಂಚಿಕೆ ಮಾಡಿದಾಗ ಕನಿಷ್ಟ ಆಕೆಯ ಮೂಗುನತ್ತನ್ನು ಬಿಚ್ಚಿಡಿಸಬೇಕು ಎನ್ನುವ ಸಾಮಾನ್ಯ ತಿಳುವಳಿಕೆ ಬೇಕಾಗುತ್ತದೆ. ಯಾಕೆಂದರೆ ಜೋಗಪ್ಪಗಳನ್ನು ಹೊರತು ಪಡಿಸಿ ಯಾವುದೇ ಗಂಡಸು ಮೂಗುಬೊಟ್ಟು ತೊಟ್ಟು ಓಡಾಡುವುದು ರೂಡಿಗತವಾದದ್ದಲ್ಲ. ಕಾಸ್ಟೂಮ್ಸಗಳ ಆಯ್ಕೆಯಲ್ಲೂ ನಿರ್ದೇಶಕರು ಗಮನಕೊಡಬೇಕಾಗಿದೆ. ಉತ್ತರ ಕರ್ನಾಟಕದ ಹಳ್ಳಿಯಲ್ಲಿ ಅನಕ್ಷರಸ್ತರು ಪೈಜಾಮ ಹಾಕಿಕೊಳ್ಳುವುದು, ಪೂಜಾರಿ ನಾಟಕದಾದ್ಯಂತ ಬಿಳಿ ಲುಂಗಿ ತೊಟ್ಟಿರುವುದು, ಕೆಲವರಿಗೆ ದೋತರವನ್ನೂ ಸರಿಯಾಗಿ ಉಟ್ಟುಕೊಳ್ಳಲೂ ಬಾರದಿರುವುದು, ಪೊಲೀಸ್ ಡ್ರೆಸ್ನಲ್ಲಿ ವಾಸ್ತವತೆ ಇಲ್ಲದೇ ಇರುವುದು, ಬರ್ಮುಡಾದಂತಹ ಮುಕ್ಕಾಲು ಪ್ಯಾಂಟ್ಗಳನ್ನು ತೊಡಿಸಿರುವುದು... ಮುಂತಾದವು ನಾಟಕದ ಪ್ರಾದೇಶಿಕತೆ ಆಧರಿಸಿದ ಪಾತ್ರಗಳನ್ನು ಕಟ್ಟಿಕೊಡುವಲ್ಲಿ ವ್ಯತಿರಿಕ್ತವೆನಿಸುತ್ತವೆ. ಬಹುಷಃ ನಾಟಕದ ನಿರ್ದೇಶಕ ಕೊಳ್ಳೆಗಾಲದವರಾಗಿದ್ದರಿಂದ ಉತ್ತರ ಕರ್ನಾಟಕದ ಹಳ್ಳಿಗಳ ಸಂಸ್ಕೃತಿಯ ಅರಿವು ಪೂರ್ಣಪ್ರಮಾಣದಲ್ಲಿ ಇಲ್ಲವಾಗಿದೆ.
  
ನಾಟಕದ ಪಾತ್ರದಾರಿಗಳಲ್ಲಿ ಲವಲವಿಕೆ ಇದೆ. ಪೂಜಾರಿ ಹಾಗೂ ಭಾಗವತನಾಗಿ ಧನಂಜಯ ಮತ್ತು ಚೇರಮನ್ ಹಾಗೂ ಹನುಮನಾಗಿ ಮಾರಪ್ಪ ಬೆಜ್ಜಿಹಳ್ಳಿ ಉತ್ತಮವಾಗಿ ಅಭಿನಯಿಸಿದ್ದಾರೆ. ಪಿಎಸ್ಐ ಹಾಗು ಹುಚ್ಚ ಪಾತ್ರದಲ್ಲಿ ಯತೀಶ್ ತಮ್ಮ ಓವರ್ ಆಕ್ಟಿಂಗ್ ಶೈಲಿಯಿಂದಾಗಿ ಗಮನಸೆಳೆದಿದ್ದಾರೆ. ಎಂಎಲ್ಎ ಹಾಗೂ ಪೊಲೀಸ್ ಪೇದೆಯಾಗಿ ಅಭಿನಯಿಸಿದ ಮಹದೇವ್ ಹಡಪದ ತಮ್ಮ ವಿಶಿಷ್ಟ ವೃತ್ತಿ ಕಂಪನಿ ನಾಟಕದ ನಟನಾ ಶೈಲಿಯಿಂದಾಗಿ ಜನರನ್ನು  ನಕ್ಕು ನಗಿಸುತ್ತಾರೆ. ರೇಖಾ ಹೊಂಗಲ್ ಮತ್ತು ಗೀತಾ ಇಬ್ಬರೂ ಯುವತಿಯರು ನಾಟಕದ ಗಂಡು ಹಾಗೂ ಹೆಣ್ಣು ಎರಡೂ ರೀತಿಯ ಪಾತ್ರಗಳಲ್ಲಿ ಸೊಗಸಾಗಿ ನಟಿಸಿದ್ದಾರೆ. ಎಲ್ಲಾ ನಟರ ಟೈಂ ಸೆನ್ಸ ಹಾಗೂ ಪಂಚ್ ಡೈಲಾಗ್ ಡೆಲಿವರಿ ಚೆನ್ನಾಗಿ ವರ್ಕಔಟ್ ಆಗಿದೆ. ಆದರೆ ನಟರಿಗೆ ತಮ್ಮ ನಟನೆಯಲ್ಲಿದ್ದಷ್ಟೇ ಶ್ರದ್ದೆ ರಂಗತಂತ್ರಗಳ ಬಳಕೆಯಲ್ಲೂ ಇದ್ದರೆ ನಾಟಕ ಇನ್ನೂ ಸೊಗಸಾಗಿ ಮೂಡಿಬರಬಹುದಾಗಿತ್ತು. ಮೂವತ್ತರಷ್ಟು ಪಾತ್ರಗಳನ್ನು  ಆರೇ ಜನ ಕಲಾವಿದರು ಹಂಚಿಕೊಂಡು ಅಭಿನಯಿಸುವುದು ಸವಾಲಿನ ಕೆಲಸ. ಸವಾಲನ್ನು ಮೆಟ್ಟಿನಿಲ್ಲಲು ಇನ್ನೂ ಎಲ್ಲರೂ ಪ್ರಯತ್ನಿಸಬೇಕಿದೆ. ಐದೈದು ನಿಮಿಷಕ್ಕು ಪ್ರತಿ ವ್ಯಕ್ತಿಯ ಪಾತ್ರಗಳು ಬದಲಾಗುತ್ತಿರುವುದರಿಂದ ಪಾತ್ರದೊಳಗೆ ಯಾವುದೆ ಕಲಾವಿದನಿಗೆ ಪ್ರವೇಶಿಸಲು ಅವಕಾಶವೇ ಇಲ್ಲವಾಯಿತು. ಆಂಗಿಕ ಹಾಗೂ ವಾಚಿಕಾಭಿನಯಕ್ಕಿರುವ ಅವಕಾಶ ಸಾತ್ವಿಕಾಭಿನಯಕ್ಕೆ ಇಲ್ಲದೇ ಹೋಯಿತು. ಆಹಾರ್ಯಾಭಿನವಂತೂ ಅದ್ವಾನವಾಗಿತ್ತು.
ಸಾಮಾಜಿಕ ಅವ್ಯವಸ್ಥೆಯನ್ನು ಹಾಸ್ಯದ ಮೂಲಕ ಲೇವಡಿ ಮಾಡುವ ನಾಟಕಕಾರನ ಉದ್ದೇಶ ಉತ್ತಮವಾದದ್ದಾಗಿದೆ. ಆದರೆ ಅದು ನಾಟಕ ಪ್ರದರ್ಶನದಲ್ಲಿ ಮೂಡಿ ಬರದಿರುವುದೇ ಕೊರತೆಯಾಗಿದೆ. ಇಡೀ ನಾಟಕದ ಅನಗತ್ಯ ಭಾಗವನ್ನು ಎಡಿಟ್ ಮಾಡಿದರೆ, ಅನಗತ್ಯ ಹಾಗೂ ಪುನರಾವರ್ತನೆಗೊಳ್ಳುವ ಬೈಗುಳಗಳನ್ನು ನಿಯಂತ್ರಿಸಿದರೆ, ನಾಟಕದಾದ್ಯಂತ ರಂಗಶಿಸ್ತನ್ನು ರೂಢಿಸಿಕೊಂಡಿದ್ದರೆ. ಬೀದಿ ನಾಟಕದ ಮಾದರಿಯಲ್ಲಿ ಪ್ರದರ್ಶಿಸಲಾದ ನಾಟಕದ ಫಾರ್ಮ್ಯಾಟನ್ನು ಪ್ರಿಸೀನಿಯಂ ನಾಟಕ ಶೈಲಿಗೆ ಬದಲಾಯಿಸಿದರೆ. ನಾಟಕದಲ್ಲಿ ಬರುವ ಸನ್ನಿವೇಶಗಳಿಗೆ ತಾರ್ಕಿಕ ಲಿಂಕ್ಗಳನ್ನು ಒದಗಿಸಿದರೆ, ರಂಗತಂತ್ರಗಳನ್ನು ಸರಿಯಾಗಿ ಬಳಸಿಕೊಂಡರೆ, ಗೊಂದಲಕಾರಿಯಾದ ಹಿನ್ನೆಲೆ ಬ್ಯಾಕ್ ಡ್ರಾಪ್ನಲ್ಲಿ ಸೂಕ್ತ ಮಾರ್ಪಾಡನ್ನು ಮಾಡಿಕೊಂಡರೆ, ನಾಟಕದ ಕ್ಲೈಮ್ಯಾಕ್ಸಿನಲ್ಲಿ ಹಳ್ಳಿಗರ ದುರಂತತೆಯನ್ನು ಸಾರುವಂತಹ ಹಾಗೂ ಮೂಲಕ ವಿಷಾದವನ್ನು ಹುಟ್ಟಿಸುವಂತಹ ದೃಶ್ಯವನ್ನು ಸೃಷ್ಟಿಸಿದ್ದರೆ... ನಾಟಕ ಅತ್ಯುತ್ತಮ ನಾಟಕವಾಗಬಹುದಾದ ಎಲ್ಲಾ ಸಾಧ್ಯತೆಗಳಿವೆ. ಇವುಗಳತ್ತ ನಿರ್ದೇಶಕರು ಗಮನಕೊಡುವುದು ಉತ್ತಮ
ನಿರ್ದೇಶಕ ಯತೀಶ್
ಏನೇ ಆದರೂ ಆರು ಜನ ಯುವಕರು ಹಾಗೂ ಇಬ್ಬರು ಯುವತಿಯರ ರಂಗ ಪ್ರಯತ್ನ ಮಾತ್ರ ಎಲ್ಲರೂ ಮೆಚ್ಚುವಂತಹುದು. ನಾಡಿನ ಬೇರೆ ಬೇರೆ ರೆಪರ್ಟರಿಗಳಿಂದ ಬಂದ ಕಲಾವಿದರುಗಳು, ಟಿವಿ ನಟನೆಯ ಆಕರ್ಷನೆಯಲ್ಲಿ ಕಳೆದು ಹೋಗದೆ ಅಥವಾ ಅವಕಾಶಗಳು ಸಿಗಲಿಲ್ಲವೆಂದು ತಮ್ಮ ಮೂಲ ವೃತ್ತಿಗೆ ಮರಳದೇ ಆಟಾ-ಮಾಟ ಎನ್ನುವ ವ್ಯವಸ್ಥಿತ ತಂಡವೊಂದನ್ನು ೨೦೦೭ ರಲ್ಲಿ ಧಾರವಾಡದಲ್ಲಿ ಹುಟ್ಟುಹಾಕಿ ನಾಟಕ ಪ್ರದರ್ಶನಗಳನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಯಾವುದೇ ಮಠದ ಸಂಪನ್ಮೂಲಗಳಿಲ್ಲದೇ, ಯಾವುದೇ ಸ್ಥಾಪಿತ ಸಂಘಟನೆಯಾಗಿರದೇ, ಸರಕಾರ ಅಥವಾ ಸರಕಾರೇತರ ಸಂಸ್ಥೆಗಳ ಆರ್ಥಿಕ ಬೆಂಬಲವಿಲ್ಲದೇ, ಯಾವುದೇ ಫಾರೆನ್ ಫಂಡ್ಗಳ ಹಂಗಿಲ್ಲದೇ ಒಂದು ರೆಪರ್ಟರಿ ಮಾದರಿಯ ತಂಡವನ್ನು ಕೇವಲ ತಮ್ಮ ಇಚ್ಚಾಸಕ್ತಿ ಹಾಗೂ ರಂಗಪ್ರೀತಿಯಿಂದ ಮುನ್ನೆಡೆಸಿಕೊಂಡು ಬರುತ್ತಿರುವ ಎಂಟೂ ಜನ ಕಲಾವಿದರಿಗೆ ರಂಗನಮನ. ಕೇವಲ ರಂಗವೃತ್ತಿಯಿಂದಾಗಿ ವೃತ್ತಿಪರರೆನ್ನಿಸಿಕೊಳ್ಳದೇ ತಮ್ಮ ನಾಟಕಗಳಲ್ಲಿ ವೃತ್ತಿಪರತೆಯನ್ನು ರೂಢಿಸಿಕೊಂಡು ಅತ್ಯುತ್ತಮ ನಾಟಕಗಳನ್ನು, ವಿಭಿನ್ನ ಮಾದರಿಯ ರಂಗಪ್ರಯೋಗಗಳನ್ನು ಆಟಾ-ಮಾಟ ತಂಡ ನಿರ್ಮಿಸಿ ಪ್ರದರ್ಶಿಸಲಿ ಎಂದು ಆಶಿಸಬಹುದಾಗಿದೆ. ಇಡೀ ಕರ್ನಾಟಕದ ಜನತೆ ಹಾಗೂ ಸಂಘ ಸಂಸ್ಥೆಗಳು ಯುವಕರ ರಂಗಸಾಹಸಕ್ಕೆ ಪ್ರೋತ್ಸಾಹ ನೀಡಿ ಅವರ ಆಸಕ್ತಿಗೆ ಸಹಕರಿಸಬೇಕಿದೆ. ಅಪಾತ್ರರಿಗೆಲ್ಲಾ ಹಣದಾನ ಮಾಡುವ ಸಂಸ್ಕೃತಿ ಇಲಾಖೆ ಹಾಗೂ ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಇಲಾಖೆಗಳು ಇಂತಹ ನಿಜವಾದ ರಂಗಾಸಕ್ತಿ ಇರುವವರನ್ನು ಗುರುತಿಸಿ ಪೂರ್ಣಪ್ರಮಾಣದಲ್ಲಿ ಹಣ ಸಹಾಯ ಮಾಡಿ ಚಿಕ್ಕಪುಟ್ಟ ರೆಪರ್ಟರಿಗಳನ್ನು ಬೆಂಬಲಿಸಿ ಬೆಳಸಬೇಕಿದೆ. ಆಟಾ-ಮಾಟ ತಂಡದ ರಂಗಕ್ರಿಯೆ ನಿರಂತರವಾಗಿರಲಿ. ಯುವ ಕಲಾವಿದರ ರಂಗಾಸಕ್ತಿ ಎಂದೂ ಬತ್ತದಿರಲಿ ಹಾಗೂ ಆಟಾ-ಮಾಟ ತಂಡ ರಂಗಸಾಧನೆಯ ಉತ್ತುಂಗಕ್ಕೇರಲಿ ಎನ್ನುವುದು ರಂಗಾಸಕ್ತರ ಹಾರೈಕೆಯಾಗಿದೆ.    
                                   -ಶಶಿಕಾಂತ ಯಡಹಳ್ಳಿ  

ಕಾಮೆಂಟ್‌ಗಳಿಲ್ಲ:

ಧಾರವಾಡ ಎಂಬ ಸ್ವಾವಲಂಬನೆಯ ಸಾಂಸ್ಕೃತಿಕ ನಗರ

ಉತ್ತರಕರ್ನಾಟಕದ ಸಾಂಸ್ಕೃತಿಕ ಐಕಾನ್ ಧಾರವಾಡ. ದೇಶದ ಹೆಸರಾಂತ ಸಂಗೀತ ವಿದೂಷಿಗಳು, ಪಂಡಿತರು ಧಾರವಾಡ ನೆಲದಲ್ಲಿ ಸಂಗೀತ ಕಛೇರಿ ಕೊಡಲಿಕ್ಕೆ ಕಾಯುತ್ತಾರೆ ಹೇಗೋ ಹಾಗೆಯೇ ನ...