ಜಾಕನಪಲ್ಲಿ.
ಈ ಹೆಸರನ್ನು ಕೇಳಿದರೆ ಆಂಧ್ರಪ್ರದೇಶದ ಯಾವುದೋ ಊರಿರಬೇಕು ಎಂದು ತಕ್ಷಣಕ್ಕೆ
ಅನಿಸಬಹುದು, ಇಂಥ ಪಲ್ಲಿಗಳು ಬರುವುದು ಆಂಧ್ರದಲ್ಲಿಯೇ. ಆದರೆ ಈ ಜಾಕನಪಲ್ಲಿ ಎಂಬ
ಊರಿರುವುದು ಮಾತ್ರ ನಮ್ಮದೇ ರಾಜ್ಯದ ಗುಲ್ಬರ್ಗ ಜಿಲ್ಲೆಯ ಸೇಡಂ ತಾಲೂಕಿನಲ್ಲಿ. ದಿನಕ್ಕೆ
ಒಂದು ಬಸ್ಸೂ ಸರಿಯಾಗಿ ಬಂದು ಹೋಗದ ಈ ಪುಟ್ಟ ಊರ ಜನರ ಮನೆ ಮಾತು ತೆಲುಗು. ಈ ಊರಿಗೆ
ಹೋದರೆ ಆಂಧ್ರದ ಮೊಬೈಲ್ ನೆಟ್‌ವರ್ಕ್ ಸ್ವಾಗತ ಮಾಡುವ ಇಲ್ಲಿ ಕನ್ನಡ ಮಾಧ್ಯಮ ಪ್ರಾಥಮಿಕ
ಮತ್ತು ಪ್ರೌಢಶಾಲೆಯಿದೆ.
ಜನವರಿ ತಿಂಗಳ ಎರಡನೇ ವಾರದಂದು ಗುಲ್ಬರ್ಗಾದಿಂದ ಪ್ರಕಟಗೊಳ್ಳುವ ಎಲ್ಲಾ ಸಣ್ಣ ದೊಡ್ಡ ಪತ್ರಿಕೆಗಳು ಜಾಕನಪಲ್ಲಿಯನ್ನು ಹಾಡಿ ಹೊಗಳಿದವು. ಇದಕ್ಕೆ ಕಾರಣ ಈ ಪುಟ್ಟ ಊರಿನ ಪ್ರೌಢಶಾಲಾ ಮಕ್ಕಳು. ಈ ಬಾರಿಯ ರಾಜ್ಯಮಟ್ಟದ ಪ್ರತಿಭಾ ಕಾರಂಜಿಯ ನಾಟಕ ಸ್ಪರ್ಧೆಯಲ್ಲಿ ಈ ಮಕ್ಕಳು ಪ್ರಥಮ ಸ್ಥಾನ ಗಳಿಸಿ, ಆತಿಥೇಯ ಗುಲ್ಬರ್ಗ ಜಿಲ್ಲೆಗೆ ಏಕೈಕ ಪ್ರಥಮ ಬಹುಮಾನದ ಕಾಣಿಕೆ ನೀಡಿದ್ದರು. ಈ ಮಕ್ಕಳ ಪ್ರತಿಭೆಯ ಹಿಂದೊಂದು ಸ್ಫೂರ್ತಿಯ ಚಿಲುಮೆಯಿದೆ. ಅದು ಜಾಕನಪಲ್ಲಿ ಪ್ರೌಢಶಾಲೆಯ ನಾಟಕದ ಮೇಸ್ಟ್ರು ಅಶೋಕ ತೊಟ್ನಳ್ಳಿ.
ಜಾಕನಪಲ್ಲಿಯ ಪ್ರೌಢಶಾಲೆಗೆ ಯಾರಾದರೂ ಹೋದರೆ ಅವರನ್ನು ಮೊದಲು ಸ್ವಾಗತಿಸುವುದು `ರಂಗ ಶಿಕ್ಷಣ'ದ ಕೊಠಡಿ. ಆ ಕೊಠಡಿಯಲ್ಲಿ ರಂಗಸಜ್ಜಿಕೆಯೊಂದು ನಾಟಕವಾಡುವುದಕ್ಕೆ ಸದಾ ತಯಾರಾಗಿರುತ್ತದೆ. ಮಕ್ಕಳು ಅದನ್ನು ತಮಗೆ ಹೇಗೆ ಬೇಕೋ ಹಾಗೆ ವಿನ್ಯಾಸ ಮಾಡಿಕೊಳ್ಳಲೂಬಹುದು. ಮಕ್ಕಳ ಕಾಡು ಹರಟೆ, ತಮಾಷೆ ರಂಗಸಜ್ಜಿಕೆಯ ಮೇಲೆಯೇ ನಡೆಯುವುದರಿಂದ ಅವುಗಳೇ ರಂಗ ತಾಲೀಮಿನಂತಿರುತ್ತವೆ. ಮಕ್ಕಳು ಅಲ್ಲಿ ಕೋಲಾಟ ಆಡುತ್ತಾರೆ, ಜಾನಪದ ನೃತ್ಯ ಮಾಡುತ್ತಾರೆ, ಹಂತಿಯ ಹಾಡುಗಳನ್ನು ಹೇಳುತ್ತಾರೆ, ಕತೆ ಓದುತ್ತಾರೆ, ಮುಖವಾಡಗಳನ್ನು ಮಾಡುತ್ತಾರೆ, ನಾಟಕಗಳನ್ನು ಕಲಿಯುತ್ತಾರೆ, ಲೈಟಿಂಗ್ ಮಾಡುತ್ತಾರೆ.
ಮಕ್ಕಳು ಸದಾ ಕ್ರಿಯಾತ್ಮಕವಾಗಿ ತೊಡಗುವಂತೆ ಆ ಕೊಠಡಿಯ ಸಜ್ಜುಗೊಳಿಸಿದ್ದಾರೆ ಸ್ವತಃ ಚಿತ್ರ ಕಲಾವಿದರೂ ಆ ರಂಗಶಿಕ್ಷಕ ಅಶೋಕ ತೊಟ್ನಳ್ಳಿ. ಅವರು ಚಿತ್ರಕಲೆಯಲ್ಲಿ ಪದವೀಧರ. ಹೆಗ್ಗೋಡಿನ ನೀನಾಸಂನಲ್ಲಿ ರಂಗಶಿಕ್ಷಣವನ್ನು ಪಡೆದವರು. ನಾಲ್ಕು ವರ್ಷಗಳ ಹಿಂದೆ ನಾಟಕ ಶಿಕ್ಷಕರಾಗಿ ನೇಮಕಗೊಂಡು ಜಾಕನಪಲ್ಲಿಗೆ ಬಂದ ಅಶೋಕ ಶಾಲೆಯ ಮಕ್ಕಳನ್ನಲ್ಲದೆ ಊರವರನ್ನೂ ಕ್ರಿಯಾಶೀಲರನ್ನಾಗಿ ಮಾಡುವತ್ತ ಹೆಜ್ಜೆ ಹಾಕಿದ್ದಾರೆ.
ಮೊದ ಮೊದಲು ಪ್ರತೀ ಶುಕ್ರವಾರ ಸಂಜೆ ಯಾರದೋ ಮನೆಯ ಟಿವಿಯನ್ನು ಬೇಡಿ ತಂದು ಮಕ್ಕಳಿಗೆ ಊರವರಿಗೆ ಸುಪ್ರಸಿದ್ಧ ಸಿನಿಮಾಗಳನ್ನು ತೋರಿಸಿದರಂತೆ. ಸಿನಿಮಾ ನೋಡಲು ಬಂದ ಹಿರಿಯರನ್ನು ಮಕ್ಕಳ ನಾಟಕ ನೋಡಲು ಕರೆದರು. `ತಿಂಗಳ ಸಂಜೆ' ಎಂಬಕಾರ್ಯಕ್ರಮವನ್ನು ರೂಪಿಸಿ ಪ್ರತೀ ತಿಂಗಳು ಊರವರು ಶಾಲೆಗೆ ಬರುವ ಹಾಗೆ ಮಾಡಿದರು. ತಿಂಗಳ ಸಂಜೆಕಾರ್ಯಕ್ರಮದಲ್ಲಿ ಮಕ್ಕಳ ನಾಟಕಗಳು ನಡೆದವು. ನಂತರ ಅದೇ ಊರಿನ ಕಲಾವಿದರು ಹಂತಿಯ ಹಾಡುಗಳನ್ನು ಹಾಡಿದರು. ಪಕ್ಕದೂರಿನ ಲಂಬಾಣಿ ತಾಂಡಾದವರು ಬಂದು ನೃತ್ಯಕಾರ್ಯಕ್ರಮ ನೀಡಿದರು.
ಜಾನಪದ ಕಥೆಗಾರರು ಬಂದು ಕಥೆ ಹೇಳಿದರು. ಊರ ಹೆಂಗಸರು ಬಂದು ಬೀಸುವ ಪದ, ಕುಟ್ಟೋ ಪದಗಳನ್ನು ಹಾಡಿದ್ದಾರೆ. ರೈತರು ಮತ್ತು ಮಕ್ಕಳ ತಂಡಗಳನ್ನಾಗಿ ಮಾಡಿ `ರಸನಿಮಿಷದ ರಸಪ್ರಶ್ನೆ'ಕಾರ್ಯಕ್ರಮ ನಡೆದವು. ಇಪ್ಪತ್ತು ವರ್ಷಗಳಿಂದ ಕೋಲನ್ನೇ ಮುಟ್ಟದ ಊರಿನ ಹಿರಿಯರು `ತಿಂಗಳ ಸಂಜೆ'ಗಾಗಿ ಕೋಲು ಹಿಡಿದರು. ಈ ಎಲ್ಲಾಕಾರ್ಯಕ್ರಮಗಳಲ್ಲಿ ಎಲ್ಲಾ ಜಾತಿಯವರು ಬಂದು, ಭಾಗವಹಿಸಿದ್ದು ವಿಶೇಷ.
ಇಂಥದ್ದೊಂದು ಭೂಮಿಕೆಯನ್ನು ನಿರ್ಮಾಣ ಮಾಡಿಕೊಂಡ ಅಶೋಕ ಅವರು ಕಾರ್ಯಕ್ರಮಗಳನ್ನು ಶಾಲಾ ಆವರಣದಿಂದ ಊರೊಳಕ್ಕೆ ಕೊಂಡುಹೋದರು. ಮಕ್ಕಳಿಗೆ ರಂಗಭೂಮಿಯ ಪಾಠಗಳನ್ನು ಹೇಳಿಕೊಡುತ್ತಲೇ, ಸಮಾಜದ ಓರೆಕೋರೆಗಳಿಗೆ ರಂಗಭೂಮಿ ಹೇಗೆ ಪ್ರತಿಕ್ರಿಯಿಸಬಹುದು ಎಂಬ ಪ್ರಯೋಗದಲ್ಲಿಯೂ ತೊಡಗಿಕೊಂಡರು.
ಹಳ್ಳಿ ಎಂದ ಮೇಲೆ ಅಸಮಾನತೆ, ಭೇದ-ಭಾವ, ಜಾತಿ ತಾರತಮ್ಯ ಇರಲೇಬೇಕೆಂಬುದು ಭಾರತೀಯ ಪರಂಪರೆ ಕಂಡುಕೊಂಡ ಕಟು ಸತ್ಯ. ಜಾಕನಪಲ್ಲಿಯೂ ಇದಕ್ಕೆ ಹೊರತಾಗಿಲ್ಲ. ಜಾತಿಗೊಂದು ಓಣಿ, ಜಾತಿಗೊಂದು ಗುಡಿ. ಒಮ್ಮೆ ಇಲ್ಲಿನ ಮಕ್ಕಳು ಹಣಮದೇವರ ಗುಡಿಯ ಕಟ್ಟೆಯನ್ನೇ ರಂಗಸ್ಥಳವನ್ನಾಗಿ ಮಾಡಿಕೊಂಡು ನಾಟಕವಾಡಲು ಸಿದ್ಧವಾದರು. ಆದರೆ ತಂಡದಲ್ಲಿರುವ ಕೆಳಜಾತಿಯ ಮಕ್ಕಳು ಕಟ್ಟೆ ಹತ್ತಲು ಹಿಂಜರಿದರು.
ಆಗ ತಂಡದ ಇತರೆ ಮಕ್ಕಳು ಮೇಸ್ಟ್ರು ಊರ ಗೌಡರನ್ನು ಕೇಳಿದರು. `ಮಕ್ಕಳಲ್ಲವೇ ಹತ್ತಲಿ ಬಿಡಿ' ಎಂದ ಗೌಡರ ಒಪ್ಪಿಗೆಗೆ ಮಕ್ಕಳು ನಲಿದಾಡಿದರು. ಅಲ್ಲಿ ಜಾತಿ, ಮೈಲಿಗೆಯ ಮಾತೇ ಬರದೆ ಮಕ್ಕಳಷ್ಟೇ ಕಂಡರು. ಗುಡಿಯ ಕಟ್ಟೆಗೆ ಹತ್ತಿದ್ದ ಜಾತಿಯ ಭೂತ ಅಂದು ತೊಲಗಿತು. ಅದೇ ಮಕ್ಕಳು ನನಗೆ ಆ ಗುಡಿಯ ಮೇಲೆ ಕರೆದುಕೊಂಡು ಹೋಗಿ ಅಂದಿನ ಕಥೆ ತಿಳಿಸಿದ್ದರು. ಈಗ ಆ ಕಟ್ಟೆಯ ಮೇಲೆ ಒಂದಿಲ್ಲೊಂದು ಕಾರ್ಯಕ್ರಮವನ್ನು ಮಕ್ಕಳು ನಡೆಸುತ್ತಲೇ ಇರುತ್ತಾರೆ. ಗುಡಿಯಿಂದ ಈ ಮಕ್ಕಳ ರಂಗಮಂಚ ದರ್ಗಾಕ್ಕೆ ಸ್ಥಳಾಂತರವಾಯಿತು. ಊರ ಮನೆಗಳಿಂದ ಬಂದ ಮಲಗುವ ಮಂಚಗಳು ದರ್ಗಾದೊಳಗೆ ಸೇರಿ ಮಟ್ಟವಾಗಿ ವೇದಿಕೆ ನಿರ್ಮಾಣವಾಯಿತು. ಅಲ್ಲಿ ಮಕ್ಕಳ ನಾಟಕ ನಡೆಯಿತು. ಒಂದೇ ಊರಲ್ಲಿದ್ದರೂ ಬೇರೆ ಕೇರಿಗಳನ್ನು ನೋಡದ ಜನರು ಮಕ್ಕಳಿಗಾಗಿ ಬಂದರು, ನಾಟಕ ನೋಡಿದರು. ಜೊತೆಗೆ ದರ್ಗಾವನ್ನೂ ನೋಡಿಕೊಂಡು ಹೋದರು.
ಮೇಲ್ಜಾತಿಯ ಮಕ್ಕಳು ಕೆಳಜಾತಿಗಳ ಓಣಿಗೆ ಹೋಗುವುದಿಲ್ಲ. ಇದು ಮಕ್ಕಳು ಮನೆಗಳಲ್ಲಿ ಕಲಿಯುವ ಪಾಠ. ಅಶೋಕ ಮೇಸ್ಟ್ರು ಕಲಿಸುವ ಪಾಠ ಇದಕ್ಕೆ ವಿರುದ್ಧವಾದದ್ದು. ರಂಗಸಜ್ಜಿಕೆಯ ವಿನ್ಯಾಸದ ಪರೀಕ್ಷೆಯನ್ನು ಇವರು ಹಾಳೆಗಳ ಮೇಲೆ ಬರೆಯಿಸಲಿಲ್ಲ. ಬದಲು ಮಕ್ಕಳನ್ನು ಕೆಳಜಾತಿಗಳ ಮನೆಗಳಿಗೆ ಕರೆದುಕೊಂಡು ಹೋಗಿ ಒಂದೊಂದು ಮಗುವಿಗೆ ಒಂದೊಂದು ಆಯ್ಕೆ ಮಾಡಿಕೊಳ್ಳಲು ತಿಳಿಸಿದರು. ಅಲ್ಲಿಯೇ ಸಿಗುವ ಪರಿಕರಗಳನ್ನು ಉಪಯೋಗಿಸಿಕೊಂಡು ವಿನ್ಯಾಸ ಮಾಡಬೇಕಿತ್ತು. ಇದಕ್ಕೆ ಎಲ್ಲಾ ಮನೆಯವರ ಸಹಕಾರವೂ ದೊರೆಯಿತು. ಪರೀಕ್ಷೆಗಳು ಯಶಸ್ವಿಯಾದವು ಎನ್ನುತ್ತಾರೆ ಅಶೋಕ ತೊಟ್ನಳ್ಳಿ.
ಜಾಕನಪಲ್ಲಿಯ ಶಾಲೆಯ ಮಕ್ಕಳಿಗಾಗಿ ಖ್ಯಾತ ಕಲಾವಿದರು ಬಂದು ಹೋಗುತ್ತಿರುತ್ತಾರೆ. ಶಿಲ್ಪಕಲಾವಿದ ಗೌರಿಶಂಕರ ಗೋಗಿ, ಚಿತ್ರಕಲಾವಿದ ಪಿ.ಪರಶುರಾಮ, ಛಾಯಾಚಿತ್ರಕಾರ ಉದಯಕುಮಾರ ಬಗಲಿ, ಅಂತರರಾಷ್ಟ್ರೀಯ ಖ್ಯಾತಿಯ ಸಾಂಪ್ರದಾಯಿಕ ಚಿತ್ರಕಲಾವಿದ ವಿಜಯ ಹಾಗರಗುಂಡಿಗೆ, ಮೈಸೂರಿನ ಕಾಗದ ಕಲಾವಿದ ಎಸ್.ಎಫ್. ಹುಸೇನಿ, ಶಿಕ್ಷಣತಜ್ಞರಾದ ರೋಷನ್ ಸಾಹಿ, ಐ.ಎಫ್.ಎ.ಯ ಅನುಪಮಾ ಪ್ರಕಾಶ್ ಮುಂತಾದವರು ಈ ಶಾಲೆಯ ಮಕ್ಕಳೊಂದಿಗೆ ಸಂವಾದ ನಡೆಸಿದ್ದಾರೆ, ತರಬೇತಿ ನೀಡಿದ್ದಾರೆ, ಛಾಯಾಚಿತ್ರ ಪ್ರದರ್ಶನಗಳನ್ನು ನೀಡಿದ್ದಾರೆ.
ಅಶೋಕ ತೊಟ್ನಳ್ಳಿ ಶಾಲೆಯ ನಾಟಕಗಳಿಗಾಗಿ ಲೈಟುಗಳನ್ನು ಖರೀದಿಸಿದ್ದಾರೆ. ಆಗಾಗ ಕೈ ಕೊಡುವ ವಿದ್ಯುತ್ ಸಮಸ್ಯೆಗೆ ಬೇಸತ್ತು ಸಾಲ ಮಾಡಿ ಒಂದು ಜನರೇಟರನ್ನು ತಂದಿದ್ದಾರೆ. ಇಂತಹ ಉದಾಹರಣೆ ಇನ್ನೊಂದು ಸಿಗಲಾರದು. ತಾವು ನಡೆಸುವ ಕಾರ್ಯಕ್ರಮಕ್ಕೆ ಯಾವುದೇ ಅನನುಕೂಲ ಆಗದಂತೆ ನೋಡಿಕೊಳ್ಳುವ ಈ ಮೇಸ್ಟ್ರು ತಮ್ಮ ರಂಗಶಿಕ್ಷಣಕ್ಕೆ ಬೇಕಾದ ಸಲಕರಣೆಗಳನ್ನು ತಯಾರಿಸುವುದು ಮಾತ್ರ ಯಾರಿಗೂ ಬೇಡವಾದ ತ್ಯಾಜ್ಯಗಳಿಂದ. ಯಾರೋ ಮನೆಯ ಮುರಿದ ಏಣಿ, ಒಡೆದ ಫ್ರಿಜ್ಜಿನ ತಳ, ಟೈರು, ತುಂಡಾದ ಪೈಪು, ಬುಟ್ಟಿ, ಹಳೇಬಟ್ಟೆ, ಚಪ್ಪಲಿ ಎಲ್ಲವು ಇವರ ನಾಟಕಗಳಲ್ಲಿ ಬಣ್ಣಗಟ್ಟಿ ನಳನಳಿಸುತ್ತವೆ. ಮೊನ್ನೆ ರಾಜ್ಯ ಪ್ರಶಸ್ತಿ ಪಡೆದ ಈ ಶಾಲೆಯ ನಾಟಕ `ಧರ್ಮ ಮತ್ತು ಮೋಚಿ'ಯ ಪೂರ್ಣ ರಂಗಸಜ್ಜಿಕೆ ತ್ಯಾಜ್ಯಗಳಿಂದಲೇ ನಿರ್ಮಿಸಿದ್ದು ಎನ್ನುತ್ತಾರೆ ತೊಟ್ನಳ್ಳಿ.
ಪಠ್ಯಪುಸ್ತಕಗಳಲ್ಲಿನ ಪಾಠಗಳನ್ನು ಆಧರಿಸಿ ಮಕ್ಕಳಿಂದ ನಾಟಕ ಆಡಿಸಿ ಮಕ್ಕಳ ಕಲಿಕೆಗೆ ಒತ್ತುಕೊಡುತ್ತಿದ್ದಾರೆ ರಂಗಶಿಕ್ಷಕ ಅಶೋಕ. ನಾಟಕ ಕಲಿಕೆ ಶಾಲೆಯ ಶೈಕ್ಷಣಿಕ ಚಟುವಟಿಕೆಗಳಿಗೆ ಪೂರಕವಾಗಿದೆ ಮಕ್ಕಳಲ್ಲಿನ ಹಿಂಜರಿಕೆಗಳು ಮಾಯವಾಗಿದೆ. ಈ ಪುಟ್ಟ ಊರಿನ ನಮ್ಮ ಮಕ್ಕಳು ಇಡೀ ರಾಜ್ಯಕ್ಕೇ ಮೊದಲ ಸ್ಥಾನ ಬಂದಿರುವುದಕ್ಕೆ ತುಂಬಾ ಹೆಮ್ಮೆಯಾಗುತ್ತಿದೆ ಎನ್ನುತ್ತಾರೆ ಶಾಲೆಯ ಮುಖ್ಯಶಿಕ್ಷಕ ಭೀಮಶಪ್ಪ ಹುಟ್ಕೂರು. ನಮ್ಮದು ಕುಗ್ರಾಮ. ಆಂಧ್ರದ ಗಡಿಯಲ್ಲಿರುವ ನಮ್ಮ ಮನೆಮಾತು ತೆಲುಗು. ಹದಿನೈದುನೂರ ಜನಸಂಖ್ಯೆಯ ಈ ನಮ್ಮ ಪುಟ್ಟ ಊರ ಮಕ್ಕಳು ಇಡೀ ರಾಜ್ಯಕ್ಕೇ ಮೊದಲು ಬಂದಿರುವುದಕ್ಕೆ ಸಂತೋಷ ಆಗಿದೆ. ಕನ್ನಡವನ್ನೂ ತೆಲುಗಿನಂತೆ ಮಾತಾಡುವ ನಮ್ಮ ಮಕ್ಕಳನ್ನು ತಿದ್ದಿ ಸುಂದರವಾಗಿ ಕನ್ನಡ ಮಾತಾಡುವಂತೆ ಮಾಡಿದ್ದು ನಾಟಕ ಮತ್ತು ಅಶೋಕ ಮೇಸ್ಟ್ರು. ಈ ಮೇಸ್ಟ್ರು ಬಂದ ಮೇಲೆ ನಮ್ಮೂರ ಶಾಲೆ ಬಹಳಷ್ಟು ಪ್ರಗತಿಯಾಗಿದೆ ಎಂಬುದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ನಾರಾಯಣರೆಡ್ಡಿ ಪೊಲೀಸ್ ಪಾಟೀಲರ ಮಾತು.
ಮೇಸ್ಟ್ರು ಊರೊಳಗೆ ಹೋದರೆ ಕಿಂದರಿಜೋಗಿಯನ್ನು ಹಿಂಬಾಲಿಸಿದಂತೆ ಮಕ್ಕಳು ಬೆನ್ನಿಗೆ ನಡೆಯುತ್ತಾರೆ. ಅದರಲ್ಲಿ ಹಳೆ ವಿದ್ಯಾರ್ಥಿಗಳು, ಊರ ಯುವಕರೂ ಇರುತ್ತಾರೆ. ಸೇಡಂನಲ್ಲಿರುವ ಮೇಸ್ಟ್ರ ರೂಮಿನಲ್ಲೆ ಉಳಿದುಕೊಂಡು ಪಿಯುಸಿ ಓದುತ್ತಿರುವ ವಿದ್ಯಾರ್ಥಿಗಳಿಗಂತೂ ಮೇಸ್ಟ್ರ ಬಗ್ಗೆ ವಿಶೇಷ ಗೌರವ. ಬಸ್ಸು ಬಾರದ ಆ ಊರ ಮಕ್ಕಳು ಇಪ್ಪತ್ತೈದು ಕಿ.ಮೀ ದೂರದ ಸೇಡಂಗೆ ಹೋಗಿ ಕಾಲೇಜು ಓದುವುದು ಕನಸಿನ ಮಾತು. ಅಂತಹ ಕನಸು ಸಾಕಾರವಾದ ಖುಷಿ ಲಕ್ಷ್ಮಪ್ಪ ಮತ್ತು ಶಾಮಪ್ಪರದ್ದು. `ಮಕ್ಕಳ ಬದುಕು ವರ್ತಮಾನದಲ್ಲಿ ಅರಳುತ್ತದೆ ಮತ್ತು ವರ್ತಮಾನದಲ್ಲಿಯೇ ಬದುಕುವುದರಿಂದ ಮಕ್ಕಳ ಬೇಕುಗಳನ್ನ ತತ್‌ಕ್ಷಣದಲ್ಲಿ ಈಡೇರಿಸದಿದ್ದರೆ ಮಗು ಮಗುವಾಗಿ ಉಳಿಯುವುದಿಲ್ಲ ಮತ್ತು ಅದು ತನ್ನತನವನ್ನು ಕಳೆದುಕೊಳ್ಳುತ್ತದೆ. ಜೊತೆಗೆ ಒಂದು ಇಡಿಯ ತಲೆಮಾರು ಸಾಂಸ್ಕೃತಿಕ ಸಾರವಿಲ್ಲದೆ ಬರಡಾಗುತ್ತದೆ' ಎನ್ನುತ್ತಾರೆ ಅಶೋಕ.
ತಾವು ಕಲಿಸುವುದಕ್ಕಾಗಿ ಬರಿಯ ಬೋಧನೆಯ ತಂತ್ರಗಳಿಗೆ ಕಟ್ಟುಬೀಳದೆ ಸದಾ ಕ್ರಿಯಾಶೀಲವಾಗಿರುತ್ತ ಮಕ್ಕಳನ್ನು ಚಟುವಟಿಕೆಗಳಲ್ಲಿ ತೊಡಗಿಸಿ ಮಕ್ಕಳ ಮನಸಿಗೆ ಆಪ್ತರಾಗುವ ಶಿಕ್ಷಕರು ಇಂದಿನ ತುರ್ತು. ಅಂಕಗಳಿಸುವ ಯಂತ್ರಗಳಾಗುತ್ತಿರುವ ಮಕ್ಕಳು ತಮ್ಮ ವಯೋ ಸಹಜ ಚಟುವಟಿಕೆಯನ್ನೇ ಕಳೆದುಕೊಂಡು ಜಡವಾಗುತ್ತಿದ್ದಾರೆ.
ಇದು ಹೀಗೆಯೇ ಮುಂದುವರಿದರೆ ನಮ್ಮ ಸಮಾಜದ ಸಾಂಸ್ಕ್ರತಿಕ ನೆಲೆಗಟ್ಟು ನಾಶವಾಗಬಹುದು. ಶಾಲೆಗಳು ಅಂಕಗಳ ಕಾರ್ಖಾನೆಗಳಾಗದೆ ಅದೊಂದು ಸಾಂಸ್ಕೃತಿಕ ಕೇಂದ್ರವಾಗಬೇಕು. ಮಕ್ಕಳು ಮಕ್ಕಳಾಗಿರಬೇಕು. ಹಾಗಾಗಬೇಕಾದರೆ ಶಾಲೆಗೊಬ್ಬ ಅಶೋಕರಂತಹ ಶಿಕ್ಷಕರಿರಬೇಕು. ಇಂದಿನ ಶಿಕ್ಷಣ ನೀತಿಗಳು ಕೂಡ ಶಾಲೆಗಳನ್ನು ಸೃಜನಶೀಲ ಚಟುವಟಿಕೆಗಳ ತಾಣಗಳಾಗುವಂತೆ ಪ್ರೇರೇಪಿಸುತ್ತಿವೆ. ಶಾಲೆಗಳಲ್ಲಿ ದೈಹಿಕ, ಚಿತ್ರಕಲಾ ಶಿಕ್ಷಕರಂತೆ ನಾಟಕ ಶಿಕ್ಷಕರನ್ನೂ ಹೆಚ್ಚು ಹೆಚ್ಚು ನೇಮಕಮಾಡಿಕೊಳ್ಳಬೇಕು ಎಂಬ ಇಂಗಿತ ಅವರದ್ದು. ಹೆಚ್ಚಲಿ ಇವರ ರಸಬಳ್ಳಿ ಎಂದು ಅಶೋಕರಂಥ ಶಿಕ್ಷಕರ ಕುರಿತು ಹಂಬಲಿಸಬಹುದು

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ