ಕಾವ್ಯೇಷು ನಾಟಕಂ ರಮ್ಯಂ ಎಂಬುದು ಕಾವ್ಯಮೀಮಾಂಸಕರ ಪ್ರಸಿದ್ಧ ಮಾತು. ಆದರೆ ನಾಟಕವೊಂದನ್ನು ಬರೆದು ಅದನ್ನು ಪ್ರದರ್ಶನಯೋಗ್ಯ ಕೃತಿಯಾಗಿಸುವುದು ಸುಲಭ ಸಾಧ್ಯವಲ್ಲ. ನಾಟಕ ಎಂಬುದು ಪ್ರದರ್ಶನದಿಂದ ಪ್ರದರ್ಶನಕ್ಕೆ ಗಟ್ಟಿಗೊಳ್ಳುತ್ತಾ ಸಾಗುವ ಕಲೆ. ಅಂತಹ ಗಟ್ಟಿಗೊಳ್ಳುವ ಕಲೆಯನ್ನು ಮೈಗೂಡಿಸಿಕೊಂಡಿರುವವರು ಕನ್ನಡ ಜಾನಪದ ಸೊಗಡಿನ ಅನರ್ಘ್ಯ ಬರಹಗಾರರಾದ ಡಾ|| ಚಂದ್ರಶೇಖರ ಕಂಬಾರರು.
ಪ್ರಸ್ತುತ ಶಿವರಾತ್ರಿ ನಾಟಕವು ಕಂಬಾರರ ಹಿಂದಿನ ನಾಟಕಗಳಿಗಿಂತ ಹೊಸತನದಲ್ಲಿ ಭಿನ್ನವಾಗಿದೆ. ಚಾರಿತ್ರಿಕ ವಿಷಯವಾದ 12ನೇ ಶತಮಾನದ ಕಲ್ಯಾಣ ಕ್ರಾಂತಿಯ ಘಟನೆಯ ಸುತ್ತ ಬೆಳೆದುಬಂದಿದೆ. ಈ ನಾಟಕಕ್ಕೆ ‘ಶಿವರಾತ್ರಿ’ ಎಂಬ ಶೀರ್ಷಿಕೆಯನ್ನು ಕೊಟ್ಟಿರುವುದು ಕುತೂಹಲ ಮೂಡಿಸುತ್ತದೆ. ಸಂಪ್ರದಾಯದಲ್ಲಿ ಶಿವರಾತ್ರಿಯು ಭಕ್ತಿ, ಶಾಂತಿ ಮತ್ತು ಅಹಿಂಸೆಯ ಸಂಕೇತವಾದರೆ ಇದಕ್ಕೆ ವಿರುದ್ಧವಾಗಿ ಕಲ್ಯಾಣದಲ್ಲಿ ಆ ರಾತ್ರಿ ಅಶಾಂತಿ, ಹಿಂಸೆ, ರಕ್ತಪಾತ ಮತ್ತು ಅಸೂಯೆಗಳ ಪರಾಕಾಷ್ಠೆಯನ್ನು ಬಿಂಬಿಸುತ್ತದೆ. ಇದನ್ನು ವ್ಯಂಗ್ಯವಾಗಿ ತೋರಿಸುವ ದೃಷ್ಟಿಯಿಂದಲೇ ಕಂಬಾರರು ಈ ಹೆಸರನ್ನು ನೀಡಿದ್ದಾರೆ ಎಂದೆನಿಸುತ್ತದೆ. ಶಿವರಾತ್ರಿ ನಾಟಕವು ಕೇವಲ ಒಂದು ರಾತ್ರಿಯ ಚಿತ್ರಣವನ್ನು ಬಿಂಬಿಸುವ ಮೂಲಕ ಇದುವರೆಗೂ ಯಾವ ಕವಿಯೂ ಕಟ್ಟಿ ಕೊಡದಂಥ ಬಸವಣ್ಣ ಮತ್ತು ಬಿಜ್ಜಳನ ನಡುವಿನ ಪ್ರೀತಿ, ಅಸೂಯೆ, ಆಕರ್ಷಣೆ-ವಿಕರ್ಷಣೆ, ಭಾವನಾತೀತ ದ್ವಂದ್ವದ ತಾಕಲಾಟಗಳು, ಸಂಬಂಧಗಳ ತೊಳಲಾಟಗಳನ್ನು ಕಟ್ಟಿಕೊಳ್ಳುವಲ್ಲಿ ನಾಟಕ ಕೃತಿ ಯಶಸ್ವಿಯಾಗಿದೆ. ಆಶಯ ಆಕೃತಿಗಳೆರಡರಲ್ಲೂ ಶಿವರಾತ್ರಿ ನಾಟಕ ಈ ವರೆಗಿನ ಕಲ್ಯಾಣದ ಕಥನವುಳ್ಳ ನಾಟಕಗಳಿಗಿಂತ ಭಿನ್ನವಾಗಿದೆ.
ಎಳೆಹೂಟೆಯ ನಂತರದ ಒಂದು ರಾತ್ರಿಯ ಕಥನದಲ್ಲಿ, ಅದು ಸೂಳೆ ಸಾವಂತ್ರಿ ಮನೆಯಲ್ಲಿ- ಶರಣತ್ವ ಹಾಗೂ ರಾಜತ್ವಗಳು ಘರ್ಷಿಸುತ್ತವೆ. ಬಸವಣ್ಣ ಬಿಜ್ಜಳರ ನಡುವೆ ನಡೆಯುವ ಸುದೀರ್ಘ ಚರ್ಚೆಯಲ್ಲಿ ವಾಸ್ತವಿಕ ನೆಲೆಗಟ್ಟು, ರಾಜಕೀಯ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿನ ಸೂಕ್ಷ್ಮ ನಡೆಗಳು, ಹಾಗೂ ಅವಲಂಬನೆ ಹೇಗೆ ಕೆಲಸ ಮಾಡುತ್ತದೆ ಎಂಬುದರ ಬಗ್ಗೆ ಮಾರ್ಮಿಕವಾಗಿ ಹೇಳಿದ್ದಾರೆ. ಬಿಜ್ಜಳನಿಗೆ ಬಸವಣ್ಣನ ಮೇಲೆ ಪ್ರೀತಿ ಇದ್ದರೂ ಕೂಡ ಅವನ ಸಿದ್ಧಾಂತಗಳನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅವನ ಸಿದ್ಧಾಂತಗಳನ್ನು ಸ್ವೀಕರಿಸಿದರೆ ಎಲ್ಲಿ ತನ್ನ ರಾಜತ್ವದ ಅಸ್ತಿತ್ವಕ್ಕೆ ಧಕ್ಕೆ ಬಂದೀತೆಂಬ ಮಾನಸಿಕ ತೊಳಲಾಟ ರಾಜನನ್ನು ಕಾಡುತ್ತದೆ. ಇಲ್ಲಿ ಮನುಷ್ಯನ ಅಸ್ತಿತ್ವದ ದ್ವಂದ್ವಗಳನ್ನು ತುಂಬಾ ಅರ್ಥಪೂರ್ಣವಾಗಿ ನಿರೂಪಿಸಿದ್ದಾರೆ. ಬಿಜ್ಜಳ ಸಾಯುವಾಗ ಹೇಳುವ “ ನಿಮ್ಮ ಸಿದ್ಧಾಂತಗಳನ್ನು ಜೀರ್ಣೀಸಿಕೊಳ್ಳುವ ಶಕ್ತಿ ಸಮಾಜಕ್ಕಿಲ್ಲ ಬಸವಣ್ಣ” ಎಂಬ ಮಾತು ಬಸವಣ್ಣನವರ ವಿಚಾರಧಾರೆಗಳನ್ನು ಇಂದಿನ ಸಮಾಜ ಸರಿಯಾಗಿ ಗ್ರಹಿಸಿಲ್ಲ. ಅದರಂತೆ ನಡೆದುಕೊಳ್ಳುತ್ತಿಲ್ಲ ಎಂಬುದನ್ನು ಸೂಚ್ಯವಾಗಿ ಅರಿಯಬಹುದಾಗಿದೆ.
ಇಡೀ ನಾಟಕದ ಕೇಂದ್ರಸ್ಥಾನ ಸೂಳೆ ಸಾವಂತ್ರಿಯ ಮನೆ. ನೋಡುವ ಸಮಾಜದ ದೃಷ್ಟಿಯಲ್ಲಿ ವೇಶ್ಯೆಯಾಗಿ, ಕೀಳಾಗಿ ಕಂಡರೂ ಅವಳ ಕಾಯಕ ನಿಷ್ಠೆಯ ಹಾಗೂ ನಿಜ ಶರಣತ್ವದ ಪ್ರತಿರೂಪವಾಗಿ ಶರಣೆ ಸಾವಂತ್ರಿ ಕಾಣುತ್ತಾಳೆ. ಬಸವಣ್ಣನವರ ಪ್ರಭಾವದ ಆಳವನ್ನು ತೋರಿಸುವ ಸಲುವಾಗಿಯೇ ನಾಟಕದ ಕೇಂದ್ರಸ್ಥಾನ ಸಾವಂತ್ರಿಯ ಮನೆಯನ್ನಾಗಿರಿಸಿರುವುದು ಎಂಬುದು ತಿಳಿದುಬರುತ್ತದೆ. ಸಮಾಜದಲ್ಲಿ ಸಾವಂತ್ರಿಯ ವೃತ್ತಿಯನ್ನು ತಿರಸ್ಕರಿಸಿದರೂ ಕೂಡ ಅವಳ ವ್ಯಕ್ತಿತ್ವಕ್ಕೆ ಗೌರವ ಭಾವನೆ ನಮ್ಮಲ್ಲಿ ಮೂಡುತ್ತದೆ. ಸಾವಂತ್ರಿ ಬಿಜ್ಜಳನಿಗೆ ಹೇಳುವ ಮಾತುಗಳು ಅರ್ಥಪೂರ್ಣವಾಗಿವೆ. “ಸಾವಿರಾರು ವರ್ಷಗಳಿಂದ ಇರುವ ಕಾನೂನು ಕಟ್ಟಳೆಗಳಿಂದ ಸ್ಥಾಪಿಸಲಾಗದ ಸುಖೀ ರಾಜ್ಯವನ್ನು ಬಸವಣ್ಣ ಕೇವಲ ಕೆಲವೇ ದಿನಗಳಲ್ಲಿ, ಶರಣತತ್ವಗಳಿಂದ ಸುಖೀರಾಜ್ಯವನ್ನು ಸ್ಥಾಪಿಸಿದ.” ಎಂಬ ಸಾವಂತ್ರಿಯ ಈ ಮಾತು ಬಹಳ ಸುಂದರವಾಗಿ ಅಭಿವ್ಯಕ್ತಗೊಂಡಿದೆ. ಈ ಮೂಲಕ ಬಸವಣ್ಣನವರ ತತ್ವಸಿದ್ಧಾಂತಗಳು ಅಂದು ಎಷ್ಟರಮಟ್ಟಿಗೆ ಜನಸಾಮಾನ್ಯರ ಮೇಲೆ ಪ್ರಭಾವಬೀರಿದ್ದವೆಂಬುದನ್ನು ನಾವು ಗಮನಿಸಬಹುದು.
ದಾಮೋದರ ಬಿಜ್ಜಳನಿಗೆ ಹೇಳುವ “ದಲಿತರು ಮತ್ತು ಬಡವರಿಗೆ ಸೌಲಭ್ಯ ಕಲ್ಪಿಸಿ ಅವರಿಗೆ ಸಹಾಯ ಮಾಡಿದಾಗ ನೀವೂ ಜನಪ್ರಿಯರಾಗಿದ್ದೀರಿ, ಹಾಗೆಯೇ ಮುಂದುವರಿದಿದ್ದರೆ ಕಲ್ಯಾಣವನ್ನು ಅಮರಾವತಿಯನ್ನಾಗಿ ಮಾಡುವುದು ಸಾಧ್ಯವಿತ್ತು. ಆದರೆ ಚಾಡಿಕೋರರ ಮಾತನ್ನು ನಂಬಿ ಕಲ್ಯಾಣವನ್ನು ನರಕ ಮಾಡಿದ್ದೀರಿ” ಎಂಬ ಕಟು ಮಾತಿನಲ್ಲಿ ಪ್ರಸ್ತುತ ನಾಡಿನ ರಾಜಕೀಯ ವ್ಯವಸ್ಥೆಗೆ ಎಚ್ಚರಿಕೆಯ ಸೂಚನೆ ಮತ್ತು ಸಲಹೆ ಇರುವುದನ್ನು ಕಾಣಬಹುದು.
“ಅರಮನೆಯಲ್ಲಿ ಸೂಳೆಯಾದವಳು ಮಹಾಮನೆಗೆ ಶಿವಶರಣೆ, ಬಸವಣ್ಣನವರ ತಾಯಿಯಾಗುತ್ತಾಳೆ” ಎಂಬ ದಾಮೋದರನ ಮಾತಿನಲ್ಲಿ ಶರಣತತ್ವದ ಹಿನ್ನೆಲೆಯಲ್ಲಿ ಮನುಷ್ಯಕುಲವನ್ನು, ಶ್ರೇಷ್ಠತೆಯನ್ನು ಪ್ರತಿಬಿಂಬಿಸುವ ಪ್ರಯತ್ನ ನಡೆಸಿರುವುದು ಸ್ವಾಗತಾರ್ಹ ವಿಷಯವಾಗಿದೆ.
“ಮಾಹಾಮನೆ ಎನ್ನುವುದು ಸ್ಥಾವರವಲ್ಲ, ಸಂಗಯ್ಯ ಸನ್ನಿಧಿ ಕೊಟ್ಟುದೇ ಮಹಾಮನೆ” ಎಂಬ ಬಸವಣ್ಣನವರ ಮಾತು ಇಡೀ ಅನುಭವ ಮಂಟಪದ ಉದ್ಧೇಶವಾದ “ತತ್ವಗಳಿಗಾಗಿ ಜನರಲ್ಲ, ಜನರಿಗಾಗಿ ತತ್ವಗಳು” ಎಂಬುದನ್ನು ತಿಳಿಸುತ್ತದೆ.
ಸಾಮಾನ್ಯ ಜನರ ವರ್ತನೆಯು ನಾಟಕದುದ್ದಕ್ಕೂ ಬಸವಧರ್ಮದ ಪ್ರಭಾವದಲ್ಲಿ ಬದಲಾದದ್ದು ಸ್ಪಷ್ಟವಾಗಿ ಕಾಣುತ್ತದೆ. ಈ ದೃಷ್ಟಿಯಿಂದ ಸಾವಂತ್ರಿ, ದಾಮೋದರ, ಕಳ್ಳಚಿಕ್ಕಯ್ಯನಂತ ಪಾತ್ರಗಳು ಪ್ರಮುಖವಾಗಿವೆ, ಅಂದು ಬಸವಣ್ಣನವರಿಂದ ಆದ ಬದಲಾವಣೆ-ಶರಣತ್ವದ ಶ್ರೇಷ್ಠತೆಯನ್ನು ಅನೇಕ ನಿದರ್ಶನಾರ್ಥಕ ವಾಕ್ಯಗಳ ಮೂಲಕ ತಿಳಿಯಪಡಿಸುತ್ತವೆ.
ಕಲ್ಯಾಣದ ನಗರದೇವತೆಯಾದ ‘ಹುಚ್ಚಿ’ ಹಾಗೂ ಭಗವಂತನ ಸ್ವರೂಪಿಯಾದ ಮುಗ್ಧಸಂಗಯ್ಯ ಇವರು ನಾಟಕಗಳಲ್ಲಿ ಸಂಕೇತಗಳಂತೆ ಕೆಲಸ ಮಾಡಿದರೂ ಅವರು ವಾಸ್ತವದಲ್ಲಿ ನೆಲೆಯಿರುವ ಪಾತ್ರಗಳಂತೆ ಕಾಣುತ್ತಾರೆ. ಇಡೀ ನಾಟಕದಲ್ಲಿ ಮುಗ್ಧ ಸಂಗಯ್ಯ ಶರಣತ್ವದ ದೃಶ್ಯರೂಪಕವಾಗಿ ಕಾಣಿಸಿಕೊಳ್ಳುತ್ತಾನೆ.
ನಾಟಕದ ವಿಷಯ ಶರಣರ ಹಿನ್ನೆಲೆಯಾಗಿದ್ದರೂ ಬೇರೆಲ್ಲೂ ಕಾಣದಂತಹ ಕೆಲವು ಹೊಸ ಪಾತ್ರಗಳು ಇಲ್ಲಿ ಸೃಷ್ಟಿಯಾಗಿವೆ. ಅವುಗಳಲ್ಲಿ ಕಾಶವ್ವ, ತುಂಗವ್ವ, ಮುದುಕಪ್ಪ, ಕಲ್ಲಪ್ಪ ಇನ್ನಿತರ ಸಾಮಾನ್ಯ ಪಾತ್ರಗಳು ಜಾನಪದ ಶೈಲಿಯಲ್ಲಿ ಮೂಡಿಬಂದಿವೆ. ಇಲ್ಲಿ ಕಂಬಾರರು ದೇಶಿ ಚಿಂತನೆಯ ದೊಡ್ಡ ವಕ್ತಾರರಾಗಿ ಕಾಣಿಸಿಕೊಳ್ಳುತ್ತಾರೆ. ಬಹುಶಃ ಕಂಬಾರರಿಗೆ ಜಾನಪದ ದೇಸಿ ಸಾಹಿತ್ಯದ ಸೆಳೆತ ಅವರನ್ನು ಬಲವಾಗಿ ಕಟ್ಟಿಹಾಕಿದೆ ಎಂಬುದು ಈ ಮೂಲಕ ವೇದ್ಯವಾಗುತ್ತದೆ.
ಆ ರಾತ್ರಿ ಶಿವರಾತ್ರಿ
ಕಲ್ಯಾಣ ಮಲಗಿಲ್ಲ
ಜಾಗರಣೆ ನಡೆದಿಲ್ಲ….. ಎಂಬ ಹಾಡು ನಾಟಕದಲ್ಲಿ ಸದಾ ಜಿನಗುತ್ತಿರುತ್ತದೆ. ನಾಟಕಕ್ಕೆ ಪೂರಕವಾಗಿ ಹಾಡಿನ ಮಹತ್ವ ಎದ್ದು ತೋರುತ್ತದೆ.
ಕಂಬಾರರ ಬಹುತೇಕ ನಾಟಕಗಳಲ್ಲಿ ಬರುವ ‘ಶಿವರಾತ್ರಿ’ ಶಿವಾಪೂರ ಕಲ್ಪನೆ ಸಾಂಕೇತಿಕವಾಗಿ ಇಲ್ಲಿಯೂ ಧ್ವನಿಸಿದೆ. ನಾಟಕಕ್ಕೆ ಸಮರ್ಥಭಾಷೆಯ ಜೊತೆಗೆ ಧ್ವನಿಪೂರ್ಣವಾದ ಕ್ರಿಯೇಯೂ ಬೆನ್ನೆಲುಬಾಗಿದೆ. ಸುಮಾರು 800 ವರ್ಷಗಳಿಂದ ಚರ್ಚಿತವಾಗಿರುವ ವಿಷಯವನ್ನು ಕೇವಲ ಕೆಲವೇ ಗಳಿಗೆಯಲ್ಲಿ ವಾಸ್ತವ ಪ್ರೇಕ್ಷಕರಿಗೆ ತಲುಪಿಸುವ ಪ್ರಯತ್ನವನ್ನು ಯುವ ನಿರ್ದೇಶಕ ‘ಮಹಾದೇವ ಹಡಪದ’ ಅವರು ಮಾಡಿ ಯಶಸ್ವಿಯಾಗಿದ್ದಾರೆ. ಪ್ರತಿಯೊಬ್ಬ ಕಲಾವಿದನಿಂದಲೂ ಆ ಪಾತ್ರವನ್ನು ಹೊರತರಿಸುವಲ್ಲಿ ನಿರ್ದೇಶಕರು ತುಂಬಾ ಶ್ರಮವಹಿಸಿದ್ದಾರೆ. ಅವರ ಕ್ರಿಯಾಶೀಲ ವ್ಯಕ್ತಿತ್ವದಿಂದಾಗಿ ನಾಟಕ ತುಂಬಾ ಭಾವಪೂರ್ಣವಾಗಿ ಮೂಡಿಬಂದಿದೆ. ಪ್ರತಿ ದೃಶ್ಯದಲ್ಲಿ ವೈವಿಧ್ಯತೆ ತರುವ ಯತ್ನ ಹಾಗೂ ನಿರೂಪಣಾ ತಂತ್ರದ ಕಾಳಜಿಯನ್ನು ನಿಜಕ್ಕೂ ಶ್ಲಾಘಿಸಬೇಕು. ಪ್ರತಿ ಪಾತ್ರದಲ್ಲೂ ಎಲ್ಲಾ ಮನಸ್ಸುಗಳ ಒಳಗಿನ ಹತಾಶೆಗಳು, ತಲ್ಲಣಗಳು ಮತ್ತು ಪ್ರಶ್ನೆಗಳನ್ನು ಮಾತಿನಿಂದಲೇ ಬಿಚ್ಚಿಡುವ ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆ.
ವ್ಯವಸ್ಥೆಯ ದೃಷ್ಟಿಕೋನ ಹಾಗೂ ಸಮಾನತೆಯ ದೃಷ್ಟಿಕೋನಗಳನ್ನು ಭಿನ್ನವಾಗಿ ಚಿತ್ರಿಸುತ್ತ ಪ್ರಸ್ತುತ ನಮ್ಮ ನಾಡಿನ ಸಮಸ್ಯೆಗಳು ಕಣ್ಮುಂದೆ ಹಾದು ಹೋಗುವ ರೀತಿಯಲ್ಲಿ ಕಂಬಾರರು ಈ ನಾಟಕವನ್ನು ರಚಿಸಿದ್ದಾರೆ. ಬಸವಣ್ಣನವರ ಚಳುವಳಿ ಎಷ್ಟರಮಟ್ಟಿಗೆ ಸಮಾಜದ ಕೆಳವರ್ಗವನ್ನು ತಲುಪಿತ್ತು? ಪ್ರಭಾವಿಸಿತ್ತು? ಎಂಬುದನ್ನು ನಾಟಕ ತೋರಿಸುತ್ತದೆ. ಈ ಹಿನ್ನೆಲೆಯಲ್ಲಿ ನಾಟಕವು ನಮಗೆ ತೋರಿಸುವುದೇನೆಂದರೆ ಶರಣ ಚಳವಳಿಯ ಅಮೂರ್ತ ಕಲ್ಪನೆಗಳಾದ ಮಹಾಮನೆ, ಇಷ್ಟಲಿಂಗ, ಬಯಲು ಮುಂತಾದವು ಕೆಳವರ್ಗದವರಿಗೆ ಅರ್ಥವಾಗಲಿಲ್ಲ. ಆದರೆ ಬಸವಣ್ಣನವರ ಮೂರ್ತ ಆದರ್ಶಗಳು ಜನಸಾಮಾನ್ಯರನ್ನು ತಲುಪಿ, ಅವರ ಬದುಕನ್ನು ಬದಲಾಯಿಸಿದ್ದವು ಎಂಬುದನ್ನು ನಾಟಕ ಮನವರಿಕೆ ಮಾಡುತ್ತದೆ.
ಇಂತಹ ಅರ್ಥಪೂರ್ಣವಾದ ನಾಟಕವನ್ನು ನೀಡುವುದರ ಮೂಲಕ ಕನ್ನಡ ಸಾಹಿತ್ಯದಲ್ಲಿ ಛಾಪು ಮೂಡಿಸಿರುವ ಚಂದ್ರಶೇಖರ ಕಂಬಾರರು ನಿಜಕ್ಕೂ ‘ಜ್ಞಾನಪೀಠ’ವೇ ಆಗಿದ್ದಾರೆ.
---- ಗಿರಿಜಾಶಂಕರ ಜಿ. ಎಸ್.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ