ಅಂದು ಅವ್ವ ವಿವರಿಸಿದ
ಚಂದ್ರನೊಳಗಣ ಕಲೆಗೆ
ಇಂದು ಮೂರುಕಾಸಿನ
ಕಿಮ್ಮತ್ತು ಇರಲಿಕ್ಕಿಲ್ಲ
ಒ………….ಳಾ………….
ಗೆ
ಹುರಿಗೊಂಡ ಮೊಲದ ಆ ಎರಡು ಕಿವಿ
ಚಿಗರಿ ಮರಿಯ ಆ ಎರಡು
ಕೊಂಬು
ಧಪ್ಪ ಮೀಸೆಯ ರಾಕ್ಷಸನ
ಭರ್ಜಿ
ಹಸಿದುಕೊಂಡಿರುವ
ಆ ತಾಯಿ ಮಕ್ಕಳು
ಹೀಗೆ
ಹಸಿದಾಗೊಂದು ಚಿತ್ರ
ಹೆದರಿದಾಗೊಂದು ಚಿತ್ರ
ರಚ್ಚೆ ಹಿಡಿದು ಅಳುವಾಗೊಂದು
ಚಿತ್ರ
ಆಗಿನ ಸಂದರ್ಭಕ್ಕನುಸರಿಸಿ
ಏನೇನೆಲ್ಲಾ ಆಗಿ
ಚಂದ್ರ, ಚಂದಪ್ಪ,
ಚಂದಮಾಮ
ಅವ್ವನ ಕತೆಗೆ ಪಾತ್ರವಾಗಿ
ಇಳಿದು ಬರುತ್ತಿದ್ದ
ಏಕಾಂತದ ಗೆಳೆಯನಾಗಿ
ಯಾವಾಗಲೂ ನಾ ಹೋದತ್ತ
ಬರುತ್ತಿದ್ದ
ಒಮ್ಮೊಮ್ಮೆ ಅರಕಳಿಯಾಗಿ
ದುಂಡಾಗಿ ಚಪ್ಪಟೆಯಾಗಿ
ಅವನು ಸುತ್ತುವ ಲೋಕದ
ಕತೆಗಳನ್ನ
ನನಗಾಗಿ ಹೊತ್ತು
ತಂದಿರುತ್ತಿದ್ದ.
ಈಗೀಗ ಭಾರವಾದಂತೆ
ನನ್ನ ಬಿಡುವಿಲ್ಲದ
ಹೊತ್ತಿಗೆ ಸಿಕ್ಕದಾಗಿರುವ
ಆ ಅವನ ಕಷ್ಟಗಳದೆಷ್ಟಿದ್ದಾವೋ…
ಅವ್ವ ಈಗ ಆ ಕತೆಗಳಿಗೆ
ಜೀವ ಕೊಡಲು
ಮಕ್ಕಳನ್ನು ಕರೆಯುತ್ತಾಳೆ
ಅವರ ಇಷ್ಟಕ್ಕೆ ದಕ್ಕದ
ಅವಳ ಮಾತು ಸೊರಗಿದಂತೆ
ಸುಮ್ಮನಿದ್ದುಬಿಡುತ್ತವೆ.
ಮೌನದ ನೋಟ
ಕ್ಯಾಮರಾದಂತೆ ಕ್ಲಿಕ್ಕಿಸಿಕೊಂಡಿದ್ದ.
ನನ್ನ ಹರವಿನ ಹಂಬಲ
ಹಿಗ್ಗಿಸಿದ,
ದೂರದೆಲ್ಲೋ ಓಡಾಡಿಕೊಂಡು
ಯೋಗಕ್ಷೇಮ ಕೇಳುವ ಮಿತ್ರನಂತೆ
ಮಾಯಾ ಕನ್ನಡಿಯ ಬೆಲೆಗೆ
ದಕ್ಕಲಾರದ ವೃತ್ತದೊಳಗಿನ ಕಲೆಯಾಗಿ
ಆ ಚಂದ್ರನೊಳಗಣ ಕಲೆ ಹಾಗೇ ಉಳಿದುಕೊಂಡಿದೆ.
ಮಹಾದೇವ ಹಡಪದ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ