ಭಯಾನಕ ಬೆಂಗಳೂರು
ಮಹಾನಗರದ ಆತ್ಮಚರಿತ್ರೆ
ಒಂದು ಆಖ್ಯಾಯಿಕೆಯ ಪ್ರಕಾರ ಅರಸ ವೀರ ಬಲ್ಲಾಳ ಬೇಟೆಗೆಂದು ಹೊರಟವನು ಕಾಡಿನಲ್ಲಿ
ದಾರಿತಪ್ಪಿ, ರಾತ್ರಿಯಿಡಿ ಸುತ್ತಾಡಿ ಹಸಿದು ಬಳಲಿ ಬಸವಳಿದಾಗ, ಒಬ್ಬಳು ಮುದುಕಿ
ಅವನಿಗೆ ಬೆಂದ ಕಾಳುಗಳನ್ನು ನೀಡಿ ಅವನ ಪ್ರಾಣ ಉಳಿಸಿದಳು. ಆ ಉಪಕಾರವನ್ನು ಸ್ಮರಿಸಿ
ಅರಸ ಆ ಸ್ಥಾನದಲ್ಲಿ ಬೆಂದಕಾಳೂರು’ ಎಂಬ ಊರನ್ನು ಸ್ಥಾಪಿಸಿದ. ಅದೇ ಮುಂದೆ ’ಬೆಂಗಳೂರು’
ಆಯಿತು. ಎಲ್ಲರ ಬೇಳೆಯೂ ಬೇಯುವಂಥ ಬೆಂಗಳೂರಿನ ಕುರಿತು ಗಿರೀಶ ಕಾರ್ನಾಡರು ಬರೆದಿರುವ
ಹೊಸ ನಾಟಕ ’ಬೆಂದಕಾಳು ಆನ್ ಟೋಸ್ಟ್ ನ ಆರಂಭದಲ್ಲೇ ಹೀಗೊಂದು ಸಾಲಿದೆ. ಕಾರ್ನಾಡರು ಈ
ಕತೆಗೊಂದು ಸಾಲು ಸೇರಿಸಿ, ಅದನ್ನು ಪಾಶ್ಚಾತ್ಯ ಜಗತ್ತಿಗೆ ಸಮೀಕರಿಸಿದ್ದಾರೆ. ಬೇಕ್ಡ್
ಬೀನ್ಸ್ ಆನ್ ಟೋಸ್ಟ್ (ಟೋಸ್ಟಿನ ಮೇಲೆ ಸುರಿದ ಬೇಯಿಸಿದ ಕಾಳು) ಪಾಶ್ಟಾತ್ಯ
ಬ್ರೇಕ್ಫಾಸ್ಟ್ನ ಒಂದು ಪ್ರಮುಖ ಅಂಗವಾಗಿದೆ.ಬೆಂಗಳೂರು ಕೂಡ ಹೀಗೆ ಇತಿಹಾಸ ಮತ್ತು ಆಧುನಿಕತೆಯನ್ನು ಬೆಸೆದುಕೊಂಡ ಊರಾ? ಇದು ಮಹಾನಗರವೆಂದು ಕರೆಸಿಕೊಳ್ಳುವ ಕೊಂಪೆಯಾ? ಕೊಂಪೆಯೆಂದು ಪರಿಭಾವಿಸಬಹುದಾದ ಮಹಾನಗರವಾ? ಒಂದು ಊರು ಬೆಳೆದು ದೊಡ್ಡದಾದ ಮಾತ್ರಕ್ಕೆ ಮಹಾನಗರಿ ಆಗುತ್ತದಾ? ಅದರೊಳಗೆ ಸೇರಿಕೊಂಡ ಮಂದಿಯ ಬೇಗುದಿ, ವ್ಯಾಮೋಹ, ವಂಚನೆ, ಒಳಗುದಿ ಇವೆಲ್ಲವನ್ನು ಒಟ್ಟಾಗಿ ಹಿಡಿಯುವುದಕ್ಕೆ ಒಂದು ಕೃತಿಗೆ ಸಾಧ್ಯವಾಗುತ್ತದಾ? ಹೀಗೆ ಪ್ರಶ್ನೆಗಳನ್ನು ಮುಂದಿಟ್ಟುಕೊಂಡೇ ಕಾರ್ನಾಡರ ನಾಟಕ ನಮ್ಮನ್ನು ಒಳಗೊಳ್ಳುತ್ತಾ ಹೋಗುತ್ತದೆ.
ನಗರವೊಂದರ ಬಗ್ಗೆ ಬರೆಯ ಹೊರಡುವ ಕಾರ್ನಾಡರನ್ನು ಕಾಡಿದ್ದು ಶೂದ್ರಕನ ಮೃಚ್ಛಕಟಿಕ. ಆ ನಾಟಕದಲ್ಲಿ ನಾಯಕ, ನಾಯಿಕೆ, ಖಳನಾಯಕರು ನೆಪಮಾತ್ರ. ನಗರವೇ ಅದರ ಕೇಂದ್ರ. ಸಮೃದ್ಧವಾದ ನಗರವೊಂದರ ಜನಜಂಗುಳಿಯ ದೈನಂದಿನ ಆಗುಹೋಗುಗಳೇ ಮೃಚ್ಚಕಟಿಕದ ವಸ್ತು ಅನ್ನುತ್ತಲೇ ಕಾರ್ನಾಡರು ಇಪ್ಪತ್ತು ವರುಷಗಳಲ್ಲಿ ಅನಿರೀಕ್ಷಿತವಾಗಿ ಬೆಳೆದು ದೈತ್ಯ ಸ್ವರೂಪ ತಾಳಿರುವ ಬೆಂಗಳೂರಿನ ಜೊತೆ ಮಾತಾಡುತ್ತಾರೆ. ಬೆಂಗಳೂರಿನ ಸಂದಿಗೊಂದಿಗಳಲ್ಲಿ ಕಾಣಿಸಿಕೊಳ್ಳುವ ಚೈತನ್ಯ, ಅಸ್ವಸ್ಥತೆ ಮತ್ತು ಅರಾಜಕತೆಯನ್ನು ಮಾತುಗಳಲ್ಲಿ ಹಿಡಿಯಲು ಹೊರಡುತ್ತಾರೆ.
ಬೆಂದಕಾಳು ಆನ್ ಟೋಸ್ಟ್ ನಾಟಕವನ್ನು ಓದಿ ಮುಗಿಸುವ ಹೊತ್ತಿಗೆ ಈ ಮಹಾನಗರದಲ್ಲಿ ನಾವೆಲ್ಲಿದ್ದೇವೆ? ನಾವು ಯಾರು? ಕೆಲಸ ಕಳೆದುಕೊಂಡ ಪ್ರಭಾಕರ? ಸುಳ್ಳು ಸುಳ್ಳೇ ಸುಳ್ಳು ಹೇಳುವ ಪಾಪ್ಸ್ ಅಯ್ಯರ್? ರೇಸಿನ ಕ್ಷಣಭಂಗುರದಲ್ಲಿ ದೈವತ್ವಕ್ಕೆ ತುಡಿಯುವ ಅನಸೂಯಕ್ಕ? ಇಡೀ ನಾಟಕದಲ್ಲಿ ಎಲ್ಲೂ ಕಾಣಿಸಿಕೊಳ್ಳದ, ಆದರೆ ಗಟ್ಟಿಯಾಗಿ ನಿಂತಿರುವ ಮಿಸ್ಟರ್ ಪಡುಬಿದ್ರಿ? ಉರುಳಿ ಬಿದ್ದ ಮರಕ್ಕೋಸ್ಕರ ಕಣ್ಣೀರು ಹಾಕುವ ಅಂಜನಾ? ಮೋಸಗಾತಿ ಕೆಲಸದಾಕೆಯನ್ನು ತನ್ನ ನಾಯಕಿ ಅಂದುಕೊಳ್ಳುವ ಕುಣಾಲ? ಸಿಗದೇ ಇರುವ ಕೆಲಸಕ್ಕಾಗಿ ಇರುವ ಕೆಲಸ ಕಳಕೊಳ್ಳುವ ಪ್ರಭಾಕರ? ಮತ್ತೆ ಕೊಂಪೆಗೆ ಮರಳಲಾರೆ ಎನ್ನುವ ಸುಮಿತ್ರ, ಹಲವು ಅವತಾರಗಳಲ್ಲಿ, ವಿಚಿತ್ರ ಸಂಬಂಧಗಳಲ್ಲಿ ಸಿಕ್ಕಿಹಾಕಿಕೊಂಡು ಒದ್ದಾಡುವ ವಿಮಲಾ, ಅವಳನ್ನು ನಯವಾಗಿಯೇ ಸೋಲಿಸಿ ಎಸೆಯುವ ಮುತ್ತು?
ಹೀಗೆ ನಮ್ಮ ಪಾತ್ರ ಯಾವುದು ಎನ್ನುವ ಪ್ರಶ್ನೆಯನ್ನು ನಾಟಕ ನಮ್ಮ ಮುಂದಿಡುತ್ತದೆ. ಮಹಾನಗರಕ್ಕೆ ಕರುಣೆಯಿಲ್ಲ. ಕಾನೂನೂ ಇಲ್ಲ. ಅದು ಕುರುಡರ ಸಂತೆ. ಒಬ್ಬರ ನಾಟಕಕ್ಕೆ ಮತ್ತೊಬ್ಬರು ಕುರುಡರಾಗಿರುತ್ತಾರೆ. ಒಬ್ಬರು ಇನ್ನೊಬ್ಬರನ್ನು ವಂಚಿಸಲೆಂದೇ ಹೊಂಚು ಹಾಕುತ್ತಾ, ತಮ್ಮನ್ನು ತಾವೇ ವಂಚಿಸಿಕೊಳ್ಳುತ್ತಿರುತ್ತಾರೆ. ಅಲ್ಲಿ ಯಾವುದಕ್ಕೂ ಅರ್ಥವಿಲ್ಲ. ಎಲ್ಲಕ್ಕೂ ಅರ್ಥವಿದೆ. ಈ ಅರ್ಥಹೀನತೆಯಲ್ಲೇ ಒಂದು ಮೆಥಡ್ ಇದೆ. ಶಾಸ್ತ್ರದಲ್ಲೇ ಅಶಾಸ್ತ್ರೀಯತೆಯೂ ಇರುವಂತೆ.
ಕಾರ್ನಾಡರು ಆಧುನಿಕತೆಗೆ ಎರವಾದವರಲ್ಲ. ಅವರ ಐತಿಹಾಸಿಕ ನಾಟಕಗಳಲ್ಲಾಗಲೀ, ಪೌರಾಣಿಕ ಹಿನ್ನೆಲೆಯ ನಾಟಕಗಳಲ್ಲಾಗಲೀ ಎದುರಾಗುವ ಘರ್ಷಣೆ ಮೂಲತಃ ಆಧುನಿಕವಾದದ್ದೇ. ಅಗ್ನಿ ಮತ್ತು ಮಳೆಯ ನಿತ್ತಿಲೆ ಇವತ್ತಿನ ಹೆಣ್ಣೇ ಅನ್ನುವುದನ್ನು ನಾವು ಗಮನಿಸಬೇಕು. ಹೀಗಾಗಿ ಬೆಂಗಳೂರಿನಂಥ ಮಹಾನಗರದ ತಲ್ಲಣಗಳನ್ನು ಅವರು ಕೆಲವೇ ಪಾತ್ರಗಳ ಮೂಲಕ ಹಿಡಿದಿಡುತ್ತಾರೆ. ಹೀಗಾಗಿ ನಾಟಕವನ್ನು ಓದುತ್ತಾ ಹೋದ ಹಾಗೆ ನಮಗೆ ಮಹಾನಗರದ ಆತ್ಮ ದಕ್ಕಿಬಿಡುತ್ತದೆ. ಬೆಂಗಳೂರಿನ ಹುಮ್ಮಸ್ಸು, ಅಸಹಾಯಕತೆ, ನಿಷ್ಠುರ ಕ್ರೌರ್ಯ, ಆಳದ ವಿಷಾದ, ಭಗ್ನಹೃದಯ, ಏಕಮಖೀ ಬದುಕು, ಹಂಬಲ, ತೀವ್ರತೆಗಾಗಿ ತುಡಿಯುವ ಸ್ಥಿತಿ, ಸಹಜವಾದದ್ದನ್ನೇ ತೀವ್ರವೆಂದು ಭಾವಿಸುವ ರೀತಿ, ಯಾಂತ್ರಿಕವಾದದ್ದರಲ್ಲೂ ಹೊಸತನವನ್ನು ಹುಡುಕುವ ಉತ್ಸಾಹ- ಇವೆಲ್ಲವನ್ನೂ ಪಾತ್ರದ ಮೂಲಕ ತೆರೆದಿಡುತ್ತಾ ಹೋಗುತ್ತಾರೆ ಗಿರೀಶ.
ಹಾಗೆ ನೋಡಿದರೆ, ನಾಟಕದ ಪ್ರಧಾನ ಪಾತ್ರ ಮಿಸ್ಟರ್ ಪಡುಬಿದ್ರೆ ಇಡೀ ನಾಟಕದಲ್ಲಿ ನಾಪತ್ತೆಯಾಗಿರುವುದೇ ಒಂದು ವ್ಯಂಗ್ಯ. ಅದೇ ಸತ್ಯ ಕೂಡ. ಮಿಸ್ಟರ್ ಪಡುಬಿದ್ರೆಯ ಮನೆಯಲ್ಲಿ ನಾಟಕದ ಎಲ್ಲ ಪಾತ್ರಧಾರಿಗಳೂ ಸೇರುತ್ತಾರೆ. ಮಾತಾಡುತ್ತಾರೆ. ಅಲ್ಲೇ ಬಹಳಷ್ಟು ಕ್ರಿಯೆಗಳು ನಡೆಯುತ್ತವೆ. ಆದರೆ ಪಡುಬಿದ್ರೆ ಎಂದೂ ಕಾಣಿಸಿಕೊಳ್ಳುವುದಿಲ್ಲ. ಒಂದು ಮಾತನ್ನೂ ಆಡುವುದಿಲ್ಲ. ಅವನು ಗಂಡ, ಅಪ್ಪ, ಮಗ, ಗೆಳೆಯ, ಅಧಿಕಾರಿ, ಬಾಸ್- ಎಲ್ಲವೂ ಆಗಿರುತ್ತಾನೆ. ಅವನಿಗೆ ಅಸ್ತಿತ್ವವೇ ಇಲ್ಲ ಮತ್ತು ಅಸ್ತಿತ್ವವಿಲ್ಲದ ಅವನಿಲ್ಲದೇ ಯಾವ ಪಾತ್ರಗಳಿಗೂ ಅಸ್ತಿತ್ವವಿಲ್ಲ, ಅದು ಬೆಂಗಳೂರು. ಅದು ಮಹಾನಗರಿ. ಅಸ್ತಿತ್ವದಲ್ಲೇ ಇಲ್ಲದ ಒಂದು ಸಂಗತಿಯ ಸುತ್ತ, ನಮ್ಮ ಅಸ್ತಿತ್ವವನ್ನು ನಾವು ಕಂಡುಕೊಳ್ಳಲು ಹೆಣಗಾಡುತ್ತಿರುತ್ತೇವೆ. ಆ ದನಿಯನ್ನು, ನೆರಳನ್ನು ನಿಜವೆಂದು ನಂಬುತ್ತೇವೆ.
ಹಾಗೇ ನಾಟಕದಲ್ಲಿ ಬರುವ ಕುಣಾಲ್ ಎಂಬ ಪಾತ್ರಧಾರಿಯ ಗೆಳತಿ ನಂದಿತಾ. ಅವಳಿಗೂ ಅಸ್ತಿತ್ವವಿಲ್ಲ. ಅವಳಿಂದ ಕುಣಾಲ್ ಪ್ರೇಮಕ್ಕಾಗಿ ಕಾತರಿಸುತ್ತಿದ್ದಾನೆ. ಅವಳಿಗೆ ಎಲ್ಲವನ್ನೂ ಹೇಳಿಕೊಳ್ಳುತ್ತಾನೆ. ಅವಳ ಪ್ರತಿಕ್ರಿಯೆಯೇ ಇಲ್ಲ. ಹೀಗೆ ಯಾರಾದರೊಬ್ಬರಿಗೆ ಹೇಳಿಕೊಳ್ಳುತ್ತಾ ಹೋಗುವ, ಹೇಳಿಕೊಳ್ಳಲು ಹಂಬಲಿಸುವ, ಕೇಳಿಸಿಕೊಳ್ಳುವವರೇ ಇಲ್ಲದಿದ್ದರೂ ಹೇಳುತ್ತಾ ಹೋಗುವ ಲೋಕದಲ್ಲಿ ಏನೆಲ್ಲ ಸಂಭವಿಸುತ್ತದೆ. ಏನೇನೆಲ್ಲ ಆಗಿಹೋಗುತ್ತದೆ.
ಪ್ರಭಾಕರ ಹೇಳುತ್ತಾನೆ : ಬೆಂಗಳೂರಿನ ಬೀದಿಗಳಲ್ಲಿ ನಿರಂತರ ಓಡಾಟದ ಎನರ್ಜಿಯ ಮೂಲ ಏನು ಗೊತ್ತಿದೆಯೇನು? hope. hope. ಎಂಥಾ ಟೊಪ್ಪಿಗೆ ಬಿದ್ದರೂ ಅದರಡಿಗೆ ಮೆದುಳಿನಲ್ಲಿ ಸಾಯದೇ ಮಿಡುಕುತಿರೋ ಆಸೆ. ಮೂಲೆಯ ಸುತ್ತ ಏನೋ ಸಿಕ್ಕೀತು ಎಂಬ ನಂಬಿಕೆ. ಬಯಕೆ, ಕನಸು, ಹುಚ್ಚು. ಏನು ಬೇಕಾದರೂ ಅನ್ನಿರಿ. ಆ ಭ್ರಾಂತಿಯನ್ನು ನಾನಿನ್ನೂ ಕಳಕೊಂಡಿಲ್ಲ. ಇನ್ನೂ ಏನೋ ಸಿಗಬಹುದು. ಸಿಕ್ಕೇ ಸಿಗುತ್ತದೆ. ನೀವು ನನ್ನನ್ನು ಎಷ್ಟು ದಾರಿ ತಪ್ಪಿಸಿದರೂ ಆ ಆಮಿಷದ ಮೋಹ ಹೋಗೋದಿಲ್ಲ.ದು ಮಹಾನಗರದ ಮಾಯೆ. ಬಯಕೆಗಳನ್ನು ಬೆಳೆಸುತ್ತಾ, ಆಮಿಷಗಳನ್ನು ತುಂಬುತ್ತಾ, ಮೋಹವನ್ನು ಮುಪ್ಪುರಿಗೊಳಿಸುತ್ತಾ, ಅಭಯವನ್ನು ನೀಡುತ್ತಾ, ಆತಂಕದಲ್ಲಿ ದೂಡುತ್ತಾ ಅದು ತನ್ನನ್ನು ತಾನು ಬದುಕಿಸಿಕೊಳ್ಳಲು ನೋಡುತ್ತದೆ.
ನಾವು ಮಹಾನಗರದಲ್ಲಿ ವಾಸಿಸುತ್ತಿದ್ದೇವೆ ಅಂತ ಹೆಮ್ಮೆ ಪಡುತ್ತಿರುವ ಹೊತ್ತಿಗೇ, ಮಹಾನಗರ ನಮ್ಮಿಳಗೆ ವಾಸಿಸುತ್ತಿರುತ್ತದೆ. ಅದರ ಛಾಯೆ, ಮುದ್ರೆ ಮತ್ತು ಪ್ರಭಾವ ಎಷ್ಟು ಆಳವಾಗಿರುತ್ತದೆ ಎಂದರೆ ಮಹಾನಗರವನ್ನು ಯಾರೂ ತೊರೆಯಲಾರರು, ತೊರೆದು ಬದುಕಲಾರರು, ತೊರೆದರೂ ಅದು ಒಳಗೇ ದೇಹದ ಒಳಗೇ ಉಳಿದುಬಿಟ್ಟ ಬುಲೆಟ್ಟಿನ ಚೂರಿನಂತೆ ನಮ್ಮಿಳಗೇ ಇರುತ್ತದೆ. ಬೆಂಗಳೂರು ಮತ್ತು ಬೆಂಗಳೂರಿನಂಥ ಮಹಾನಗರದ ಹುನ್ನಾರಗಳನ್ನು ಅರ್ಥಮಾಡಿಕೊಳ್ಳುವುದಕ್ಕೆ ನೆರವಾಗುವ ಕಾರ್ನಾಡರ ನಾಟಕ, ಕೇವಲ ನಾಟಕ ಅಲ್ಲ, ಅದು ಮಹಾನಗರದ ಆತ್ಮಚರಿತ್ರೆ.ದು ಕೊನೆಯಾಗುವುದು ಹೀಗೆನಾನು ಎರಡು ವರುಷದವನಾಗಿದ್ದಾಗಲೇ ಸಾಯಬಹುದಾಗಿತ್ತು. ಸಾಯಲಿಲ್ಲ. ಸತ್ತಿದ್ದರೆ ನಾನು ಈಗ ಈ ಜಗತ್ತಿನಲ್ಲಿ ಇರತಿದ್ದಿಲ್ಲ. ಆದರೆ ನಾನು ಇಲ್ಲಿ ಇಲ್ಲ ಅಂತ ಜಗತ್ತಿಗೆ ಯಾವುದೇ ಫರಕು ಬೀಳತಿದ್ದಿಲ್ಲ. ಈ ಬೆಂಗಳೂರು, ಈ ಮನೆ, ಈ ಕುಟುಂಬ, ಉಳಿದವರು, ನೀನು ಎಲ್ಲರೂ ಹೀಗೇ ಇರತಿದ್ದಿರಿ. ನಾನಿಲ್ಲದೇ, ನನ್ನ ಅವಶ್ಯಕತೇನೇ ಇಲ್ಲದೆ.
‘ಹಾಗೆ ಹೇಳುವ ಕುಣಾಲ ಸಂಗೀತದಲ್ಲಿ ಭಯಾನಕ ರಸ ಮೂಡಿಸುವ ನಿರ್ಧಾರ ಮಾಡುತ್ತಾನೆ. ಆ ಹೊಸ ರಾಗ, ಹೊಸ ಕೃತಿಯ ಹೆಸರು ಬೆಂಗಳೂರು ಭಯಾನಕ’ ಅನ್ನುತ್ತಾನೆ.
ವಿಪರ್ಯಾಸ ಎಂದರೆ ಕುಣಾಲನ ಅಪ್ಪ ಅದೇ ಸ್ಥಿತಿಯಲ್ಲಿದ್ದಾನೆ. ಅವನು ಇದ್ದರೂ ಇಲ್ಲದೇ ಇದ್ದರೂ ಯಾವುದೇ ವ್ಯತ್ಯಾಸ ಇಲ್ಲ. ಅವನ ಸುತ್ತಲೂ ಕಟ್ಟಿಕೊಳ್ಳುತ್ತಿರುವ ಘಟನಾವಳಿಗಳಿಗೆ ಅವನ ಹಂಗಿಲ್ಲ. ಅವನ ಹೆಂಡತಿ ಫೋನಿನಲ್ಲಿ ಮಾತಾಡುತ್ತಿರುವುದು ಅವನ ಜೊತೆಗೇನಾ? ಅವನು ಕೇಳಿಸಿಕೊಳ್ಳುತ್ತಾನಾ? ಗೊತ್ತಿಲ್ಲ. ನಿದ್ರೆ ಮಾತ್ರೆ ನುಂಗಿ ಸ್ವರ ಕಳಕೊಂಡ ಆಕೆ, ಸಾಯುತ್ತಿರುವ ರೋಗಿಗಾಗಿ ಹಾಡಿದ್ದೇ ಇಲ್ಲಿಯ ಪವಾಡ.ಂಥ ಪವಾಡಗಳು ಎಲ್ಲರಲ್ಲೂ ಸಂಭವಿಸುವುದೂ ಇಲ್ಲ!